ಶುಕ್ರವಾರ, ಜೂಲೈ 3, 2020
21 °C
ಸಂಪಾದಕೀಯ

ಉಗ್ರರ ಉಪಟಳ ಅಡಗಿಸಲು ಗಡಿಯಲ್ಲಿ ಕಟ್ಟೆಚ್ಚರ ಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಗ್ರರ ಉಪಟಳ ಅಡಗಿಸಲು ಗಡಿಯಲ್ಲಿ ಕಟ್ಟೆಚ್ಚರ ಬೇಕು

ಕಾಶ್ಮೀರದ ಉತ್ತರ ಭಾಗದ ಉರಿ ಪಟ್ಟಣದ ಬಳಿಯ ಸೇನಾ ಶಿಬಿರದ ಮೇಲೆ ಭಾನುವಾರ ಬೆಳಗಿನ ಜಾವ ಜೈಷ್‌–ಎ –ಮೊಹಮ್ಮದ್‌ ಸಂಘಟನೆಯ ಉಗ್ರರು ನಡೆಸಿದ ದಾಳಿ, ‘ನಾವು ಎಷ್ಟು ಎಚ್ಚರದಿಂದ ಇದ್ದರೂ ಸಾಲದು’ ಎಂಬುದನ್ನು ಮತ್ತೆ ನೆನಪಿಸಿದೆ.ಬರೀ 8 ತಿಂಗಳ ಹಿಂದೆ, ಅಂದರೆ ಜನವರಿ ಆರಂಭದಲ್ಲಿ ಶಸ್ತ್ರಸಜ್ಜಿತ ಉಗ್ರರು ಪಠಾಣ್‌ಕೋಟ್‌ ವಾಯು ನೆಲೆಯ ಮೇಲೆ ಇದೇ ಮಾದರಿಯ ದಾಳಿ ನಡೆಸಿ ಏಳು ಯೋಧರನ್ನು ಬಲಿ ತೆಗೆದುಕೊಂಡಿದ್ದರು.ಇವನ್ನೆಲ್ಲ ನೋಡಿದರೆ, ನಮ್ಮ ಯೋಧರ ಮೇಲೆ ಮತ್ತು ಸೇನಾ ನೆಲೆಗಳ ಮೇಲೆ ಕಣ್ಣಿಟ್ಟಿರುವ ಉಗ್ರರನ್ನು ಸದೆ ಬಡಿಯಲು ಇನ್ನೂ ಹೆಚ್ಚು ಪರಿಣಾಮಕಾರಿ ತಂತ್ರ ಅನುಸರಿಸುವ ಅಗತ್ಯ ಎದ್ದು ಕಾಣುತ್ತದೆ.ಸರ್ಕಾರ ಈಗ ಗಮನ ಹರಿಸಬೇಕಾಗಿರುವುದು ಪಾಕ್‌ ನೆಲದಲ್ಲಿ ತರಬೇತಾದ ಉಗ್ರಗಾಮಿಗಳು ದೇಶದ ಒಳಗೆ ನುಸುಳದಂತೆ ಗಡಿಯಲ್ಲಿ ಭದ್ರತಾ ವ್ಯವಸ್ಥೆ ಬಲಪಡಿಸುವುದರ ಕಡೆಗೆ. ಎರಡೂ ದೇಶಗಳ ನಡುವೆ ಇರುವ 3323 ಕಿ.ಮೀ. ಗಡಿಯ ಪೈಕಿ 1225 ಕಿ.ಮೀ.ನಷ್ಟು ಜಮ್ಮು ಮತ್ತು ಕಾಶ್ಮೀರಕ್ಕೆ ಹೊಂದಿಕೊಂಡಿದೆ.ಇಲ್ಲಿ ಬೇಲಿ ನಿರ್ಮಾಣ ಕಾರ್ಯಕ್ಕೆ ಚುರುಕು ನೀಡಬೇಕು. ಕಣ್ಗಾವಲು ಇಡುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಾಧನಗಳನ್ನು ಅಳವಡಿಸಬೇಕು. ಕೇಂದ್ರ ಗೃಹ ಖಾತೆಯ ಕಾರ್ಯದರ್ಶಿಯಾಗಿದ್ದ ಮಧುಕರ ಗುಪ್ತಾ ನೇತೃತ್ವದ ಉನ್ನತಾಧಿಕಾರ ಸಮಿತಿ ಸಾಕಷ್ಟು ಹಿಂದೆಯೇ ಈ ಬಗ್ಗೆ ವರದಿ ನೀಡಿತ್ತು.ಅದನ್ನು ಆದ್ಯತೆಯ ಮೇಲೆ ಅನುಷ್ಠಾನಕ್ಕೆ ತರಬೇಕು.  ಭದ್ರತಾ ಪಡೆಗಳು ಉಗ್ರರ ದಾಳಿಯ ಗುರಿಯಾಗುವುದನ್ನು ತಪ್ಪಿಸಲು ದೀರ್ಘಾವಧಿಯ ಯೋಜನೆಗಳನ್ನು ರೂಪಿಸುವುದರ ಜತೆಜತೆಗೇ ತಕ್ಷಣವೇ ಫಲಿತಾಂಶ ನೀಡುವ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ‘ಈ ನೀಚ ದಾಳಿಯ ಹಿಂದೆ ಇರುವವರು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವುದಾಗಿ’ ಪ್ರಧಾನಿ ನರೇಂದ್ರ ಮೋದಿ ವಾಗ್ದಾನ ಮಾಡಿದ್ದಾರೆ. ಆ ಮಾತು ಉಳಿಸಿಕೊಳ್ಳುವ, ಉಗ್ರರ ಹುಟ್ಟಡಗಿಸುವ ದೊಡ್ಡ ಹೊಣೆ ಈಗ ಅವರ ಮೇಲಿದೆ.ರಕ್ಷಣಾ ಖಾತೆಯ ಮಾಜಿ ಸಚಿವ ಎ.ಕೆ. ಆಂಟನಿ ಅವರನ್ನು ಬಿಟ್ಟರೆ ಪ್ರಮುಖ  ರಾಜಕೀಯ ನಾಯಕರು ಈ ಘಟನೆಗೆ ಸಂಬಂಧಪಟ್ಟಂತೆ ಕೆಸರೆರಚಾಟಕ್ಕೆ ಇಳಿದಿಲ್ಲ. ಇದು ಒಳ್ಳೆಯ ಲಕ್ಷಣ.ಆಂಟನಿ ಮಾತ್ರ ‘ಪಠಾಣ್‌ಕೋಟ್‌ ದಾಳಿಯಿಂದ ಸರ್ಕಾರ ಪಾಠ ಕಲಿತಿಲ್ಲ ಎಂಬುದನ್ನು ಉರಿ ದಾಳಿ ತೋರಿಸಿಕೊಟ್ಟಿದೆ’ ಎಂದು ಹೇಳಿದ್ದಾರೆ. ಇದು ಸಂದರ್ಭೋಚಿತ ಅಲ್ಲ ಎನಿಸಬಹುದು. ಆದರೆ ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಂತೂ ಇದೆ.  ಏಕೆಂದರೆ ಎರಡು ತಿಂಗಳ ಹಿಂದೆ ಹಿಜಬುಲ್‌  ಉಗ್ರ ಬುರ್ಹಾನ್‌ ವಾನಿಯ ಹತ್ಯೆ ಬೆನ್ನಲ್ಲೇ, ಲಷ್ಕರ್‌ ಎ ತಯಬಾ ಮತ್ತು ಹಿಜಬುಲ್‌ ಮುಜಾಹಿದೀನ್‌ ಸಂಘಟನೆಗಳ ನಾಯಕರು ಸೇಡು ತೀರಿಸಿಕೊಳ್ಳುವ ಬೆದರಿಕೆ ಹಾಕಿದ್ದರು.ಕಾಶ್ಮೀರ ಮತ್ತು ದೇಶದ ಇತರೆಡೆಯ ಸೇನಾ ನೆಲೆಗಳ ಮೇಲೆ ಭಯೋತ್ಪಾದನಾ ದಾಳಿ ಮಾಡುವ ಸೂಚನೆ ಕೊಟ್ಟಿದ್ದರು. ಇಷ್ಟಿದ್ದರೂ ದೊಡ್ಡ ಪ್ರಮಾಣದ ದಾಳಿ ನಡೆದಿರುವುದರಿಂದ ಸೇನಾಧಿಕಾರಿಗಳು ಮತ್ತು ಸರ್ಕಾರದ ಹೊಣೆ ಹೊತ್ತವರು ಆತ್ಮಾವಲೋಕನ ಮಾಡಿಕೊಳ್ಳುವುದು ಉಚಿತ.ಉರಿ ನೆಲೆ ಮೇಲೆ ದಾಳಿ ನಡೆಸಿದ ಎಲ್ಲ ನಾಲ್ವರು ದಾಳಿಕೋರರನ್ನು ಸೇನೆ ಕೊಂದು ಹಾಕಿದೆ. ಮೃತ ಉಗ್ರರಿಗೆ ಪಾಕಿಸ್ತಾನದ ಬೆಂಬಲ ಇರುವುದನ್ನು ರುಜುವಾತು ಮಾಡುವ ಪುರಾವೆಗಳನ್ನು ಸಂಗ್ರಹಿಸಿದೆ. ಉಗ್ರರ ಬಳಿ ಸಿಕ್ಕ ಆಧುನಿಕ ಶಸ್ತ್ರಾಸ್ತ್ರಗಳ ಮೇಲೆ ಪಾಕಿಸ್ತಾನದ ಗುರುತುಗಳಿವೆ.  ಅವರು ನಡೆಸಿದ ವ್ಯವಸ್ಥಿತ ದಾಳಿ ಅವರಿಗೆ ಪರಿಣತರಿಂದ ತರಬೇತಿ ಸಿಕ್ಕಿರುವುದನ್ನು ದೃಢಪಡಿಸುತ್ತದೆ.

ಉರಿ ಘಟನೆ ಸಹಜವಾಗಿಯೇ ಎಲ್ಲೆಡೆ ಆಕ್ರೋಶ ಹುಟ್ಟಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಕೋಪತಾಪ ವ್ಯಕ್ತವಾಗಿದೆ. ಅಮೆರಿಕ, ಫ್ರಾನ್‌್ಸ, ಬ್ರಿಟನ್‌ ಸೇರಿದಂತೆ ಅನೇಕ ದೇಶಗಳಷ್ಟೇ ಅಲ್ಲದೆ  ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್‌ ಕೂಡ ತೀವ್ರವಾಗಿ ಖಂಡಿಸಿದ್ದಾರೆ. ದಾಳಿಯ ಹಿಂದೆ ಇರುವವರಿಗೆ  ಶಿಕ್ಷೆಯಾಗಲಿದೆ ಎಂದು ಮೂನ್‌ ವ್ಯಕ್ತಪಡಿಸಿರುವ ವಿಶ್ವಾಸ,  ‘ಭಯೋತ್ಪಾದನೆ ವಿರುದ್ಧ ನಮ್ಮ ಹೋರಾಟಕ್ಕೆ ಮತ್ತಷ್ಟು ನೈತಿಕ ಬಲ’ ತುಂಬಿದೆ.ತಾನೇ ಸ್ವತಃ ಭಯೋತ್ಪಾದಕರ ಹಾವಳಿಯಿಂದ ತತ್ತರಿಸುತ್ತಿದ್ದರೂ ಉಗ್ರರಿಗೆ ತರಬೇತಿ, ಶಸ್ತ್ರಾಸ್ತ್ರಗಳನ್ನು ನೀಡಿ ಭಾರತದೊಳಗೆ ನುಗ್ಗಿಸುವ ಹೀನ ಪ್ರಯತ್ನಗಳನ್ನು ಪಾಕಿಸ್ತಾನ ನಿಲ್ಲಿಸಿಲ್ಲ. ಅಂತರರಾಷ್ಟ್ರೀಯ ಎಚ್ಚರಿಕೆ, ಟೀಕೆಗಳಿಗೂ ಮಣಿಯುತ್ತಿಲ್ಲ.ಮುಂಬೈ ದಾಳಿಯೇ ಆಗಿರಬಹುದು, ಪಠಾಣ್‌ಕೋಟ್‌ ದಾಳಿಯೇ ಆಗಿರಬಹುದು ಅಥವಾ ಈಗಿನ ಉರಿ ಘಟನೆಯೇ ಇರಬಹುದು; ತನ್ನ ಕೈವಾಡ ಇಲ್ಲ ಎಂಬ ಹಳೆಯ ರಾಗವನ್ನೇ ಅದು ಪುನರುಚ್ಚರಿಸುತ್ತಿದೆ.ಈಗಾಗಲೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಚೀನಾ ಹೊರತುಪಡಿಸಿ ಬೇರೆ ದೇಶಗಳಿಂದ ಅದಕ್ಕೆ ಬೆಂಬಲ ಸಿಗುತ್ತಿಲ್ಲ. ಈ ಅವಕಾಶವನ್ನು ಬಳಸಿಕೊಂಡು ರಾಜತಾಂತ್ರಿಕವಾಗಿ ಅದರ ಮೇಲೆ ಒತ್ತಡ ಹೆಚ್ಚಿಸಬೇಕು. ಇತ್ತ ಗಡಿ ಕಾವಲನ್ನೂ ಬಲಗೊಳಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.