ಪ್ಯಾರಾಲಿಂಪಿಕ್ಸ್ ಜೀವ ಚೈತನ್ಯದ ಸೆಲೆ...

7

ಪ್ಯಾರಾಲಿಂಪಿಕ್ಸ್ ಜೀವ ಚೈತನ್ಯದ ಸೆಲೆ...

Published:
Updated:
ಪ್ಯಾರಾಲಿಂಪಿಕ್ಸ್   ಜೀವ ಚೈತನ್ಯದ ಸೆಲೆ...

ರಾಜಸ್ತಾನದ ಎಂಟು ವರ್ಷದ ಬಾಲಕ ದೇವೇಂದ್ರ ಜಜಾರಿಯ  ಆಟವಾಡುತ್ತ ಮರ ಹತ್ತಿದ್ದ.  ಆ ಮರದ ಟೊಂಗೆಗಳ ಮರೆಯಲ್ಲಿ ಹಾದು ಹೋಗಿದ್ದ ಹೈವೋಲ್ಟೆಜ್ ವಿದ್ಯುತ್ ತಂತಿಯನ್ನು ಮುಟ್ಟಿದ್ದ, ಆತನ ಎಡಗೈ ಮುರುಟಿ ಹೋಗಿತ್ತು.



ವೈದ್ಯರು ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿ ಆ ಕೈಯನ್ನು ಆತನ ದೇಹದಿಂದ ಬೇರ್ಪಡಿಸಿದ್ದರು. ಆ ಘಟನೆ ನಡೆದು ಬರೋಬ್ಬರಿ ಹದಿನಾರು ವರ್ಷಗಳ ನಂತರ (2004) ಅಥೆನ್ಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಅದೇ ದೇವೇಂದ್ರ ಚಿನ್ನದ ಪದಕ ಗೆದ್ದು ಬೀಗಿದ್ದರು.



ಐದು ದಿನಗಳ ಹಿಂದಷ್ಟೆ  ರಿಯೊದ ಮರಕಾನ ಕ್ರೀಡಾಂಗಣದಲ್ಲಿ ತ್ರಿವರ್ಣ ಧ್ವಜ ಹಿಡಿದು ಹೆಮ್ಮೆಯಿಂದ ಹೆಜ್ಜೆ ಹಾಕಿದ್ದರು. ಅವರ ಹಿಂದೆ ಭಾರತ ತಂಡವೂ ಆತ್ಮವಿಶ್ವಾಸದ ಹೆಜ್ಜೆಗಳನ್ನಿಟ್ಟಿತ್ತು.



ಅವರ ಹೆಸರು ಡೆರೆಕ್ ಡೆರೆನ್‌ಲಾಗಿ. ಮೂಲತಃ ಫಿಜಿ ದೇಶದವರು. ಬ್ರಿಟಿಷ್‌ ಸೇನೆಯಲ್ಲಿ ಮರ್ಸಿಯನ್ ರೆಜಿಮೆಂಟ್‌ ನಲ್ಲಿದ್ದರು. 2007ರಲ್ಲಿ ಅವರ ದಳವು ಆಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅವರು ಇದ್ದ ಗಸ್ತಿನ ವಾಹನವು ನೆಲಬಾಂಬ್‌ ದಾಳಿಗೆ ನುಚ್ಚುನೂರಾಯಿತು.



ಬಲಿಷ್ಠದೇಹಿ ಡೆರೆಕ್ ಅವರ ಎರಡು ಕಾಲುಗಳು ಪುಡಿಯಾದವು. ಕೃತಕ ಕಾಲುಗಳೇ ಆಸರೆಯಾದವು. ಆದರೆ ಅವರು ಎದೆಗುಂದಲಿಲ್ಲ. ಶಾಟ್‌ಪಟ್ ಮತ್ತು ಡಿಸ್ಕಸ್ ಥ್ರೋ ಅಥ್ಲೀಟ್‌ ಆಗಿ ಬೆಳೆದರು.



2012ರ ಲಂಡನ್ ಪ್ಯಾರಾಲಿಂಪಿಕ್ಸ್‌ನಲ್ಲಿ  ಬ್ರಿಟನ್ ತಂಡವನ್ನು ಪ್ರತಿನಿಧಿಸಿದ ಫಿಜಿಯ ಮೊದಲ ಪ್ರಜೆಯೆಂಬ ಹೆಗ್ಗಳಿಕೆ ಅವರದ್ದು. ಅಲ್ಲಿ ಅವರು ಪದಕ ಗೆಲ್ಲಲಿಲ್ಲ. ಆದರೆ ತಮ್ಮ ಕಾಲುಗಳನ್ನು ಕಿತ್ತುಕೊಂಡ ವಿಧಿಯಾಟಕ್ಕೆ ಸೆಡ್ಡು ಹೊಡೆದರು. 



ಹೋದ ಶುಕ್ರವಾರ ಬೆಳಗಿನ ಜಾವ ರಿಯೊ ಕ್ರೀಡಾಗ್ರಾಮದ ವೆಲೊಡ್ರಾಮ್‌ನಲ್ಲಿ ನಡೆದ ವನಿತೆಯರ ಟ್ರ್ಯಾಕ್ ಸೈಕ್ಲಿಂಗ್‌ನಲ್ಲಿ ಚಿನ್ನ ಗೆದ್ದ ಮ್ಯಾಂಚೆಸ್ಟರ್‌ನ ಸಾರಾ ಸ್ಟೊರೆ ಅವರ ಎಡಗೈನಲ್ಲಿ ಹುಟ್ಟಿನಿಂದಲೂ ಜೀವಸಂಚಾರವಿಲ್ಲ.



ಒಂದು ಕೈ ನಿಷ್ಕ್ರೀಯವಾದ ರೆನಂತೆ ಅವರು ತುಂಬು ಕ್ರೀಯಾಶೀಲರು. ಅದಕ್ಕಾಗಿಯೆ ಸೈಕಲ್‌ ಏರಿದರು. ಯಶಸ್ಸಿನ ಪಯಣ ಆರಂಭಿಸಿದರು. ಒಂದೇ ಕೈಯಲ್ಲಿ ಸಮತೋಲನ ಸಾಧಿಸುತ್ತ ಶರವೇಗದಲ್ಲಿ ಟ್ರ್ಯಾಕ್ ಸುತ್ತು ಹಾಕುವ ಅವರ ಕೌಶಲ್ಯ ನೋಡುಗರನ್ನು ಬೆಚ್ಚಿ ಬೀಳಿಸುತ್ತದೆ.

ಆದರೆ ಅವರು ಮಾತ್ರ 1992 ರ ಬಾರ್ಸಿಲೋನಾ ಪ್ಯಾರಾಲಿಂಪಿಕ್ಸ್‌ನಿಂದ ರಿಯೊ ದವರೆಗೆ ಒಟ್ಟು 12 ಪದಕಗಳನ್ನು ಕೊರಳಿಗೇರಿಸಿಕೊಂಡು ನಗು ಬೀರಿದ್ದಾರೆ. ನೂರಾರು ದುರ್ಬಲರಿಗೆ ಸ್ಫೂರ್ತಿದಾಯಕರಾಗಿದ್ದಾರೆ.



ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅಥ್ಲೀಟ್‌ಗಳ ಆಟ ಮತ್ತು ಜೀವನ ಎರಡೂ ಅಕ್ಷರಶಃ ಪ್ರವಾಹದ ಎದುರಿನ ಈಜು. ಕೆಲವರು ಯುದ್ಧ, ದಾಳಿಗಳಲ್ಲಿ ಕೈಕಾಲು ಕಳೆದುಕೊಂಡವರು, ಇನ್ನೊಂದಿಷ್ಟು ಜನರಿಗೆ ಹುಟ್ಟಿನೊಂದಿಗೆ ಬಂದ ಅಂಗವೈಕಲ್ಯ, ಇನ್ನೂ ಕೆಲವರ ಸಂತಸದ ಬದುಕಿನಲ್ಲಿ ಬರಸಿಡಿಲಿನಂತೆ ಎರಗಿದ ಅವಘಡಗಳು ನೀಡಿದ ಊನಗಳು ಇವೆ.



ಅವುಗಳನ್ನು ಮೀರಿ ಈ ಅಂತರರಾಷ್ಟ್ರೀಯ ಮಹಾಕೂಟ ದಲ್ಲಿ ತಮ್ಮ ತಮ್ಮ ದೇಶಗಳ ಪ್ರತಿನಿಧಿಗಳಾಗಿ ‘ವಿಶೇಷ ಸಾಮರ್ಥ್ಯ’ ಪಣಕ್ಕೊಡ್ಡುವ ಈ ಕ್ರೀಡಾಪಟುಗಳ ಮುಂದೆ ‘ಸೋಲು’ ಶಬ್ದವೇ ಪರಾಭವಗೊಳ್ಳುತ್ತದೆ.



ಹೋದ ತಿಂಗಳು ರಿಯೊ ಒಲಿಂಪಿಕ್ಸ್‌ ನಡೆದಿದ್ದ ಮರಕಾನ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 7ರಂದು ಪ್ಯಾರಾಲಿಂಪಿಕ್ಸ್‌ ಆರಂಭವಾಗಿದೆ. ಗಾಲಿಕುರ್ಚಿಗಳಲ್ಲಿ ಕುಳಿತು ಅಂಕಣದಲ್ಲಿ ಅತ್ತಿಂದಿತ್ತ ಚಲಿಸುತ್ತ ಟೆನಿಸ್, ಬ್ಯಾಡ್ಮಿಂಟನ್ ಆಡುವ, ಲೋಹದ ಕೃತಕ ಕಾಲುಗಳನ್ನು (ಬ್ಲೇಡ್) ಅಳವಡಿಸಿಕೊಂಡು ಓಡುವ ಅಥ್ಲೀಟ್‌ಗಳು, ಮೋಟುಕೈಗಳಲ್ಲಿಯೇ ಈಜಿ ದಡ ಸೇರುವ ಈಜುಪಟುಗಳು ಹೀಗೆ ಪಟ್ಟಿ ಬೆಳೆಯುತ್ತದೆ. ಇವರೆಲ್ಲರ ‘ಅತಿಮಾನವ’ ಶಕ್ತಿಪ್ರದರ್ಶನ ನೋಡುತ್ತಿದ್ದರೆ ಮೈನವಿರೇಳುತ್ತದೆ.



ಮಾನವತೆಯ ಸಂದೇಶ ಸಾರುವ ಒಲಿಂಪಿಕ್ಸ್ ಆಂದೋಲನದ ಮತ್ತೊಂದು ಮಹತ್ವದ ಭಾಗವಾಗಿ ಪ್ಯಾರಾಲಿಂಪಿಕ್ಸ್‌ ನಡೆಯುತ್ತಿದೆ. ದೈಹಿಕವಾಗಿ ವಿಶೇಷ ಸಾಮರ್ಥ್ಯವುಳ್ಳ ಕ್ರೀಡಾಪಟುಗಳನ್ನು ಮುಖ್ಯವಾಹಿನಿಗೆ ತರುವ ಮಹತ್ವದ ಕ್ರೀಡಾಕೂಟ ಇದು.



ಬೇಗುದಿಯಿಂದ ಬದುಕಿನ ಹಾದಿಯೆಡೆಗೆ..

ಅಂಗವೈಕಲ್ಯದಿಂದ ಮುರುಟಿದ ಜೀವನಕ್ಕೆ ಚೈತನ್ಯ ತುಂಬುವ ಶಕ್ತಿ ಕ್ರೀಡೆಗೆ ಇದೆ ಎಂಬುದನ್ನು 1888ರಲ್ಲಿಯೇ ಜಗತ್ತು ಕಂಡುಕೊಂಡಿತ್ತು. ಬರ್ಲಿನ್‌ನಲ್ಲಿ ಶ್ರವಣದೋಷವುಳ್ಳ ವರಿಗಾಗಿ ಒಂದು ಕ್ರೀಡಾಕ್ಲಬ್ ಈ ಕಾರ್ಯ ಮಾಡುತ್ತಿತ್ತು. ಆದರೆ, ಇಂತಹದೊಂದು ಮಹತ್ವದ ಪ್ರಯತ್ನ ಒಲಿಂಪಿಕ್ಸ್ ಚಳವಳಿಯ ವಾಹಿನಿಯಲ್ಲಿ ಸೇರಲು ದಶಕಗಳೇ ಬೇಕಾದವು.



ಎರಡನೇ ಮಹಾಯುದ್ಧದಲ್ಲಿ ಗಾಯಗೊಂಡು ಅಂಗವಿಕಲರಾದವರಲ್ಲಿ ಜೀವಚೈತನ್ಯವನ್ನು ತುಂಬುವ ಏಕೈಕ ದಾರಿ ಕ್ರೀಡೆಯಾಗಿ ತೋರಿತ್ತು. 1944ರಲ್ಲಿ ಬ್ರಿಟನ್ ಸರ್ಕಾರದ ಮನವಿಯ ಮೇರೆ ಡಾ.ಲುಡ್ವಿಗ್ ಗುಟ್ಮನ್ ಅವರು ಬೆನ್ನುಹುರಿ ಹಾನಿಗೊಳಗಾದವರಿಗಾಗಿ ಪುನಶ್ಚೇತನ ಶಿಬಿರ ಆರಂಭಿಸಿದರು.



ಸ್ಟೋಕ್ ಮ್ಯಾಂಡವೆಲ್‌ನಲ್ಲಿ  ಕೇಂದ್ರ ಕಾರ್ಯಾರಂಭ ಮಾಡಿತು. ಅಲ್ಲಿಯ ರೋಗಿಗಳ ಮನೋಲ್ಲಾಸಕ್ಕಾಗಿ ಡಾ.ಗುಟ್ಮ ನ್ ಅವರು ಕೆಲವು ಕ್ರೀಡೆಗಳನ್ನು ಆಯೋಜಿಸತೊಡಗಿದರು. ಅವು ಚಿಕಿತ್ಸೆಯ ಅಂಗಗಳಾಗಿದ್ದವು. ಕಾಲಕ್ರಮೇಣ ಸ್ಪರ್ಧಾತ್ಮಕವಾಗಿ ರೂಪುಗೊಂಡವು.



1948ರ ಲಂಡನ್ ಒಲಿಂಪಿಕ್ಸ್‌ ಉದ್ಘಾಟನೆ ಸಮಾರಂಭದ ದಿನ, ಡಾ. ಗುಟ್ಮನ್ ಅವರು ಗಾಲಿಕುರ್ಚಿ ಸ್ಪರ್ಧೆಗಳನ್ನು ಮೊದಲ ಬಾರಿಗೆ ಆಯೋಜಿಸಿದ್ದರು. ಅದಕ್ಕೆ ಅವರು ‘ಸ್ಟೋಕ್ ಮ್ಯಾಂಡೆವಲ್ ಗೇಮ್ಸ್’ ಎಂದು ಹೆಸರಿಟ್ಟರು.ಇದು ಪ್ಯಾರಾಲಿಂಪಿಕ್ಸ್‌ ಕೂಟಕ್ಕೆ ಮುನ್ನುಡಿಯಾಯಿತು. 1952 ರಲ್ಲಿಯೂ ಕೂಟ ನಡೆಯಿತು.



ಯುದ್ಧದಲ್ಲಿ ಗಾಯಗೊಂಡು ಚೇತರಿಸಿಕೊಂಡಿದ್ದ 16 ಸೈನಿಕರು  ಭಾಗವಹಿಸಿದ್ದರು. ಆರ್ಚರಿಯಲ್ಲಿ ಮಹಿಳೆಯರು ಭಾಗವಹಿಸಿದ್ದರು. 1960ರಲ್ಲಿ ರೋಮ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ (ಸ್ಟೋಕ್‌ ಮ್ಯಾಂಡೆವಲ್ ಗೇಮ್ಸ್ ಪರಿವರ್ತನೆಯಾಯಿತು) ಸೇರ್ಪಡೆಗೊಂಡಿತು. ಅದರಲ್ಲಿ 23 ದೇಶಗಳ 400 ಅಥ್ಲೀಟ್‌ಗಳು ಭಾಗವಹಿಸಿದ್ದರು.



1976ರಲ್ಲಿ ಟೊರಾಂಟೊದಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಅಂಧತ್ವ ಮತ್ತು ಕಾಲುಗಳನ್ನು ಕಳೆದುಕೊಂಡವರ ವಿಭಾಗಗಳನ್ನು ಸೇರ್ಪಡೆ ಮಾಡಲಾಯಿತು. ನಂತರದ ವರ್ಷಗಳಲ್ಲಿ ಸೆರೆಬ್ರಲ್ ಪಾಲ್ಸಿ, ಶ್ರವಣ ದೋಷ, ಅಂಗವೈಕಲ್ಯದ ಇನ್ನುಳಿದ ವಿಭಾಗಗಳಲ್ಲಿಯೂ ಸ್ಪರ್ಧೆಗಳು ಆರಂಭವಾದವು.



ಅಂತರ ರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆಗಳು ಒಪ್ಪಂದ ಮಾಡಿಕೊಂಡ ನಂತರ 90ರ ದಶಕದಿಂದ ಈಚೆಗೆ ಒಲಿಂಪಿಕ್ಸ್‌ ನಡೆದ ವರ್ಷ ಮತ್ತು ತಾಣದಲ್ಲಿಯೇ ಪ್ಯಾರಾಲಿಂಪಿಕ್ಸ್‌ ಆಯೋಜನೆ ನಡೆಯುತ್ತಿದೆ.



1948ರಲ್ಲಿ ಸ್ಟೋಕ್ ಮ್ಯಾಂಡೆವಲ್‌ನಲ್ಲಿ ಕೇವಲ 16 ಮಂದಿ ಭಾಗವಹಿಸಿದ್ದ ಕ್ರೀಡಾಕೂಟದಲ್ಲಿ ಈಗ 4300 ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ದಾರೆ. ಜನಪ್ರಿಯತೆ, ಆರ್ಥಿಕ, ಸಾಮಾಜಿಕ ಮಾನ್ಯತೆಗಳೂ ಲಭಿಸಿವೆ.



ಸಮಾಜದ ಮುಖ್ಯ ವಾಹಿನಿಗೆ ಸೇರುವ ಛಲವಂತರ ಸಂಖ್ಯೆ ಇಮ್ಮಡಿಗೊಳ್ಳುತ್ತಲೇ ಸಾಗಿದೆ. ಸಾಧನೆಗಳ ಹೊನಲು ನಿರಂತರವಾಗಿ ಹರಿಯುತ್ತಿದೆ. ‘ಸೋಲು’ ಎಂಬ ಶಬ್ದವನ್ನು  ಪರಾಭವಗೊಳಿಸುತ್ತ ಕೆಲವರು ಪದಕಗಳಿಗೆ ಮುತ್ತಿಕ್ಕುತ್ತಾರೆ. ಪದಕ ಸಿಗದವರ ಮುಖದಲ್ಲಿ ಆತ್ಮವಿಶ್ವಾಸದ ಹೊಂಬೆಳಕು ಪ್ರಜ್ವಲಿಸುತ್ತದೆ.



**

ಕ್ರೀಡೆಗಳ ಪಟ್ಟಿ


ಆರ್ಚರಿ, ಫುಟ್‌ಬಾಲ್ (7 ಎ ಸೈಡ್ ಮತ್ತು 5 ಎ ಸೈಡ್), ಈಜು, ಅಥ್ಲೆಟಿಕ್ಸ್, ಗೋಲ್‌ಬಾಲ್, ಟೇಬಲ್ ಟೆನಿಸ್, ಬೋಚಿ, ಜುಡೊ, ವಾಲಿಬಾಲ್, ಪ್ಯಾರಾಕೆನೊಯ್, ಪ್ಯಾರಾಟ್ರಯಥ್ಲಾನ್, ಗಾಲಿಕುರ್ಚಿ ಬ್ಯಾಸ್ಕೆಟ್‌ಬಾಲ್, ಸೈಕ್ಲಿಂಗ್, ಪವರ್‌ಲಿಫ್ಟಿಂಗ್, ಗಾಲಿಕುರ್ಚಿ ಫೆನ್ಸಿಂಗ್, ರೋಯಿಂಗ್, ಗಾಲಿಕುರ್ಚಿ ರಗ್ಬಿ, ಈಕ್ವೆಸ್ಟ್ರಿಯನ್, ಶೂಟಿಂಗ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry