ಶನಿವಾರ, ಡಿಸೆಂಬರ್ 3, 2022
20 °C
ವಿಶ್ಲೇಷಣೆ

ವಿಶ್ವಸಂಸ್ಥೆ: ಶಕ್ತಿಗುಂದುತ್ತಿರುವ ಜಾಗತಿಕ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ಶಕ್ತಿಗುಂದುತ್ತಿರುವ ಜಾಗತಿಕ ಸಮಿತಿ

ಬಹುತೇಕ ಎಲ್ಲರಿಗೂ ವಿಶ್ವಸಂಸ್ಥೆಯ ಬಗ್ಗೆ ಗೊತ್ತಿದೆ. ಆದರೆ ವಾಸ್ತವದಲ್ಲಿ ಈ ಸಂಸ್ಥೆ ಏನು ಮಾಡುತ್ತಿದೆ ಅಥವಾ ಅದರ ಕಾರ್ಯನಿರ್ವಹಣೆ ಏನು ಎಂಬುದು ಎಷ್ಟು ಜನರಿಗೆ ತಿಳಿದಿದೆ? ಅಥವಾ, ಜಗತ್ತನ್ನು ಉತ್ತಮವಾದ ಮತ್ತು ಹೆಚ್ಚು ಶಾಂತಿಯುತವಾದ ಸ್ಥಳವಾಗಿ ಪರಿವರ್ತಿಸಬೇಕು ಎಂಬ ಸ್ಥಾಪಕರ ನಿರೀಕ್ಷೆಯನ್ನು ಈಡೇರಿಸಲು ವಿಶ್ವಸಂಸ್ಥೆಯು ತಿಣುಕಾಡುತ್ತಿರುವಾಗ 71ನೇ ಮಹಾಧಿವೇಶನಕ್ಕಾಗಿ ಜಾಗತಿಕ ನಾಯಕರೆಲ್ಲ ಸೇರಿದ್ದು ಯಾಕೆ?ವಿಶ್ವಸಂಸ್ಥೆಯ ಹುಟ್ಟು- ಯಾವಾಗ, ಎಲ್ಲಿ ಮತ್ತು ಯಾಕೆ: 1945ರ ಜೂನ್‌ನಲ್ಲಿ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ನಡೆದ ಸಮಾವೇಶದಲ್ಲಿ ನಾಲ್ಕು ದೇಶಗಳು- ಬ್ರಿಟನ್, ಚೀನಾ, ಸೋವಿಯತ್ ಒಕ್ಕೂಟ ಮತ್ತು ಅಮೆರಿಕ ವಿಶ್ವಸಂಸ್ಥೆಯ ಸನ್ನದಿಗೆ ಸಹಿ ಮಾಡಿದವು. ಈ ಸನ್ನದು ಅದೇ ವರ್ಷ ಅಕ್ಟೋಬರ್ 24ರಂದು ಜಾರಿಗೆ ಬಂದ ಸಂದರ್ಭದಲ್ಲಿ ಆಗಷ್ಟೇ ಜಾಗತಿಕ ಯುದ್ಧವೊಂದು ಕೊನೆಗೊಂಡಿತ್ತು.ಆಫ್ರಿಕಾ ಮತ್ತು ಏಷ್ಯಾದ ಬಹುಪಾಲು ಪ್ರದೇಶಗಳನ್ನು ವಸಾಹತು ಶಕ್ತಿಗಳು ಆಳುತ್ತಿದ್ದವು. ‘ವಿಶ್ವಸಂಸ್ಥೆಯ ಜನರಾದ ನಾವು’ ಎಂದು ಆರಂಭವಾಗುವ ಸನ್ನದಿಗೆ ತೀವ್ರ ಚರ್ಚೆಯ ನಂತರ ಸಹಿ ಹಾಕಲು 50 ದೇಶಗಳು ಒಪ್ಪಿದವು.ಈ ಆರಂಭಿಕ ಸಾಲು ಯಾಕೆ ಮುಖ್ಯ? ಯಾಕೆಂದರೆ ಇಂದು ವಿಶ್ವಸಂಸ್ಥೆಯು ತನ್ನ 193 ಸದಸ್ಯ ರಾಷ್ಟ್ರಗಳ ಸಂಕುಚಿತ ರಾಷ್ಟ್ರೀಯ ಹಿತಾಸಕ್ತಿಗಳಿಗಾಗಿ ಮಾತ್ರ ಕೆಲಸ ಮಾಡುತ್ತಿರುವಂತೆ ಕೆಲವರಿಗಾದರೂ ತೋರುತ್ತಿದೆ; ಸಾಮಾನ್ಯ ಸದಸ್ಯರ ಹಿತಾಸಕ್ತಿಗೆ ಬದಲಾಗಿ ಬಲಾಢ್ಯ ದೇಶಗಳ ಪರವಾಗಿ ಮಾತ್ರ ಕೆಲಸ ಮಾಡುತ್ತಿರುವಂತೆ ತೋರುತ್ತಿದೆ.ವಿಶ್ವಸಂಸ್ಥೆಯ ಸನ್ನದಿನಲ್ಲಿರುವ ಮೊದಲ ಎರಡು ಪ್ರತಿಜ್ಞೆಗಳನ್ನು ಈಡೇರಿಸುವಲ್ಲಿ ಈ ಸೀಮಿತ ಆದ್ಯತೆಗಳು ತಡೆಯಾಗುತ್ತಿವೆ. ಈ ಪ್ರತಿಜ್ಞೆಗಳೆಂದರೆ, ಯುದ್ಧದ ಕೆಡುಕನ್ನು ತಡೆಯುವುದು ಮತ್ತು ಮೂಲಭೂತ ಮಾನವ ಹಕ್ಕುಗಳನ್ನು ಮರು ಸ್ಥಾಪಿಸುವುದು.ಮಾನವ ಹಕ್ಕುಗಳ ಬಗ್ಗೆ ಉನ್ನತ ಆದರ್ಶ: 1948ರಲ್ಲಿ ವಿಶ್ವಸಂಸ್ಥೆಯು ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯನ್ನು ಪ್ರಕಟಿಸಿತು. ಗುಲಾಮಗಿರಿಗೆ ಒಳಗಾಗದಿರುವುದು, ಮುಕ್ತ ಅಭಿವ್ಯಕ್ತಿಯ ಸ್ವಾತಂತ್ರ್ಯ, ಕಿರುಕುಳದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಇತರ ದೇಶಗಳಲ್ಲಿ ಆಶ್ರಯ ಕೋರುವ ಹಕ್ಕು ಇದರಲ್ಲಿ ಸೇರಿವೆ.ಆದರೆ, ವಿಶ್ವಸಂಸ್ಥೆ ಸನ್ನದಿನಲ್ಲಿ ಉಲ್ಲೇಖಿಸಲಾಗಿರುವ ಹಲವು ಹಕ್ಕುಗಳು- ಶಿಕ್ಷಣದ ಹಕ್ಕು, ಸಮಾನ ಕೆಲಸಕ್ಕೆ ಸಮಾನ ವೇತನದ ಹಕ್ಕು, ರಾಷ್ಟ್ರೀಯತೆಯ ಹಕ್ಕು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.ಮಹಾಧಿವೇಶನ- ಮಹತ್ವದ ವೇದಿಕೆ, ಸೀಮಿತ ಅಧಿಕಾರ: ಪ್ರತಿ ಮಹಾಧಿವೇಶನದ ಆರಂಭದಲ್ಲಿಯೂ 2009ರಲ್ಲಿ ಲಿಬಿಯಾದ ಅಧ್ಯಕ್ಷ ಮುಹಮ್ಮರ್ ಗಡ್ಡಾಫಿ ಮಾಡಿದಂತೆ, ದೇಶಗಳ ಅಧ್ಯಕ್ಷರು ಮತ್ತು ಪ್ರಧಾನಿಗಳು ಸುದೀರ್ಘವಾದ ಅಥವಾ ಕ್ಲೀಷೆಯಾದ ಮತ್ತು ಸಮನ್ವಯ ಇಲ್ಲದ ಭಾಷಣಗಳನ್ನು ಮಾಡುತ್ತಾರೆ.ಕಾರ್ಯಕ್ರಮದಲ್ಲಿ ಬಲಾಢ್ಯರು ಭಾಗವಹಿಸುತ್ತಾರೆ, ಆದರೆ ಟೀಕಾಕಾರರು ಮಹಾಧಿವೇಶನವನ್ನು ವೈಭವೀಕೃತ ವಾಚಾಳಿ ವಿಚಾರ ಸಂಕಿರಣಗಳಿಗಿಂತ ದೊಡ್ಡದೆಂದು ಭಾವಿಸುವುದಿಲ್ಲ. ಅಧಿವೇಶನದ ಉಳಿದ ಅವಧಿ ಸಾಂಕೇತಿಕ ರಾಜತಾಂತ್ರಿಕ ಗೆಲುವು ಸೋಲುಗಳ ಕಾಳಗವಾಗಿ ಬದಲಾಗುತ್ತದೆ.ಪ್ರತಿ ವರ್ಷ ನೂರಾರು ನಿರ್ಣಯಗಳನ್ನು ಮಂಡಿಸಲಾಗುತ್ತದೆ. ಕೆಲವು ನಿರ್ಣಯಗಳು ಭಾರಿ ಗಮನ ಸೆಳೆಯುತ್ತವೆ. ಉದಾಹರಣೆಗೆ, 1975ರಲ್ಲಿ ಯಹೂದ್ಯವಾದವನ್ನು ಜನಾಂಗೀಯವಾದದೊಂದಿಗೆ ಸಮೀಕರಿಸಿದ ನಿರ್ಣಯ.

ಇಂತಹ ನಿರ್ಣಯಗಳಿಗೆ ಕಾನೂನುರೀತ್ಯ ಬದ್ಧತೆ ಇಲ್ಲ. ತಾತ್ವಿಕವಾಗಿ, ಮಹಾಧಿವೇಶನದಲ್ಲಿ ಸಣ್ಣ ಮತ್ತು ದೊಡ್ಡ, ಶ್ರೀಮಂತ ಮತ್ತು ಬಡವ ಎಲ್ಲ ದೇಶಗಳಿಗೆ ಸಮಾನ ಧ್ವನಿ ಇದೆ. ಪ್ರತಿ ದೇಶಕ್ಕೂ ಒಂದು ಮತ ಇದೆ. ಆದರೆ ನಿಜವಾದ ಅಧಿಕಾರ ಇರುವುದು ಬೇರೆ ಕಡೆ.ಭದ್ರತಾ ಮಂಡಳಿ- ಶಕ್ತಿಶಾಲಿ ಆದರೆ ಸಾಮಾನ್ಯವಾಗಿ ಪಾರ್ಶ್ವವಾಯು ಪೀಡಿತ: 15 ಸದಸ್ಯರನ್ನು ಹೊಂದಿರುವ ಭದ್ರತಾ ಮಂಡಳಿ ವಿಶ್ವಸಂಸ್ಥೆಯ ಅತ್ಯಂತ ಶಕ್ತಿಶಾಲಿ ಘಟಕ. ಅಣ್ವಸ್ತ್ರ ಕಾರ್ಯಕ್ರಮವನ್ನು ವಿರೋಧಿಸಿ ಇರಾನ್‌ನ ಮೇಲೆ ಹೇರಿದಂತೆ ಇದು ನಿರ್ಬಂಧಗಳನ್ನು ಹೇರಬಲ್ಲದು ಮತ್ತು 2011ರಲ್ಲಿ ಲಿಬಿಯಾದ ಮೇಲೆ ಮಾಡಿದಂತೆ ಸೇನಾ ಹಸ್ತಕ್ಷೇಪಕ್ಕೆ ಹುಕುಂ ಕೊಡಬಲ್ಲದು.ಭದ್ರತಾ ಮಂಡಳಿ ವಿಶ್ವಸಂಸ್ಥೆಯ ಅತ್ಯಂತ ಕಾಲಾಭಾಸಕ್ಕೆ ಒಳಗಾದ ಸಮಿತಿ ಎಂದೂ ಟೀಕಾಕಾರರು ಹೇಳುತ್ತಾರೆ. ಇದರ ಐದು ಶಾಶ್ವತ ಸದಸ್ಯ ರಾಷ್ಟ್ರಗಳು- ಅಮೆರಿಕ, ಬ್ರಿಟನ್, ಚೀನಾ, ಫ್ರಾನ್ಸ್ ಮತ್ತು ರಷ್ಯಾ ಎರಡನೇ ಜಾಗತಿಕ ಯುದ್ಧದಲ್ಲಿ ಗೆದ್ದ ದೇಶಗಳು. ಇತರ 10 ಸದಸ್ಯ ರಾಷ್ಟ್ರಗಳು ಎರಡು ವರ್ಷಗಳ ಅವಧಿಗೆ ಆಯ್ಕೆಯಾಗುತ್ತವೆ. ಈ ಸ್ಥಾನಗಳನ್ನು ಜಗತ್ತಿನ ವಿವಿಧ ಪ್ರದೇಶಗಳಿಗೆ ಮೀಸಲಿರಿಸಲಾಗುತ್ತದೆ.1945ರ ನಂತರ ದೊಡ್ಡ ಶಕ್ತಿಯಾಗಿ ಬೆಳೆದ ಭಾರತ, ಜಪಾನ್ ಮತ್ತು ಜರ್ಮನಿಯಂತಹ ದೇಶಗಳನ್ನು ಸೇರಿಸಿ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವವನ್ನು ವಿಸ್ತರಿಸುವ ಪ್ರಯತ್ನ ಮುಂದಕ್ಕೆ ಸಾಗುತ್ತಲೇ ಇಲ್ಲ. ಪ್ರತಿ ದೇಶ ಶಾಶ್ವತ ಸದಸ್ಯತ್ವಕ್ಕೆ ಪ್ರಯತ್ನಿಸಿದಾಗ ಮತ್ತೊಂದು ದೇಶ ಅದಕ್ಕೆ ತಡೆ ಒಡ್ಡುತ್ತದೆ.ಶಾಶ್ವತ ಸದಸ್ಯತ್ವ ಇರುವ ಐದು ದೇಶಗಳು ಯಾವುದೇ ಕ್ರಮವನ್ನು ತಡೆಯುವ ಪರಮಾಧಿಕಾರ ಹೊಂದಿವೆ. ಈ ಐದರಲ್ಲಿ ಪ್ರತಿ ದೇಶವೂ ಸ್ವಹಿತಾಸಕ್ತಿ ಅಥವಾ ಮಿತ್ರ ದೇಶಗಳ ಹಿತಾಸಕ್ತಿಗಾಗಿ ಇದನ್ನು ನಿಯಮಿತವಾಗಿ ಬಳಸಿವೆ.1990ರ ನಂತರ ಅಮೆರಿಕ ಪರಮಾಧಿಕಾರವನ್ನು 16 ಬಾರಿ ಬಳಸಿದೆ. ಇಸ್ರೇಲ್-ಪ್ಯಾಲೆಸ್ಟೀನ್ ಸಂಬಂಧದ ಕುರಿತು ಅಮೆರಿಕ ಹಲವು ಬಾರಿ ಪರಮಾಧಿಕಾರ ಉಪಯೋಗಿಸಿದೆ. ರಷ್ಯಾ 13 ಬಾರಿ ಪರಮಾಧಿಕಾರ ಬಳಸಿದ್ದರೆ ಅದರಲ್ಲಿ ನಾಲ್ಕು ಬಾರಿ ಸಿರಿಯಾಕ್ಕೆ ಸಂಬಂಧಿಸಿಯೇ ಈ ಹಕ್ಕು ಚಲಾಯಿಸಿದೆ.

ಪರಮಾಧಿಕಾರವು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ತೊಡಕು ಉಂಟು ಮಾಡುತ್ತದೆ ಎಂದಾದರೆ ಅದರ ವಿರುದ್ಧ ನಿರ್ಣಯ ಕೈಗೊಳ್ಳಲು ಮಹಾಧಿವೇಶನಕ್ಕೆ ಹಕ್ಕು ಇದೆ ಎಂದು ವಿಶ್ವಸಂಸ್ಥೆಯ ಸನ್ನದು ಹೇಳುತ್ತದೆ. ಆದರೆ ಮಹಾಧಿವೇಶನದ ಈ ಹಕ್ಕು ಬಳಕೆಯಾದದ್ದು ವಿರಳ.ಶಾಂತಿ ಸ್ಥಾಪನೆಯ ಸಮಸ್ಯೆಗಳು: ಅಂತರರಾಷ್ಟ್ರೀಯ ಶಾಂತಿಯನ್ನು ಕಾಪಾಡಿಕೊಂಡು ಬರುವುದು ಭದ್ರತಾ ಮಂಡಳಿಯ ಕೆಲಸ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಾಮರ್ಥ್ಯಕ್ಕೆ ತೀವ್ರವಾದ ತೊಡಕು ಎದುರಾಗಿದೆ.ರಷ್ಯಾ ಮತ್ತು ಪಶ್ಚಿಮದ ದೇಶಗಳ ನಡುವಣ ಭಿನ್ನಾಭಿಪ್ರಾಯ ಇದಕ್ಕೆ ಮುಖ್ಯ ಕಾರಣ. ಹಲವು ಪ್ರಮುಖ ಸಂಘರ್ಷಗಳ ಸಂದರ್ಭದಲ್ಲಿ ಭದ್ರತಾ ಮಂಡಳಿ ಅಸಹಾಯಕವಾಗಿ ನಿಂತಿದೆ. ಶಾಶ್ವತ ಸದಸ್ಯ ರಾಷ್ಟ್ರಗಳ ಹಿತಾಸಕ್ತಿ ಒಳಗೊಂಡ ಪ್ರಕರಣಗಳಲ್ಲಿಯಂತೂ ಈ ಅಸಹಾಯಕತೆ ಇನ್ನೂ ಹೆಚ್ಚು.ಸಿರಿಯಾ ಸಂಘರ್ಷ ನಿಭಾಯಿಸುವುದರಲ್ಲಿ ಆಗಿರುವ ವೈಫಲ್ಯ ತೀರಾ ಇತ್ತೀಚಿನ ಅತ್ಯಂತ ಢಾಳಾದ ಉದಾಹರಣೆ. ಸಿರಿಯಾ ಅಧ್ಯಕ್ಷ ಬಷರ್ ಅಸಾದ್ ಸರ್ಕಾರದ ಪರವಾಗಿ ರಷ್ಯಾ ನಿಂತಿದ್ದರೆ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ಕೆಲವು ವಿರೋಧಿ ಗುಂಪುಗಳನ್ನು ಬೆಂಬಲಿಸುತ್ತಿವೆ.

ಭದ್ರತಾ ಮಂಡಳಿಯು ಇಲ್ಲಿನ ಸಂಘರ್ಷವನ್ನು ಕೊನೆಗಾಣಿಸಲು ವಿಫಲವಾಗಿದ್ದು ಮಾತ್ರವಲ್ಲದೆ ಅಲ್ಲಿಗೆ ಆಹಾರ ಮತ್ತಿತರ ನೆರವು ನೀಡಲು ಮತ್ತು ಆರೋಗ್ಯ ಕಾರ್ಯಕರ್ತರ ಸುರಕ್ಷತೆ ನೋಡಿಕೊಳ್ಳುವಲ್ಲಿಯೂ ವಿಫಲವಾಗಿದೆ. ಸುದೀರ್ಘ ಕಾಲದಿಂದ ಚೀನಾದ ಮಿತ್ರನಾಗಿರುವ ಉತ್ತರ ಕೊರಿಯಾ ಪರಮಾಣು ಪರೀಕ್ಷೆ ವಿರುದ್ಧ ವಿಶ್ವಸಂಸ್ಥೆಯ ನಿಷೇಧಗಳನ್ನು ಪದೇ ಪದೇ ಉಲ್ಲಂಘಿಸಿದೆ.ಪ್ರಧಾನ ಕಾರ್ಯದರ್ಶಿ- ಜಾಗತಿಕ ವ್ಯಾಪ್ತಿ, ಅಸ್ಪಷ್ಟ ಪಾತ್ರ: ವಿಶ್ವಸಂಸ್ಥೆಯ ಮುಖ್ಯಸ್ಥರಾಗಿರುವ ಪ್ರಧಾನ ಕಾರ್ಯದರ್ಶಿಯ ಪಾತ್ರ ಏನು ಎಂಬುದನ್ನು ಸನ್ನದಿನಲ್ಲಿ ಸ್ಪಷ್ಟವಾಗಿ ವಿವರಿಸಲಾಗಿಲ್ಲ. ಪ್ರಧಾನ ಕಾರ್ಯದರ್ಶಿಯು ಯಾವುದೇ ಒಂದು ದೇಶದ ಪಕ್ಷಪಾತಿಯಾಗಿರಬಾರದು ಎಂದು ನಿರೀಕ್ಷಿಸಲಾಗುತ್ತದೆ. ಆದರೆ ವಿಶ್ವಸಂಸ್ಥೆಯು ಬಲಾಢ್ಯ ದೇಶಗಳಿಂದ ದೊರೆಯುವ ಅನುದಾನ ಮತ್ತು ಅವುಗಳ ಪ್ರಭಾವದ ಮೇಲೆ ಅವಲಂಬಿತವಾಗಿದೆ.ಮುಖ್ಯವಾಗಿ, ಭದ್ರತಾ ಮಂಡಳಿಯ ಐದು ಶಾಶ್ವತ ಸದಸ್ಯ ರಾಷ್ಟ್ರಗಳು ರಹಸ್ಯ ಮತದಾನದ ಮೂಲಕ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡುತ್ತವೆ. ಒಬ್ಬ ವ್ಯಕ್ತಿಗೆ ಐದು ವರ್ಷಗಳ ಎರಡು ಅವಧಿಗೆ ಪ್ರಧಾನ ಕಾರ್ಯದರ್ಶಿಯಾಗಲು ಅವಕಾಶ ಇದೆ.

ಈ  ಪ್ರಕ್ರಿಯೆಯಿಂದಾಗಿ ಪ್ರಧಾನ ಕಾರ್ಯದರ್ಶಿಯು ಐದು ಪ್ರಬಲ ದೇಶಗಳ ಪ್ರಭಾವದಿಂದ ಸ್ವತಂತ್ರವಾಗಿ ಇರುವುದು ಸಾಧ್ಯವಾಗುವುದಿಲ್ಲ. ಎಲ್ಲಾದರೂ ನಿಯೋಜಿಸುವುದಕ್ಕೆ ಪ್ರಧಾನ ಕಾರ್ಯದರ್ಶಿಗೆ ಸೇನೆ ಇಲ್ಲ. ಆದರೆ ಈ ಹುದ್ದೆಗೆ ಪ್ರಭಾವಿ ಧರ್ಮೋಪದೇಶಕನ ಪಾತ್ರ ಇದೆ.ಪ್ರಧಾನ ಕಾರ್ಯದರ್ಶಿಯು ಸ್ವತಂತ್ರವಾಗಿದ್ದರೆ ಸಂಘರ್ಷದಲ್ಲಿ ತೊಡಗಿರುವ ಎರಡು ದೇಶಗಳನ್ನು ಶಾಂತಿ ಮಾತುಕತೆಗೆ ಕರೆಯುವ ಅಧಿಕಾರ ಅವರಿಗೆ ಇರುತ್ತದೆ. ಈಗಿನ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರ ಹತ್ತು ವರ್ಷಗಳ ಅವಧಿಯಲ್ಲಿ ಈ ಹುದ್ದೆಯ ಮಿತಿಯನ್ನು ಬಹಿರಂಗಪಡಿಸಿದ ಹಲವು ನಿದರ್ಶನಗಳು ಇವೆ.ಭದ್ರತಾ ಪಡೆಗಳು ಮಕ್ಕಳನ್ನು ಕೊಂದ ಮತ್ತು ಅವರ ಮೇಲೆ ದೌರ್ಜನ್ಯ ಎಸಗಿದ ದೇಶಗಳ ಪಟ್ಟಿಯಲ್ಲಿ ಬಲಾಢ್ಯ ದೇಶಗಳು ಇರಬಾರದು ಎಂದು ಮೂನ್ ಅವರು ಎರಡು ವರ್ಷಗಳಿಂದ ದೇಶಗಳ ಮನವೊಲಿಸಲು ಯತ್ನಿಸುತ್ತಲೇ ಇದ್ದಾರೆ. 1946ರ ನಂತರ ಎಂಟು ಮಂದಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನಿಭಾಯಿಸಿದ್ದಾರೆ. ಅವರೆಲ್ಲರೂ ಗಂಡಸರು. ಈ ಬಾರಿ ಮೂನ್ ಅವರ ಉತ್ತರಾಧಿಕಾರಿಯ ಆಯ್ಕೆ ಆಗಲಿದೆ.ಮುಂದೆ ಏನು?

ವಿಶ್ವಸಂಸ್ಥೆಯ ಭವಿಷ್ಯಕ್ಕೆ ಸಂಬಂಧಿಸಿ ಐದು ಪ್ರಶ್ನೆಗಳಿವೆ. ಜನವರಿ ಒಂದರಂದು ಪ್ರಧಾನ ಕಾರ್ಯದರ್ಶಿಯಾಗಿ ಯಾರೇ ಅಧಿಕಾರ ವಹಿಸಿಕೊಳ್ಳಲಿ- 70  ವರ್ಷಗಳ ಹಿಂದೆ ಊಹಿಸಲಾಗದ ಹೊಸ ಸವಾಲುಗಳನ್ನು ಎದುರಿಸುತ್ತಿರುವ ಜಗತ್ತಿನಲ್ಲಿ ವಿಶ್ವಸಂಸ್ಥೆಯನ್ನು ಪ್ರಸ್ತುತವಾಗಿ ಉಳಿಸಿಕೊಳ್ಳುವ ಅಸಾಧ್ಯ ಎನಿಸುವಂತಹ ಹೊಣೆ ಅವರ ಮೇಲಿರುತ್ತದೆ.ಸಂಸ್ಥೆಯ ಪ್ರಭಾವ ಕುಸಿಯುತ್ತಿದೆಯೇ ಅಥವಾ ಬೆಳೆಯುತ್ತಿದೆಯೇ ಎಂಬುದನ್ನು ನಿರ್ಧರಿಸುವ ಐದು ಪ್ರಶ್ನೆಗಳು ಇಲ್ಲಿವೆ:

1. ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಉಲ್ಲಂಘಿಸುವ ದೇಶಗಳ ವಿರುದ್ಧ ಭದ್ರತಾ ಮಂಡಳಿಯು ಕ್ರಮ ಕೈಗೊಳ್ಳಲು ಸಾಧ್ಯವೇ? ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವದ ಐದು ದೇಶಗಳು ತಮ್ಮ ಸಂಕುಚಿತ ಹಿತಾಸಕ್ತಿಬದಿಗಿಟ್ಟು ಯುದ್ಧಾಕಾಂಕ್ಷೆಯನ್ನು ತಡೆಯವುದಕ್ಕೆ ಸಾಧ್ಯವೇ?2. ನಾಗರಿಕರ ರಕ್ಷಣೆಯ ಖಾತರಿ ನೀಡುವ ರೀತಿಯಲ್ಲಿ ಶಾಂತಿ ಪಾಲನಾ ಕಾರ್ಯಾಚರಣೆಯನ್ನು ಪುನರ್‌ರೂಪಿಸುವುದು ಸಾಧ್ಯವೇ?3. ಸಾಮೂಹಿಕ ವಲಸೆಯ ಹೊಸ ವಾಸ್ತವವನ್ನು ಕೊನೆಗೊಳಿಸಲು ಹೊಸ ಕ್ರಮಗಳೊಂದಿಗೆ ಮುಂದೆ ಬರುವಂತೆ ದೇಶಗಳ ಮನವೊಲಿಸಲು ವಿಶ್ವಸಂಸ್ಥೆಗೆ ಸಾಧ್ಯವಾದೀತೇ?4. ಇಂಗಾಲದ ಹೊರಸೂಸುವಿಕೆಯ ಕಡಿತದ ಭರವಸೆಯನ್ನು ಈಡೇರಿಸುವಂತೆ ದೇಶಗಳ ಮನವೊಲಿಸಲು ಪ್ರಧಾನ ಕಾರ್ಯದರ್ಶಿಗೆ ಸಾಧ್ಯವಾದೀತೇ? ಹವಾಮಾನ ಬದಲಾವಣೆಯ ಪರಿಣಾಮಗಳಿಂದ ನರಳುತ್ತಿರುವವರಿಗೆ ನೆರವಾಗಲು ಅವರಿಗೆ ಸಾಧ್ಯವಾದೀತೇ?5. ತನ್ನ ಸ್ಥಾಪನಾ ಉದ್ದೇಶವಾದ, ಜಗತ್ತನ್ನು ಉತ್ತಮ ಮತ್ತು ಹೆಚ್ಚು ಶಾಂತಿಯುತವಾದ ಸ್ಥಳವಾಗಿ ಮಾರ್ಪಡಿಸುವ ಗುರಿಗೆ ಇನ್ನಷ್ಟು ಹತ್ತಿರವಾಗುವುದಕ್ಕೆ ವಿಶ್ವಸಂಸ್ಥೆಗೆ ಸಾಧ್ಯವಾದೀತೇ?

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.