ಲಾಭದ ಪ್ರಮಾಣ ಹೆಚ್ಚಿಸಲಿರುವ ‘ಜಿಎಸ್‌ಟಿ’

7

ಲಾಭದ ಪ್ರಮಾಣ ಹೆಚ್ಚಿಸಲಿರುವ ‘ಜಿಎಸ್‌ಟಿ’

Published:
Updated:
ಲಾಭದ ಪ್ರಮಾಣ ಹೆಚ್ಚಿಸಲಿರುವ ‘ಜಿಎಸ್‌ಟಿ’

-ಮಹೇಶ್‌ ಪಾಟೀಲ

ದೇಶದ ಅತಿದೊಡ್ಡ ಪರೋಕ್ಷ ತೆರಿಗೆ ಸುಧಾರಣಾ ಕ್ರಮವಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ  ತರುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ.  ಈ ಹೊಸ ತೆರಿಗೆ ವ್ಯವಸ್ಥೆಯು  ಹಲವಾರು ಪ್ರಯೋಜನಗಳನ್ನು ಒಳಗೊಂಡಿದೆ. ‘ಜಿಎಸ್‌ಟಿ’ ಜಾರಿಯಿಂದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇ 1.5 ರಿಂದ ಶೇ 2ರಷ್ಟು ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.   ಅಲ್ಪಾವಧಿಯಲ್ಲಿ  ಇಂತಹ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಅಷ್ಟು  ಸರಿ ಎನಿಸದು.ಜಿಎಸ್‌ಟಿ ಅಳವಡಿಸಿಕೊಂಡ ಕೆಲ ವರ್ಷಗಳ ನಂತರ, ಬಂಡವಾಳದ ಮುಕ್ತ ಹರಿವು ಮತ್ತು ಆರ್ಥಿಕತೆಯ ದಕ್ಷತೆ ಹೆಚ್ಚಳದ ಪರಿಣಾಮವಾಗಿ  ಉತ್ಪಾದನೆ ಹೆಚ್ಚಳಗೊಂಡು ಜಿಡಿಪಿ ವ್ಯಾಪ್ತಿ ವಿಸ್ತರಣೆಗೊಳ್ಳುತ್ತದೆ. ಅಬಕಾರಿ ಮತ್ತು ಸೇವಾ ತೆರಿಗೆ ಪಾವತಿಸುವವರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡು ಬರಲಿದೆ.ಇದಕ್ಕೆ ನಾಲ್ಕು ಕಾರಣಗಳನ್ನು ಪಟ್ಟಿ ಮಾಡಬಹುದು.ಇದುವರೆಗೆ ತೆರಿಗೆ ಪಾವತಿಸುವುದನ್ನು ತಪ್ಪಿಸಿಕೊಳ್ಳುತ್ತಿದ್ದ ಉದ್ದಿಮೆ ಸಂಸ್ಥೆಗಳು  ‘ಇನ್‌ಪುಟ್‌ ಕ್ರೆಡಿಟ್‌’  ಕಾರಣಕ್ಕೆ ತೆರಿಗೆ ಪಾವತಿಸುವುದು ಅನಿವಾರ್ಯವಾಗಿರಲಿದೆ.ತಂತ್ರಜ್ಞಾನ ಆಧಾರಿತ ತೆರಿಗೆ ಮೂಲಸೌಕರ್ಯಗಳ ಬಳಕೆಯಿಂದ ತೆರಿಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ.ಇದರಿಂದ ತೆರಿಗೆ ಪಾವತಿಸುವ ವ್ಯಾಪ್ತಿಯಿಂದ ಹೊರಗೆ ಇರುವುದು ಯಾರಿಗೆ ಆದರೂ ಕಷ್ಟವಾಗಲಿದೆ.  ತೆರಿಗೆ ಇಲಾಖೆ ಮತ್ತು ಅಧಿಕಾರಿಗಳು ಒಂದೇ ಸಂಸ್ಥೆಯಾಗಿ ಕೆಲಸ ಮಾಡುವುದರಿಂದ ದಕ್ಷತೆ ಹೆಚ್ಚಲಿದೆ. ತೆರಿಗೆ ಅರ್ಜಿ ನಮೂನೆಗಳ ಭರ್ತಿ ಮತ್ತು ತೆರಿಗೆ ಪಾವತಿ ಸುಲಭವಾಗುವುದರಿಂದ ತೆರಿಗೆ ಬದ್ಧತೆ ಹೆಚ್ಚಿಸಲಿದೆ.ಒಂದೇ ಮಾರುಕಟ್ಟೆ

ದೇಶದ ಯಾವುದೇ ಭಾಗದಲ್ಲಿ ತಯಾರಿಸಿ ಮತ್ತು ಎಲ್ಲಿಯಾದರೂ ಮಾರಾಟ ಮಾಡುವ ಪರಿಕಲ್ಪನೆ ಸಾಧ್ಯವಾಗಲಿದೆ. ಅಂತರ್‌ ರಾಜ್ಯ ತೆರಿಗೆ ಪಾವತಿ ತಪ್ಪಿಸಿಕೊಳ್ಳಲು ಬೇರೆ, ಬೇರೆ ರಾಜ್ಯಗಳಲ್ಲಿ  ಉಗ್ರಾಣ ಮತ್ತು ಡೀಪೊ ಸ್ಥಾಪಿಸುವುದು  ಅರ್ಥ ಕಳೆದುಕೊಳ್ಳಲಿದೆ. ಇದು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ), ವಾಹನ ತಯಾರಿಕೆ, ಗೃಹೋಪಯೋಗಿ ಸರಕುಗಳು ಮತ್ತು ಔಷಧಿ ತಯಾರಿಕಾ ಸಂಸ್ಥೆಗಳಿಗೂ  ಉಪಯುಕ್ತವಾಗಲಿದೆ.ದೇಶಿ ಸಂಸ್ಥೆಗಳ ಮೇಲಿನ ಪರಿಣಾಮ

ಈಗಾಗಲೇ ಜಿಎಸ್‌ಟಿ ಮಂಡಳಿ ರಚನೆಯಾಗಿದ್ದು, ಇದು ತೆರಿಗೆ ದರಗಳನ್ನು  ಇನ್ನೂ ನಿರ್ಧರಿಸಬೇಕಾಗಿದೆ. ಬಹು ಬಳಕೆಯ  ಸರಕುಗಳಿಗೆ ಶೇ 18ರಷ್ಟು,  ತಂಬಾಕು ಮತ್ತು ಪಾನೀಯ ಉತ್ಪನ್ನಗಳಿಗೆ ಶೇ 40, ಔಷಧ ಮತ್ತು ಬಟ್ಟೆಗಳಿಗೆ ಶೇ 12 ಮತ್ತು ಚಿನ್ನ, ಬೆಳ್ಳಿಯಂತಹ ಅಮೂಲ್ಯ ಲೋಹಗಳಿಗೆ ಶೇ 2 ರಿಂದ 6ರಷ್ಟು ತೆರಿಗೆ ವಿಧಿಸುವ ಸಾಧ್ಯತೆ ಇದೆ.ಜತೆಗೆ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಮದ್ಯವನ್ನು ಜಿಎಸ್‌ಟಿ ವ್ಯಾಪ್ತಿಗೆ ತರದಿರುವ ಆಲೋಚನೆ ಪರಿಶೀಲನೆಯಲ್ಲಿ ಇದೆ. ಸದ್ಯಕ್ಕೆ ವಾಹನ ತಯಾರಿಕಾ ಉದ್ದಿಮೆಯು ವಾಹನದ ಮಾರಾಟ ಬೆಲೆಯ ಶೇ 30ರಿಂದ ಶೇ 60ರಷ್ಟನ್ನು ವಿವಿಧ ಬಗೆಯ ತೆರಿಗೆ ರೂಪದಲ್ಲಿ ಪಾವತಿಸುತ್ತಿದೆ.  ಶೇ 18ರಷ್ಟು ಸ್ಟ್ಯಾಂಡರ್ಡ್‌ ದರವನ್ನು ಅನ್ವಯಿಸುವುದರಿಂದ ಕಡಿಮೆ ಪ್ರಮಾಣದ ತೆರಿಗೆಯಿಂದ ಆಗುವ ಉಳಿತಾಯ ಗಮನಾರ್ಹವಾಗಿರಲಿದೆ. ವಿಲಾಸಿ ಕಾರುಗಳಿಗೆ ಸದ್ಯಕ್ಕೆ ಶೇ 40ರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಇವುಗಳು ಕೂಡ ಕಡಿಮೆ ತೆರಿಗೆಯ ಪ್ರಯೋಜನ ಪಡೆಯಲಿವೆ.ಸ್ಪರ್ಧಾತ್ಮಕತೆ ಹೆಚ್ಚಿರುವ, ತಯಾರಿಕಾ ಸಾಮರ್ಥ್ಯದ ಬಳಕೆ ಪ್ರಮಾಣ ಕಡಿಮೆ ಇರುವ  ದ್ವಿಚಕ್ರ ವಾಹನ ತಯಾರಿಕಾ ವಲಯದಲ್ಲಿ ತೆರಿಗೆಯಲ್ಲಿನ ಉಳಿತಾಯವು ಗ್ರಾಹಕರಿಗೆ ವರ್ಗಾವಣೆಯಾಗಿ ಬೈಕ್‌ಗಳ ಬೆಲೆ ಅಗ್ಗವಾಗುವ ಸಾಧ್ಯತೆ ಇದೆ.ಕೈಗಾರಿಕೆಯ ಬೆಳವಣಿಗೆಗೆ ವಿಪುಲ ಅವಕಾಶ ಇರುವ ಮತ್ತು ತಯಾರಿಕಾ ಸಾಮರ್ಥ್ಯ ಬಳಸಿಕೊಳ್ಳಲೂ ಸಾಕಷ್ಟು ಅವಕಾಶ ಇರುವ ಕಾರು, ಎಸ್‌ಯುವಿ,  ಲಾರಿ ಮತ್ತಿತರ ನಾಲ್ಕು ಚಕ್ರಗಳ ವಾಹನಗಳ ತಯಾರಿಕೆಯಲ್ಲಿನ ತೆರಿಗೆ ಉಳಿತಾಯವು, ತಯಾರಿಕಾ ಸಂಸ್ಥೆಗಳ ಲಾಭದ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸಲಿವೆ.‘ಎಫ್‌ಎಂಸಿಜಿ’ ಸಂಸ್ಥೆಗಳು ಸದ್ಯಕ್ಕೆ ಅಬಕಾರಿ ಸುಂಕ ಮತ್ತು ಮೌಲ್ಯವರ್ಧಿತ ತೆರಿಗೆಗಳನ್ನು ಜಿಎಸ್‌ಟಿಯ ಸ್ಟ್ಯಾಂಡರ್ಡ್‌ ದರಕ್ಕಿಂತ (ಶೇ 18) ಹೆಚ್ಚಿನ ಪ್ರಮಾಣದಲ್ಲಿ ಪಾವತಿಸುತ್ತಿವೆ.  ಜಿಎಸ್‌ಟಿ ವ್ಯವಸ್ಥೆಯಲ್ಲಿ ಈ ಗ್ರಾಹಕ ಉತ್ಪನ್ನ ತಯಾರಿಕಾ ಸಂಸ್ಥೆಗಳಿಗೆ ತೆರಿಗೆ ಬಾಬತ್ತಿನಲ್ಲಿ ಗಮನಾರ್ಹ ಉಳಿತಾಯ ಸಾಧ್ಯವಾಗಲಿದೆ. ಮಾರುಕಟ್ಟೆಯಲ್ಲಿ ಕಡಿಮೆ ಸಂಖ್ಯೆ ತಯಾರಕರು ಮತ್ತು ಮಾರಾಟಗಾರರು ಇರುವ ಬಣ್ಣ (ಪೇಂಟ್‌) ತಯಾರಿಕೆಯಂತಹ ಸಂಸ್ಥೆಗಳು ತೆರಿಗೆ ಉಳಿತಾಯವನ್ನು ತಮ್ಮ  ವಹಿವಾಟು ವಿಸ್ತರಿಸಿಕೊಳ್ಳಲು ಬಳಸಿಕೊಳ್ಳಲು ಅವಕಾಶ ಒದಗಿಸಲಿದೆ.ಗೃಹೋಪಯೋಗಿ ಸಲಕರಣೆ ಮತ್ತು ವೈಯಕ್ತಿಕ ರಕ್ಷಣೆ, ಸೌಂದರ್ಯವರ್ಧಕ  ಉತ್ಪನ್ನಗಳ ತಯಾರಿಕಾ ಸಂಸ್ಥೆಗಳು ತಮ್ಮ  ತೆರಿಗೆ ಉಳಿತಾಯವನ್ನು ಗ್ರಾಹಕರಿಗೆ ವರ್ಗಾಯಿಸಲಿವೆ.  ಕಡಿಮೆ ಪ್ರಮಾಣದ ತೆರಿಗೆ ದರದ ಸೌಲಭ್ಯ ಪಡೆಯುವುದರ ಜತೆಗೆ,  ಜಾಹೀರಾತು ಮತ್ತು ಬ್ರ್ಯಾಂಡ್‌ ಜನಪ್ರಿಯತೆಗೆ ಮಾಡುವ ವೆಚ್ಚ ಸೇವಾ ತೆರಿಗೆಯಲ್ಲಿಯೂ ಉಳಿತಾಯ ಸಾಧ್ಯವಾಗಲಿದೆ.ಸರಕು ಸಾಗಣೆ ಸಂಸ್ಥೆಗಳು ಸದ್ಯದ ಸಾಗಣೆ ಮಾದರಿಗಿಂತ ಭಿನ್ನ ಹಾದಿ ತುಳಿಯಲಿವೆ. ಕಡಿಮೆ ದೂರ ಪಯಣಿಸುವ ಲಾರಿಗಳ ಬದಲಿಗೆ, ದೂರ ಪ್ರಯಾಣದ ಟ್ರಕ್‌ಗಳನ್ನು ಬಳಸಿಕೊಳ್ಳಲಿವೆ.  ಲಾರಿಗಳ ಖರೀದಿ ಬೆಲೆ ಕಡಿಮೆಯಾಗಿ, ಸಾಗಾಣಿಕೆ ದಕ್ಷತೆ ಹೆಚ್ಚಿ ವೆಚ್ಚ ಕಡಿಮೆಯಾಗುವುದರಿಂದ ಲಾರಿ ಮಾಲೀಕರು ಸರಕುಗಳ ಸಾಗಣೆ ದರ ಕಡಿಮೆ ಮಾಡಲಿದ್ದಾರೆ. ಇದರಿಂದ ಸರಕು ಸಾಗಾಣಿಕೆಯ ಒಟ್ಟಾರೆ ಪ್ರಮಾಣ ಏರಿಕೆಯಾಗಲಿದೆ.ಸದ್ಯಕ್ಕೆ ಶೇ 20ರಿಂದ ಶೇ 67ರಷ್ಟು ಇರುವ ಮನರಂಜನಾ ತೆರಿಗೆಯು ಜಿಎಸ್‌ಟಿ ವ್ಯವಸ್ಥೆಯಡಿ ಕಡಿಮೆಯಾಗಲಿದೆ. ಹೀಗಾಗಿ ಕೇಬಲ್‌, ಡಿಟಿಎಚ್‌ ಟಿವಿ, ಪ್ರದರ್ಶನ ಮತ್ತಿತರ ಮನರಂಜನಾ ವಲಯದ ದರಗಳು ಅಗ್ಗವಾಗಲಿವೆ.ಸಿಮೆಂಟ್ ತಯಾರಿಕೆಯಂತಹ ಸಂಸ್ಥೆಗಳು ಪ್ರಮುಖ ಕಚ್ಚಾ ಸರಕಿಗೆ ಪಾವತಿಸುವ ಶುದ್ಧ ಇಂಧನ ಸೆಸ್ ಮತ್ತು ಗೌರವಧನ ಪಾವತಿಯಲ್ಲಿ ಯಾವುದೇ ವ್ಯತ್ಯಾಸ ಆಗಲಾರದು.ಸೇವಾ ತೆರಿಗೆ ಪ್ರಮಾಣ ಹೆಚ್ಚಿದರೆ ಅದು ಸೇವಾ ಸಂಸ್ಥೆಗಳ ಪಾಲಿಗೆ ಪ್ರತಿಕೂಲಕರವಾಗಿ ಪರಿಣಮಿಸಲಿದೆ.  ದೇಶಿ ಔಷಧ ತಯಾರಿಕಾ ಸಂಸ್ಥೆಗಳ ಪಾಲಿಗೆ ‘ಜಿಎಸ್‌ಟಿ’ ವ್ಯವಸ್ಥೆಯು ಹೆಚ್ಚಿನ  ಪರಿಣಾಮವನ್ನೇನೂ ಬೀರಲಾರದು.  ಸದ್ಯದ ತೆರಿಗೆ ದರವು, ಜಿಎಸ್‌ಟಿ  ಉತ್ತೇಜಕರ ದರವಾದ ಶೇ 12ರಷ್ಟು ಇರಲಿದೆ.ಜಿಎಸ್‌ಟಿ ಜಾರಿಗೆ ತರುವ ಹಾದಿಯಲ್ಲಿ ಸಾಕಷ್ಟು ಅಡೆತಡೆಗಳಿವೆ.  ರಾಜ್ಯಗಳ ಜತೆ ಸಂಧಾನ, ಮೂಲಸೌಕರ್ಯ ಅಭಿವೃದ್ಧಿ,  ಉದ್ದಿಮೆ ಸಂಸ್ಥೆಗಳ ಅನುಮಾನ ಬಗೆಹರಿಸುವ, ತೊಂದರೆಗೆ ಒಳಗಾಗುವ ಸಂಸ್ಥೆಗಳಿಂದ ವಿರೋಧ ಮತ್ತಿತರ ಪ್ರತಿಕೂಲತೆಗಳು ಕಂಡು ಬರಲಿವೆ.ಜಿಎಸ್‌ಟಿ ಜಾರಿಗೆ ತರುವುದರಿಂದ  ಉದ್ದಿಮೆ ಸಂಸ್ಥೆಗಳ ಲಾಭದ ಪ್ರಮಾಣ ಹೆಚ್ಚಳಗೊಳ್ಳಲಿದೆ.  ಈ ಕ್ರಾಂತಿಕಾರಿ ತೆರಿಗೆ ಸುಧಾರಣಾ ಕ್ರಮಗಳಿಂದ ಸಿಗುವ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸುವುದು ಆಯಾ ಉದ್ದಿಮೆ ಸಂಸ್ಥೆಗಳ ವಿವೇಚನೆಗೆ ಬಿಟ್ಟಿದೆ. ಜಿಎಸ್‌ಟಿಯು ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಹೂಡಿಕೆದಾರರ ಪಾಲಿಗೂ ಉತ್ತೇಜಕರ ಬೆಳವಣಿಗೆಯಾಗಿದೆ.(ಬಿರ್ಲಾ ಸನ್‌ ಲೈಫ್‌ ಅಸೆಟ್ ಮ್ಯಾನೇಜ್‌ಮೆಂಟ್‌ ಕಂಪೆನಿ)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry