‘ಹನಿ ನೀರನ್ನೂ ಹರಿಸಬೇಡಿ’

7

‘ಹನಿ ನೀರನ್ನೂ ಹರಿಸಬೇಡಿ’

Published:
Updated:
‘ಹನಿ ನೀರನ್ನೂ ಹರಿಸಬೇಡಿ’

ಮೈಸೂರು: ‘ಕಾವೇರಿ ಕಣಿವೆಯ ರೈತರ ಹಿತಾಸಕ್ತಿ ಕಾಪಾಡುವುದಕ್ಕಾಗಿ ತಮಿಳುನಾಡಿಗೆ ಹನಿ ನೀರನ್ನೂ ಹರಿಸಲು ಸಾಧ್ಯವಿಲ್ಲ ಎಂಬ ದೃಢ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು’ ಎಂದು ಕರ್ನಾಟಕ ಹಾಗೂ ಮದ್ರಾಸ್‌ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸಿ.ಶಿವಪ್ಪ ಸಲಹೆ ನೀಡಿದರು.ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇಲ್ಲ. ಕಾವೇರಿ ಮಂಡಳಿಗೆ ಈ ಅಧಿಕಾರವಿದ್ದು, ಮಂಡಳಿ ಇನ್ನೂ ರಚನೆಯಾಗಿಲ್ಲ. ಹೀಗಾಗಿ, ನೀರು ಬಿಡದಿದ್ದರೆ ಕಾನೂನು ತೊಡಕು ಎದುರಾಗದು’ ಎಂದು ಅಭಿಪ್ರಾಯಪಟ್ಟರು.‘ನೀರಿನ ಅಗತ್ಯತೆ ಕುರಿತು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವಂತಹ ಅಂಕಿ ಅಂಶಗಳನ್ನು ಸಂಗ್ರಹಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕುಡಿಯಲು ಮತ್ತು ಕೃಷಿಗೆ ಎಷ್ಟು ನೀರಿನ ಅಗತ್ಯವಿದೆ ಎಂಬುದನ್ನು ಸಮರ್ಥವಾಗಿ ನೀಡಿದ್ದರೆ ನ್ಯಾಯಪೀಠ ಇಂತಹ ತೀರ್ಪು ನೀಡುತ್ತಿರಲಿಲ್ಲ’ ಎಂದರು.

‘ನಾಲೆ ದುರಸ್ತಿಯ ನೆಪದಲ್ಲಿ ಕಳೆದ ವರ್ಷವೂ ಕೃಷಿಗೆ ಸರಿಯಾಗಿ ನೀರು ಬಿಡಲಿಲ್ಲ. ನೀರಿನ ಬಿಕ್ಕಟ್ಟು ಎದುರಾಗುವ ಮುನ್ಸೂಚನೆ ಇದ್ದರೂ, ಈ ಬಾರಿ ನಾಲೆಯಲ್ಲಿ ನೀರು ಹರಿಸಲಾಯಿತು. ಮುಂದೆಯೂ ನೀರು ನೀಡಬಹುದು ಎಂಬ ವಿಶ್ವಾಸದಿಂದ ರೈತರು ಭತ್ತ, ಕಬ್ಬು ಬೆಳೆದಿದ್ದಾರೆ. ಜಲಾಶಯಗಳಲ್ಲಿರುವ ನೀರನ್ನು ತಮಿಳುನಾಡಿಗೆ ಹರಿಸಿದರೆ ರೈತರ ಗತಿ ಏನು? ಎರಡು ವರ್ಷ ನಿರಂತರವಾಗಿ ಬೆಳೆ ಕೈಸೇರದಿದ್ದರೆ ರೈತರು ಬದುಕುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.‘ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ದ್ವಂದ್ವ ನೀತಿ ಅನುಸರಿಸುತ್ತಿದೆ. ಕಾವೇರಿ ಕಣಿವೆಯ ಕೆಳಭಾಗದಲ್ಲಿರುವ ತಮಿಳುನಾಡು ಪೆರಿಯಾರ್‌ ನದಿ ನೀರು ಹಂಚಿಕೆ ವಿಚಾರದಲ್ಲಿ ತದ್ವಿರುದ್ಧ ನಿಲುವು ತಳೆದಿದೆ. ಪೆರಿಯಾರ್‌ ಕಣಿವೆಯ ಕೆಳಭಾಗದಲ್ಲಿರುವ ಕೇರಳಕ್ಕೆ ಮೇಲ್ಭಾಗದ ಜಲಾಶಯದಿಂದ ನೀರು ಬಿಡಲು ಹಿಂದೇಟು ಹಾಕುತ್ತಿದೆ. ಇಂತಹ ಉಪಯುಕ್ತ ಮಾಹಿತಿಯನ್ನು ರಾಜ್ಯ ಸರ್ಕಾರ ಸಂಗ್ರಹಿಸಬೇಕು.  ತೀರ್ಪು ಪ್ರಶ್ನಿಸಿ ಕಾವೇರಿ ಕಣಿವೆಯ ರೈತರಿಂದಲೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿಸಿ, ಕಾನೂನು ನೆರವು ನೀಡಬೇಕು’ ಎಂದು ಹೇಳಿದರು.‘ಕಾವೇರಿ ನ್ಯಾಯಮಂಡಳಿ ರಚಿಸುವಂತೆ ತಮಿಳುನಾಡು 1969ರಲ್ಲಿಯೇ ಕೇಂದ್ರ ಸರ್ಕಾರದ ಮೊರೆ ಹೋಗಿತ್ತು. ಅದು ರಚನೆಯಾಗುವವರೆಗೂ ಕರ್ನಾಟಕ ಉದಾಸೀನ ತೋರಿತು’ ಎಂದು ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry