ವ್ಯಾಪ್ತಿ ಮೀರಿ ಆದೇಶ: ಚಂದ್ರಶೇಖರಯ್ಯ

7

ವ್ಯಾಪ್ತಿ ಮೀರಿ ಆದೇಶ: ಚಂದ್ರಶೇಖರಯ್ಯ

Published:
Updated:
ವ್ಯಾಪ್ತಿ ಮೀರಿ ಆದೇಶ: ಚಂದ್ರಶೇಖರಯ್ಯ

ಬೆಂಗಳೂರು: ‘ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಸುಪ್ರೀಂಕೋರ್ಟ್‌ ತನ್ನ ವ್ಯಾಪ್ತಿ ಮೀರಿ ಆದೇಶ ನೀಡಿದೆ’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಟೀಕಿಸಿದರು.‘ಪ್ರಜಾವಾಣಿ’ ಜತೆ ಮಾತನಾಡಿದ ಅವರು,  ‘ಸುಪ್ರೀಂಕೋರ್ಟ್‌ ಪೀಠದ ಸೂಚನೆ ಅನುಸಾರವೇ ರಾಜ್ಯ ಸರ್ಕಾರ ಕಾವೇರಿ ಮೇಲುಸ್ತುವಾರಿ ಸಮಿತಿ ಮುಂದೆ ಹೋಗಿತ್ತು. ಎಲ್ಲ ರೀತಿಯ ತಜ್ಞರನ್ನು ಒಳಗೊಂಡ ಸಮಿತಿ ಪ್ರತಿದಿನ 3 ಸಾವಿರ ಕ್ಯುಸೆಕ್‌ ನೀರು ಬಿಡುವಂತೆ ಆದೇಶಿಸಿತು. ಮರುದಿನ ಸುಪ್ರೀಂ ಕೋರ್ಟ್‌ ಈ ಆದೇಶವನ್ನೇ ಬದಲಿಸಿ ನೀರಿನ ಪ್ರಮಾಣ ಹೆಚ್ಚಿಸಿತು. ಇದು ಯಾವ ನ್ಯಾಯ’ ಎಂದು  ಅಸಮಾಧಾನ ವ್ಯಕ್ತಪಡಿಸಿದರು.

‘ಆದೇಶ ನೀಡುವುದಕ್ಕೂ ಮುನ್ನ ಇಲ್ಲಿನ ನೀರಿನ ಲಭ್ಯತೆ ಬಗ್ಗೆ ಅಧ್ಯಯನ ನಡೆಸಬೇಕಿತ್ತು. ನದಿ ನೀರು ಹಂಚಿಕೆ ಎರಡು ರಾಜ್ಯಗಳಿಗೆ ಸಂಬಂಧಿಸಿದ ವಿಚಾರ. ಅಲ್ಲದೆ, ಅದಕ್ಕಾಗಿ ನ್ಯಾಯಮಂಡಳಿ ಇದೆ. ಆದರೂ ಅನಗತ್ಯವಾಗಿ ಸುಪ್ರೀಂ ಕೋರ್ಟ್‌ನ ಹಸ್ತಕ್ಷೇಪ ಹೆಚ್ಚಾಗುತ್ತಿದೆ’ ಎಂದರು.‘ಕಾವೇರಿ ಸಂಬಂಧ ವಿಚಾರಣೆ ನಡೆಯುತ್ತಿರುವ ಸುಪ್ರೀಂಕೋರ್ಟ್‌ ದ್ವಿಸದಸ್ಯ ಪೀಠದಲ್ಲಿರುವ ನ್ಯಾಯಮೂರ್ತಿ ಉದಯ್‌ ಲಲಿತ್‌ ಎಂಬುವರು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಹಿಂದೆ ವಕೀಲರಾಗಿದ್ದರು. ಹೀಗಾಗಿ ಅವರನ್ನು ಬದಲಿಸಬೇಕು ಎಂದು ಮಂಡ್ಯ ಭಾಗದ ರೈತರು ಈಗಾಗಲೇ ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಇದನ್ನು ಗಮನಿಸಬೇಕು’ ಎಂದು ಆಗ್ರಹಿಸಿದರು.ನ್ಯಾಯಮಂಡಳಿಯ ಐತೀರ್ಪು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಅಂತಿಮ ವಿಚಾರಣೆ ಅಕ್ಟೋಬರ್‌ 18ರಂದು ಬರಲಿದೆ. ಅದು ಈ ದ್ವಿಸದಸ್ಯ ಪೀಠದ ಮುಂದೆ ಬರದಂತೆ ಪ್ರಯತ್ನ ನಡೆಸಬೇಕು ಎಂದು ಸಲಹೆ ನೀಡಿದರು. ‘ಫಾಲಿ ನಾರಿಮನ್‌ ಅವರು ಅತ್ಯುತ್ತಮ ವಕೀಲ. ಅವರನ್ನು ಹೊರತುಪಡಿಸಿದರೆ ಇಷ್ಟು ಸಮರ್ಥವಾಗಿ ವಾದ ಮಂಡಿಸುವವರು ಸಿಗುವುದು ವಿರಳ. ಅವರು ಎಷ್ಟೇ ಉತ್ತಮವಾಗಿ ವಾದ ಮಂಡಿಸಿದರೂ ಸಹ ನ್ಯಾಯಮೂರ್ತಿಗಳು ಕೆಟ್ಟ ತೀರ್ಪು ನೀಡುತ್ತಿದ್ದಾರೆ. ಹೀಗಾಗಿ ವಕೀಲರ ತಂಡವನ್ನು ದೂರಿದರೆ ಏನೂ ಪ್ರಯೋಜನ ಆಗುವುದಿಲ್ಲ’ ಎಂದರು. ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿಯೇ ಇರುವ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್‌ನಿಂದ ಈ ರೀತಿ ಪದೇ ಪದೇ ಅನ್ಯಾಯವಾಗುತ್ತಿದೆ. ರಾಜ್ಯಕ್ಕೆ ಪ್ರತ್ಯೇಕ ಅಸ್ತಿತ್ವ ಕೇಳುವ ಕಾಲ ಸನ್ನಿಹಿತವಾಗುವ ಲಕ್ಷಣಗಳು ಕಾಣುತ್ತಿವೆ ಎಂದು  ಹೇಳಿದರು.ಸಿಜೆಗೆ ಅಧಿಕಾರ: ಕಾವೇರಿ ವಿಚಾರಣೆಯನ್ನು ದ್ವಿಸದಸ್ಯ ಪೀಠದಿಂದ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡುವಂತೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಬೇಕು. ಇಬ್ಬರು ನ್ಯಾಯಮೂರ್ತಿಗಳು ನೀಡುತ್ತಿರುವ ತೀರ್ಪಿನ ಬಗ್ಗೆ ಇಷ್ಟು ವಿರೋಧಗಳು ವ್ಯಕ್ತವಾಗುತ್ತಿರುವಾಗ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳೇ (ಸಿ.ಜೆ) ಈ ಹಿಂದಿನ ಎಲ್ಲ ಆದೇಶಗಳನ್ನು ಮರುಪರಿಶೀಲನೆಗೆ ಒಳಪಡಿಸಬಹುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry