7

ಇದು ನ್ಯಾಯಾಂಗವೇ ಸೃಷ್ಟಿಸಿದ ಅಪಸ್ವರ

ನಾರಾಯಣ ಎ
Published:
Updated:
ಇದು ನ್ಯಾಯಾಂಗವೇ ಸೃಷ್ಟಿಸಿದ ಅಪಸ್ವರ

ಕೇಳಲೇಬಾರದಾಗಿದ್ದ ಕೆಲ ಕಹಿ ಸತ್ಯಗಳು ಕಿವಿಗಪ್ಪಳಿಸುತ್ತಿವೆ. ನ್ಯಾಯಾಂಗ ನಿಂದನೆಯ ತೂಗುಗತ್ತಿ ತಲೆಯ ಮೇಲಿದ್ದರೂ ಲೆಕ್ಕಿಸದೆ ಈ ದೇಶದ ಅತ್ಯುನ್ನತ ನ್ಯಾಯಾಲಯದ ಬಗ್ಗೆ ಹಾದಿ ಬೀದಿಗಳಲ್ಲಿ ಜನ ತೂಕದ ಪದಗಳನ್ನು ಬಳಸಿ ಹಗುರವಾಗಿ ಮಾತನಾಡುವಂತಾಗಿದೆ.ನ್ಯಾಯಾಂಗ ನಿಂದನೆಯ ಭಯವಿಲ್ಲದೆ ಹೋಗಿದ್ದರೆ ಈ ತೂಕದ ಪದಗಳೆಲ್ಲಾ ಎಲ್ಲಿರುತ್ತಿದ್ದವು? ಅವುಗಳ ಬದಲಿಗೆ ಎಂತೆಂಥ ಪದಗಳ ಬಳಕೆಯಾಗುತ್ತಿತ್ತು ಎನ್ನುವುದನ್ನು ಊಹಿಸಲು ಕಷ್ಟವೇನೂ ಇಲ್ಲ. ಕಾವೇರಿ ನೀರಿನ ವಿವಾದದ ವಿಚಾರವಾಗಿ  ಸುಪ್ರೀಂ ಕೋರ್ಟಿನ ನಡವಳಿಕೆಯ ಬಗ್ಗೆ ಕರ್ನಾಟಕದಲ್ಲಿ ಕೇಳಿಬಂದ ಅಪಸ್ವರ ಮೊದಲನೆಯದ್ದೂ ಅಲ್ಲ, ಕೊನೆಯದ್ದೂ ಅಲ್ಲ. ಇದೆಲ್ಲ ಪ್ರಾರಂಭವಾಗಿ ಸ್ವಲ್ಪ ಸಮಯವಾಗಿದೆ. ‘ಡೆನ್ಮಾರ್ಕ್‌ನಲ್ಲೇನೋ ಕೊಳೆಯುತ್ತಿದೆ’ ಎಂಬ ಷೇಕ್ಸ್‌ಪಿಯರ್‌ನ ‘ಹ್ಯಾಮ್ಲೆಟ್’ ನಾಟಕದ ಸಾಲು ಬೇಡ ಬೇಡ ಎಂದರೂ ನೆನಪಾಗುತ್ತದೆ.ಸುಪ್ರೀಂ ಕೋರ್ಟಿನೊಳಗಣ ಭ್ರಷ್ಟಾಚಾರದ ಬಗ್ಗೆ ಕೆಲ ನಿವೃತ್ತ ನ್ಯಾಯಾಧೀಶರೇ ಬಹಿರಂಗವಾಗಿ ಮಾತನಾಡಲಾರಂಭಿಸಿದ್ದು ಹಳೆಯ ಕತೆ. ಸುಪ್ರೀಂ ಕೋರ್ಟ್ ನಿಷ್ಪಕ್ಷಪಾತಿಯಾಗಿಲ್ಲ ಎನ್ನುವ ಆರೋಪಗಳೂ ನ್ಯಾಯಾಂಗದೊಳಗಿಂದಲೇ ಬರಲಾರಂಭಿಸಿ ಬಹಳ ಸಮಯವಾಯಿತು. ಆರಂಭದಲ್ಲಿ ಕೆಲ ಮಂದಿ ‘ಒಳಗಿನವರ ಆತಂಕ’ದ ಅಭಿವ್ಯಕ್ತಿಯಂತೆ ಆಗೊಮ್ಮೆ ಈಗೊಮ್ಮೆ ಕೇಳಿಬರುತ್ತಿದ್ದ ಈ ಅಪಸವ್ಯಗಳು ಈಗ ನಿಶ್ಚಿತವಾಗಿ ಅಪಸ್ವರದ ರೂಪ ತಾಳಿವೆ.ಮೊದಮೊದಲು ನಿವೃತ್ತ ನ್ಯಾಯಾಧೀಶರಷ್ಟೇ ಆಡುತ್ತಿದ್ದ ಮಾತುಗಳನ್ನು ಈಗ ಅದಕ್ಕಿಂತಲೂ ಕಟು ಪದ ಬಳಸಿ ವಕೀಲರು, ಸಂವಿಧಾನ ತಜ್ಞರು, ರಾಜಕೀಯ ನಾಯಕರು ಮುಂತಾಗಿ ನ್ಯಾಯಾಂಗ ನಿಂದನೆ ಕಾಯ್ದೆಯ ಎಡಬಲ ಬಲ್ಲವರೆಲ್ಲ ಆಡುತ್ತಿದ್ದಾರೆ. ಎಲ್ಲರೂ ಸೇರಿ ಸುಪ್ರೀಂ ಕೋರ್ಟ್‌ನ ಕಾರ್ಯವೈಖರಿಯನ್ನು ಅಕ್ಷರಶಃ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೋ ಏನೋ ಎನ್ನುವ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ.ಇವರೆಲ್ಲ ಸುಪ್ರೀಂ ಕೋರ್ಟ್‌ನ ‘ಸರ್ವಾಧಿಕಾರ’ದ ಬಗ್ಗೆ ಮಾತನಾಡುತ್ತಾರೆ. ಸುಪ್ರೀಂ ಕೋರ್ಟ್‌ನಲ್ಲಿ ಇರಬಾರದ ವರೆಲ್ಲ ಇದ್ದಾರೆ ಎನ್ನುತ್ತಾ ಕೆಲ ನ್ಯಾಯಾಧೀಶರ ಅರ್ಹತೆಯನ್ನು ಮತ್ತು ಪ್ರಾಮಾಣಿಕತೆಯನ್ನು ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಪ್ರಶ್ನಿಸುತ್ತಿದ್ದಾರೆ. ಸಾಲದು ಎಂಬಂತೆ ಸುಪ್ರೀಂ ಕೋರ್ಟ್‌ನ ಓರ್ವ ಹಾಲಿ ನ್ಯಾಯಾಧೀಶರೇ (ಚೆಲಮೇಶ್ವರ್) ತಮ್ಮ ಸಹೋದ್ಯೋಗಿಗಳ ಕಾರ್ಯಶೈಲಿಯಲ್ಲಿ ಪ್ರಾಮಾಣಿಕತೆಯ ಮತ್ತು ಪಾರದರ್ಶಕತೆಯ ಕೊರತೆಯನ್ನು ಗುರುತಿಸಿ ನಡೆಸುತ್ತಿರುವ ಆಂತರಿಕ ಪತ್ರವ್ಯವಹಾರಗಳೆಲ್ಲಾ ಅಧಿಕೃತವಾಗಿಯೋ, ಅನಧಿಕೃತವಾಗಿಯೋ ಮಾಧ್ಯಮಗಳಲ್ಲಿ ಬಹಿರಂಗಗೊಳ್ಳುತ್ತಿವೆ.ಮೊನ್ನೆ ಮೊನ್ನೆ ಸಹಾರಾ ಸಮೂಹ ಉದ್ಯಮಗಳ ಮುಖ್ಯಸ್ಥರ ಪೆರೋಲ್ ರದ್ದುಪಡಿಸಿ ಅವರನ್ನು ಮತ್ತೆ ಜೈಲಿಗಟ್ಟಿದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಡೆಸಿದ ಕಲಾಪಗಳ ಅಪಕ್ವತೆಯ ಬಗ್ಗೆ ಸಹಾರಾ ಸಮೂಹದ ವಕೀಲ (ರಾಜೀವ್ ಧವನ್) ಮಾಧ್ಯಮಗಳಲ್ಲಿ ಲೇಖನ ಬರೆದು ‘ಹೀಗಿದೆ ನೋಡಿ ನಮ್ಮ ಸುಪ್ರೀಂ ಕೋರ್ಟ್‌’ ಎನ್ನುವ ರೀತಿಯಲ್ಲಿ ಟೀಕಿಸುತ್ತಿದ್ದಾರೆ.ಸಾಂವಿಧಾನಿಕ ಸಂಸ್ಥೆಗಳ ಪೈಕಿ ಸುಪ್ರೀಂ ಕೋರ್ಟ್ ಇನ್ನೂ ತನ್ನ ಎತ್ತರದ ಸ್ಥಾನವನ್ನು ಕಾಯ್ದುಕೊಂಡಿರಬಹುದು. ಎಲ್ಲಾ ಅಸಮಾಧಾನಗಳ ನಡುವೆಯೂ ಇನ್ನೂ ಜನ ಸುಪ್ರೀಂ ಕೋರ್ಟ್‌ನ ಬಗ್ಗೆ ವಿಶ್ವಾಸ, ಭರವಸೆ ಇಟ್ಟುಕೊಂಡಿರಬಹುದು. ಆದರೆ ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಕಡೆಗಣಿಸುವಂತಿಲ್ಲ. ಯಾಕೆಂದರೆ,  1950 ಜನವರಿ 28ರ ಶನಿವಾರ ಪಾರ್ಲಿಮೆಂಟ್ ಭವನ ದಲ್ಲಿ ಅಧಿಕೃತವಾಗಿ ಉದ್ಘಾಟನೆಗೊಂಡ ಭಾರತದ ಸುಪ್ರೀಂ ಕೋರ್ಟ್‌ ವಿರುದ್ಧ ಈ ಮಟ್ಟಿಗೆ ಬಹಿರಂಗ ಅಪಸ್ವರಗಳು ಹಿಂದೆಂದೂ ಕೇಳಿ ಬಂದದ್ದಿಲ್ಲ. ಹಿಂದೆ ಅದರ ಮೇಲಿದ್ದ  ಏಕೈಕ ದೊಡ್ಡ ಕಪ್ಪುಚುಕ್ಕೆ ಎಂದರೆ ತುರ್ತುಪರಿಸ್ಥಿತಿಯ ಅವಧಿಯಲ್ಲಿ ಅದು ಅಂದಿನ ಸರ್ಕಾರದ ಸರ್ವಾಧಿಕಾರಿ ಪ್ರವೃತ್ತಿಗೆ ಮಣಿಯಿತು ಎಂಬುದು. ಅದರ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ಆಗಿದೆ.ಒಂದು ರೀತಿಯಲ್ಲಿ ಸ್ವತಃ ಸುಪ್ರೀಂ ಕೋರ್ಟ್ ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಂಡದ್ದೂ ಆಗಿದೆ. ಏನೇ ಇರಲಿ, ಅದು ಬಾಹ್ಯ ರಾಜಕೀಯ ಒತ್ತಡಗಳು ಬಂದ ವಿಶೇಷ ಸಂದರ್ಭ, ವಿಶೇಷ ಪ್ರಕರಣ. ಸಾಮಾನ್ಯ ಸಂದರ್ಭಗಳಲ್ಲಿ ದೇಶದ ಸುಪ್ರೀಂ ಕೋರ್ಟ್‌  ತನ್ನ ಆಂತರಿಕ ಅವನತಿಯಿಂದಾಗಿ ಜನರಲ್ಲಿ ಈ ಪರಿ ಅಸಮಾಧಾನ ಸೃಷ್ಟಿಸಿದ ಉದಾಹರಣೆಗಳಿಲ್ಲ.ನ್ಯಾಯಾಧೀಶರ ಪ್ರಾಮಾಣಿಕತೆ, ಪಾರದರ್ಶಕತೆ, ಪರಿಣತಿ ಮತ್ತು ಧೋರಣೆಗಳು ಈ ರೀತಿ ಸಾರ್ವಜನಿಕವಾಗಿ ಅನುಮಾನ ಸೃಷ್ಟಿಸಿದ ಬೆಳವಣಿಗೆಗಳಾಗಿಲ್ಲ. ನ್ಯಾಯಾಲಯದ ಕಲಾಪಗಳನ್ನು ವಕೀಲರು ಮಾಧ್ಯಮಗಳಲ್ಲಿ ಲೇಖನ ಬರೆದು ಟೀಕಿಸುತ್ತಿರಲಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬೇರೆ ಯಾವುದಾದರೂ ಸಾಂಸ್ಥಿಕ ಅಂಗಗಳ ಬಗ್ಗೆ ಟೀಕೆಗಳು ಕೇಳಿಸುವುದು ಸಹಜ ಮತ್ತು ಅಪೇಕ್ಷಣೀಯ. ಆದರೆ ನ್ಯಾಯಾಂಗದ ಬಗ್ಗೆ, ಅದರಲ್ಲೂ ಅತ್ಯುನ್ನತ ನ್ಯಾಯಾಲಯದ ಬಗ್ಗೆ ಈ ಮಟ್ಟಕ್ಕೆ ಅಪಸ್ವರ ಕೇಳುವ ಸ್ಥಿತಿ ನಿರ್ಮಾಣವಾಗಬಾರದಾಗಿತ್ತು. ಇದು ತೀರಾ ಆತಂಕಕಾರಿ ವಿಚಾರ.ಒಂದು ವರ್ಷದಿಂದೀಚೆಗೆ ಸುಪ್ರೀ೦ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ನಡುವೆ ನ್ಯಾಯಾಧೀಶರ ನೇಮಕ ವಿಧಾನದ ಕುರಿತು ಮುಸುಕಿನ ಗುದ್ದಾಟವೊಂದು ನಡೆಯುತ್ತಿದೆ.  ಸುಪ್ರೀಂ ಕೋರ್ಟ್‌ನ ಐದು ಮಂದಿ ನ್ಯಾಯಾಧೀಶರ ಪೀಠ 1998ರಲ್ಲಿ ನೀಡಿದ ಆದೇಶದ ಪ್ರಕಾರ ಈಗ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಒಂದು ಸಮಿತಿ  (ಕೊಲಿಜಿಯಂ) ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ಆಯ್ಕೆ ನಡೆಸುತ್ತದೆ.ಅಂದರೆ ಚುನಾಯಿತ ಸರ್ಕಾರಕ್ಕೆ ಈ ನೇಮಕಗಳಲ್ಲಿ ಯಾವುದೇ ಪಾತ್ರವಿಲ್ಲ. 2015ರಲ್ಲಿ ಸಂಸತ್ತು ಸರ್ವಾನುಮತದಿಂದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗ ಮಸೂದೆಯನ್ನು ಪಾಸು ಮಾಡಿ ಹೊಸ ವ್ಯವಸ್ಥೆಯೊಂದನ್ನು ತರಲು ಉದ್ದೇಶಿಸಿತು. ಈ ವ್ಯವಸ್ಥೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಜತೆ, ಕೇಂದ್ರ ಕಾನೂನು ಸಚಿವರು ಮತ್ತು ಸರ್ಕಾರ ನೇಮಿಸುವ ಇಬ್ಬರು ಪರಿಣತರು ಸೇರಿ ನ್ಯಾಯಾಧೀಶರ ಆಯ್ಕೆ ನಡೆಸುವ ಉದ್ದೇಶವಿತ್ತು. ಸುಪ್ರೀಂ ಕೋರ್ಟ್ ಈ ಕಾಯ್ದೆಯನ್ನು ಅನೂರ್ಜಿತಗೊಳಿಸಿತು. ನ್ಯಾಯಾಂಗ ನೇಮಕಾತಿಗಳಲ್ಲಿ ರಾಜಕೀಯ ಹಸ್ತಕ್ಷೇಪ ಸಹಿಸುವುದಿಲ್ಲ ಎಂದಿತು. ಬೇಕಾದರೆ ಕೊಲಿಜಿಯಂ ವ್ಯವಸ್ಥೆಯಲ್ಲಿ ಸುಧಾರಣೆ ತರೋಣ ಎಂದಿತು.  ಕೇಂದ್ರ ಸರ್ಕಾರಕ್ಕೆ ಇದು ಒಪ್ಪಿಗೆಯಾಗಲಿಲ್ಲ. ಅಂದಿನಿಂದ  ನ್ಯಾಯಾಧೀಶರ ನೇಮಕ ನನೆಗುದಿಗೆ ಬಿದ್ದಿದೆ.ಈ ವಿವಾದವನ್ನು ವಿಧವಿಧವಾಗಿ ನೋಡಬಹುದು. ಶಾಸಕಾಂಗದ ನೇಮಕಾತಿಯನ್ನು ಶಾಸಕಾಂಗವೇ ನಡೆಸುವುದಿಲ್ಲ, ಕಾರ್ಯಾಂಗದ ನೇಮಕಾತಿಯನ್ನು ಕಾರ್ಯಾಂಗವೇ ಮಾಡುವುದಿಲ್ಲ, ನ್ಯಾಯಾಂಗದ ನೇಮಕಾತಿಯನ್ನು ಮಾತ್ರ ನ್ಯಾಯಾಂಗವೇ ನಡೆಸಬೇಕೇ ಎನ್ನುವ ಪ್ರಶ್ನೆ ಇದೆ. ಆದರೆ ರಾಜಕೀಯದವರು ನ್ಯಾಯಾಂಗದ ನೇಮಕಾತಿಯಲ್ಲಿ ಇರುವುದನ್ನು ಯಾರೂ ಇಷ್ಟಪಡುವುದಿಲ್ಲ. ಕಾರಣ ರಾಜಕಾರಣ ಕೆಟ್ಟದ್ದು, ನ್ಯಾಯಾಂಗ ಪವಿತ್ರವಾದದ್ದು ಎಂಬ ನಮ್ಮ ತಿಳಿವಳಿಕೆ. ವಾದವನ್ನು ಯಾವ ರೀತಿ ಬೇಕಾದರೂ ತಿರುಗಿಸಬಹುದು. ಈಗ ಕೆಲ ಅಪ್ರಿಯ ಸತ್ಯಗಳನ್ನು ನೋಡೋಣ.1980ರ ದಶಕದ ಆದಿಯಿಂದ 1998ರ ವರೆಗೆ ನ್ಯಾಯಾಂಗ ಮತ್ತು ಚುನಾಯಿತ ಸರ್ಕಾರಗಳು ಸೇರಿ ನ್ಯಾಯಾಧೀಶರನ್ನು ನೇಮಿಸುತ್ತಿದ್ದರು. 1998ರಿಂದ ಈಚೆಗೆ ನ್ಯಾಯಾಧೀಶರನ್ನು ಪರಮ ಪವಿತ್ರ ನ್ಯಾಯಾಂಗ ನೇಮಿಸುತ್ತಿದೆ. ಅಂದರೆ, 1998ರಿಂದ ಈಚೆಗೆ  ನಡೆದ ನೇಮಕಾತಿಗಳು ರಾಜಕೀಯದಿಂದ  ಅಪವಿತ್ರಗೊಳ್ಳದ ಕಾರಣಕ್ಕೆ ಸಮರ್ಥರೂ, ಪ್ರಾಮಾಣಿಕರೂ, ಅತ್ಯುನ್ನತ ನೈತಿಕ ಮೌಲ್ಯಗಳ ಪ್ರತಿಪಾದಕರೂ ಆಗಿರುವ ನ್ಯಾಯಾಧೀಶರನ್ನು ದೇಶಕ್ಕೆ ನೀಡಬೇಕಿತ್ತಲ್ಲಾ? ಆದರೆ ವಾಸ್ತವ ಸ್ಥಿತಿ ಹೇಳುವ ಕತೆಯೇ ಬೇರೆ.‘ರಾಜಕೀಯ ಹಸ್ತಕ್ಷೇಪ’ದಿಂದ ಕೂಡಿಯೇ ನೇಮಕಾತಿ ನಡೆಯುತ್ತಿದ್ದ ಕಾಲಕ್ಕೆ ಪರಿಸ್ಥಿತಿ ಇಷ್ಟೊಂದು ಕೆಟ್ಟಿರಲಿಲ್ಲ. ನ್ಯಾಯಾಂಗದ ದೊಡ್ಡ ದೊಡ್ಡ ಹಗರಣಗಳು, ಹುಳುಕುಗಳು ಎಲ್ಲಾ ಹೊರ ಬರಲು ತೊಡಗಿದ್ದು ನ್ಯಾಯಾಂಗವೇ ನ್ಯಾಯಾಧೀಶರನ್ನು ನೇಮಿಸಲು ಪ್ರಾರಂಭಿಸಿದ ನಂತರ!ರಾಜಕೀಯ ಹಸ್ತಕ್ಷೇಪ ಇರುವಾಗ ನಡೆದ ನೇಮಕಾತಿಗಳಲ್ಲಿ ನೇಮಕವಾಗಬಾರದಾಗಿದ್ದ ಕೆಲವರು ನ್ಯಾಯಾಲಯಗಳಿಗೆ ನೇಮಕವಾದರು ಎಂದಾಗಿದ್ದರೆ ಅದರಲ್ಲಿ ಆಶ್ಚರ್ಯ ಏನೂ ಇಲ್ಲ. ರಾಜಕಾರಣಿಗಳ ಹಸ್ತಕ್ಷೇಪ ಇರುವ ಎಲ್ಲೆಡೆ ಇದು ಆಗುತ್ತದೆ ಮತ್ತು ಅದು ಮಿತಿ ಮೀರಿದರೆ ಅದನ್ನು ನಿಯಂತ್ರಿಸುವ ಅಧಿಕಾರ ಜನರ ಬಳಿಯೇ ಇರುತ್ತದೆ ಕೂಡ. ಆದರೆ ನೇಮಕಾತಿಯ ಪ್ರಕ್ರಿಯೆ ಸಂಪೂರ್ಣವಾಗಿ ನ್ಯಾಯಾಧೀಶರ ಸುಪರ್ದಿಯಲ್ಲೇ ಇದ್ದಾಗ ನೇಮಕವಾಗಬಾರದವರೆಲ್ಲಾ ನೇಮಕವಾದರು ಎನ್ನುವುದಿದೆಯಲ್ಲ ಅದು ಸಾರುವ ಸತ್ಯಗಳು ಭೀಕರವಾಗಿವೆ.ಕೊಲಿಜಿಯಂ ಪದ್ಧತಿ ವಿರೋಧಿಸಿ ನ್ಯಾಯಾಧೀಶರಾದ ಚೆಲಮೇಶ್ವರ್‌ ಅವರು ತಮ್ಮ ಸಹೋದ್ಯೋಗಿಗಳಿಗೆ ಬರೆದ ಪತ್ರಗಳಲ್ಲಿ ಈ ನ್ಯಾಯಾಂಗ-ರಾಜಕೀಯದ ಹಲವು    ಮುಖಗಳು ಅನಾವರಣಗೊಳ್ಳುತ್ತವೆ. ಇದಕ್ಕಿಂತಲೂ ಮುಖ್ಯವಾದ ಇನ್ನೊಂದು ವಿಚಾರವಿದೆ. ಅದನ್ನು ಹೀಗೆ ಹೇಳಬಹುದು. ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತ ಧೋರಣೆ ರಾಜಕಾರಣಿಗಳ ಮತ್ತು ಅಧಿಕಾರಿಗಳ ಮಧ್ಯೆ ಇಲ್ಲದೆ ಹೋದರೆ ಅದು ಮಾಮೂಲು. ಆದರೆ, ಈ ಗುಣಗಳನ್ನು ಒಂದು ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನಡುವೆ ಕೂಡಾ ಕಾಣಲು ಕಷ್ಟವಾದರೆ ಆ ದೇಶ ಎದುರಿಸುತ್ತಿರುವುದು ಕೇವಲ ವ್ಯವಸ್ಥೆಯ ಬಿಕ್ಕಟ್ಟನ್ನು ಮಾತ್ರವಲ್ಲ, ಅದು ಎದುರಿಸುತ್ತಿರುವುದು ನಾಗರಿಕತೆಯ ಬಿಕ್ಕಟ್ಟನ್ನು.ಭಾರತದ ನ್ಯಾಯಾಂಗ ಕಂಡ ಏಳುಬೀಳುಗಳು ಕುತೂಹಲಕಾರಿಯಾಗಿವೆ. ಸುಮಾರು 25 ವರ್ಷಗಳ ಕಾಲ ಸಂಸತ್ತಿನೊಂದಿಗೆ ಸಂಘರ್ಷಕ್ಕಿಳಿದು ಕೊನೆಗೆ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನ, ಸಂಸತ್ತು ಮತ್ತು ನ್ಯಾಯಾಂಗ-  ಈ ಮೂರರ ಮೇಲ್ಮೆಯನ್ನೂ ಎತ್ತಿಹಿಡಿದು ವ್ಯವಸ್ಥೆಯಲ್ಲೊಂದು ಸಮತೋಲನ ತಂದ ಸುಪ್ರೀಂ ಕೋರ್ಟ್ ತುರ್ತುಪರಿಸ್ಥಿತಿಯ ಸಮಯದಲ್ಲಿ ದಯನೀಯವಾಗಿ ಸೋತಿತು. ಆ ನಂತರ ಕಳೆದು ಹೋದ ಮಾನವನ್ನು ಮತ್ತೆ ಪಡೆಯಲೋ ಎಂಬಂತೆ 1977ರ ನಂತರ ಬಡವರ ಮತ್ತು ದೀನ ದಲಿತ ಪರ ಸಾಲು ಸಾಲು ತೀರ್ಪುಗಳನ್ನು ನೀಡಿತು. ಸಾರ್ವಜನಿಕ ಹಿತಾಸಕ್ತಿಯ ಪ್ರಕರಣಗಳಲ್ಲಿ ಸಂವಿಧಾನದ 21ನೇ ವಿಧಿಯನ್ನು ವಿಸ್ತೃತಗೊಳಿಸುತ್ತಾ ಅತ್ಯಂತ ಜನಪರ ನ್ಯಾಯಾಂಗ ಎನಿಸಿಕೊಂಡಿತು. ಆಗಲೇ ಕೆಲವರು ಈ ಜನಪರತೆ ಜನಪ್ರಿಯತೆಯತ್ತ ಸಾಗುತ್ತಿದೆ ಎಂದು ಎಚ್ಚರಿಸಿದರು.ಆದರೆ ಆ ಕಾಲಕ್ಕೆ ಶಾಸಕಾಂಗದ  ಮತ್ತು ಕಾರ್ಯಾಂಗದ ನಿರ್ವೀರ್ಯತೆ ಸೃಷ್ಟಿಸಿದ್ದ ಶೂನ್ಯವನ್ನು ತುಂಬಿದ ಕಾರಣಕ್ಕೆ ನ್ಯಾಯಾಂಗ ಮಾಡಿದ್ದೆಲ್ಲವನ್ನೂ ಜನ ಅನಿವಾರ್ಯವಾಗಿ ಸ್ವೀಕರಿಸಬೇಕಾಯಿತು. 1991ರ ನಂತರ ನ್ಯಾಯಾಂಗದ ತೀರ್ಪುಗಳು ವ್ಯವಸ್ಥೆಯ ಪರ ವಾಲತೊಡಗಿದವು. ಅಭಿವೃದ್ಧಿಯ ಹೆಸರಲ್ಲಿ ತಾನೇ ಎತ್ತಿ ಹಿಡಿದಿದ್ದ ಬಡವರ ಹಕ್ಕುಗಳನ್ನು ಅದು ಸ್ವಲ್ಪಮಟ್ಟಿಗೆ ಧಿಕ್ಕರಿಸಿತು. ಆದರೂ, ನ್ಯಾಯಾಂಗದ ಜನಪರ-ಜನಪ್ರಿಯ ವರ್ಚಸ್ಸು ಕಳೆಗುಂದಲಿಲ್ಲ. ವ್ಯವಸ್ಥೆಯ ಇತರ ಸಂಸ್ಥೆಗಳ ಧೋರಣೆಯಿಂದ ಬೇಸತ್ತಿದ್ದ ಜನ ನ್ಯಾಯಾಂಗಕ್ಕೆ ಬಲು ಗೌರವದ ಸ್ಥಾನ ನೀಡಿದರು. ಭಾರತದಲ್ಲಿ ಜನ ಅತೀ ಹೆಚ್ಚು ವಿಶ್ವಾಸ ಇರಿಸಿದ ಸಂಸ್ಥೆ  ಸುಪ್ರೀಂ ಕೋರ್ಟ್ ಎಂಬ ಫಲಿತಾಂಶವನ್ನು ಹಲವಾರು ಸರ್ವೆಗಳು ನೀಡಿದವು. ಈ ಉತ್ತುಂಗದ ಅವಧಿಯಲ್ಲೇ ನ್ಯಾಯಾಂಗ ವ್ಯವಸ್ಥೆಯೊಳಗೆ ಸೇರಿಕೊಂಡ ಹುಳುಕುಗಳನ್ನು ಯಾರೂ ಗಮನಿಸದೆ ಹೋದರು. ಗಮನಿಸಿದವರ ಧ್ವನಿಯನ್ನು ನ್ಯಾಯಾಂಗ ನಿಂದನೆಯ ಭಯ ದಮನಿಸಿತು. ಈಗ ಕವಾಟದೊಳಗಿನಿಂದ ಅಸ್ಥಿಗಳು ಒಂದೊಂದಾಗಿ ಹೊರಬೀಳುತ್ತಿವೆ.ಎಲ್ಲವೂ ಕೆಟ್ಟಾಗ ನ್ಯಾಯಾಂಗ ಜನರ ರಕ್ಷಣೆಗೆ ಕಂಕಣ ಬದ್ಧವಾಯಿತು. ನ್ಯಾಯಾಂಗದ ಬಗ್ಗೆಯೇ ಅಪಸ್ವರ ಬಂದರೆ ಜನ ಇನ್ನೆಲ್ಲಿ ಹೋಗಬೇಕು? ಇಂದಿನ ವ್ಯವಸ್ಥೆಯಲ್ಲಿ ಇದು ದಾರಿಯ ಕೊನೆ. ಅದಕ್ಕೇ ಹೇಳಿದ್ದು ನ್ಯಾಯಾಂಗ ತನ್ನನ್ನು ತಾನು ಈಗಿನ ಸ್ಥಿತಿಗೆ ನೂಕಿಕೊಳ್ಳುತ್ತಿರುವುದು ಅಪಾಯಕಾರಿ ಸನ್ನಿವೇಶದ ಮುನ್ಸೂಚನೆ ಎಂದು. ಹೆಚ್ಚು ಎತ್ತರಕ್ಕೆ ಬೆಳೆದು ನಿಂತದ್ದು ಪತನಗೊಂಡರೆ ಅದು ಉಂಟು ಮಾಡುವ ಪರಿಣಾಮ ಅಗಾಧವಾಗಿರುತ್ತದೆ.ಆಗಬಾರದ  ಕೆಲ ಬೆಳವಣಿಗೆಗಳು ಕಾಣಿಸಿಕೊಳ್ಳತೊಡಗಿದರೆ ಅವುಗಳನ್ನು ತತ್‌ಕ್ಷಣ ತಹಬಂದಿಗೆ ತರುವುದು ಪ್ರಬುದ್ಧ ಸಮಾಜವೊಂದರ ಲಕ್ಷಣ. ಆದರೆ ಅತ್ಯುನ್ನತ ನ್ಯಾಯಾಲಯದ ಮಟ್ಟದಲ್ಲೇ ಅ೦ತಹ ಪ್ರಬುದ್ಧತೆಯನ್ನೂ, ಪ್ರಾಮಾಣಿಕತೆಯನ್ನೂ ಉಳಿಸಿಕೊಳ್ಳಲು ಒದ್ದಾಡುತ್ತಿರುವ ಸ್ಥಿತಿಯಲ್ಲಿ ಆ ಗುಣಗಳನ್ನು ಸಮಾಜದಲ್ಲಿ ಕಾಣುವುದು ಹೇಗೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry