ಕಾಂಗ್ರೆಸ್‌ನ ಪದ್ಮಾವತಿ ನೂತನ ಮೇಯರ್‌

7

ಕಾಂಗ್ರೆಸ್‌ನ ಪದ್ಮಾವತಿ ನೂತನ ಮೇಯರ್‌

Published:
Updated:
ಕಾಂಗ್ರೆಸ್‌ನ ಪದ್ಮಾವತಿ ನೂತನ ಮೇಯರ್‌

ಬೆಂಗಳೂರು:  ನಗರದ 50ನೇ ಮೇಯರ್‌ ಆಗಿ ಕಾಂಗ್ರೆಸ್‌ನ ಜಿ.ಪದ್ಮಾವತಿ (ಪ್ರಕಾಶನಗರ ವಾರ್ಡ್‌) ಹಾಗೂ 51ನೇ ಉಪಮೇಯರ್‌ ಆಗಿ ಜೆಡಿಎಸ್‌ನ ಎಂ. ಆನಂದ್‌ (ರಾಧಾಕೃಷ್ಣ ದೇವಸ್ಥಾನ ವಾರ್ಡ್‌) ಬುಧವಾರ ಆಯ್ಕೆಯಾದರು.ಜೆಡಿಎಸ್‌ ಮುಖಂಡರಿಗೆ ‘ಬೇಡವಾಗಿದ್ದ ಅಭ್ಯರ್ಥಿ’ಯನ್ನೇ ಉಳಿಸಿಕೊಳ್ಳಲು ಬೆಳಿಗ್ಗೆ ನಾಮಪತ್ರ ಸಲ್ಲಿಸುವ ಕ್ಷಣದವರೆಗೆ ಯತ್ನಿಸಿ ಯಶಸ್ವಿಯಾದ ಕಾಂಗ್ರೆಸ್‌, ಆ ಪಕ್ಷದ ಬೆಂಬಲವನ್ನು ಸಹ ಉಳಿಸಿಕೊಂಡಿತು.ಮೇಯರ್‌ ಹುದ್ದೆಗೆ ಸ್ಪರ್ಧಿಸಿದ್ದ ಬಿಜೆಪಿಯ ಡಿ.ಎಚ್‌.ಲಕ್ಷ್ಮಿ (ಗಣೇಶ ಮಂದಿರ ವಾರ್ಡ್‌) ಅವರನ್ನು ಪದ್ಮಾವತಿ ಅವರು 22 ಮತಗಳಿಂದ ಸೋಲಿಸಿದರು. ಉಪಮೇಯರ್‌ ಹುದ್ದೆಗೆ ಪೈಪೋಟಿ ನೀಡಿದ್ದ ಬಿಜೆಪಿಯ ಗುರುಮೂರ್ತಿ ರೆಡ್ಡಿ (ಎಚ್‌ಎಸ್‌ಆರ್‌ ವಾರ್ಡ್‌) ಮತದಾನದ ಪೂರ್ವದಲ್ಲಿ ತಮ್ಮ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದ್ದರಿಂದ ಒಂದು ಮತವನ್ನೂ ಪಡೆಯಲು ಸಾಧ್ಯವಾಗಲಿಲ್ಲ. ಆ ಹುದ್ದೆಗೆ ಆನಂದ್‌ ಅವಿರೋಧವಾಗಿ ಆಯ್ಕೆಯಾದರು.ತಡವಾಗಿ ಬಂದ ಸಂಸದ ಪಿ.ಸಿ. ಮೋಹನ್‌ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರಿಗೆ ಉಪಮೇಯರ್‌ ಚುನಾವಣೆಯಲ್ಲಿ ಮತದಾನದ ಅವಕಾಶ ನಿರಾಕರಿಸಿದ್ದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತು. ಆಗ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು.ಹಾಜರಾತಿ ಪಡೆದ ಬಳಿಕ ಬಂದ ಸದಸ್ಯರಿಗೆ ಮತದಾನದ ಅವಕಾಶ ನೀಡಲು ಸಾಧ್ಯವೇ ಇಲ್ಲ ಎಂದು ಚುನಾವಣಾಧಿಕಾರಿಯೂ ಆದ ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಅವರು ಪ್ರಕಟಿಸಿದರು. ಈ ನಿರ್ಧಾರ ವಿರೋಧಿಸಿ ಶಾಸಕ ಆರ್‌. ಅಶೋಕ ಅವರ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.ಆನಂತರ ಉಪಮೇಯರ್‌ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು.ಜೆಡಿಎಸ್‌ನ ಬಂಡಾಯ ಶಾಸಕರಾದ ಜಮೀರ್‌ ಅಹ್ಮದ್‌, ಕೆ.ಗೋಪಾಲಯ್ಯ ಹಾಗೂ ಅಖಂಡ ಶ್ರೀನಿವಾಸಮೂರ್ತಿ ತಮ್ಮ ಬೆಂಬಲಿಗ ಪಾಲಿಕೆ ಸದಸ್ಯರೊಂದಿಗೆ ಒಟ್ಟಿಗೆ ಬಂದು ಕಾಂಗ್ರೆಸ್‌ ಪರ ಮತ ಚಲಾಯಿಸಿದರು.ಮೇಯರ್‌ ಚುನಾವಣೆಯಲ್ಲಿ ಮತದಾನದ ಅವಕಾಶ ಪಡೆದ ಕಾಂಗ್ರೆಸ್‌ನ ಜೈರಾಂ ರಮೇಶ್‌, ಆಸ್ಕರ್‌ ಫರ್ನಾಂಡಿಸ್‌, ಬಿ.ಕೆ. ಹರಿಪ್ರಸಾದ್‌ ಹಾಗೂ ವೀರಪ್ಪ ಮೊಯಿಲಿ ಸೇರಿದಂತೆ ಎಲ್ಲ ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಸಭೆ ಹಾಗೂ ವಿಧಾನ ಪರಿಷತ್‌ ಸದಸ್ಯರು ಹಾಜರಿದ್ದರು. ಬಿಜೆಪಿ ಕೂಟದ ಐವರು ಸದಸ್ಯರು ಗೈರಾಗಿದ್ದರು.ಏಳನೇ ಮಹಿಳಾ ಮೇಯರ್‌

ಜಿ.ಪದ್ಮಾವತಿ ಅವರು ನಗರದ ಏಳನೇ ಮಹಿಳಾ ಮೇಯರ್‌ ಆಗಿದ್ದಾರೆ. ಸೀತಮ್ಮ, ಪದ್ಮಾವತಿ ಗಂಗಾಧರಗೌಡ, ಪ್ರೇಮಾ ಕಾರ್ಯಪ್ಪ, ಮುಮ್ತಾಜ್‌ ಬೇಗಂ, ಶಾರದಮ್ಮ ಹಾಗೂ ಎನ್‌.ಶಾಂತಕುಮಾರಿ ಅವರು ನಗರದ ಮೇಯರ್‌ ಆಗಿ ಕಾರ್ಯನಿರ್ವಹಿಸಿದ ಇತರ ಮಹಿಳೆಯರು.ಗುಣಶೇಖರ್‌ ಆಡಳಿತ ಪಕ್ಷದ ನಾಯಕ?

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆಡಳಿತ ಪಕ್ಷದ ನೂತನ ನಾಯಕರಾಗಿ ಜಯಮಹಲ್‌ ವಾರ್ಡ್‌ನ ಕಾಂಗ್ರೆಸ್‌ ಸದಸ್ಯ ಎಂ.ಕೆ. ಗುಣಶೇಖರ್‌ ನೇಮಕಗೊಳ್ಳುವುದು ಖಚಿತವಾಗಿದೆ.ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಬಿಜೆಪಿಯ ಉಮೇಶ್‌ ಶೆಟ್ಟಿ, ಮಂಜುನಾಥ್‌ ರಾಜು ಹಾಗೂ ಪೂರ್ಣಿಮಾ ಶ್ರೀನಿವಾಸ್‌ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್‌ಗೆ ನಾಲ್ಕು ಸ್ಥಾಯಿ ಸಮಿತಿಗಳು ಸಿಗಲಿವೆ (ನಗರ ಯೋಜನೆ, ಆರೋಗ್ಯ, ವಾರ್ಡ್‌ಮಟ್ಟದ ಕಾಮಗಾರಿ ಹಾಗೂ ಲೆಕ್ಕಪತ್ರ) ಎಂದು ಉಪಮೇಯರ್‌ ಎಂ.ಆನಂದ್‌ ತಿಳಿಸಿದ್ದಾರೆ.ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸೇರಿದಂತೆ ನಾಲ್ಕು ಸ್ಥಾಯಿ ಸಮಿತಿಗಳನ್ನು ತನ್ನ ಬಳಿ ಉಳಿಸಿಕೊಳ್ಳಲಿರುವ ಕಾಂಗ್ರೆಸ್‌ ಮಿಕ್ಕ ನಾಲ್ಕನ್ನು ಪಕ್ಷೇತರ ಸದಸ್ಯರಿಗೆ ಹಂಚಲಿದೆ ಎಂದು ಮೂಲಗಳು ತಿಳಿಸಿವೆ.ಸ್ಥಾಯಿ ಸಮಿತಿಗಳಿಗೆ ಅ. 19ರಂದು ನಾಮಪತ್ರ ಸಲ್ಲಿಕೆ ನಡೆಯಲಿದ್ದು, ಅ.20ರಂದು ಚುನಾವಣೆ   ನಡೆಯಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry