ವಾಮನದತ್ತಾತ್ರೇಯ ಬೇಂದ್ರೆ ನಿಧನ

7

ವಾಮನದತ್ತಾತ್ರೇಯ ಬೇಂದ್ರೆ ನಿಧನ

Published:
Updated:
ವಾಮನದತ್ತಾತ್ರೇಯ ಬೇಂದ್ರೆ ನಿಧನ

ಬೆಂಗಳೂರು: ವರಕವಿ ದ. ರಾ. ಬೇಂದ್ರೆ ಅವರ ಪುತ್ರ  ಡಾ. ವಾಮನದತ್ತಾತ್ರೇಯ ಬೇಂದ್ರೆ ಬುಧವಾರ ನಿಧನರಾಗಿದ್ದಾರೆ.

ಅತ್ಯುತ್ತಮ ಪ್ರಾಧ್ಯಾಪಕರೂ, ಸಾಹಿತಿಗಳೂ ಆಗಿದ್ದ ವಾಮನ ಅವರಿಗೆ 81 ವರ್ಷವಾಗಿತ್ತು.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಾಮನ ಬೇಂದ್ರೆಯವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆ ಲೈಫ್ ಲೈನ್ ನಲ್ಲಿ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಹಿರಿಯ ಸಾಹಿತಿ ಡಾ. ವಾಮನ ಬೇಂದ್ರೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಜುಲೈ ೨೮, ೧೯೩೫ರಲ್ಲಿ ಜನಿಸಿದ್ದರು. ತಂದೆ ವರಕವಿ ದ.ರಾ.ಬೇಂದ್ರೆ, ತಾಯಿ ಲಕ್ಷ್ಮೀಬಾಯಿ. ಇವರು ಕರ್ನಾಟಕ ವಿಶ್ವ ವಿದ್ಯಾನಿಲಯದಲ್ಲಿ ಬಿ.ಎ. ಮತ್ತು ಎಂ.ಎ. ಪದವಿ ಪಡೆದಿದ್ದರು. ಪುಣೆ ವಿಶ್ವವಿದ್ಯಾಲಯಕ್ಕೆ ‘ಲಕ್ಷ್ಮೀಶನ ಜೈಮಿನಿ ಭಾರತ - ಒಂದು ಅಧ್ಯಯನ’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ,

ಧಾರವಾಡದ ವಿದ್ಯಾರಣ್ಯ ಕಿರಿಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಕಿಟಲ್ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ್ದರು.ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿದ್ದ ಇವರು ಸಂಗೀತ, ನಾಟಕ, ಭಾಷಣ ಮುಂತಾದ ಕಲೆಗಳನ್ನು ಸಹ ತಮ್ಮ ಹವ್ಯಾಸವಾಗಿರಿಸಿಕೊಂಡಿದ್ದರು.ಅವರ ಮೊದಲ ಕವನ ಮೊದಲ ತೊದಲು. ನಂತರ ಅನಂತಧಾರೆ, ಸ್ಪಂದನ ಪ್ರಕಟಗೊಂಡವು.ಸೊಂಡಿಲ ಗಣಪ್ಪ ಬಂದ, ಸ್ಪರ್ಶ ಹಾಗೂ ಇತರ ನಾಟಕಗಳೂ ಸೇರಿ ಮೂವತ್ತಕ್ಕೂ ಹೆಚ್ಚು ರೇಡಿಯೋ ನಾಟಕಗಳ ರಚನೆ ಮಾಡಿದ್ದರು.

ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವಿದ್ಯಾರಣ್ಯ ಪ್ರಶಸ್ತಿ, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಪರಶುರಾಮ ಪ್ರಶಸ್ತಿ, ಕನ್ನಡ-ಮರಾಠಿ ಭಾಷಾ ಬಾಂಧವ್ಯ ಪ್ರಶಸ್ತಿ, ಶ್ರೀವರದರಾಜ ಆದ್ಯ ಸಾಹಿತ್ಯ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ವಾಮನ ಬೇಂದ್ರೆಯವರಿಗೆ ಸಂದಿವೆ.

ಮೃತದೇಹವನ್ನು ಧಾರವಾಡದ ದ.ರಾ.ಬೇಂದ್ರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕಿಡಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry