ತೀವ್ರವಾಗಿ ವಿರೋಧಿಸಿದ ಫಾಲಿ ನಾರಿಮನ್‌!

7

ತೀವ್ರವಾಗಿ ವಿರೋಧಿಸಿದ ಫಾಲಿ ನಾರಿಮನ್‌!

Published:
Updated:
ತೀವ್ರವಾಗಿ ವಿರೋಧಿಸಿದ ಫಾಲಿ ನಾರಿಮನ್‌!

ನವದೆಹಲಿ: ಸಾಮಾನ್ಯವಾಗಿ ಸಮಚಿತ್ತ ಕಳೆದುಕೊಳ್ಳದೆ ವಾದ ಮಂಡಿಸುವ ಹಿರಿಯ ವಕೀಲ ಫಾಲಿ ನಾರಿಮನ್‌ ಮಂಗಳವಾರ ಉಗ್ರ ರೂಪ ತಾಳಿದ್ದರು.

ಕಾವೇರಿ ಜಲ ವಿವಾದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ನೀರಿನ ಸಮಸ್ಯೆಯ ಬಗ್ಗೆ ಕರ್ನಾಟಕದ ಪರ 75 ನಿಮಿಷಗಳ ಕಾಲ ವಾದ ಮಂಡಿಸಿದ 87ರ ವಯೋವೃದ್ಧ ನಾರಿಮನ್‌, ನೀರು ಬಿಡಲೇಬೇಕು ಎಂಬ ಆದೇಶ ಹೊರ ಬೀಳಲಿದೆ ಎಂಬುದು ಖಾತರಿಯಾದಾಗ ತಮ್ಮ ಸುದೀರ್ಘ ಅನುಭವದ ಆಧಾರದಲ್ಲಿ ಮಾತಿನ ಚಾಟಿ ಬೀಸಿದರು.‘ವಸ್ತು ಸ್ಥಿತಿ ಏನು ಎಂಬುದನ್ನು ಎಲ್ಲರೂ ಅರಿಯಬೇಕು. ನಾನೊಬ್ಬ ವಕೀಲನಾಗಿ ನಿಮಗೆ ಈ ಮಾತು ಹೇಳುತ್ತಿಲ್ಲ. ನನ್ನ ಅನುಭವದ ಆಧಾರದಲ್ಲಿ ಹೇಳುತ್ತಿದ್ದೇನೆ. ಬೆಂಗಳೂರಿಗಾಗಿ ಕರ್ನಾಟಕ ಕಾವೇರಿ ನೀರನ್ನೇ ಅವಲಂಬಿಸಿದೆ. ಇದನ್ನು ಅರ್ಥೈಸಿಕೊಳ್ಳಬೇಕು’ ಎಂದು ಅವರು ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರಿಗೆ ತಿಳಿಸಿದರು.‘ಮಾಧ್ಯಮಗಳ ಎದುರು ನನ್ನ ಅಭಿಪ್ರಾಯ ಹಂಚಿಕೊಳ್ಳುವುದೇ ಇಲ್ಲ. ಟಿ.ವಿ, ದಿನಪತ್ರಿಕೆಗಳವರು ಎಷ್ಟೇ ಕೇಳಿದರೂ ಮಾತನಾಡುವುದಿಲ್ಲ. ನಾನು ಏನೇ ಮಾತನಾಡಿದರೂ ಅದು ಕೋರ್ಟ್‌ ಎದುರೇ’ ಎಂದು ನೋವು ಉಕ್ಕಿ ಬಂದ ಧಾಟಿಯಲ್ಲಿ ಹೇಳಿದರು.‘ಕಾವೇರಿ ನೀರಿನ ಹಂಚಿಕೆ ವಿವಾದ ಇಂದು ನಿನ್ನೆಯದಲ್ಲ. ಅದು ಮೊದಲಿನಿಂದಲೂ ಇದೆ. 1924ರಲ್ಲೇ ನೀರನ್ನು ಹಂಚಿಕೆ ಮಾಡಲಾಗಿದೆ.’ ಎಂದು ನ್ಯಾಯಮೂರ್ತಿ ಮಿಶ್ರಾ ತಿಳಿಸಿದಾಗ, ‘ಕಾವೇರಿ ನೀರನ್ನು 1892ರಲ್ಲೇ ಹಂಚಿಕೆ ಮಾಡಲಾಗಿದೆ. ಆಗ ನಾನಿನ್ನೂ ಜನಿಸಿರಲಿಲ್ಲ’ ಎಂದು ನಾರಿಮನ್‌ ತಿರುಗೇಟು ನೀಡಿದರು. ಆಗ ಕೋರ್ಟ್‌ ನಗೆಗಡಲಲ್ಲಿ ತೇಲಿತು.ವಿಚಾರಣೆಯು ಅಂತಿಮ ಹಂತ ತಲುಪಿದಾಗ, ‘ನಮಗೆ ಮತ್ತಷ್ಟು ನೀರು ಬಿಡಲು ಮಧ್ಯಂತರ ಆದೇಶ ನೀಡಿ’ ಎಂದು ತಮಿಳುನಾಡು ಪರ ವಕೀಲರು ಕೋರುತ್ತಿದ್ದಂತೆಯೇ ತೀವ್ರ ವಿರೋಧ ವ್ಯಕ್ತಪಡಿಸಿ ಆಕ್ರೋಶದಿಂದಲೇ ಮಾತಿಗಿಳಿದ ನಾರಿಮನ್‌, ‘ನಾವು ಮದ್ರಾಸ್‌ಗೆ (ಈಗಿನ ಚೆನ್ನೈ) ಕೃಷ್ಣಾ ನದಿಯ 5 ಟಿಎಂಸಿ ಅಡಿ ನೀರನ್ನು ಸ್ವಯಂ ಪ್ರೇರಣೆಯಿಂದಲೇ ನೀಡಿದ್ದೇವೆ. ಅದೂ ಮತ್ತೊಂದು ಕಣಿವೆ ವ್ಯಾಪ್ತಿಯ ನಗರ ಎಂಬುದನ್ನೂ ಮರೆತು ನೀರು ಒದಗಿಸಿದ್ದೇವೆ’ ಎಂದು ನೆನಪಿಸಿದರು.ಸಚಿವರ ಧಾವಂತ: ವಿಚಾರಣೆ ಆರಂಭದಲ್ಲೇ ಇನ್ನಷ್ಟು ನೀರು ಬಿಡಬೇಕಾದ ಆದೇಶದ  ಮುನ್ಸೂಚನೆ ದೊರೆಯುತ್ತಿದ್ದಂತೆಯೇ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ಅವರ ಮುಖದಲ್ಲಿ ಆತಂಕ ಕಂಡುಬಂತು. ನಿರ್ದಿಷ್ಟ ವಿಷಯವನ್ನು ಪ್ರಸ್ತಾಪಿಸುವಂತೆ ಕರ್ನಾಟಕದ ಪರ ವಕೀಲ ಮೋಹನ್‌ ಕಾತರಕಿ ಅವರಿಗೆ ಚೀಟಿ ಬರೆದು ರವಾನಿಸಿದ ಸಚಿವ ಪಾಟೀಲ, ವೀಕ್ಷಕರ ಗ್ಯಾಲರಿಯಿಂದ ವಕೀಲರು ಕುಳಿತುಕೊಳ್ಳುವ ಜಾಗಕ್ಕೇ ತೆರಳಿ ಕುಳಿತು ಸಲಹೆ ನೀಡಿದ್ದು ಕಂಡುಬಂತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry