ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರ ಆಕ್ರೋಶಕ್ಕೆ ಕಾರು, ಲಾರಿ, ಬಸ್‌ ಬೆಂಕಿಗಾಹುತಿ

Last Updated 12 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದ ಹಲ್ಲೆ ಖಂಡಿಸಿ ರಾಜ್ಯದ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆದಿದೆ. ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ತಮಿಳುನಾಡು ಮೂಲದವರಿಗೆ ಸೇರಿರುವ ಆನಂದ್ ಕಾಂಪ್ಲೆಕ್ಸ್‌ ಮೇಲೆ ಉದ್ರಿಕ್ತ ಗುಂಪು ದಾಳಿ ನಡೆಸಿತು.

ಈ ಗುಂಪು ಲಾರಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದಾಗ ಪೊಲೀಸರು ತಡೆಯಲು ಮುಂದಾದರು. ಕಲ್ಲು ತೂರಾಟ ಮಾಡಿದ ಗುಂಪು ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರನ್ನೇ ಹಿಮ್ಮೆಟ್ಟಿಸಿತು. ಪರಿಸ್ಥಿತಿ ಕೈಮೀರಿದ್ದರಿಂದ ಪೊಲೀಸರು ಅಶ್ರುವಾಯು ಸೆಲ್‌ ಸಿಡಿಸಿ ಪರಿಸ್ಥಿತಿ ನಿಯಂತ್ರಿಸಲು ಮುಂದಾದರು. ಅದೇ ವೇಳೆಗೆ ಇನ್ನೊಂದು ಬದಿಯಿಂದ ಬಂದ ಯುವಕರ ಗುಂಪು ಲಾರಿಗೆ ಬೆಂಕಿ ಹಚ್ಚಿತು.

ನ್ಯಾಯಮೂರ್ತಿ ಮನೆ ಮೇಲೆ ದಾಳಿ: ಪಾಂಡವಪುರದಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವಪ್ಪ ಅವರ ಮನೆ ಮೇಲೂ ದಾಳಿ ನಡೆಸಿ, ಗಾಜು ಒಡೆಯಲಾಗಿದೆ. ತಮಿಳುನಾಡಿನಲ್ಲಿ ಹೈಕೋರ್ಟ್‌ನ್ಯಾಯಮೂರ್ತಿಯಾಗಿದ್ದಾಗ ಮುಖ್ಯಮಂತ್ರಿ ಜಯಲಲಿತಾ ಅವರ ಪರವಾಗಿ ತೀರ್ಪು ನೀಡಿದ್ದರು ಎಂದು ಪ್ರತಿಭಟನಾಕಾರರು ಆರೋಪಿಸಿದರು.

ದಾಳಿ ನಡೆದಾಗ ನಿವೃತ್ತ ನ್ಯಾಯಮೂರ್ತಿ ಮನೆಯಲ್ಲಿರಲಿಲ್ಲ. ಅಶೋಕ ಎನ್ನುವವರ ಕಾರಿಗೂ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಪಾಂಡವಪುರದಲ್ಲಿ ಉದ್ವಿಗ್ನ ಸ್ಥಿತಿ ಇದೆ.  ಮದ್ದೂರಿನ ಎಪಿಎಂಸಿ ಆವರಣದಲ್ಲಿದ್ದ ಎರಡು ಲಾರಿಗಳಿಗೆ ಕಲ್ಲು ತೂರಿ ಗಾಜು ಒಡೆಯಲಾಗಿದೆ. ಬೆಂಕಿ ಹಚ್ಚುವ ಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ತಾಲ್ಲೂಕಿನ ಗೆಜ್ಜಲಗೆರೆ ಬಳಿ ಟಾಟಾ ಸುಮೊ ವಾಹನ ಮತ್ತು ಸರಕು ಸಾಗಣೆ ಜೀಪ್‌ಗೆ ಬೆಂಕಿ ಹಚ್ಚಲಾಗಿದೆ.

ಶ್ರೀರಂಗಪಟ್ಟಣದ ರಂಗನತಿಟ್ಟು ಬಳಿ ನಾಲೆ ದುರಸ್ತಿಗೆ ತಮಿಳು ಕಾರ್ಮಿಕರನ್ನು ಕರೆ ತಂದಿದ್ದ ಟಿಪ್ಪರ್‌ಗೆ ಬೆಂಕಿ ಹಚ್ಚಲಾಗಿದೆ. ಪಟ್ಟಣದಲ್ಲಿ ಜೀಪ್‌ ಒಂದರ ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಲಾಗಿದೆ. ತಮಿಳು ಕಾರ್ಮಿಕರ ಮೇಲೂ ಹಲ್ಲೆಗೆ ಮುಂದಾಗಿದ್ದ ಗುಂಪನ್ನು ತಡೆದಿರುವ ಪೊಲೀಸರು, ಅವರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಿದರು. ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ತಮಿಳುನಾಡು ನೋಂದಣಿ ಸಂಖ್ಯೆ ಹೊಂದಿದ್ದ  ಲಾರಿಯನ್ನು ದುಷ್ಕರ್ಮಿಗಳು ಜಖಂಗೊಳಿಸಿದ್ದಾರೆ. 

ಮೈಸೂರಿನಲ್ಲಿ ಪ್ರತಿಭಟನೆ ಹಿಂಸೆಗೆ ತಿರುಗಿದ್ದು ಉದ್ರಿಕ್ತ ಕನ್ನಡಪರ ಹೋರಾಟಗಾರರು ಎರಡು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ತಮಿಳು ಉದ್ಯಮಿಗಳ ಅಂಗಡಿ ಮುಂಗಟ್ಟುಗಳ ಮೇಲೂ ದಾಳಿ ನಡೆದಿದ್ದು, ಹೋರಾಟಗಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಇದರಿಂದ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಂಡಿಪಾಳ್ಯ ಸೇರಿ ಇತರೆಡೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಕೋಲಾರದಲ್ಲಿ ತಮಿಳುನಾಡಿನ ಕೆಲವು ಲಾರಿಗಳ ಮೇಲೆ  ಕಲ್ಲು ತೂರಾಟ ನಡೆಸಲಾಗಿದೆ, ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲೂ ಲಾರಿಗೆ ಜಖಂ ಮಾಡಲಾಗಿದೆ. ತುಮಕೂರಿನ ಸತ್ಯಮಂಗಲದಲ್ಲಿ ನಿಂತಿದ್ದ ಲಾರಿಗೆ ಬೆಂಕಿ ಹಚ್ಚಲಾಗಿದೆ.  ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿಗಳ ಮೇಲೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಅಲ್ಲಲ್ಲಿ ಕಲ್ಲು ತೂರಾಟ ನಡೆಸಿದರು. ಸುಮಾರು 20ಕ್ಕೂ ಹೆಚ್ಚು ಲಾರಿಗಳಿಗೆ ಹಾನಿಯಾಗಿವೆ.

ಟಿಎಂಬಿ ಬ್ಯಾಂಕಿಗೆ ನುಗ್ಗಿ ದಾಂದಲೆ: ಯಾದಗಿರಿಯಲ್ಲಿ  ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ತಮಿಳುನಾಡು ಮೂಲದ ಟಿಎಂಬಿ ಬ್ಯಾಂಕಿಗೆ ನುಗ್ಗಿ ಪೀಠೋಪಕರಣಗಳನ್ನು ಒಡೆದು ಹಾಕಿದರು.

ಉತ್ತರ ಕರ್ನಾಟಕದಲ್ಲೂ ಆಕ್ರೋಶ– ಹುಬ್ಬಳ್ಳಿ: ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯಕ್ಕೆ ಮತ್ತೆ ಹಿನ್ನಡೆ ಆಗಿರುವುದನ್ನು ಹಾಗೂ ತಮಿಳುನಾಡಿನಲ್ಲಿ ಕನ್ನಡಿಗರ ಮೇಲಿನ ದೌರ್ಜನ್ಯ ಖಂಡಿಸಿ, ಉತ್ತರ ಕರ್ನಾಟಕದ ವಿವಿಧೆಡೆ ಆಕ್ರೋಶ ವ್ಯಕ್ತವಾಗಿದೆ.
ಧಾರವಾಡ,  ಬೆಳಗಾವಿ, ವಿಜಯಪುರ ಮತ್ತು ಗದಗದಲ್ಲಿ ಪ್ರತಿಭಟನೆಗಳು ನಡೆದಿವೆ.

ಹುಬ್ಬಳ್ಳಿ ಹೊರವಲಯದ ಗಬ್ಬೂರು ಬೈಪಾಸ್‌ ಬಳಿ ಸೋಮವಾರ ಪ್ರತಿಭಟನೆ ನಡೆಸಿದ ಕನ್ನಡಪರ ಸಂಘಟನೆಯ ಕಾರ್ಯಕರ್ತರು, ತಮಿಳುನಾಡು ಮೂಲದ ಎರಡು ಲಾರಿಗಳ ಮೇಲೆ ಕಲ್ಲು ತೂರಿದರು.
*
ಗೋಲಿಬಾರ್‌ಗೆ ಕುಣಿಗಲ್‌ ವ್ಯಕ್ತಿ ಬಲಿ
ಕುಣಿಗಲ್‌:
ಬೆಂಗಳೂರಿನಲ್ಲಿ ಸೋಮವಾರ ಕಾವೇರಿ ಗಲಾಟೆಯಲ್ಲಿ ಗೋಲಿಬಾರ್‌ಗೆ ತುತ್ತಾದ ಉಮೇಶಗೌಡ (30) ಅವರು ತಾಲ್ಲೂಕಿನ ಸಿಂಗೋನಹಳ್ಳಿಯವರಾಗಿದ್ದಾರೆ.

ಕಡುಬಡತನ ಕುಟುಂಬದಲ್ಲಿಯೇ ಬೆಳೆದ ಉಮೇಶ್‌ಗೌಡ ಅವರು ಮನೆಯ ಬಡತನ ನೀಗಬೇಕು. ಉತ್ತಮ ಜೀವನ ನಡೆಸಬೇಕು ಎಂದು ಕನಸು ಹೊತ್ತು ಬೆಂಗಳೂರಿಗೆ ಹೋಗಿ ನೆಲೆ ಕಂಡುಕೊಂಡಿದ್ದರು. ಬೆಂಗಳೂರಿನ ಸುಂಕದಕಟ್ಟೆ ಹತ್ತಿರದ ಹೆಗ್ಗನಹಳ್ಳಿಯಲ್ಲಿ ವಾಸವಿದ್ದರು. ಪತ್ನಿ ಕಲಾವತಿ ಏಳು ತಿಂಗಳ ಗರ್ಭಿಣಿಯಾಗಿದ್ದು, ದಂಪತಿಗೆ  4 ವರ್ಷದ ಮಗಳಿದ್ದಾಳೆ.

ತಂದೆ ಸಿದ್ದಯ್ಯ, ತಾಯಿ ತೋಪಮ್ಮ ಗ್ರಾಮದಲ್ಲಿಯೇ ಇದ್ದಾರೆ. ಉಮೇಶಗೌಡ  ಅವರ ಸಹೋದರ ಹನುಮಂತು ಸಹ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದಾರೆ.  ಜೆ.ಪಿ ನಗರದ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಉಮೇಶಗೌಡ ಕನ್ನಡ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT