5

ಅಲಿಪ್ತ ಒಕ್ಕೂಟ: ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ

ಸುಧೀಂದ್ರ ಬುಧ್ಯ
Published:
Updated:
ಅಲಿಪ್ತ ಒಕ್ಕೂಟ: ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ

ಪರಿಸ್ಥಿತಿಗೆ ತಕ್ಕಂತೆ ವಿದೇಶಾಂಗ ನೀತಿ ಬದಲಾಗುವ ಇಂದಿನ ಕಾಲಘಟ್ಟಕ್ಕೆ ‘ಅಲಿಪ್ತ ನೀತಿ’ ಎಷ್ಟು ಪ್ರಸ್ತುತ?*

ಮೂರು ವರ್ಷಗಳಿಗೊಮ್ಮೆ ನಡೆಯುವ ಅಲಿಪ್ತ ಒಕ್ಕೂಟದ ಶೃಂಗಸಭೆ ಈ ಬಾರಿ ‘ಪರ್ಲ್ ಆಫ್ ಕೆರೆಬಿಯನ್’ ಎಂದು ಕರೆಯಲಾಗುವ ವೆನಿಜುವೆಲಾದ ಮಾರ್ಗರಿಟಾ ದ್ವೀಪದಲ್ಲಿ ಆಯೋಜನೆಯಾಗಿತ್ತು. 3 ದಿನಗಳು ನಡೆದ ಈ ಸಭೆ ಹೆಚ್ಚು ಸುದ್ದಿ ಮಾಡಲಿಲ್ಲ.ಯಾವುದೇ ಮಹತ್ವದ ನಿರ್ಣಯಗಳನ್ನು ಸಭೆ ಅಂಗೀಕರಿಸಿದಂತಿಲ್ಲ. ವಿಶ್ವಸಂಸ್ಥೆಯನ್ನು ಬಿಟ್ಟರೆ  ಎರಡನೇ ಅತಿದೊಡ್ಡ ಒಕ್ಕೂಟ ಎನಿಸಿಕೊಂಡಿರುವ ‘ಅಲಿಪ್ತ ಒಕ್ಕೂಟ’ ಸುಮಾರು 125 ರಾಷ್ಟ್ರಗಳ ಸದಸ್ಯತ್ವ ಹೊಂದಿದೆಯಾದರೂ, ಸೋವಿಯತ್ ವಿಘಟನೆಯ ಬಳಿಕ ವರ್ಷದಿಂದ ವರ್ಷಕ್ಕೆ ಕಳೆಗುಂದುತ್ತಾ, ‘ಅಲಿಪ್ತ ನೀತಿ’ ಇಂದಿಗೆ ಎಷ್ಟು ಪ್ರಸ್ತುತ ಎಂಬ ಪ್ರಶ್ನೆಯನ್ನು ಎದುರಿಡುತ್ತಲೇ ಬಂದಿದೆ. ಶೃಂಗಸಭೆಯಲ್ಲಿ ಭಾಗವಹಿಸುವ ಆಸಕ್ತಿಯನ್ನು ಸದಸ್ಯ ರಾಷ್ಟ್ರಗಳೂ ಕ್ರಮೇಣ ಕಳೆದುಕೊಂಡಂತೆ ಕಾಣುತ್ತಿದೆ.2012ರಲ್ಲಿ ನಡೆದ ಶೃಂಗಸಭೆಯಲ್ಲಿ ಸುಮಾರು 35 ದೇಶಗಳ ಪ್ರಮುಖ ನೇತಾರರು ಭಾಗವಹಿಸಿದ್ದರೆ, ಈ ಬಾರಿ ಕೇವಲ 12 ಪ್ರಮುಖರಷ್ಟೇ ಹಾಜರಿದ್ದರು. ಒಕ್ಕೂಟಕ್ಕೆ ಬುನಾದಿ ಹಾಕಿದ ರಾಷ್ಟ್ರಗಳಲ್ಲಿ ಒಂದಾದ ಭಾರತದ ಪರವಾಗಿ ಪ್ರಧಾನಿ ಭಾಗವಹಿಸದೆ, ಉಪಾಧ್ಯಕ್ಷ ಹಮೀದ್ ಅನ್ಸಾರಿ ಭಾಗವಹಿಸಿ ಬಂದರು.ಸಾರ್ಕ್ ಸದಸ್ಯ ರಾಷ್ಟ್ರಗಳಾದ ಪಾಕಿಸ್ತಾನ, ನೇಪಾಳ, ಬಾಂಗ್ಲಾ ಮತ್ತು ಶ್ರೀಲಂಕಾದ ಮುಖ್ಯಸ್ಥರು ಕೂಡ ಹಾಜರಾಗಲಿಲ್ಲ. ಈ ದೇಶಗಳು ನೆಪಕ್ಕೆ ಪ್ರತಿನಿಧಿಯೊಬ್ಬರನ್ನು ಕಳುಹಿಸಿದ್ದವು. ಸದಸ್ಯ ರಾಷ್ಟ್ರಗಳ ಈ ನಿರುತ್ಸಾಹಕ್ಕೆ ಹಲವು ಕಾರಣಗಳಿರಬಹುದು.ಒಂದು, ವೆನಿಜುವೆಲಾ ಆರ್ಥಿಕ ಹಿಂಜರಿತ ಮತ್ತು ರಾಜಕೀಯ ಬಿಕ್ಕಟ್ಟಿನಿಂದ ನಲುಗುತ್ತಿದೆ, ಜೊತೆಗೆ ಪಕ್ಷಗಳ ಸೈದ್ಧಾಂತಿಕ ಕಚ್ಚಾಟದಿಂದ ದೇಶದ ರಾಜಕೀಯ ವ್ಯವಸ್ಥೆಯೂ ಸಮತೋಲನ ತಪ್ಪಿದೆ. ಎರಡು, ಈ ದೇಶ ಪದೇ ಪದೇ ಅಮೆರಿಕದ ವಿರುದ್ಧ ಕೆಂಡ ಉಗುಳುತ್ತಲೇ ಬಂದಿದೆ.ಹಾಗಾಗಿ ಅಮೆರಿಕದೊಂದಿಗೆ ಉತ್ತಮ ಸಂಬಂಧ ಬಯಸುವ ರಾಷ್ಟ್ರಗಳು ವೆನಿಜುವೆಲಾದೊಂದಿಗೆ ಗುರುತಿಸಿಕೊಳ್ಳಲು ಸಿದ್ಧವಿರಲಿಲ್ಲ. ಮೂರು, ಮುಖ್ಯವಾಗಿ ‘ಅಲಿಪ್ತ ಒಕ್ಕೂಟ’ ಕಳೆದ ಎರಡು ದಶಕಗಳಿಂದೀಚೆಗೆ ತನ್ನ ಪ್ರಸ್ತುತತೆಯನ್ನೇ ಪಣಕ್ಕೊಡ್ಡಿದೆ.

ಹಾಗೆ ನೋಡಿದರೆ, ಅಲಿಪ್ತ ನೀತಿಗೆ ಓಂಕಾರ ಬರೆದದ್ದೇ ಭಾರತ. ಭಾರತದ ವಿದೇಶಾಂಗ ನೀತಿಗೆ ಸ್ವರ ವ್ಯಂಜನ ಜೋಡಿಸಿದ ನೆಹರೂರ ತಲೆಯಲ್ಲಿ ಅಲಿಪ್ತ ತತ್ವದ ಬೀಜ ಸ್ವಾತಂತ್ರ್ಯಪೂರ್ವದಲ್ಲೇ ಮೊಳಕೆಯೊಡೆದಿತ್ತು.1926ರ ಬ್ರುಸೆಲ್ ಕಾಂಗ್ರೆಸ್ ಅಧಿವೇಶನಕ್ಕೆ ಭಾರತದ ಪ್ರತಿನಿಧಿಯಾಗಿ ತೆರಳಿದ್ದ ನೆಹರೂ, ಅಲ್ಲಿಂದ ಹಿಂದಿರುಗಿದ ಮೇಲೆ, ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಭೆಯಲ್ಲಿ ‘ಮುಂದೆ ನಡೆಯುವ ಜಾಗತಿಕ ಯುದ್ಧದಲ್ಲಿ ನಾವು ಯಾವ ಗುಂಪಿನೊಂದಿಗೂ ಗುರುತಿಸಿಕೊಳ್ಳುವುದು ಬೇಡ’ ಎಂಬುದಾಗಿ ಹೇಳಿದ್ದರು.ಮುಖ್ಯವಾಗಿ ಎರಡು ಕಾರಣಗಳಿಗಿರಬಹುದು. ಒಂದು ನೈತಿಕತೆಯ ಪ್ರಶ್ನೆ. ಗಾಂಧಿ ಅವರ ಅಹಿಂಸಾ ತತ್ವದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಚಳವಳಿಯನ್ನು ರೂಪಿಸಿದ ದೇಶ, ಯುದ್ಧೋತ್ಸಾಹ ತೋರಬಾರದು ಎನ್ನುವುದು.ಎರಡು, ಬ್ರಿಟಿಷ್ ವಸಾಹತಿನಿಂದ ಮುಕ್ತಿಗೊಂಡು ಉದಯಿಸುತ್ತಿರುವ ನಾಡು, ಜಗತ್ತಿನ ಯಾವ ಶಕ್ತಿಶಾಲಿ ರಾಷ್ಟ್ರದೊಂದಿಗೂ ದ್ವೇಷ ಕಟ್ಟಿಕೊಳ್ಳಬಾರದು ಎನ್ನುವುದು. ಇದು, ವಸಾಹತಿನಿಂದ ಹೊರಬಂದ ಏಷ್ಯಾ ಮತ್ತು ಆಫ್ರಿಕಾದ ಇತರ ಸಣ್ಣಪುಟ್ಟ ದೇಶಗಳ ನಿಲುವೂ ಆಗಿತ್ತು.‘ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರುವುದು ಆರ್ಥಿಕ ಸ್ವಾವಲಂಬನೆ ಸಾಧ್ಯವಾದಾಗ ಮತ್ತು ಆರ್ಥಿಕ ಸ್ವಾವಲಂಬನೆಯು ರಾಜಕೀಯ ಸ್ವಾತಂತ್ರ್ಯ ಗಳಿಸಿಕೊಳ್ಳುವುದಕ್ಕಿಂತ ಕಠಿಣ’ ಎಂಬ ನೆಹರೂರ ಮಾತು ಎರಡನೇ ಕಾರಣವನ್ನು ಬೆಂಬಲಿಸುತ್ತದೆ.ಸ್ವಾತಂತ್ರ್ಯ ಘೋಷಣೆಯಾಗುವ ಮೊದಲು 1946ರ ಸೆಪ್ಟೆಂಬರ್ 7ರಂದು ರೇಡಿಯೊದಲ್ಲಿ ಮನದ ಮಾತುಗಳನ್ನು ಆಡಿದ್ದ ನೆಹರೂ, ‘We propose, as for as possible, to keep away from the power politics of the groups aligned against one another, which have led in the past to world wars and which may again lead to disasters on an even vaster scale’ ಎಂದಿದ್ದರು.ನಂತರದ ವರ್ಷಗಳಲ್ಲಿ ದೇಶದ ಚುಕ್ಕಾಣಿ ಹಿಡಿದ ನಾಯಕನಲ್ಲಿ, ಅದಾಗಲೇ ಭಾರತ ಇಡಬೇಕಾದ ಹೆಜ್ಜೆಗಳ ಬಗ್ಗೆ ಖಚಿತತೆ ಇತ್ತು.ಅಂತೆಯೇ, ಅಧಿಕಾರ ವಹಿಸಿಕೊಂಡ ತರುವಾಯ ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲಿ ‘ವಿದೇಶಾಂಗ ವ್ಯವಹಾರಗಳ ಕುರಿತಾದ ಭಾರತದ ನಿಲುವು ಸ್ಪಷ್ಟವಾಗಿದೆ. ಯಾವುದೇ ಪ್ರಭಾವಲಯಕ್ಕೆ ಭಾರತ ಒಳಪಡಲಾರದು. ಒಂದು ಮತ್ತೊಂದರ ವಿರುದ್ಧ ತಿರುಗಿಬಿದ್ದಿರುವ ಶಕ್ತಿ ಕೇಂದ್ರಗಳೊಂದಿಗೆ ರಾಜಕೀಯವಾಗಿ ಗುರುತಿಸಿಕೊಳ್ಳಲು ಭಾರತ ಇಚ್ಛಿಸುವುದಿಲ್ಲ’ ಎಂದಿದ್ದರು.ಅದು ನಂತರ ಅಲಿಪ್ತ ನೀತಿಯ ವ್ಯಾಖ್ಯಾನವೂ ಆಯಿತು. 1947ರ ಡಿಸೆಂಬರ್ 4ರಂದು ಪ್ರಜಾಪ್ರತಿನಿಧಿ ಸಭೆ ಉದ್ದೇಶಿಸಿ ಮಾತನಾಡುತ್ತಾ, ‘ನಾವು ಜಗತ್ತಿನ ಎಲ್ಲ ರಾಷ್ಟ್ರಗಳೊಂದಿಗೂ ಸ್ನೇಹ ಮತ್ತು ಸಹಕಾರ ಬಯಸುತ್ತೇವೆ. ನಮಗೆ ಅಮೆರಿಕದ ಸ್ನೇಹವೂ ಮುಖ್ಯ, ಸೋವಿಯತ್ ರಷ್ಯಾದ ಸಹಕಾರವೂ ಅಗತ್ಯ’ ಎಂದಿದ್ದರು. ಆದರೆ ನಂತರ ಭಾರತ ರಷ್ಯಾದತ್ತ ಹೆಚ್ಚು ವಾಲಿತು ಎನ್ನುವುದು ಬೇರೆಯ ಮಾತು.ಎರಡನೇ ವಿಶ್ವಯುದ್ಧದ ಬಳಿಕ, ಶೀತಲ ಸಮರದ ದಿನಗಳಲ್ಲಿ ಪಶ್ಚಿಮ ದೇಶಗಳು ‘ನ್ಯಾಟೊ’ ಮತ್ತು ಪೂರ್ವ ದೇಶಗಳು ‘ವಾರ್ ಪ್ಯಾಕ್ಟ್’ ಮಿಲಿಟರಿ ಒಪ್ಪಂದ ಮಾಡಿಕೊಂಡು ಎರಡು ಧ್ರುವಗಳಾದವು. ಈ ಎರಡು ಗುಂಪುಗಳ ನಡುವೆ ಆರದೇ ಉಳಿದ ಹಗೆ ಮತ್ತೊಂದು ಗಂಡಾಂತರಕ್ಕೆ ಕಾರಣವಾಗಬಹುದೇ ಎಂಬ ಆತಂಕ ಸೃಷ್ಟಿಯಾಗಿತ್ತು.ಆಗ ಅಲಿಪ್ತ ನೀತಿಯ ಬಗ್ಗೆ ಒಲವುಳ್ಳ ಸಮಾನ ಮನಸ್ಕ ರಾಷ್ಟ್ರಗಳನ್ನು ಬೆಸೆದು ಜಾಗತಿಕವಾಗಿ ತೃತೀಯ ಶಕ್ತಿಯನ್ನು ಬೆಳೆಸುವ ಕೆಲಸವನ್ನು ನೆಹರೂ ಮಾಡಿದರು. ಭಾರತದ ಪ್ರಧಾನಿಯಾದ ನಂತರ, ಜಾಗತಿಕ ವೇದಿಕೆಯಲ್ಲಿ ಗುರುತಿಸಿಕೊಳ್ಳುವ ಮಹತ್ವಾಕಾಂಕ್ಷೆ ನೆಹರೂ ಅವರಿಗಿತ್ತು.ಯುಗೊಸ್ಲಾವಿಯಾ ಅಧ್ಯಕ್ಷ ಟಿಟೋ, ಈಜಿಪ್ಟ್‌ನ ಅಧ್ಯಕ್ಷ ನಾಸೆರ್, ಗಾನಾ ಅಧ್ಯಕ್ಷ ಕ್ವಾಮೆ ನುಕ್ರಮೆ ಜೊತೆಗೂಡಿ ನೆಹರೂ ಅಲಿಪ್ತ ಚಳವಳಿಯ ಮುಂದಾಳು ಎನಿಸಿಕೊಂಡರು. ಆಫ್ರಿಕಾ, ಏಷ್ಯಾ, ಲ್ಯಾಟಿನ್ ಅಮೆರಿಕ, ಯುರೋಪ್‌ನ ಹಲವು ದೇಶಗಳು, ಪೂರ್ವ ಮತ್ತು ಪಶ್ಚಿಮ ಅತಿರೇಕಿಗಳಿಂದ ದೂರ ಸರಿದು, ಕಾದಾಡಿ ಬಾಳುವುದಕ್ಕಿಂತ ಕೂಡಿ ಬಾಳುವ ಕನಸು ಕಂಡವು.1955ರಲ್ಲಿ ಇಂಡೊನೇಷ್ಯಾದ ಬಾಂಡುಂಗ್‌ನಲ್ಲಿ ನಡೆದ ಏಷ್ಯನ್- ಆಫ್ರಿಕನ್ ಸಭೆಯಲ್ಲಿ ಏಷ್ಯಾ ಮತ್ತು ಆಫ್ರಿಕಾದ ಸುಮಾರು 29 ರಾಷ್ಟ್ರಗಳ ಮುಖಂಡರು ಭಾಗವಹಿಸಿದ್ದರು. ಆ ಸಭೆಯಲ್ಲಿ ಹತ್ತು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಅವು ನಂತರ ಅಲಿಪ್ತ ರಾಷ್ಟ್ರಗಳ ವಿದೇಶಾಂಗ ನೀತಿಯಲ್ಲಿ ಸೇರ್ಪಡೆಯಾದವು. ಅಣ್ವಸ್ತ್ರ ನಿಶ್ಶಸ್ತ್ರೀಕರಣ ಒಕ್ಕೂಟದ ಪ್ರಮುಖ ಆದ್ಯತೆಯಾಯಿತು.ಸೂಪರ್ ಪವರ್ ರಾಷ್ಟ್ರಗಳ ಆಕ್ರಮಣಕಾರಿ ಪ್ರವೃತ್ತಿಯನ್ನು ವಿರೋಧಿಸುವುದು, ಸಣ್ಣ ದೇಶಗಳ ಸಾರ್ವಭೌಮತ್ವವನ್ನು ಗೌರವಿಸುವುದು, ಇತರ ದೇಶಗಳ ಆಂತರಿಕ ವಿಷಯದಲ್ಲಿ ಮಧ್ಯ ಪ್ರವೇಶಿಸದಿರುವುದು, ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವುದು, ವಿವಿಧ ಜನಾಂಗ ಮತ್ತು ರಾಷ್ಟ್ರಗಳ ನಡುವಿನ ಸಮಾನತೆಯನ್ನು ಬೆಂಬಲಿಸುವುದು, ಅಂತರ ರಾಷ್ಟ್ರೀಯ ಬಿಕ್ಕಟ್ಟುಗಳನ್ನು ಶಾಂತಿಯುತವಾಗಿ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದು, ಅಂತರರಾಷ್ಟ್ರೀಯ ಕಾನೂನು, ನಿರ್ಣಯಗಳನ್ನು ಉಲ್ಲಂಘಿಸದಿರುವುದು ಮುಖ್ಯ ನಿರ್ಣಯಗಳಾದವು.ಅಲಿಪ್ತ ಒಕ್ಕೂಟದ ಬಗ್ಗೆ ಟೀಕೆಗಳೂ ಬಂದವು. ‘ಅಲಿಪ್ತ ನೀತಿ ದುರ್ಬಲರ ಆಯುಧ’ ಎನ್ನಲಾಯಿತು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಪೋಸ್ಟರ್ ಡಲ್ಲಸ್ ಅಲಿಪ್ತ ನೀತಿಯನ್ನು ಕಟುವಾಗಿ ಟೀಕಿಸಿದರೆ, ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಮೊಹಮದ್ ಅಯೂಬ್ ಖಾನ್ ‘ಭಾರತದ ಅಲಿಪ್ತ ನೀತಿ ಒಂದು ಬೂಟಾಟಿಕೆ, ಬೇಲಿಯ ಮೇಲೆ ಕೂತು, ಯಾರ ಕಡೆಗೂ ನಾವಿಲ್ಲ ಎನ್ನುತ್ತಾ, ಎರಡೂ ಕಡೆಯಿಂದ ಲಾಭ ಪಡೆಯಲು ಮಾಡಿದ ಕುತಂತ್ರ’ ಎಂದರು.ಭಾರತ, ತನ್ನ ವಿದೇಶಾಂಗ ನೀತಿಯ ಕೇಂದ್ರ ಬಿಂದುವಾಗಿ ಅಲಿಪ್ತ ತತ್ವವನ್ನು ಇಟ್ಟುಕೊಳ್ಳುವುದು ಸರಿಯಲ್ಲ ಎಂಬ ಅಭಿಪ್ರಾಯ ದೇಶದ ಒಳಗೂ ಕೇಳಿಬಂತು. ಭಾರತದ ಮೊದಲ ಗೌರ್ನರ್ ಜನರಲ್ ಆಗಿದ್ದ ಸಿ.ರಾಜಗೋಪಾಲಾಚಾರಿ, ನೆಹರೂ ಪ್ರತಿಪಾದಿಸಿದ ಅಲಿಪ್ತ ನೀತಿಯನ್ನು ವಿರೋಧಿಸಿದ್ದರು. ‘ದೂರದೃಷ್ಟಿಯಿಂದ ಯೋಚಿಸಿ, ಪಶ್ಚಿಮ ದೇಶಗಳೊಂದಿಗೆ ಭಾರತ ಬಾಂಧವ್ಯ ವೃದ್ಧಿಸಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟಿದ್ದರು.ಆದರೆ ನೆಹರೂ ಮಾತ್ರ ತಾವು ಅಂಟಿಕೊಂಡ ನಿಲುವನ್ನು ಬಿಡಲಿಲ್ಲ ‘Essentially, non-alignment is freedom of action which is part of Independence’ ಎಂದು ಸಮರ್ಥಿಸಿಕೊಂಡರು.ಮುಖ್ಯವಾಗಿ, ‘ಅಲಿಪ್ತವಾಗಿರುವುದೆಂದರೆ ಜಗತ್ತಿನ ಆಗುಹೋಗುಗಳ ಬಗ್ಗೆ ಉದಾಸೀನ ತೋರುವುದಾಗಲಿ, ತನ್ನ ಧೋರಣೆಯನ್ನು ಸ್ಪಷ್ಟಪಡಿಸದೆ ತಟಸ್ಥವಾಗಿರುವುದಾಗಲೀ ಅಲ್ಲ’ ಎಂಬುದನ್ನು ನೆಹರೂ ಪದೇ ಪದೇ ಹೇಳಿದರು.1960ರಲ್ಲಿ ವಿಶ್ವಸಂಸ್ಥೆಯ ಬಾತ್ಮೀದಾರರನ್ನು ಉದ್ದೇಶಿಸಿ ನ್ಯೂಯಾರ್ಕ್‌ನಲ್ಲಿ ನೆಹರೂ ಆಡಿದ ಮಾತುಗಳಿವು ‘People use the word ‘neutral’ in regard to India’s policy. I do not like the word ‘neutral’. I do not even like India’s policy being referred to as ‘positive neutrality’ as is done in some countries. Without doubts, we are unaligned and uncommitted to military blocs; but the important fact is that we are committed to various policies, various urges, objectives and principles’.90ರ ದಶಕದ ಆರಂಭದಲ್ಲಿ ಜಾಗತಿಕ ಸನ್ನಿವೇಶ ಬದಲಾಗತೊಡಗಿತು. ಸೋವಿಯತ್ ವಿಘಟನೆಯಾಯಿತು. ಪೂರ್ವ ಮತ್ತು ಪಶ್ಚಿಮ ಧ್ರುವಗಳ ಸಮೀಕರಣ ಬದಲಾಯಿತು. ಆರ್ಥಿಕ ಕುಸಿತದಿಂದ ಸಣ್ಣಪುಟ್ಟ ದೇಶಗಳೂ ತಲ್ಲಣಗೊಂಡವು.

ವೆನಿಜುವೆಲಾ, ಜಿಂಬಾಬ್ವೆ ಮತ್ತು ಇರಾನ್‌ನಂತಹ ಬೆರಳೆಣಿಕೆಯ ರಾಷ್ಟ್ರಗಳನ್ನು ಬಿಟ್ಟರೆ, ಒಕ್ಕೂಟದ ಬಹುತೇಕ ರಾಷ್ಟ್ರಗಳು ಅಲಿಪ್ತ ನೀತಿಯಿಂದ ಕದಲಿ ಅಮೆರಿಕ ಅಥವಾ ರಷ್ಯಾ ಜೊತೆ ರಾಜಕೀಯ, ವಾಣಿಜ್ಯ, ರಕ್ಷಣಾ ಒಪ್ಪಂದಗಳನ್ನು ಮಾಡಿಕೊಂಡವು. ಅಲಿಪ್ತ ಒಕ್ಕೂಟದ ಸದಸ್ಯತ್ವವನ್ನು ಮಾತ್ರ ಹಾಗೆಯೇ ಉಳಿಸಿಕೊಂಡವು.ಭಾರತವೂ ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕಿತು. ನೆಹರೂ ಪಥದಿಂದ ಆಚೀಚೆ ಸರಿಯುವ, ಭಾರತದ ವಿದೇಶಾಂಗ ನೀತಿಗೆ ಮಹತ್ವದ ಬದಲಾವಣೆಯನ್ನು ತರುವ ಕೆಲಸವನ್ನು ಪಿ.ವಿ.ನರಸಿಂಹ ರಾವ್ ಮಾಡಿದರು. ಅಮೆರಿಕವಷ್ಟೇ ಅಲ್ಲ ಇಸ್ರೇಲ್, ಜಪಾನ್, ಸಿಂಗಪುರ, ವಿಯೆಟ್ನಾಂ ಜೊತೆಗಿನ ಸಂಬಂಧ ಪಿವಿಎನ್ ಅವಧಿಯಲ್ಲಿ ಗಟ್ಟಿಯಾಯಿತು. ನಂತರ ವಾಜಪೇಯಿ ಅದೇ ಮಾರ್ಗದಲ್ಲಿ ನಡೆದರು.ಮನಮೋಹನ್ ಸಿಂಗ್ ಅವಧಿಯಲ್ಲಿ, ಪ್ರಣವ್‌ ಮುಖರ್ಜಿ ರಕ್ಷಣಾ ಸಚಿವರಾಗಿದ್ದ ಕಾಲಘಟ್ಟದಲ್ಲಿ ಕೂಡ ಪಿವಿಎನ್ ಮಾರ್ಗವನ್ನೇ ಅನುಸರಿಸಲಾಯಿತು. ಮೋದಿ ಅವರ ಅವಧಿಯಲ್ಲಿ ಅದಕ್ಕೆ ಮತ್ತಷ್ಟು ವೇಗ ಬಂತು. ಅಮೆರಿಕದೊಂದಿಗಿನ ಸ್ನೇಹವನ್ನು ಭಾರತ ಗಾಢವಾಗಿಸಿಕೊಂಡಿತು. ಸ್ವತಃ ಒಬಾಮ ಗಣರಾಜ್ಯ ದಿನದ ಅತಿಥಿಯಾಗಿ ಬಂದರು.ರಕ್ಷಣಾ ಒಪ್ಪಂದಗಳು ಏರ್ಪಟ್ಟವು. ಸೇನಾ ನೆಲೆಯನ್ನು ಬಳಸಿಕೊಳ್ಳುವ ಬಗ್ಗೆ, ಜಂಟಿಯಾಗಿ ಯುದ್ಧೋಪಕರಣಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಮಾತುಕತೆ ಆಯಿತು. ಅಲ್ಲಿಗೆ ಅಲಿಪ್ತ ನೀತಿಗೆ ಎಳ್ಳುನೀರು ಬಿಟ್ಟಂತಾಯಿತು.ಬಿಡಿ, ಪರಿಸ್ಥಿತಿಗೆ ತಕ್ಕಂತೆ ಎಲ್ಲ ದೇಶಗಳೂ ತನ್ನ ನೀತಿ ನಿಲುವುಗಳನ್ನು ಬದಲಿಸಿಕೊಳ್ಳುತ್ತವೆ. ಸ್ವಹಿತಾಸಕ್ತಿಗೆ ಪೂರಕವಾಗಿ ವಿದೇಶಾಂಗ ನೀತಿಯನ್ನು ಹೊಂದಿಸಿಕೊಳ್ಳುತ್ತವೆ. ಆಗಷ್ಟೇ ಸ್ವತಂತ್ರಗೊಂಡ ದೇಶಕ್ಕೆ ಅಲಿಪ್ತ ನೀತಿ ಅನಿವಾರ್ಯವಾಗಿದ್ದಿರಬಹುದು.‘ಭಾರತದ ಇಂದಿನ ಪರಿಸ್ಥಿತಿ ಮತ್ತು ಜಾಗತಿಕ ಸನ್ನಿವೇಶದಲ್ಲಿ ನನ್ನ ಹೊರತು ಯಾರೇ ಭಾರತದ ವಿದೇಶಾಂಗ ವ್ಯವಹಾರಗಳ ಜವಾಬ್ದಾರಿ ಹೊತ್ತಿದ್ದರೂ ಅಲಿಪ್ತ ತತ್ವಕ್ಕೇ ಅಂಟಿಕೊಳ್ಳುತ್ತಿದ್ದರು’ ಎಂದು ಸ್ವತಃ ನೆಹರೂ ಹೇಳಿದ್ದರು.

ಆದರೆ, ಇಂದು ಜಗತ್ತಿನ ಚಹರೆ ಬದಲಾಗಿದೆ. ಅಲಿಪ್ತ ಒಕ್ಕೂಟ ನಿತ್ರಾಣಗೊಂಡು ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ ಎನ್ನುವ ಸ್ಥಿತಿಯಲ್ಲಿದೆ. ಹಾಗಾಗಿ ಆಟದಲ್ಲಿ ಉಳಿಯಲಿಚ್ಛಿಸುವ ದೇಶಗಳು ಒಕ್ಕೂಟಕ್ಕೆ ಕಟ್ಟುಬಿದ್ದಿಲ್ಲ. ಭಾರತವೂ ಅದಕ್ಕೆ ಹೊರತಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry