ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್‌ ತಾರೆಯರ ‘ಕ್ಲಾಸ್‌’ ಕಥೆ

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ತೆರೆಯ ಮೇಲೆ ರಂಜಿಸುವ ನಟರ ನಟನಾಕೌಶಲದ ಹೊರತಾಗಿ ಅವರ ಹಿನ್ನೆಲೆಯ ಬಗ್ಗೆ ಸಾಮಾನ್ಯ ಜನರಿಗೆ ತಿಳಿದಿರುವುದು ಕಡಿಮೆಯೇ. ನಟನೆಯ ಹೊರತಾಗಿಯೂ ಅವರು  ಬೇರೆ ವಿಷಯದಗಳಲ್ಲಿ ಪ್ರತಿಭಾವಂತರಾಗಿರುತ್ತಾರೆ. ಕೆಲವರು  ಕ್ರೀಡೆಯಲ್ಲಿ ಮುಂದಿದ್ದರೆ, ಮತ್ತೆ ಕೆಲವರು ಓದಿನಲ್ಲಿ ಚುರುಕಾಗಿರುತ್ತಾರೆ. ಬಾಲ್ಯದಲ್ಲಿಯೇ ನಟರಾಗುವ ಕನಸು ಕಂ ಡರೂ ತಮ್ಮ ಮೊದಲ ಆದ್ಯತೆಯನ್ನು ಶಿಕ್ಷಣಕ್ಕೆ ನೀಡಿರುತ್ತಾರೆ. ಶೈಕ್ಷಣಿಕ ಜೀವನದಲ್ಲಿ ಅತಿ ಮುಖ್ಯ ಎನ್ನುವ ಇವರು, ಓದನ್ನು ಪೂರ್ತಿಗೊಳಿಸಿದ ಬಳಿಕವೇ ನಟನೆಯೆಡೆಗೆ ಪಯಣ ಬೆಳೆಸಿದರು. ಅಂಥವರ ಪರಿಚಯ ಇಲ್ಲಿದೆ.

ಪರಿಣೀತಿ ಚೋಪ್ರಾ
ಬಾಲ್ಯದಿಂದಲೇ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮುಂದಿದ್ದ ಪರಿಣೀತಿ, ಬ್ಯಾಂಕ್‌ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕೆಂಬ ಹಂಬಲ ಹೊಂದಿದ್ದರು. ಬ್ರಿಟನ್ನಿನ ಮ್ಯಾಂಚೆಸ್ಟರ್‌ ಬಿಸ್‌ನೆಸ್‌ ಸ್ಕೂಲ್‌ನಲ್ಲಿ ಹಣಕಾಸು ಮತ್ತು ಅರ್ಥಶಾಸ್ತ್ರದಲ್ಲಿ ಉನ್ನತ ಪದವಿಯನ್ನು ಇವರು ಪಡೆದಿದ್ದಾರೆ.

ಓದುವ ಸಂದರ್ಭದಲ್ಲಿಯೇ ಇವರು ಮ್ಯಾಂಚೆಸ್ಟರ್‌ ಯುನೈಟೆಡ್‌ ಫುಟ್‌ಬಾಲ್‌ ಕ್ಲಬ್‌ನಲ್ಲಿ ಅರೆಕಾಲಿಕ ಉದ್ಯೋಗವನ್ನು ಮಾಡುತ್ತಿದ್ದರು.  ಭಾರತಕ್ಕೆ ಮರಳಿದ ನಂತರ ಯಶ್‌ರಾಜ್‌ ಪ್ರೊಡಕ್ಷನ್‌ ಕಂಪೆನಿಯಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದ ಇವರು, ಅಚಾನಕ್ಕಾಗಿ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಿದಾಗ  ಒಲ್ಲೆ ಎನ್ನಲಾಗದೆ  ಒಪ್ಪಿಕೊಂಡರು.

ಪ್ರೀತಿ ಜಿಂಟಾ
ಶಾಲಾದಿನಗಳಲ್ಲಿ ಬಲು ಚುರುಕಾಗಿದ್ದ ಪ್ರೀತಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂಮುಂದಿದ್ದರು. ರಸ್ತೆ ಅಪಘಾತದಿಂದ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಪ್ರೀತಿ ಅನಿವಾರ್ಯವಾಗಿ ಬೋರ್ಡಿಂಗ್‌ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.  ಈ ವೇಳೆ ಒಂಟಿ ಎನ್ನಿಸುತ್ತಿದ್ದ ಇವರಿಗೆ ಓದಿನ ಸಖ್ಯ ಹಿತವೆನಿಸಿತು. ಅದರಲ್ಲೂ ಶೇಕ್ಸ್‌ಪಿಯರ್‌ ಕಥೆಗಳು ಬಹಳ ಇಷ್ಟವಾದವು. ಹಾಗಾಗಿ ಇಂಗ್ಲಿಷ್‌ ಸಾಹಿತ್ಯದಲ್ಲಿ ಪದವಿಯನ್ನು ಪಡೆದರು.

‘ಕ್ರಿಮಿನಲ್‌ ಸೈಕಾಲಜಿ’ಯಲ್ಲಿ ಉನ್ನತ ಶಿಕ್ಷಣವನ್ನು ಇವರು ಮಾಡಿದ್ದಾರೆ. ಬಾಲ್ಯದಿಂದಲೂ ಉತ್ತಮ ಅಂಕಗಳನ್ನು ಗಳಿಸುತ್ತಿದ್ದ ಇವರು, ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿದ್ದರು. ಸಮಯ ಸಿಕ್ಕಾಗಲೆಲ್ಲ ಬಾಸ್ಕೆಟ್‌ಬಾಲ್‌ ಆಡುವುದು ಇವರ ಹವ್ಯಾಸವಾಗಿತ್ತು. ಆದರೆ ನಂತರ ಆರಿಸಿಕೊಂಡಿದ್ದು ಮಾಡೆಲಿಂಗ್‌ ಕ್ಷೇತ್ರವನ್ನು. ಅಲ್ಲಿಂದ ಸಿನಿಮಾದೆಡೆಗೆ ಪಯಣ ಬೆಳೆಸುವುದು ಕಷ್ಟವಾಗಲಿಲ್ಲ.

ಆಯುಷ್ಮಾನ್‌ ಖುರಾನ
ರಿಯಾಲಿಟಿ ಶೋವೊಂದರ ಸ್ಪರ್ಧಾಳುವಾಗಿ ಟಿ.ವಿ. ಪರದೆಯ ಮೇಲೆ ಕಾಣಿಸಿಕೊಂಡ ಆಯುಷ್‌ ಬಹುಮುಖ ಪ್ರತಿಭೆಯ ಮೂಲಕ ಗುರುತಿಸಿಕೊಂಡವರು. ವಿಧೇಯ ವಿದ್ಯಾರ್ಥಿಯಾಗಿದ್ದ ಇವರು, ಇಂಗ್ಲಿಷ್‌ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ.  ನಂತರ ಪಂಜಾಬ್‌ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ.

ಸೋಹಾ ಅಲಿ ಖಾನ್‌
‘ರಂಗ್‌ ದೇ ಬಸಂತಿ’ ಸಿನಿಮಾದಲ್ಲಿನ ಅದ್ಭುತ ಅಭಿನಯದಿಂದ ಜನಪ್ರಿಯತೆ ಗಳಿಸಿದ ಸೋಹಾ ಓದಿನಲ್ಲಿಯೂ ಮುಂದಿದ್ದರು. ಆದರೆ ಚಿಕ್ಕಂದಿನಿಂದಲೂ ನಟಿಯಾಗುವ ಕನಸು ಕಂಡಿದ್ದರು. ಅಮ್ಮ ನಂತೆಯೇ ಸಿನಿಮಾಕ್ಷೇತ್ರದಲ್ಲಿ ಮಿಂಚುವ ಹಂಬಲ ಹೊಂದಿದ್ದರೂ, ಓದು ಕೂಡ ಮುಖ್ಯ ಎಂದು ಅರಿತವರು. ಹೀಗಾಗಿ ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಮತ್ತು ಪೊಲಿಟಿಕಲ್‌ ಸೈನ್ಸ್‌ ವಿಶ್ವವಿದ್ಯಾಲದಿಂದ ‘ಇಂಟರ್‌ನ್ಯಾಷನಲ್‌ ರಿಲೇಷನ್‌’ ವಿಷಯದಲ್ಲಿ ಇವರು ಉನ್ನತ ಶಿಕ್ಷಣ ಪಡೆದಿದ್ದಾರೆ.

ಕೃತಿ ಸೆನಾನ್
‘ಹಿರೋಪತಿ’ ಸಿನಿಮಾದ ಮೂಲಕದ ಬಾಲಿವುಡ್‌ ಅಂಗಳ ಪ್ರವೇಶಿಸಿದ ಕೃತಿ ಓದಿನಲ್ಲಿ ವಿಪರೀತ ಜಾಣೆ. ಇವರ ಅಪ್ಪ ರಾಹುಲ್‌ ಸೆನಾನ್ ಚಾರ್ಟೆಟ್‌ ಅಕೌಂಟೆಂಟ್‌, ಅಮ್ಮ ಗೀತಾ ಸೆನಾನ್‌ ದೆಹಲಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರೊಫೆಸರ್‌. ಅಪ್ಪ, ಅಮ್ಮ ಇಬ್ಬರೂ ವಿದ್ಯಾವಂತರಾಗಿರುವುದರಿಂದ ಮನೆಯಲ್ಲಿ ಶಿಕ್ಷಣಕ್ಕೆ ಮೊದಲ ಪ್ರಾಮುಖ್ಯ.

ಕಾಲೇಜು ದಿನಗಳಲ್ಲಿಯೇ ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ಓದು ಪೂರ್ಣ ಗೊಂಡ ಬಳಿಕವೇ ಇವರು ಸಿನಿಮಾ ಪ್ರವೇಶಿಸಿದರು. ಉತ್ತರ ಪ್ರದೇಶದ ಜೈಪಿ ಇನ್‌ಸ್ಟಿಟ್ಯೂಟ್‌ ಆಫ್‌ ಇನ್ಫರ್ಮೇಷನ್‌ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೆಷನ್‌ ವಿಷಯದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ.

ವಿದ್ಯಾ ಬಾಲನ್‌
ಬಾಲ್ಯದಲ್ಲಿಯೇ ಮಾಧುರಿ ದೀಕ್ಷಿತ್‌ ಮತ್ತು ಶಬನಾ ಅಜ್ಮಿ ಅವರ ನಟನೆಯಿಂದ ಪ್ರೇರಿತರಾದ ವಿದ್ಯಾ, ಅವರಂತೆ ದೊಡ್ಡ ನಟಿಯಾಗುವ ಕನಸು ಕಂಡವರು. ಇದಕ್ಕೆ ಮನೆಯವರ ಒಪ್ಪಿಗೆ ಇತ್ತಾದರೂ, ಮೊದಲು ಓದು, ನಂತರ ಸಿನಿಮಾಕ್ಷೇತ್ರಕ್ಕೆ ಕಾಲಿಡುವಂತೆ ಎಂದು ಸಲಹೆ ನೀಡಿದರು. ಅವರ ಮಾತನ್ನು ಪಾಲಿಸಿದ ವಿದ್ಯಾ, ಮುಂಬೈ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಅಮಿಷಾ ಪಟೇಲ್‌
ಕಹೋ ನಾ ಪ್ಯಾರ್‌ ಹೇ ಸಿನಿಮಾದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಸಿಕೊಂಡಿದ್ದ ಅಮಿಷಾ ಓದಿನಲ್ಲಿ ಮುಂದಿದ್ದರು.  ಬಯೊ ಜೆನಟಿಕ್‌ ಎಂಜಿನಿಯರಿಂಗ್‌ಗೆ ಸೇರಿದ್ದ ಇವರು, ಆ ವಿಷಯದಲ್ಲಿ ಆಸಕ್ತಿಯಿಲ್ಲ ಎನಿಸಿದಾಗ ಅದನ್ನು ಅರ್ಧದಲ್ಲಿಯೇ ಮೊಟಕು ಗೊಳಿಸಿದರು.

ಮೆಸಾಚುಸೆಟ್ಸ್‌ನ ಟಫ್ಟ್ಸ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ಅತಿ ಹೆಚ್ಚು ಅಂಕ ಗಳಿಸಿ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡರು.ನಂತರ ಹಲವು ಕಂಪೆನಿಗಳಲ್ಲಿ ಇವರು ಕೆಲಸ ಮಾಡಿದ್ದಾರೆ. ನಿಗದಿತ ಅವಧಿಗೆ ದುಡಿಯುವುದು ಕಷ್ಟ ಎನಿಸಿದಾಗ ಭಾರತಕ್ಕೆ ಮರಳಿದರು. ಇಲ್ಲಿ ನಾಟಕ ತಂಡವನ್ನು ಸೇರಿ ಹಲವು ನಾಟಕಗಳಿಗೆ ಬಣ್ಣ ಹಚ್ಚಿದರು.  ಹೀಗೆ ಬಣ್ಣದ ಲೋಕ ಪ್ರವೇಶಿಸಿದ ಇವರಿಗೆ ಸಿನಿಮಾ ನಂಟು ಬೆಸೆಯುವುದು ಕಷ್ಟವಾಗಲಿಲ್ಲ.

ಜಾನ್‌ ಅಬ್ರಹಾಂ
ತಮ್ಮ ಸದೃಢ ಮೈಕಟ್ಟಿನಿಂದಲೇ ಅಭಿಮಾನಿಗಳನ್ನು ಗಳಿಸಿಕೊಂಡವರು ಜಾನ್‌ ಅಬ್ರಹಾಂ. ಮಾಡೆಲಿಂಗ್‌ನಲ್ಲಿ ಹೆಸರು ಗಳಿಸಿದಂತೆಯೇ ಇವರು ಓದಿನಲ್ಲಿ ಕೂಡ ಮುಂದು. ಪ್ರತಿ ಪರೀಕ್ಷೆಯಲ್ಲಿಯೂ ಶೇ. 90ಕ್ಕಿಂತ ಕಡಿಮೆ ಅಂಕವನ್ನು ಇವರು ಪಡೆದಿಲ್ಲ. ಮಾಡೆಲಿಂಗ್‌ನಲ್ಲಿ ಆಸಕ್ತಿ ಇದ್ದರೂ, ಶಿಕ್ಷಣಕ್ಕೆ ಮೊದಲ ಆದ್ಯತೆ ಎನ್ನುತ್ತಿದ್ದವರು ಇವರು. ಹಾಗಾಗಿ ಮುಂಬೈ ವಿಶ್ವವಿದ್ಯಾಲಯದಿಂದ ಎಂಬಿಎ  ಪದವಿ ಗಳಿಸಿದ ಬಳಿಕವೇ ನಟನೆಯ ಚುಂಗನ್ನು ಹಿಡಿದಿದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT