ಕಕ್ಷೆಯಿಂದ ಕಕ್ಷೆಗೆ ಪಿಎಸ್‌ಎಲ್‌ವಿ ಪಯಣ

7

ಕಕ್ಷೆಯಿಂದ ಕಕ್ಷೆಗೆ ಪಿಎಸ್‌ಎಲ್‌ವಿ ಪಯಣ

Published:
Updated:
ಕಕ್ಷೆಯಿಂದ ಕಕ್ಷೆಗೆ ಪಿಎಸ್‌ಎಲ್‌ವಿ ಪಯಣ

ಬೆಂಗಳೂರು: ಒಂದೇ ರಾಕೆಟ್‌ನಲ್ಲಿ ಬೇರೆ ಬೇರೆ ಉಪಗ್ರಹಗಳನ್ನು ಭಿನ್ನ ಕಕ್ಷೆಗಳಿಗೆ ಸೇರಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಿದ್ಧತೆ ನಡೆಸಿದೆ. ಧ್ರುವೀಯ ಉಪಗ್ರಹ ಉಡಾವಣಾ ವಾಹನ– ಪಿಎಸ್‌ಎಲ್‌ವಿ ಸಿ35 ಒಟ್ಟು ಎಂಟು ಉಪಗ್ರಹಗಳನ್ನು ಹೊತ್ತು ಸೆಪ್ಟೆಂಬರ್‌ 26ರಂದು ಆಗಸಕ್ಕೆ ಜಿಗಿಯಲಿದೆ.ಒಂದೇ ರಾಕೆಟ್‌ನಲ್ಲಿ ಬೇರೆ ಬೇರೆ ಉಪಗ್ರಹಗಳನ್ನು ಭಿನ್ನ ಕಕ್ಷೆಗಳಿಗೆ ಸೇರಿಸುವುದರಿಂದ ಕಾರ್ಯಾಚರಣೆಯ ವೆಚ್ಚ ಕಡಿಮೆ ಆಗಲಿದೆ. ಜತೆಗೆ ಸಮಯವೂ ಉಳಿತಾಯವಾಗಲಿದೆ.ಎಂಟು ಉಪಗ್ರಹಗಳಲ್ಲಿ ಸಾಗರ ಮತ್ತು ಹವಾಮಾನ ಅಧ್ಯಯನದ ಉದ್ದೇಶದ ‘ಸ್ಕಾಟ್‌ಸ್ಯಾಟ್‌–1’ ಪ್ರಮುಖವಾದುದು. ಇದರೊಂದಿಗೆ ಅಮೆರಿಕ, ಕೆನಡಾ ಮತ್ತು ಅಲ್ಜೀರಿಯಾ ದೇಶದ ಹಾಗೂ ಭಾರತೀಯ ಶೈಕ್ಷಣಿಕ ಸಂಸ್ಥೆಗಳ ಎರಡು ಸೇರಿದಂತೆ ಒಟ್ಟು ಏಳು ಉಪಗ್ರಹಗಳ ಉಡಾವಣೆ ನಡೆಯಲಿದೆ.

***

ಭೂಸ್ಥಿರ, ಧ್ರುವೀಯ ಕಕ್ಷೆಗಳೆಂದರೆ...


ಭೂಮಿಯನ್ನು ಕೃತಕ ಉಪಗ್ರಹಗಳು ಮೂರು ಸ್ವರೂಪದ ಕಕ್ಷೆಯಲ್ಲಿ ಸುತ್ತುತ್ತವೆ. ಅವು ಭೂಸ್ಥಿರ ಕಕ್ಷೆ, ಧ್ರುವೀಯ ಕಕ್ಷೆ ಮತ್ತು ಧ್ರುವೀಯ ಸೂರ್ಯ ಸ್ಥಾಯಿ ಕಕ್ಷೆ.

ಭೂಸ್ಥಿರ ಕಕ್ಷೆಯು ಭೂಮಧ್ಯೆ ರೇಖೆಗೆ ನೇರವಾಗಿರುತ್ತದೆ. ಈ ಕಕ್ಷೆಯಲ್ಲಿ ಕಾರ್ಯನಿರ್ವಹಿಸುವ ಉಪಗ್ರಹಗಳು ಸದಾ ಒಂದೇ ಸ್ಥಳವನ್ನು ಕೇಂದ್ರೀಕರಿಸಿರುತ್ತವೆ.  ಅಂದರೆ ಒಂದು ಉಪಗ್ರಹ ಬೆಂಗಳೂರಿನ ನೇರದಲ್ಲಿದ್ದರೆ, ಅದು ಸದಾ ಬೆಂಗಳೂರಿಗೆ ನೇರವಾಗೇ ಇರುತ್ತದೆ.ಅವುಗಳ ಕೇಂದ್ರ ಮತ್ತು ವ್ಯಾಪ್ತಿ ಬದಲಾಗುವುದಿಲ್ಲ. ಸಾಮಾನ್ಯವಾಗಿ ಸಂವಹನ ಸಂಬಂಧಿ ಉಪಗ್ರಹಗಳು ಈ ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತವೆ.ಇನ್ನು ಧ್ರುವೀಯ ಕಕ್ಷೆ ಹೆಸರೇ ಹೇಳುವಂತೆ, ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳ ಮಧ್ಯೆ ಉಪಗ್ರಹಗಳು ಚಲಿಸುವ  ಕಕ್ಷೆ. ಭೂಮಿಯತ್ತ ಇವುಗಳ ಕೇಂದ್ರಬಿಂದು ಸದಾ ಬದಲಾಗುತ್ತಿರುತ್ತದೆ.ಆದರೆ ಒಂದು ಕೇಂದ್ರಬಿಂದುವನ್ನು ಸೂಚಿತ ಅವಧಿಯಲ್ಲಿ ಮತ್ತೆ ಸಂಧಿಸುತ್ತದೆ.  ಧ್ರುವೀಯ ಸೂರ್ಯ ಸ್ಥಾಯಿ ಕಕ್ಷೆಗೂ ಧ್ರುವೀಯ ಕಕ್ಷೆಗೂ ಹೆಚ್ಚು ವ್ಯತ್ಯಾಸವಿಲ್ಲ.  ಸೂರ್ಯಸ್ಥಾಯಿ ಕಕ್ಷೆಯಲ್ಲಿರುವ ಉಪಗ್ರಹಗಳು ಭೂಮಿಯ ಒಂದು ಕೇಂದ್ರಬಿಂದುವನ್ನು ಇಂದು ಸಂಧಿಸಿದ ಸಮಯದಲ್ಲೇ ಮತ್ತೆ ಮರುದಿನ ಸಂಧಿಸುತ್ತದೆ.ಉದಾಹರಣೆಗೆ ಸೋಮವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಮೇಲೆ ಈ ಉಪಗ್ರಹ ಹಾದು ಹೋಗಿದ್ದರೆ, ಮಂಗಳವಾರವೂ ಬೆಳಿಗ್ಗೆ 11 ಗಂಟೆಗೇ ಬೆಂಗಳೂರನ್ನು ಹಾದು ಹೋಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry