7

ಬೌದ್ಧರ ಸಿರಿ ‘ತವಾಂಗ್’

Published:
Updated:
ಬೌದ್ಧರ ಸಿರಿ ‘ತವಾಂಗ್’

ಮಾಲಯ ಪರ್ವತಗಳ ನಡುವೆ, ಚೀನಾ ಗಡಿಯಲ್ಲಿರುವ ತವಾಂಗ್ ಪುರಾತನ ಮತ್ತು ವಿಶೇಷ ಬೌದ್ಧಾಶ್ರಮಗಳ ಸುಂದರ ನಗರ. ಕಳೆದ 68 ವರ್ಷಗಳಿಂದಲೂ ಚೀನಾ, ತನಗೆ ಸೇರಿದ್ದೆಂದು ಹೇಳಿಕೊಳ್ಳುತ್ತಲೇ ಬರುತ್ತಿರುವ ತವಾಂಗ್ ಪಟ್ಟಣವನ್ನು ನೋಡುವ ಹಂಬಲ ನನ್ನನ್ನು ಬಹಳ ದಿನಗಳಿಂದ ಕಾಡುತ್ತಲೇ ಇತ್ತು.ಗೌಹಾಟಿಯಿಂದ ತವಾಂಗ್‌ಗೆ ಹೆಲಿಕಾಪ್ಟರ್‌ ಸಂಚಾರದ ಸೌಕರ್ಯವಿದೆ. ಆದರೆ, ಜೀಪಿನಲ್ಲಿ ಹಿಮಾಲಯ ಪರ್ವತಗಳ ಮೇಲೆಯೇ ಪಯಣಿಸಬೇಕು ಎನ್ನುವುದು ನನ್ನ ಇರಾದೆಯಾಗಿತ್ತು.ಒಂದು ಹಳೆಯ ಫಿಝ್ಝೊ ಇಂಜಿನ್ ಜೀಪಿನಲ್ಲಿ ನಾನು ಹಾಗೂ ನನ್ನ ಮಿತ್ರ ರೆಡ್ಡಿಯ ಪಯಣ ಶುರುವಾಯಿತು. ತವಾಂಗ್ ರಸ್ತೆ ಓಡಾಡಲು ತೆರೆಯುವುದೇ ವರ್ಷಕ್ಕೆ ಮೂರ್ನಾಲ್ಕು ತಿಂಗಳು ಮಾತ್ರ.

ಉಳಿದ ಎಲ್ಲಾ ತಿಂಗಳೂ ಮಳೆ ಮತ್ತು ಹಿಮ ಬೀಳುವುದರೊಂದಿಗೆ ರಸ್ತೆಗಳ ಮೇಲೆ ಕಲ್ಲು–ಮಣ್ಣು ನಿರಂತರವಾಗಿ ಕುಸಿಯುತ್ತಲೇ ಇರುತ್ತದೆ. ಕಾರಣ ಹಿಮಾಲಯದ ಎಲ್ಲ ರಸ್ತೆಗಳನ್ನು ಯೋಧರು ಯಾವಾಗಲೂ ದುರಸ್ತಿ ಮಾಡುತ್ತಲೇ ಇರುತ್ತಾರೆ.  ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಿಂದ 650 ಕಿ.ಮೀ. ರಸ್ತೆಯನ್ನು ಹಿಮಾಲಯದ ಪರಿಸರದಲ್ಲಿ ಎರಡು ದಿನಗಳ ಕಾಲ ಪ್ರಯಾಣ ಮಾಡಿ ಕತ್ತಲಲ್ಲಿ ತವಾಂಗ್ ತಲುಪಿದೆವು. ಬೆಳಗಿನ ಜಾವ, ಮದ್ದಳೆಗಳ ಸದ್ದು ಮಧುರವಾಗಿ ಕೇಳಿಸತೊಡಗಿತು.

ಕನಸೋ ನನಸೋ ಸ್ವಲ್ಪ ಹೊತ್ತು ಗೊತ್ತಾಗಲಿಲ್ಲ, ಆದರೆ ಕಿವಿಗಳಿಗೆ ಮಧುರವಾಗಿ ಮತ್ತು ಹಿತವಾಗಿ ಮದ್ದಳೆ ನಾದ ಕೇಳಿಸುತ್ತಿತ್ತು. ಕಣ್ಣು ಬಿಚ್ಚಿ ಕಿಟಿಕಿಗಳ ಕಡೆಗೆ ನೋಡಿದಾಗ ನಸುಕಿನ ಬೆಳಕು ಮೂಡುತ್ತಿತ್ತು.ಅರುಣನ ಕಿರಣಗಳು ಭಾರತದ ನೆಲದಲ್ಲಿ ಮೊದಲಿಗೆ ಬೀಳುವುದು ಅರುಣಾಚಲ ಪ್ರದೇಶದ ಮೇಲೆ. ಮದ್ದಳೆಗಳ ಸದ್ದು ಸುತ್ತಲ ತಪ್ಪಲುಗಳಿಗೆ ಬಡಿದು ಇನ್ನಷ್ಟು ಜೋರಾಗಿ ಪ್ರತಿಧ್ವನಿಸತೊಡಗಿತು.ತವಾಂಗ್‌ನಲ್ಲಿ ಅಡ್ಡಾಡಲು ಹೊರಟ ನಾವು ಮೊದಲು ಬೌದ್ಧಾಶ್ರಮ ತಲುಪಿದೆವು. ಕೆಳಗೆ ಇಳಿಜಾರಿನಲ್ಲಿ ತವಾಂಗ್ ಪಟ್ಟಣ ನಾಲ್ಕಾರು ಕಣಿವೆಗಳ ಮೇಲೆಲ್ಲ ಹರಡಿಕೊಂಡಿತ್ತು. ಆಶ್ರಮದ ಹಿಂದೆ ವಿಶಾಲ ಪರ್ವತ ಶ್ರೇಣಿಗಳು.

ತವಾಂಗ್ ಪಟ್ಟಣದ ಹಿಂದೆಯೂ ಎತ್ತರವಾದ ಪರ್ವತ ಶ್ರೇಣಿಗಳು, ಮಧ್ಯದ ಪ್ರದೇಶ ಹತ್ತಾರು ತಪ್ಪಲುಗಳಿಂದ ವಿಶಾಲ ಬೋಗುಣಿಯಂತೆ ರೂಪುಗೊಂಡಿತ್ತು. ಬೌದ್ಧಾಶ್ರಮದ ಒಂದು ಕಡೆ ಪ್ರಪಾತ ಕಾಣಿಸುತ್ತಿತ್ತು.

ಕೆಳಕ್ಕೆ ಇಣುಕಿ ನೋಡಿದಾಗ ವಿಶಾಲ ಕಮರಿ ಕಾಣಿಸುತ್ತಿತ್ತು. ತವಾಂಗ್ ಪಟ್ಟಣದ ಸುತ್ತಲಿನ ಪ್ರದೇಶ ವಿಶಾಲವಾದ ಕಮಲದಂತೆ ಅಥವಾ ಒಂದು ಹಸ್ತದಂತೆ ವಿಹಂಗಮವಾಗಿ ಕಾಣಿಸುತ್ತಿತ್ತು.ಜೊತೆಗೆ ಸುತ್ತಲೂ ಎತ್ತರದ ಪರ್ವತ ಶ್ರೇಣಿಗಳು ಹಿಮಚ್ಛಾಧಿತವಾಗಿ ಅದೊಂದು ರಮಣೀಯ ನೋಟವಾಗಿತ್ತು. ಸುತ್ತಲೂ ಎಲ್ಲೆಲ್ಲೂ ಕಣ್ಣಿನ ದೃಷ್ಟಿ ಹಾಯುವವರೆಗೂ ಗಿರಿ ಶಿಖರಗಳು, ಹಸಿರು ಮತ್ತು ಬಿಳಿ ಮೋಡಗಳು.   

   

ಇದೆಲ್ಲವನ್ನು ಎಷ್ಟೋ ವರ್ಷಗಳ ಹಿಂದೆ ನೋಡಿದ್ದ, ಬುಡಕಟ್ಟು ಪ್ರದೇಶಗಳ ಕಥೆಗಾರ ಡಾ. ವೆರಿಯರ್ ಎಲ್ವಿನ್ ‘ನೇಫಾದಲ್ಲಿ (ನಾರ್ಥ ಈಸ್ಟರ್ನ್ ಫ್ರಾಂಟಿಯರ್) ಸ್ವರ್ಗವೆಂದರೆ ತವಾಂಗ್... ತವಾಂಗ್... ತವಾಂಗ್...’ ಎಂದು ಉದ್ಗರಿಸಿದ್ದರು.ಕಾರಣ ಅದರ ನೈಸರ್ಗಿಕ ಸ್ವಚ್ಛತೆ. ಇದನ್ನು The hidden paradise of last Shangri-La ಎಂದೂ ಕರೆಯುತ್ತಾರೆ. ಹಿಮಾಲಯದ ಮಡಿಲಲ್ಲಿರುವ ಈ ತವಾಂಗ್ ಪಟ್ಟಣ ಮತ್ತು ಸುತ್ತಮುತ್ತಲ ಪುರಾತನ ದೇವಾಲಯಗಳು, ಸ್ಥೂಪಗಳು, ಬೌದ್ಧ ಧರ್ಮದ ಪ್ರಾರ್ಥನೆಯ ಸಂದೇಶಗಳನ್ನುಳ್ಳ ಬಣ್ಣಬಣ್ಣದ ಬಾವುಟಗಳು, ನದಿ ಸರೋವರಗಳು, ಹಿಮಚ್ಛಾಧಿತ ಪರ್ವತ ಮಾಲೆಗಳು ನೋಡುಗರ ಮನಸೂರೆಗೊಳ್ಳುವಂತಿವೆ.ತವಾಂಗ್ ಸುತ್ತಮುತ್ತಲ ಪರ್ವತ ತಪ್ಪಲುಗಳು ಬೇಸಿಗೆ ಕಾಲದಲ್ಲಿ ಬಣ್ಣ ಬಣ್ಣದ ಸಣ್ಣಸಣ್ಣ ಹೂಗಳ (Rhododendron flowers) ಹೊದಿಕೆಯಿಂದ ಕಂಗೊಳಿಸುತ್ತವೆ. ಏಳನೇ ಶತಮಾನದಲ್ಲಿ ಪನಾ ಮಂಡೆಗಂಗ್ ಪ್ರದೇಶದಲ್ಲಿ ಕಾಲಾವಾಗ್ಪೂ ಎಂಬ ರಾಜನು ಆಳುತ್ತಿದ್ದನೆಂದು ‘ಕೊಂಡೊ ಡ್ರೊವಾ ಸಂಗ್ಮೊನ’ ಆತ್ಮಚರಿತ್ರೆಯಲ್ಲಿ ದಾಖಲಾಗಿದೆ.

ತವಾಂಗ್ ಆಶ್ರಮ ಇರುವ ಗುಡ್ಡದ ಎದುರಿಗಿರುವ ತಪ್ಪಲಿನಲ್ಲಿ ದಮ್ಸೆ ಲೊಡೆ ಎಂಬ ಋಷಿ ತನ್ನ ಪತ್ನಿ ದಮ್ಸೆ ಜೆಮೆಳ ಜೊತೆಗೆ ಇದ್ದನೆಂದು ಹೇಳಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಪ್ರದೇಶ ತವಾಂಗ್ ಎಂದು ಖ್ಯಾತಿ ಪಡೆಯಿತು.ತವಾಂಗ್ ಅಥವಾ ಗೋಂಫ ವಿಶ್ವದಲ್ಲಿ ಬೌದ್ಧರ ಅತಿ ಮುಖ್ಯವಾದ ಹಾಗೂ ಪ್ರಖ್ಯಾತ ಯಾತ್ರಾಸ್ಥಳ. ಇದನ್ನು ‘ಗೋಲ್ಡನ್ ನಾಮ್ಗಿಲ್ ಲಾಟ್ಸೆ’ ಎಂದೂ ಕರೆಯುತ್ತಾರೆ. 400 ವರ್ಷಗಳ ಈ ಪುರಾತನ ಆಶ್ರಮ 17 ಗೋಂಫಾಗಳನ್ನು ನಡೆಸುತ್ತದೆ.ತವಾಂಗ್‌ನ ‘ಗೋಲ್ಡನ್ ಲಾಟ್ಸೆ’ ಎಂಬ ಈ ಉಜ್ವಲಭವನ ಬೌದ್ಧ ಚರಿತ್ರೆ, ಸಂಸ್ಕೃತಿ ಮತ್ತು ಧರ್ಮವನ್ನು ಸಂಕೇತಿಸುತ್ತದೆ. ಈ ಆಶ್ರಮವನ್ನು ಮೆರೆ ಲಾಮಾ ಎನ್ನುವ ವ್ಯಕ್ತಿ 17ನೇ ಶತಮಾನದಲ್ಲಿ ನಿರ್ಮಿಸಿದನು.

ಮಹಾಯಾನ ಪಂಥಕ್ಕೆ ಸೇರಿದ ಈ ಬೌದ್ಧಾಶ್ರಮ ಗೆಲ್ಲೂಪ ಗುಂಪಿಗೆ ಸೇರಿದ ಜನರ ಆಧ್ಯಾತ್ಮಿಕ ಕೇಂದ್ರ. ಬೌದ್ಧ ವಾರ್ಷಿಕದ 11ನೇ ತಿಂಗಳಲ್ಲಿ (ಡಿಸೆಂಬರ್–ಜನವರಿ) ‘ಟೊಂಗ್ವೆ’ ಹೆಸರಿನ ಜಾತ್ರೆ ನಡೆಯುತ್ತದೆ. ಇಲ್ಲಿ ಬೌದ್ಧ ಗ್ರಂಥಾಲಯ, ಶಾಲೆ, ವಿಶಾಲ ಪ್ರಾರ್ಥನೆ ಸಭಾಂಗಣ, ಸಂಗ್ರಹಾಲಯ ಇದೆ.ತವಾಂಗ್‌ನಲ್ಲಿರುವ ಬೌದ್ಧಭವನ ಟೆಬೆಟ್‌ನಲ್ಲಿನ ಬೌದ್ಧಭವನವನ್ನು ಹೋಲುತ್ತದೆ. 140 ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಮೂರು ಅಂತಸ್ತುಗಳ ಈ ಭವನದಲ್ಲಿ 600 ಸನ್ಯಾಸಿಗಳಿಗೆ ತಂಗಲು ವ್ಯವಸ್ಥೆ ಇದೆ. ಸನ್ಯಾಸಿನಿಯರು ಕೂಡ ತಂಗುವ ವ್ಯವಸ್ಥೆ ಇದೆ.ಬೌದ್ಧಾಶ್ರಮದ ಮಧ್ಯದಲ್ಲಿರುವ ಸಣ್ಣ ಬಾಗಿಲಿನ ಮೂಲಕ ಪ್ರಾರ್ಥನೆ ಸಲ್ಲಿಸುವ ಸಭಾಂಗಣದ ಒಳಗೆ ನಾವು ಹೋದೆವು. ಆ ವಿಶಾಲ ಮತ್ತು ಎತ್ತರವಾದ ಸಭಾಂಗಣದಲ್ಲಿ ದೀಪಗಳು ಸಾಲಾಗಿ ಉರಿಯುತ್ತಿದ್ದವು.

ಅಲ್ಲಿನ ಗೋಡೆಗಳ ತುಂಬೆಲ್ಲ ಬೌದ್ಧಧರ್ಮವನ್ನು ಪ್ರತಿಬಿಂಬಿಸುವ ಚಿತ್ರಗಳು. ಇಡೀ ಸಭಾಂಗಣ ಹೆಚ್ಚಾಗಿ ಕೆಂಪು ಮತ್ತು ಹಳದೀ ಬಣ್ಣದ ಜೊತೆಗೆ ಚಿತ್ರವಿಚಿತ್ರ ಬಣ್ಣಗಳಿಂದ ಕೂಡಿದೆ. ಎದುರಿಗೆ 50 ಅಡಿಗಳಷ್ಟು ಎತ್ತರವಾದ ಸೌಮ್ಯ ಬುದ್ಧಮೂರ್ತಿ ಕುಳಿತಿದ್ದಾನೆ. ಸ್ವಲ್ಪ ಹೊತ್ತು ಪ್ರಾರ್ಥನೆ ಮಾಡಿ, ಬುದ್ಧನನ್ನು ಕಣ್ಣುಗಳ ತುಂಬಾ ತುಂಬಿಕೊಂಡು ಹೊರಗೆ ಬಂದೆವು.     ಈ ಆಶ್ರಮ ಪ್ರಪಂಚದಲ್ಲಿಯೇ ಒಂದು ಅದ್ಭುತವಾದ ಹಾಗೂ ಚೆಲುವಾದ ಬೌದ್ಧ ಆಶ್ರಮವಾಗಿದ್ದು, ವಿಶ್ವದ ವಿವಿಧ ಭಾಗಗಳಿಂದ ಭಕ್ತರು–ಬುದ್ಧಿ ಜೀವಿಗಳು ಬಂದು ವೀಕ್ಷಿಸಿ ಹೋಗುತ್ತಾರೆ. ಈ ಪ್ರದೇಶದ ಸುತ್ತಮುತ್ತಲ ಹಳ್ಳಿಗಳ ಯುವಕ–ಯುವತಿಯರಿಗೆ ಇಲ್ಲಿ ಬೌದ್ಧರ ಚರಿತ್ರೆ, ಸಂಸ್ಕೃತಿ ಮತ್ತು ಬದುಕನ್ನು ಕಲಿಸುತ್ತಾರೆ.

ಇಲ್ಲಿನ ಮೊನ್ಫಾಗಳು ಟಿಬೆಟ್‌ನ ಮಯಾಯಾನ ಬೌದ್ಧಪಂಥವನ್ನು ಅಪ್ಪಿಕೊಂಡಿದ್ದು, ಮೂಲದಲ್ಲಿ ಅದು ಜೆನ್ ಪಂಥಕ್ಕೆ ಸೇರಿದುದಾಗಿದೆ. ಜೆನ್ ಟಿಬೆಟ್‌ನ ಮೂಲ ನಿವಾಸಿಗಳ ಧರ್ಮವಾಗಿದ್ದು, ಆ ಧರ್ಮ ನಿಸರ್ಗದ ಹಲವು ದೇವತೆಗಳ ಸಂಗಮವಾಗಿದೆ.ಅನಂತರ ನಿಧಾನವಾಗಿ ಈ ಪ್ರದೇಶವೆಲ್ಲ ಬೌದ್ಧಧರ್ಮ ಆವರಿಸಿಕೊಂಡಿತು. ಪ್ರಾಣಿ ಬಲಿ ಕೆಲವು ಕಡೆ ಈಗಲೂ ವಿರಳವಾಗಿ ನಡೆಯುತ್ತದೆ. ಬೌದ್ಧಧರ್ಮ ಮೂಲವಾಗಿ ಭಾರತದಲ್ಲಿ ಹುಟ್ಟಿದರೂ ಅದು ಭಾರತದಿಂದ ಚೀನಾ ತಲುಪಿ ಅಲ್ಲಿಂದ ಟಿಬೆಟ್ ಮೂಲಕ ಮತ್ತೆ ಅರುಣಾಚಲ ಪ್ರದೇಶ ತಲುಪಿದೆ ಎಂದು ಹೇಳಲಾಗುತ್ತದೆ.*

ಮೊನ್ಫಾಗಳ ನಾಡು ತವಾಂಗ್


ಭಾರತದ ಈಶಾನ್ಯ ಭಾಗದ ಕೊನೆ ರಾಜ್ಯ ಅರುಣಾಚಲ ಪ್ರದೇಶ. ಚೀನಾ, ಭೂತಾನ್ ಮತ್ತು ಬರ್ಮಾ ದೇಶಗಳು ಸುತ್ತುವರಿದಿರುವ ಈ ರಾಜ್ಯದ ಒಂದು ಭಾಗ ಮಾತ್ರ ಅಸ್ಸಾಂಗೆ ಅಂಟಿಕೊಂಡಿದೆ.25 ಮುಖ್ಯ ಬುಡಕಟ್ಟುಗಳ ಜೊತೆಗೆ ಅನೇಕ ಉಪಬುಡಕಟ್ಟುಗಳು ಈ ರಾಜ್ಯದಲ್ಲಿವೆ. 2011ರ ಜನಗಣತಿಯ ಪ್ರಕಾರ ಈ ರಾಜ್ಯದ ಒಟ್ಟು ಜನಸಂಖ್ಯೆ ಸುಮಾರು 14 ಲಕ್ಷ.ದೇಶದಲ್ಲಿಯೇ ಅತಿ ಕಡಿಮೆ ಜನಸಂದಣಿ ಇರುವ ಇಲ್ಲಿ ಒಂದು ಚದರ ಕಿ.ಮೀ.ಗೆ ಕೇವಲ 14 ಜನರು ಮಾತ್ರ ವಾಸಿಸುತ್ತಾರೆ. 16 ಜಿಲ್ಲೆಗಳ ರಾಜ್ಯ ಪೂರ್ವ ಹಿಮಾಲಯ ಪರ್ವತ ಶ್ರೇಣಿಗಳಿಂದ ದುರ್ಗಮ ಮತ್ತು ದಟ್ಟ ಹರಿದ್ವರ್ಣ ಅರಣ್ಯಗಳಿಂದ ಕೂಡಿದೆ.ಅರುಣಾಚಲ ಪ್ರದೇಶದಲ್ಲಿ ಇಡೀ ವರ್ಷ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ಗಿಂತ ಮೇಲೆ ಹೋಗುವುದಿಲ್ಲ. ಚಳಿಗಾಲದಲ್ಲಿ ತಾಪಮಾನ –10 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗಿರುತ್ತದೆ.ಇದೇ ಕಾಲದಲ್ಲಿ 10,500 ಅಡಿಗಳಿಗಿಂತ ಎತ್ತರ ಇರುವ ಶಿಖರಗಳೆಲ್ಲ ಹಿಮಕವಚಗಳಿಂದ ಆವರಿಸಿಕೊಳ್ಳುತ್ತವೆ. ಅರುಣಾಚಲ ಪ್ರದೇಶದ ಪರ್ವತಗಳು 23,500 ಅಡಿಗಳ ಎತ್ತರದವರೆಗೂ ಇವೆ.ತವಾಂಗ್ ಜಿಲ್ಲೆಯಲ್ಲಿ ಹೆಚ್ಚಾಗಿ ಮೊನ್ಫಾ ಬುಡಕಟ್ಟಿನ ಜನರಿದ್ದು, ಇವರು ಮೂಲವಾಗಿ ಮಂಗೋಲ್ ಕಡೆಯಿಂದ ಟೆಬೆಟ್ ಮತ್ತು ಭೂತಾನ್ ದಾಟಿಕೊಂಡು ಈ ಪ್ರದೇಶಕ್ಕೆ ಬಂದರು ಎನ್ನಲಾಗಿದೆ.ಮೊನ್ಫಾಗಳ ವೇಷಭೂಷಣ ಮತ್ತು ಪದ್ಧತಿಗಳು ಇಂದಿಗೂ ಟೆಬೆಟ್ ಮತ್ತು ಭೂತಾನ್ ಜನರನ್ನೇ ಹೋಲುತ್ತವೆ. ಸದೃಢ ದೇಹ, ದುಂಡು ಮುಖ, ಕೆಂಬಣ್ಣ ಹೊಂದಿರುತ್ತಾರೆ. ಇವರು ಬೊಡಿಕ್ ಗುಂಪಿನ ಟಿಬೆಟ್-ಬರ್ಮಾ ಉಪಭಾಷೆ ಮಾತನಾಡುತ್ತಾರೆ.ಈಶಾನ್ಯ ಭಾರತದ ಬುಡಕಟ್ಟುಗಳಲ್ಲಿ ಸಾಮಾನ್ಯವಾಗಿ ಮಹಿಳೆ ಕುಟುಂಬದ ಒಡತಿಯಾದರೆ, ಮೊನ್ಫಾಗಳಲ್ಲಿ ತದ್ವಿರುದ್ಧ. ಮನೆಯ ಹಿರಿಯ ಹೇಳಿದಂತೆ ಉಳಿದವರು ನಡೆದುಕೊಳ್ಳಬೇಕು. ಹಿರಿಯ ಸತ್ತ ಮೇಲೆ ಅಥವಾ ಆತನಿಗೆ ವಯಸ್ಸಾದ ಮೇಲೆ ಹಿರಿಯ ಮಗ ಆ ಸ್ಥಾನವನ್ನು ಪಡೆದುಕೊಳ್ಳುತ್ತಾನೆ.ಒಂದು ವೇಳೆ ಒಡೆಯ ಸತ್ತು, ಮಕ್ಕಳು ಸಣ್ಣವರಾಗಿದ್ದರೆ ತಾಯಿಯಾದವಳು ಆ ಸ್ಥಾನ ಪಡೆಯುತ್ತಾಳೆ. ಎಲ್ಲಾ ಬೌದ್ಧರಂತೆ ಮೊನ್ಫಾಗಳು ಕೂಡ ಮನುಷ್ಯನ ಜೀವನ ಆತನ ಕರ್ಮಗಳಿಂದ ಆಧಾರಪಟ್ಟಿರುತ್ತದೆ ಎಂದು ನಂಬುತ್ತಾರೆ.ಕಾಯಿಲೆ ಬಂದಾಗ ಭಿಕ್ಕುಗಳನ್ನು ಕರೆದು ಸಲಹೆ ಪಡೆದುಕೊಳ್ಳುತ್ತಾರೆ. ಅವರ ಪ್ರಾರ್ಥನೆಗಳಿಂದ ಕಾಯಿಲೆ ವಾಸಿಯಾಗದೇ ಹೋದಲ್ಲಿ ಆಧುನಿಕ ಔಷಧಿಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಾರೆ.ತೀರ ಇತ್ತೀಚಿನವರೆಗೂ ಟಿಬೆಟ್ಟಿನ ಬೌದ್ಧರು ಫುಟ್‌ಬಾಲ್ ಆಡುತ್ತಿರಲಿಲ್ಲ. ಚೆಂಡು ಗುಂಡಾಗಿದ್ದು ಭೂಮಿಯನ್ನು ಹೋಲುತ್ತದೆ, ಭೂಮಿ ತಾಯಿಯನ್ನು ಕಾಲಿನಲ್ಲಿ ಒದೆಯಬಾರದು ಎನ್ನುವುದು ಅವರ ವಾದ. ಅದೇ ರೀತಿ ಸೈಕಲ್ ಕೂಡ ತುಳಿಯುತ್ತಿರಲಿಲ್ಲ. ಆಧುನಿಕ ಯಂತ್ರಗಳನ್ನು ಬಳಸುವ ಧೈರ್ಯ ಮಾಡಿದ್ದು ತೀರ ಇತ್ತೀಚೆಗೆ.ಮೊನ್ಫಾಗಳಲ್ಲಿ ಇಂದಿಗೂ ನಾಲ್ಕು ಜನ ಅಣ್ಣತಮ್ಮಂದಿರು ಇರುವ ಮನೆಯಲ್ಲಿ ಒಬ್ಬಳೇ ಪತ್ನಿ ಇರುತ್ತಾಳೆ. ಮಕ್ಕಳು ಎಲ್ಲರನ್ನೂ ಅಪ್ಪ ಎಂದೇ ಕರೆಯುತ್ತಾರೆ. ಕೆಲವು ಸಿರಿವಂತ ಮೊನ್ಫಾಗಳು ಇಬ್ಬರು ಮೂವರು ಪತ್ನಿಯರನ್ನು ಬೇರೆ ಬೇರೆ ಮನೆಗಳಲ್ಲಿ ಇಟ್ಟಿರುತ್ತಾರೆ. ಮಕ್ಕಳು ದೊಡ್ಡವರಾಗಿ ಮದುವೆಯಾದ ಮೇಲೆ ಬೇರೆಯಾದರೂ ತಂದೆ ತಾಯಿಯ ಒಡನಾಟವನ್ನು ಬಿಡುವುದಿಲ್ಲ.ಮೊನ್ಫಾಗಳು ಮಿಲೆಟ್ ಅಥವಾ ಗೋಧಿ ಹಿಟ್ಟಿನಿಂದ ಮಾಡುವ (ಜನ್: ರಾಗಿಮುದ್ದೆ ರೀತಿಯ ಆಹಾರ) ಮುದ್ದೆಗೆ ಬೆಣ್ಣೆ ಹಚ್ಚಿ ಮಾಂಸ ಅಥವಾ ತರಕಾರಿಯೊಂದಿಗೆ ಊಟ ಮಾಡುತ್ತಾರೆ. ಹಕ್ಕಿಬೀರು, ಯಾಕ್ ಪ್ರಾಣಿಯ ಹಾಲಿನ ಚಹಾ ಸೇವನೆ ದಿನನಿತ್ಯ ಇರುತ್ತದೆ.ಸಾಯಂಕಾಲ ಹಾಡು, ಕುಣಿತ ಮಾತುಕತೆಯ ಜೊತೆಗೆ ಒಲೆಯ ಮುಂದೆಯೇ ಊಟ ಮುಗಿಯುತ್ತದೆ. ರಾತ್ರಿ ಮಲಗುವಾಗ ಮೂರು ಸಲ ‘ಬುದ್ಧ ಧಮ್ಮ ಸಂಘ’ ಎಂದು ಹೇಳುತ್ತಾರೆ.   

   

ಸಾವಿಗೀಡಾಗುವ ಮಕ್ಕಳು ಮತ್ತು ವೃದ್ಧರನ್ನು ಮರದ ಪೆಟ್ಟಿಗೆಯಲ್ಲಿಟ್ಟು ಎತ್ತರ ಪರ್ವತಗಳ ಗುಹೆಗಳಲ್ಲಿಟ್ಟು ಬರುತ್ತಾರೆ. ರೋಗ ಬಂದು ಸತ್ತವರನ್ನು ಮಣ್ಣಿನಲ್ಲಿ ಹೂಳುತ್ತಾರೆ. ಹಾಗೆಯೇ ಕಳ್ಳರು ಮತ್ತು ಕೊಲೆಗಾರರನ್ನು ಮಣ್ಣಿನಲ್ಲಿ ಹೂಳುತ್ತಾರೆ.

ಕೆಲವು ಐಶ್ವರ್ಯವಂತರು ಮತ್ತು ಲಾಮಾಗಳ ಹೆಣಗಳನ್ನು ಸುಡುತ್ತಾರೆ. ಕೆಲವೊಮ್ಮೆ ಅವರ ಮೂಳೆಗಳನ್ನು ದೇಹದಿಂದ ಬೇರ್ಪಡಿಸಿ, ಜೇಡಿಮಣ್ಣಿನ ಜೊತೆಗೆ ಪೇಸ್ಟ್ ಮಾಡಿ ಮೂರ್ತಿಗಳನ್ನು ಮತ್ತು ಪವಿತ್ರ ಬೌದ್ಧ ಚಿಹ್ನೆಗಳನ್ನು ಮಾಡುತ್ತಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಹೆಚ್ಚಿನ ಹೆಣಗಳನ್ನು ಇಂದಿಗೂ ನದಿ ದಡಗಳಿಗೆ ತೆಗೆದುಕೊಂಡು ಹೋಗಿ ನುರಿತ ಜನರಿಂದ ಕತ್ತರಿಸಿ ತುಂಡು ತುಂಡು ಮಾಡಿ ನದಿಗೆ ಎಸೆಯುತ್ತಾರೆ. ಈ ತುಂಡುಗಳನ್ನು ಮೀನು ಮತ್ತು ಇತರ ಹಸಿದ ಪ್ರಾಣಿಗಳು ತಿಂದರೆ ಸತ್ತವನು ಸಾರ್ಥಕ ಹೊಂದುತ್ತಾನೆ ಎನ್ನುವುದು ಅವರ ನಂಬಿಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry