ರಫೇಲ್‌ ಸೇರ್ಪಡೆ ವಾಯುಪಡೆ ಬಲ ಹೆಚ್ಚಳ

7

ರಫೇಲ್‌ ಸೇರ್ಪಡೆ ವಾಯುಪಡೆ ಬಲ ಹೆಚ್ಚಳ

Published:
Updated:
ರಫೇಲ್‌ ಸೇರ್ಪಡೆ ವಾಯುಪಡೆ ಬಲ ಹೆಚ್ಚಳ

ಫ್ರಾನ್ಸ್‌ನಿಂದ ಅತ್ಯಾಧುನಿಕ ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ ಉಭಯ ದೇಶಗಳ ಸರ್ಕಾರದ ಮಟ್ಟದಲ್ಲಿ ಆಗಿರುವ ನೇರ ಒಪ್ಪಂದ ಗಣನೀಯವಾದದ್ದು.ರಫೇಲ್‌  ಯುದ್ಧ ವಿಮಾನಗಳ ಸೇರ್ಪಡೆಯಿಂದ ಭಾರತದ ವಾಯುಪಡೆಯ ವೈಮಾನಿಕ ದಾಳಿ ಸಾಮರ್ಥ್ಯಗಮನಾರ್ಹವಾಗಿ ಹೆಚ್ಚಲಿದೆ. ಹಲವಾರು  ವರ್ಷಗಳಿಂದ ಇಂತಹ ಸಮರ ವಿಮಾನಗಳ ಸೇರ್ಪಡೆಯನ್ನು ವಾಯುಪಡೆ ಎದುರು ನೋಡುತ್ತಿತ್ತು. ಸದ್ಯದ ಮತ್ತು ಭವಿಷ್ಯದ ವೈಮಾನಿಕ ದಾಳಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲೂ ಇದರಿಂದ ಸಾಧ್ಯವಾಗಲಿದೆ.ಈಗ ಬಳಕೆಯಲ್ಲಿ ಇರುವ  ಅಷ್ಟೇನೂ ಸುರಕ್ಷಿತವಲ್ಲದ ಮಿಗ್‌ ಯುದ್ಧ ವಿಮಾನಗಳು ತುಂಬ ಹಳೆಯದಾಗಿದ್ದು, ಅವುಗಳನ್ನು ಬದಲಿಸುವ ಅನಿವಾರ್ಯ ಎದುರಾಗಿದೆ. ಡಸಾಲ್ಟ್‌ ಏವಿಯೇಷನ್‌ ತಯಾರಿಕೆಯ ರಫೇಲ್‌ ವಿಮಾನಗಳು  ಈ ಕೊರತೆ ತುಂಬಿಕೊಡಲಿವೆ.  ವೇಗ, ದಾಳಿ ಸಾಮರ್ಥ್ಯ, ಬಾಳಿಕೆ,  ತಂತ್ರಜ್ಞಾನ ಮತ್ತಿತರ ವಿಷಯಗಳಲ್ಲಿ ರಫೇಲ್‌ ಶ್ರೇಷ್ಠ ದರ್ಜೆಯ ವಿಮಾನಗಳಾಗಿವೆ. ಶತ್ರು ನೆಲೆಗಳತ್ತ  ಅಣ್ವಸ್ತ್ರ ಸಾಗಿಸುವ ಮತ್ತು ಅತ್ಯಾಧುನಿಕ  ಕ್ಷಿಪಣಿಗಳನ್ನು ಉಡಾಯಿಸುವ ವಿಶಿಷ್ಟ ಸಾಮರ್ಥ್ಯ ಹೊಂದಿವೆ ಇವು.ಯುದ್ಧ ವಿಮಾನಗಳ ಕೊರತೆ ಎದುರಿಸುತ್ತಿರುವ ವಾಯುಪಡೆಗೆ ಇವುಗಳ ಸೇರ್ಪಡೆಯು ಹೊಸ ಬಲ ತಂದುಕೊಡಲಿದೆ. ಭಾರತದ ವಾಯುಪ್ರದೇಶದಲ್ಲಿ ಹಾರಾಟ ನಡೆಸುತ್ತಲೇ ಆಕಾಶದಿಂದ ಆಕಾಶಕ್ಕೆ 150 ಕಿ.ಮೀ. ಮತ್ತು ಆಕಾಶದಿಂದ ಭೂಮಿಗೆ 300 ಕಿ.ಮೀ.ಗಳಷ್ಟು ದೂರದವರೆಗೆ  ಕ್ಷಿಪಣಿ ದಾಳಿ ನಡೆಸುವ  ರಫೇಲ್‌ಗಳ ಸಾಮರ್ಥ್ಯಕ್ಕೆ ಭಾರತ ಉಪಖಂಡದಲ್ಲಿ ಸದ್ಯಕ್ಕೆ ಸರಿಸಾಟಿಯಾವುದೂ  ಇಲ್ಲ. ವೈರಿಪಡೆಗಳ ಅದರಲ್ಲೂ  ವಿಶೇಷವಾಗಿ ಭಾರತದ ಸೇನೆಯ ಬದ್ಧವೈರಿ ಎಂದೇ ಪರಿಗಣಿಸಲಾಗಿರುವ ಪಾಕಿಸ್ತಾನದಲ್ಲಿನ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ಕರಾರುವಾಕ್ಕಾಗಿ ದಾಳಿ ನಡೆಸುವ ಸಾಮರ್ಥ್ಯ ಈ ಸಮರ ವಿಮಾನಗಳಿಗೆ ಇರುವುದು ನಮ್ಮ ಸೇನಾಪಡೆಗಳ ಸ್ಥೈರ್ಯ ಹೆಚ್ಚಿಸಲಿದೆ. ಪಶ್ಚಿಮ ಗಡಿ ಪ್ರದೇಶಗಳಲ್ಲಿ ಇವುಗಳನ್ನು ನಿಯೋಜಿಸಿದರೂ, ಚೀನಾ ದಾಳಿ ಎದುರಿಸಲು ಇವುಗಳ ಸಂಖ್ಯೆ ಸಾಕಾಗದು ಎಂಬುದನ್ನೂ ನಾವು ಮರೆಯುವಂತಿಲ್ಲ.ಹದಿನೇಳು ತಿಂಗಳ ಕಾಲ ನಿರಂತರವಾಗಿ ನಡೆದ ಚೌಕಾಸಿಯ ಫಲವಾಗಿ ₹ 59 ಸಾವಿರ  ಕೋಟಿ ವೆಚ್ಚದಲ್ಲಿ 36 ಯುದ್ಧ ವಿಮಾನಗಳನ್ನು ಖರೀದಿಸಲಾಗಿದೆ.  ಈ ಹಿಂದಿನ ಯುಪಿಎ ಸರ್ಕಾರ ಈ ವಿಮಾನಗಳ ಖರೀದಿ ಒಪ್ಪಂದಕ್ಕೆ ಚಾಲನೆ ನೀಡಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅದನ್ನು ರದ್ದುಪಡಿಸಿ ಹೊಸದಾಗಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿತ್ತು.ಮೂಲ ಒಪ್ಪಂದದಡಿ 126 ವಿಮಾನಗಳನ್ನು ಖರೀದಿಸಲು ಉದ್ದೇಶಿಸಲಾಗಿತ್ತು. ಅಂತಿಮವಾಗಿ 36 ವಿಮಾನಗಳನ್ನಷ್ಟೇ ಖರೀದಿಸುವ ತೀರ್ಮಾನಕ್ಕೆ ಬಂದಿರುವುದು ಏಕೆ ಎನ್ನುವುದು ಸ್ಪಷ್ಟವಾಗುತ್ತಿಲ್ಲ. ದುಬಾರಿ ಬೆಲೆ ಕಾರಣಕ್ಕೆ ಖರೀದಿ ಸಂಖ್ಯೆಯನ್ನು ತಗ್ಗಿಸಿರುವುದೇ ನಿಜವಾಗಿದ್ದರೆ ದೇಶಿ ರಕ್ಷಣಾ ಖರೀದಿ ವ್ಯವಹಾರಗಳಲ್ಲಿ ಎದುರಾಗುತ್ತಿರುವ ಸಮಸ್ಯೆ ಮತ್ತು ಸವಾಲುಗಳಿಗೆ ಇದು ದ್ಯೋತಕ. ಭಾರತಕ್ಕೆ ತಂತ್ರಜ್ಞಾನ ವರ್ಗಾವಣೆಯೂ ಇಲ್ಲದಿರುವುದಕ್ಕೆ ಭಾರತ ಮುಂದೊಂದು ದಿನ ಭಾರಿ ಬೆಲೆ ತೆರಬೇಕಾಗಿ ಬರಬಹುದು ಎಂಬಂತಹ ಕಾಂಗ್ರೆಸ್‌ ಟೀಕೆಯನ್ನು ಗಂಭೀರವಾಗಿ ಪರಿಗಣಿಸಬೇಕು.ದೇಶಿ ವಾಯುಪಡೆಗೆ ಯುದ್ಧ ವಿಮಾನಗಳ 40 ರಿಂದ 42 ಸ್ಕ್ವಾಡ್ರನ್ಸ್‌ ಅಗತ್ಯ ಇದ್ದರೂ (ಒಂದು  ಸ್ಕ್ವಾಡ್ರನ್‌ಲ್ಲಿ 18 ವಿಮಾನಗಳು ಇರುತ್ತವೆ ) 30 ರಿಂದ 32  ಸ್ಕ್ವಾಡ್ರನ್ಸ್‌ ಮಾತ್ರ ಇವೆ. ರಫೇಲ್‌ ಯುದ್ಧ ವಿಮಾನಗಳ ಕೇವಲ ಎರಡು ಸ್ಕ್ವಾಡ್ರನ್ಸ್‌ ಮಾತ್ರ ಅಸ್ತಿತ್ವಕ್ಕೆ ಬರಲಿವೆ.  ಮಿಗ್‌ ವಿಮಾನಗಳನ್ನೂ ಹಂತ ಹಂತವಾಗಿ ಕೈಬಿಡಲಾಗುವುದರಿಂದ ಮುಂಬರುವ ದಿನಗಳಲ್ಲಿ ಯುದ್ಧ ವಿಮಾನಗಳ ಕೊರತೆ ಇನ್ನಷ್ಟು ಹೆಚ್ಚಲಿದೆ.ದೇಶೀಯವಾಗಿಯೇ ಅಭಿವೃದ್ಧಿಪಡಿಸುವ ಲಘು ಯುದ್ಧ ವಿಮಾನ ‘ತೇಜಸ್‌’ ಮತ್ತು ರಷ್ಯಾದಿಂದ 5ನೇ ತಲೆಮಾರಿನ ಯುದ್ಧ ವಿಮಾನಗಳು ವಾಯುಪಡೆಗೆ ಸೇರ್ಪಡೆಗೊಂಡಾಗ ಮಾತ್ರ ಅದರ ದಾಳಿ ಸಾಮರ್ಥ್ಯ ಇನ್ನಷ್ಟು ಮೊನಚಾಗಲಿದೆ. ನಿರಂತರ ಚೌಕಾಸಿಯಿಂದ ಸರ್ಕಾರದ ಬೊಕ್ಕಸಕ್ಕೆ ₹ 5 ಸಾವಿರಕ್ಕೂ ಹೆಚ್ಚು ಕೋಟಿಗಳ ಉಳಿತಾಯವಾಗಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.ಒಪ್ಪಂದದ ವಿವರಗಳೆಲ್ಲ ಬಹಿರಂಗಗೊಂಡ ನಂತರವೇ ವಸ್ತುಸ್ಥಿತಿ ತಿಳಿದು ಬರಲಿದೆ. ರಫೇಲ್‌ ಸೇರ್ಪಡೆ ಹೊರತಾಗಿಯೂ ಭಾರತ ತನ್ನ ವಾಯುಪಡೆಯ ದಾಳಿ ಸಾಮರ್ಥ್ಯ ಹೆಚ್ಚಿಸಲು ಇನ್ನಷ್ಟು ಗಮನ ನೀಡುವ ಅನಿವಾರ್ಯ ಇದೆ. ರಕ್ಷಣಾ ಉತ್ಪಾದನೆಯಲ್ಲಿ ದೇಶದ ಸಾಮರ್ಥ್ಯ ಹೆಚ್ಚಿಸುವ ಮತ್ತು ಖಾಸಗಿ ವಲಯಕ್ಕೆ ಅಗತ್ಯ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದರೆ ಮಾತ್ರ  ರಕ್ಷಣಾ ಪಡೆಗಳ ದಾಳಿ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯವಾದೀತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry