7

ಆದ್ಯತೆಗಳು ತಪ್ಪಾದಾಗ ಆಗುವುದೇ ಹೀಗೆ...

Published:
Updated:
ಆದ್ಯತೆಗಳು ತಪ್ಪಾದಾಗ ಆಗುವುದೇ ಹೀಗೆ...

ಇದನ್ನು ಬಿ.ಬಿ.ಸಿಯವರೇ ಹೇಳಬೇಕಿರಲಿಲ್ಲ. ಹಾದಿ ಬೀದಿಯಲ್ಲಿ ಹೋಗುವವರು ಯಾರು ಬೇಕಾದರೂ ಹೇಳಬಹುದಿತ್ತು, ಅಲ್ಲಿ ಅರಾಜಕತೆ ಇತ್ತು. ಗೂಂಡಾಗಳ ರಾಜ್ಯಭಾರ ನಡೆದಿತ್ತು. ಅವರು ಎಲ್ಲೆಂದರಲ್ಲಿ ಕಲ್ಲು ತೂರುತ್ತಿದ್ದರು. ಸಿಕ್ಕ ಸಿಕ್ಕ ಕಡೆ ಟೈರು ಇಟ್ಟು ಬೆಂಕಿ ಹಚ್ಚುತ್ತಿದ್ದರು. ತಮಿಳುನಾಡಿನಲ್ಲಿ ನೋಂದಾವಣೆ ಆಗಿದ್ದ ಲಾರಿಗಳನ್ನು, ಬಸ್ಸುಗಳನ್ನು ಸುಟ್ಟು ಹಾಕುತ್ತಿದ್ದರು. ಬಾಡಿಗೆ  ಕಾರು, ಆಟೊ ಓಡಿಸುತ್ತ ಹೊಟ್ಟೆ ಹೊರೆಯುತ್ತಿದ್ದ ಕನ್ನಡಿಗರ ಸಂಚಾರಕ್ಕೂ ಅಡ್ಡಿ ಮಾಡುತ್ತಿದ್ದರು. ಕಾನೂನಿನ ಪಾಲನೆ ಮಾಡಬೇಕಿದ್ದ, ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಣೆ ಮಾಡಬೇಕಿದ್ದ ಸರ್ಕಾರ ನಿರ್ಲಿಪ್ತವಾಗಿತ್ತು. ಸರ್ಕಾರದ ಮನಸ್ಸಿನಲ್ಲಿ ಏನಿದೆ ಎಂದು ಪೊಲೀಸರಿಗೆ ಸ್ಪಷ್ಟವಾಗಿ ಗೊತ್ತಾಗಿತ್ತು. ಮತ್ತು ಅವರು ಅಕ್ಷರಶಃ ಮೂಕ ಪ್ರೇಕ್ಷಕರಾಗಿದ್ದರು.ಕಾವೇರಿ ಎಷ್ಟು ಭಾವನಾತ್ಮಕ ವಿಚಾರ ಎಂದು ಎಲ್ಲರಿಗೂ ಗೊತ್ತು. ಕಳೆದ  ಸೋಮವಾರ (ಸೆ.12) ಸುಪ್ರೀಂ ಕೋರ್ಟಿನ ಮುಂದೆ ಇದ್ದ ಅರ್ಜಿಯ ಮೇಲೆ ಏನು ಆದೇಶ ಬರುತ್ತದೆ ಎಂದು ಎಲ್ಲರಿಗೂ ಅಂದಾಜು ಇತ್ತು; ಅದು ವ್ಯತಿರಿಕ್ತವಾಗಿಯೇ ಇರುತ್ತದೆ ಎಂಬ ಶಂಕೆಯೂ ಹರಿದಾಡುತ್ತಿತ್ತು. ಆದೇಶ ಏನು ಬರುತ್ತದೆ ಎಂಬ ಅಂದಾಜು ಇರಲಿ, ಬಿಡಲಿ ಯಾವ ಸ್ಥಿತಿಯನ್ನಾದರೂ ಎದುರಿಸಲು ಸರ್ಕಾರ ಸನ್ನದ್ಧವಾಗಿರಬೇಕು. ದಾಂದಲೆಯನ್ನು, ಗೂಂಡಾಗಿರಿಯನ್ನು ಸಹಿಸುವುದಿಲ್ಲ ಹಾಗೂ ನಿತ್ಯದ ಜನಜೀವನಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ ಎಂದು ಸರ್ಕಾರ ತೀರ್ಮಾನಿಸಿದರೆ ಗಲಭೆಯನ್ನು ನಿಯಂತ್ರಿಸುವುದು ಎಷ್ಟು ಹೊತ್ತಿನ ಕೆಲಸ? ಪೊಲೀಸರಿಗೆ ಯಾವ  ಗಲ್ಲಿಯಲ್ಲಿ ಯಾವ ರೌಡಿಯಿದ್ದಾನೆ, ಯಾವ ಸಂಘಟನೆಯಲ್ಲಿ ಯಾವ ದುಷ್ಟನಿದ್ದಾನೆ ಎಂದು ಖಚಿತವಾಗಿ ಗೊತ್ತಿರುತ್ತದೆ.‘ಕೋಟೆ ಕೊಳ್ಳೆಯಾದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎನ್ನುವ ಹಾಗೆ ಈಗ ಎಲ್ಲ ಮುಗಿದ ಮೇಲೆ ‘ದುಷ್ಕರ್ಮಿ’ಗಳನ್ನು ಬಂಧಿಸುವ ಬದಲು ಮೊದಲೇ ಅವರನ್ನು ಮುಂಜಾಗ್ರತಾ ಬಂಧನದಲ್ಲಿ ಇಡಲು ಅವಕಾಶವಿತ್ತು. ಬಹಳ ಹಾರಾಡುವ ಮತ್ತು ತೆರೆಯ ಮರೆಯಲ್ಲಿಯೇ ಕುಳಿತು ಹುನ್ನಾರ ಮಾಡುವ ನಾಯಕರನ್ನು ಆಯಾ ಠಾಣೆಗೆ ಕರೆದು ‘ಕಾನೂನು ಕೈಗೆ ತೆಗೆದುಕೊಂಡರೆ ನಿಮ್ಮ ಪ್ಯಾಂಟು ಬಿಚ್ಚುತ್ತೇವೆ’ ಎಂದು ಎಚ್ಚರಿಸಿದ್ದರೆ ಅವರು ಊಟಿ ಕಡೆಗೆ ತಣ್ಣಗೆ ಹೋಗಿ ಬರುತ್ತಿದ್ದರು! ಮಹಾದಾಯಿ ಹೋರಾಟದಲ್ಲಿ ಮನೆ ಮನೆಗೆ ನುಗ್ಗಿ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಥಳಿಸಿದ್ದ ಪೊಲೀಸರ ಪೌರುಷ ಕಾವೇರಿ ಗಲಭೆಯಲ್ಲಿ ಎಲ್ಲಿ ಮಾಯವಾಗಿತ್ತು ಎಂದು ಯಾರಿಗೂ ಅರ್ಥವಾಗಲಿಲ್ಲ.ಯಾವಾಗಲೂ ಆಡಳಿತ ವ್ಯವಸ್ಥೆ ಮೇಲಿನಿಂದ ಬರುವ ಸಂದೇಶಗಳಿಗಾಗಿ ಕಾಯುತ್ತ ಇರುತ್ತದೆ. ಸಂದೇಶ ಹೇಗಿರುತ್ತದೆಯೋ ಹಾಗೆ ಅದು ನಡೆದುಕೊಳ್ಳುತ್ತದೆ. ಸೆ. 9ರ ಬಂದ್‌ ಸಮಯದಲ್ಲಿಯೇ ಸರ್ಕಾರದ ಮನಸ್ಸಿನಲ್ಲಿ ಏನಿದೆ ಎಂಬ ಸಂದೇಶ ಪೊಲೀಸ್‌ ಇಲಾಖೆಗೆ  ಹೋಗಿತ್ತು. ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆ  ಕಾಪಾಡುವುದು ಆದ್ಯತೆಯೇ ಆಗಿದ್ದರೆ ಸೆ.12ರಂದು ಸುಪ್ರೀಂ ಕೋರ್ಟಿನ ಆದೇಶ ಬರುವುದಕ್ಕಿಂತ ಮುಂಚೆಯೇ ಮುಖ್ಯಮಂತ್ರಿಗಳು ಉನ್ನತ ಅಧಿಕಾರಿಗಳ ಸಭೆ ಕರೆದು, ‘ಒಂದು ವೇಳೆ ತೀರ್ಪು ವ್ಯತಿರಿಕ್ತವಾಗಿ ಬಂದರೆ ಏನು ಮಾಡಬೇಕು’ ಎಂಬ ಮುಂಜಾಗ್ರತೆ ಕ್ರಮ ನಿರ್ಧರಿಸಬೇಕಿತ್ತು. ಸಂಪುಟದ ತುರ್ತು ಸಭೆಯನ್ನು (!) ಮರುದಿನ ಕರೆಯುವ ಬದಲು ಅದೇ ದಿನ ಕರೆಯಬೇಕಿತ್ತು. ಗೃಹ ಸಚಿವರು ಪೊಲೀಸ್‌ ನಿಯಂತ್ರಣ ಕೊಠಡಿಯಲ್ಲಿ ಕುಳಿತುಕೊಂಡು ಅನುಕ್ಷಣದ ಮಾಹಿತಿಯನ್ನು ಪಡೆಯಬೇಕಿತ್ತು. ಅಂದು ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಯಾವ ಯಾವ ಕಾರ್ಯಕ್ರಮದಲ್ಲಿ ಎಷ್ಟು ಹೊತ್ತು ಇದ್ದರು ಎಂಬ ಮಾಹಿತಿ ಈಗ  ರಹಸ್ಯವೇನೂ ಆಗಿ ಉಳಿದಿಲ್ಲ. ಅದು ಅವರ ಆದ್ಯತೆ ಆಗಿತ್ತು. ಅಂದರೆ ಅವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಮೊದಲ ಆದ್ಯತೆ ಆಗಿರಲಿಲ್ಲ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ.ಅಂದು ಅತ್ತ ನ್ಯಾಯಾಲಯದ ಆದೇಶ ಹೊರಗೆ ಬೀಳುತ್ತಿದ್ದಂತೆಯೇ ಇತ್ತ ಗಲಭೆ ಆರಂಭವಾಯಿತು. ಶಾಲೆಗೆ ಹೋದ ಮಕ್ಕಳ ಕಥೆ ಏನಾಯಿತು, ಕಚೇರಿಗೆ  ಹೋದ ಯುವತಿಯರ ಕಥೆ ಏನಾಯಿತು ಎಂದು ಯಾರಾದರೂ ಕೇಳಿ ಹೇಳಿದರೆ ಸರ್ಕಾರದ ವೈಫಲ್ಯವೇನು ಎಂದು ಅರ್ಥವಾಗುತ್ತದೆ. ಎಲ್ಲ ಮುಗಿದ ಮೇಲೆ ಮುಖ್ಯಮಂತ್ರಿಗಳು ಪೊಲೀಸ್‌ ಮಹಾ ನಿರ್ದೇಶಕರಿಗೆ ಮತ್ತು ನಗರದ ಪೊಲೀಸ್‌ ಕಮಿಷನರ್‌ಗೆ ತರಾಟೆಗೆ ತೆಗೆದುಕೊಂಡರು ಎಂಬ ಸುದ್ದಿಯನ್ನು ಮಾಧ್ಯಮಗಳಿಗೆ ಹರಿ ಬಿಡಲಾಯಿತು. ಅಲ್ಲಿಗಾಗಲೇ ಎಂಬತ್ತಕ್ಕೂ ಹೆಚ್ಚು ವಾಹನಗಳು ಬೆಂಕಿಗೆ ಆಹುತಿಯಾಗಿದ್ದುವು. ಕರ್ನಾಟಕದ ಮಾನ ಮೂರು ಕಾಸಿಗೆ ಹರಾಜು ಆಗಿತ್ತು. ಗಲಭೆಕೋರರೇ ಸುಸ್ತು ಹೊಡೆದು ಬಿಟ್ಟಿದ್ದರು. ಬಿ.ಬಿ.ಸಿ ಅದನ್ನೇ ಹೇಳಿತು: ‘ಇದು ಆಡಳಿತದ ವೈಫಲ್ಯ!’ಅಪರಾಧ ದಂಡ ಸಂಹಿತೆಯ 144ನೇ ಕಲಮಿನ ಅಡಿ 12ನೇ ತಾರೀಖು ಬೆಳಿಗ್ಗೆಯೇ ನಿಷೇಧಾಜ್ಞೆ ವಿಧಿಸಲು ಸರ್ಕಾರಕ್ಕೆ ಯಾವ ನಿರ್ಬಂಧವಿತ್ತು? ದಾಂದಲೆ ಮಾಡುವವರು ಯಾವಾಗಲೂ ಅರಾಜಕ ಸ್ಥಿತಿಯನ್ನೇ ಸೃಷ್ಟಿಸುತ್ತಾರೆ. ಒಂದು ಸಾರಿ ತನ್ನನ್ನು ಯಾರೂ ಕೇಳುವವರು ಇಲ್ಲ ಎಂದು ಅನಿಸಿದಾಗ ಗೋಲಿಯಾಡುವ ಹುಡುಗನೂ ಕಲ್ಲು ಎಸೆಯುವ ಧೈರ್ಯ ಸಂಪಾದಿಸುತ್ತಾನೆ. ಅದು ಸಮೂಹ ಸನ್ನಿ. ಒಂದು ಸಾರಿ ಇಂಥ ಸನ್ನಿ ಬೆಳೆಯಲು ಬಿಟ್ಟು ತದನಂತರ ಅದನ್ನು ನಿಯಂತ್ರಿಸಲು ಆಗುವುದಿಲ್ಲ. ಅಚ್ಚರಿ ಸಂಗತಿಯೆಂದರೆ ಬಿಗಡಾಯಿಸುತ್ತಿರುವ ಕಾನೂನು ಸುವ್ಯವಸ್ಥೆಯ ಸ್ಥಿತಿಯನ್ನು ಇದೇ ಸರ್ಕಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅರ್ಜಿಯಲ್ಲಿ ಪ್ರಸ್ತಾಪಿಸಿ ಕೈ ಸುಟ್ಟುಕೊಂಡಿತ್ತು. ತನ್ನ ತೀರ್ಪಿನ ಆರಂಭದಲ್ಲಿಯೇ ಅದನ್ನು ಸುಪ್ರೀಂ ಕೋರ್ಟು ಉಲ್ಲೇಖಿಸಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ನಿಮ್ಮ ಆದ್ಯ ಕರ್ತವ್ಯ ಎಂದು ತಾಕೀತು ಮಾಡಿತ್ತು. ಆದರೂ ಸರ್ಕಾರ ತಾತ್ಸಾರ ಮಾಡಿತು. ಅಥವಾ ತತ್ಕಾಲದ ಲಾಭದ ಯೋಚನೆ ಮಾಡಿತು.ಹಾಗೆ ನೋಡಿದರೆ ಕಾವೇರಿ ವಿಚಾರದಲ್ಲಿ ಸರ್ಕಾರ ಯಾವಾಗಲೂ ನಿಜವನ್ನು ಹೇಳುತ್ತಿರಲಿಲ್ಲ. ಅಪ್ರಿಯವಾದ ಸತ್ಯವನ್ನು ಹೇಳಲು ಸರ್ಕಾರ ಹಿಂದೇಟು ಹಾಕಬಾರದು. ಕೃಷ್ಣರಾಜ ಸಾಗರ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿದು ಹೋಗುತ್ತಲೇ ಇದೆ. ಆದರೆ, ಕಳೆದ ತಿಂಗಳು 24 ರಂದು ಉಭಯ ರಾಜ್ಯಗಳ ಕಾವೇರಿ ರೈತರ ತಂಡ ಬಂದು ತಮ್ಮನ್ನು ಭೇಟಿ ಮಾಡಿದಾಗ ‘ನೀರು ಬಿಡಲು ಆಗುವುದಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು ಎಂದು ಮಾಧ್ಯಮದಲ್ಲಿ ವರದಿಯಾಯಿತು. ಆದರೆ, ಅದೇ ದಿನ 10,000 ಕ್ಯುಸೆಕ್‌ ನೀರು ಹರಿದು ತಮಿಳುನಾಡಿಗೆ ಹೊರಟಿತ್ತು. 25ನೇ ತಾರೀಖೂ ಅಷ್ಟೇ ಪ್ರಮಾಣದ ನೀರು ಹರಿದು ಹೋಯಿತು. ಸರ್ಕಾರಕ್ಕೆ ಅದು ಅನಿವಾರ್ಯವಾಗಿತ್ತು. ಏಕೆಂದರೆ ನ್ಯಾಯಮಂಡಳಿ ಆದೇಶದ ಪ್ರಕಾರ ನಾವು ನೆರೆಯ ರಾಜ್ಯಕ್ಕೆ ನೀರು ಬಿಡಲೇಬೇಕು. ನೀರು ಬಿಟ್ಟ ಮೇಲೂ ಬಿಡುವುದಿಲ್ಲ ಎಂದು ಹೇಳುವುದು ಅಪ್ಪಟ ಸುಳ್ಳು ಹೇಳಿದಂತೆ.ಹಾಗೆ ನೋಡಿದರೆ ರಾಜ್ಯ ಸರ್ಕಾರ ಕಳೆದ ತಿಂಗಳು ಉದ್ದಕ್ಕೂ ನ್ಯಾಯಮಂಡಳಿಯ ಆದೇಶವನ್ನು ಪಾಲಿಸಲು ಬಹಳ ಹೆಣಗುತ್ತಿತ್ತು. ಹೇಗಿದ್ದರೂ ಒಂಬತ್ತು ಹತ್ತು ಸಾವಿರ ಕ್ಯುಸೆಕ್‌ ನೀರು ಹರಿದು ಹೋಗುತ್ತಿರುವುದರಿಂದ ಅಷ್ಟು ನೀರನ್ನು ಬಿಡುವುದು ಕಷ್ಟವಾಗಲಿಕ್ಕಿಲ್ಲ ಎಂದು ನಮ್ಮ ವಕೀಲ ಫಾಲಿ ನಾರಿಮನ್‌ ಅವರು ನ್ಯಾಯಾಲಯದ ಮುಂದೆ ಭರವಸೆ ಕೊಟ್ಟಿರಬೇಕು. ಆದರೆ, ಸರ್ಕಾರ ಆ ವಿಚಾರದಲ್ಲಿಯೂ ಪ್ರಾಮಾಣಿಕವಾಗಿ ನಡೆದುಕೊಳ್ಳಲಿಲ್ಲ. ‘ನಾರಿಮನ್‌ ಹಾಗೆ ಹೇಳುವುದು ನಮಗೆ ಗೊತ್ತಿರಲಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು. ಆದರೆ, ‘ನಾರಿಮನ್‌ ಅವರಿಗೆ ಸರ್ವ ಪಕ್ಷದ ಸಭೆ ಸ್ವಾತಂತ್ರ್ಯ ನೀಡಿತ್ತು’ ಎಂದು ಅವರು ಅದೇ ಉಸಿರಿನಲ್ಲಿ ಸೇರಿಸಿದರು. ನಾಯಕರಾದವರ ಹಣೆಬರಹ ಏನೆಂದರೆ ಅಪ್ರಿಯವಾದುದನ್ನು ಹೇಳಲು ಅವರು ಯಾವಾಗಲೂ ಸಿದ್ಧರಿರಬೇಕು. ಜನರು ಅವರ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಾರೆ.‘ಆತ ಪ್ರಾಮಾಣಿಕ ಮನುಷ್ಯ’ ಎಂದು ಅವರು ಒಂದಲ್ಲ ಒಂದು ದಿನ ಹೇಳಿಯೇ ಹೇಳುತ್ತಾರೆ. ಆ ಹೊಣೆಗಾರಿಕೆಯನ್ನು ಸರ್ಕಾರ ನಿಭಾಯಿಸಿದಂತೆ ಕಾಣಲಿಲ್ಲ. ಅದರಿಂದ ಏನಾಯಿತು ಎಂದರೆ ವ್ರತವೂ ಉಳಿಯಲಿಲ್ಲ, ಸುಖವೂ ಸಿಗಲಿಲ್ಲ. ನಾವು ಕನ್ನಡಿಗರು ಎಷ್ಟೇ ಸೌಜನ್ಯದ ಜನ ಎಂದು ನಮ್ಮ ಬೆನ್ನು ನಾವೇ ತಟ್ಟಿಕೊಂಡರೂ ದೇಶದ ಜನ ನಮ್ಮನ್ನು ನಂಬಲಿಲ್ಲ. ನಾವು ಕೆಡುಕರೂ, ಜಗಳ ಗಂಟರೂ, ಅರಾಜಕರೂ ಎಂದು ಟೀವಿ ಮಾಧ್ಯಮಗಳು ಪೈಪೋಟಿಯ ಮೇಲೆ ನಮ್ಮನ್ನು ಬಿಂಬಿಸಿದುವು.ಕಳೆದ ಒಂದು ವಾರದಲ್ಲಿ ಎಲೆಕ್ಟ್ರಾನಿಕ್‌ ಮಾಧ್ಯಮಗಳ ವಿರುದ್ಧ ಬಂದಷ್ಟು ಟೀಕೆ ಈಚಿನ ವರ್ಷಗಳಲ್ಲಿ ಬಂದುದು ನನಗೆ ನೆನಪು ಇಲ್ಲ. ಅವರು ಎಷ್ಟು ಹೊಣೆಗೇಡಿಗಳು, ಅಪ್ರಬುದ್ಧರು, ಲಾಭಕೋರರು ಮತ್ತು ಅಪ್ರಾಮಾಣಿಕರು ಎಂಬುದು ಗೊತ್ತಾಗಿ ಹೋಯಿತು. ಗಲಭೆಯ ದೃಶ್ಯಗಳನ್ನು ತೋರಿಸುತ್ತಲೇ ‘ನಗರದ ಶಾಂತಿ ನಮಗೆ ಬೇಕಾಗಿಲ್ಲ, ಜನರ ಜೀವನ ರಕ್ಷಣೆಯ ಚಿಂತೆ ನಮಗೆ ಇಲ್ಲ’ ಎಂದು ಅವರು ನಿರ್ಲಜ್ಜವಾಗಿ ಹೇಳಿದರು. ಈಗ ಜನರು ಅವರನ್ನು ಹಾಸ್ಯ ಮಾಡುತ್ತಿದ್ದಾರೆ: ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಿದ್ದ ಪ್ರವಾಸಿಯೊಬ್ಬನ ಕೈಯಿಂದ ಬಾಳೆ ಹಣ್ಣು ಕಿತ್ತುಕೊಂಡು ಹೋದ ಕೋತಿಯ ಕಥೆಯನ್ನು ಟೀವಿ ಚಾನೆಲ್‌ ನಿರ್ವಹಿಸುವ ರೀತಿ ಈಗ ಎಲ್ಲೆಂದರಲ್ಲಿ ವೈರಲ್‌ ಆಗಿದೆ. ವೈರಲ್‌ ಆದ ಇಂಥ ಕ್ಷುಲ್ಲಕ ಸುದ್ದಿಯನ್ನೇ ಅಲ್ಲವೇ ಅವರು ಇಡೀ ದಿನ ಎಳೆದಾಡಿ ಬೆಂಗಳೂರಿಗೆ ಬೆಂಕಿ ಹಚ್ಚಿದ್ದು! ಸರ್ಕಾರದ ಹಾಗೆಯೇ ಮಾಧ್ಯಮಗಳಿಗೂ ತಕ್ಷಣದ ಲಾಭದ ಆಸೆ. ಇಂಥ ಗಲಭೆಗಳಿಂದ ತೊಂದರೆಗೆ ಒಳಗಾಗುವ, ದಿನದ ತುತ್ತು ಅನ್ನವನ್ನೂ ಕಳೆದುಕೊಳ್ಳುವ ಕೊನೆಯ ಮನುಷ್ಯನ ಸುರಕ್ಷತೆಯ ಬಗೆಗೆ ಯೋಚನೆ ಮಾಡಲು ಯಾರಿಗೆ ವ್ಯವಧಾನ ಇದೆ?ಬಂದ್‌ ನಡೆದ ಇಡೀ ದಿನ ಟೀವಿ ಮಾಧ್ಯಮಗಳು ಅಂಧಾಭಿಮಾನವನ್ನು ಪೊರೆಯುತ್ತಿದ್ದುವು. ಕಾವೇರಿಯಿಂದ ನೀರನ್ನು ಬಿಡಲೇಬೇಕಾಗುತ್ತದೆ ಎಂಬ ಕಟು ಸತ್ಯ ಬಹುತೇಕ ಟೀವಿ ಮಾಧ್ಯಮಗಳ ತಜ್ಞರಿಗೆ ಗೊತ್ತಿರಲಿಲ್ಲ. ಅಥವಾ ಗೊತ್ತಿದ್ದೂ ಗೊತ್ತಿಲ್ಲದವರಂತೆ ಅವರು ವರ್ತಿಸುತ್ತಿದ್ದರು. ಅವರಿಗೆ ಸಮೂಹ ಸನ್ನಿಯನ್ನು ಇನ್ನಷ್ಟು, ಮತ್ತಷ್ಟು ಪ್ರಚೋದಿಸಬೇಕಿತ್ತು. ಹೆಚ್ಚು ಹೆಚ್ಚು ಜ್ವಾಲೆಗಳು ಹೊತ್ತಿಕೊಂಡಷ್ಟೂ ಒಳ್ಳೆಯದು ಎಂದು ಅವರಿಗೆ ಅನಿಸುತ್ತಿದ್ದಂತೆ ಇತ್ತು. ‘ನೀರು ಬಿಡುವುದನ್ನು ನಿಲ್ಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೀರೊ ಆಗಬೇಕು’ ಎಂಬುದು ಅವರ ಆಗ್ರಹವಾಗಿತ್ತು. ‘ನೀರು ಬಿಡುವುದನ್ನು ನಿಲ್ಲಿಸಲು ಅವರಿಗೆ ಆಗುವುದಿಲ್ಲ. ಆಗ ಜನರ ಮತ್ತು ಸರ್ಕಾರದ ನಡುವೆ ಸಂಘರ್ಷ ಹುಟ್ಟಿಕೊಳ್ಳುತ್ತದೆ. ಅದು ಮತ್ತೆ ಸುದ್ದಿಗೆ ಒಳ್ಳೆಯ ಸರಕಾಗುತ್ತದೆ’ ಎಂದು ಅವರು ಲೆಕ್ಕ ಹಾಕುತ್ತಿದ್ದಂತಿತ್ತು. ನಮ್ಮಂಥ ಹಳೆಯ ತಲೆಗಳಿಗೆ ಕಲಿತುದು, ನಂಬಿದ್ದು ಮರೆತು ಹೋಗುತ್ತಿತ್ತು!ಹಾಗೆಂದು ತಾವು ಮಾಡುತ್ತಿದ್ದುದು ಏನು ಎಂದು ಅವರಿಗೆ ಗೊತ್ತಿರಲಿಲ್ಲವೇ? ಗೊತ್ತಿತ್ತು. ಆಗೀಗ, ‘ನಾಡಿನ ಶಾಂತಿ ನಮಗೆ ಎಷ್ಟು ಮುಖ್ಯ’ ಎಂಬ ಬರವಣಿಗೆ ಟೀವಿ ಪರದೆ ಮೇಲೆ ಬಂದು ಮಾಯವಾಗುತ್ತಿತ್ತು. ಒಂದು ಕಡೆ ಬೆಂಕಿಗೆ ಪೆಟ್ರೋಲ್‌ ಸುರಿಯುವುದು, ಇನ್ನೊಂದು ಕಡೆಗೆ ತಂಬಿಗೆಯಲ್ಲಿ ನೀರು ತಂದು ಆರಿಸಲು ಯತ್ನಿಸುವುದು ಎಂದರೆ ಇದೇ ಇರಬೇಕು. ಇದೆಲ್ಲ ನಿಜವಾಗಿಯೂ ನಾವು ಬಯಸುವ ಗಂಭೀರ ಪತ್ರಿಕೋದ್ಯಮವೇ? ತಮಾಷೆಯೇ ಅಥವಾ ಹಾಸ್ಯವೇ?ತಮಿಳುನಾಡಿನಲ್ಲಿಯೂ ಶುಕ್ರವಾರ ಬಂದ್‌ ಆಗಿದೆ. ಅವರೇನು ನಮಗಿಂತ ಕಡಿಮೆ ಅಂಧಾಭಿಮಾನಿಗಳು ಅಲ್ಲ. ಬಂದ್‌ ದಿನ ಕನ್ನಡಿಗರ ಎಂಟು ಹತ್ತು ಅಂಗಡಿಗಳನ್ನು ಭಸ್ಮ ಮಾಡಲು ಅವರಿಗೆ ಕಷ್ಟವಾಗುತ್ತಿತ್ತೇ? ಹಾಗೆ ಮಾಡುವಂತೆ ಅಲ್ಲಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಪ್ರಚೋದಿಸಲು ಸಾಧ್ಯ ಇರಲಿಲ್ಲವೇ? ತಮಿಳುನಾಡಿನಲ್ಲಿ ನಡೆದ ಶಾಂತಿಯುತ ಬಂದ್‌, ಕನ್ನಡಿಗರು ನಾಚುವಂತೆ ಮಾಡಿಲ್ಲವೇ? ಜಯಲಲಿತಾ ಎಷ್ಟು ಒಳ್ಳೆಯ ಆಡಳಿತಗಾರರು ಎಂದರೆ ಅವರು ನಮ್ಮ ಕೈ ತಿರುಚಿ ನೀರನ್ನೂ ಬಿಡಿಸಿಕೊಂಡರು, ಜಗತ್ತಿನ ಮುಂದೆ ನಾವು ಕಾನೂನು ಭಂಜಕರು, ಅರಾಜಕರು ಎಂದು ತೋರಿಸಿಯೂ ಕೊಟ್ಟರು!ಕಳೆದ 12ರಂದು ಕರ್ನಾಟಕದಲ್ಲಿ ಬಂದ್‌ ಇದ್ದ ದಿನ ಪ್ರತಿದಾಳಿ ಆಗಬಹುದು ಎಂಬ ನಿರೀಕ್ಷೆಯಿಂದ ತಮಿಳುನಾಡಿನ ಪೊಲೀಸರು ಕರ್ನಾಟಕದ ಅಂಗಡಿ ಮುಂಗಟ್ಟುಗಳಿಗೆ ಕೊಟ್ಟ ಬಂದೋಬಸ್ತ್‌ ಅಲ್ಲಿನ ಸರ್ಕಾರ ಎಷ್ಟು ಸಮರ್ಥವಾಗಿದೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಯ ರಕ್ಷಣೆ ಅದಕ್ಕೆ ಎಷ್ಟು ಮುಖ್ಯ ಎಂದು ತೋರಿಸಿಕೊಟ್ಟಿತು. ನಮ್ಮ ಸರ್ಕಾರಕ್ಕೆ ಅದು ಕೊನೆಯ ಆದ್ಯತೆ ಆಗಿತ್ತು. ‘ಮಾಧ್ಯಮಗಳು ಹೊಣೆಗೇಡಿಗಳ ಹಾಗೆ ವರ್ತಿಸಿದ್ದರಿಂದಲೇ ಗಲಭೆ ನಿಯಂತ್ರಿಸಲು ಆಗಲಿಲ್ಲ’ ಎಂದು ಸರ್ಕಾರ ಭಾವಿಸುತ್ತಿದ್ದರೆ ಅಥವಾ ದೂರುತ್ತಿದ್ದರೆ ಅವುಗಳು ಪ್ರಸಾರ ಮಾಡುವ ಪ್ರಚೋದಕ ದೃಶ್ಯಗಳ ಮೇಲೆ ಗಲಭೆಯಾದ ಮೇಲೆ ಹಾಕಿದ ನಿರ್ಬಂಧವನ್ನು ಮೊದಲೇ ಹಾಕಬಹುದಿತ್ತಲ್ಲ? ಕಾವೇರಿ ಕಣಿವೆಗೆ ಸೇರದ ಹೈದರಾಬಾದ್‌ ಪೊಲೀಸ್‌  ಕಮಿಷನರ್‌ ಇಂಥ ಪ್ರಚೋದಕ ದೃಶ್ಯಗಳ ಪ್ರಸಾರದ ವಿರುದ್ಧ ನಿರ್ಬಂಧ ವಿಧಿಸಬಹುದಾದರೆ ನಮ್ಮ ಪೊಲೀಸ್‌ ಕಮಿಷನರ್‌ಗೆ ಅದು ಏಕೆ ಸಾಧ್ಯವಾಗಲಿಲ್ಲ?ಬಂದ್‌ ಮಾಡಿ, ಗಲಭೆ ಮಾಡಿ, ನೆರೆಯ ರಾಜ್ಯಗಳ ವಾಹನಗಳನ್ನು ಸುಟ್ಟು ನಾವೇನು ಹೀರೊಗಳು ಆಗಿಲ್ಲ. ಹೀರೊಗಳು ಆಗಿದ್ದರೆ ಅಮೆರಿಕ ಅಧ್ಯಕ್ಷರು ತಮ್ಮ ಪ್ರಜೆಗಳಿಗೆ ‘ಬೆಂಗಳೂರಿನಲ್ಲಿ ಕಾಳಜಿ ವಹಿಸಿ’ ಎಂದು ಎಚ್ಚರಿಸುತ್ತ ಇರಲಿಲ್ಲ. ಈಗ ಇರುವ ಬೆಂಗಳೂರಿನ ವರ್ಚಸ್ಸು ಇಪ್ಪತ್ತು ವರ್ಷಗಳ ಹಿಂದೆ ಇರಲಿಲ್ಲ. ಆ ವರ್ಚಸ್ಸು ಸರ್ಕಾರ ಸಂಪಾದಿಸಿದ್ದು ಅಥವಾ ಗಳಿಸಿ ಕೊಟ್ಟುದೂ ಅಲ್ಲ. ಹಗಲು ರಾತ್ರಿಯೆನ್ನದೆ ಕಷ್ಟಪಟ್ಟು ಕೆಲಸ ಮಾಡುವ ಉದ್ಯಮಿಗಳು ಅದನ್ನು ಸಂಪಾದಿಸಿದ್ದು; ಹೊತ್ತು ಗೊತ್ತು ಇಲ್ಲದೆ ದುಡಿಯುವ, ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಯುವಕ–ಯುವತಿಯರು ಗಳಿಸಿ ಕೊಟ್ಟುದು. ರಾಜ್ಯದ ಒಟ್ಟು ತೆರಿಗೆ ಆದಾಯದ ಶೇಕಡ 65ರಷ್ಟು ಹಣ ಬೆಂಗಳೂರಿನಿಂದ ಬರುತ್ತಿದೆ ಎಂಬುದನ್ನು ನಾವು ಹೇಗೆ ಮರೆಯುವುದು?ಈಗಲೂ ನಮ್ಮ ಸಾರಿಗೆ ಬಸ್ಸುಗಳು ನೆರೆಯ ರಾಜ್ಯಕ್ಕೆ ಸಂಚರಿಸುತ್ತಿಲ್ಲ. ಅದರಿಂದ ಯಾರಿಗೆ ನಷ್ಟ? ಬಂದ್‌ ದಿನ ಮೆಟ್ರೊ ಸಂಚಾರ ನಿಲ್ಲಿಸಲು ಸರ್ಕಾರ ಅಷ್ಟೇಕೆ ತರಾತುರಿ ಮಾಡಿತು? ಒಂದಿಷ್ಟು ಪೊಲೀಸ್ ಬಂದೋಬಸ್ತ್ ಹಾಕಿದ್ದರೆ ಮೆಟ್ರೊ ಓಡಿಸಲು ಆಗುತ್ತಿರಲಿಲ್ಲವೇ? ರಸ್ತೆಯ ಎಷ್ಟೋ ಎತ್ತರದ ಮೇಲೆ ಸಂಚರಿಸುವ ಮೆಟ್ರೊ ರೈಲಿಗೆ ಗಲಭೆಕೋರರು ಕಲ್ಲು ಬೀಸಲು ಆಗುತ್ತಿತ್ತೇ?ಗಲಭೆಗಳಿಂದ ಬರೀ ಅಮಾಯಕರ ಖಾಸಗಿ ಆಸ್ತಿಗೆ ಮಾತ್ರ ನಷ್ಟವಾಗುವುದಿಲ್ಲ. ಸರ್ಕಾರಕ್ಕೂ ನಷ್ಟವಾಗುತ್ತದೆ. ಜಯಲಲಿತಾ ಅವರು ಕೆಲವು ವರ್ಷಗಳ ಹಿಂದೆ ನೀರಿನ ಕೊರತೆಯಿಂದ ನಷ್ಟಕ್ಕೆ ಒಳಗಾದ ಅಲ್ಲಿನ ಬೆಳೆಗಾರರಿಗೆ ಪರಿಹಾರ ಕೊಟ್ಟಂತೆ ರಾಜ್ಯ ಸರ್ಕಾರವೂ ಮಾಡಬಹುದಿತ್ತು. ‘ಈ ಸಾರಿ ಮಳೆ ಸರಿಯಾಗಿ ಆಗಿಲ್ಲ. ಬೆಳೆದ ಬೆಳೆಗೆ ನೀರು ಬಿಡಲೂ ಆಗುತ್ತಿಲ್ಲ. ನಿಮಗೆ ಆಗಿರುವ ನಷ್ಟವನ್ನು ಭಾಗಶಃ ಆದರೂ ತುಂಬಿಕೊಡುತ್ತೇವೆ’ ಎಂದು ಸರ್ಕಾರ ಹೇಳಿದ್ದರೆ ಅದರಿಂದ ರೈತರ ವಿಶ್ವಾಸವನ್ನು ಗಳಿಸಬಹುದಿತ್ತು ಮತ್ತು ಅವರ ಸಂಕಷ್ಟವನ್ನು ಕೊಂಚವಾದರೂ ದೂರ ಮಾಡಿದಂತೆ ಆಗುತ್ತಿತ್ತು. ಸದ್ಯಕ್ಕೆ ಆ ಸೂಚನೆಯೂ ಕಾಣುತ್ತಿಲ್ಲ... ಮನಸ್ಸು ಮಾಡಿದರೆ ಸರ್ಕಾರ ಏನೆಲ್ಲ ಮಾಡಬಹುದಿತ್ತು? ದೂರದೃಷ್ಟಿಯಿಲ್ಲದ ಆಡಳಿತದಿಂದ ನಾವು ಹೀಗೆಲ್ಲ ನಿರೀಕ್ಷೆ ಮಾಡುವುದೇ ತಪ್ಪೇನೋ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry