ನೀರಿನ ಹರಿವಿನ ಹಿಂದಿನ ವಿಜ್ಞಾನ ಮತ್ತು ಲೆಕ್ಕ

7
ಅಣೆಕಟ್ಟೆಯಿಂದ ಬಿಟ್ಟ ಒಂದು ಅಡಿ ನೀರು 28,000 ಎಕರೆಯಲ್ಲಿ ನಿಲ್ಲುತ್ತದೆ

ನೀರಿನ ಹರಿವಿನ ಹಿಂದಿನ ವಿಜ್ಞಾನ ಮತ್ತು ಲೆಕ್ಕ

Published:
Updated:

ಬೆಂಗಳೂರು: ಕೃಷ್ಣರಾಜ ಸಾಗರ ಅಣೆಕಟ್ಟೆಯಿಂದ ಒಂದು ಟಿಎಂಸಿ ಅಡಿ ನೀರು ಹೊರಗೆ ಹರಿಸಿದರೆ ಎಷ್ಟು ಕೆರೆಗಳನ್ನು ತುಂಬಿಸಬಹುದು? ಎಷ್ಟು ಜನರ ಕುಡಿಯುವ ಉದ್ದೇಶಕ್ಕೆ ಪೂರೈಸಬಹುದು?ಈ ಪ್ರಶ್ನೆಗೆ ಉತ್ತರಿಸಲು ಜಲ ತಜ್ಞರೂ ತಿಣುಕಾಡುತ್ತಾರೆ. ಏಕೆಂದರೆ, ಒಂದು ಟಿಎಂಸಿ ಅಡಿ ಎಂದರೆ ಅಗಾಧ ಪ್ರಮಾಣ ಆಗುತ್ತದೆ. ಆದರೆ, ಅಣೆಕಟ್ಟೆಯಿಂದ ಒಂದು ಸಲಕ್ಕೆ  ಒಂದು ಟಿಎಂಸಿ ಅಡಿ ಪ್ರಮಾಣದ ನೀರು ಹರಿಸಿದರೆ ಸುಮಾರು 28,000 ಎಕರೆ ಭೂಮಿಯಲ್ಲಿ ನಿಲ್ಲಿಸಬಹುದು.

ಇಂತಹದ್ದೊಂದು ಲೆಕ್ಕ ಹೇಳುತ್ತಾರೆ ಕಾವೇರಿ ನೀರಾವರಿ ನಿಗಮದ ತಾಂತ್ರಿಕ ನಿರ್ದೇಶಕ ಎಂ. ಬಂಗಾರ ಸ್ವಾಮಿ.‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ಉದಾಹರಣೆ ನೀಡಲು ನಮ್ಮಲ್ಲಿ ಅರ್ಧ ಟಿಎಂಸಿ ಅಡಿ ನೀರು ತುಂಬಿಸಬಹುದಾದ ಒಂದೇ ಒಂದು ಕೆರೆಯೂ ಇಲ್ಲ.  ಪ್ರತಿಯೊಂದು ಕೆರೆಯ ಸಾಮರ್ಥ್ಯ ಬೇರೆ ಬೇರೆ ಆಗಿರುವುದರಿಂದ ಎಷ್ಟು ಕೆರೆಗಳನ್ನು ತುಂಬಿಸಬಹುದು ಎಂಬುದನ್ನು ನಿಖರವಾಗಿ ಹೇಳುವುದೂ ಕಷ್ಟ ಎಂದರು.ಕ್ಯುಸೆಕ್‌ ಎಂದರೆ ನೀರಿನ ಹರಿವಿನ ಪ್ರಮಾಣದ ಅಳತೆ. ಒಂದು ಕ್ಯುಸೆಕ್‌ ಎಂದರೆ, ಒಂದು ಸೆಕೆಂಡಿನಲ್ಲಿ 28.31 ಲೀಟರ್‌ ನೀರಿನ ಹರಿವು. ಇದನ್ನು ಘನ ಅಡಿ(ಕ್ಯೂಬಿಕ್ ಅಡಿ)ಯಲ್ಲಿ ಅಳೆಯಲಾಗುತ್ತದೆ. ಘನ ಅಡಿ ಎಂದರೆ, ನಾಲ್ಕು ಸಮಭುಜದ ಒಂದು ಮೊತ್ತ.ಚೌಕಾಕಾರದ ಒಂದು ಪೆಟ್ಟಿಗೆ ನೆನಪಿಗೆ ತಂದುಕೊಳ್ಳಿ. ಉದ್ದ, ಅಗಲ, ಆಳ ಒಂದೇ ಸಮವಾಗಿರುತ್ತದೆ. ಹಾಗೆಯೇ ಒಂದು ಟಿಎಂಸಿ ಎಂದರೆ 1000(ಉದ್ದ)X 1000(ಅಗಲ)X1000(ಆಳ) ಘನ ಅಡಿಯಷ್ಟು ನೀರು ಆಗುತ್ತದೆ.  10 ಕೋಟಿ ಘನ ಅಡಿ ಎಂದರೆ ಒಂದು ಟಿಎಂಸಿಗೆ ಸಮ ಎನ್ನುತ್ತಾರೆ ಅವರು.ಪ್ರತಿನಿತ್ಯ 1,000 ಕ್ಯುಸೆಕ್‌ನಂತೆ 11 ರಿಂದ 12 ದಿನಗಳ ಕಾಲ ನಿರಂತರ ನೀರು ಹರಿಸಿದರೆ  ಒಂದು ಟಿಎಂಸಿ ಅಡಿ ಆಗುತ್ತದೆ. ಅಥವಾ  24 ಗಂಟೆಗಳ ಅವಧಿಯಲ್ಲಿ 11,574 ಕ್ಯುಸೆಕ್‌ ನೀರು ಹರಿಸಿದರೆ ಒಂದು ಟಿಎಂಸಿಗೆ ಸಮ.ಈ ಲೆಕ್ಕಾಚಾರದ ಪ್ರಕಾರ, ಪ್ರತಿ ನಿತ್ಯ ಕರ್ನಾಟಕವು ತಮಿಳುನಾಡಿಗೆ 6000 ಕ್ಯುಸೆಕ್‌ಗಳಂತೆ 10 ದಿನಗಳ ಕಾಲ ನೀರು ಹರಿಸಿದರೆ, ಒಟ್ಟು ನೀರು ಹರಿಸಿದ ಪ್ರಮಾಣವು 5184,000,000 ಅಡಿಗಳು ಅಥವಾ 5.184 ಟಿಎಂಸಿ ಅಡಿ ಆಗುತ್ತದೆ.ಬೆಂಗಳೂರಿನ ಜನರಿಗೆ ಕುಡಿಯುವ ಉದ್ದೇಶಕ್ಕೆ ಒಂದು ತಿಂಗಳಿಗೆ 1.5 ಟಿಎಂಸಿ ಅಡಿ ನೀರು ಬೇಕಾಗುತ್ತದೆ.  ಬೆಂಗಳೂರು ಸೇರಿದಂತೆ ಕಾವೇರಿ ಕಣಿವೆ ವ್ಯಾಪ್ತಿಯ ನಗರ, ಪಟ್ಟಣಗಳಲ್ಲಿರುವ ಎರಡು ಕೋಟಿ ಜನಕ್ಕೆ ತಿಂಗಳಿಗೆ 4.5 ಟಿಎಂಸಿ ನೀರು ಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.ನೀರು ಹರಿವಿನ ವಿಜ್ಞಾನ ಮತ್ತು ಲೆಕ್ಕ: ನೀರಿನ ಹರಿವಿನ ಪ್ರಮಾಣದ ಗುಟ್ಟನ್ನು ತಿಳಿಯಬೇಕಾದರೆ ವಿಜ್ಞಾನ ಮತ್ತು ಗಣಿತದ ನೆರವು ಬೇಕೇ ಬೇಕು. ಇದರ ಹಿಂದಿನ ವಿಜ್ಞಾನದ ಪರಿಕಲ್ಪನೆ ಸಂಕೀರ್ಣವೂ ಹೌದು. ಕಾವೇರಿ ನೀರು ಹರಿಸುವಾಗ ತಜ್ಞರು ವಿಜ್ಞಾನ ಮತ್ತು ಗಣಿತದ ನಿಯಮಗಳನ್ನು ಪಾಲಿಸುತ್ತಾರೆ.ಬಹುತೇಕ ಭೌತಶಾಸ್ತ್ರದ  ಪಾಠ ಆರಂಭಗೊಳ್ಳುವುದೇ ‘ಆಯಾಮ’ದ ವಿಶ್ಲೇಷಣೆಯ (dimensiona* ana* ysis) ಪರಿಕಲ್ಪನೆಯಿಂದ. ಹಾಗೆಯೇ ಏಳು ಪ್ರಮುಖ ಮೂಲಭೂತ ಭೌತಶಾಸ್ತ್ರದ ಪರಿಮಾಣ (physica* quantities) ಅಥವಾ ಆಯಾಮಗಳಿವೆ. ಅವುಗಳೆಂದರೆ, ಸಮೂಹ ಅಥವಾ ಗುಂಪು, ಉದ್ದ, ಕಾಲ, ತಾಪಮಾನ, ವಿದ್ಯುತ್‌, ಪ್ರಕಾಶ ಸಾಮರ್ಥ್ಯ ಮತ್ತು  ವಸ್ತುವಿನ ಪ್ರಮಾಣ.ಯಾವುದೇ ಭೌತಿಕ  ಪರಿಮಾಣವು ಮೇಲೆ ಉಲ್ಲೇಖಿಸಿದ ಏಳು ಮೂಲಭೂತ ಲಕ್ಷಣಗಳುಳ್ಳ ಶಕ್ತಿಯ ಉತ್ಪನ್ನವಾಗಿರುತ್ತದೆ.  ಅಷ್ಟೇ ಅಲ್ಲ, ಅದು ಆಯಾಮದ ಸ್ವರೂಪವನ್ನೂ ಹೊಂದಿರುತ್ತದೆ. ಅಂದರೆ, ಸಮಾನ ಆಯಾಮವುಳ್ಳ ಉತ್ಪನ್ನಗಳನ್ನು  ಹೋಲಿಸಲು, ಕೂಡಿಸಲು ಮತ್ತು ಭಾಗಾಕಾರ ಮಾಡಲು ಸಾಧ್ಯ.ಈ ಏಳೂ ಭೌತ ನಿಯಮಗಳನ್ನು ನೀರಿನ ಹರಿವಿಗೂ ಅನ್ವಯಿಸಲಾಗುತ್ತದೆ. ಪ್ರಮಾಣ, ವೇಗ, ದೂರ ಮತ್ತು ಹರಿವಿಗೆ ಹಿಡಿಯುವ ಸಮಯವನ್ನು ವಿಶ್ಲೇಷಿಸಿದಾಗ  ಕೆಆರ್‌ಎಸ್‌ನಿಂದ ಬಿಟ್ಟ ನೀರು ತಮಿಳುನಾಡಿಗೆ ಸೇರಿದಾಗ ಎಷ್ಟು ಆಗಿರುತ್ತದೆ ಎಂಬ ಲೆಕ್ಕ ಸಿಗುತ್ತದೆ.ನೀರಿನ ಹರಿವಿನ ಪ್ರಮಾಣವನ್ನು ಬ್ರಿಟಿಷರ ಕಾಲದ ಅಳತೆ ಮತ್ತು ಮಾಪನ ಪದ್ಧತಿಯನ್ನೇ ನಮ್ಮ  ಎಂಜಿನಿಯರುಗಳು ಮುಂದುವರೆಸಿಕೊಂಡು ಬಂದಿದ್ದಾರೆ.  ಉದಾಹರಣೆಗೆ ಕ್ಯುಸೆಕ್‌, ಅಡಿ ಇತ್ಯಾದಿ. ಮಾಪನ ಘಟಕಗಳು ಆಯಾಮಕ್ಕೆ ಅತ್ಯಂತ ಸಮೀಪದ್ದಾಗಿವೆ ಎಂಬುದನ್ನು ತಿಳಿದುಕೊಳ್ಳಬೇಕು.ಪ್ರಾಚೀನ ಕಾಲದಲ್ಲಿ ಜನರು ಅಳತೆ ಮತ್ತು ಮಾಪನಕ್ಕೆ ತಮ್ಮ ಕೈ ಮತ್ತು ಪಾದಗಳನ್ನೇ (ಫೀಟ್‌)ಬಳಸುತ್ತಿದ್ದರು. ಈಗಲೂ ಅಂತಹ ಮಾಪನ ವ್ಯವಸ್ಥೆಯನ್ನು ಬಳಸಲಾಗುತ್ತದೆ.  ಉದಾಹರಣೆಗೆ ಹೂವು ಮಾರುವವರು ಮೊಳ, ಮಾರು ಉದ್ದವನ್ನು ತಮ್ಮ ಕೈ ಬಳಸಿಯೇ ಅಳೆದು ಕೊಡುತ್ತಾರೆ. ಬ್ರಿಟಿಷರು ಉದ್ದವನ್ನು ಮಾಪನ ಮಾಡಲು ಅಡಿ(ಫೀಟ್‌) ಪದ್ಧತಿಯನ್ನು ಬಳಸುತ್ತಿದ್ದರು. ಸಮೂಹ, ಅಥವಾ ಗುಂಪಿನ (ಮಾಸ್‌) ತೂಕದ ಅಳೆಯಲು ಪೌಂಡ್‌,  ಶಕ್ತಿಯನ್ನು ಅಳೆಯಲು ಅಶ್ವಶಕ್ತಿ, ಬಲವನ್ನು ಮಾಪನ  ಮಾಡಲು ಪೌಂಡ್‌ ಫೋರ್ಸ್‌ ಎಂಬ ಪದ್ಧತಿಯನ್ನು ಚಾಲ್ತಿಗೆ ತಂದರು. ಅಮೆರಿಕ ಮತ್ತು ಬ್ರಿಟನ್‌ ಹೊರತುಪಡಿಸಿದರೆ ಉಳಿದೆಲ್ಲ ದೇಶಗಳು ಉದ್ದವನ್ನು ಮೀಟರ್‌ಗಳಲ್ಲಿ, ಭೌತ ವಸ್ತುವಿನ ಸಮೂಹ ಅಥವಾ ಗುಂಪಿನ ತೂಕವನ್ನು ಕೆ.ಜಿಯಲ್ಲಿ, ಕಾಲವನ್ನು ಸೆಕೆಂಡುಗಳಲ್ಲಿ, ತಾಪಮಾನವನ್ನು ಕೆಲ್ವಿನ್‌ ರೂಪದಲ್ಲಿ ಮಾಪನ ಮಾಡಲಾಗುತ್ತದೆ.

ಈ ಭೌತ ನಿಯಮವನ್ನು ಅನ್ವಯಿಸಿದಾಗ ಕರ್ನಾಟಕ ತನ್ನಲ್ಲಿ ಎಷ್ಟು ನೀರು ಇಟ್ಟುಕೊಂಡಿದೆ ಮತ್ತು ತಮಿಳುನಾಡಿಗೆ ಎಷ್ಟು ನೀರು ಹರಿಸಿದೆ ಎಂಬುದನ್ನು ಅರ್ಥೈಸಿಕೊಳ್ಳಬಹುದು.ನೀರಿನ ಮಾಪನದ ಸರಳ ಲೆಕ್ಕ

* ಒಂದು ಸೆಕೆಂಡಿಗೆ  23.84 ಲೀಟರ್‌ ನೀರು ಹರಿಸಿದರೆ ಒಂದು ಕ್ಯುಸೆಕ್‌ ಆಗುತ್ತದೆ

* 1000(ಉದ್ದ)X1000(ಅಗಲ)X1000(ಆಳ) ಘನ ಅಡಿಯಷ್ಟು ನೀರು ಒಂದು ಟಿಎಂಸಿ ಆಗುತ್ತದೆ

* 11,275 ಕ್ಯುಸೆಕ್‌ ನೀರು 24 ಗಂಟೆ ಹರಿಸಿದರೆ ಒಂದು ಟಿಎಂಸಿ

* 10 ಕೋಟಿ  ಘನ ಅಡಿ ನೀರು ಒಂದು ಟಿಎಂಸಿಗೆ ಸಮ

* ಟಿಎಂಸಿ ಎಂದರೆ ನೀರು ಸಂಗ್ರಹಣಾ ಮಾಪನ ಪ್ರಮಾಣ. ಕ್ಯುಸೆಕ್‌ ಎಂದರೆ ಹರಿವಿನ ಪ್ರಮಾಣ.

* ಒಂದು ತಿಂಗಳಿಗೆ ಎರಡು ಕೋಟಿ ಜನರಿಗೆ ಬೇಕು 4.5 ಟಿಎಂಸಿ ನೀರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry