4

ಕೊಪ್ಪಳದ ಬಾಲಕಿ ಮಲ್ಲಮ್ಮನ ಪವಾಡ!

Published:
Updated:
ಕೊಪ್ಪಳದ ಬಾಲಕಿ ಮಲ್ಲಮ್ಮನ ಪವಾಡ!

ಮಲ್ಲಮ್ಮನ ಕೈಯಲ್ಲಿ ತಂಬಿಗೆ ಇತ್ತು. ದೇಹವನ್ನು ಹಿಡಿ ಮಾಡಿಕೊಂಡು ಹೆಜ್ಜೆಗಳನ್ನು ಬಿರುಸಾಗಿ ಹಾಕುತ್ತಿದ್ದಳು. ಹಾದಿಯಲ್ಲಿ ಹೋಗುವ ಪಡ್ಡೆಗಳ ಕಣ್ಣುಗಳು ತನ್ನ ಮೇಲೇ ನೆಟ್ಟಿವೆ ಎಂದು ಭಾವಿಸಿ ನೆಲವನ್ನೇ ನೋಡುತ್ತಾ ಕ್ಷಣಾರ್ಧದಲ್ಲಿ ಬಯಲು ತಲುಪುತ್ತಿದ್ದಳು. ಅಲ್ಲಿ ಯಾವುದೋ ಬೇಲಿ ಹಿಂದೆ ಕಣ್ಮರೆಯಾಗುತ್ತಿದ್ದಳು.

ಇದು ಹಲವು ವರ್ಷಗಳಿಂದಲೂ ಪುನರಾವರ್ತನೆ ಆಗುತ್ತಿತ್ತು. ಒಂದು ದಿನ ಧೈರ್ಯ ಮಾಡಿದಳು. ‘ನಾನು ಇವತ್ತಿನಿಂದ ತಂಬಿಗೆ ಹಿಡಿದು ಬಯಲಿಗೆ ಹೋಗುವುದಿಲ್ಲ. ನನಗೆ ಮುಜುಗರ ಅನಿಸುತ್ತದೆ. ನಾವೇ ಶೌಚಾಲಯ ಕಟ್ಟಿಸಿಕೊಳ್ಳೋಣ’ ಎಂದು ತಾಯಿಗೆ ಹೇಳಿದಳು.

‘ಕೈಯಲ್ಲಿ ಕಾಸಿಲ್ಲ, ಸಾಲ ಮಾಡಿ ಕಟ್ಟಿಸೋಣವೆಂದರೆ ಜಾಗವಾದರೂ ಎಲ್ಲಿದೆ?’ ಎಂದು ತಾಯಿ ಕೇಳಿದಳು.

ಮಗಳು ಸಬೂಬು, ಸಮಾಧಾನದ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆಹಾರ ಸೇವಿಸಿದರೆ ತಾನೆ ಶೌಚಕ್ಕೆ ಹೋಗುವುದು, ಊಟವನ್ನೇ ಬಿಟ್ಟರೆ ಎಂದು ಮನಸ್ಸಿನಲ್ಲೇ ಅಂದಾಜಿಸಿದಳು. ‘ನಾನು ಊಟ ಬಿಡುತ್ತೇನೆ’ ಎಂದು ತಾಯಿಗೆ ಹೇಳಿದಳು. ಹೆದರಿಸಲು ಹೇಳುತ್ತಿದ್ದಾಳೆ ಎಂದುಕೊಂಡ ತಾಯಿ ‘ಬಿಡುವುದಾದರೆ ಬಿಡು’ ಎಂದಳು.

ಮಲ್ಲಮ್ಮ ಮೂರು ದಿನ ಆಹಾರ ಸೇವಿಸಲಿಲ್ಲ. ವಿಷಯ ಮನೆಯಿಂದ ಮನೆಗೆ, ಕೇರಿಯಿಂದ ಕೇರಿಗೆ ದಾಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹಮದ್‌ ಶಫಿ ಅವರ ಕಿವಿಯನ್ನು ತಲುಪಿತು. ಕೊಪ್ಪಳ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್‌ ಸಹ ತಮ್ಮ ಅಧಿಕಾರಿಗಳ ದಂಡನ್ನು ಕರೆದುಕೊಂಡು ಬಂದರು. ಒಂದು ವಾರದಲ್ಲೇ ಮಲ್ಲಮ್ಮನ ಮನೆ ಮುಂದೆ ಶೌಚಾಲಯ ನಿರ್ಮಾಣವಾಯಿತು!

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕು ಢಣಾಪುರದ ದಲಿತ ಹೆಣ್ಣು ಮಗಳು ಹೋರಾಟದ ಮೂಲಕ ಹೆಸರಾಗಿದ್ದಾಳೆ. ಪ್ರಧಾನಮಂತ್ರಿ ನರೇಂದ್ರ ಮೋದಿ ‘ಮನ್‌ ಕಿ ಬಾತ್‌’ ನಲ್ಲಿ ಈಕೆಯ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಕಲಿಯುತ್ತಿರುವ ಈಕೆ ಎರಡು ತಿಂಗಳ ಹಿಂದೆ ಕೇರಿಯವರನ್ನು ಬಿಟ್ಟರೆ ಬೇರೆ ಯಾರಿಗೂ ಗೊತ್ತಿರಲಿಲ್ಲ. ಈಗ ಊರಿನ ಹೆಮ್ಮೆಯ ಮಗಳಾಗಿದ್ದಾಳೆ.

‘ತಂಬಿಗೆ ಹಿಡಿದು ಬಯಲಿಗೆ ಹೋಗಲು ಮುಜುಗರವಾಗುತ್ತಿತ್ತು. ಸ್ವಾಭಿಮಾನಕ್ಕಾಗಿ ಹಟ ಹಿಡಿದು ಉಪವಾಸ ಮಾಡಿದೆ’ ಎನ್ನುತ್ತಾಳೆ ಮಲ್ಲಮ್ಮ.

ಈಕೆಗೆ ಹದಿನಾರು ವರ್ಷ. ಈ ವಯಸ್ಸೇ ಹೀಗೆ. ಸಣ್ಣ ನೆಪ ಸಿಕ್ಕರೂ ಸಾಕು, ಬಂಡಾಯ ಸಾರಲು ಮನಸ್ಸು ತವಕಿಸುತ್ತಿರುತ್ತದೆ.

ಹೀಗೆ ಅನಿಸಲು ಕಾರಣವಿದೆ. ಮಲ್ಲಮ್ಮಳಂತೆ ಕಲಬುರ್ಗಿ ಜಿಲ್ಲೆ ಸೇಡಂ ತಾಲ್ಲೂಕು ಖಂಡೇರಾಯನಪಲ್ಲಿಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಮಾಧವಿ ಕೂಡ ಶೌಚಾಲಯಕ್ಕಾಗಿ ಉಪವಾಸ ಮಾಡಿ ಯಶಸ್ವಿಯಾಗಿದ್ದಾಳೆ.

‘ಶಾಲೆಯಲ್ಲಿ ಶಿಕ್ಷಕರು ಎದ್ದು ನಿಲ್ಲಿಸಿ ಮನೆಯಲ್ಲಿ ಶೌಚಾಲಯವಿದೆಯೇ ಎಂದು ಕೇಳುತ್ತಿದ್ದರು. ಇದರಿಂದ ಅವಮಾನವಾಗುತ್ತಿತ್ತು.  ಶೌಚಾಲಯ ನಿರ್ಮಿಸುವಂತೆ ಅನೇಕ ಬಾರಿ ತಾಯಿಯನ್ನು ಒತ್ತಾಯಿಸಿದೆ. ಕೆಲವೊಮ್ಮೆ ಉಪವಾಸ ಮಾಡಿದೆ. ನನ್ನ ಕಿವಿ ಓಲೆಯನ್ನು ಮಾರಿ ಶೌಚಾಲಯ ನಿರ್ಮಿಸುವಂತೆಯೂ ಕೇಳಿದೆ. ತಾಯಿ ಈ ವಿಷಯವನ್ನು ಅಜ್ಜನಿಗೆ ತಿಳಿಸಿದಳು. ನಿನಗೆ ಒಡವೆಗಿಂತ ಶೌಚಾಲಯ ಮುಖ್ಯವೇ ಎಂದು ಕೇಳಿದರು. ಒಡವೆ ಇಲ್ಲದಿದ್ದರೂ ಪರವಾಗಿಲ್ಲ, ಶೌಚಾಲಯ ಬೇಕು ಎಂದು ಕೋರಿದೆ’ ಎಂದು ಮಾಧವಿ ಹೇಳುತ್ತಾಳೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹೇಮದಳದ ಲಾವಣ್ಯಳ ಸಂಬಂಧಿಯೊಬ್ಬರು ಬಹಿರ್ದೆಸೆಗೆ ಹೋಗಿದ್ದಾಗ ಕಾಡಾನೆ ತುಳಿದು ಸಾಯಿಸಿತು. ಇಂತಹ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು 8ನೇ ತರಗತಿ ವಿದ್ಯಾರ್ಥಿನಿಯಾದ ಈಕೆ ಸತ್ಯಾಗ್ರಹ ನಡೆಸಿದಳು.

ಅಕ್ಷರ ಅರಿವು ತಂದು ಕೊಡುತ್ತದೆ. ವಿದ್ಯಾರ್ಥಿನಿಯರಾದ ಮಲ್ಲಮ್ಮ, ಮಾಧವಿ ಮತ್ತು ಲಾವಣ್ಯ ಅವರಲ್ಲಿ ಜಾಗೃತಿ ಉಂಟಾಗಿದೆ.

‘ನಮ್ಮದು ಒಂದೊಂದು ಕಾಲಕ್ಕೆ ಒಂದೊಂದು ಸಂಕಟ. ಹುಳ, ಉಪ್ಪಟೆ, ಹಾವು, ಚೇಳುಗಳಿಂದ ತಪ್ಪಿಸಿಕೊಂಡು ಶೌಚ ಮುಗಿಸಿಕೊಂಡು ಮನೆಗೆ ಮರಳುವುದೇ ಮರುಜನ್ಮ ಪಡೆದಂತೆ’ ಎನ್ನುತ್ತಾಳೆ ಮಲ್ಲಮ್ಮ.

ನಮ್ಮದು ಪುರುಷ ಪ್ರಧಾನ ಸಮಾಜ. ಹೀಗಾಗಿ ಮನೆಯಲ್ಲಿ ಗಂಡಸರ ಮಾತೇ ಅಂತಿಮ. ಶೌಚಾಲಯ ಬೇಕು ಅಥವಾ ಬೇಡ ಎನ್ನುವುದನ್ನು ಮಹಿಳೆಯರು ನಿರ್ಧರಿಸಲು ಆಗುವುದಿಲ್ಲ. ಗಂಡರಿಗೆ ತಮ್ಮ ತಾಯಿ, ಪತ್ನಿ, ಅಕ್ಕ, ತಂಗಿ, ಮಗಳು, ಸೊಸೆ, ನಾದಿನಿ, ಅತ್ತಿಗೆ, ಮೊಮ್ಮಗಳು ತಂಬಿಗೆ ಹಿಡಿದು ಬಯಲಿಗೆ ಹೋಗುವುದು ಅವಮಾನ ಅನಿಸುವುದೇ ಇಲ್ಲ. ಆದರೆ ಮನೆಯ ಮಹಿಳೆಯರು ಮಾತ್ರ ಮೌನವಾಗಿ ಸಂಟಕವನ್ನು ಅನುಭವಿಸುತ್ತಾರೆ.

ಮಲ್ಲಮ್ಮ ಮತ್ತು ಮಾಧವಿ ಅವರದು ಒಳಗಿನವರ ವಿರುದ್ಧದ ಬಂಡಾಯ. ಇವರು ಆರಿಸಿಕೊಂಡಿದ್ದು ಅನ್ನ ಸತ್ಯಾಗ್ರಹ ಮತ್ತು ಹಟ. ಇವು ಹೆಣ್ಣು ಮಕ್ಕಳಿಗೆ ಇರುವ ವಿಶೇಷ ಗುಣವೆಂದರೆ ತಪ್ಪಾಗುತ್ತದೆ. ಆದರೆ ಅನಿವಾರ್ಯ ಅಸ್ತ್ರ. ತಮಗೆ ಇಷ್ಟವಾಗದ ವಿಷಯವನ್ನು ಹೇರಿದಾಗ ಅಥವಾ ಇಷ್ಟವಾದುದ್ದನ್ನು ಮಾಡಲು, ಓದಲು ಬಿಡದೇ ಇದ್ದಾಗ ಹುಡುಗರಂತೆ ಕೂಗಾಡಿ, ರಂಪ–ರಾದ್ಧಾಂತ ಮಾಡುವುದಿಲ್ಲ. ಮನೆ ಬಿಟ್ಟು ಲಾರಿ ಏರಿ ಮಹಾನಗರದ ಪಾಲಾಗುವುದಿಲ್ಲ. ಮನೆಯಲ್ಲೇ ಇರುತ್ತಾರೆ. ಎಂದಿನಂತೆ ಎಲ್ಲ ಕೆಲಸವನ್ನೂ ಮಾಡುತ್ತಾರೆ.

ಆದರೆ ಮೌನವಾಗುತ್ತಾರೆ. ಅನ್ನ, ಆಹಾರ ಸೇವಿಸುವುದಿಲ್ಲ. ಏಕೆಂದರೆ ಹೊರಗಿನ ಪ್ರಪಂಚದಲ್ಲಿ ಗಂಡಸರಿಗೆ ಇರುವಷ್ಟು ಅನುಕೂಲ ಹೆಣ್ಣು ಮಕ್ಕಳಿಗೆ ಇಲ್ಲ.

ಶೌಚಾಲಯವು ವ್ಯಕ್ತಿ, ಕುಟುಂಬ, ಊರು, ಕೇರಿ, ರಾಜ್ಯ, ದೇಶದ ಆರೋಗ್ಯ ಮತ್ತು ಘನತೆಯ ದೃಷ್ಟಿಯಿಂದ ಮುಖ್ಯವಾಗುತ್ತದೆ. ಹೆಣ್ಣು ಮಕ್ಕಳು ಬಹಿರ್ದೆಸೆಗೆ ಬೇಲಿ ಮರೆಗೆ ಹೋಗುವುದು ಇಡೀ ಕುಟುಂಬಕ್ಕೆ ಅಪಮಾನ. ಇದು ಐಷಾರಾಮಿ ಅಲ್ಲ; ಆದ್ಯತೆ ಎನ್ನುವ ಭಾವನೆ ಬರಬೇಕು. ಇಡೀ ದಿನ ಒಳಗೆ–ಹೊರಗೆ ದುಡಿಯುವ ಮಹಿಳೆಯರು ನೆಮ್ಮದಿಯಾಗಿ ಬಹಿರ್ದೆಸೆಗೆ ಹೋಗುವಂತಹ ವಾತಾವರಣವೂ ನಮ್ಮಲ್ಲಿ ಇಲ್ಲ.

‘ಕುಟುಂಬಕ್ಕೊಂದು ಶೌಚಾಲಯ’ ಎನ್ನುವುದು ನಮ್ಮ ಸಂಸ್ಕೃತಿಯಾಗಬೇಕು. ಆದರೆ, ತಾಯಿಯೇ ಮಗುವನ್ನು ಬಯಲಿಗೆ ತಂದು ಕೂರಿಸುತ್ತಾಳೆ. ಮಗುವಿಗೆ ಬಯಲೇ ಅಪ್ಯಾಯಮಾನ ಅನಿಸುತ್ತದೆ.

ದಕ್ಷಿಣ ಆಫ್ರಿಕಾದ ಕೇಪ್‌ ಟೌನ್‌ನ ಪ್ರವಾಸದಲ್ಲಿದ್ದಾಗ ನಮ್ಮ ಗೈಡ್‌ ಸ್ಲಂಗಳನ್ನು ತೋರಿಸಿದರು. ಅಲ್ಲಿನ ಸ್ಲಂಗಳು ನಮ್ಮ ದೇಶದ ಕೊಳೆಗೇರಿಗಳಂತೆ ಇರಲಿಲ್ಲ. ಅಲ್ಲಿನ ಪ್ರತಿ ಕುಟುಂಬವೂ ವೈಯಕ್ತಿಕ ಶೌಚಾಲಯವನ್ನು ಹೊಂದಿದ್ದವು!

ನಾವು ಹಣವಿಲ್ಲ, ಜಾಗವಿಲ್ಲ, ನೀರಿಲ್ಲ ಎಂದು ನೆಪಗಳನ್ನು ಹೇಳುತ್ತಲೇ ಹೋಗುತ್ತೇವೆ. ಆದರೆ ಹೊಸ ಟಿ.ವಿ. ತರುತ್ತೇವೆ.  ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸುತ್ತೇವೆ. ಕುಟುಂಬದ ಪ್ರತಿಯೊಬ್ಬರ ಕೈಯಲ್ಲಿಯೂ ಮೊಬೈಲ್‌ ಇರುತ್ತದೆ. ಅಂದರೆ, ಶೌಚಾಲಯ ಹೊಂದುವ ವಿಷಯದಲ್ಲಿ ಸಮಸ್ಯೆ ಹೊರಗೆ ಎಲ್ಲಿಯೂ ಇಲ್ಲ, ಅದು ನಮ್ಮಗಳ ಮನಸ್ಸಿನಲ್ಲೇ ಇದೆ.ಮಲ್ಲಮ್ಮ, ಮಾಧವಿ, ಲಾವಣ್ಯರಂತಹ ಲಕ್ಷಾಂತರ ಹರೆಯದ ಹೆಣ್ಣುಮಕ್ಕಳು ನಮ್ಮಲ್ಲಿದ್ದಾರೆ. ಅವರೂ ಹಟ ಹಿಡಿದರೆ ಬಹುಶಃ ಸರ್ಕಾರಗಳ ಸ್ವಚ್ಛ ಭಾರತದ ಕನಸು ನನಸಾಗಬಹುದು. ನನಗೆ ಹೆಣ್ಣು ಮಕ್ಕಳ ಬದ್ಧತೆ, ಪ್ರಾಮಾಣಿಕತೆ, ನೈತಿಕ ಮತ್ತು ಇಚ್ಛಾಶಕ್ತಿ ಮೇಲೆ ಅಪಾರ ನಂಬಿಕೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry