ನೀರು ನಿಲ್ಲಿಸಿ, ಇಲ್ಲವೇ ರಾಜೀನಾಮೆ ನೀಡಿ: ಜಿ. ಮಾದೇಗೌಡ ಆಗ್ರಹ

7
ಮೇಲುಸ್ತುವಾರಿ ಸಮಿತಿ ಆದೇಶ ಖಂಡಿಸಿ ಪ್ರತಿಭಟನೆ, ಕೆಆರ್‌ಎಸ್‌ನಿಂದ ನೀರು ಹರಿವು ನಿಲುಗಡೆ

ನೀರು ನಿಲ್ಲಿಸಿ, ಇಲ್ಲವೇ ರಾಜೀನಾಮೆ ನೀಡಿ: ಜಿ. ಮಾದೇಗೌಡ ಆಗ್ರಹ

Published:
Updated:
ನೀರು ನಿಲ್ಲಿಸಿ, ಇಲ್ಲವೇ ರಾಜೀನಾಮೆ ನೀಡಿ: ಜಿ. ಮಾದೇಗೌಡ ಆಗ್ರಹ

ಮಂಡ್ಯ: ತಮಿಳುನಾಡಿಗೆ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ, ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಆಗ್ರಹಿಸಿದರು.ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯು ಮುಂದಿನ ೧೦ ದಿನಗಳ ಕಾಲ ಪ್ರತಿ ದಿನ ೩ ಸಾವಿರ ಕ್ಯುಸೆಕ್‌ ನೀರು ಬಿಡುವಂತೆ ನೀಡಿರುವ ಆದೇಶಕ್ಕೆ ಪ್ರತಿಕ್ರಿಯಿಸಿದ ಅವರು, ಮಳೆ, ಬೆಳೆ ಬರಿಸು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮರಾಜನಗರದಲ್ಲಿ ದೇವರ ಪ್ರಾರ್ಥನೆ ಮಾಡಲು ಹೋಗಿದ್ದಾರೆ. ಅವರು ಒಂದು ಸಾವಿರ ಟಿಎಂಸಿ ಉತ್ಪತ್ತಿ ಮಾಡಿ ಎಲ್ಲರಿಗೂ ಹಂಚಲಿದ್ದಾರೆ ಎಂದು ವ್ಯಂಗ್ಯವಾಡಿದರು.ಮಂಡ್ಯದ ಜನರನ್ನು ಕಂಡರೆ ಮುಖ್ಯಮಂತ್ರಿ ಅವರು ದ್ವೇಷಿಸುತ್ತಾರೆ. ಹಾಗಾಗಿ ಪ್ರತಿಭಟನೆಗೆ ಗೌರವ ನೀಡುತ್ತಿಲ್ಲ. ಸರ್ಕಾರ ಹೇಳಿದ್ದರಿಂದ ನಾಟಿ ಹಾಕಲಾಗಿದೆ. ಆದ್ದರಿಂದ ಬೆಳೆ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.ತಮಿಳುನಾಡಿಗೆ ನೀರು ನಿಲುಗಡೆ

ಸುಪ್ರೀಂಕೋರ್ಟ್‌ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರವು ಸೋಮವಾರ ಸಂಜೆಯಿಂದ ಕೆಆರ್‌ಎಸ್‌ ಅಣೆಕಟ್ಟೆಯಿಂದ ನೀರು ಹರಿಸುವುದನ್ನು ನಿಲ್ಲಿಸಿದೆ.ಸೆ.೨೦ರ ವರೆಗೆ ಪ್ರತಿ ದಿನ ೧೨ ಸಾವಿರ ಕ್ಯೂಸೆಕ್‌  ನೀರು ಬಿಡಲು ಸೂಚಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಹರಿಸಿರುವ ನೀರು ಮಂಗಳವಾರ ಸಂಜೆಯವರೆಗೂ ಹರಿದುಹೋಗಿ ಬಿಳುಗುಂಡ್ಲು ತಲುಪಲಿದೆ.ಬೆಳಿಗ್ಗೆ 9,495 ಕ್ಯೂಸೆಕ್‌ ನೀರು ಹರಿಸಲಾಗಿದ್ದು, ಈ ಪ್ರಮಾಣವು ಸಂಜೆಯ ವೇಳೆಗೆ 202 ಕ್ಯೂಸೆಕ್‌ಗೆ ಇಳಿದಿದೆ. 6,669 ಕ್ಯೂಸೆಕ್ ನೀರು ಒಳಹರಿವಿದೆ. ನೀರಿನ ಮಟ್ಟವು 84.25 ಅಡಿ ಇದೆ.

ಆದೇಶ ಖಂಡಿಸಿ ಪ್ರತಿಭಟನೆ

ಕಾವೇರಿ ಮೇಲುಸ್ತುವಾರಿ ಸಮಿತಿಯು ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿರುವುದನ್ನು ಖಂಡಿಸಿ ಜಿಲ್ಲೆಯಲ್ಲಿ ಸೋಮವಾರ ಸಂಜೆ ವಿವಿಧೆಡೆ ಪ್ರತಿಭಟನೆ ಮಾಡಲಾಯಿತು.ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, ಕರವೇ, ಕನ್ನಡ ಸೇನೆ ಸೇರಿದಂತೆ ಹಲವು ಸಂಘಟನೆಗಳ ಸದಸ್ಯರು ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರಿನಲ್ಲಿ ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ವಾಹನಗಳ ಸಂಚಾರ ತಡೆದು ಪ್ರತಿಭಟನೆ ಮಾಡಿದರು. ನಂತರ ವಾಹನಗಳ ಸಂಚಾರ ಸುಗಮವಾಗಿದೆ.ಶಾಸಕ ಕೆ.ಟಿ. ಶ್ರೀಕಂಠೇಗೌಡ, ಜಿ.ಪಂ. ಸದಸ್ಯ  ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಸಿದ್ದರಾಮೇಗೌಡ, ಮಂಜುನಾಥ್‌, ಅರವಿಂದ್‌ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry