ರಾಜೀನಾಮೆ ಕೊಡಬೇಡಿ; ನೀರು ಬಿಡಬೇಡಿ

7

ರಾಜೀನಾಮೆ ಕೊಡಬೇಡಿ; ನೀರು ಬಿಡಬೇಡಿ

Published:
Updated:
ರಾಜೀನಾಮೆ ಕೊಡಬೇಡಿ; ನೀರು ಬಿಡಬೇಡಿ

ಬೆಂಗಳೂರು: ಕಾವೇರಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಚರ್ಚಿಸಿದರು.ಮುಖ್ಯಮಂತ್ರಿಗೆ ಸಲಹೆ ನೀಡಿದ ದೇವೇಗೌಡ ಅವರು, ‘ವಿಧಾನಸಭೆ ವಿಸರ್ಜಿಸುವುದಾಗಲಿ, ರಾಜೀನಾಮೆ ನೀಡುವುದಾಗಲಿ ಮಾಡಬೇಡಿ. ತಮಿಳುನಾಡಿಗೆ ನೀರು ಬಿಡದೇ ಇರುವ ಗಟ್ಟಿ ತೀರ್ಮಾನ ಕೈಗೊಳ್ಳಿ’ ಎಂದು ಸಲಹೆ ನೀಡಿದರು ಎಂದು ಗೊತ್ತಾಗಿದೆ. ಸಚಿವ ಎಚ್‌.ಸಿ. ಮಹಾದೇವಪ್ಪ ಅವರ ಜತೆ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ  ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು.ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಕಾವೇರಿ ಅಷ್ಟೇ ಅಲ್ಲ, ಇನ್ನೂ ಅನೇಕ ವಿಷಯಗಳ ಬಗ್ಗೆ ದೇವೇಗೌಡರೊಂದಿಗೆ ಚರ್ಚಿಸಿದ್ದೇನೆ. ಮುಖ್ಯವಾಗಿ ಕಾವೇರಿ ಬಿಕ್ಕಟ್ಟಿನ ಕುರಿತು ಅವರಿಂದ ಕೆಲವು ಸಲಹೆಗಳನ್ನು ಪಡೆದಿದ್ದೇನೆ’ ಎಂದಷ್ಟೇ  ಹೇಳಿದರು.ನಿರ್ವಹಣಾ ಮಂಡಳಿ ರಚಿಸುವ ಆದೇಶ ಪ್ರಧಾನಿ ತಿರಸ್ಕರಿಸಲಿ: ಬುಧವಾರ ಬೆಳಿಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ದೇವೇಗೌಡ ಅವರು, ಈಗ ಒಂದು ಲೋಟ ನೀರಿಗೂ ನಾವು ಅಮ್ಮನ (ಜಯಲಲಿತಾ) ಮುಂದೆ ಕೈಚಾಚುವ ಪರಿಸ್ಥಿತಿ ಬಂದಿದೆ ಎಂದು ದೇವೇಗೌಡರು ಹೇಳಿದರು.

ದಶಕದ ಬಳಿಕ ದೇವೇಗೌಡರ ಮನೆಗೆ ಹೋದ ಸಿದ್ದರಾಮಯ್ಯ

ಕಾವೇರಿ ವಿಷಯದಲ್ಲಿ ರಾಜ್ಯ ಕಷ್ಟಕ್ಕೆ ಈಡಾಗಿರುವ ಹೊತ್ತಿನಲ್ಲಿ ಹಳೆಯ ರಾಜಕೀಯ ದ್ವೇಷ ಬದಿಗಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಒಂದು ದಶಕದ ಬಳಿಕ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರು.

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ದೇವೇಗೌಡರೊಂದಿಗೆ ಮುನಿಸಿಕೊಂಡು, 2006ರಲ್ಲಿ ಜೆಡಿಎಸ್‌ನಿಂದ ಹೊರಬಂದಿದ್ದರು. ನಂತರ ನಡೆದ ಚುನಾವಣೆಗಳಲ್ಲಿ ಇಬ್ಬರೂ ಹಾವು ಮುಂಗುಸಿ ತರಹ  ವರ್ತಿಸುತ್ತಿದ್ದುದು ಸಾಮಾನ್ಯವಾಗಿತ್ತು. ಕಳೆದ ವರ್ಷ ಬಿಬಿಎಂಪಿಯಲ್ಲಿ ಕಾಂಗ್ರೆಸ್‌ ಜೊತೆ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳಬೇಕಾದರೆ ಮುಖ್ಯಮಂತ್ರಿಗಳು ದೇವೇಗೌಡರನ್ನು ಭೇಟಿ ಮಾಡಲಿ ಎಂದು ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಪಟ್ಟು ಹಿಡಿದಿದ್ದರು. ಆಗಲೂ ಗೌಡರನ್ನು ಭೇಟಿ ಮಾಡದ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಅವರನ್ನು ಕಳುಹಿಸಿದ್ದರು. ಹಳೆ ಮೈಸೂರು ಭಾಗದಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದ್ದು, ದೇವೇಗೌಡರು ಸರ್ಕಾರದ ನಿಲುವನ್ನು ಬೆಂಬಲಿಸಿದರೆ ಪ್ರತಿಭಟನೆ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬರುತ್ತದೆ. ಸರ್ವಪಕ್ಷ ಸಭೆಯನ್ನು ಬಿಜೆಪಿ ಬಹಿಷ್ಕರಿದ್ದು, ದೇವೇಗೌಡರ ಮನವೊಲಿಸಿ ಸಭೆಗೆ ಕರೆದುಕೊಂಡು ಬಂದರೆ ಕಾವೇರಿ ವಿಷಯದಲ್ಲಿ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ಬಿಜೆಪಿಗೆ ರವಾನಿಸಿದಂತಾಗುತ್ತದೆ ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರ ಎನ್ನಲಾಗಿದೆ.ಮಾಜಿ ಶಿಷ್ಯನಿಗೆ ಬಜ್ಜಿ: ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದ ಮಾಜಿ ಶಿಷ್ಯನನ್ನು  ‘ಸಿದ್ರಾಮು’ ಎಂದೇ ಆತ್ಮೀಯವಾಗಿ ಮಾತನಾಡಿಸಿದ ಗೌಡರು,  ಸಿದ್ದರಾಮಯ್ಯಗೆ ಇಷ್ಟ ಎಂದು ಮನೆಯಲ್ಲಿಯೇ ಬಾಳೆಕಾಯಿ ಬಜ್ಜಿ ಮತ್ತು ಶುಂಠಿ ಚಹ ಮಾಡಿಸಿದ್ದರು. ಆದರೆ, ಅನಾರೋಗ್ಯದ ಕಾರಣದಿಂದ ಸಿದ್ದರಾಮಯ್ಯ ಸೇವಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.ಬುದ್ಧಿಜೀವಿಗಳು ಎಲ್ಲಿ ಹೋಗಿದ್ದಾರೆ?: ಕುಡಿಯುವ ಉದ್ದೇಶಕ್ಕೆ ಮಾತ್ರ ಕಾವೇರಿ ನೀರು ಬಿಡಲಿ. ಆದರೆ,  ಬೆಂಗಳೂರಿನ ಜನ ಮನೆಯಲ್ಲಿ ಕುಳಿತರೆ ಆಗದು. ನಮ್ಮ ಬುದ್ಧಿಜೀವಿಗಳು ಎಲ್ಲಿ ಹೋಗಿದ್ದಾರೆ? ಎಂದು  ದೇವೇಗೌಡ ಅವರು ಪ್ರಶ್ನಿಸಿದರು.

‘ನಾಫಡೆ ಸಖ್ಯ ಪ್ರಶ್ನಾರ್ಹ’

ಬೆಂಗಳೂರು: ನ್ಯಾಯಮೂರ್ತಿ ಉದಯ ಲಲಿತ್‌ ಅವರ ನ್ಯಾಯಪೀಠದ ಮುಂದೆ ತಮಿಳುನಾಡು ಪರ ವಕೀಲ ಶೇಖರ್‌ ನಾಫಡೆ ವಾದ ಮಂಡಿಸಿರುವುದಕ್ಕೆ ಭಾರತೀಯ ವಕೀಲ ಪರಿಷತ್‌ ಸದಸ್ಯ ವೈ.ಆರ್‌.ಸದಾಶಿವ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.‘ನಾಫಡೆ ಮತ್ತು ನ್ಯಾಯಮೂರ್ತಿ ಉದಯ್‌ ಲಲಿತ್‌  ಒಂದೇ ಕಚೇರಿಯಲ್ಲಿ ಸಹೋದ್ಯೋಗಿಗಳಾಗಿ 15 ವರ್ಷಗಳ ಕಾಲ ವಕೀಲಿಕೆ ನಡೆಸಿದ್ದಾರೆ. ಹೀಗಿರುವಾಗ ನಾಫಡೆ ಅವರು ಲಲಿತ್‌  ಪೀಠದ ಮುಂದೆ ಹಾಜರಾಗಿ ವಾದ ಮಂಡಿಸುವುದು ಎಷ್ಟರ ಮಟ್ಟಿಗೆ ಸರಿ? ‘ಈ ವಿಷಯವನ್ನು ಕರ್ನಾಟಕ ಪರ ವಕೀಲರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಗಮನಕ್ಕೆ ತರಬೇಕಿತ್ತು. ಆದರೆ ಈ ವಿಷಯದಲ್ಲಿ ಎಡವಿದ್ದಾರೆ’ ಎಂದು ದೂರಿದರು.

ಇಂದು ಆಕ್ಷೇಪಣೆ ಸಲ್ಲಿಕೆ?

ನವದೆಹಲಿ:  ತಮಿಳುನಾಡಿಗೆ ಸೆ.  30ರವರೆಗೆ ನಿತ್ಯ 3,000 ಕ್ಯುಸೆಕ್‌ ನೀರು ಹರಿಸುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿಯು ಕಳೆದ ಸೋಮವಾರ ನೀಡಿರುವ ಆದೇಶ  ಪ್ರಶ್ನಿಸಿ ಕರ್ನಾಟಕವು ಗುರುವಾರ ಸುಪ್ರೀಂ ಕೋರ್ಟ್‌ಗೆ ಆಕ್ಷೇಪಣೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.ಸಮಿತಿಯ ಕುರಿತೇ ಮಂಗಳವಾರ ನಡೆದ ವಿಚಾರಣೆ ವೇಳೆ ಸಂಶಯ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತು ಯು.ಯು. ಲಲಿತ್‌ ಅವರ ಪೀಠ, ಆಕ್ಷೇಪಣೆ ಸಲ್ಲಿಸಲು ಕರ್ನಾಟಕ ಮತ್ತು ತಮಿಳುನಾಡುಗಳಿಗೆ ಮೂರು ದಿನಗಳ ಕಾಲಾವಕಾಶ ನೀಡಿತ್ತು.

ಬುಧವಾರ ದಿನವಿಡೀ ಸಭೆ

*ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ

  *ಸಚಿವ ಸಂಪುಟ ಸಭೆ

  *ಕಾಂಗ್ರೆಸ್‌ ಸಂಸದರು, ರಾಜ್ಯಸಭಾ ಸದಸ್ಯರಿಂದ ಸಿ.ಎಂ ಭೇಟಿ

 *ಎಚ್‌.ಡಿ. ದೇವೇಗೌಡ  ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ

 *ವಿಧಾನಸೌಧದಲ್ಲಿ ಸರ್ವಪಕ್ಷಗಳ ಸಭೆ

 *ವಿಶೇಷ ಸಂಪುಟ ಸಭೆಕಾವೇರಿ ಹರಿದಿದ್ದು ಹೀಗೆ

* ಸೆ.10ರಿಂದ 17ರವರೆಗೆ ನಿತ್ಯ 15 ಸಾವಿರ ಕ್ಯುಸೆಕ್‌ ನೀರು ಬಿಡಲು ಸುಪ್ರೀಂ ಕೋರ್ಟ್‌

ಸೆ. 5ರಂದು ಆದೇಶ.

* ಆದೇಶ ಮಾರ್ಪಾಡು ಕೋರಿ ರಾಜ್ಯ ಸರ್ಕಾರದಿಂದ ಸೆ.10ಕ್ಕೆ ಅರ್ಜಿ.

* ನಿತ್ಯ 12 ಸಾವಿರ ಕ್ಯುಸೆಕ್‌ನಂತೆ 10 ದಿನ ನೀರು ಬಿಡಲು ಸುಪ್ರೀಂ ಸೆ. 12ರಂದು ಆದೇಶ.

* 3 ಸಾವಿರ ಕ್ಯುಸೆಕ್‌ನಂತೆ 10 ದಿನ ನೀರು ಬಿಡಲು ಕಾವೇರಿ ಮೇಲುಸ್ತುವಾರಿ ಸಮಿತಿಯಿಂದ ಸೆ.19ರಂದು ಆದೇಶ

* ನಿತ್ಯ 6 ಸಾವಿರ ಕ್ಯುಸೆಕ್‌ನಂತೆ ಏಳು ದಿನ ನೀರು ಹರಿಸಲು ಸುಪ್ರೀಂ ಕೋರ್ಟ್‌

ಸೆ. 20ರಂದು ಆದೇಶ.

ರೈತರ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ   ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಕಾವೇರಿ ವಿವಾದವನ್ನು ಸಾಂವಿಧಾನಿಕ ಪೀಠದ ಮುಂದೆ ತೆಗೆದುಕೊಂಡು ಹೋಗುವುದು ಸೂಕ್ತ.

- ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್‌ ನಾಯಕ

ಅಧಿವೇಶನ ಕರೆದು ಚರ್ಚೆ ನಡೆಸಲು ಸಲಹೆ ನೀಡಿದ್ದೇನೆ. ಕಾವೇರಿ ಕಣಿವೆ ಮೂಲದವರಾದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ರೈತರಿಗಾಗಿ ಸರ್ಕಾರದ ಜೊತೆ ಇರಬೇಕು

ಎಚ್‌.ಡಿ. ದೇವೇಗೌಡ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ

ಪ್ರಸಕ್ತ ಸನ್ನಿವೇಶದಲ್ಲಿ ತಮಿಳುನಾಡಿಗೆ ನೀರು ಬಿಡುವುದು ಬೇಡ ಎಂದು ಈ ಹಿಂದಿನ ಸರ್ವಪಕ್ಷಗಳ ಸಭೆಯಲ್ಲೇ ತೀರ್ಮಾನಿಸಲಾಗಿತ್ತು. ಆದರೆ, ಸರ್ಕಾರ ಈ ತೀರ್ಮಾನಕ್ಕೆ ವಿರುದ್ಧ ನಿಲುವು ತಳೆದು ವಿಶ್ವಾಸ ದ್ರೋಹ ಮಾಡಿದೆ

ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ವಿಧಾನ ಮಂಡಲಕ್ಕಿಂತ ಯಾವುದೇ ಕೋರ್ಟ್‌ ದೊಡ್ಡದಲ್ಲ. ತುರ್ತು ಅಧಿವೇಶನದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಒಂದು ಹನಿ ನೀರು ಹರಿಸಬಾರದು

ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry