ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಸ್ ಸಂಪಾದಿಸಿದ ‘ಭಾಷಾಭೂಷಣ’

ಹಳತು ಹೊನ್ನು
Last Updated 17 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

‘ನಾಗವರ್ಮ ಕೃತ ಕರ್ಣಾಟಕ ಭಾಷಾಭೂಷಣ’ ಎನ್ನುವ ಈ ಕೃತಿಯನ್ನು ಬೆಂಜಮಿನ್ ಲೂಯಿಸ್ ರೈಸ್ 1884ರಲ್ಲಿ ಸಂಪಾದಿಸಿ ಪ್ರಕಟಿಸಿರುತ್ತಾರೆ. ಈ ಆವೃತ್ತಿಯು ಬೆಂಗಳೂರಿನ ಮೈಸೂರ್ ಗವರ್ನ್‌ಮೆಂಟ್ ಪ್ರೆಸ್ಸಿನಿಂದ ಮುದ್ರಣಗೊಂಡಿದೆ. 280 ಸೂತ್ರಗಳನ್ನುಳ್ಳ, 162 ಪುಟಗಳ ಡೆಮಿ ಆಕಾರದ ಈ ಕೃತಿಯ ಬೆಲೆಯನ್ನು ನಮೂದಿಸಲಾಗಿಲ್ಲ.

ಇದಕ್ಕೂ ಮೊದಲೇ 1880ರಲ್ಲಿಯೇ ಬ್ರಹ್ಮಶ್ರೀ ಸಿದ್ಧಾಂತಿ ಪುಸ್ತಕಂ ಅಳಸಿಂಗರಾಚಾರ್ಯ ತಿರುಮಲಾಚಾರ್ಯ ಅವರು ‘ಭಾಷಾಭೂಷಣ’ ಮೂಲಕೃತಿಯನ್ನು ಟೀಕೆಗಳೊಂದಿಗೆ ಮೈಸೂರಿನ ಜಗನ್ಮೋಹನ ಮುದ್ರಾಕ್ಷರ ಶಾಲೆಯಿಂದ ‘ನಾಗವರ್ಮನ ಕರ್ಣಾಟಕ ಭಾಷಾಭೂಷಣದ ಟೀಕೆ’ ಎನ್ನುವ ಹೆಸರಿನಲ್ಲಿ ಪ್ರಕಟಿಸಿದ್ದರು.

ಆದರೆ ಆ ಆವೃತ್ತಿಯು ಇಂದು ಲಭ್ಯವಿಲ್ಲ. ನಂತರ 1903ರಲ್ಲಿ ಮಹಾಮಹೋಪಾಧ್ಯಾಯ ಆರ್. ನರಸಿಂಹಾಚಾರ್ಯ ಅವರು ಬೆಂಗಳೂರಿನ ಮೈಸೂರ್ ಗವರ್ನಮೆಂಟ್ ಸೆಂಟ್ರಲ್ ಪ್ರೆಸ್ಸಿನಿಂದ ‘ನಾಗವರ್ಮ ಕವಿ ವಿರಚಿತ ಕಾವ್ಯಾವಲೋಕನಂ ಮತ್ತಂ ತತ್ಕವಿಕೃತ ಕರ್ಣಾಟಕ ಭಾಷಾಭೂಷಣಂ’ ಹೆಸರಿನಿಂದ ‘ಕರ್ಣಾಟಕ ಭಾಷಾಭೂಷಣ’ದ ಎರಡನೆಯ ಆವೃತ್ತಿಯನ್ನು ಪ್ರಕಟಿಸಿದರು.

1150ರಲ್ಲಿ ಸಂಸ್ಕೃತದಲ್ಲಿ ರಚಿಸಿದ ಪ್ರಸಕ್ತ ನಾಗವರ್ಮನ ‘ಕರ್ಣಾಟಕ ಭಾಷಾಭೂಷಣಂ’ ಮತ್ತು ಕನ್ನಡದಲ್ಲಿ ಬರೆದ ‘ಶಬ್ದಸ್ಮೃತಿ’, 1274ರ ಕೇಶಿರಾಜ ಕನ್ನಡದಲ್ಲಿ ರಚಿಸಿದ ‘ಶಬ್ದಮಣಿ ದರ್ಪಣಂ’, 1600ರ ಭಟ್ಟಾಕಳಂಕ ಸಂಸ್ಕೃತದಲ್ಲಿ ರಚಿಸಿದ ‘ಕರ್ಣಾಟಕ ಶಬ್ದಾನುಶಾಸನಂ’ – ಇವು ಪ್ರಮುಖವಾದ ಹಳಗನ್ನಡದ ವ್ಯಾಕರಣಗಳು.  

ಕನ್ನಡದಲ್ಲಿ ವ್ಯಾಕರಣ ಗ್ರಂಥಗಳಿಗೆ ಕೊರತೆಯೇನಿಲ್ಲ. 19ನೇಯ ಶತಮಾನ ಕನ್ನಡದಲ್ಲಿ ವ್ಯಾಕರಣ ರಚನೆಗಳ ಸುಗ್ಗಿಯ ಕಾಲ. 1150ರ ನಾಗವರ್ಮನಿಂದ ಇಲ್ಲಿಯವರೆಗೆ ನೂರಾರು ವ್ಯಾಕರಣ ಗ್ರಂಥಗಳು ಬಂದಿವೆ.

ಮುಖ್ಯವಾಗಿ 1810ರಿಂದ 1899ರವರೆಗೆ ಅನೇಕ ದೇಶೀಯ ವಿದ್ವಾಂಸರು ಮತ್ತು ಪಾಶ್ಚಾತ್ಯ ಪಂಡಿತರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಹತ್ವದ ವ್ಯಾಕರಣ ಗ್ರಂಥಗಳನ್ನು ರಚಿಸಿರುತ್ತಾರೆ. ಹ್ಯಾನ್ಸ್ ಜೇನ್ಸನ್ ಎಂಬ ಪಾಶ್ಚಾತ್ಯ ಪಂಡಿತನು ಸು. 1850ರಲ್ಲಿ ಜರ್ಮನ್ ಭಾಷೆಯಲ್ಲಿ ‘ಗ್ರಮಾಟಿಕ್ ಡೇರ್ ಕ್ಯಾನರಿ’ ಎಂಬ ಕನ್ನಡ ವ್ಯಾಕರಣಗ್ರಂಥವೊಂದನ್ನು ರಚಿಸಿದ್ದು ವಿಶೇಷ.

ರೆ. ಎಫ್. ಕಿಟೆಲ್ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ‘ಶಬ್ದಮಣಿ ದರ್ಪಣಂ’ನ ಸಂಪಾದನೆಯನ್ನೊಳಗೊಂಡು ನಾಲ್ಕು ವ್ಯಾಕರಣಗ್ರಂಥಗಳನ್ನು ರಚಿಸಿರುತ್ತಾರೆ.

1817ರಲ್ಲಿ ಬಂದ ವಿಲಿಯಂ ಕ್ಯಾರಿಯ ‘ಎ ಗ್ರಾಮರ್ ಆಫ್ ದಿ ಕರ್ನಾಟ ಲ್ಯಾಂಗ್ವೇಜ್’ (ಕನ್ನಡದ ಮೊತ್ತಮೊದಲ ಮುದ್ರಿತ ಪುಸ್ತಕ),  1820ರಲ್ಲಿ ಜಾನ್ ಮೆಕೆರಲ್‌ನು ರಚಿಸಿದ ‘ಎ ಗ್ರಾಮರ್ ಆಫ್ ದಿ ಕರ್ನಾಟಕ ಲ್ಯಾಂಗ್ವೇಜ್’, 1859ರಲ್ಲಿ ಜೀಗ್ಲರ್ ಹಾಗೂ ಡಿ. ಕೋಸ್ಟ ರಚಿಸಿದ ‘ಕಂನಡ ಶಾಲಾ ವ್ಯಾಕರಣ’,

1859ರಲ್ಲಿ ಥಾಮಸ್ ಹಾಡ್ಸನ್ ಬರೆದ ‘ಎನ್ ಎಲಿಮೆಂಟರಿ ಗ್ರಾಮರ್ ಆಫ್ ದಿ ಕ್ಯಾನರೀಸ್ ಲ್ಯಾಂಗ್ವೇಜ್’, 1859ರಲ್ಲಿಯೇ ಪ್ರಕಟವಾದ ಹೆರಾಲ್ಡ್ ಸ್ಪೆನ್ಸರನ ‘ಎ ಕ್ಯಾನರೀಸ್ ಗ್ರಾಮರ್ ವಿತ್ ಗ್ರಾಡುಯೇಟೆಡ್ ಎಕ್ಸರ್‌ಸೈಜಸ್’, 1872ರಲ್ಲಿ ಜೀಗ್ಲರ್ ಪ್ರಕಟಿಸಿದ ‘ಎ ಪ್ರ್ಯಾಕ್ಟಿಕಲ್ ಕೀ ಟು ಕ್ಯಾನರೀಜ್ ಲ್ಯಾಂಗ್ವೇಜ್’ ಹಾಗೂ 1908ರ ಕಿಟ್ಟೆಲ್ ವಿರಚಿತ ‘ಎ ಗ್ರಾಮರ್ ಆಫ್ ದಿ ಕ್ಯಾನರೀಸ್ ಲ್ಯಾಂಗ್ವೇಜ್’ – ಈ ಕೆಲವು ಕೃತಿಗಳು ಪಾಶ್ಚಿಮಾತ್ಯ ವಿದ್ವಾಂಸರು ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ ಕನ್ನಡ ವ್ಯಾಕರಣ ಕೃತಿಗಳು.

1841ರಲ್ಲಿ ಕೇಂಬಲ್ ಅಯ್ಯ (ಸಿ. ಕ್ಯ್ಯಾಂಪ್‌ಬೆಲ್) ರಚಿಸಿದ ‘ಕನ್ನಡ ವ್ಯಾಕರಣ ಸಾರವು’ ಕನ್ನಡದಲಿಯ್ಲೇ ಪಾಶ್ಚಾತ್ಯನೊಬ್ಬ ರಚಿಸಿದ ಕನ್ನಡ ವ್ಯಾಕರಣ. ಹಾಗೆಯೇ 1838ರ ಶ್ರೀರಂಗಪಟ್ಟಣದ ಕೃಷ್ಣಮಾಚಾರ್ಯರ ‘ಹೊಸಗನ್ನಡ ನುಡಿಗನ್ನಡಿ’, ಚ. ರಾಮಸ್ವಾಮಿ ಶಾಸ್ತ್ರಿಗಳು 1854ರಲ್ಲಿ ರಚಿಸಿದ ‘ವಾಗ್ವಿಧಾಯಿನಿ’, 1869ರ ದಕ್ಷಿಣಾಮೂರ್ತಿ ಶಾಸ್ತ್ರಿಗಳ ‘ಶಬ್ದಭಾಸ್ಕರ’ ಹಾಗೂ 1894ರಲ್ಲಿ ಪ್ರಕಟಗೊಂಡ ರಾ. ರಘುನಾಥರಾಯರ ‘ಕರ್ಣಾಟಕ ಭಾಷಾ ವ್ಯಾಕರಣೋಪನ್ಯಾಸ ಮನ್ಜರಿ’ ಮತ್ತು ಎಂ.ಬಿ. ಶ್ರೀನಿವಾಸ ಅಯ್ಯಂಗಾರ್ಯರ ‘ವಾಚಕ ಬೋಧಿನಿ’, 1897ರಲ್ಲಿ ವೈಯಾಕರಣಿ ಗರಣಿ ಕೃಷ್ಣಾಚಾರ್ಯರು ರಚಿಸಿದ ‘ಕರ್ಣಾಟಕ ವ್ಯಾಕರಣಂ’ – ಇವು ಕೆಲವು ಕೃತಿಗಳು ದೇಶೀಯ ವಿದ್ವಾಂಸರಿಂದ ಕನ್ನಡದಲ್ಲಿಯೇ ರಚನೆಗೊಂಡ ಕನ್ನಡ ವ್ಯಾಕರಣ ಗ್ರಂಥಗಳು.

1837ರ ಜುಲೈ 17ರಂದು ಬೆಂಗಳೂರಿನಲ್ಲಿ ಜನಿಸಿದ ರೈಸ್, ಇಂಗ್ಲೆಂಡ್‌ನಲ್ಲಿ ವಿದ್ಯಾಭ್ಯಾಸ ಮಾಡಿ 1860ರಲ್ಲಿ ಪುನಃ ಬೆಂಗಳೂರಿಗೆ ಬಂದು ಸೆಂಟ್ರಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯನಾಗಿದ್ದರು.

ಕನ್ನಡ ನಾಡಿನ ಶಾಸನಗಳನ್ನೆಲ್ಲಾ ಪರಿವೀಕ್ಷಿಸಿ 1886ರಲ್ಲಿ ಹನ್ನೊಂದು ಸಂಪುಟಗಳಲ್ಲಿ ‘ಎಪಿಗ್ರಾಫಿಕಾ ಕರ್ನಾಟಿಕಾ’ ಹೆಸರಿನಲ್ಲಿ ಕನ್ನಡ ಶಾಸನಗಳನ್ನು ಪ್ರಕಟಿಸಿದ್ದು ರೈಸ್‌ರ ವೈಶಿಷ್ಟ್ಯ. 1906ರಲ್ಲಿ ಸ್ವದೇಶಕ್ಕೆ ಹಿಂದಿರುಗಿದ ರೈಸ್ ಜುಲೈ 19, 1937ರಂದು ಮರಣ ಹೊಂದಿದರು. 

ರೈಸ್‌ರ ಮರಣಕ್ಕೆ ಮೊದಲು ಅವರನ್ನು ಇಂಗ್ಲೆಂಡಿನಲ್ಲಿ ಸೋಸಲೆ ಗರಳಪುರಿ ಶಾಸ್ತ್ರಿಗಳು ಸಂಧಿಸಿದಾಗ ರೈಸ್‌ರವರು ಶಾಸ್ತ್ರಿಗಳೊಂದಿಗೆ ‘ಆಹಾ! ಕನ್ನಡ ಎಷ್ಟು ಚೆಂದ! ಎಷ್ಟು ಮಧುರ! ಕನ್ನಡದಲ್ಲಿಯೇ ಮಾತನಾಡುವಾ’ ಎಂದು ಹೇಳಿದ ಪ್ರಸಂಗವನ್ನು ಶ್ರೀನಿವಾಸ ಹಾವನೂರರು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ರೈಸ್‌ರ ಸೂಚನೆಯ ಮೇರೆಗೆ ಕನ್ನಡ ನಾಡಿನಾದ್ಯಂತ ಅನೇಕ ಶಾಲೆಗಳು ಆರಂಭಗೊಂಡು ಸ್ಥಳೀಯ ಕನ್ನಡಿಗರ ಸಾಕ್ಷರತೆ ಹೆಚ್ಚತು.

ನಾಗವರ್ಮನ ‘ಕರ್ಣಾಟಕ ಭಾಷಾಭೂಷಣ’ವು  ಹೆಸರೇ ಹೇಳುವಂತೆ ಕನ್ನಡ ವ್ಯಾಕರಣವನ್ನು ಸಂಸ್ಕೃತ ಭಾಷೆಯಲ್ಲಿ ನಿರೂಪಿಸಿರುವ ಗ್ರಂಥ. ಕನ್ನಡದ ಮೊತ್ತಮೊದಲನೆಯ ವೈಯಾಕರಣಿ ಈ ನಾಗವರ್ಮ. ಇವನ ಹೆಗ್ಗಳಿಕೆಯೆಂದರೆ ಕನ್ನಡ ವ್ಯಾಕರಣದ ಸ್ವರೂಪವನ್ನು ಈ ಕೃತಿಯ ಮೂಲಕ ಅಖಿಲ ಭಾರತೀಯ ಎಲ್ಲ ಭಾಷೆಗಳ ವಾಚಕರಿಗೆ ತಲುಪಿಸಿದ್ದೇ ಆಗಿದೆ.

ಇದೇ ರೀತಿಯಲ್ಲಿ ಕನ್ನಡದ ಇನ್ನೊಬ್ಬ ವೈಯಾಕರಣಿ ಭಟ್ಟಾಕಳಂಕ ಸಹ 1600ರಲ್ಲಿ ‘ಕರ್ಣಾಟಕ ಶಬ್ದಾನುಶಾಸನಂ’ ಎನ್ನುವ ಕನ್ನಡ ವ್ಯಾರಣವನ್ನು ಸಂಸ್ಕೃತ ಭಾಷೆಯಲ್ಲಿ ರಚಿಸಿದ್ದನು.

ಸಂಸ್ಕೃತ ಭಾಷೆಯಲ್ಲಿ ರಚನೆಗೊಂಡ ಈ ‘ಕರ್ಣಾಟಕ ಭಾಷಾಭೂಷಣ’ ಕೃತಿಯಲ್ಲಿ ನಾಗವರ್ಮನ ಸೂತ್ರ, ವೃತ್ತಿ, ಪ್ರಯೋಗಗಳನ್ನು ರೈಸ್ ನೀಡುತ್ತಾರೆ. ಇದರ ಜೊತೆಗೆ ಇಂಗ್ಲಿಷ್ ಲಿಪಿಯಲ್ಲಿ ಸಂಸ್ಕೃತದ ಸೂತ್ರ ವೃತ್ತಿಗಳು ಹಾಗೂ ಕನ್ನಡ ಭಾಷೆಯಲ್ಲಿ ಸರಳವಾಗಿ ಅವುಗಳ ತಾತ್ಪರ್ಯವನ್ನು ನೀಡಿರುವುದು ಉಪಯುಕ್ತವಾಗಿದೆ.

ನಾಗವರ್ಮನು ತನ್ನ ‘ಶಬ್ದಸ್ಮೃತಿ’ಯಲ್ಲಿ ಕನ್ನಡದಲ್ಲಿ ವ್ಯಾಕರಣದ ಸೂತ್ರಗಳನ್ನು ಸಂಗ್ರಹವಾಗಿ ಹೇಳಿದ್ದರೆ, ಇಲ್ಲಿ ವಿಸ್ತಾರವಾಗಿ ಹೇಳಿದ್ದಾನೆ. ನಮ್ಮ ಸ್ಥಳೀಯ ಹಾಗೂ ವಿದೇಶೀ ವಿದ್ವಾಂಸರ ಗಮನ ಸೆಳೆಯುವಂತೆ ‘ಭಾಷಾಭೂಷಣ’ದ ಮೂರು ಜೈನ ಪ್ರತಿಗಳ ನೆರವಿನಿಂದ ಈ ಕೃತಿಯನ್ನು ಸಂಪಾದಿಸಿರುತ್ತಾರೆ.

ಕೃತಿಯ ಪ್ರಸ್ತಾವನೆಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ನಾಗವರ್ಮ ಮತ್ತು ಅವನ ಕೃತಿಗಳು, ಕನ್ನಡ ಭಾಷೆ, ಕನ್ನಡ ಲಿಪಿಯ ಕಾಲಕ್ರಮೇಣದ ವಿಕಾಸದ ಕೋಷ್ಟಕ, ಕನ್ನಡ ಸಾಹಿತ್ಯದ ಪರಂಪರೆಗಳನ್ನು ಕುರಿತ ಒಂದು ಹಕ್ಕಿನೋಟವನ್ನು ರೈಸ್ ನೀಡಿರುತ್ತಾರೆ. ಜೊತೆಗೆ, 154 ಪ್ರಾಚೀನ ಕನ್ನಡ ಕವಿಗಳ ಪಟ್ಟಿಯನ್ನೂ 334 ಹಳಗನ್ನಡ ಕೃತಿಗಳ ಪಟ್ಟಿಯನ್ನೂ ಕೊಟ್ಟಿದ್ದಾರೆ.

ಭಾಷಾಭೂಷಣದ ಪಠ್ಯ, ಕೊನೆಯ ಅನುಬಂಧದಲ್ಲಿ ಭೂಷಣದ ವಿವಿಧ ತಾಳೆಗರಿಯ ಪಾಠಗಳು ಹಾಗೂ ಶಬ್ದಸೂಚಿಗಳನ್ನು ನೀಡಿರುವುದು ಸಂಶೋಧಕರಿಗೆ ತುಂಬಾ ಉಪಯುಕ್ತವಾಗಿದೆ. ಪ್ರತಿಯೊಂದು ಪುಟದಲ್ಲಿ ಮೇಲಿನ ಅರ್ಧ ಭಾಗದಲ್ಲಿ ನಾಗವರ್ಮನ ಸಂಸ್ಕೃತದ ಸೂತ್ರ, ವೃತ್ತಿಗಳನ್ನು ಇಂಗ್ಲಿಷ್ ಲಿಪಿಯಲ್ಲಿ ನಮೂದಿಸಿ ಪುಟದ ಕೆಳಗಿನ ಅರ್ಧಭಾಗದಲ್ಲಿ ಅವುಗಳನ್ನು ಕನ್ನಡ ಲಿಪಿಯಲ್ಲಿ ನೀಡಿರುವುದಲ್ಲದೆ ಕನ್ನಡದಲ್ಲಿ ಸೂತ್ರಗಳ ತಾತ್ಪರ್ಯವನ್ನು ಬರೆದಿರುತ್ತಾರೆ.

ನಾಗವರ್ಮನು ಕೇಶಿರಾಜನಿಗಿಂತ ಹೆಚ್ಚು ವೈಜ್ಞಾನಿಕವಾಗಿ ವ್ಯಾಕರಣವನ್ನು ರಚಿಸಿರುತ್ತಾನೆ. ನಿದರ್ಶನಕ್ಕಾಗಿ ಕನ್ನಡದಲ್ಲಿ ಮಹಾಪ್ರಾಣಗಳನ್ನು ಕುರಿತ ಅವರಿಬ್ಬರ ವಿಚಾರಗಳನ್ನು ಗಮನಿಸಬಹುದು. ನಾಗವರ್ಮನ ವಿಚಾರವು ಇಂತಿದೆ:

ಸೂತ್ರ: ನಾತ್ರ ಪ್ರಾಯೇಣ ವರ್ಗಾಣಾಂ ದ್ವಿತೀಯ ಚತುರ್ಥಾಃ
(ರೈಸ್ ನೀಡಿರುವ) ತಾತ್ಪರ್ಯ: ಈ ಕರ್ಣಾಟಕ ಭಾಷೆಯಲ್ಲಿ ವರ್ಗಗಳ ಎರಡನೆಯ ನಾಲ್ಕನೆಯ ವರ್ಣಗಳಾದ ಖಘಛಝಠಢಥಧಫಭ ಎಂಬೀ ವರ್ಣಗಳು ಇಲ್ಲ. ಅದೇ ಸೂತ್ರದಲ್ಲಿ ‘ಪ್ರಾಯೇಣ’ ಎಂಬ ಪದವಿರುವುದರಿಂದ ಸಂಖ್ಯೆ ಅನುಕರಣ ಮುಂತಾದುವುಗಳಲ್ಲಿ ಕಾಣಲ್ಪಡುವುವು. ಮುಂತಾದುವುಗಳಲ್ಲಿ ಯಂದದ್ದರಿಂದ ಇನ್ನೂ ಕೆಲವು ಪದಗಳಲ್ಲಿ ಬರುವುವು.

ಇಲ್ಲಿ ನಾಗವರ್ಮ ಸ್ಪಷ್ಟವಾಗಿ ಕನ್ನಡದಲ್ಲಿ ಮಹಾಪ್ರಾಣಗಳಿಲ್ಲವೆಂಬ ಅಂಶವನ್ನು ಗಮನಿಸಿದ್ದಾನೆ. ಆದರೆ ಕೇಶಿರಾಜನ ‘ಶಬ್ದಮಣಿದರ್ಪಣ’ದಲ್ಲಿ ಮಹಾಪ್ರಾಣಗಳಿಗೆ ಸಂಬಂಧಿಸಿದ ಸೂತ್ರ  ನಾಗವರ್ಮನಿಗೆ ಉತ್ತರ ನೀಡಿದಂತಿದೆ:

ಒಳವು ಮಹಾಪ್ರಾಣಂಗಳ್      
ವಿಳಸತ್ಕರ್ಣಾಟ ಭಾಷೆಯೊಳ್ ಕೆಲವು ನಿಜೋ               
ಜ್ವಳಮಾಗಿ ವರ್ಗದಂತ್ಯಂ                                                                                              
ಗಳನರಿಯನುನಾಸಿಕಾಖ್ಯೆಯಂ ತಳೆದಿರ್ಕುಂ


‘ಮಹಾಪ್ರಾಣಗಳು ಕನ್ನಡದಲ್ಲಿ ಇವೆ’ ಎಂದು ಕೇಶಿರಾಜ ಇಲ್ಲಿ ಹೇಳಿರುತ್ತಾನೆ. ಕುತೂಹಲದ ಸಂಗತಿಯೆಂದರೆ ನಾಗವರ್ಮನು ತನ್ನ ಸೂತ್ರವನ್ನು ನ=ಇಲ್ಲ ಎಂದು ಆರಂಭಿಸಿದ್ದರೆ, ಕೇಶಿರಾಜನು ತನ್ನ ಸೂತ್ರವನ್ನು ಒಳವು=ಇದೆ ಎಂದು ಆರಂಭಿಸಿರುವುದು.

ನಾಗವರ್ಮನು ತನ್ನ ಕೃತಿಗಳಲ್ಲಿ ನೀಡಿರುವ ಅನೇಕ ಪ್ರಯೋಗಗಳನ್ನು ಕೇಶಿರಾಜ ಅನಾಮತ್ತಾಗಿ ತನ್ನ ಸೂತ್ರಗಳಿಗೆ ಪ್ರಯೋಗಗಳಾಗಿ ಬಳಸಿಕೊಂಡಿರುವುದು ಕೂಡ ಕನ್ನಡದಲ್ಲಿ ನಾಗವರ್ಮನ ಪ್ರಭಾವವನ್ನು ಸೂಚಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT