7

ಗೋಡೆ ಮೇಲಿನ ಭಯಂಕರ ಬರಹ

ಆರ್‌. ಪೂರ್ಣಿಮಾ
Published:
Updated:
ಗೋಡೆ ಮೇಲಿನ ಭಯಂಕರ ಬರಹ

ಪರಾಕ್ರಮಿಯನ್ನು ಹೊಡೆದಾಟದಲ್ಲಿ ಸೋಲಿಸಲು ಆಗದಿದ್ದರೆ ಹೊಡೆಯಬಾರದ ತೊಡೆಗೆ ಹೊಡೆದು ಕೆಡಹುವ ವಿಚಾರ ಬಹಳ ಹಳೆಯದು. ಮರದ ಮರೆಯಲ್ಲಿ ನಿಂತು ಬಾಣ ಬಿಟ್ಟು ಅಜೇಯ ವೀರನನ್ನು ಕೊಲ್ಲುವ ವಿಚಾರವೂ ಮರೆಯಲಾಗದ್ದು. ಕತ್ತಲಿನಲ್ಲಿ ನಿಂತು ಕತ್ತಿ ಬೀಸಿದ ಶೂರರ ಕಥೆಗಳು ಇರುವುದು ನಮ್ಮಲ್ಲಿ ಮಾತ್ರ ಅಲ್ಲ. ಮನುಕುಲದ ಕಥೆಯುದ್ದಕ್ಕೂ ಯಾರೋ ಯಾರನ್ನೋ ಅವರವರ ಕಾರಣಕ್ಕೆ ಅಥವಾ ಕಾರಣವೇ ಇಲ್ಲದೆ ಕೊಂದಿರುವ ಲೆಕ್ಕವನ್ನು ಯಾರಿಗೂ ಇಡಲಾಗಿಲ್ಲ. ಯಾರನ್ನಾದರೂ ಶಕ್ತಿಯಿಂದ ಅಥವಾ ವಾದದಿಂದ ಸೋಲಿಸಲು ಆಗದಿದ್ದರೆ ಅವರ ತೇಜೋವಧೆ ಮಾಡಿ ಮುಗಿಸುವುದಂತೂ ಬಹಳ ಹಳೆಯ ಯುದ್ಧ ‘ಧರ್ಮ’.‘ಯುದ್ಧ ಮತ್ತು ಪ್ರೀತಿಯಲ್ಲಿ ಏನು ಮಾಡಿದರೂ ತಪ್ಪಲ್ಲ’ ಎನ್ನುವ ಮಾತನ್ನು ಒಪ್ಪಿಕೊಂಡೇ ಇತಿಹಾಸ ಮುಂದುವರೆದಿದೆ. ಆದರೆ ಯುದ್ಧವೇ ಇಲ್ಲದೆ, ಬರೀ ದ್ವೇಷಕ್ಕೆ, ಅದೂ ವಿನಾಕಾರಣ ದ್ವೇಷಕ್ಕೆ ಯಾರು ಏನು ಬೇಕಾದರೂ ಮಾಡಬಹುದು, ಮಾತನಾಡಬಹುದು ಎನ್ನುವ ವಿಕೃತಿ ಜಾಗತಿಕವಾಗಿ ಬೆಳೆಯುತ್ತಿರುವುದೇ ವರ್ತಮಾನದ ಆತಂಕ. ಇಂಟರ್‌ನೆಟ್ ಅಥವಾ ಅಂತರ್ಜಾಲ ಈಗ ಎಂಥ ಜೀವವಿರೋಧಿ ವಿಚಾರಗಳಿಗೆ ದುರ್ಬಳಕೆ ಆಗುತ್ತಿದೆ ಎಂಬುದನ್ನು ಗಮನಿಸಿದರೆ ಭವಿಷ್ಯದ ಬಗ್ಗೆ ಆತಂಕ ಹೆಚ್ಚುತ್ತಿದೆ. ‘ವೈ ವಿ ಆರ್ ಲೂಸಿಂಗ್ ದಿ ಇಂಟರ್‌ನೆಟ್ ಟು ದಿ ಕಲ್ಚರ್ ಆಫ್ ಹೇಟ್’ ಎಂದು ಅಮೆರಿಕದ ಪ್ರಸಿದ್ಧ ‘ಟೈಮ್’ ವಾರಪತ್ರಿಕೆ ಕಳೆದ ತಿಂಗಳ ಮುಖಪುಟ ಲೇಖನದಲ್ಲಿ ವ್ಯಕ್ತಪಡಿಸಿದ ಆತಂಕ, ಮುಂದೊದಗಲಿರುವ ಅವ್ಯಕ್ತ ಅಪಾಯಗಳ ಬಗ್ಗೆ ಭಯ ಹುಟ್ಟಿಸುವಂತಿತ್ತು.ಇಂಟರ್‌ನೆಟ್ ಅತ್ಯದ್ಭುತ ಆವಿಷ್ಕಾರ. ಅದಿಲ್ಲದೆ ಈಗ ಜಗತ್ತನ್ನು, ಬದುಕನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಇದುವರೆಗೆ ಕಂಡುಕೊಂಡ ತಂತ್ರಜ್ಞಾನ ಅಥವಾ ಇದುವರೆಗೆ ರೂಪುಗೊಂಡ ಮಾನವಜ್ಞಾನ ಈಗ ಸಂಪೂರ್ಣವಾಗಿ ಅಂತರ್ಜಾಲ ಎಂಬ ಅಸಾಮಾನ್ಯ ಸೌಲಭ್ಯವನ್ನು ಅವಲಂಬಿಸುವ ಹಂತ ತಲುಪಿಯಾಗಿದೆ. ಅಷ್ಟರಮಟ್ಟಿಗೆ ಇಂಟರ್‌ನೆಟ್ ಎನ್ನುವುದು ತಂತ್ರಜ್ಞಾನದ ಮಹಾತಂತ್ರ ಮತ್ತು ಮಹಾಮಂತ್ರ ಎರಡೂ ಆಗಿಬಿಟ್ಟಿದೆ. ಅಂತರ್ಜಾಲದ ಬಳಕೆಯ ಪಟ್ಟಿ ಮಾಡುತ್ತಾ ಹೋದರೆ ಅದು ಮುಗಿಯುವುದೇ ಇಲ್ಲವೇನೋ. ಒಂದು ರೀತಿಯಲ್ಲಿ ಜಗತ್ತಿನ ಯಾವ ವಿಚಾರವನ್ನೂ ಬದುಕಿನ ಯಾವ ಅಂಶವನ್ನೂ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಅಂತರ್ಜಾಲ ಮುಟ್ಟದೆ ಇಲ್ಲ.ಮೊದಲು ಯಾವುದಾದರೂ ಒಂದು ವಿಷಯವನ್ನು ‘ಕರತಲಾಮಲಕ’ವಾಗಿ, ಅಂದರೆ ‘ಅಂಗೈ ಮೇಲಿನ ನೆಲ್ಲಿಕಾಯಿ’ಯಷ್ಟು ಸ್ಪಷ್ಟವಾಗಿ ತಿಳಿದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಕೈಯಲ್ಲಿ ಅಂತರ್ಜಾಲ ಸೌಲಭ್ಯ ಇರುವ ಮೊಬೈಲ್ ಇದ್ದರೆ, ಸಕಲ ವಿಷಯಗಳೂ ನಮಗೆ ಕ್ಷಣಕ್ಷಣಕ್ಕೆ ತಿಳಿದು ಇಡೀ ಜಗತ್ತೇ ಒಂದು ನೆಲ್ಲಿಕಾಯಿಯ ತರಹ ನಮ್ಮ ಕೈಯಲ್ಲಿರುತ್ತದೆ. ಅಂತರ್ಜಾಲ ಮನುಕುಲಕ್ಕೆ ಸಿಕ್ಕ ವರದಾನ ಎನ್ನುವುದು ನಿರ್ವಿವಾದ ಮತ್ತು ಜಗತ್ತು ಅದಕ್ಕೆ ಕೃತಜ್ಞವಾಗಿದೆ. ಆದರೀಗ ಆತಂಕ ಇರುವುದು ಅಂತರ್ಜಾಲದ ಬಗ್ಗೆ ಅಲ್ಲ, ಅದರ ಊಹಾತೀತ ದುರ್ಬಳಕೆಯ ಬಗ್ಗೆ. ಕ್ಷಿಪ್ರ ಸಂವಹನವೇ ಅಂತರ್ಜಾಲದ ಮೂಲಶಕ್ತಿಯಾದ್ದರಿಂದ, ಬೇಡವಾದ ಸಂಗತಿಗಳು ಕ್ಷಣಮಾತ್ರದಲ್ಲಿ ಜಗತ್ತನ್ನು ಆವರಿಸುತ್ತಿರುವ ಭೀಕರ ವಿದ್ಯಮಾನದ ಬಗ್ಗೆ ಮಾನವಕುಲವೇ ಆತಂಕಗೊಳ್ಳುವಂತಾಗಿದೆ.ಅಂತರ್ಜಾಲದ ಬಳಕೆ ಬರೀ ಸುಲಭ ಸಂವಹನಕ್ಕೆ ಮಾತ್ರ ಅಲ್ಲ, ಅದರ ಬಳಕೆಯನ್ನು ಜನಹಿತ ಮತ್ತು ಜನವಿರೋಧ ಎಂದು ಸುಲಭವಾಗಿ ವರ್ಗೀಕರಿಸುವಷ್ಟು ಸ್ಪಷ್ಟವಾಗಿದೆ. ಮನುಷ್ಯರ ಅಸಹನೆ, ದ್ವೇಷ, ಹಿಂಸೆಯ ಪ್ರಸಾರಕ್ಕೆ ಅದರಿಂದಲೇ ಲೋಕೋವಿಶಾಲ ವೇದಿಕೆಯನ್ನು ನಿರ್ಮಿಸಿಕೊಳ್ಳಲಾಗಿದೆ. ಧರ್ಮಗಳ ಅಧಾರ್ಮಿಕ ಉಪದೇಶಗಳಿಗೆ ಅದೇ ಪ್ರವಚನ ಮಂದಿರ ಒದಗಿಸಿದೆ. ಧಾರ್ಮಿಕ ಭಯೋತ್ಪಾದನೆ ಮುಂತಾದುವು ಅಂತರ್ಜಾಲವನ್ನೇ ‘ವರ್ಲ್ಡ್ ಹೆಡ್‌ಕ್ವಾರ್ಟರ್ಸ್’ ಮಾಡಿಕೊಂಡಿವೆ. ಮನುಷ್ಯರನ್ನು ನಾಶ ಮಾಡುವ ಸಮರ ಸಿದ್ಧಾಂತಗಳ ಮಾರಾಟಕ್ಕೂ ಅಂತರ್ಜಾಲವೇ ‘ವರ್ಲ್ಡ್ ಟ್ರೇಡ್ ಸೆಂಟರ್’ ಆಗಿಬಿಟ್ಟಿದೆ.ಅಂತರ್ಜಾಲ ಎನ್ನುವುದು ಜಗತ್ತಿನಾದ್ಯಂತ ಪತ್ರಿಕೆ, ದೂರದರ್ಶನ ಮೊದಲಾದ ಸಮೂಹ ಮಾಧ್ಯಮಕ್ಕೆ ಮರುಜನ್ಮ ಕೊಟ್ಟು ಅದರ ಸಾಧ್ಯತೆಗಳನ್ನು ಹೇಗೆ ವಿಸ್ತರಿಸಿತೆಂಬುದನ್ನು ನೋಡಿದ್ದೇವೆ. ಇದೇ ಅಂತರ್ಜಾಲವೇ ‘ಸಾಮಾಜಿಕ ಮಾಧ್ಯಮ’ ಎನ್ನುವುದಕ್ಕೂ ಜನ್ಮ ಕೊಟ್ಟಿತು, ಮತ್ತು ಆ ಮೂಲಕ ಸಮೂಹ ಮಾಧ್ಯಮ ತನ್ನ ಆದ್ಯತೆಗಳ ಬಗ್ಗೆ ಮತ್ತು ನಾವು ಅದರ ಅವಶ್ಯಕತೆಯ ಬಗ್ಗೆ ಹೊಸದಾಗಿ ಯೋಚಿಸುವಂತೆ ಮಾಡಿತು. ಸಮೂಹ ಮಾಧ್ಯಮ ಜಗತ್ತನ್ನು ಎಷ್ಟು ಬದಲಾಯಿಸಿತೋ ಏನೋ ಗೊತ್ತಿಲ್ಲ, ಸಾಮಾಜಿಕ ಮಾಧ್ಯಮ ಮಾತ್ರ ಖಂಡಿತವಾಗಿ ಜಗತ್ತನ್ನೂ ಬದಲಾಯಿಸಿದೆ, ಅದನ್ನು ನೋಡುವ ದೃಷ್ಟಿಕೋನವನ್ನೂ ಬದಲಾಯಿಸಿದೆ ಎಂದು ಬಲ್ಲವರು ಹೇಳುತ್ತಾರೆ. ಯೋಟ್, ರೆಡ್ಡಿಟ್,  ಟ್ವಿಟರ್, ಫೇಸ್‌ಬುಕ್, ಯುಟ್ಯೂಬ್, ಇಸ್ಟಾಗ್ರಾಮ್, ಸ್ನಾಪ್‌ಶಾಟ್,  ಮೆಸೆಂಜರ್, ವಾಟ್ಸಾಪ್ ಇತ್ಯಾದಿ ಪರಿವಾರ ದೇವತೆಗಳನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಎಂಬ ಸ್ವರ್ಗಕ್ಕೆ ಅಂತರ್ಜಾಲವೇ ಅಂತರ್ಜಲ. ಅದರಲ್ಲಿ ವಿಹರಿಸಲು ಪ್ರವೇಶದ ಪಾಸ್‌ಪೋರ್ಟ್ ಸಾಕು, ವೀಸಾ ಬೇಕಿಲ್ಲ. ಇಲ್ಲಿ ಎಲ್ಲವೂ ಮುಕ್ತ ಮುಕ್ತ. ಆದರೆ ಈ ಮುಕ್ತಮಾಧ್ಯಮದ ಯುಕ್ತ ಬಳಕೆ ಅಗತ್ಯ ಪ್ರಮಾಣದಲ್ಲಿ ನಿರೀಕ್ಷಿತ ಕ್ರಮದಲ್ಲಿ, ಒಳ್ಳೆಯ ರೀತಿಯಲ್ಲಿ ಆಗುತ್ತಿಲ್ಲ ಎನ್ನುವುದೇ ದೊಡ್ಡ ಆತಂಕ.‘ಅಭಿವ್ಯಕ್ತಿ ಸ್ವಾತಂತ್ರ್ಯ’ ಎನ್ನುವುದು ಯಾವಾಗಲೂ ಮನುಷ್ಯರಿಗೆ ಲಭ್ಯವಾಗಿರುವುದು ಸಂಕೋಲೆಗಳ ಸಹಿತವೇ! ಸುಮ್ಮನೆ ನೋಡುವುದಾದರೆ ದೂರದರ್ಶನ, ಆಕಾಶವಾಣಿ, ಬಾನುಲಿ ಮುಂತಾದ ಬಹಳ ಅರ್ಥವಿಸ್ತಾರದ ಚಂದದ ಹೆಸರುಗಳು ಇದ್ದರೂ ಅವುಗಳಲ್ಲಿ ಯಾರ ಅಭಿಪ್ರಾಯಕ್ಕೆ ಮಾತ್ರ ಆಕಾಶದಗಲ ಅವಕಾಶವಿತ್ತು ಎನ್ನುವುದು ಎಲ್ಲರಿಗೂ ಗೊತ್ತು. ಇನ್ನು ದೇಶದ ತುಂಬಾ ಪತ್ರಿಕೆಗಳು, ಟಿವಿ ವಾಹಿನಿಗಳು ಇದ್ದರೂ ಅವು ಒಂದು ಖಾಸಗಿ ಉದ್ಯಮವೇ ಆಗಿರುವುದರಿಂದ ಒಳ್ಳೆಯ ಮತ್ತು ಒಳ್ಳೆಯದಲ್ಲದ ಹತೋಟಿ ಅಲ್ಲಿ ಇದ್ದೇ ಇರುತ್ತದೆ ಎನ್ನುವುದು ಸುಳ್ಳಲ್ಲ. ಕೆಲವೊಂದು ಅಪವಾದಗಳನ್ನು ಬಿಟ್ಟರೆ, ಸಾಕಷ್ಟು ದೀರ್ಘ ಕಾಲ ಜಗತ್ತನ್ನು ತಮಗೆ ತೋಚಿದಂತೆ ಜನರಿಗೆ ತೋರಿಸಿದ ಇಂಥ ಸಮೂಹ ಮಾಧ್ಯಮಕ್ಕೆ ಸವಾಲೆಸೆದಂತೆ ಹುಟ್ಟಿಬೆಳೆದ ‘ಸಾಮಾಜಿಕ ಮಾಧ್ಯಮ’ ಎನ್ನುವುದು ಈಗಂತೂ ಎಲ್ಲರಿಗೂ ದಕ್ಕುವ, ಯಾರ ಹಂಗೂ ಇಲ್ಲದ, ಯಾರ ಜಪ್ತಿಗೂ ಸಿಗದ ‘ಅವಕಾಶವಾಣಿ’.ಮನುಕುಲದ ಇತಿಹಾಸದಲ್ಲಿ ಮಾತಿಗೆ ಇಷ್ಟೊಂದು ಮುಕ್ತ ಅವಕಾಶ ಎಂದೂ ದೊರೆತಿರಲಿಲ್ಲ. ಆಕಾಶಕ್ಕೇ ಸಿಸಿ ಟಿವಿ ಹೇಳಿ ಹಾಕಿಸಿಕೊಂಡಂತೆ ಈಗ ಬದುಕೇ ಮುಕ್ತಚಿತ್ರವಾಯಿತೇನೋ, ಅಂತರಂಗ ಎನ್ನುವುದು ಅಳಿಸಿಹೋಗಿ ಎಲ್ಲವೂ ಬಹಿರಂಗ ಆಯಿತೇನೋ ಎಂಬ ಅನುಮಾನ ಬರುವಷ್ಟು ಇಲ್ಲಿ ಎಲ್ಲವೂ ಮುಕ್ತ. ಹಿಂದೆ ಕೆಲವರು ತಮ್ಮ ದಿನನಿತ್ಯದ ಬದುಕನ್ನು, ಆಲೋಚನೆಗಳನ್ನು ಒಂದು ಡೈರಿಯಲ್ಲಿ ಬರೆದಿಡುತ್ತಿದ್ದರು. ಅದನ್ನು ಯಾರಾದರೂ ಕದ್ದು ಓದಿದರೆ ಖಾಸಗಿತನದ ಉಲ್ಲಂಘನೆಯ ಮಹಾಪರಾಧ ಅನ್ನಿಸುತ್ತಿತ್ತು. ಈಗ ಅನ್ನಿಸಿದ್ದೆಲ್ಲವನ್ನೂ ಯಾರು ಬೇಕಾದರೂ ಅವರೇ ಸಾಮಾಜಿಕ ಮಾಧ್ಯಮದ ತಮ್ಮ ಖಾತೆಯಲ್ಲಿ ಬಹಿರಂಗಪಡಿಸಬಹುದು. ಅದು ಹೇಳಬೇಕಾದ ‘ವಿಷಯ’ ಎಂಬುದೇನೂ ಆಗಿರಬೇಕಿಲ್ಲ. ಬೆಳಗ್ಗೆ ಸಂಡಾಸಿಗೆ ಹೋಗಿದ್ದನ್ನೂ ಹೇಳಬಹುದು. ಬರೆಯುವವರ ಮತ್ತು ಓದುವವರ ಕಾಲಹರಣ ಬಿಟ್ಟರೆ ಇವುಗಳಿಂದ ಸಮಾಜಕ್ಕೆ ಹೆಚ್ಚೇನು ಸಮಸ್ಯೆಯಿಲ್ಲ ಎಂದೇ ಅಂದುಕೊಳ್ಳೋಣ.ಸಾಮಾಜಿಕ ಮಾಧ್ಯಮ ನಿಜವಾಗಿ ಇದಕ್ಕಿಂತ ಹೆಚ್ಚಿನ ಸಾಮಾಜಿಕ ಹೊಣೆಗಾರಿಕೆಯನ್ನೂ ನಿರ್ವಹಿಸುತ್ತಿದೆ. ಸಿದ್ಧಪ್ರಸಿದ್ಧರು ಬಿಡಿ, ಏನೂ ಅಲ್ಲದ ಸಾಮಾನ್ಯ ಜನರ ಅಭಿಪ್ರಾಯ ಮಂಡನೆಗೂ ಇಲ್ಲಿ ಅವಕಾಶವಿದೆ. ಸಮೂಹ ಮಾಧ್ಯಮದಲ್ಲಿ ಇದಕ್ಕೆಲ್ಲ ಸದಾ ಅವಕಾಶ ಸಿಗುವುದೋ ಇಲ್ಲವೋ ಅದು ಸಾಪೇಕ್ಷ. ಅಲ್ಲಿ ಸಮಯ ಮತ್ತು ಸ್ಥಳದ ದೊಡ್ಡ ಮಿತಿ ಇದೆ. ಸಾಮಾಜಿಕ ಮಾಧ್ಯಮ ಹಾಗಲ್ಲ, ಅದು ಅನಂತ ಅವಕಾಶಗಳ ಆಕಾಶ. ಈ ಆಕಾಶದ ಗೋಡೆಯ ಮೇಲೆ ಯಾರು ಬೇಕಾದರೂ ತಮಗೆ ಅನ್ನಿಸಿದ್ದನ್ನು ಬರೆಯಬಹುದು. ಇತಿಹಾಸದುದ್ದಕ್ಕೂ ಅಕ್ಷರ ಎನ್ನುವುದು ಬಲ್ಲವರ, ಬಲ್ಲಿದರ ಮತ್ತು ಮೇಲ್ವರ್ಗ- ಮೇಲ್ಜಾತಿಗಳ ಸ್ವತ್ತಾಗಿತ್ತು. ತಳ ಸಮುದಾಯದ ಶೋಷಣೆಗೆ, ದಮನಕ್ಕೆ ಅಕ್ಷರವೂ ಒಂದು ಅಸ್ತ್ರವಾಗಿತ್ತು. ಸಾಮಾಜಿಕ ಮಾಧ್ಯಮದ ಕಾರಣದಿಂದ ಈಗ ಒಬ್ಬ ಬಡ ಅವಕಾಶವಂಚಿತನ ಪಾಲಿಗೂ ಅಕ್ಷರ ಅಸ್ತ್ರವಾಗುವ ಬೆಳವಣಿಗೆ ಆಗಿದೆ. ಪ್ರಭುತ್ವ, ಆಡಳಿತ, ಧರ್ಮ, ಜಾತಿ ಮುಂತಾದ ಯಾವುದನ್ನು ಬೇಕಾದರೂ ಅಲ್ಲಿ ವಿರೋಧಿಸಬಹುದು. ಇಂಥ ಅಭಿಪ್ರಾಯದ ಅಭಿವ್ಯಕ್ತಿಯನ್ನು ಹಿಂದೆ ಇಷ್ಟು ಕ್ಷಿಪ್ರಗತಿಯಲ್ಲಾಗಲೀ ವ್ಯಾಪಕ ರೀತಿಯಲ್ಲಾಗಲೀ ಕಾಣಲು ಸಾಧ್ಯವಿರಲಿಲ್ಲ. ಈಗ ತಬರನ ಕಥೆ ಕ್ಷಣಮಾತ್ರದಲ್ಲಿ ಪ್ರಧಾನಮಂತ್ರಿಯ ಗಮನಕ್ಕೂ ಬೀಳಬಹುದು. ಸಾಮಾಜಿಕ ಮಾಧ್ಯಮ ಎನ್ನುವುದು ಒಟ್ಟಾರೆಯಾಗಿ ಶೋಷಿತ ಜಗತ್ತಿಗೆ ಸಿಕ್ಕ ಹೊಸ ಅಸ್ತ್ರ ಎಂದೇ ಸಂಭ್ರಮಿಸೋಣ.ಸಾಮಾಜಿಕ ಮಾಧ್ಯಮದಲ್ಲಿ ಹರಿಯುತ್ತಿರುವ ಕ್ಷುದ್ರ, ಕ್ಷುಲ್ಲಕ ಸಂಗತಿಗಳ ಹೊಳೆಯ ಜೊತೆಗೇ ಗಂಭೀರ ವಿಷಯಗಳನ್ನು ಕುರಿತ ಮಂಡನೆ, ಚರ್ಚೆ, ಸಂವಾದ, ಸಂಕಥನಗಳೂ ಇವೆ ಎಂಬುದನ್ನು ಗಮನಿಸಲೇಬೇಕು. ಜಗತ್ತಿನ ಅನೇಕ ದೇಶಗಳಲ್ಲಿ ಸರ್ವಾಧಿಕಾರ, ಭ್ರಷ್ಟಾಚಾರ ಮುಂತಾದ್ದರ ವಿರುದ್ಧ ಜನರು ಮಾತನಾಡುತ್ತಿರುವುದು ಸಾಮಾಜಿಕ ಮಾಧ್ಯಮದ ಮೂಲಕ. ಜನರನ್ನು ಎಚ್ಚರಿಸುವ, ಸಂಘಟಿಸುವ ಮಾಧ್ಯಮವೇ ಅದಾಗುತ್ತಿದೆ. ಧಾರ್ಮಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಬಹುಮುಖೀ ಸಂಸ್ಕೃತಿಯ ರಕ್ಷಣೆ ಮುಂತಾದ್ದರ ಬಗ್ಗೆ ಅದರಲ್ಲಿ ದೊಡ್ಡ ಹೋರಾಟಗಳು ನಡೆಯುತ್ತಿವೆ. ಸಮೂಹ ಮಾಧ್ಯಮ ಸಾಮಾನ್ಯವಾಗಿ ಕಣ್ಣೆತ್ತಿ ನೋಡದ ಸಂಗತಿಗಳು ಸಾಮಾಜಿಕ ಮಾಧ್ಯಮದ ಅಗ್ರವಾರ್ತೆ ಆಗುತ್ತಿವೆ. ಜಾತಿ-ಧರ್ಮ ನಿರಪೇಕ್ಷತೆಯ ಬೆಳಕು ಆರದಂತೆ ಅಲ್ಲಿ ಜೋಪಾನ ಮಾಡಲಾಗುತ್ತಿದೆ. ಸಾಮಾಜಿಕ ಮಾಧ್ಯಮ ನಿರ್ವಹಿಸುತ್ತಿರುವ ಈ ಸಾಮಾಜಿಕ ಹೊಣೆಗಾರಿಕೆಯನ್ನು ಮರೆಯದಿರೋಣ.ಆದರೆ ತಲ್ಲಣ ತಳಮಳ ಹುಟ್ಟಿಸುತ್ತಿರುವುದು ಅಲ್ಲಿ ಕಾಣುತ್ತಿರುವ ದುಷ್ಟ ಪ್ರವೃತ್ತಿಗಳ ಮೆರೆದಾಟ. ಸಾಮಾಜಿಕ ಮಾಧ್ಯಮದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಜೀವದ್ರವ್ಯದ ವ್ಯಾಖ್ಯಾನವೇ ಬದಲಾಗಿದೆ. ಭಿನ್ನಮತ ಒಲ್ಲದ ಅಸಹನೆ, ಜನಾಂಗೀಯ ದ್ವೇಷ, ಧರ್ಮ, ಜಾತಿ ದ್ವೇಷ, ಭಾಷಾ ಜಗಳ, ದುರುಳ ಉದ್ದೇಶದ ಗುಂಪುಗಳಿಂದ ನೇರ ಮತ್ತು ಗೆರಿಲ್ಲಾ ದಾಳಿ, ವಿಕೃತ ಕೆಲಸಗಳಿಗೆ ವ್ಯಾಪಕ ಪ್ರಚಾರ ಮೊದಲಾದ ಅನೇಕ ಸಾಮೂಹಿಕ ವಿಕೃತಿಗಳಿಗೆ ಈಗ ಸಾಮಾಜಿಕ ಮಾಧ್ಯಮದ ಗೋಡೆಗಳೇ ಸಂಗ್ರಾಮರಂಗ. ಸಂವೇದನಾಶೀಲತೆ, ಗಾಂಭೀರ್ಯ, ಸಹನೆ, ಸಂಸ್ಕೃತಿ ಮುಂತಾದ ಪದಗಳಿಗೆ ಅಲ್ಲಿ ಅವಕಾಶವೇ ಇಲ್ಲ. ನಮ್ಮಲ್ಲೇ ದಾಭೋಲ್ಕರ್, ಅನಂತಮೂರ್ತಿ, ಕಲಬುರ್ಗಿ, ರಾಕೇಶ್ ಮೊದಲಾದವರ ಮರಣ-ಹತ್ಯೆ ಸಂದರ್ಭದಲ್ಲಿ ಹಿಂದಿನ ವೈಯಕ್ತಿಕ ವಿಕೃತಿಗಳೆಲ್ಲ ಸಾಮೂಹಿಕ ವಿಕೃತಿಗಳಾಗಿ ಬದಲಾಗಿವೆ.ಇದರಷ್ಟೇ ಜಗತ್ತನ್ನು ಕಂಗೆಡಿಸುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ಹುಟ್ಟಿಕೊಂಡಿರುವ ದುಷ್ಟಪೀಡಕರ ಶನಿಸಂತಾನ ನಡೆಸುತ್ತಿರುವ ‘ಇಂಟರ್‌ನೆಟ್ ಟ್ರೋಲಿಂಗ್’ ಅಥವಾ ಅಂತರ್ಜಾಲ ಪರಪೀಡನೆ. ಸೈಕೋಪಾತ್‌ಗಳು, ವಿಕೃತ ಕಾಮಿಗಳು, ವಿಘ್ನಸಂತೋಷಿಗಳು, ದುರಹಂಕಾರಿಗಳು, ಸ್ತ್ರೀಯರ ಹಕ್ಕುಗಳ ದ್ವೇಷಿಗಳು, ಹಿಂಸಾನಂದರು, ಅಸಹಿಷ್ಣುಗಳು ಮೊದಲಾದ ಅನೇಕರಿಗೆ  ಜಾಲತಾಣಗಳು ನೆಚ್ಚಿನ ವಿಹಾರಸ್ಥಳಗಳಾಗಿವೆ. ಧಾರ್ಮಿಕ ಅಲ್ಪಸಂಖ್ಯಾತರು, ಭಾಷಾ ಅಲ್ಪಸಂಖ್ಯಾತರು, ದಲಿತರು, ಸಲಿಂಗಕಾಮಿಗಳು, ಲೈಂಗಿಕ ಅಲ್ಪಸಂಖ್ಯಾತರು ಮುಂತಾದವರ ದನಿ ಅಡಗಿಸಲು ಇದಕ್ಕಿಂತ ಒಳ್ಳೆಯ ವಧಾಸ್ಥಾನ ಮತ್ತೊಂದಿಲ್ಲ ಎನ್ನುವಂತಾಗಿದೆ. ಜಗತ್ತಿನಾದ್ಯಂತ ಜಾಲತಾಣಗಳಲ್ಲಿ ಕಾಣುವಂತೆ ಈಗಲೂ ಹೆಣ್ಣೊಬ್ಬಳನ್ನು ದಾರಿಗೆ ತರಲು ಅತ್ಯಾಚಾರವೇ ಸರಿಯಾದ ದಾರಿ. ಅದಿರಲಿ, ಮಹಿಳೆಯೊಬ್ಬಳು ಮಾಡಿದ ವಾದ ಸಹಿಸದ ಗಂಡಸೊಬ್ಬ ಶಾಲೆಗೆ ಹೋಗುವ ನಿನ್ನ ಐದು ವರ್ಷದ ಮಗಳ ಮೇಲೆ ರೇಪ್ ಮಾಡುತ್ತೇನೆ ಅನ್ನುತ್ತಾನೆ. ಹೆಣ್ಣಿನ ಮೇಲಿನ ದೌರ್ಜನ್ಯ ಹಿಂದೆಂದೂ ಇಲ್ಲದಂಥ ಅನಾಮಿಕ, ಅದೃಶ್ಯ ಅವತಾರಗಳನ್ನು ಎತ್ತಿರುವುದು ಸಾಮಾಜಿಕ ಅನಾರೋಗ್ಯ ಉಲ್ಬಣಿಸಿರುವುದನ್ನೇ ಹೇಳುತ್ತಿದೆ.ಈ ಆತಂಕವನ್ನು ತಡೆಯಲು ಸಾಮಾಜಿಕ ಮಾಧ್ಯಮದಲ್ಲಿ ಇರುವ ತಾಂತ್ರಿಕ ನಿಯಂತ್ರಣ, ಪೊಲೀಸ್ ನಿಯಂತ್ರಣ ಸಾಕಾಗುವುದಿಲ್ಲ. ಜಾಗೃತಿ ಮೂಡಿಸಲು ಅದೇ ಮಾಧ್ಯಮವನ್ನೇ ಇನ್ನಷ್ಟು ಸಶಕ್ತವಾಗಿ, ವ್ಯಾಪಕವಾಗಿ ಬಳಸಿಕೊಳ್ಳಬೇಕು. ಬುದ್ಧಿಜೀವಿಗಳು, ಸುದ್ದಿಜೀವಿಗಳು, ಲದ್ದಿಜೀವಿಗಳು ಮುಂತಾದ ಅಪಹಾಸ್ಯವನ್ನು ಲೆಕ್ಕಿಸದೆ ‘ಸ್ವಚ್ಛ ಅಂತರ್ಜಾಲ ಭಾರತ’ ಆಂದೋಲನ ಆರಂಭಿಸಬೇಕು. ಇಲ್ಲದಿದ್ದರೆ ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಕಲುಷಿತ ಪರಿಸರದ ಜೊತೆ ಕಲುಷಿತ ಸಂವೇದನೆಯನ್ನೂ ಕೊಡುವ ಅಪರಾಧ ನಮ್ಮದಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry