7

ಬೆಂಗಳೂರಿನ ಆಕರ್ಷಕ ಮಸೀದಿಗಳು

Published:
Updated:
ಬೆಂಗಳೂರಿನ ಆಕರ್ಷಕ ಮಸೀದಿಗಳು

ಬೆಂಗಳೂರಿನಲ್ಲಿ ನೂರಾರು ವರ್ಷದಷ್ಟು ಹಳೆಯದಾದ ಮಸೀದಿಗಳಿವೆ. ಹೈದರಾಲಿ ಮತ್ತು ಟಿಪ್ಪುಸುಲ್ತಾನ್‌ ಕಾಲದಲ್ಲಿ ನಿರ್ಮಾಣವಾದ ಕೆಲವು ಮಸೀದಿಗಳು ಇಂದಿಗೂ ಸಾವಿರಾರು ಜನರ ಪ್ರಾರ್ಥನಾ ಕೇಂದ್ರಗಳಾಗಿವೆ. ಐತಿಹಾಸಿಕ ಕಟ್ಟಡಗಳ ವಿಶಿಷ್ಟ ವಿನ್ಯಾಸ ಎಲ್ಲರ ಗಮನ ಸೆಳೆಯುತ್ತಿವೆ.ಬಕ್ರೀದ್‌ ಹಬ್ಬದ (ಸೆ.13) ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವು ಪುರಾತನ ಮಸೀದಿಗಳ ಪರಿಚಯ ಇಲ್ಲಿದೆ.ಸಂಗೀನ್‌ ಜಾಮಿಯಾ ಮಸೀದಿ(ತಾರಾ ಮಂಡಲ್‌ ಮಸೀದಿ)

ಕುಂಬಾರಪೇಟೆ ಬಳಿಯ  ಸಂಗೀನ್‌ ಜಾಮಿಯಾ ಮಸೀದಿ ಸುಮಾರು 700 ವರ್ಷಗಳಷ್ಟು ಹಳೆಯದು. ಔರಂಗಜೇಬನ ಸೇನಾಧಿಪತಿ ಮಲ್ಲಿಕಾಫರ್ ಇದರ ನಿರ್ಮಾತೃ.

‘250 ವರ್ಷಗಳ ಹಿಂದೆ ಟಿಪ್ಪು ಸುಲ್ತಾನ್‌  ಮೈಸೂರನ್ನು ಆಳುತ್ತಿದ್ದ ಸಂದರ್ಭದಲ್ಲಿ  ಶ್ರೀರಂಗಪಟ್ಟಣ ಮಾತ್ರವಲ್ಲದೇ, ಬೆಂಗಳೂರಿನಲ್ಲಿಯೂ ತೋಪು ಗುಂಡುಗಳನ್ನು  ತಯಾರಿಸುವ ತಾಣಗಳನ್ನು ನೆಲದಡಿಯಲ್ಲಿ ನಿರ್ಮಿಸಿದ್ದ.ಅಂಥ ತಾಣಗಳನ್ನು ‘ತಾರಾಮಂಡಲ್‌’ ಎಂದು ಕರೆಯುತ್ತಿದ್ದರು. ಈ ಮಸೀದಿ ಇರುವ ಪ್ರದೇಶದಲ್ಲಿ ತಾರಾಮಂಡಲ್‌ ಇತ್ತು ಎಂದು ಹೇಳಲಾಗಿದೆ. ಹಾಗಾಗಿ ಈ ಮಸೀದಿಯನ್ನು ತಾರಾಮಂಡಲ್‌ ಮಸೀದಿ ಎಂದೂ ಕರೆಯಲಾಗುತ್ತಿದೆ’ ಎಂದು ಆಲ್‌ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ಕರ್ನಾಟಕದ ಕಾರ್ಯದರ್ಶಿ ಸಫೀವುಲ್ಲಾ ಸಾಹೇಬ್‌ ವಿವರಿಸುತ್ತಾರೆ.*

ಜುಮ್ಮಾ ಮಸೀದಿ

ಶಿವಾಜಿನಗರದ ಜುಮ್ಮಾ ಮಸೀದಿಯನ್ನು 1790ರಲ್ಲಿ ಹಜರತ್ ಖಾಜಿ ಅಬ್ದುಲ್‌ ಖುದ್ದುಸ್‌ ಸಾಹೇಬ್‌ ಟಿಪ್ಪು ಸುಲ್ತಾನ್‌  ಸಹಾಯದಿಂದ ನಿರ್ಮಿಸಿದರು. ಕಟ್ಟಡಕ್ಕೆ ಬೇಕಿರುವ  ಸಾಮಗ್ರಿಗಳನ್ನು ಶ್ರೀರಂಗಪಟ್ಟಣದಿಂದ ತರಲಾಗಿದೆ.ಪ್ರಾರ್ಥನಾ ಸಭಾಂಗಣದಲ್ಲಿರುವ 14   ಬೃಹತ್ ಕಲ್ಲಿನ ಕಂಬಗಳನ್ನು ಮೈಸೂರಿನಿಂದ ಎತ್ತಿನಗಾಡಿಯಲ್ಲಿ  ತರಲಾಗಿತ್ತು. ಮೈಸೂರಿನ  ನುರಿತ ವಾಸ್ತುಶಿಲ್ಪಿಗಳು  ಮಸೀದಿ ನಿರ್ಮಾಣದಲ್ಲಿ ತೊಡಗಿದ್ದರು ಎಂಬ ಉಲ್ಲೇಖ ಸಿಗುತ್ತದೆ.ಮಸೀದಿಯ ವಿನ್ಯಾಸ ಪರ್ಷಿಯನ್‌ ಶೈಲಿಯಲ್ಲಿದೆ. ಮಸೀದಿಯ ಒಳಭಾಗದ ಗೋಡೆಗಳ ಮೇಲೆ ಆಕರ್ಷಕವಾದ ಹೂವು ಮತ್ತು ಎಲೆಯ ಕೆತ್ತನೆಯಿರುವ ಕಪ್ಪು ಗ್ರಾನೈಟ್‌ ಹಾಕಲಾಗಿದೆ. ಕಂಬಗಳು ಮತ್ತು ಚಾವಣಿಯ ಒಳಭಾಗದಲ್ಲೂ ಆಕರ್ಷಕ ಕೆತ್ತನೆಯಿದೆ. ದ್ವಾರಗಳಲ್ಲಿರುವ  ಕೆತ್ತನೆಗಳಲ್ಲಿ ಚಿನ್ನವನ್ನು ಬಳಸಲಾಗಿದೆ. ಮಸೀದಿಯ ಒಳಗಿರುವ ಹಳೆಯ ಗಡಿಯಾರ 106 ವರ್ಷಗಳಿಂದ ಒಮ್ಮೆಯೂ ಸ್ಥಗಿತಗೊಂಡಿಲ್ಲ ಎಂಬುದು ವಿಶೇಷ.*

ತವಕ್ಕಲ್‌ ಮಸ್ತಾನ್‌ ಮಸೀದಿ


ಅಕ್ಕಿಪೇಟೆಯ ಹಜರತ್‌ ತವಕ್ಕಲ್ ಮಸ್ತಾನ್‌ ಮಸೀದಿ  350 ವರ್ಷಗಳಷ್ಟು ಹಿಂದೆಯೇ ನಿರ್ಮಾಣವಾಗಿದೆ.  ಕೆ.ಆರ್‌.ಮಾರುಕಟ್ಟೆ ಬಳಿ ಹೈದರಾಲಿ ಕೋಟೆ  ಕಟ್ಟಿಸುತ್ತಿದ್ದಾಗ ಕಲ್ಲಿನ ಕೆಲಸಕ್ಕೆಂದು ತವಕ್ಕಲ್‌ ಮಸ್ತಾನ್‌ ಎಂಬ ಸಂತರೊಬ್ಬರು ಬರುತ್ತಿದ್ದರಂತೆ.ಅವರು ವಾಸವಿದ್ದದ್ದು ಚಿಕ್ಕಪೇಟೆಯ ಅಕ್ಕಿಪೇಟೆ ಮುಖ್ಯರಸ್ತೆಯಲ್ಲಿ. ಅವರು ದುಡಿಮೆಗೆ ಹಣ ಪಡೆಯುತ್ತಿರಲಿಲ್ಲ.  ಸೈನಿಕರಿಂದ ಈ ಮಾಹಿತಿ ಪಡೆದ ಹೈದರಾಲಿ ತವಕ್ಕಲ್‌ ಮಸ್ತಾನ್‌ ವಾಸವಿದ್ದ ಜಾಗಕ್ಕೆ ಭೇಟಿ ನೀಡಿದರು. ಸಂತರ ಪ್ರಾರ್ಥನೆಗೆ ಸರಿಯಾದ ಜಾಗ ಇಲ್ಲ ಎಂದು ಅರಿವಾದ ನಂತರ ಕಲ್ಲಿನಿಂದ ಮಸೀದಿ ನಿರ್ಮಿಸಿಕೊಟ್ಟರು.ತವಕ್ಕಲ್‌ ಅವರು ಸತ್ತ ನಂತರ ಮಸೀದಿ ಬಳಿಯೇ ಸಮಾಧಿ ಮಾಡಿ ದರ್ಗಾ ನಿರ್ಮಾಣ ಮಾಡಲಾಗಿದೆ. ಹಾಗಾಗಿ ಈ ಮಸೀದಿಯನ್ನು ‘ತವಕ್ಕಲ್‌ ಮಸ್ತಾನ್‌ ದರ್ಗಾ ಮಸೀದಿ’ ಎಂದೂ ಕರೆಯಲಾಗುತ್ತದೆ.  ಬೆಂಗಳೂರು ಕರಗ   ಈ ದರ್ಗಾಕ್ಕೆ  ತೆರಳುವುದು ವಾಡಿಕೆ.

*

ಲಾಲ್‌ ಮಸೀದಿ

ಶಿವಾಜಿನಗರದ ಲಾಲ್‌ ಮಸೀದಿ 170 ವರ್ಷ ಹಳೆಯದು.  ಈ ಮಸೀದಿಯ ಬಣ್ಣ  ಕೆಂಪು ಎಂಬುದು ವಿಶೇಷ. ಮೊಹಮದ್‌ ಮಾರೂಸ್‌ ಇದರ ನಿರ್ಮಾಪಕರು. ಮೊಹಮದ್‌ ಮಾರುಫ್‌ ಕುಟುಂಬದವರು ಟಿಪ್ಪು ಸುಲ್ತಾನ್‌ ಆಡಳಿತ ಕಾಲದಲ್ಲಿ  ಉತ್ತರ ಭಾರತದಿಂದ  ಬಂದು ಮೊದಲು ಶ್ರೀರಂಗಪಟ್ಟಣದಲ್ಲಿ, ನಂತರ ಬೆಂಗಳೂರಿನಲ್ಲಿ ನೆಲೆಸಿದ್ದರು. ಇವರೇ ಲಾಲ್‌ ಮಸೀದಿ ನಿರ್ಮಿಸಿದರು ಎಂದು ಹೇಳಲಾಗುತ್ತಿದೆ.ಈ ಮಸೀದಿಗೂ ಸ್ವಾತಂತ್ರ್ಯ ಹೋರಾಟದ ನಂಟಿದೆ. 1856ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಇಲ್ಲಿನ ಇಬ್ಬರು ಧರ್ಮಗುರುಗಳನ್ನು ಬ್ರಿಟಿಷರು ಗಲ್ಲಿಗೇರಿಸಿದ್ದರು. ಅದಕ್ಕೂ ಮುನ್ನ ಮಸೀದಿಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಸಭೆಗಳು ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. ಈಗಲೂ ಈ ಮಸೀದಿಯನ್ನು ಮೊಹಮದ್‌ ಮಾರುಫ್‌ ಅವರ ಕುಟುಂಬದವರೇ ನಡೆಸುತ್ತಿದ್ದಾರೆ.***

ಹತ್ತು ವರ್ಷದ ಹಿಂದೆ ಹಳೆಯ ಮಸೀದಿ ಕೆಡವಿ, ವಿಶಾಲವಾದ ಹೊಸ ಮಸೀದಿ ಕಟ್ಟಲಾಗಿದೆ. ದರ್ಗಾವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. 5 ಸಾವಿರಕ್ಕೂ ಹೆಚ್ಚು ಜನರು ಇಲ್ಲಿಗೆ ಪ್ರಾರ್ಥನೆ ಸಲ್ಲಿಸಲು ಬರುತ್ತಾರೆ

–ಫಾರೂಕ್‌ ಮಹಮ್ಮದ್‌,  ಕಾರ್ಯದರ್ಶಿ, ತವಕ್ಕಲ್‌ ಮಸ್ತಾನ್‌ ಮಸೀದಿ**

ಶಿವಾಜಿನಗರ ಲಾಲ್‌ ಮಸೀದಿಯ ಒಳ ವಿನ್ಯಾಸವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಸುತ್ತ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲಾಗಿದೆ.  ಮೊಹಮದ್‌ ಮಾರುಫ್‌ ಅವರ ಇಚ್ಛೆಯಂತೆ ಅವರ ಕುಟುಂಬದವರೇ ಮಸೀದಿಯ ನಿರ್ವಹಣೆ ಮಾಡುತ್ತಿದ್ದಾರೆ

–ರಿಜ್ವಾನ್‌, ಕಾರ್ಯದರ್ಶಿ, ಲಾಲ್‌ ಮಸೀದಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry