ನೀರು ಬಿಡದಿರಲು ನಿರ್ಣಯ

7
ಸರ್ವಪಕ್ಷ ಮತ್ತು ಮಂತ್ರಿ ಪರಿಷತ್‌ ಸಭೆಯಲ್ಲಿ ಸರ್ವಾನುಮತದ ತೀರ್ಮಾನ

ನೀರು ಬಿಡದಿರಲು ನಿರ್ಣಯ

Published:
Updated:
ನೀರು ಬಿಡದಿರಲು ನಿರ್ಣಯ

ಬೆಂಗಳೂರು: ಕಾವೇರಿ ಜಲ ವಿವಾದ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಗುರುವಾರ ಕರೆದಿರುವ ಸಭೆಯಲ್ಲಿ ತೀರ್ಮಾನ ಆಗುವವರೆಗೆ  ತಮಿಳುನಾಡಿಗೆ ನೀರು ಬಿಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಬುಧವಾರ ಮಧ್ಯಾಹ್ನ ನಾಲ್ಕು ತಾಸು ನಡೆದ ಮಂತ್ರಿ ಪರಿಷತ್‌ ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡದಿರುವ ತೀರ್ಮಾನ ಕೈಗೊಳ್ಳಲಾಯಿತು. ಸಭೆಯ ಬಳಿಕ ಸ್ವತಃ ಮುಖ್ಯಮಂತ್ರಿ ಅವರೇ ಮಾಧ್ಯಮ ಪ್ರತಿನಿಧಿಗಳಿಗೆ ಸಭೆಯ ತೀರ್ಮಾನ ತಿಳಿಸಿದರು.ಬೆಳಿಗ್ಗೆ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಬೇಡ ಎಂದು  ಕೇಂದ್ರ ಸಚಿವರು, ಆಡಳಿತ ಮತ್ತು  ವಿರೋಧ ಪಕ್ಷಗಳ ನಾಯಕರು ಸರ್ಕಾರಕ್ಕೆ ಸಲಹೆ ನೀಡಿದ್ದರು. ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಗುರುವಾರ ನವದೆಹಲಿಯಲ್ಲಿ ನಡೆಸಲಿರುವ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನ ಆಧರಿಸಿ, ಸುಪ್ರೀಂಕೋರ್ಟ್‌ ಆದೇಶ ಪಾಲನೆ ವಿಷಯದಲ್ಲಿ ಮುಂದಿನ ಹೆಜ್ಜೆ ಇಡಲು ಸರ್ವಪಕ್ಷ ಸಭೆ ತೀರ್ಮಾನಿಸಿತು.‘ಕೇಂದ್ರ ಸರ್ಕಾರ ಎರಡೂ ರಾಜ್ಯಗಳ ಸಭೆ ಕರೆದಿರುವುದರಿಂದ ಸೆ.30 ರವರೆಗೆ 6 ಸಾವಿರ ಕ್ಯುಸೆಕ್‌ ನೀರು ಬಿಡಬೇಕು ಎಂಬ ಸುಪ್ರೀಂಕೋರ್ಟ್‌ ಆದೇಶ ಪಾಲನೆಯನ್ನು ಗುರುವಾರದವರೆಗೆ ಮುಂದೂಡುವುದು ಒಳ್ಳೆಯದು ಎಂದು ಸರ್ವ ಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವರು, ಬಿಜೆಪಿ, ಜೆಡಿಎಸ್‌, ಸರ್ವೋದಯ ಪಕ್ಷಗಳ ನಾಯಕರು ಬಲವಾಗಿ ಪ್ರತಿಪಾದಿಸಿದರು ಎಂದು ಮುಖ್ಯಮಂತ್ರಿ ವಿವರಿಸಿದರು.‘ತಮಿಳುನಾಡಿಗೆ ನೀರು ಬಿಡದಿರುವ ಬಗ್ಗೆ ವಿಧಾನಮಂಡಲದಲ್ಲಿ ಕೈಗೊಂಡ ನಿರ್ಣಯ, ಸಂಕಷ್ಟದ ಸ್ಥಿತಿಯಲ್ಲಿಯೂ ಸುಪ್ರೀಂಕೋರ್ಟ್‌ ಆದೇಶ ಪಾಲಿಸಿರುವ  ಬಗ್ಗೆ ಕೇಂದ್ರ ಸಚಿವರು ಕರೆದಿರುವ ಸಭೆಯಲ್ಲಿ ಮನವರಿಕೆ ಮಾಡಿಕೊಡುವೆ’ ಎಂದು ಮುಖ್ಯಮಂತ್ರಿ ಹೇಳಿದರು.‘ನಿಮ್ಮ ನಡೆ ನ್ಯಾಯಾಂಗ ನಿಂದನೆಯಾಗುವುದಿಲ್ಲವೆ?’ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ‘ನೀರು ಬಿಡದಿರುವಂತೆ ವಿಧಾನಮಂಡಲ ಉಭಯ ಸದನಗಳಲ್ಲಿ ಕೈಗೊಂಡ ನಿರ್ಣಯವನ್ನು ಸರ್ಕಾರ ಪಾಲಿಸಿದೆ. ಶಾಸನಸಭೆಯ ಆದೇಶ ಪಾಲನೆಯ ಕರ್ತವ್ಯವನ್ನಷ್ಟೆ ನಾವು ಪಾಲನೆ ಮಾಡಿದ್ದೇವೆ. ಗುರುವಾರದ ಸಭೆ ಬಳಿಕ ಆ ಬಗ್ಗೆ ತೀರ್ಮಾನಿಸುತ್ತೇವೆ’ ಎಂದರು.ಸಭೆಯಲ್ಲಿ ಭಾಗಿ:  ಸುಪ್ರೀಂಕೋರ್ಟ್‌ ಸೂಚನೆಯನ್ವಯ ಗುರುವಾರ ನಡೆಯಲಿರುವ ಸಂಧಾನ ಸಭೆಯಲ್ಲಿ ತಮ್ಮ ಜೊತೆ ಜಲಸಂಪನ್ಮೂಲ ಸಚಿವ  ಎಂ.ಬಿ. ಪಾಟೀಲ, ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಮುಖ್ಯ ಎಂಜಿನಿಯರ್‌ ಪಾಲ್ಗೊಳ್ಳಲಿದ್ದಾರೆ ಎಂದೂ ಅವರು ಹೇಳಿದರು.ಇದಕ್ಕೆ ಮುನ್ನ ನಡೆದ ಸರ್ವ ಪಕ್ಷ ಸಭೆಯಲ್ಲಿ ‘ಕಾವೇರಿ ನೀರನ್ನು ಕುಡಿಯುವ ಉದ್ದೇಶಕ್ಕೆ ಹೊರತು ಅನ್ಯ ಉದ್ದೇಶಕ್ಕೆ  ಒದಗಿಸುವುದಿಲ್ಲ’ ವಿಧಾನಮಂಡಲ ಉಭಯ ಸದನಗಳಲ್ಲಿ ಕೈಗೊಂಡ ಸರ್ವಾನುಮತದ ನಿರ್ಣಯ ಉಲ್ಲಂಘಿಸಿದರೆ ಸದನದ ಹಕ್ಕುಚ್ಯುತಿಯಾಗುತ್ತದೆ ಎಂದು ಆಡಳಿತ ಮತ್ತು  ವಿರೋಧ ಪಕ್ಷಗಳ ನಾಯಕರು ಸರ್ಕಾರಕ್ಕೆ ಸಲಹೆ ನೀಡಿದ್ದರು.ವಿಶೇಷ ಅಧಿವೇಶನ ?

ತಮಿಳುನಾಡಿಗೆ ನೀರು ಬಿಡಲೇಬೇಕು ಎಂದು ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯ ಸರ್ಕಾರಕ್ಕೆ ಸೂಚಿಸಿದರೆ, ವಿಧಾನಮಂಡಲದ ವಿಶೇಷ ಅಧಿವೇಶನ ಹಾಗೂ ಮತ್ತೊಂದು ಸುತ್ತಿನ ಸರ್ವ ಪಕ್ಷ ಸಭೆ ಕರೆಯುವ ಚಿಂತನೆ ಸರ್ಕಾರದ ಮುಂದಿದೆ.ಕರ್ನಾಟಕದ ಮಾರ್ಪಾಡು ಅರ್ಜಿ ಸೆ.30ರಂದು ಮತ್ತೊಮ್ಮೆ ವಿಚಾರಣೆಗೆ ಬರಲಿದೆ. ಅಕ್ಟೋಬರ್‌ 1ರಿಂದ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದರೆ, ಶನಿವಾರವೇ ವಿಧಾನಮಂಡಲ ಅಧಿವೇಶನ ಕರೆದು, ನೀರು ಒದಗಿಸಲು ಸಾಧ್ಯವಿಲ್ಲದಿರುವ ಕುರಿತು ನಿರ್ಣಯ ಕೈಗೊಳ್ಳಲು ಸರ್ಕಾರ ಆಲೋಚಿಸಿದೆ ಎಂದು ಗೊತ್ತಾಗಿದೆ.* ನ್ಯಾಯಾಲಯಕ್ಕೆ ಅಗೌರವ ತೋರುವ ಉದ್ದೇಶ ಸರ್ಕಾರಕ್ಕಿಲ್ಲ. ಗುರುವಾರದ ಏನಾಗುವುದೊ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ.

–ಸಿದ್ದರಾಮಯ್ಯ, ಮುಖ್ಯಮಂತ್ರಿಸಂಧಾನ ಸಭೆ ಇಂದು: ಕೇಂದ್ರ ತಂಡ ಕಳುಹಿಸುವ ಸಂಭವ

ನವದೆಹಲಿ:
ಕರ್ನಾಟಕ ಮತ್ತು ತಮಿಳುನಾಡುಗಳ ನಡುವಿನ ಕಾವೇರಿ ನೀರು ಹಂಚಿಕೆ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಕೇಂದ್ರ ಸರ್ಕಾ ರದ ಮಧ್ಯಸ್ಥಿಕೆಯಲ್ಲಿ ಗುರುವಾರ ಸಂಧಾನ ಸಭೆ ನಡೆಯಲಿದೆ.

ಇಲ್ಲಿನ ಶ್ರಮ ಶಕ್ತಿ ಭವನದಲ್ಲಿರುವ ಜಲಸಂಪನ್ಮೂಲ ಸಚಿವಾಲಯದ ಸಭಾಂಗಣದಲ್ಲಿ ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಸಭೆಯ ನೇತತ್ವವನ್ನು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ವಹಿಸಲಿದ್ದಾರೆ.ರಾಜ್ಯದ ಪರ ಸಿದ್ದರಾಮಯ್ಯ, ಸಚಿವ ಎಂ.ಬಿ. ಪಾಟೀಲ, ಸರ್ಕಾರದ ಮುಖ್ಯ ಕಾರ್ಯ ದರ್ಶಿ ಅರವಿಂದ ಜಾಧವ್‌, ಜಲಸಂಪ ನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ ಸಿಂಗ್‌ ಭಾಗವ ಹಿಸುವರು. ಅನಾರೋಗ್ಯ ದಿಂದ ಬಳಲುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಬದಲಿಗೆ ಅಲ್ಲಿನ ಲೋಕೋಪಯೋಗಿ ಸಚಿವ ಈಡ ಪ್ಪಾಡಿ ಪಳನಿಸ್ವಾಮಿ, ಮುಖ್ಯ ಕಾರ್ಯ ದರ್ಶಿ ರಾಮಮೋಹನ ರಾವ್ ಪಾಲ್ಗೊಳ್ಳಲಿದ್ದಾರೆ.ಅಧ್ಯಯನ ಸಾಧ್ಯತೆ: ಉಭಯ ರಾಜ್ಯಗ ಳಲ್ಲಿರುವ ಕಾವೇರಿ ಕಣಿವೆ ಪ್ರದೇಶ ದಲ್ಲಿನ ವಸ್ತುಸ್ಥಿತಿ ಅರಿಯುವ ನಿಟ್ಟಿನಲ್ಲಿ ನೀರಾವರಿ ತಜ್ಞರನ್ನು ಕಳುಹಿಸಿಕೊ ಡುವ ಮೂಲಕ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.ನೀರು ಬಿಡುವಂತೆ ತಮಿಳುನಾಡು, ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಪಟ್ಟು ಹಿಡಿಯುವ ಸಾಧ್ಯತೆಗಳೇ ಹೆಚ್ಚಾಗಿ ಇರುವುದರಿಂದ ವಾಸ್ತವಾಂಶವನ್ನು ಅರಿಯಲು ತಜ್ಞರ ತಂಡ ಕಳುಹಿಸಬಹುದು. ನಂತರ ಆ ವರದಿಯನ್ನು ಆಧರಿಸಿ ಎರಡೂ ರಾಜ್ಯಗಳ ನಡುವೆ ಸಂಧಾನ ಏರ್ಪಡಿಸಬಹುದು ಎನ್ನಲಾಗಿದೆ.ಒಂದೊಮ್ಮೆ ಸಂಧಾನ ಸಾಧ್ಯವಾಗದಿದ್ದರೆ, ಅಧ್ಯಯನ ವರದಿಯನ್ನು ಸುಪ್ರೀಂ ಕೋರ್ಟ್‌ಗೂ ಸಲ್ಲಿಸಿ ಗಮನ ಸೆಳೆಯಬಹುದು. ಈ ಮೂಲಕ ನ್ಯಾಯಯುತ ಆದೇಶ ನೀಡುವಂತೆಯೂ ಸೂಚ್ಯವಾಗಿ ತಿಳಿಸಬಹುದಾಗಿದೆ ಎಂದು ಜಲಸಂಪನ್ಮೂಲ ಸಚಿವಾಲಯದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.ಬಿಜೆಪಿ ಮುಖಂಡರ ಮನವಿ: ಬಿಜೆಪಿ ಸಂಸದ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕರ್ನಾಟಕದ ಕೇಂದ್ರ ಸಚಿವರು ಬುಧವಾರ ಸಂಜೆ ಸಚಿವೆ ಉಮಾ ಭಾರತಿ ಅವರನ್ನು ಭೇಟಿ ಮಾಡಿ ಕಾವೇರಿ ಜಲಾಶಯಗಳ ಕುರಿತ ವಸ್ತುಸ್ಥಿತಿ ಕುರಿತು ಮನವರಿಕೆ ಮಾಡಿದರು.ಕರ್ನಾಟಕದಲ್ಲಿ ಮಳೆಯ ಕೊರತೆ ಎದುರಾಗಿದ್ದರಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದೆ. ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಸಾಕಷ್ಟು ನೀರಿದೆ. ವಾಸ್ತವಾಂಶ ಅರಿಯುವ ನಿಟ್ಟಿನಲ್ಲಿ ನೀರಾವರಿ ಮತ್ತು ಕಾನೂನು ತಜ್ಞರ ತಂಡವನ್ನು ಕಳುಹಿಸಿಕೊಡುವಂತೆ ಕೋರಲಾಯಿತು ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.ಅಧ್ಯಯನ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಕೋರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ನೀರಾವರಿ ತಜ್ಞರನ್ನು ಕಾವೇರಿ ಕಣಿವೆ ಪ್ರದೇಶದ ಅಧ್ಯಯನಕ್ಕೆ ಕಳುಹಿಸಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.ಸಚಿವರಾದ ಡಿ.ವಿ. ಸದಾನಂದಗೌಡ, ಅನಂತಕುಮಾರ್‌, ರಮೇಶ ಜಿಗಜಿಣಗಿ, ಸಂಸದರಾದ ಶೋಭಾ ಕರಂದ್ಲಾಜೆ, ಕರಡಿ ಸಂಗಣ್ಣ ಈ ಸಂದರ್ಭ ಹಾಜರಿದ್ದರು.ಮುಖ್ಯಾಂಶಗಳು

* ಕೇಂದ್ರ ಸರ್ಕಾರದ ಸಂಧಾನ ಸಭೆ ತೀರ್ಮಾನ ಆಧರಿಸಿ ಮುಂದಿನ ಹೆಜ್ಜೆ

* ಗುರುವಾರ ಮಧ್ಯಾಹ್ನದವರೆಗೆ ನೀರು ಬಿಡದಿರಲು  ನಿರ್ಧಾರ

* ಸರ್ವಪಕ್ಷ ಸಭೆಯ ಸಲಹೆ ಪಾಲಿಸಿದ ಸರ್ಕಾರಉಮಾ ಮಧ್ಯಸ್ಥಿಕೆಗೆ ಡಿಎಂಕೆ ತಕರಾರು

ಚೆನ್ನೈ (ಪಿಟಿಐ):
ಕರ್ನಾಟಕ ಮತ್ತು ತಮಿಳುನಾಡು ನಡುವಣ ಕಾವೇರಿ ನೀರು ಹಂಚಿಕೆ ವಿವಾದ ಪರಿಹಾರಕ್ಕೆ ಗುರುವಾರ ನಡೆಸಲು ನಿರ್ಧರಿಸಿರುವ ಸಂಧಾನ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ಅವರೇ ವಹಿಸಬೇಕು ಎಂದು ಡಿಎಂಕೆ ಆಗ್ರಹಿಸಿದೆ.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕದ ನಿಲುವನ್ನು ಸಮರ್ಥಿಸುವಂತಹ ಹೇಳಿಕೆಗಳನ್ನು ಉಮಾಭಾರತಿ ಅವರು ನೀಡಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಹಾಗಾಗಿ ಅವರು ಅಧ್ಯಕ್ಷತೆ ವಹಿಸಿದ ಸಭೆಯಲ್ಲಿ ಯಾವುದೇ ತೀರ್ಮಾನ ಆದರೂ ಅದರ ಬಗ್ಗೆ ಅನುಮಾನಗಳು ಏಳಬಹುದು ಎಂದು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಹೇಳಿದ್ದಾರೆ.ಪ್ರಧಾನಿ ಮೋದಿ ಅವರು ಸಭೆಯ ಅಧ್ಯಕ್ಷತೆ ವಹಿಸಿದರೆ ಮಾತ್ರ ಎರಡೂ ರಾಜ್ಯಗಳಿಗೆ ಸ್ವೀಕಾರಾರ್ಹ ನಿರ್ಧಾರಕ್ಕೆ ಬರುವುದಕ್ಕೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry