ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಹೌಸ್‌ನಲ್ಲಿ ಕಾಳು ಮೆಣಸು

Last Updated 12 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲ್ಲೂಕಿನ ಶೆಟ್ಟಿಕೊಪ್ಪ ಗ್ರಾಮದಲ್ಲಿ ರೈತ ಬಿ.ಜೆ.ಲಕ್ಷ್ಮೀಶ್ ಪಾಲಿಹೌಸ್‌ನಲ್ಲಿ ಕಾಳು ಮೆಣಸು ಬೆಳೆಯನ್ನು ಬೆಳೆಯನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. ಈ ಮೂಲಕ ಇಂಥ ಬೆಳೆ ಬೆಳೆಯುತ್ತಿರುವ ಪ್ರಥಮ ಕೃಷಿಕ ಎನಿಸಿಕೊಂಡಿದ್ದಾರೆ.

ಈ ಹಿಂದೆ ಮಲೆನಾಡಿನ ಪರಿಸರದಲ್ಲಿ ನೂತನ ಪ್ರಯೋಗದ ಮೂಲಕ ವೆಚ್ಚದಾಯಕ ಕಾರ್ನೇಷನ್ ಕೃಷಿ ಬೆಳೆದು ಯಶಸ್ಸು ಕಂಡಿದ್ದ  ಬಿ.ಇ ಪದವೀಧರ ಲಕ್ಷ್ಮೀಶ್  ಈಗ ಇಂಥದ್ದೊಂದು ನೂತನ ಪ್ರಯೋಗಕ್ಕೆ ಕೈಹಾಕಿ ಅಚ್ಚರಿ ಮೂಡಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ₹1ಕೋಟಿ ವೆಚ್ಚದಲ್ಲಿ ಪಾಲಿಹೌಸ್ ನಿರ್ಮಿಸಿ ಕಾರ್ನೇಷನ್ ಹೂವಿನ ಕೃಷಿ ಮಾಡಿದ್ದ ಲಕ್ಷ್ಮೀಶ್ ಅವರಿಗೆ  ಈ ಬೆಳೆ ಕಟಾವು ಮಾಡಿದ ನಂತರ ಬೆಳೆ ಪರಿವರ್ತನೆ ಮಾಡುವ ಮನಸ್ಸು ಉಂಟಾಯಿತು. ಆದ್ದರಿಂದ ಹೊಸದಾಗಿ ಯಾವ ಬೆಳೆಗಳನ್ನು ಬೆಳೆಯಬಹುದು ಎಂಬ ಬಗ್ಗೆ ಚಿಂತನೆ ನಡೆಸಿದರು.

ಇಲ್ಲಿಯವರೆಗೆ ಯಾರೂ ಮಾಡದ ಸಾಹಸ ಮಾಡಬೇಕು ಎಂದು ಅಂದುಕೊಂಡ ಅವರಿಗೆ ಕಂಡದ್ದು ಕಾಳು ಮೆಣಸು. ವಿಯೆಟ್ನಾಂ ಮತ್ತು ಕಾಂಬೋಡಿಯಾ ರಾಷ್ಟ್ರಗಳಲ್ಲಿ ಕಾಳು ಮೆಣಸು ಬಳ್ಳಿಯನ್ನು ಕಂಬಗಳಿಗೆ ಹತ್ತಿಸಿ ಅದಕ್ಕೆ ಶೇಡ್ ನೆಟ್ ಹಾಕಿ ಬೆಳೆಸುತ್ತಿರುವ ವಿಧಾನವನ್ನು ತಿಳಿದುಕೊಂಡರು. ಅದೇ ಮಾದರಿಯಲ್ಲಿ ಪಾಲಿಹೌಸ್‌ನಲ್ಲಿ ಕಾಳು ಮೆಣಸು ಬೆಳೆಯಲು ಬೇಕಾದ ವಾತಾವರಣ ನಿರ್ಮಿಸಿ ಅದನ್ನು ಬೆಳೆಯಲು ನಿರ್ಧರಿಸಿದರು.

‘ವರ್ಟಿಕಲ್ ಕಾಲಂ’ ಕೃಷಿ ಮಾದರಿಯಲ್ಲಿ ಪಿವಿಸಿ ಕೋಟೆಡ್ ಮೆಷ್ ಜಾಲರಿ ನಿರ್ಮಿಸಿ ಅದರೊಳಗೆ ತೆಂಗಿನ ನಾರು, ಸಿಪ್ಪೆ, ಗೊಬ್ಬರ ಹಾಗೂ ಪೋಷಕಾಂಶಗಳನ್ನು ಹಾಕಿ ಅದರ ಹೊರ ಭಾಗದಲ್ಲಿ  ಪಣಿಯೂರು 2 ಮತ್ತು 3 ಎಂಬ ತಳಿಯ ಕಾಳು ಮೆಣಸು ಬಳ್ಳಿಯನ್ನು ನೆಟ್ಟು ಹಬ್ಬಿಸಿದರು.

ಮುಂದೆ ಬಳ್ಳಿಯ ಆಧಾರಕ್ಕೆ ಹಾಲುವಾಣದ ಗಿಡದ ರೆಂಬೆ ಆಧಾರವಾಗಿ ನೆಟ್ಟಿದ್ದಾರೆ. ಗಿಡಕ್ಕೆ ಬೇಕಾದ ಲಘು ಪೋಷಕಾಂಶ, ಗೊಬ್ಬರವನ್ನು ಹನಿ ನೀರಾವರಿ ರೀತಿಯಲ್ಲಿ ಕೊಳವೆ ಮೂಲಕ ಪೂರೈಸುವ ವ್ಯವಸ್ಥೆ ಮಾಡಿದರು.

ಮಣ್ಣಿನ ಸುರಕ್ಷತೆ ಹಾಗೂ ರೋಗ ನಿಯಂತ್ರಣಕ್ಕೆ ಟ್ರೈಕೋಡರಂ, ಸೋಡಮೋನಾಸ್ ಸಿಂಪಣೆ ಮಾಡಿದ್ದಾರೆ. ಬಿಸಿಲು ಜಾಸ್ತಿಯಿದ್ದಾಗ ಬಳ್ಳಿಗೆ ಶವರ್‌ ಮೂಲಕ ನೈಸರ್ಗಿಕವಾದ ರೀತಿಯಲ್ಲಿ ಮಳೆ ಬಿಳುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಇದು ಕಾಳು ಕಟ್ಟುವುದಕ್ಕೆ ಸಹಾಯವಾಗುತ್ತದೆ. ಈ ರೀತಿಯಾಗಿ ಕಾಳು ಮೆಣಸು ಬೆಳೆ ಉತ್ತಮವಾಗಿ ಬೆಳೆಯಲು ಬೇಕಾಗುವ  ತೇವಾಂಶ, ನೆರಳು ಎಲ್ಲವನ್ನೂ ಪಾಲಿಹೌಸ್‌ನಲ್ಲಿ ನಿರ್ಮಿಸುವ ವ್ಯವಸ್ಥೆ ಮಾಡಿದ್ದಾರೆ.

**
ಹನ್ನೊಂದು ತಿಂಗಳಲ್ಲೇ ಫಸಲು

ಸಾಮಾನ್ಯವಾಗಿ ನೈಸರ್ಗಿಕವಾಗಿ ಕಾಳು ಮೆಣಸು ಬೆಳೆ ಬೆಳೆಯಲು ಕನಿಷ್ಠ 4 ರಿಂದ 5 ವರ್ಷಗಳಾಗುತ್ತವೆ, ಪಾಲಿಹೌಸ್‌ನಲ್ಲಿ ಬೆಳೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿದ ಪರಿಣಾಮವಾಗಿ ಕೇವಲ 11 ತಿಂಗಳಲ್ಲಿಯೇ ಬಳ್ಳಿಯಲ್ಲಿ ಫಸಲು ಬಿಡಲು ಪ್ರಾರಂಭಿಸಿದೆ.

ಇವರು ತಮ್ಮ ಒಂದೂಕಾಲು ಎಕರೆ ವ್ಯಾಪ್ತಿಯ ಪಾಲಿಹೌಸ್‌ನಲ್ಲಿ  5,300 ಕಾಳು ಮೆಣಸಿನ ಗಿಡ ಬೆಳೆದಿದ್ದಾರೆ. ಇದಕ್ಕೆ ನೀರು ಕಡಿಮೆ ಸಾಕಾಗುತ್ತದೆ. ಅಲ್ಲದೆ ಇದನ್ನು ನಿರ್ವಹಣೆ ಮಾಡುವುದು ಸುಲಭವಾಗುತ್ತದೆ.

ಸಾಮಾನ್ಯ ಕೃಷಿಯ ಕಾಳು ಮೆಣಸಿನ ಒಂದು ಬಳ್ಳಿಯಲ್ಲಿ  ಒಣಗಿದ 2 ಕೆ.ಜಿ ಇಳುವರಿ ನಿರೀಕ್ಷಿಸಬಹುದು. ಆದರೆ ಪಾಲಿಹೌಸ್‌ನಲ್ಲಿ ಬೆಳೆದ ಕಾಳು ಮೆಣಸು ಬಳ್ಳಿಯಲ್ಲಿ 7 ಕೆ.ಜಿ ಇಳುವರಿ ದೊರೆಯುತ್ತದೆ. ವಾತಾವರಣ ನಿಯಂತ್ರಣದಲ್ಲಿರುವುದರಿಂದ ಇಳುವರಿ ದುಪ್ಪಟ್ಟು  ಹೆಚ್ಚುತ್ತದೆ.

5ವರ್ಷದಲ್ಲಿ ಪಡೆಯುವ ಫಸಲನ್ನು  ಕೇವಲ 11 ತಿಂಗಳಲ್ಲಿ ಪಡೆಯಲು ಸಾಧ್ಯವಾಗುವುದು ಇದರ ಪ್ರಮುಖ ಅನುಕೂಲ. ಪಾಲಿಹೌಸ್‌ನಲ್ಲಿ ಕಾಳುಮೆಣಸು ಬೆಳೆದಿರುವುದು ಭಾರತದಲ್ಲೇ ತಮ್ಮದು ಮೊದಲ ಪ್ರಯೋಗ ಎಂದು ಲಕ್ಷ್ಮೀಶ್ ತಿಳಿಸುತ್ತಾರೆ.

ತಾರಸಿ ಮನೆ ಮೇಲೆ, ಹೂವಿನ ಕುಂಡದಲ್ಲಿ ಬೆಳೆಯಬಹುದಾದ ಪೊದೆ ಕರಿಮೆಣಸು  (ಬುಷ್‌ಪೆಪ್ಪರ್) ಕೃಷಿ.  ಕಳೆದ ವರ್ಷ ಫಸಲು ನೀಡಿದ  ಬಳ್ಳಿಯ ಕವಲುನೆಟ್ಟು ಪ್ರಯೋಗಶೀಲವಾಗಿ (ಕರಿಮುಂಡ ತಳಿ) ಬೆಳೆದು ಉತ್ತಮ ಫಸಲು ಪಡೆದಿದ್ದಾರೆ.  

ಕಾಳು ಮೆಣಸಿಗೆ ಅತ್ಯಂತ ಮಾರಕವಾಗಿರುವ ಶೀಘ್ರ ಹಾಗೂ ನಿಧಾನ ಸೊರಗು ರೋಗ ನಿಯಂತ್ರಣಕ್ಕೆ ನಿಖರವಾದ ಔಷಧಿ ಇಲ್ಲದೆ ಬೆಳೆ ಕಳೆದು ಕೊಳ್ಳುವ ಭೀತಿ ಇರುವ ಇಂದಿನ ದಿನಗಳಲ್ಲಿ  ಪಾಲಿಹೌಸ್‌ನಲ್ಲಿ  ಕಾಳು ಮೆಣಸು ಬೆಳೆದು ಇಂತಹ ರೋಗಕ್ಕೆ ಪರಿಹಾರವನ್ನು ಕಂಡುಕೊಂಡಿದ್ದಾರೆ. ಸಂಪರ್ಕ ಸಂಖ್ಯೆ–9482566626.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT