ನೀರು ಹಂಚಿಕೆಯ ಆರ್ಥಿಕ ಆಯಾಮ

7
ಆರ್ಥಿಕ ವೆಚ್ಚ ಪರಿಗಣಿಸದೇ ನೈಸರ್ಗಿಕ ಸಂಪನ್ಮೂಲ ಬಳಸುತ್ತಿರುವುದೇ ನದಿ ನೀರು ಹಂಚಿಕೆ ವಿವಾದದ ಕೇಂದ್ರಬಿಂದು

ನೀರು ಹಂಚಿಕೆಯ ಆರ್ಥಿಕ ಆಯಾಮ

Published:
Updated:
ನೀರು ಹಂಚಿಕೆಯ ಆರ್ಥಿಕ ಆಯಾಮ

ಕಾವೇರಿ  ನದಿ ನೀರು ಹಂಚಿಕೆ ವಿವಾದವು ದಕ್ಷಿಣ ಭಾರತದಲ್ಲಿ ಅಂತರರಾಜ್ಯ ಬಾಂಧವ್ಯದ ಮೇಲೆ ತೂಗುಕತ್ತಿಯ ಬೆದರಿಕೆ ಒಡ್ಡಿದೆ. ಕೇರಳ ಮತ್ತು ಪುದುಚೇರಿಗಳೂ ಈ ನದಿ ನೀರು ಬಳಸುತ್ತಿದ್ದರೂ, ನದಿಯ ಮೇಲ್ಭಾಗದಲ್ಲಿ ಇರುವ ಕರ್ನಾಟಕ ಮತ್ತು  ಕೆಳಭಾಗದಲ್ಲಿ ಇರುವ ಅತಿದೊಡ್ಡ ಬಳಕೆದಾರ ರಾಜ್ಯವಾಗಿರುವ ತಮಿಳುನಾಡು  ತೀವ್ರವಾಗಿ ಬಾಧಿತಗೊಂಡಿವೆ.ಕಾವೇರಿ ನದಿ ನೀರು ವಿವಾದ ನ್ಯಾಯಮಂಡಳಿಯು 16 ವರ್ಷಗಳ ವಿಚಾರಣೆ ನಂತರ 2007ರಲ್ಲಿ ನೀರು ಹಂಚಿಕೊಳ್ಳುವ ಬಗ್ಗೆ ನೀಡಿದ ಮಹತ್ವದ ತೀರ್ಪು,  ನೀರು ಬಳಕೆದಾರ ರಾಜ್ಯಗಳ ಮಧ್ಯೆ ಒಮ್ಮತ ಮೂಡಿಸುವಲ್ಲಿ ವಿಫಲವಾಗಿದೆ.ಅಲ್ಲಿಂದಾಚೆಗೆ ನೀರು ಹಂಚಿಕೆ ವ್ಯವಸ್ಥೆ ಬಗೆಗಿನ ಅತೃಪ್ತಿ ಹೆಚ್ಚುತ್ತಲೇ ಹೋಯಿತು. ಮುಂಗಾರು ಮಳೆ ಕೈಕೊಟ್ಟಾಗ, ಬರ ಪರಿಸ್ಥಿತಿ ಉದ್ಭವವಾಗುವ ಭೀತಿ ಎದುರಾದಾಗ ಪರಿಸ್ಥಿತಿಯು ವಿಷಮಗೊಳ್ಳತೊಡಗುತ್ತದೆ.ಅಂತರ್ಜಲ ಸಂಪನ್ಮೂಲದ ಕಳಪೆ ನಿರ್ವಹಣೆಯು  ಭವಿಷ್ಯದಲ್ಲಿ ಪರಿಸ್ಥಿತಿಯನ್ನು  ಇನ್ನಷ್ಟು ಕಳವಳಕಾರಿಯನ್ನಾಗಿ ಮಾಡಲಿದೆ ಎನ್ನುವ ಭಾವನೆ ಮೂಡಿದೆ. 

ಆರ್ಥಿಕ ವೆಚ್ಚ ಪರಿಗಣಿಸದೇ ನೈಸರ್ಗಿಕ ಸಂಪನ್ಮೂಲಗಳನ್ನು   ಬಳಸುತ್ತಿರುವುದೇ ಸದ್ಯದ ಕಾವೇರಿ ನದಿ ನೀರು ಹಂಚಿಕೆಯ ವಿವಾದದ ಕೇಂದ್ರಬಿಂದುವಾಗಿದೆ. ಇದೇ ಕಾರಣದಿಂದಾಗಿ ನೀರನ್ನು ಅದಕ್ಷ ಮತ್ತು ವ್ಯರ್ಥವಾಗಿ ಪೋಲಾಗುವ ರೀತಿಯಲ್ಲಿ ಬಳಸಲಾಗುತ್ತಿದೆ.ಸೂಕ್ತವಲ್ಲದ ಭೂಮಿಯಲ್ಲಿ ನೀರು ಅತಿಯಾಗಿ ಬಳಕೆಯಾಗುವ ಬೆಳೆ ಬೆಳೆಯಲಾಗುತ್ತಿದೆ. ಬೆಂಗಳೂರು ಸೇರಿದಂತೆ ಇತರ ನಗರಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.  ಕಾವೇರಿ ನೀರನ್ನು ಕಾರುಗಳನ್ನು ತೊಳೆಯಲೂ ಬಳಸಲಾಗುತ್ತಿದೆ. ನೀರಿನ ಈ ಎಲ್ಲ ಬಳಕೆಗಳಲ್ಲಿ ನೀರು ಉಚಿತವಾಗಿ ದೊರೆಯುತ್ತಿದೆ ಎಂದೇ ಭಾವಿಸಿ ಪೋಲು ಮಾಡಲಾಗುತ್ತಿದೆ.ಹೀಗಾಗಿ ಯಾರನ್ನೂ ತೃಪ್ತಿಪಡಿಸಲಾಗದಷ್ಟು ನೀರಿಗೆ ಬೇಡಿಕೆ ಕಂಡು ಬರುತ್ತಿದೆ. ಕರ್ನಾಟಕ ಮತ್ತು ತಮಿಳುನಾಡಿನ ಜನರಷ್ಟೇ ‘ಸಬ್ಸಿಡಿ’ ರೂಪದಲ್ಲಿ ದೊರೆಯುವ ಕಾವೇರಿ ನೀರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದೂ  ಇದರರ್ಥವಲ್ಲ.ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳು ನೀರಿನ ವೆಚ್ಚವನ್ನೇ ಒಳಗೊಂಡಿರುವುದಿಲ್ಲ. ದೇಶದಾದ್ಯಂತ ಇರುವ ಗ್ರಾಹಕರು ಇದರ ಪರೋಕ್ಷ ಪ್ರಯೋಜನ ಪಡೆಯುತ್ತಿದ್ದಾರೆ.ನದಿಯಿಂದ ಪಡೆಯುವ ನೀರಿಗೆ ಸೂಕ್ತ ಬೆಲೆ ನಿಗದಿ ಮಾಡುವವರೆಗೆ  ಈ ವಿವಾದಕ್ಕೆ ಸರ್ವಸಮ್ಮತ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಇಲ್ಲ. ಕಾವೇರಿ ನದಿ ನೀರು ಹಂಚಿಕೆ ನ್ಯಾಯಮಂಡಳಿಯ (ಸಿಡಬ್ಲ್ಯುಡಿಟಿ) ಐತೀರ್ಪು,  ನೀರು ಹಂಚಿಕೆ ವಿವಾದವನ್ನು ತೃಪ್ತಿದಾಯಕವಾಗಿ ಇತ್ಯರ್ಥಪಡಿಸಿಲ್ಲ. ತುಂಬ ಸೂಕ್ಷ್ಮ ಸ್ವರೂಪದ ಸಮಸ್ಯೆಗೆ  ಜಡ ಸ್ವರೂಪದ ತೀರ್ಪು ನೀಡಲಾಗಿದೆ.ರಾಜ್ಯಗಳು ಬಳಸುವ ನೀರಿನ ಪ್ರಮಾಣವನ್ನು ನಿರ್ದಿಷ್ಟವಾಗಿ ನಿಗದಿ ಮಾಡಲಾಗಿದೆಯಷ್ಟೆ. ಆದರೆ, ಕಾಲ ಗತಿಸಿದಂತೆ ನದಿ ನೀರಿನ ಹರಿವಿನ ಪ್ರಮಾಣ ಮತ್ತು ಬಳಕೆ ವಿಧಾನವು ಸಾಕಷ್ಟು ಬದಲಾವಣೆ  ಕಂಡಿರುವುದನ್ನು ಲೆಕ್ಕಕ್ಕೇ ತೆಗೆದುಕೊಂಡಿಲ್ಲ. ಜೊತೆಗೆ,  ನೀರನ್ನು ದಕ್ಷ ರೀತಿಯಲ್ಲಿ, ಸುಸ್ಥಿರವಾಗಿ ಮತ್ತು ನ್ಯಾಯೋಚಿತವಾಗಿ ಬಳಸುವುದಕ್ಕೆ ಸಿಡಬ್ಲ್ಯುಡಿಟಿ ಐತೀರ್ಪು ಯಾವುದೇ ಉತ್ತೇಜನಾ  ಕ್ರಮಗಳನ್ನೂ ಒಳಗೊಂಡಿಲ್ಲ.ಪ್ರಧಾನಿ ಅಧ್ಯಕ್ಷತೆಯ ಮತ್ತು ನಾಲ್ವರು ಮುಖ್ಯಮಂತ್ರಿಗಳು ಸದಸ್ಯರಾಗಿರುವ ಕಾವೇರಿ ನದಿ ಪ್ರಾಧಿಕಾರವು (ಸಿಆರ್‌ಎ) ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಲು ಇದು ಸಕಾಲವಾಗಿದೆ. ರೈತರ ಜೀವನಾಧಾರ ಮತ್ತು ನೀರು ಬಳಸುವ ಇತರರ ಹಿತಾಸಕ್ತಿ ರಕ್ಷಿಸಲು, ಬೆಲೆ  ವ್ಯವಸ್ಥೆ  ಹಾಗೂ ಮಾರುಕಟ್ಟೆ ಒಳಗೊಂಡ ಕಾವೇರಿ ನದಿ ಜೀವನೋಪಾಯ ರಕ್ಷಣಾ ವ್ಯವಸ್ಥೆ ರೂಪಿಸಲು ಕಾರ್ಯೋನ್ಮುಖವಾಗಬೇಕಾಗಿದೆ.ಪ್ರತಿಯೊಂದು ರಾಜ್ಯಕ್ಕೆ   ನೀರಿನ ಬಳಕೆ ಪ್ರಮಾಣದ ಮೀಸಲು ನಿಗದಿ ಮಾಡುವುದರ ಜತೆಗೆ, ಹೆಚ್ಚುವರಿ ನೀರು  ಬೇಕಾದರೆ ಈ ಉದ್ದೇಶಕ್ಕೆ ಸ್ಥಾಪಿಸುವ ನದಿ ಸಂಪನ್ಮೂಲ ನಿಧಿಯಿಂದ ಪಡೆಯುವ ವ್ಯವಸ್ಥೆ ರೂಪಿಸಬೇಕಾಗಿದೆ.  ರಾಜ್ಯಗಳಿಗೆ ಹಂಚಿಕೆಯಾಗುವ ಮೂಲ  ಮೀಸಲು ಪ್ರಮಾಣದಲ್ಲಿನ ನೀರನ್ನು ರಾಜ್ಯಗಳು ಹಣಕ್ಕೆ ಪರಸ್ಪರ ಹಂಚಿಕೆ ಮಾಡಿಕೊಳ್ಳಲು ಈ ವ್ಯವಸ್ಥೆಯಲ್ಲಿ ಅವಕಾಶ ಇರಬೇಕು.  ಇದರಿಂದಾಗಿ ರಾಜ್ಯಗಳು ತಮ್ಮ ನೀರಾವರಿ ಪ್ರದೇಶ ವಿಸ್ತರಿಸಲು ಮತ್ತು ಕೃಷಿ ವಲಯದ ಸುಧಾರಣೆಗೆ ಹೆಚ್ಚುವರಿ ಹಣಕಾಸು ಸಂಪನ್ಮೂಲ ಸಂಗ್ರಹಿಸಲು ಸಾಧ್ಯವಾಗಲಿದೆ.ಮಳೆ ಕೈಕೊಟ್ಟು ಬರ ಪರಿಸ್ಥಿತಿ ತಲೆದೋರಿದಾಗ ಮೂಲ ಮೀಸಲು ಹಂಚಿಕೆ ಪ್ರಮಾಣ ಮೀರಿ  ನೀರಿನ ಕೊರತೆ ಎದುರಿಸುವ ರಾಜ್ಯಗಳಿಗೆ ಪರಿಹಾರ ಒದಗಿಸುವ ಸೂತ್ರ ಇದರಲ್ಲಿ ಇರಬೇಕು.ನೀರು ಹಂಚಿಕೆಯ ಕೋಟಾಗಿಂತ ಹೆಚ್ಚಿನ ನೀರು ಬಯಸುವ ರಾಜ್ಯಗಳು ಹರಾಜಿನಲ್ಲಿ ನೀರು ಖರೀದಿಸಬೇಕು. ಈ ಉದ್ದೇಶಕ್ಕೆ ಪ್ರತಿಯೊಂದು ರಾಜ್ಯವು ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ, ಸಂಬಂಧಿಸಿದ ಮತಕ್ಷೇತ್ರಗಳ ಶಾಸಕರು ಸದಸ್ಯರಾಗಿರುವ ಸಮಿತಿ (ಬಿಡ್ಡಿಂಗ್‌ ಕಮಿಟಿ) ರಚಿಸಬೇಕು. ಈ ಮೂಲಕ ಪ್ರತಿಯೊಂದು ರಾಜ್ಯ ತನಗೆ ಬೇಕಾದ ನೀರಿಗೆ ಯಾವ ಮೊತ್ತ ಪಾವತಿಸಲು ತನ್ನಿಂದ ಸಾಧ್ಯವಿದೆ ಎನ್ನುವುದನ್ನು ಬಹಿರಂಗಪಡಿಸಬೇಕು.ನೀರಿಗೆ ಪ್ರತಿಯಾಗಿ  ಪರಿಹಾರ ಮೊತ್ತ ಪಡೆಯಲು ಮುಂದಾಗುವ ರಾಜ್ಯವು ಆ ಮೊತ್ತವನ್ನು ಖಜಾನೆಗೆ ಭರ್ತಿ ಮಾಡಬೇಕು. ಈ ಹೆಚ್ಚುವರಿ ಹಣವನ್ನು ರಾಜ್ಯ ಸರ್ಕಾರಗಳು ತನ್ನ ಆದ್ಯತೆಗಳಿಗೆ ಅನುಗುಣವಾಗಿ ವೆಚ್ಚ ಮಾಡಬಹುದಾಗಿದೆ. ರೈತರಿಗೆ ನೇರವಾಗಿ ಪರಿಹಾರ ಧನ ವಿತರಿಸಲು, ಜಲ ಸಂಪನ್ಮೂಲ ನಿರ್ವಹಣಾ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅಥವಾ ಕೃಷಿ ಮೇಲೆ ಹೆಚ್ಚು ಅವಲಂಬನೆಯಾಗದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಬಹುದು.   ಒಕ್ಕೂಟ ವ್ಯವಸ್ಥೆ ಮತ್ತು  ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅನುಗುಣವಾಗಿ ಈ ಹೆಚ್ಚುವರಿ ಹಣವನ್ನು ವೆಚ್ಚ ಮಾಡುವುದನ್ನು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡಬೇಕು.ನದಿ ಸಂಪನ್ಮೂಲ ನಿಧಿಯನ್ನು ಸಮರ್ಪಕವಾಗಿ ನಿಭಾಯಿಸುವುದು ಈ ಯೋಜನೆಯಲ್ಲಿ ತುಂಬ ಮಹತ್ವದ ಸಂಗತಿಯಾಗಿರುತ್ತದೆ.  ನಿಧಿಯಲ್ಲಿ ಸಾಕಷ್ಟು ಬಂಡವಾಳ ಇರಬೇಕು, ನಿಧಿಯನ್ನು ವೃತ್ತಿಪರತೆಯಿಂದ ನಿರ್ವಹಿಸಬೇಕು ಮತ್ತು ಜಲ ಸಂಪನ್ಮೂಲವನ್ನು ಸ್ವತಂತ್ರವಾಗಿ ನಿರ್ವಹಣೆ ಮಾಡಬೇಕು.ಈ ನಿಧಿಯಲ್ಲಿ ಕೇಂದ್ರ ಸರ್ಕಾರ ಮತ್ತು  ನಾಲ್ಕು ರಾಜ್ಯಗಳು ಜಂಟಿ ಪಾಲುದಾರಿಕೆ ಹೊಂದಿರಬೇಕು. ಕೇಂದ್ರ ಸರ್ಕಾರದ ಪಾಲು ಗರಿಷ್ಠ ಪ್ರಮಾಣದಲ್ಲಿ ಇರಬೇಕು.  ಈ ನಿಧಿಗೆ ಕೇಂದ್ರ ಸರ್ಕಾರ ಮತ್ತು  ವಿಶ್ವಬ್ಯಾಂಕ್‌ನಂತಹ ಜಾಗತಿಕ ಹಣಕಾಸು ಸಂಸ್ಥೆಗಳಿಂದ ಖಾತರಿ ಇರಬೇಕು. ನಷ್ಟ ಸಂಭವಿಸಿದರೆ ಅದನ್ನು ಭರ್ತಿ ಮಾಡಿಕೊಳ್ಳುವಂತಹ ವ್ಯವಸ್ಥೆ ಒಳಗೊಂಡಿರಬೇಕು. ನದಿ ಪಾತ್ರದ ಆರ್ಥಿಕತೆಯು ಗಂಡಾಂತರಕ್ಕೆ  ಸಿಲುಕುವುದರ ವಿರುದ್ಧ ರಕ್ಷಣೆ ಪಡೆಯಲು ಈ  ನಿಧಿಯನ್ನು ಹೂಡಿಕೆ ಉದ್ದೇಶಕ್ಕೆ ಬಳಸಲೂ  ಅವಕಾಶ ಇರಬೇಕು.2013ರಲ್ಲಿ ನೀರು ಬಿಡಲಿಲ್ಲ ಎನ್ನುವ ಕಾರಣಕ್ಕೆ ಕರ್ನಾಟಕದಿಂದ ತನಗೆ ಪರಿಹಾರ ಕೊಡಿಸಬೇಕು ಎಂದು ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ನದಿಯ ಕೆಳಭಾಗದಲ್ಲಿ ಇರುವ ತನಗೆ ಕರ್ನಾಟಕದಿಂದ ಪರಿಹಾರ ಪಡೆಯುವ ಹಕ್ಕು ಇದೆ ಎಂದು ಪ್ರತಿಪಾದಿಸಿತ್ತು.ಹೀಗೆ ವಾದಿಸುವ ಮೂಲಕ, ತಮಿಳುನಾಡು ಸರ್ಕಾರವು ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಹಣಕಾಸು ವೆಚ್ಚವೂ ಒಳಗೊಂಡಿರುವುದನ್ನು ಪರೋಕ್ಷವಾಗಿ ತಾತ್ವಿಕ ನೆಲೆಯಲ್ಲಿ ಒಪ್ಪಿಕೊಂಡಂತೆ ಆಗಿತ್ತು.ವಾದ, ಪ್ರತಿವಾದಗಳ ಮೂಲಕ  ನ್ಯಾಯಾಂಗದ ಮೇಲೆ ಈಗಾಗಲೇ ಹೆಚ್ಚಿನ ಹೊರೆ ಬಿದ್ದಿದೆ.  ಇನ್ನಷ್ಟು ದ್ವೇಷ ಭಾವನೆಗಳನ್ನು ಹೇರುವುದರ ಬದಲಿಗೆ  ನದಿ ನೀರು ಹಂಚಿಕೆಗೆ  ಸಾಂಸ್ಥೀಕರಣ ವ್ಯವಸ್ಥೆ ಯೊಂದನ್ನು ರೂಪಿಸುವುದು ಒಳಿತು.ಈ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಗಳು ತಮಗೆ ಬೇಕಾದ ನೀರನ್ನು ಮಾರುಕಟ್ಟೆಯಿಂದಲೇ ಪಡೆಯಬೇಕು. ಬಹು ಅಮೂಲ್ಯವಾದ ಜಲ ಸಂಪನ್ಮೂಲವನ್ನು ಪೋಲಾಗದಂತೆ ಸುಸ್ಥಿರವಾಗಿ ಉಪಯೋಗಿಸುವವರಿಗೆ ಉತ್ತೇಜನ ನೀಡುವ ವ್ಯವಸ್ಥೆ ಇದರಲ್ಲಿ ಇರಬೇಕು. ಕಾವೇರಿ ನೀರನ್ನೇ ಅವಲಂಬಿಸಿದವರ ಜೀವನೋಪಾಯಕ್ಕೆ ಯಾವುದೇ ಧಕ್ಕೆ ಒದಗದಂತೆಯೂ ಈ ಸಾಂಸ್ಥಿಕ ವ್ಯವಸ್ಥೆ  ಜಾಗರೂಕತೆ ವಹಿಸಬೇಕು.ನಮ್ಮ  ಹಿರಿಯರ ತಲೆಮಾರಿನ ಕಾಲಘಟ್ಟದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಬರಿದಾಗುವುದಿಲ್ಲ ಎನ್ನುವ ನಂಬಿಕೆ ಇತ್ತು. ಆದರೆ, ಸದ್ಯದ ವಾಸ್ತವ ಸ್ಥಿತಿ ಗಾಬರಿ ಮೂಡಿಸುವಂತಿದೆ.  ಪರಿಸ್ಥಿತಿಗೆ ತಕ್ಕಂತೆ ನಾವು ಅವುಗಳನ್ನು ಮನುಕುಲದ ಒಳಿತಿಗೆ ಬಳಸಿಕೊಳ್ಳುವ ವ್ಯವಸ್ಥೆ ರೂಪಿಸಬೇಕಾಗಿದೆ.ನದಿ ನೀರು ಹಂಚಿಕೆಯ ಹಕ್ಕುಗಳನ್ನು  ವ್ಯಾಪಾರ ಉದ್ದೇಶಕ್ಕೆ ಬಳಸಿಕೊಂಡ ಕೆಲ ನಿದರ್ಶನಗಳು ಇಲ್ಲಿವೆ. ಆಸ್ಟ್ರೇಲಿಯಾ, ನೈರುತ್ಯ ಅಮೆರಿಕ ಮತ್ತು ದಕ್ಷಿಣ ಅಮೆರಿಕದ ಕೆಲ ದೇಶಗಳಲ್ಲಿ  ನೀರಿಗೆ ಸಂಬಂಧಿಸಿದ ಹಕ್ಕುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ರೈತರು  ಮತ್ತು ನಿಗಮಗಳು ಜಲ ಸಂಪನ್ಮೂಲವನ್ನು ನಿರ್ವಹಿಸುವುದರ ಬದಲಿಗೆ, ರಾಜ್ಯ ಸರ್ಕಾರಗಳೇ ನೀರಿನ ವ್ಯಾಪಾರಿಯ ಪಾತ್ರವನ್ನು ನಿಭಾಯಿಸಬೇಕು. ಇದರಿಂದ ನದಿ ನೀರನ್ನು ದಕ್ಷ ರೀತಿಯಲ್ಲಿ ಹಂಚಿಕೆ ಮಾಡಲು ಮತ್ತು ನಿಯಂತ್ರಿಸಲು ಮಾರುಕಟ್ಟೆ ವ್ಯವಸ್ಥೆಯು ನೆರವಾಗುತ್ತದೆ.ಮದ್ರಾಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಡೆವೆಲಪ್‌ಮೆಂಟ್‌ ಸ್ಟಡೀಸ್‌ನ ಸಂಶೋಧಕರೊಬ್ಬರು, ತಮಿಳುನಾಡಿನ ಭವಾನಿ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ನಡೆದ ಪ್ರಯೋಗವನ್ನು ತಮ್ಮ ಅಧ್ಯಯನ ವಿಷಯವನ್ನಾಗಿ ಮಾಡಿಕೊಂಡಿದ್ದರು.ಸಾಂಸ್ಥಿಕ ವ್ಯವಸ್ಥೆಗೆ ಪರ್ಯಾಯವಾಗಿ, ನೀರು ಹಂಚಿಕೆಗೆ ಸಂಬಂಧಿಸಿದ ಹಕ್ಕುಗಳನ್ನು  ವಾಣಿಜ್ಯ ಉದ್ದೇಶಕ್ಕೆ ಬಳಸುವುದರಿಂದ  ನದಿ ನೀರನ್ನು ಹೆಚ್ಚು ದಕ್ಷ ರೀತಿಯಲ್ಲಿ ಹಂಚಿಕೆ ಮಾಡಲು ಸಾಧ್ಯವಾಗಲಿದೆ. ಇದರಿಂದ ಕೃಷಿ ಉತ್ಪಾದನೆಯೂ ಹೆಚ್ಚಲಿದೆ ಎನ್ನುವುದು ಅಧ್ಯಯನದಿಂದ ತಿಳಿದು ಬಂದಿತ್ತು.ರಾಜಕೀಯವಾಗಿ ಸ್ಫೋಟಕ ವಿಷಯವಾಗಿರುವ ನದಿ ನೀರಿನ ಮೇಲಿನ ಹಕ್ಕಿನ ವಿವಾದವನ್ನು  ಭಾವನಾತ್ಮಕ ವಿಷಯಕ್ಕಿಂತ, ಬೆಲೆ ಮತ್ತು ಪರಿಹಾರದ ಆರ್ಥಿಕ ವಿಷಯವನ್ನಾಗಿ ಮಾಡಿ ತಣ್ಣಗಾಗಿಸುವ ಕಾರ್ಯ ಈಗ  ತುರ್ತಾಗಿ ನಡೆಯಬೇಕಾಗಿದೆ.

(ಲೇಖಕ ತಕ್ಷಶಿಲಾ ಸಂಸ್ಥೆಯ ನಿರ್ದೇಶಕ)

editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry