ಏನೋ ಮಾಡಲು ಹೋಗಿ...

ಸೋಮವಾರ, ಜೂನ್ 17, 2019
29 °C
ನಾವು ನೋಡಿದ ಚಿತ್ರ / ಸಿಪಾಯಿ

ಏನೋ ಮಾಡಲು ಹೋಗಿ...

Published:
Updated:
ಏನೋ ಮಾಡಲು ಹೋಗಿ...

    ಚಿತ್ರ    : ಸಿಪಾಯಿ

ನಿರ್ಮಾಣ : ಆರೇಂಜ್ ಪಿಕ್ಸಲ್ಸ್ 

ನಿರ್ದೇಶಕ : ರಜತ್ ಮಯೀ

ತಾರಾಗಣ: ಸಿದ್ಧಾರ್ಥ್ ಮಹೇಶ್, ಶ್ರುತಿ ಹರಿಹರನ್, ಅಚ್ಯುತಕುಮಾರ್, ಸಂಚಾರಿ ವಿಜಯ್

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಗುರಿ ನಾಯಕ ಸಿದ್ದುವಿನದು. ತನ್ನ ಉದ್ಯೋಗ ಕ್ರೈಂ ವರದಿಗಾರಿಕೆಯನ್ನೇ ಆತ ಸಾಧನೆಯ ದಾರಿಯನ್ನಾಗಿ ಆಯ್ದುಕೊಳ್ಳುತ್ತಾನೆ. ದುಷ್ಟರ ಸಂಚನ್ನು ಬಯಲಿಗೆಳೆಯುವ ಕೆಲಸದಲ್ಲಿ ತನ್ನ ಸ್ಮರಣಶಕ್ತಿ ಜತೆಗೆ ತಂದೆಯನ್ನು ಸಹ ಕಳೆದುಕೊಳ್ಳುತ್ತಾನೆ. ಗಾಯಗೊಂಡ ಪ್ರಿಯತಮೆ ದಿವ್ಯಾ ಜೀವನ್ಮರಣದ ಸ್ಥಿತಿಯಲ್ಲಿ ಇರುವಾಗ ಬಾಸ್ ಬಂದು ಹೇಳುತ್ತಾನೆ: ‘ಇನ್ನೊಂದು ಸಾಹಸಕ್ಕೆ ರೆಡಿ ಆಗು’. ಆಗ ನಾಯಕ ಅಷ್ಟೇ ಅಲ್ಲ, ಪ್ರೇಕ್ಷಕನ ಸ್ಥಿತಿ ಕೂಡ ಅಯೋಮಯ!ಡ್ರಗ್ಸ್ ಹಾಗೂ ಯುವತಿಯರ ಮಾರಾಟದ ಮಾಫಿಯಾವನ್ನು ಎದುರು ಹಾಕಿಕೊಂಡ ಪತ್ರಕರ್ತ, ಸ್ವತಃ ಹೋರಾಟ ಮಾಡಿ ಗೆಲ್ಲುವ ಕಥೆ ‘ಸಿಪಾಯಿ’ ಚಿತ್ರದ್ದು.  ವಾಸ್ತವಕ್ಕೆ ಸಾಕಷ್ಟು ದೂರವಾಗಿರುವ ಕಥೆಯನ್ನು ಬರೆದಿರುವ ರಜತ್ ಮಯೀ, ಅದನ್ನು ತೆರೆ ಮೇಲೆ ತರಲು ಹೆಚ್ಚೇನೂ ಶ್ರಮವಹಿಸಿಲ್ಲ. ಹೀಗಾಗಿ ‘ಸಿಪಾಯಿ’ ಪ್ರೇಕ್ಷಕನಿಂದ ಸಾಕಷ್ಟು ದೂರದಲ್ಲೇ ನಿಲ್ಲುತ್ತಾನೆ.‘ಎ ಟಿವಿ’ ಚಾನೆಲ್‌ನಲ್ಲಿ ಅಪ್ಪ ನರಸಿಂಹನಂತೆಯೇ ಮಗ ಸಿದ್ದು ಕೂಡ ಕ್ರೈಂ ರಿಪೋರ್ಟರ್. ಬರೀ ಸುದ್ದಿ ತರಲಿಕ್ಕಷ್ಟೇ ಸೀಮಿತವಾಗಿರಲು ಆತ ಬಯಸಲಾರ. ಅದಕ್ಕಾಗಿ ಮಾಫಿಯಾ ವ್ಯೂಹದೊಳಗೆ ಹೋಗಿ, ಅವರ ರಹಸ್ಯ ಸಂಪರ್ಕಗಳನ್ನು ಅರಿತು ಅದನ್ನೆಲ್ಲ ತಂದೆಗೆ ರವಾನಿಸುತ್ತಾನೆ. ಇದನ್ನು ಅರಿತ ಆ ಖೂಳರು ನರಸಿಂಹನನ್ನು ಮುಗಿಸಿ, ಮಗನನ್ನೂ ಹತ್ಯೆ ಮಾಡಲು ಮುಂದಾಗುತ್ತಾರೆ. ತಲೆಗೆ ಬಿದ್ದ ಹೊಡೆತದಿಂದ ನೆನಪು ಕಳೆದುಕೊಂಡರೂ, ದುಷ್ಟರನ್ನು ಸಂಹರಿಸುವಲ್ಲಿ ಸಿದ್ದು ಸಫಲನಾಗುತ್ತಾನೆ. ಆತನ ಮುಂದಿನ ನಡೆ ಏನು ಎಂಬುದನ್ನು ಪ್ರೇಕ್ಷಕರ ಊಹೆಗೇ ಬಿಡುತ್ತಾರೆ ರಜತ್ ಮಯೀ.ರಣರಂಗದಲ್ಲಿ ವೈರಿಗಳ ವಿರುದ್ಧ ಹೋರಾಡುವವನು ಸಿಪಾಯಿ. ಆದರೆ ಇಲ್ಲಿ ವ್ಯವಸ್ಥೆಯೊಳಗಿದ್ದುಕೊಂಡೇ ಒಳಗಿನ ವೈರಿಗಳ ವಿರುದ್ಧ ಹೋರಾಡುತ್ತಾನೆ ಈ ‘ಸಿಪಾಯಿ’. ಒಂದಷ್ಟು ಆಕರ್ಷಕ ಎನಿಸಬಹುದಾದ ಚಿತ್ರಕಥೆಯಿದ್ದರೂ ನಿರೂಪಣೆ ನೀರಸವಾಗಿದೆ. ಫ್ಲ್ಯಾಶ್‌ ಬ್ಯಾಕ್ ಹಾಗೂ ಕುತೂಹಲದ ದೃಶ್ಯಗಳನ್ನು ಸರಿಯಾಗಿ ಜೋಡಿಸುವಲ್ಲಿ ಸಂಕಲನಕಾರ ಅಕ್ಷಯ್ ಪಿ. ರಾವ್ ಪರಿಣಾಮಕಾರಿ ಆಗಿಲ್ಲ. ಅದೇ ಸಿನಿಮಾದ ಮೊದಲ ಮೈನಸ್ ಪಾಯಿಂಟ್.

ನಾಯಕ ಸಿದ್ಧಾರ್ಥ್ ಮಹೇಶ್ ಕಷ್ಟಪಟ್ಟು ಅಭಿನಯಿಸಿದ್ದಾರೆ. ಕೋಪ, ತಾಪ, ಸಂತಸ ಇತ್ಯಾದಿ ಯಾವುದೇ ಭಾವನೆಗಳನ್ನು ಅಭಿವ್ಯಕ್ತಿಸಲು ಅವರಿಗೆ ಸಾಧ್ಯವಾಗಿಲ್ಲ. ನಾಯಕಿ ಪಾತ್ರಪೋಷಣೆ ದುರ್ಬಲವಾಗಿದ್ದರೂ ಶ್ರುತಿ ಹರಿಹರನ್ ಲೀಲಾಜಾಲ ನಟನೆಯಿಂದ ಹೇಗೋ ಸರಿದೂಗಿಸುತ್ತಾರೆ. ಅಚ್ಯುತಕುಮಾರ್, ಸಂಚಾರಿ ವಿಜಯ್ ಪೋಷಕ ಪಾತ್ರಗಳಿಗೆ ಜೀವ ತುಂಬಲು ಯತ್ನಿಸಿದ್ದಾರೆ. ಹಾಡುಗಳು ಇಷ್ಟವಾಗುವಂತೆ ಅಜನೀಶ್ ಲೋಕನಾಥ ಸಂಗೀತ ಹೊಸೆದಿದ್ದಾರೆ.ಮಾಫಿಯಾ ಮಟ್ಟ ಹಾಕಲು ಪತ್ರಕರ್ತ ನಡೆಸುವ ಅಪಾಯಕಾರಿ ಸಾಹಸಕ್ಕೆ ಪೊಲೀಸ್ ಅಧಿಕಾರಿಗಳು ಬೆಂಬಲ ಕೊಡುವುದು ಪ್ರಹಸನದಂತೆ ಗೋಚರಿಸುತ್ತದೆ. ಹೀರೊ ವರ್ಚಸ್ಸು ಹೆಚ್ಚಿಸಲು ಮಾಡಿರುವ ಕಸರತ್ತುಗಳೂ ಪೇಲವವಾಗಿವೆ. ಕೊಲೆ, ದಂಧೆ, ಇತರ ದುಷ್ಕೃತ್ಯಗಳ ಮಾಫಿಯಾದ ಕಥೆಯನ್ನೂ ಪ್ರೀತಿ–ಪ್ರೇಮವನ್ನೂ ಕಲಬೆರಕೆ ಮಾಡಲು ಹೋಗಿ ಇನ್ನೇನೋ ತಯಾರಾದ ಉತ್ಪನ್ನದಂತೆ ‘ಸಿಪಾಯಿ’ ಭಾಸವಾಗುತ್ತದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry