ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಬಾ ನಾಡಿನಲ್ಲಿ ಮತ್ತೆ ಕ್ರೀಡಾ ರಂಗು

ರಿಯೊ ಪ್ಯಾರಾಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಹಬ್ಬದ ಸಡಗರ
Last Updated 8 ಸೆಪ್ಟೆಂಬರ್ 2016, 19:45 IST
ಅಕ್ಷರ ಗಾತ್ರ

ರಿಯೊ ಡಿ ಜನೈರೊ: ಹೋದ ತಿಂಗಳಷ್ಟೇ ಒಲಿಂಪಿಕ್ಸ್‌ ಸಂಭ್ರಮ ಮೇಳೈಸಿದ್ದ ಸಾಂಬಾ ನಾಡು ಬ್ರೆಜಿಲ್‌ನಲ್ಲಿ ಈಗ ಮತ್ತೊಂದು ‘ಕ್ರೀಡಾ ಹಬ್ಬ’ಕ್ಕೆ ಚಾಲನೆ ದೊರೆತಿದೆ.

ಆಗಸದ ಎತ್ತರಕ್ಕೆ ಹಾರಿದ ಬಾಣಬಿರುಸುಗಳ ಸುಂದರ ಚಿತ್ತಾರ, ಅಭಿಮಾನಿಗಳ ಹರ್ಷೋದ್ಗಾರ ಮತ್ತು ಕ್ರೀಡಾಪಟುಗಳು ಸಂಭ್ರಮದ ನಡುವೆ ಬುಧವಾರ ರಿಯೊ ಪ್ಯಾರಾಲಿಂಪಿಕ್ಸ್‌ಗೆ ಭರ್ಜರಿ ಚಾಲನೆ ಲಭಿಸಿತು. ಈ ಕ್ರೀಡಾಕೂಟ ಹನ್ನೊಂದು ದಿನ ನಡೆಯಲಿದೆ.

ವಿವಿಧ ದೇಶಗಳ ಕ್ರೀಡಾಪಟುಗಳು ತಮ್ಮ ರಾಷ್ಟ್ರಧ್ಜಜ ಹಿಡಿದು ಸಾಗಿದರು. ಹಲವು ಕ್ರೀಡಾಪಟುಗಳು ಉದ್ಘಾಟನಾ ಸಮಾರಂಭದ ಪಥ ಸಂಚಲನದ ವೇಳೆ ಗಾಲಿಕುರ್ಚಿಯಲ್ಲಿ ಸಾಗುತ್ತಿದ್ದ ದೃಶ್ಯ ಇಲ್ಲಿನ ಮರಕಾನಾ ಕ್ರೀಡಾಂಗಣದಲ್ಲಿ ಕಂಡು ಬಂದಿತು.

ಸ್ಥಳೀಯ ಕಲಾವಿದರು ನೃತ್ಯ ಮಾಡಿ ಅಭಿಮಾನಿಗಳ ಮತ್ತು ಕ್ರೀಡಾ ಪ್ರೇಮಿಗಳ ಸಂಭ್ರಮಕ್ಕೆ ಕಾರಣರಾದರು. ಮರಕಾನಾ ಕ್ರೀಡಾಂಗಣದಲ್ಲಿ ಹಾರಾಡಿದ ಚಿಕ್ಕ ಚಿಕ್ಕ ಬಲೂನುಗಳ ಗುಂಪು ಪ್ರಮುಖ ಅಕರ್ಷಣೆ ಎನಿಸಿತು. ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಎಲ್ಲಾ ದೇಶಗಳ ಧ್ವಜವನ್ನು ಕ್ರೀಡಾಂಗಣ ದ ಸುತ್ತಲೂ ಹಾಕಲಾಗಿತ್ತು. ಕ್ರೀಡಾಂಗಣ ವನ್ನು  ಹಸಿರು ಬಣ್ಣದಿಂದ ಕಂಗೊಳಿಸು ವಂತೆ ವಿದ್ಯುತ್‌ ದೀಪಗಳ ವ್ಯವಸ್ಥೆ ಮಾಡಲಾಗಿತ್ತು.

ಸಮಾರಂಭದ ವೇಳೆ ಕಲಾವಿದರು ಪ್ರದರ್ಶಿಸಿದ ನೃತ್ಯ ಮನಮೋಹಕ ವಾಗಿತ್ತು. ಕ್ರೀಡಾಂಗಣ ದಲ್ಲಿ ಹಾಕ ಲಾಗಿದ್ದ ದೊಡ್ಡ ವೇದಿಕೆಯಲ್ಲಿ  ಕೆಲವು ಕಲಾವಿದರು ಕುಳಿತು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಇನ್ನೂ ಕೆಲ ಕಲಾವಿದರು  ಅಂದವಾಗಿ ಸಿಂಗರಿಸಿದ ಸೈಕಲ್‌ ಮೇಲೆ ಕುಳಿತು ಸವಾರಿ ಮಾಡುತ್ತಾ ಹತ್ತು ಹಲವು ಕಸರತ್ತುಗಳನ್ನು ತೋರಿದರು.

ಕ್ರೀಡಾಂಗಣದ ಒಂದು ಭಾಗದಲ್ಲಿ ಅಲಂಕರಿಸಲಾಗಿದ್ದ ವೃತ್ತಾಕಾರದ ಆಕರ್ಷಕ ಹಾದಿಯಲ್ಲಿ ಗಾಲಿಕುರ್ಚಿಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಅಥ್ಲೀಟ್‌ಗಳು ನೀಡಿದ ಸಾಹಸಮಯ ಪ್ರದರ್ಶನ ಮೈನವಿರೇಳಿಸುವಂತಿತ್ತು. ಚೀನಾದ ಕ್ರೀಡಾಪಟುಗಳು ‘ಹಲೊ ರಿಯೊ’ ಎನ್ನುವ ಸಂದೇಶವುಳ್ಳ ಭಿತ್ತಿಚಿತ್ರವನ್ನು ಉದ್ಘಾಟನಾ ಸಮಾರಂಭದ ವೇಳೆ ಎತ್ತಿ ಹಿಡಿದಿದ್ದರು. ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ಬಾರಿಸಲಾದ ವಾದ್ಯ ಗೋಷ್ಠಿಯ ತಾಳಕ್ಕೆ ಕ್ರೀಡಾಪ್ರೇಮಿಗಳು ಕುಣಿದು ಕುಪ್ಪಳಿಸಿದರು.

ಪ್ರತಿಭಟನೆಯ ಬಿಸಿ: ಈ ಕಾರ್ಯಕ್ರಮದ ವೇಳೆ  ಹಲವರು ಪ್ರತಿಭಟನೆ ನಡೆಸಿದರು. ಹೋದ ತಿಂಗಳು ನಡೆದ ಒಲಿಂಪಿಕ್ಸ್‌ಗೂ ಪ್ರತಿಭಟನೆಯ ಬಿಸಿ ತಟ್ಟಿತ್ತು.

‘ಪ್ಯಾರಾಲಿಂಪಿಕ್ಸ್‌ ಇದು ಜನರ ಕ್ರೀಡೆ. ಆದರೆ ನೀವು ಬಂದು ವಿನಾಕಾರಣ ವಿವಾದ ಎಬ್ಬಿಸಬೇಡಿ. ಇಲ್ಲಿನ ಕ್ರೀಡಾಗ್ರಾಮದಲ್ಲಿ ಎಲ್ಲಾ ಕ್ರೀಡಾ ಪಟುಗಳು ಸಂತೋಷ ವಾಗಿದ್ದಾರೆಂದು ಭಾವಿಸಿದ್ದೇನೆ. 154 ದೇಶಗಳಲ್ಲಿ ಇಲ್ಲಿ ನಡೆಯುವ ಕ್ರೀಡೆಗಳು ಪ್ರಸಾರ ವಾಗಲಿವೆ’  ಎಂದು ಅಂತರ ರಾಷ್ಟ್ರೀಯ ಪ್ಯಾರಾಲಿಂಪಿಕ್‌ ಸಮಿತಿಯ ಅಧ್ಯಕ್ಷ ಫಿಲಿಪ್‌ ಕ್ರಾವಿನ್‌ ಹೇಳಿದರು.

ಈ ಪ್ಯಾರಾಲಿಂಪಿಕ್ಸ್‌ನಲ್ಲಿ 159 ದೇಶಗಳ 4342ಕ್ಕೂ ಹೆಚ್ಚು ಕ್ರೀಡಾ ಪಟುಗಳು ಪಾಲ್ಗೊಂಡಿದ್ದಾರೆ. ವಿಶೇಷ ವೆಂದರೆ ಒಲಿಂಪಿಕ್ಸ್‌ನಲ್ಲಿ ಅವಕಾಶ ನೀಡಿದಂತೆ ಪ್ಯಾರಾಲಿಂಪಿಕ್ಸ್‌ ನಲ್ಲಿಯೂ ನಿರಾಶ್ರಿತ ತಂಡಕ್ಕೆ ಅವಕಾಶ ಕೊಡಲಾಗಿದೆ.

ಥಾಮಸ್‌ ಬಾಕ್‌ ಗೈರು: ಅಂತರ ರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ (ಐಒಸಿ) ಅಧ್ಯಕ್ಷ ಥಾಮಸ್ ಬಾಕ್‌ ಅವರು ಉದ್ಘಾಟನಾ ಸಮಾರಂಭಕ್ಕೆ ಗೈರಾಗಿದ್ದು ವಿವಾದಕ್ಕೆ ಕಾರಣವಾಯಿತು. 1984ರ ಬಳಿಕ ಐಒಸಿಯ ಯಾವ ಅಧ್ಯಕ್ಷರೂ ಉದ್ಘಾಟನಾ ಸಮಾರಂಭ ವನ್ನು ತಪ್ಪಿಸಿಕೊಂಡಿರಲಿಲ್ಲ. ನಿಷೇಧಿತ ಉದ್ದೀಪನಾ ಮದ್ದು ಸೇವಿಸಿ ನಿಷೇಧ ಶಿಕ್ಷೆಗೆ ಒಳಗಾಗಿರುವ ರಷ್ಯಾದ ಅಥ್ಲೀಟ್‌ಗಳು ಪ್ಯಾರಾ ಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ.

ಜೊತೆಗೆ ಇಲ್ಲಿ ಅನಧಿಕೃತ ಟಿಕೆಟ್‌ ಮಾರಾಟವಾಗುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬಂದವು. ರಷ್ಯಾ 2012ರ ಲಂಡನ್ ಪ್ಯಾರಾಲಿಂಪಿಕ್ಸ್‌ನ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿತ್ತು. ‘ಸಮಾರಂಭಕ್ಕೆ ಥಾಮಸ್‌ ಬಾಕ್‌ ಬರುವುದಾಗಿ  ಮೊದಲು ಖಚಿತ ಪಡಿಸಿದ್ದರು. ನಂತರ ಅವರು ಏಕೆ ಬರಲಿಲ್ಲ ಎನ್ನುವುದು ತಿಳಿದಿಲ್ಲ’ ಎಂದು  ಕ್ರಾವಿನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT