ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗುವುದು ಎಂದು? ರಾಜಧಾನಿಯ ದಾಹ

ಕಾವೇರಿ ಜಲ ವಿವಾದ: ಪರ್ಯಾಯವೇನು?
Last Updated 23 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ತನ್ನದೇ ಆದ ನೀರಿನ ಎಲ್ಲ ಮೂಲಗಳನ್ನು ಈಗಾಗಲೇ ಕಳೆದುಕೊಂಡಿರುವ ಬೆಂಗಳೂರು ಮಹಾನಗರ, ದಾಹವನ್ನು ಮಾತ್ರ ಇನ್ನಿಲ್ಲದಂತೆ ಹೆಚ್ಚಿಸಿಕೊಂಡಿದೆ. ಕಳೆದುಹೋದ ಜಲಮೂಲ ಮತ್ತು ಹೆಚ್ಚಾದ ದಾಹದ ಪರಿಣಾಮ ಬಿಡಿಸಲಾಗದ ಕಗ್ಗಂಟೊಂದು ತಳಕು ಹಾಕಿಕೊಂಡಿದೆ.

ನದಿ ದಂಡೆಗಳ ಮೇಲೆಯೇ ಬಹುತೇಕ ನಾಗರಿಕ ಸಂಸ್ಕೃತಿಗಳು ಬೆಳೆದಿವೆ. ಸುಮಾರು 500 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ನಮ್ಮ ಬೆಂಗಳೂರು ಅಂತಹ ಯಾವ ನದಿಯ ದಂಡೆಯನ್ನೂ ಹೊಂದಿಲ್ಲ. ನಗರಕ್ಕೆ ನೀರು ಸರಬರಾಜು ಆಗುತ್ತಿರುವುದು 100 ಕಿ.ಮೀ. ದೂರದಿಂದ. ಎತ್ತರದಲ್ಲಿರುವ ಬೆಂಗಳೂರಿಗೆ ನೀರು ಮೇಲ್ಮುಖವಾಗಿ ಪೂರೈಕೆ ಆಗುತ್ತಿದೆ. ಕಳೆದ ಶತಮಾನದ ಕೊನೆಯ ದಶಕದ ಈಚೆಗಂತೂ ನಗರದ ಜನಸಂಖ್ಯೆ ಅಂಕೆ ಇಲ್ಲದಂತೆ ಬೆಳೆದಿದೆ. ಹೀಗಾಗಿ ನೀರಿನ ದಾಹ ಹೆಚ್ಚುತ್ತಲೇ ಇದೆ. ಜನಸಂಖ್ಯೆ ಬೆಳೆಯುತ್ತಿರುವ ವೇಗವನ್ನು ಗಮನಿಸಿದಾಗ 2036ರ ವೇಳೆಗೆ ನಿತ್ಯ 255 ಕೋಟಿ ಲೀಟರ್ ನೀರು ಬೇಕಾಗುವುದು ಎನ್ನುವ ಲೆಕ್ಕಾಚಾರ ಹಾಕಲಾಗಿದೆ.

ಕಾವೇರಿ ಐದು ಹಂತದ ಯೋಜನೆಗಳಿಂದ ನಗರಕ್ಕೆ ಪ್ರತಿದಿನ 145  ಕೋಟಿ ಲೀಟರ್‌ ಪೂರೈಕೆ ಮಾಡಲಾಗುತ್ತಿದೆ. ನಾಲ್ಕನೇ ಹಂತದ ಎರಡನೇ ಘಟ್ಟದ  ಯೋಜನೆ ಜಾರಿಯಾದ ಬಳಿಕ ಕುಡಿಯುವ ನೀರಿನ ಯೋಜನೆಗೆ ಹಂಚಿಕೆಯಾದ ಎಲ್ಲ 19 ಟಿಎಂಸಿ ಅಡಿ ನೀರು ಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೂ 10 ಟಿಎಂಸಿ ಅಡಿ ಕಾವೇರಿ ನೀರು ಕೊಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

‘ರಾಜಧಾನಿಯ ಕುಡಿಯುವ ನೀರಿನ ಪೂರೈಕೆಗೆ  ಸಮಗ್ರ ಯೋಜನೆ ರೂಪಿಸದಿದ್ದರೆ 10 ವರ್ಷಗಳಲ್ಲಿ ನಗರದ ಅರ್ಧದಷ್ಟು (ಶೇ 50ರಷ್ಟು) ಜನರನ್ನು ಸ್ಥಳಾಂತರ ಮಾಡಬೇಕಾಗುತ್ತದೆ’ ಎಂದು ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಬಾಲಸುಬ್ರಮಣಿಯನ್ ಎಚ್ಚರಿಸುತ್ತಾರೆ.
‘ನಗರದಲ್ಲಿ ವ್ಯಾಪಕ ನಿರ್ಮಾಣ ಕಾಮಗಾರಿಗಳಿಂದಾಗಿ ಮಳೆ ನೀರು ಅಂತರ್ಜಲ ಸೇರಲು ಅವಕಾಶವಿಲ್ಲದಂತಾಗಿದೆ. ಜಲಮಂಡಳಿ ನೂರಾರು ಕೋಟಿ  ಖರ್ಚು ಮಾಡಿ ನಗರದ 14 ಕಡೆಗಳಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ನಿರ್ಮಿಸಿದೆ. ಆದರೆ, ಬಹುತೇಕ ಘಟಕಗಳಲ್ಲಿ ಕೊಳಚೆ ನೀರಿನ ಸಂಸ್ಕರಣೆ ಸಮರ್ಪಕವಾಗಿ ಆಗುತ್ತಿಲ್ಲ. ಜತೆಗೆ ಸಂಸ್ಕರಿಸಿದ ನೀರು ರಾಜಕಾಲುವೆ ಪಾಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ನೀರಿನ ಸೋರಿಕೆಯನ್ನು ಆದಷ್ಟು ಬೇಗ ಕಡಿಮೆ ಮಾಡಬೇಕು. ಈ ಪ್ರಮಾಣ ಶೇ 15–20ಕ್ಕೆ ಇಳಿಯಬೇಕು. ನಗರದ ಕೊಳಚೆ ನೀರು ಸಂಸ್ಕರಣಾ ಘಟಕಗಳು ಶೇ 100 ಸಾಮರ್ಥ್ಯದಿಂದ ಕಾರ್ಯ ನಿರ್ವಹಿಸಬೇಕು. ಸಂಸ್ಕರಿಸಿದ ಶೇ 75ರಷ್ಟು ನೀರನ್ನು ಪುನರ್‌ ಬಳಕೆ ಮಾಡಲು ತೃತೀಯ ಹಂತದ ಘಟಕಗಳನ್ನು ನಿರ್ಮಾಣ ಮಾಡಬೇಕು. ಬೆಂಗಳೂರು ಮಹಾನಗರ ಪ್ರದೇಶ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡುತ್ತಾರೆ.

‘ರಾಜಕಾಲುವೆಗಳಲ್ಲಿ ಕೊಳಚೆ ನೀರಿನ ಹರಿವಿಗೆ ಕಡಿವಾಣ ಹಾಕಬೇಕು. ಮಳೆ ನೀರು ಸುಗಮವಾಗಿ ಹರಿಯುವಂತೆ ವ್ಯವಸ್ಥೆ ರೂಪಿಸಬೇಕು. ನೀರಿನ ಮಿತ ಬಳಕೆ ಬಗ್ಗೆ ಸ್ವಯಂಸೇವಾ ಸಂಘಟನೆಗಳ ಸಹಕಾರದಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ನಗರದ ಎಲ್ಲ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಬೇಕು’ ಎಂದು ಅವರು ಕಿವಿಮಾತು ಹೇಳುತ್ತಾರೆ.

‘ರಾಜಧಾನಿಯಲ್ಲಿ ಹೆಚ್ಚಿನ ಕೊಳವೆಬಾವಿಗಳು ಸಾವಿರ ಅಡಿ ಆಳದಲ್ಲಿವೆ.  ಇರುವ ಜಲಮೂಲವನ್ನು ಕೊಳವೆಬಾವಿಗಳ ಮೂಲಕ ಅನಾಮತ್ತು ಎತ್ತುತ್ತಿರುವ ನಾವು ಅಂತರ್ಜಲ ಹೆಚ್ಚಳ, ಮಳೆ ನೀರು ಸಂಗ್ರಹ ಅಥವಾ ಸಂಸ್ಕರಿತ ತ್ಯಾಜ್ಯ ನೀರಿನ ಪುನರ್ಬಳಕೆ ಬಗ್ಗೆ ಗಂಭೀರ ಪ್ರಯತ್ನ ಮಾಡಬೇಕು’ ಎಂದು ನಿವೃತ್ತ ಭೂವಿಜ್ಞಾನಿ ಕೆ.ಸಿ.ಸುಭಾಸ್‌ಚಂದ್ರ ಸಲಹೆ ನೀಡುತ್ತಾರೆ.

ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ 110 ಗ್ರಾಮಗಳ ನೀರಿನ ದಾಹ ನೀಗಿಸಲು  ಜಲಮಂಡಳಿಯು ಕಾವೇರಿ ಐದನೇ ಹಂತದ ಯೋಜನೆ ರೂಪಿಸಿದೆ. ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಕಲ್ಪಿಸಲು ₹5,100 ಕೋಟಿ ಆಗಲಿದೆ ಎಂದು ಮಂಡಳಿ ಅಂದಾಜಿಸಿದೆ. ಇದಕ್ಕಾಗಿ ವಿಸ್ತೃತಾ ಯೋಜನಾ ವರದಿ ತಯಾರಿಸಿದೆ. ದೊಡ್ಡ ಮೊತ್ತದ ಸಾಲಕ್ಕೆ ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಗೆ  (ಜೈಕಾ) ಕೈಚಾಚಿದೆ.

‘ನಗರದಲ್ಲಿ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಕನಿಷ್ಠ ಮಟ್ಟಕ್ಕೆ ಇಳಿಸುವ ಯೋಜನೆ (₹600 ಕೋಟಿ ಮೊತ್ತ)  ಪ್ರಗತಿಯಲ್ಲಿದ್ದು, ಪ್ರತಿದಿನ ಆರು ಕೋಟಿ ಲೀಟರ್‌ ನೀರು ಉಳಿತಾಯವಾಗುತ್ತಿದೆ. ಆರಂಭಿಕ ಹಂತದಲ್ಲಿ ಅದನ್ನು ಈ ಹಳ್ಳಿಗಳಿಗೆ ಪೂರೈಕೆ ಮಾಡಲಾಗುತ್ತದೆ’ ಎಂದು ಜಲಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ತಿಳಿಸುತ್ತಾರೆ.

‘ನೀರಿನ ಅಭಾವ ನೀಗಿಸಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಪ್ರತಿ ಮನೆ ಹಾಗೂ ಕಟ್ಟಡಗಳಲ್ಲಿ ಮಳೆ ನೀರನ್ನು ಕಡ್ಡಾಯವಾಗಿ ಸಂಗ್ರಹಿಸಬೇಕು ಎಂದು ರಾಜ್ಯ ಸರ್ಕಾರ ಕಾನೂನು ರೂಪಿಸಿದೆ. ಮನೆಗಳಲ್ಲಿ ಈ ವ್ಯವಸ್ಥೆ ಅಳವಡಿಸಲು ಹಲವು ಬಾರಿ ಗಡುವು ನೀಡಲಾಗಿತ್ತು. ಆದರೂ, ಜನರು ಸ್ಪಂದಿಸಿಲ್ಲ. ಹೀಗಾಗಿ ಮನೆ ಮಾಲೀಕರಿಗೆ ದೊಡ್ಡ ಮೊತ್ತದ ದಂಡ ವಿಧಿಸುತ್ತಿದ್ದೇವೆ’ ಎಂದು ಕೆಂಪರಾಮಯ್ಯ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT