ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಮೇಲೆ ಮತ್ತೆ ಪ್ರಹಾರ

ಕರ್ನಾಟಕದ ಗಾಯಕ್ಕೆ ಉಪ್ಪು ಸವರಿದ ‘ಸುಪ್ರೀಂ’ ಏಳು ದಿನ 6,000 ಕ್ಯುಸೆಕ್‌ ನೀರು ಹರಿಸಲು ಸೂಚನೆ
Last Updated 20 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ‘ನೀರು ಬಿಡಲು ಕಷ್ಟ’ ಎಂಬ ಕರ್ನಾಟಕದ ಪ್ರಬಲ ಆಕ್ಷೇಪವನ್ನೂ ಲೆಕ್ಕಿಸದೆ ತಮಿಳುನಾಡಿಗೆ ಏಳು ದಿನ (ಸೆ. 21ರಿಂದ 27) ನಿತ್ಯ 6,000 ಕ್ಯುಸೆಕ್‌ ನೀರು ಹರಿಸುವಂತೆ ಮಂಗಳವಾರ ಸೂಚಿಸಿದ ಸುಪ್ರೀಂ ಕೋರ್ಟ್, ಕಾವೇರಿ ನಿರ್ವಹಣಾ ಮಂಡಳಿ ರಚನೆಗೂ ಸ್ವಯಂ ಪ್ರೇರಣೆಯ ಆದೇಶ ನೀಡಿತು. ಈ ಮೂಲಕ ಕರ್ನಾಟಕಕ್ಕೆ ಎರಡೆರಡು ಪೆಟ್ಟು ಕೊಟ್ಟಿತು.

‘ಮಳೆ ಕೊರತೆಯಿಂದಾಗಿ ಜಲಾಶಯಗಳ ಸಂಗ್ರಹ ಅತ್ಯಂತ ಕಡಿಮೆಯಿದೆ. ಬೆಂಗಳೂರು, ಮೈಸೂರು, ಮಂಡ್ಯ ನಗರಗಳ ಹಾಗೂ ಗ್ರಾಮೀಣ ಭಾಗದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ’ ಎಂಬ ಕರ್ನಾಟಕದ ಬಲವಾದ ವಾದವನ್ನೂ ಲೆಕ್ಕಿಸದೆ, ‘ನೀರು ಬಿಡಲೇಬೇಕು’ ಎಂದು  ಖಡಕ್ಕಾಗಿ ತಿಳಿಸಿತು.

10 ದಿನಗಳವರೆಗೆ ನಿತ್ಯ 15 ಸಾವಿರ ಕ್ಯುಸೆಕ್‌ ನೀರು ಬಿಡುವಂತೆ ಸೆ. 5ರಂದು ಹೊರಡಿಸಿದ್ದ ಆದೇಶ ಮಾರ್ಪಾಡಿಗಾಗಿ ಸೆ. 12ರಂದು ಕರ್ನಾಟಕ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸದೆ, ‘ಸೆ. 20ರವರೆಗೆ ನಿತ್ಯ 12 ಸಾವಿರ ಕ್ಯುಸೆಕ್‌ ನೀರು ಹರಿಸಬೇಕು’ ಎಂದು ಸೂಚಿಸುವ ಮೂಲಕ ಆಘಾತ ನೀಡಿದ್ದ ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ ಹಾಗೂ ಉದಯ್‌ ಲಲಿತ್‌ ಅವರ ದ್ವಿಸದಸ್ಯ ಪೀಠ, ಮಂಗಳವಾರ ನೀಡಿದ ನಿರ್ದೇಶನ ‘ಗಾಯಕ್ಕೆ ಉಪ್ಪು ಸವರಿದಂತಾಗಿದೆ’.

ಸಮಿತಿ ತೀರ್ಮಾನ ಅಮಾನ್ಯ: ‘ಸೆ. 21ರಿಂದ 30ರವರೆಗೆ ನಿತ್ಯ 3 ಸಾವಿರ ಕ್ಯುಸೆಕ್‌ ನೀರು ಹರಿಸಬೇಕು’ ಎಂಬ ಕಾವೇರಿ ಮೇಲುಸ್ತುವಾರಿ ಸಮಿತಿಯ ಸೋಮವಾರದ ಸೂಚನೆಯನ್ನು ಮಾನ್ಯ ಮಾಡದ ಪೀಠ, ಕಾವೇರಿ ಜಲವಿವಾದ ನ್ಯಾಯಮಂಡಳಿಯು ಐತೀರ್ಪಿನಲ್ಲಿ ಶಿಫಾರಸು ಮಾಡಿರುವಂತೆ ಕೂಡಲೇ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿ, ನಾಲ್ಕು ವಾರಗಳ ಗಡುವು ವಿಧಿಸಿತು.

ನ್ಯಾಯಮೂರ್ತಿ  ಮಿಶ್ರಾ ಅವರು ‘ನೀರು ಬಿಡುವಂತೆ ಸೂಚಿಸುವ ತೀರ್ಮಾನ ಕೈಗೊಳ್ಳಲು ಕಾವೇರಿ ಮೇಲುಸ್ತುವಾರಿ ಸಮಿತಿಗೆ ಅಧಿಕಾರ ಕೊಟ್ಟವರು ಯಾರು’ ಎಂಬ ಧಾಟಿಯಲ್ಲೇ ವಿಚಾರಣೆ ಆರಂಭಿಸಿದರು.

ಆದರೆ, ‘ನೀರು ಹಂಚಿಕೆ ಸಮಸ್ಯೆ ನಿವಾರಣೆಗೆ ಕಾವೇರಿ ನಿರ್ವಹಣಾ ಮಂಡಳಿ ರಚನೆಯೇ ಸೂಕ್ತ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ವ್ಯಾಪ್ತಿಯ ಎಲ್ಲ ರಾಜ್ಯಗಳಿಗೂ ಸಮಾನವಾಗಿ ನೀರನ್ನು ಹಂಚಿಕೆಯಾಗುವಂತೆ ನೋಡಿಕೊಳ್ಳುತ್ತಾರೆ. ಅದಕ್ಕೆಂದೇ ಮಂಡಳಿ ರಚಿಸಿ ಸಮಸ್ಯೆ ನೀಗಿಸಿಕೊಳ್ಳಬಹುದು’ ಎಂದು ವ್ಯಾಖ್ಯಾನಿಸಿದರು.

ಪ್ರಯೋಜನವಾಗದ ವಾದ: ‘ನಮ್ಮ ಜಲಾಶಯಗಳಲ್ಲಿ ನೀರಿಲ್ಲ’ ಎಂದು ಕರ್ನಾಟಕ ಪರ ವಕೀಲ ಫಾಲಿ ನಾರಿಮನ್‌ ಒಂದೂ ಕಾಲು ಗಂಟೆಗೂ ಅಧಿಕ ಕಾಲ ವಾದ ಮಂಡಿಸಿ, ವಸ್ತುಸ್ಥಿತಿ ವಿವರಿಸಿದರು.

ನ್ಯಾಯಮಂಡಳಿಯ ಐತೀರ್ಪಿನ ಬಹುತೇಕ ಸಾರವನ್ನು ಕೋರ್ಟ್‌ಗೆ ಓದಿ ಹೇಳಿದ ಅವರು, ‘ಮಳೆ ಕೊರತೆಯ ವರ್ಷ ಎದುರಾಗುವ ಸಂಕಷ್ಟದ ವೇಳೆ ಕೈಗೊಳ್ಳಬಹುದಾದ ಮಾರ್ಗೋಪಾಯಗಳ ಕುರಿತು ನ್ಯಾಯಮಂಡಳಿಯು ನಿರ್ದಿಷ್ಟ ಸಲಹೆಯನ್ನೇ ನೀಡಿಲ್ಲ’ ಎಂದು ಒತ್ತಿಹೇಳಿದರೂ ಪ್ರಯೋಜನವಾಗಲಿಲ್ಲ.

‘ಈ ಬಾರಿ ವರುಣದೇವ ಮುನಿಸಿಕೊಂಡಿದ್ದಾನೆ ನಿಜ. ಆತ ದಯೆ ತೋರಿಲ್ಲ. ಅಂತೆಯೇ ಮಳೆ  ಕೊರತೆಯಾಗಿದೆ. ಮೇಲುಸ್ತುವಾರಿ ಸಮಿತಿಯು ಆ ಆಧಾರದ ಮೇಲೆ ನೀರು ಹರಿಸಲು ಸೂಚನೆ ನೀಡಿದೆ.

ಆದರೆ ನ್ಯಾಯಮಂಡಳಿ ಸೂಚನೆಯಂತೆ ಆಯಾ ತಿಂಗಳಲ್ಲಿ ನೀರನ್ನು ಹರಿಸಲಾಗಿದೆಯೇ’ ಎಂದು ಪ್ರಶ್ನಿಸಿದ ಮಿಶ್ರಾ, ‘ಸೆಪ್ಟೆಂಬರ್‌ ತಿಂಗಳಲ್ಲಿ 40 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಬೇಕಿದೆ. ಸಮಾನವಾಗಿ ಹಂಚಿಕೊಳ್ಳುವ ಸೂತ್ರದಡಿ ನೀರನ್ನು ಏಕೆ ಹರಿಸಿಲ್ಲ’ ಎಂದು ಕೇಳಿದರು.

ತಮಿಳುನಾಡು ವಾದ: ‘ಕರ್ನಾಟಕದಲ್ಲಿ ಶೇ 47ರಷ್ಟು ಕಡಿಮೆ ಮಳೆ ಸುರಿದಿದ್ದನ್ನು ಪರಿಗಣಿಸಿದರೂ ನಮಗೆ ಇದುವರೆಗೆ 75 ಟಿಎಂಸಿ ಅಡಿ ನೀರನ್ನು ಹರಿಸಬೇಕಿತ್ತು. ಆದರೆ, ತನ್ನ ರೈತರ ಬೆಳೆಗೆ 24 ಟಿಎಂಸಿ ಅಡಿ ನೀರನ್ನು ಹರಿಸಿದ್ದಾಗಿ ಕರ್ನಾಟಕವೇ ಮೇಲುಸ್ತುವಾರಿ ಸಮಿತಿಗೆ ದಾಖಲೆ ಸಲ್ಲಿಸಿದೆ.

ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಒಟ್ಟು 80 ಟಿಎಂಸಿ ಅಡಿ ನೀರನ್ನು ಪಡೆದಿದ್ದರೂ ಈಗ ಕುಡಿಯಲು ನೀರಿಲ್ಲ ಎಂಬ ವಾದ ಮಂಡಿಸುತ್ತಿದೆ ಇದು ಎಷ್ಟು ಸರಿ’ ಎಂದು ಪ್ರಶ್ನಿಸಿದ ತಮಿಳುನಾಡು ಪರ ವಕೀಲ ಶೇಖರ್‌ ನಾಫಡೆ, ‘ಮದ್ಯಂತರ ಆದೇಶ ನೀಡುವ ಮೂಲಕ ನಮಗೆ ಮತ್ತಷ್ಟು ನೀರು ಬಿಡಲು ಸೂಚಿಸಿ’ ಎಂದು ಕೋರಿದರು.

‘ಈಶಾನ್ಯ ಮಳೆಯ ಮಾರುತಗಳು ತಮಿಳುನಾಡಿನಲ್ಲಿ ಮಳೆ ಸುರಿಸುವ ಸಾಧ್ಯತೆ ಇದೆ. ಕರ್ನಾಟಕದಲ್ಲಿನ ಕಾವೇರಿ ಕಣಿವೆ ಪ್ರದೇಶದಲ್ಲಿ ಅಕ್ಟೋಬರ್‌ ನಂತರ ಮಳೆ ಸುರಿಯುವ ಭರವಸೆ ಇಲ್ಲ. ಈಗ ಮತ್ತೆ ನೀರು ಹರಿಸಿದರೆ, ಅದು ವಾಪಸ್‌ ಬರುವುದಿಲ್ಲ’ ಎಂದು ನಾರಿಮನ್‌ ಅವರು ನೀರಿನ ಅಗತ್ಯದ ಕುರಿತು ವಿವರ ನೀಡಿದರು.

‘ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಸೆ. 19ರ ಮಾಹಿತಿಯಂತೆ 50 ಟಿಎಂಸಿಗೂ ಅಧಿಕ ನೀರಿನ ಸಂಗ್ರಹವಿದೆ. ನಾವು ಕುಡಿಯುವುದಕ್ಕೆ ನೀರಿಲ್ಲ ಎಂಬ ಚಿಂತೆಯಲ್ಲಿದ್ದೇವೆ.

ಆದರೆ, ತಮಿಳುನಾಡು ತನ್ನ ಬೆಳೆಗಳಿಗೆ ನೀರು ಕೇಳುತ್ತಿದೆ. ಅವರ ಬೆಳೆಗಳಿಗಾಗಿ ನಾವು ಕುಡಿಯುವ ನೀರನ್ನು ತ್ಯಾಗ ಮಾಡಬೇಕಾಗಿದೆ’ ಎಂದು ನೊಂದು ನುಡಿದ ಅವರು, ‘ಈಗಿನ ವಿಚಾರಣೆಯ ನಂತರ ನೀವು ಯಾವುದೇ ಆದೇಶ ನೀಡಿದರೂ ಅದನ್ನು ನಾವು ಒಪ್ಪಲಾಗುವುದಿಲ್ಲ.

ನಿಮ್ಮ ಆದೇಶವನ್ನು ನಾನು ವಿರೋಧಿಸುವುದಿಲ್ಲ. ಆದರೆ, ನೀವು ನೀಡಲು ಹೊರಟಿರುವ ಆದೇಶ ತಪ್ಪು ಎಂಬುದೇ ನನ್ನ ಭಾವನೆ’ ಎಂದು ಕಠೋರವಾಗಿಯೇ ತಿಳಿಸಿದರು.

ನೀರು ಬಿಡಲು ಆದೇಶಿಸಿರುವುದಕ್ಕೆ ಕರ್ನಾಟಕದಲ್ಲಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರ ಘಟನೆಗಳನ್ನು ಮತ್ತೆ ನೆನಪಿಸಿದ ನ್ಯಾಯಮೂರ್ತಿಗಳು, ಎರಡೂ ಮುಕ್ಕಾಲು ಗಂಟೆ ನಡೆದ ವಿಚಾರಣೆಯನ್ನು ಸೆ. 27ಕ್ಕೆ ಮುಂದೂಡಿದರಲ್ಲದೆ, ಅಲ್ಲಿಯತನಕ ನಿತ್ಯ 6,000 ಕ್ಯುಸೆಕ್‌ ನೀರು ಹರಿಸಬೇಕು ಎಂದು ಆದೇಶಿಸಿದರು.
ಆದೇಶದ ನಂತರವೂ ಕರ್ನಾಟಕದ ಪರ ವಕೀಲರು ಎಷ್ಟೇ ಮನವರಿಕೆ ಮಾಡಿದರೂ ಅವರು ಕಿವಿಗೆ ಹಾಕಿಕೊಳ್ಳಲಿಲ್ಲ.ರಾಜ್ಯದ ಮೇಲೆ ಮತ್ತೆ ಪ್ರಹಾರ

***
ಮತ್ತೊಂದು ಟಿಎಂಸಿ ಹೊರೆ?
ನವದೆಹಲಿ
: ಸುಪ್ರೀಂ ಕೋರ್ಟ್ನ ಮಂಗಳವಾರದ ಆದೇಶದಿಂದ ಹೆಚ್ಚುವರಿಯಾಗಿ ಮತ್ತೆ ಒಂದು ಟಿಎಂಸಿ ಅಡಿ ನೀರು ಹರಿಸುವ ಹೊರೆ ರಾಜ್ಯದ ಮೇಲೆ ಬಿದ್ದಿದೆ.

ಕಾವೇರಿ ಮೇಲುಸ್ತುವಾರಿ ಸಮಿತಿಯು ಸೆ. 30ರವರೆಗೆ ನಿತ್ಯವೂ 3,000 ಕ್ಯುಸೆಕ್‌ ನೀರು ಹರಿಸುವಂತೆ ಸೋಮವಾರ ಸೂಚಿಸಿದ್ದರಿಂದ ತಮಿಳುನಾಡಿಗೆ ಹರಿದು ಹೋಗಲಿದ್ದ ನೀರಿನ ಪ್ರಮಾಣ 30 ಸಾವಿರ ಕ್ಯುಸೆಕ್‌. ಅಂದರೆ, ಅಂದಾಜು 2.60 ಟಿಎಂಸಿ ಅಡಿ.

ಇದೀಗ ಸೆ. 27ರವರೆಗೆ ಹರಿಯುವ ನೀರಿನ ಪ್ರಮಾಣ 42 ಸಾವಿರ ಕ್ಯುಸೆಕ್‌. ಅಂದರೆ ಹೆಚ್ಚುವರಿಯಾಗಿ 12 ಸಾವಿರ ಕ್ಯುಸೆಕ್‌. ಅದು ಹೆಚ್ಚೂ ಕಡಿಮೆ ಒಂದು ಟಿಎಂಸಿ ಆಗಲಿದೆ.

***
‘ಕೋರ್ಟ್‌ ನಡೆ ಒಪ್ಪುವಂಥದ್ದಲ್ಲ’

ಬೆಂಗಳೂರು: ‘ಕಾವೇರಿ ನ್ಯಾಯಮಂಡಳಿ ನೀರು ಹಂಚಿಕೆ ಮಾಡಿದ ರೀತಿಯೇ ಸರಿ ಇಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವಿಶೇಷ ಮೇಲ್ಮನವಿಯ ವಿಚಾರಣೆ ಬಾಕಿ ಇರುವಾಗ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶ ನೀಡಿರುವುದು ಸರಿಯಲ್ಲ’ ಎಂದು ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅಭಿಪ್ರಾಯಪಟ್ಟರು.

‘ನೀರು ಹಂಚಿಕೆ ಸಂಬಂಧ ತಮಿಳುನಾಡು ಸಲ್ಲಿಸಿದ್ದ ಮಧ್ಯಂತರ ಅರ್ಜಿ ಬಗ್ಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶ ನೀಡಬೇಕಿತ್ತೇ ಹೊರತು, ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಯಾರೂ ಅರ್ಜಿ ಹಾಕಿಲ್ಲ. ಯಾರೂ ಕೇಳದೆ ಇದ್ದರೂ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್‌ ಸೂಚನೆ ನೀಡಿರುವುದು ಸರಿಯಲ್ಲ’ ಎಂದರು.

‘ಸುಪ್ರೀಂ ಕೋರ್ಟ್‌ ನೀಡಿರುವ ಎಲ್ಲ ಆದೇಶಗಳು ರಾಜ್ಯದ ಹಿತಕ್ಕೆ ವಿರುದ್ಧವಾಗಿವೆ. ನಮಗೆ ಅನುಕೂಲಕರವಾಗಿ ಎಂದೂ ಆದೇಶ ಬಂದಿಲ್ಲ. ಅನುಕೂಲವಾಗುವುದು ಹೋಗಲಿ,  ಸುಪ್ರೀಂಕೋರ್ಟ್‌   ತಟಸ್ಥ ಧೋರಣೆಯನ್ನೂ ತಳೆದಿದ್ದು ಇಲ್ಲ’ ಎಂದು ಟೀಕಿಸಿದರು.

***
ನ್ಯಾಯಮೂರ್ತಿಗಳಿಗೆ ಜಲಾಶಯದ ಬಗ್ಗೆ ಮಾಹಿತಿ ಇಲ್ಲ ಎಂದು ಅನಿಸುತ್ತಿದೆ. ಸ್ವಾತಂತ್ರ್ಯ ಬಂದಾಗಿನಿಂದ ಇಂತಹ ತೀರ್ಪು ನೋಡಿಲ್ಲ.
-ಎಸ್‌.ಎಂ. ಕೃಷ್ಣ, ಮಾಜಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT