3 ಸಾವಿರ ಕ್ಯುಸೆಕ್ ನೀರು ಬಿಡಿ

7
ಇನ್ನೂ ಹತ್ತು ದಿನ ನೀರು ಹರಿಸಲು ಕಾವೇರಿ ಮೇಲುಸ್ತುವಾರಿ ಸಮಿತಿ ಸೂಚನೆ

3 ಸಾವಿರ ಕ್ಯುಸೆಕ್ ನೀರು ಬಿಡಿ

Published:
Updated:
3 ಸಾವಿರ ಕ್ಯುಸೆಕ್ ನೀರು ಬಿಡಿ

ನವದೆಹಲಿ: ನಿತ್ಯವೂ 3,000 ಕ್ಯುಸೆಕ್‌ ನೀರನ್ನು ತಮಿಳುನಾಡಿಗೆ ಮತ್ತೆ 10 ದಿನಗಳ ಕಾಲ ಹರಿಸುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿ ಸೋಮವಾರ ಕರ್ನಾಟಕಕ್ಕೆ ಸೂಚಿಸಿದೆ.ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿ ಶೇಖರ್‌ ನೇತೃತ್ವದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಪುದುಚೇರಿ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಂದ ಮಾಹಿತಿ ಪಡೆದ ಸಮಿತಿಯು, ಕಾವೇರಿ ಜಲವಿವಾದ ನ್ಯಾಯಮಂಡಳಿ ನೀಡಿರುವ ಅಂತಿಮ ಐತೀರ್ಪಿನಂತೆ ನೀರು ಹರಿಸಬೇಕು ಎಂದು ತಿಳಿಸಿತು.ಕರ್ನಾಟಕದಲ್ಲಿನ ಕಾವೇರಿ ಜಲಾಶಯಗಳಿಗೆ ಈಗ 9,000 ಕ್ಯುಸೆಕ್‌ ಒಳಹರಿವು ಇದೆ. ಈ ಪ್ರಮಾಣದಲ್ಲಿ ಬದಲಾವಣೆ ಆಗುತ್ತದೆ. ಕಳೆದ 15 ದಿನಗಳ ಒಳಹರಿವನ್ನು ಲೆಕ್ಕ ಹಾಕಿ ಸೆ. 21ರಿಂದ ಸೆ. 30ರವರೆಗೆ ದಿನಂಪ್ರತಿ 3,000 ಕ್ಯುಸೆಕ್‌ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ. ಬಿಳಿಗುಂಡ್ಲು ಬಳಿ ಇರುವ ಮಾಪನ ಕೇಂದ್ರದಲ್ಲಿ ತಮಿಳುನಾಡಿಗೆ ಹರಿಸಿದ ನೀರಿನ ಪ್ರಮಾಣವನ್ನು ಅಳೆಯಲಾಗುತ್ತದೆ ಎಂದು ಶಶಿ ಶೇಖರ್‌ ಸಭೆಯ ನಂತರ ತಿಳಿಸಿದರು.ಉಭಯ ರಾಜ್ಯಗಳ ಕಾವೇರಿ ಜಲಾನಯನ ಪ್ರದೇಶದಲ್ಲಿನ ಮಳೆಯ ಪ್ರಮಾಣ, ಜಲಾಶಯಗಳ ಒಳಹರಿವು, ಕಣಿವೆ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಅಗತ್ಯ, ಬೆಳೆಗಳ ಸ್ಥಿತಿಗತಿ, ಆವಿಯಾಗುವ ನೀರಿನ ಪ್ರಮಾಣವನ್ನೆಲ್ಲ ಪರಿಗಣನೆಗೆ ತೆಗೆದುಕೊಂಡೇ ನೀರು ಹರಿಸಲು ಸೂಚಿಸಲಾಗಿದೆ. ಇತ್ತೀಚಿನ ಸುಪ್ರೀಂ ಕೋರ್ಟ್‌  ಆದೇಶ ಪಾಲಿಸಿ ಕರ್ನಾಟಕ ನೀರು ಹರಿಸಿರುವುದಕ್ಕೆ ತಮಿಳುನಾಡು ತೃಪ್ತಿ ವ್ಯಕ್ತಪಡಿಸಿದೆ ಎಂದು ಅವರು ಹೇಳಿದರು.ಕಾವೇರಿ ಕಣಿವೆಯಲ್ಲಿನ ಜಲಾಶಯಗಳ ಸ್ಥಿತಿಗತಿ ಕುರಿತ ನೈಜ ಮಾಹಿತಿಯನ್ನು ಕೇಂದ್ರ ಜಲ ಆಯೋಗವು ವೈಜ್ಞಾನಿಕ ವಿಧಾನದ ಮೂಲಕ ಪಡೆದು ಅಂದಂದೇ ಸಮಿತಿಗೆ ಸಲ್ಲಿಸಲಿದೆ. ಪಾರದರ್ಶಕತೆ ಕಾಯ್ದುಕೊಂಡು, ನೀರಿನ ಹಂಚಿಕೆಯನ್ನು ಸಮಾನವಾಗಿ ಮಾಡಲು ಈ ವ್ಯವಸ್ಥೆ ಸಹಾಯಕವಾಗಲಿದೆ.ಇದಕ್ಕೆ ಕಣಿವೆಯ ಎಲ್ಲ ರಾಜ್ಯಗಳ ಪ್ರತಿನಿಧಿಗಳು ಒಪ್ಪಿಗೆ ಸೂಚಿಸಿದ್ದಾರೆ. ಈ ವ್ಯವಸ್ಥೆಗೆ ತಗಲುವ ವೆಚ್ಚವನ್ನು ಆಯಾ ರಾಜ್ಯಗಳೇ ಭರಿಸಲಿವೆ. ಅಕ್ಟೋಬರ್‌ ತಿಂಗಳಲ್ಲಿ ಸಮಿತಿ ಮತ್ತೆ ಸಭೆ ಸೇರಲಿದ್ದು, ಸಂಕಷ್ಟ ಸೂತ್ರದ ಕುರಿತು ಚರ್ಚೆ ನಡೆಯಲಿದೆ. ಮುಂದಿನ ಫೆಬ್ರುವರಿಯಿಂದ ಸಮಿತಿಯು ಪ್ರತಿ ತಿಂಗಳೂ ಸಭೆ ನಡೆಸಲು ನಿರ್ಧರಿಸಿದೆ ಎಂದು ಅವರು ಹೇಳಿದರು.ಎರಡೂ ರಾಜ್ಯಗಳ ವಿರೋಧ: ‘ಮಳೆಯ ಕೊರತೆ ಇದೆ ಎಂದು ತಿಳಿಸುತ್ತಿರುವ ಕರ್ನಾಟಕ ಇದುವರೆಗೆ ಒಟ್ಟು 27 ಟಿಎಂಸಿ ಅಡಿ ನೀರನ್ನು ಅಕ್ರಮವಾಗಿ ತನ್ನ ರೈತರ ಬೆಳೆಗಳಿಗೆ ಹರಿಸಿದೆ. ನಮ್ಮ ರೈತರ  ಸಾಂಬಾ ಬೆಳೆಗೆ ನೀರಿನ ಅಗತ್ಯವಿದೆ. ನ್ಯಾಯಮಂಡಳಿ ಆದೇಶದಂತೆ ನೀರು ಹರಿಸಲು ಸೂಚಿಸಬೇಕು’ ಎಂದು ತಮಿಳುನಾಡಿನ ಮುಖ್ಯಕಾರ್ಯದರ್ಶಿ ಪಿ.ರಾಮಮೋಹನ ಅವರು ರಾವ್‌ ಕೋರಿದರು.‘ಸತತ ಎರಡು ವರ್ಷಗಳಿಂದ ಕರ್ನಾಟಕದಲ್ಲಿ ಮಳೆಯ ಕೊರತೆ ಉಂಟಾಗಿದೆ. ಈ ವರ್ಷ ಮುಂಗಾರುಪೂರ್ವ ಮಳೆಯ ಪ್ರಮಾಣವೂ ಶೇ 34ರಷ್ಟು ಕಡಿಮೆಯಾಗಿದೆ. ನಮ್ಮ ಜಲಾಶಯಗಳಲ್ಲಿ ನೀರಿಲ್ಲ. ಸಂಬಂಧಿಸಿದ ದಾಖಲೆಗಳನ್ನು ಒದಗಿಸಲಾಗಿದೆ. ಮತ್ತೆ ನೀರು ಹರಿಸಿದರೆ ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಕಾವೇರಿ ಕಣಿವೆಯ ಗ್ರಾಮ, ಪಟ್ಟಣಗಳ ಜನರಿಗೆ ಕುಡಿಯುವ ನೀರೇ ಇಲ್ಲದಂತಾಗುತ್ತದೆ’ ಎಂದು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ಹೇಳಿದರು.

ಕಾವೇರಿ ಕಣಿವೆಯಲ್ಲಿ ಪ್ರತಿ ವರ್ಷ ಲಭ್ಯವಾಗುವ 740 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿಕೊಳ್ಳಬೇಕು ಎಂದು ನ್ಯಾಯಮಂಡಳಿಯ ಆದೇಶ ಹೇಳಿದೆ. ಡಿಸೆಂಬರ್‌ ಅಂತ್ಯಕ್ಕೆ ಆಯಾ ಸಾಲಿನ ಒಳಹರಿವಿನ ಚಿತ್ರಣ ದೊರೆಯಲಿದೆ. ಆದರೆ, ಈಗ ಮಾಸಿಕ ಹಂಚಿಕೆ ಆಧಾರದಲ್ಲಿ ನೀರು ಹರಿಸಲು ಸೂಚಿಸಿದರೆ ಸಮಾನವಾಗಿ ಹಂಚಿಕೆ ಮಾಡಿಕೊಳ್ಳಬೇಕೆಂಬ ಆದೇಶಕ್ಕೆ ಅರ್ಥವಿರುವುದಿಲ್ಲ ಎಂದು ಮನವರಿಕೆ ಮಾಡಿದರು.ಮಳೆಯ ಕೊರತೆ ಎದುರಾದಾಗ ಎರಡೂ ರಾಜ್ಯಗಳು ನೀರನ್ನು ಸಮಾನವಾಗಿ ಹಂಚಿಕೆ ಮಾಡಿಕೊಳ್ಳಬೇಕು. ಮಳೆ ಸುರಿಯದಿದ್ದರೂ ಕರ್ನಾಟಕ ಪ್ರಸಕ್ತ ಸಾಲಿನಲ್ಲಿ ತಮಿಳುನಾಡಿಗೆ ಅಂದಾಜು 50 ಟಿಎಂಸಿ ಅಡಿಗೂ ಅಧಿಕ ಪ್ರಮಾಣದ ನೀರನ್ನು ಬಿಡುಗಡೆ ಮಾಡಿದೆ. ಡಿಸೆಂಬರ್‌ ಅಂತ್ಯದವರೆಗೂ ಮಳೆಗಾಲ ಇರುವುದರಿಂದ ಸಂಕಷ್ಟದ ಸಂದರ್ಭ ಹಂಚಿಕೊಳ್ಳಬೇಕಾದ ನೀರಿನ ಪ್ರಮಾಣವನ್ನು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.ಕೋರ್ಟ್‌ಗೇ ನಿವೇದನೆ: ಇನ್ನಷ್ಟು ನೀರು ಹರಿಸಬೇಕೆಂಬ ಸಮಿತಿಯ ಸೂಚನೆಯನ್ನು ಕರ್ನಾಟಕ ವಿರೋಧಿಸಿದೆ. ಈಗ ನೀರು ಬಿಡಲು ಸೂಚಿಸಿರುವ ಪ್ರಮಾಣ ಏನೇನೂ ಸಾಲದು ಎಂದು ತಮಿಳುನಾಡು ಅಸಮಾಧಾನ ವ್ಯಕ್ತಪಡಿಸಿದೆ.ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿರುವ ಕಾವೇರಿ ನೀರು ಹಂಚಿಕೆ ಕುರಿತ ಅರ್ಜಿಗಳ ವಿಚಾರಣೆ ವೇಳೆ ಈ ಕುರಿತು ಗಮನ ಸೆಳೆಯಲು ಉಭಯ ರಾಜ್ಯಗಳು ನಿರ್ಧರಿಸಿವೆ.‘ಸುಪ್ರೀಂ ಕೋರ್ಟ್‌ ಸೆ. 5 ಮತ್ತು 12ರಂದು ನೀಡಿರುವ ಆದೇಶದ ಮೇರೆಗೆ ತಮಿಳುನಾಡಿಗೆ ನೀರು ಹರಿಸಲಾಗಿದೆ. ಮೇಲುಸ್ತುವಾರಿ ಸಮಿತಿ ಸೂಚನೆ ಪ್ರಕಾರ  ನೀರು ಹರಿಸಿದರೆ ನಮಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ. ಈ ಕುರಿತು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಲಾಗುವುದು’ ಎಂದು ಜಲ ಸಂಪನ್ಮೂಲ ಸಚಿವ ಎಂ.ಪಿ. ಪಾಟೀಲ ಸುದ್ದಿಗಾರರಿಗೆ ತಿಳಿಸಿದರು.ತಮಿಳುನಾಡಿನಲ್ಲಿ ಅಕ್ಟೋಬರ್‌ನಿಂದ ಈಶಾನ್ಯ ಮಳೆಯ ಮಾರುತಗಳು ಮಳೆ ಸುರಿಸಲಿವೆ. ಕರ್ನಾಟಕ ಆ ಆಶಾಭಾವ ಹೊಂದಿಲ್ಲ. ಒಂದೊಮ್ಮೆ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಕಾವೇರಿ ಕಣಿವೆಯಲ್ಲಿ ಮಳೆ ಸುರಿಯದಿದ್ದರೆ ಜನತೆ ಕುಡಿಯುವ ನೀರು ದೊರೆಯದೆ ಪರದಾಡುವಂತಾಗುತ್ತದೆ. ಈ ಅಂಶವನ್ನು ಉಸ್ತುವಾರಿ ಸಮಿತಿಗೆ ತಿಳಿಸಲಾಗಿದೆ. ಯಾವ ಆಧಾರದಲ್ಲಿ ಮತ್ತೆ ನೀರು ಬಿಡಲು ಸೂಚಿಸಲಾಯಿತು ಎಂಬುದು ಅರ್ಥವಾಗುತ್ತಿಲ್ಲ ಎಂದರು.ನಾರಿಮನ್‌ ಜತೆ ಚರ್ಚೆ: ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌, ಅಡ್ವೋಕೇಟ್‌ ಜನರಲ್‌ ಮಧುಸೂದನ ನಾಯ್ಕ್‌, ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ ಸಿಂಗ್‌, ವಕೀಲ ಮೋಹನ್‌ ಕಾತರಕಿ ಅವರೊಂದಿಗೆ ಸಂಜೆ ಕರ್ನಾಟಕ ಪರ ವಕೀಲ ಫಾಲಿ ನಾರಿಮನ್‌ ಅವರನ್ನು ಸಂಜೆ ಭೇಟಿದ ಸಚಿವರು ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಪ್ರತಿಪಾದಿಸಲಿರುವ ವಿಷಯಗಳ ಕುರಿತು ಚರ್ಚಿಸಿದರು.ತಗ್ಗಿದ ಹೊರೆ: ಕರ್ನಾಟಕದ ಸಂತೃಪ್ತಿ

ನವದೆಹಲಿ: ಕಾವೇರಿ ಮೇಲುಸ್ತುವಾರಿ ಸಮಿತಿಯು ಸೋಮವಾರ ಸಭೆ ನಡೆಸಿ ನೀಡಿರುವ ಸೂಚನೆಯು ಕರ್ನಾಟಕಕ್ಕೆ ಸಂತೃಪ್ತಿ ತಂದಿದೆ ಎಂದು ತಿಳಿದುಬಂದಿದೆ.

ಜಲಾಶಯಗಳಿಂದ  ಬಸಿಯುವ ನೀರಿನ ಪ್ರಮಾಣ ದಿನವೊಂದಕ್ಕೆ ಕನಿಷ್ಠ 3,000 ಕ್ಯುಸೆಕ್‌ ಎಂದು ಅಂದಾಜಿಸಲಾಗಿದೆ. ಅಲ್ಲದೆ, ಮಧ್ಯಂತರ ಜಲಾನಯನ ಪ್ರದೇಶದಲ್ಲಿ ಬೀಳುವ ಮಳೆಯಿಂದಲೂ ತಮಿಳುನಾಡಿಗೆ ನೀರು ಹರಿಯಲಿದೆ. ಹಾಗಾಗಿ ಕರ್ನಾಟಕದ ಜಲಾಶಯಗಳಿಂದ ಕ್ರೆಸ್ಟ್‌ ಗೇಟ್‌ ಎತ್ತಿ ನೀರು ಹರಿಸುವ ಅಗತ್ಯವಿಲ್ಲ ಎಂಬುದೇ ಕರ್ನಾಟಕದ ಸಂತಸಕ್ಕೆ ಕಾರಣ ಎನ್ನಲಾಗಿದೆ. ಸಮಿತಿಯ ಸಭೆಯ ನಂತರ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಅಧಿಕಾರಿಗಳು, ಮುಖ್ಯ ಕಾರ್ಯದರ್ಶಿ ಅವರ ಮುಖದಲ್ಲಿ  ಈ ಕಾರಣದಿಂದಲೇ ಆತಂಕ ಕಂಡುಬರಲಿಲ್ಲ.ತಮಿಳುನಾಡಿಗೆ ನೀರು ನಿಲುಗಡೆ

ಮಂಡ್ಯ: ಕೆಆರ್ಎಸ್‌ ಅಣೆಕಟ್ಟೆಯಿಂದ ತಮಿಳುನಾಡಿಗೆ ಬಿಡುತ್ತಿದ್ದ ನೀರನ್ನು ಸೋಮವಾರ ಸಂಜೆ ನಿಲ್ಲಿಸಲಾಗಿದೆ. ಸೆ. 20ರ ವರೆಗೆ ಪ್ರತಿ ದಿನ 12 ಸಾವಿರ ಕ್ಯುಸೆಕ್‌ ನೀರು ಬಿಡುವಂತೆ ಸುಪ್ರೀಂಕೋರ್ಟ್‌ ಸೂಚಿಸಿತ್ತು. ಸೋಮವಾರ ಬೆಳಿಗ್ಗೆ ಹರಿಸಿರುವ ನೀರು ಮಂಗಳವಾರ ಸಂಜೆಯವರೆಗೂ ಹರಿದುಹೋಗಿ ಬಿಳುಗುಂಡ್ಲು ಜಲಾಶಯ ತಲುಪಲಿದೆ. ಬೆಳಿಗ್ಗೆ 9,495 ಕ್ಯುಸೆಕ್‌ ನೀರು ಹೊರ ಬಿಡಲಾಗುತ್ತಿತ್ತು. ಸಂಜೆ ವೇಳೆಗೆ 202 ಕ್ಯುಸೆಕ್‌ಗೆ ಇಳಿದಿದೆ. 6,669 ಕ್ಯುಸೆಕ್‌ ಒಳಹರಿವಿದೆ. ನೀರಿನ ಮಟ್ಟವು 84.25 ಅಡಿ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry