ಭಾನುವಾರ, ಮಾರ್ಚ್ 26, 2023
31 °C

ಟಾಮ್‌ಗೆ ಜೀವದಾನ ನೀಡಿದ ಹೆಲ್ಮೆಟ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಾಮ್‌ಗೆ ಜೀವದಾನ ನೀಡಿದ ಹೆಲ್ಮೆಟ್!

ಕಾನ್ಪುರ: ಶಾರ್ಟ್‌ ಲೆಗ್ ಫೀಲ್ಡರ್ ಕೆ.ಎಲ್. ರಾಹುಲ್ ಧರಿಸಿದ್ದ ಹೆಲ್ಮೆಟ್ ಕಿವೀಸ್ ತಂಡದ ಎಡಗೈ ಬ್ಯಾಟ್ಸ್‌ಮನ್ ಟಾಮ್ ಲಥಾಮ್ ಅವರಿಗೆ ಜೀವದಾನ ನೀಡಿತು. ನಂತರ ಟಾಮ್ ಆತಿಥೇಯರಿಗೆ ತಲೆನೋವಾದರು!ಇಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಟೆಸ್ಟ್ ಪಂದ್ಯದ ಎರಡನೇ ದಿನ ಟಾಮ್ ಅವರು ‘ನಾಟ್ ಔಟ್’ ಆಗಿ ಉಳಿಯಲು ರಾಹುಲ್ ಹೆಲ್ಮೆಟ್ ಕಾರಣವಾಯಿತು. ರವೀಂದ್ರ ಜಡೇಜ ಇನಿಂಗ್ಸ್‌ನ 37ನೇ ಓವರ್ ಬೌಲ್ ಮಾಡುತ್ತಿದ್ದರು. ಕೆಳಮಟ್ಟದಲ್ಲಿ ನಿಧಾನವಾಗಿ ಸಾಗಿ ಬಂದ ಚೆಂಡನ್ನು ಟಾಮ್ ಸ್ವೀಪ್ ಮಾಡಲು ಯತ್ನಿಸಿದರು. ಆದರೆ ಸಂಪೂರ್ಣ ಯಶಸ್ಸು ಸಾಧಿಸಲಿಲ್ಲ.ಇದರಿಂದ ಬ್ಯಾಟ್‌ಗೆ ತಗುಲಿದ ಚೆಂಡು ಶಾರ್ಟ್‌ಲೆಗ್‌ನಲ್ಲಿದ್ದ ರಾಹುಲ್‌ಗೆ ಕ್ಯಾಚ್ ಆಯಿತು. ಆತಿಥೇಯರ ಬಳಗದಲ್ಲಿ ಸಂಭ್ರಮ ಪುಟಿಯಿತು. ಎಲ್ಲ ಆಟಗಾರರು ಅಂಪೈರ್‌ಗೆ ಜೋರಾಗಿಯೇ ಮನವಿ ಸಲ್ಲಿಸಿದರು. ಪ್ರೇಕ್ಷಕರು ಕೇಕೆ ಹಾಕಿದರು.ಆದರೆ, ಚೆಂಡು ಬ್ಯಾಟ್‌ಗೆ ಬಡಿದ ನಂತರ ನೆಲ ಅಥವಾ ಲಥಾಮ್ ಅವರ ಬೂಟಿಗೆ ಬಡಿದು ಚಿಮ್ಮಿತೇ ಎಂಬ ಗೊಂದಲ ಅಂಪೈರ್ ರಿಚರ್ಡ್ ಕೆಟಲ್‌ಬರೊ ಅವರಿಗೆ ಇತ್ತು. ಅದನ್ನು ಪರಿಹರಿಸಿಕೊಳ್ಳಲು ಅವರು  ಮೂರನೇ ಅಂಪೈರ್‌ಗೆ ಮನವಿ ಸಲ್ಲಿಸಿದರು. ಟಿವಿ ಅಂಪೈರ್ ಅನಿಲ್ ಚೌಧರಿ ಹತ್ತಾರು ಬಾರಿ ವಿವಿಧ ಕೋನಗಳಲ್ಲಿ ವಿಡಿಯೊ ತುಣುಕುಗಳನ್ನು ವಿಶ್ಲೇಷಿಸಿದರು. ಬ್ಯಾಟ್‌ಗೆ ಬಡಿದ ಚೆಂಡು ಬ್ಯಾಟ್ಸ್‌ಮನ್ ಬೂಟಿನ ಮೇಲೆ ಪುಟಿದಿದ್ದು ಸ್ಪಷ್ಟವಾಗಿತ್ತು. 47 ರನ್ ಗಳಿಸಿದ್ದ ಟಾಮ್ ಪೆವಿಲಿಯನ್‌ಗೆ ತೆರಳುವುದು ಖಚಿತ ಎಂಬ ನಿರೀಕ್ಷೆ ಮೂಡಿತ್ತು. ಅದರೆ ಫೀಲ್ಡರ್ ರಾಹುಲ್ ಧರಿಸಿದ್ದ ಹೆಲ್ಮೆಟ್‌ನ ತಂತಿಗೆ ಬಡಿದು ಎದೆಯ ಮೇಲಿಂದ ಇಳಿದು ಚೆಂಡು  ಕೈ ಸೇರಿದ್ದನ್ನು ಚೌಧರಿ ಅವರು ಪರಿಶೀಲಿಸಿದರು. ಇದರಿಂದಾಗಿ ಟಾಮ್ ಅವರನ್ನು ಬ್ಯಾಟಿಂಗ್‌ನಲ್ಲಿ ಮುಂದುವರೆಯಲು ಸೂಚಿಸಲಾಯಿತು. ಆ  ಎಸೆತವನ್ನು ಡೆಡ್‌ ಬಾಲ್ ಘೊಷಿಸಲಾಯಿತು. ನಂತರ ಟಾಮ್ ಮತ್ತು ಕೇನ್ ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 117 ರನ್ ಸೇರಿಸಿದರು.‘ಐಸಿಸಿಯ 32.2ನೇ ನಿಯಮದ ಪ್ರಕಾರ ಫೀಲ್ಡರ್ ಅಥವಾ ಬೌಲರ್ ಧರಿಸಿದ ರಕ್ಷಣಾ ಸಲಕರಣೆಗಳಿಗೆ ಬ್ಯಾಟ್ಸ್‌ಮನ್ ಹೊಡೆದ ಚೆಂಡು ನೇರವಾಗಿ ತಗುಲಿ ನಂತರ ಕ್ಯಾಚ್ ಆದರೆ ಆ ಎಸೆತವನ್ನು ಡೆಡ್‌ಬಾಲ್ ಎಂದು ಘೋಷಿಸಲಾಗುತ್ತದೆ. ಇಂತಹ ಘಟನೆಗಳು ಅಪರೂಪವೆಂಬಂತೆ ನಡೆಯುತ್ತವೆ’ ಎಂದು ಯುಪಿಸಿಎದ ಅಂಪೈರ್ ಸಂದೀಪ್ ತಿವಾರಿ ಪ್ರಜಾವಾಣಿಗೆ ತಿಳಿಸಿದರು.2012ರಲ್ಲಿ ಲಾರ್ಡ್ಸ್‌ನಲ್ಲಿಯೂ ಇಂತಹದೊಂದು ಘಟನೆ ನಡೆದಿತ್ತು. ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯದಲ್ಲಿ ಬ್ಯಾಟ್ಸ್‌ಮನ್ ಜಾನಿ ಬೆಸ್ಟೊ ಅವರು ಪ್ರಗ್ಯಾನ್ ಓಜಾ ಎಸೆತವನ್ನು ಹೊಡೆದಾಗ ಸಿಲ್ಲಿ ಪಾಯಿಂಟ್ ಫೀಲ್ಡರ್ ಗೌತಮ್ ಗಂಭೀರ್ ಅವರ ಹೆಲ್ಮೆಟ್‌ಗೆ ತಗುಲಿ ನಂತರ ಕ್ಯಾಚ್ ಆಗಿತ್ತು. ಅದರಿಂದಾಗಿ ಬೆಸ್ಟೊ ಅವರನ್ನು ನಾಟ್‌ಔಟ್ ಎಂದು ಘೋಷಿಸಲಾಗಿತ್ತು.  ಕೇನ್‌ಗೂ  ಜೀವದಾನ:  ಇನಿಂಗ್ಸ್‌ನ 32ನೇ ಓವರ್‌ನಲ್ಲಿ ಆರ್. ಅಶ್ವಿನ್ ಎಸೆತವನ್ನು ಬಾಗಿ ಸ್ವೀಪ್ ಮಾಡಲು ಯತ್ನಿಸಿದ ಕೇನ್ ವಿಲಿಯಮ್ಸನ್ ಅವರ ಹೆಲ್ಮೆಟ್‌ಗೆ ಬಡಿದ ಚೆಂಡು ಸ್ಪಂಪ್‌ಗೆ ಬಡಿಯಿತು. ಆದರೆ ಬೇಲ್‌ಗಳು ನೆಲಕ್ಕುರುಳಲಿಲ್ಲ. ಇದರಿಂದಾಗಿ ಅಂಪೈರ್ ಔಟ್ ನೀಡಲಿಲ್ಲ. 36 ರನ್ ಗಳಿಸಿದ್ದ ಕೇನ್ ಆಟ ಮುಂದುವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.