ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಾಗಿದೆ ಸಂಕಷ್ಟ ನಿರ್ವಹಣೆ ಸೂತ್ರ

Last Updated 21 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕಾವೇರಿ ನದಿ ನೀರು ಹಂಚಿಕೆ ವಿವಾದ ಸುಮಾರು 125 ವರ್ಷಗಳಷ್ಟು ಹಳೆಯದು. ಬ್ರಿಟಿಷರ ಆಳ್ವಿಕೆಯ ಕಾಲದಿಂದಲೂ ತಮಿಳುನಾಡು ಆಧಿಪತ್ಯವು ಒಂದಲ್ಲ ಒಂದು ಕಾರಣವನ್ನು ಮುಂದಿಟ್ಟುಕೊಂಡು ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರು ಬಳಕೆಗೆ ತಕರಾರು ಮಾಡುತ್ತಲೇ ಬಂದಿದೆ.

1892ರಲ್ಲಿ ಪ್ರಾರಂಭವಾದ ಅಂದಿನ ಮದ್ರಾಸ್ ಪ್ರಾಂತ್ಯದ ಆಕ್ಷೇಪಣೆ ಇಂದಿನವರೆಗೂ ಮುಂದುವರಿಯುತ್ತಲೇ ಬಂದಿದೆ. ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ 1924ರಲ್ಲಿ ಮಾಡಿಕೊಂಡ ಒಪ್ಪಂದ ಸುಮಾರು 50 ವರ್ಷಗಳ ಕಾಲ ಮುಂದುವರೆದು, 1974ರಲ್ಲಿ ಅದರ ಅವಧಿ ಮುಗಿದಿದೆ.

ಹೀಗಿದ್ದರೂ ಕರ್ನಾಟಕ ಸರ್ಕಾರವು ಅದನ್ನು ಪರಿಷ್ಕರಣೆಗೆ ಒಳಪಡಿಸಿ, ರಾಜ್ಯದ ಅಂದಿನ ಸ್ಥಿತಿಗತಿಗೆ ಅನುಸಾರವಾಗಿ ಕಬಿನಿ, ಹಾರಂಗಿ, ಹೇಮಾವತಿ ಮತ್ತು ಕೃಷ್ಣರಾಜ ಸಾಗರದ ನೀರಾವರಿ ವಿಸ್ತಾರದ ವಾಸ್ತವಾಂಶಕ್ಕೆ ಅನುಗುಣವಾಗಿ ಒಪ್ಪಂದದ ದೋಷಗಳನ್ನು ಸರಿಪಡಿಸಲು ಸಾಧ್ಯವಾಗಿಲ್ಲ.
ಆದರೆ, ತಮಿಳುನಾಡು ಸರ್ಕಾರವು ಕರ್ನಾಟಕದ ಈ ನಿರ್ಲಿಪ್ತತೆಯ ಪ್ರಯೋಜನವನ್ನು ಪಡೆದು ತನ್ನ ಅಚ್ಚುಕಟ್ಟು ಪ್ರದೇಶವನ್ನು ವಿಸ್ತರಿಸಿ, ದೃಢೀಕರಿಸಿಕೊಂಡು ಅಂದಿನ ವಸ್ತುಸ್ಥಿತಿಯ ಪ್ರಯೋಜನವನ್ನು ಪಡೆದಿರುವುದು ಸ್ಪಷ್ಟ. 

1990ರಲ್ಲಿ ರಚನೆಯಾದ ಕಾವೇರಿ ನ್ಯಾಯಮಂಡಳಿಯು ಸ್ಥಾಪನೆಯಾದ ಕೇವಲ ಒಂದು ವರ್ಷದಲ್ಲೇ ಮಧ್ಯಂತರ ಆದೇಶವನ್ನು ಹೊರಡಿಸಿ, ಕರ್ನಾಟಕವು ತಮಿಳುನಾಡಿಗೆ ಪ್ರತಿವರ್ಷ 205 ಟಿಎಂಸಿ ಅಡಿ ನೀರನ್ನು ಬಿಡುವಂತೆ ತಿಳಿಸಿ, ನಮ್ಮ ನೀರಾವರಿ ಪ್ರದೇಶವನ್ನು 11.2 ಲಕ್ಷ ಎಕರೆಗೆ ಸೀಮಿತಗೊಳಿಸಿ ಆದೇಶಿಸಿರುವುದು ಸಹ ನಮ್ಮ ರಾಜ್ಯದ ರೈತರಿಗೆ ಅನ್ಯಾಯ ಮಾಡಿದಂತಾಗಿದೆ. ಈ ಮಧ್ಯಂತರ ಆದೇಶವನ್ನು ಜಾರಿಗೊಳಿಸಲು 1998ರಲ್ಲಿ ಕೇಂದ್ರ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿ ಕಾವೇರಿ ನದಿ ಪ್ರಾಧಿಕಾರವನ್ನು ರಚಿಸಿದ್ದರೂ ಕರ್ನಾಟಕದ ರೈತರಿಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಸೂಕ್ತ ಪ್ರಯೋಜನ ಆಗಿಲ್ಲ.

ಕಾವೇರಿ ನ್ಯಾಯಮಂಡಳಿಯು  ಸತತವಾಗಿ ಸುಮಾರು 16 ವರ್ಷ  ನಾಲ್ಕು ರಾಜ್ಯಗಳ ಅಹವಾಲು, ವಾದ-ಪ್ರತಿವಾದಗಳು ಹಾಗೂ ತಾಂತ್ರಿಕ ವಿವರಗಳನ್ನು ಪರಿಶೀಲಿಸಿ 2007ರ ಫೆಬ್ರುವರಿ 5ರಂದು ಅಂತಿಮ ಆದೇಶ ನೀಡಿದೆ. ಇದರ ಅನುಸಾರ, ತಾಂತ್ರಿಕವಾಗಿ ಅಂದಾಜಿಸಿರುವ ಸುಮಾರು 740 ಟಿಎಂಸಿ ಅಡಿ ನೀರಿನ ಲಭ್ಯತೆಯ ಪ್ರಮಾಣವನ್ನು ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಗೆ  ಹಂಚಿಕೆ ಮಾಡಿದೆ.

ಈ ಹಂಚಿಕೆಯಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗಿರುವುದು ಸ್ಪಷ್ಟ. ನಾವು ಕೇಳಿದ 465 ಟಿಎಂಸಿ ಅಡಿಗೆ ಬದಲಾಗಿ ಕೇವಲ 270 ಟಿಎಂಸಿ ಅಡಿ (ಶೇ 58ರಷ್ಟು) ನೀಡಿತು. ತಮಿಳುನಾಡು ಕೇಳಿದ್ದು 562 ಟಿಎಂಸಿ ಅಡಿ ನೀರು. ನೀಡಿದ್ದು 419 ಟಿಎಂಸಿ ಅಡಿ (ಶೇ 75ರಷ್ಟು). ಹಂಚಿಕೆಯ ಪ್ರಮಾಣದಲ್ಲಿ ತಾರತಮ್ಯ ಮಾಡಿರುವುದನ್ನು ಇದು ಸ್ಪಷ್ಟಪಡಿಸುತ್ತದೆ. ಇದರ ಜೊತೆಗೆ ಕೇರಳ ರಾಜ್ಯಕ್ಕೆ ನೀಡಿರುವ 30 ಟಿಎಂಸಿ ಅಡಿ ನೀರನ್ನು ಸಹ ಆ ರಾಜ್ಯವು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡದಿದ್ದಲ್ಲಿ ತಮಿಳುನಾಡಿಗೆ ಕಬಿನಿ ಮುಖಾಂತರ ನೀಡುವುದು ಎಷ್ಟು ಸರಿ?

ಕರ್ನಾಟಕದ ಕಾವೇರಿ ಕಣಿವೆಯ ಕುಡಿಯುವ ನೀರು ಮತ್ತು ನೀರಾವರಿ ಅವಶ್ಯಕತೆಯನ್ನು ಪರಿಗಣಿಸದೆ ಹೆಚ್ಚುವರಿಯಾಗಿ ಪರಿಸರ ಸಂರಕ್ಷಣೆಗೆ 10 ಟಿಎಂಸಿ ಅಡಿ  ಮತ್ತು ಸಮುದ್ರಕ್ಕೆ ಹರಿದು ಹೋಗಬಹುದಾದ 4 ಟಿಎಂಸಿ ಅಡಿ ನೀರನ್ನು ತಮಿಳುನಾಡು ರಾಜ್ಯಕ್ಕೆ ಮಾತ್ರ ನೀಡುವುದು ನ್ಯಾಯಸಮ್ಮತವೇ?

ಇದರ ಜೊತೆಗೆ ತಮಿಳುನಾಡಿನ ಡೆಲ್ಟಾ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ (ಸುಮಾರು 88- 120 ಟಿಎಂಸಿ ಅಡಿ) ನೀರಿನ ಪ್ರಮಾಣವನ್ನು ನ್ಯಾಯಮಂಡಳಿಯು ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷಿಸಿರುವುದು ಸರಿಯೇ?

ಬೆಂಗಳೂರು ಮಹಾನಗರದ ತೀವ್ರ ಬೆಳವಣಿಗೆಯನ್ನು ಗಮನಿಸಿ ಅಗತ್ಯ ಪ್ರಮಾಣದ ನೀರನ್ನು ಕುಡಿಯಲು ಒದಗಿಸದೆ ಕೇವಲ 3/1 ಭಾಗದ ಪ್ರದೇಶವನ್ನು  ಪರಿಗಣಿಸಿರುವುದು ಅವಾಸ್ತವಿಕ.

ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳ ಅವಶ್ಯಕತೆಯನ್ನು ಪರಿಗಣಿಸದೆ ಹಾಗೂ ಅಂದಿನ ವಾಸ್ತವಿಕ ಸ್ಥಿತಿಗತಿಯನ್ನು ನಿರ್ಲಕ್ಷಿಸಿ ನ್ಯಾಯಮಂಡಳಿಯು  ಆದೇಶ ನೀಡಿರುವುದು ನ್ಯಾಯಸಮ್ಮತವೇ? ಈ ಎಲ್ಲಾ ಕಾರಣಗಳಿಂದ ನ್ಯಾಯಮಂಡಳಿಯ ಅಂತಿಮ ಆದೇಶವನ್ನು ಪುನರ್ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ನಿಂದ ಸೂಕ್ತ ಆದೇಶ ಪಡೆಯುವುದು ಅವಶ್ಯಕ.

ಸಾಧ್ಯವಾದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಮಂಗಳವಾರ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪುನರ್ ಪರಿಶೀಲಿಸಿ, ಮೇಲ್ಮನವಿ ಅರ್ಜಿಗಳು ಇತ್ಯರ್ಥವಾಗುವವರೆಗೆ ನಿರ್ವಹಣಾ ಮಂಡಳಿ ರಚನೆಯನ್ನು ಮಂದೂಡುವುದು ಅವಶ್ಯವೆಂದು ಪ್ರತಿಪಾದಿಸಿ ಸೂಕ್ತ ಆದೇಶವನ್ನು ಪಡೆಯುವುದು ಅತಿ ಜರೂರಾಗಿ ಆಗಬೇಕಾಗಿದೆ.

ಅಲ್ಲಿಯವರೆವಿಗೂ ಕರ್ನಾಟಕದ ಕುಡಿಯುವ ನೀರಿನ ಅವಶ್ಯಕತೆಯ ಪೂರೈಕೆಗಾಗಿ ತಮಿಳುನಾಡಿಗೆ ನೀರು ಬಿಡುವುದು ಸಾಧ್ಯವಾಗದೆಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಳ್ಳಬೇಕಾಗಿದೆ. ಆನಂತರ 2007ರಲ್ಲಿ ರಾಜ್ಯವು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯಲ್ಲಿ ಸಮರ್ಥವಾಗಿ ರಾಜ್ಯದ ಪರವಾದ ಅಂಶಗಳನ್ನು ಪ್ರತಿಪಾದಿಸಿ, ಕಾವೇರಿ ನ್ಯಾಯಮಂಡಳಿಯ ಅಂತಿಮ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕೋರುವುದು ಅತ್ಯವಶ್ಯಕ.

ಕರ್ನಾಟಕದ ಕಾವೇರಿ ಕಣಿವೆಯ ರೈತರು ಮತ್ತು ಈ ಭಾಗದ ಜನರ ಕುಡಿಯುವ ನೀರಿನ ಅವಶ್ಯಕತೆಯನ್ನು ಪರಿಗಣಿಸದೆ ತಮಿಳುನಾಡಿನ ಬೆಳೆಗಳಿಗೆ ಕರ್ನಾಟಕದ ಜಲಾಶಯದಿಂದ ನೀರು ಹರಿಸುವುದು ಎಷ್ಟು ಸರಿ?

ಸುಪ್ರೀಂ ಕೋರ್ಟ್‌ನ ಈಗಿನ ಆದೇಶ ಕರ್ನಾಟಕದ ಜನರ ಹಿತಕ್ಕೆ ಮಾರಕ ಎಂಬುದು ಸ್ಪಷ್ಟ. ಈ ವಿಚಾರದಲ್ಲಿ ಇತ್ತೀಚೆಗೆ ನಡೆದ ಮೇಲುಸ್ತುವಾರಿ ಸಮಿತಿ ಆದೇಶಕ್ಕಿಂತ, ಈಗ ಹೆಚ್ಚುವರಿ ನೀರು ಬಿಡುಗಡೆ ಮಾಡುವುದರ ಜೊತೆಗೆ ಮುಂದೆ ಈ ಎಲ್ಲಾ ಜಲಾಶಯಗಳ ನಿರ್ವಹಣೆಯ ಜವಾಬ್ದಾರಿಯನ್ನು ರಾಜ್ಯಗಳಿಂದ ತಪ್ಪಿಸಿ, ನ್ಯಾಯಮಂಡಳಿಯ  ಆದೇಶದಂತೆ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಲು ಆದೇಶಿಸಿರುವುದು ನಮ್ಮ ರಾಜ್ಯದ ಜನರ ಸಂಕಷ್ಟದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ವಿವಿಧ  ಸಂಘಟನೆಗಳು  ಶಾಂತಿಯುತ ಹೋರಾಟದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಎಚ್ಚರಿಸಲಿ.
- ಟಿ.ತಿಮ್ಮೇಗೌಡ, ಲೇಖಕ  ಕಾವೇರಿ ನೀರಾವರಿ ನಿಗಮದ, ನಿವೃತ್ತ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT