7

ಗಾಂಧಿಯ ‘ಇನ್‌ಬಾಕ್ಸ್‌’ಗೆ ಇಣುಕುವ ಸೌಭಾಗ್ಯ

ರಾಮಚಂದ್ರ ಗುಹಾ
Published:
Updated:
ಗಾಂಧಿಯ ‘ಇನ್‌ಬಾಕ್ಸ್‌’ಗೆ ಇಣುಕುವ ಸೌಭಾಗ್ಯ

ಮೋಹನದಾಸ ಕರಮಚಂದ ಗಾಂಧಿ ಅವರ ಬರಹಗಳು ಇಡೀ ಜಗತ್ತಿಗೆ ಪರಿಚಿತ: ಗಾಂಧಿ ಅವರ ಜೀವಿತಾವಧಿಯಲ್ಲಿಯೇ ಹಲವು ಪುಸ್ತಕಗಳು ಮತ್ತು ಸಂಕಲನಗಳು ಪ್ರಕಟವಾಗಿದ್ದವು; 1958ರಿಂದ 1994ರ ನಡುವಣ ಅವಧಿಯಲ್ಲಿ ‘ಕಲೆಕ್ಟೆಡ್ ವರ್ಕ್ಸ್‌  ಆಫ್ ಮಹಾತ್ಮ ಗಾಂಧಿ’ (ಮಹಾತ್ಮ ಗಾಂಧಿ ಅವರ ಕೃತಿಗಳ ಸಂಗ್ರಹ) ಎಂಬ ಹೆಸರಿನಲ್ಲಿ 97 ಸಂಪುಟಗಳಲ್ಲಿ ಗಾಂಧಿ ಅವರ ಕೃತಿಗಳು ಪ್ರಕಟವಾಗಿವೆ. ವಿದ್ವಾಂಸರಾದ ಕೆ. ಸ್ವಾಮಿನಾಥನ್ ಮತ್ತು ಸಿ.ಎನ್. ಪಟೇಲ್ ನೇತೃತ್ವದ ತಂಡ ಈ ಸಂಪುಟಗಳನ್ನು ಪ್ರೀತಿಯಿಂದ ಸಂಪಾದಿಸಿ ಕೊಟ್ಟಿದೆ.ಒಬ್ಬ ಬರಹಗಾರ, ರಾಜಕೀಯ ಹೋರಾಟಗಾರ, ಸಮಾಜ ಸುಧಾರಕ, ಧಾರ್ಮಿಕ ಬಹುತ್ವವಾದಿ, ಪ್ರವಾದಿಯಾಗಿ ಮಾತ್ರವಲ್ಲದೆ ಗಾಂಧಿ ಒಬ್ಬ ಗಂಡನಾಗಿ, ತಂದೆಯಾಗಿ ಮತ್ತು ಗೆಳೆಯನಾಗಿ ಹೇಗಿದ್ದರು ಎಂಬುದನ್ನು ವರ್ತಮಾನದಲ್ಲಿ ಹಾಗೂ ಭವಿಷ್ಯದಲ್ಲಿ ವಿಶ್ಲೇಷಣೆಗೆ ಒಳಪಡಿಸಲು ಇದು ಅತ್ಯಂತ ಮಹತ್ವದ ಸಂಪನ್ಮೂಲ.ಮಹಾತ್ಮ ಗಾಂಧಿ ಅವರ ಕೃತಿಗಳ ಸಂಗ್ರಹ ಪರಿಣಾಮಕಾರಿ ಮತ್ತು ಅತ್ಯಗತ್ಯವಾದುದೇ ಆಗಿದ್ದರೂ ಈ ಸರಣಿಗೆ ಒಂದು ಮಿತಿ ಇದೆ. ಇಲ್ಲಿ ಪತ್ರಗಳು, ಲೇಖನಗಳು ಮತ್ತು ಗಾಂಧಿ ಬರೆದ ಅಥವಾ ಮಾಡಿದ ಭಾಷಣಗಳನ್ನು ಸಂಗ್ರಹಿಸಲಾಗಿದೆ. ಕೃತಿಗಳಲ್ಲಿ ಸಂದರ್ಭಾನುಸಾರ ಗಾಂಧಿಗೆ ಬಂದ ಪತ್ರಗಳನ್ನು ಅಡಿಟಿಪ್ಪಣಿಗಳಲ್ಲಿ ಉಲ್ಲೇಖಿಸಲಾಗಿದೆ, ಮತ್ತು ಕೆಲವೊಮ್ಮೆ ಇಂತಹ ಕೆಲವು ಪತ್ರಗಳನ್ನು ಅನುಬಂಧದಲ್ಲಿ ಪ್ರಕಟಿಸಲಾಗಿದೆ. ಹೆಚ್ಚು ಕಡಿಮೆ, ಮಹಾತ್ಮ ಗಾಂಧಿ ಅವರ ಕೃತಿಗಳ ಸಂಗ್ರಹವು ಗಾಂಧಿ ಅವರ ದೃಷ್ಟಿಕೋನದ ಜಗತ್ತನ್ನು ಚಿತ್ರಿಸುತ್ತದೆ. ಆದರೆ, ಗಾಂಧಿ ಮತ್ತು ಅವರ ಕಾಲದ ಸಮಗ್ರ ಗ್ರಹಿಕೆಗಾಗಿ ನಾವು ಗಾಂಧಿ ಅವರ ಕೃತಿ ಸಂಗ್ರಹದಲ್ಲಿ ಸಂಗ್ರಹಿಸಲಾಗಿರುವ ಗಾಂಧಿಗೆ ಬರೆಯಲಾದ ಪತ್ರಗಳು ಮತ್ತು ಗಾಂಧಿ ಬಗ್ಗೆ ಬರೆದ ಪತ್ರಗಳನ್ನೂ ಜತೆಯಾಗಿ ಇರಿಸಿ ನೋಡಬೇಕಾಗುತ್ತದೆ.ಅಹಮದಾಬಾದ್‌ನ ಸಾಬರಮತಿ ಆಶ್ರಮದ ಪತ್ರಾಗಾರದಲ್ಲಿ ಗಾಂಧಿಗೆ ಬರೆದ ಪತ್ರಗಳ ಅತ್ಯಂತ ದೊಡ್ಡ ಸಂಗ್ರಹ ಇದೆ. ಇದರಲ್ಲಿ ಗುಜರಾತಿ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರುವ ಸಾವಿರಾರು ಪತ್ರಗಳಿವೆ.1890ರ ದಶಕದ ದಿನಾಂಕಗಳಿಂದ ಆರಂಭವಾಗಿರುವ ಈ ಪತ್ರಗಳಲ್ಲಿ ಹೆಚ್ಚಿನವುಗಳನ್ನು ಗಾಂಧಿ ಅವರು ಪಡೆದು ಓದಿದ ನಂತರ ಬೇರಾರೂ ಓದಿಲ್ಲ.ವಿದ್ವಾಂಸ ತ್ರಿದೀಪ್ ಸುಹ್ರುದ್ ಮತ್ತು ಪತ್ರರಕ್ಷಕರಾದ ಕಿನ್ನರಿ ಭಟ್ ಅವರ ನೇತೃತ್ವದಲ್ಲಿ ಗಾಂಧಿಯ ‘ಇನ್‌ಬಾಕ್ಸ್’ (ಗಾಂಧಿಗೆ ಬಂದ ಪತ್ರಗಳು) ಅನ್ನು ಜಾಗರೂಕವಾಗಿ ರಚಿಸಲಾದ ಟಿಪ್ಪಣಿಯೊಂದಿಗೆ ಪ್ರಕಟಿಸುವ ಮಹತ್ವಾಕಾಂಕ್ಷಿ ಕೆಲಸ ನಡೆಯುತ್ತಿದೆ. ಇದರ ಮೊದಲ ಸಂಪುಟ ಮುಂದಿನ ತಿಂಗಳು ಪ್ರಕಟವಾಗಲಿದೆ.ಈ ಸರಣಿಯ ಆರಂಭಿಕ ಸಂಪುಟಗಳನ್ನು ಇಣುಕಿ ನೋಡುವ ಸೌಭಾಗ್ಯ ನನಗೆ ಒದಗಿ ಬಂತು. ಈ ಸಂಪುಟಗಳಲ್ಲಿ  ಗಾಂಧಿ ದಕ್ಷಿಣ ಆಫ್ರಿಕಾದಲ್ಲಿದ್ದ ಸಂದರ್ಭದ ಪತ್ರಗಳು ಇವೆ. ದಕ್ಷಿಣ ಆಫ್ರಿಕಾದಲ್ಲಿದ್ದ ಎರಡು ದಶಕಗಳ ಅವಧಿಯಲ್ಲಿ ಗಾಂಧಿ ಅವರು ಅಚ್ಚರಿ ಹುಟ್ಟಿಸುವಷ್ಟು ವೈವಿಧ್ಯಮಯವಾದ ಜನರೊಂದಿಗೆ ಪತ್ರ ವ್ಯವಹಾರ ನಡೆಸಿದ್ದಾರೆ. ಗಾಂಧಿಗೆ ಪತ್ರ ಬರೆದವರಲ್ಲಿ ವಿವಿಧ ಧರ್ಮ, ಸಾಮಾಜಿಕ ವರ್ಗ, ದೇಶ ಮತ್ತು ಖಂಡಗಳಿಗೆ ಸೇರಿದವರಿದ್ದಾರೆ.ವಕೀಲ ಮತ್ತು ಹೋರಾಟಗಾರನಾಗಿದ್ದ ಆರಂಭಿಕ ವರ್ಷಗಳಲ್ಲಿ ಗಾಂಧಿ ಅವರು ಮುಸ್ಲಿಮರು, ಹಿಂದೂಗಳು, ಕ್ರೈಸ್ತರು, ಯಹೂದ್ಯರು, ಪಾರ್ಸಿಗಳು, ಗುಜರಾತಿಗಳು, ತಮಿಳರು, ಆಂಗ್ಲೋ ಇಂಡಿಯನ್ನರು, ಯುರೋಪಿಯನ್ನರ ಜತೆ ಪತ್ರ ವ್ಯವಹಾರ ನಡೆಸಿದ್ದಾರೆ. ಅಧಿಕಾರಿಗಳು, ವರ್ತಕರು, ಗುತ್ತಿಗೆ ಕಾರ್ಮಿಕರೂ ಇದರಲ್ಲಿ ಸೇರಿದ್ದಾರೆ. ನತಾಲ್, ಟ್ರಾನ್ಸ್‌ವಾಲ್, ದ ಕೇಪ್, ಭಾರತ ಮತ್ತು ಇಂಗ್ಲೆಂಡ್‌ನ ಜನರು ಇದರಲ್ಲಿ ಒಳಗೊಂಡಿದ್ದಾರೆ. ಕೆನಡಾದಿಂದ ಬಂದ ಒಂದು ಪತ್ರವೂ ಇದರಲ್ಲಿದೆ!ಈ ಪತ್ರ ವ್ಯವಹಾರದ ದೊಡ್ಡ ಭಾಗ ಅವರ ವೃತ್ತಿಗೆ ಅಂದರೆ ವಕೀಲಿಕೆಗೆ ಸಂಬಂಧಿಸಿದ್ದಾಗಿದೆ. ಇನ್ನೊಂದು ದೊಡ್ಡ ಭಾಗ ರಾಜಕೀಯವಾದುದು- ನತಾಲ್,  ಟ್ರಾನ್ಸ್‌ವಾಲ್ ಮತ್ತು 1910ರ ನಂತರ ಸಂಯುಕ್ತ ದಕ್ಷಿಣ ಆಫ್ರಿಕಾ ಸರ್ಕಾರದ ಜತೆ ನಡೆಸಿದ ವ್ಯವಹಾರ. ಮಹಾತ್ಮ ಗಾಂಧಿ ಕೃತಿ ಸಂಗ್ರಹ ಈ ವ್ಯವಹಾರದ ಒಂದು ಮುಖವನ್ನು ಮಾತ್ರ ತೋರಿಸುತ್ತದೆ. ಜನಾಂಗೀಯ ತಾರತಮ್ಯದಿಂದ ಕೂಡಿದ ಕಾನೂನುಗಳು ಮತ್ತು ಪದ್ಧತಿಗಳ ಬಗ್ಗೆ ಗಾಂಧಿ ನೀಡಿದ ದೂರುಗಳು ಮತ್ತು ಮನವಿಗಳು ಅದರಲ್ಲಿ ಅಡಕವಾಗಿವೆ. ಈಗ ಹೊಸ ಪತ್ರ ಸರಣಿಯು ಪ್ರಕಟವಾಗುವ ಮೂಲಕ ಗಾಂಧಿ ಬರೆದ ಪತ್ರಗಳಿಗೆ ಅಧಿಕಾರಿಗಳಿಂದ ಬಂದ ಪ್ರತಿಕ್ರಿಯೆಗಳನ್ನೂ ನೋಡಬಹುದಾಗಿದೆ- ಇವು ಒರಟು, ಸಂಕ್ಷಿಪ್ತ, ರೇಗುವಿಕೆಯ ಮತ್ತು ಯಾವುದೇ ಸಹಾಯದ ನಿರೀಕ್ಷೆ ಹುಟ್ಟಿಸದ ಉತ್ತರಗಳಾಗಿದ್ದವು.ಸಾಬರಮತಿ ಆಶ್ರಮದಲ್ಲಿರುವ ಸಂಗ್ರಹದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಗೆ ನಿಕಟವರ್ತಿಗಳಾಗಿದ್ದವರ ಪತ್ರಗಳಿವೆ. ಅದರಲ್ಲಿ 1906ರಲ್ಲಿ ಲಂಡನ್ ಪ್ರವಾಸದಲ್ಲಿ ಜತೆಯಾಗಿದ್ದ ಎಚ್.ಒ. ಅಲೈ ಅವರ ಪತ್ರಗಳು ಸೇರಿವೆ. ಗಾಂಧಿಗೆ ಅತ್ಯಂತ ದೀರ್ಘ ಕಾಲ ಆಪ್ತ ಸಹಾಯಕರಾಗಿದ್ದ ಸೊಂಜಾ ಷೆಲ್ಸಿನ್, ದೀರ್ಘ ಕಾಲ ಸಹವರ್ತಿಯಾಗಿದ್ದ ಎಲ್. ಡಬ್ಲ್ಯು. ರಿಟ್ಚ್ (ಅವರನ್ನು 1895ರಲ್ಲಿ ಜೊಹಾನ್ಸ್‌ಬರ್ಗ್‌ನ  ಥಿಯೊಸಾಫಿಕಲ್ ಲಾಡ್ಜ್‌ನಲ್ಲಿ ಮೊದಲ ಬಾರಿ ಭೇಟಿಯಾದರು) ಮತ್ತು ಎಲ್ಲರಿಗಿಂತ ಮುಖ್ಯವಾಗಿ, ಗಾಂಧಿಯ ಗೆಳೆಯ, ಸಹಜೀವಿ ಮತ್ತು ‘ಸೆಕೆಂಡ್ ಇನ್ ಕಮಾಂಡ್’ ಎಂದೇ ಹೆಸರಾಗಿದ್ದ ಹೆನ್ರಿ ಪೊಲಾಕ್ ಮುಂತಾದವರ ಪತ್ರಗಳೂ ಅಲ್ಲಿ ಇವೆ.1909ರಲ್ಲಿ ಭಾರತದಿಂದ ಗಾಂಧಿಗೆ ಪೊಲಾಕ್ ಬರೆದ ದೀರ್ಘ ಪತ್ರಗಳು ವಿಶೇಷ ಆಸಕ್ತಿ ಕೆರಳಿಸುತ್ತವೆ. 1909ರಲ್ಲಿ ತಮ್ಮ ಗೆಳೆಯ ಗಾಂಧಿಯ ಹೋರಾಟಕ್ಕೆ ಪ್ರಚಾರ ನೀಡಲು ಮತ್ತು ನಿಧಿ ಸಂಗ್ರಹಿಸಲು ಪೊಲಾಕ್ ಉಪಖಂಡದಲ್ಲಿ ಪ್ರವಾಸ ನಡೆಸುತ್ತಾರೆ. ಸಿ.ಎಫ್. ಆ್ಯಂಡ್ರ್ಯೂಸ್ ಬರೆದ ಪತ್ರಗಳು ಆಸಕ್ತಿಕರವಾಗಿವೆ. ಇವರನ್ನು ಗಾಂಧಿ  1914ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಭೇಟಿಯಾದರು. ನಂತರ ಇವರು ಗಾಂಧಿಯ ಅತ್ಯಂತ ಹತ್ತಿರದ ಬ್ರಿಟಿಷ್ ಗೆಳೆಯನಾದರು. ಆ್ಯಂಡ್ರ್ಯೂಸ್ ಅವರ ಪತ್ರಗಳು ಗಾಂಧಿಯ ಧಾರ್ಮಿಕ ಮತ್ತು ನೈತಿಕ ತಾತ್ವಿಕತೆಯ ಬಗ್ಗೆ ವಿಶೇಷ ಒಳನೋಟಗಳನ್ನು ನೀಡುತ್ತವೆ.ಗಾಂಧಿ ಆತ್ಮಚರಿತ್ರೆಯಲ್ಲಿ ವಿವರಿಸಲಾಗಿರುವ ಕೆಲವು ಘಟನೆಗಳ ಮಾಹಿತಿಯನ್ನು ಸಾಬರಮತಿ ಆಶ್ರಮದಲ್ಲಿ ಇರುವ ಪತ್ರಗಳು ನೀಡುತ್ತವೆ. ಉದಾಹರಣೆಗೆ, 1897ರಲ್ಲಿ ಹತ್ಯೆಗೆ ಸನ್ನದ್ಧವಾಗಿ ಬಂದಿದ್ದ ಗುಂಪೊಂದರಿಂದ ಗಾಂಧಿಯನ್ನು ಪೊಲೀಸ್ ವರಿಷ್ಠಾಧಿಕಾರಿ ಆರ್.ಸಿ. ಅಲೆಕ್ಸಾಂಡರ್ ಮತ್ತು ಅವರ ಪತ್ನಿ ರಕ್ಷಿಸಿದ ಘಟನೆ ಮತ್ತು ನತಾಲ್ ಭಾರತೀಯರು ಗಾಂಧಿಗೆ ನೀಡಿದ್ದ ಆಭರಣಗಳನ್ನು 1901ರಲ್ಲಿ ಹಿಂದಿರುಗಿಸಿದ ಘಟನೆ ಸೇರಿವೆ.ಜನಾಂಗೀಯ ತಾರತಮ್ಯದ ಕಾನೂನುಗಳ ವಿರುದ್ಧ ವಸಾಹತುಶಾಹಿ ಸರ್ಕಾರದ ಮೇಲೆ ಒತ್ತಡ ಹೇರುವುದಕ್ಕಾಗಿ 1909ರಲ್ಲಿ ಗಾಂಧಿ ಇಂಗ್ಲೆಂಡ್‌ಗೆ ನೀಡಿದ ಭೇಟಿಯ ಬಗ್ಗೆಯೂ ಪತ್ರಗಳಲ್ಲಿ ಮಾಹಿತಿ ಇದೆ. (ಈ ಭೇಟಿಯಲ್ಲಿ ವಿ.ಡಿ. ಸಾವರ್ಕರ್ ಮತ್ತು ಹಿಂಸಾತ್ಮಕ ಹೋರಾಟಕ್ಕೆ ಬದ್ಧರಾಗಿದ್ದ ಕೆಲವು ಯುವಕರನ್ನು ಗಾಂಧಿ ಭೇಟಿಯಾದರು. ಇವರ ಜತೆಗಿನ ಚರ್ಚೆಯೇ ಗಾಂಧಿ ಅವರ ಪ್ರಸಿದ್ಧ ‘ಹಿಂದ್ ಸ್ವರಾಜ್’ ಕೃತಿ ರಚನೆಗೆ ಪ್ರೇರಣೆಯಾಯಿತು ಮತ್ತು ದಕ್ಷಿಣ ಆಫ್ರಿಕಾಕ್ಕೆ ಹಿಂದಿರುಗುವ ಹಡಗಿನಲ್ಲಿ ಕುಳಿತು ಗಾಂಧಿ ಈ ಪುಸ್ತಕ ಬರೆದರು).ಗಾಂಧಿ ದಕ್ಷಿಣ ಆಫ್ರಿಕಾದಲ್ಲಿದ್ದಾಗ ಅವರಿಗೆ ಬರೆಯಲಾದ ಹೆಚ್ಚಿನ ಪತ್ರಗಳು ಗಂಭೀರ ವಿಷಯಗಳನ್ನು ಚರ್ಚಿಸುತ್ತವೆ. ಆದರೆ ಕೆಲವು ಪತ್ರಗಳಲ್ಲಿ ತಮಾಷೆಯ (ಅಪ್ರಜ್ಞಾಪೂರ್ವಕವಾಗಿದ್ದರೂ) ಎಳೆಯನ್ನು ಕಾಣಬಹುದು- ಮದ್ಯವಿರೋಧಿ ಚಳವಳಿಯ ನೈತಿಕ ತತ್ವಗಳ ಬಗ್ಗೆ ಭಾಷಣ ಮಾಡಲು ಬಯಸಿದ್ದ ಯುರೋಪ್‌ನ ಗೆಳೆಯನೊಬ್ಬನ ಪತ್ರ ಇದಕ್ಕೆ ಉದಾಹರಣೆ. ತಮ್ಮ ಭಾಷಣಕ್ಕೆ ಹೆಚ್ಚು ಜನ ಸೇರುವಂತೆ ನೋಡಿಕೊಳ್ಳಬೇಕು ಎಂದು ಅವರು ಕೇಳಿಕೊಂಡಿದ್ದರು. ‘ಕಾಲ್ಪನಿಕ ಸಭಿಕರ ಎದುರು ಮಾತನಾಡುವುದರಲ್ಲಿ ಯಾವ ಲಾಭವೂ ಇಲ್ಲ. ಅತ್ಯುತ್ತಮ ಮಾತುಗಾರ ಕೂಡ ಮಹಾಗನಿ ಕುರ್ಚಿಗಳು ಮತ್ತು ಸಾಗವಾನಿ ಬೆಂಚುಗಳ ಮೇಲೆ ಪ್ರಭಾವ ಬೀರುವುದಕ್ಕೆ ಸಾಧ್ಯವಾಗದು’ ಎಂದು ಅವರು ಪತ್ರದಲ್ಲಿ ಬರೆದಿದ್ದರು.ಹಲವು ಪತ್ರಗಳು ಸಂಕ್ಷಿಪ್ತ ಮತ್ತು ಸಾಮಾನ್ಯವಾಗಿದ್ದರೆ ಕೆಲವು ಪತ್ರಗಳು ದೀರ್ಘವಾಗಿದ್ದು ಹೆಚ್ಚು ಗಂಭೀರ ವಿಚಾರಗಳನ್ನು ಚರ್ಚಿಸುತ್ತವೆ. ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಅವರ ಹಲವು ಹತ್ತು ಚಟುವಟಿಕೆಗಳು ಮತ್ತು ಅವರ ಕಾಳಜಿಗಳ ಬಗ್ಗೆ ಗಾಢವಾದ ಮತ್ತು ಸ್ಪಷ್ಟವಾದ ಗ್ರಹಿಕೆ ನೀಡಲು ಈ ಪತ್ರಗಳು ನೆರವಾಗುತ್ತವೆ. ಗಾಂಧಿ ಮತ್ತೆ ಭಾರತದಲ್ಲಿ ದೊಡ್ಡ ಮಟ್ಟದ ಕೆಲಸ ಮಾಡಬಹುದು ಎಂಬ ಊಹೆಗಳನ್ನು ಕೆಲವು ಪತ್ರಗಳಲ್ಲಿ ಗುರುತಿಸಬಹುದು.ಪತ್ರ ಸಂಪುಟಗಳನ್ನು ನೋಡುತ್ತಿದ್ದಾಗ, ಜಾತಿ ಅಸಮಾನತೆ ಬಗ್ಗೆ ಚರ್ಚಿಸಿದ ಎರಡು ಪತ್ರಗಳು ನನ್ನ ಗಮನ ಸೆಳೆದವು. 1908ರಲ್ಲಿ ಬಾಂಬೆಯ ಕೆ.ಆರ್. ದಫ್ತರಿ ಎಂಬುವರು ಬರೆದ ಪತ್ರ ಅವುಗಳಲ್ಲಿ ಒಂದು: ಆಕಸ್ಮಿಕವಾದ ಹುಟ್ಟಿನ ಕಾರಣಕ್ಕಾಗಿ ಎಲ್ಲಿವರೆಗೆ ನಮ್ಮಲ್ಲಿ ‘ಮೇಲು’ ಮತ್ತು ‘ಕೀಳು’ ಎಂಬ ವಿಚಾರ ಇರುತ್ತದೆಯೋ ಅಲ್ಲಿತನಕ ‘ಭಾರತೀಯರು ಒದೆಸಿಕೊಳ್ಳಲು ಅರ್ಹರು, ಸ್ವರಾಜ್ಯ ಮತ್ತು ಸ್ವದೇಶಿ ಬಗೆಗಿನ ಮಾತುಗಳೆಲ್ಲವೂ ಯಾರೂ ಗಂಭೀರವಾಗಿ ತೆಗೆದುಕೊಳ್ಳಲು ಬಯಸದ ಗುಳ್ಳೆಗಳು’ ಎಂದು ದಫ್ತರಿ ಬರೆದಿದ್ದಾರೆ. ದಫ್ತರಿ ಅವರ ಪ್ರಕಾರ, ‘ನಾವು (ಭಾರತೀಯರು) ಮಾಡಬೇಕಿರುವ ಮೊದಲ ಕೆಲಸ ಏನೆಂದರೆ, ನಾವು ಅನುಭವಿಸುತ್ತಿರುವ ಎಲ್ಲ ಕೆಡುಕಿಗೂ ಕಾರಣವಾಗಿರುವ ಜಾತಿ ವ್ಯವಸ್ಥೆಯ ವಿರುದ್ಧ ಬಂಡಾಯ ಏಳುವುದು’.ದಫ್ತರಿ ಅವರು ಗಾಂಧಿಯ ದೀರ್ಘ ಕಾಲದ ಗೆಳೆಯನಾಗಿರುವ ಸಾಧ್ಯತೆ ಬಹಳ ಕಡಿಮೆ. ಇವರು ಆಗೊಮ್ಮೆ ಈಗೊಮ್ಮೆ ಪತ್ರ ಬರೆಯುವ ವರ್ಗಕ್ಕೆ ಸೇರಿರಬೇಕು. ಇದಾಗಿ ಆರು ವರ್ಷಗಳ ನಂತರ, ನತಾಲ್‌ನಲ್ಲಿ ಗಾಂಧಿಯ ನಿಕಟವರ್ತಿಯಾಗಿದ್ದ ತಮಿಳು ಕ್ರೈಸ್ತ ಜೆ.ಎಂ. ಲಾಜರಸ್ ಎಂಬುವರು ಜಾತಿಗೆ ಸಂಬಂಧಿಸಿ ಇನ್ನೂ ಹೆಚ್ಚು ಗಂಭೀರವಾದ ಪತ್ರವೊಂದನ್ನು ಬರೆದಿದ್ದಾರೆ. ಭಾರತದ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಗಾಂಧಿ ಆಗಷ್ಟೇ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬ್ರಾಹ್ಮಣರು ಮತ್ತು ಇತರ ಮೇಲ್ವರ್ಗದವರ ಹಿಡಿತದಲ್ಲಿದ್ದು ‘ಇವರು ಶೋಷಿತ ವರ್ಗದ ಜನರ ಏಳಿಗೆಗಾಗಿ ಏನನ್ನೂ ಮಾಡಿಲ್ಲ’ ಎಂದು ಗಾಂಧಿಯನ್ನು ಲಾಜರಸ್‌ ಎಚ್ಚರಿಸಿದ್ದರು. ತಮ್ಮ ತವರು ನೆಲವಾದ ಮದ್ರಾಸ್‌ನ  ಪರಿಸ್ಥಿತಿಯ ತಮ್ಮದೇ ಅನುಭವವನ್ನು ಲಾಜರಸ್ ವಿವರಿಸಿದ್ದರು.‘ಬ್ರಾಹ್ಮಣರು ನೆಲೆಸಿರುವ ಬೀದಿಯ ಭಾಗದಲ್ಲಿ ನಡೆದುಕೊಂಡು ಹೋಗುವುದಕ್ಕೆ ಅಸ್ಪೃಶ್ಯರಿಗೆ ಇಂದಿಗೂ ಧೈರ್ಯ ಇಲ್ಲ. ತಮ್ಮ ಬ್ರಾಹ್ಮಣ ಯಜಮಾನನ ಮುಂದೆ ಮೊಣಕಾಲಿನ ಕೆಳಗಿನವರೆಗೆ ಆವರಿಸುವಂತೆ ಧೋತಿ ಉಡುವುದಕ್ಕೂ ಅವರಿಗೆ ಧೈರ್ಯ ಇಲ್ಲ. ಅಷ್ಟೇ ಅಲ್ಲದೆ ಬ್ರಾಹ್ಮಣರು ನೀರು ತೆಗೆಯುವ ಬಾವಿಯಿಂದ ಕುಡಿಯಲು ನೀರು ತೆಗೆದುಕೊಳ್ಳುವುದಕ್ಕೂ ಅವರಿಗೆ ಧೈರ್ಯ ಇಲ್ಲ’ ಎಂದು ಅವರು ತಿಳಿಸುತ್ತಾರೆ.ಕಾಂಗ್ರೆಸ್‌ ನೇತೃತ್ವದಲ್ಲಿ ಸ್ವರಾಜ್ಯಕ್ಕಾಗಿ ನಡೆಯುತ್ತಿರುವ ಚಳವಳಿ ಸ್ವಾಗತಾರ್ಹ ಎಂಬುದನ್ನು ಲಾಜರಸ್‌ ಒಪ್ಪಿಕೊಳ್ಳುತ್ತಾರೆ. ಆದರೆ, ಇದರಲ್ಲಿ ಅಸ್ಪೃಶ್ಯರ ಸ್ಥಾನ ಏನು ಎಂದು ಅವರು ಪ್ರಶ್ನಿಸುತ್ತಾರೆ. ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ದೊರೆತ ನಂತರ ಬ್ರಾಹ್ಮಣರು  ಶೋಷಿತ ವರ್ಗದ ಮೇಲೆ ಹಿಂದೆ ನಡೆಸುತ್ತಿದ್ದ ದಬ್ಬಾಳಿಕೆಯನ್ನೇ ಮುಂದುವರಿಸಬಹುದು ಎಂಬ ಆತಂಕವನ್ನು ಲಾಜರಸ್‌ ವ್ಯಕ್ತಪಡಿಸುತ್ತಾರೆ.ಈ ‘ದೊಡ್ಡ ಪ್ರಶ್ನೆ’ಗೆ ಸಂಪೂರ್ಣ ಗಮನ ನೀಡಬೇಕು ಎಂದು ಗಾಂಧಿಯನ್ನು ಅವರು ಕೋರುತ್ತಾರೆ. ‘ಈ ಪ್ರಶ್ನೆಯನ್ನು ಮುನ್ನೆಲೆಗೆ ತರುವುದರಿಂದ ಕೆಲವು ನಿಟ್ಟಿನಲ್ಲಿ ಕಾಂಗ್ರೆಸ್‌ನ ಗುರಿಗಳಿಗೆ ಹಿನ್ನಡೆ ಆಗಬಹುದು. ಆದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೂ ಸಾಧ್ಯವಾಗಬಹುದು’ ಎಂಬುದು ಲಾಜರಸ್‌ ಅವರ ನಿಲುವಾಗಿತ್ತು. ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗದಿದ್ದರೆ ‘ಭಾರತ ಎಂಬ ರಾಷ್ಟ್ರದ ಪರಿಕಲ್ಪನೆಯೇ ಕಾರ್ಯರೂಪಕ್ಕೆ ಬರುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದರು.ದಕ್ಷಿಣ ಆಫ್ರಿಕಾದಲ್ಲಿದ್ದ ಸಂದರ್ಭದಲ್ಲಿ ಗಾಂಧಿ ಅವರಿಗೆ ಜಾತಿ ತಾರತಮ್ಯದ ಸಮಸ್ಯೆಯನ್ನು ನಿಭಾಯಿಸುವಂತಹ ಅವಕಾಶ ಅತ್ಯಂತ ವಿರಳವಾಗಿತ್ತು. ಆದರೆ ಭಾರತಕ್ಕೆ  ಹಿಂದಿರುಗಿದ ನಂತರ ಅಸ್ಪೃಶ್ಯತೆ ನಿವಾರಣೆ ಅವರ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕ್ರಮದ ತಿರುಳಾಯಿತು. ಈ ವಿಚಾರವನ್ನು ಹಿಂದೆ ನೋಡಿದ್ದಕ್ಕಿಂತ ಹೆಚ್ಚು ಗಂಭೀರವಾಗಿ ನೋಡುವುದಕ್ಕೆ ಗೆಳೆಯ ಜೆ.ಎಂ. ಲಾಜರಸ್‌ ಅವರ ಪ್ರಭಾವವೇ ಕಾರಣ ಆಗಿರಬಹುದು ಎಂದು ಭಾವಿಸಬಹುದು. ಹಲವು ಅಂಶಗಳ ಜತೆಗೆ, ಈ ಪತ್ರಗಳು ಬಹಿರಂಗಪಡಿಸುವ ಒಂದು ಅಂಶವೆಂದರೆ ದಕ್ಷಿಣ ಆಫ್ರಿಕಾದಲ್ಲಿದ್ದ ವಿವಿಧ ವರ್ಗಗಳ ಜನರು ಗಾಂಧಿಯ ನಾಯಕತ್ವ ಸಾಮರ್ಥ್ಯ ಮತ್ತು ಗುಣಗಳ ಬಗ್ಗೆ ಹೊಂದಿದ್ದ ವಿಶ್ವಾಸ.‘ಭಾರತೀಯರ ಹೋರಾಟ ಸಮರ್ಥ ವ್ಯಕ್ತಿಯ ಕೈಯಲ್ಲಿದೆ’ ಎಂದು ಕೇಪ್‌ಟೌನ್‌ನಲ್ಲಿದ್ದ ಮೀನು ವ್ಯಾಪಾರಿಯೊಬ್ಬರು ಗಾಂಧಿಗೆ ಪತ್ರ ಬರೆದು ಹೇಳಿದ್ದರು. ತಮಿಳು ಗುತ್ತಿಗೆ ಕಾರ್ಮಿಕನೊಬ್ಬನ ಪತ್ರ ಮನಕಲಕುವಂತಿದೆ. ಕಾರ್ಮಿಕರನ್ನು ಬಿಳಿಯ ಯಜಮಾನ ಅತ್ಯಂತ ಕಠಿಣವಾಗಿ ನಡೆಸಿಕೊಳ್ಳುತ್ತಿರುವುದನ್ನು ಆತ ಪತ್ರದಲ್ಲಿ ವಿವರಿಸಿದ್ದಾನೆ. ಈ ಸಂತ್ರಸ್ತರನ್ನು ಕಿರುಕುಳದಿಂದ ರಕ್ಷಿಸಲು ತಮ್ಮ ‘ಪ್ರಭಾವಿ’ ಹೆಸರು ಬಳಸಿಕೊಳ್ಳಬೇಕು ಎಂದು ಆತ ಗಾಂಧಿಗೆ ಮನವಿ ಮಾಡಿಕೊಳ್ಳುತ್ತಾನೆ. ‘ದೇಶದ ಜನರಿಗೆ ನ್ಯಾಯ, ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ಜೀವನಪರ್ಯಂತ ಹೊಂದಿರುವ ಬದ್ಧತೆ’ ಶ್ಲಾಘಿಸಿ ಪೋರ್ಟ್‌ ಎಲಿಜಬೆತ್‌ನಲ್ಲಿದ್ದ ಗುಜರಾತಿಗಳು, ತಮಿಳರು ಸಹಿ ಹಾಕಿದ್ದ ಪತ್ರವೂ ಇದೆ.ಸಾಬರಮತಿ ಆಶ್ರಮದ ಪತ್ರರಕ್ಷಕರು ಅತ್ಯುತ್ತಮ ಕೌಶಲವನ್ನು ಹೊಂದಿದ್ದು,  ಸಂಪೂರ್ಣವಾಗಿ ಎಲೆಮರೆ ಕಾಯಿಯಂತೆಯೇ ಉಳಿದವರು. ಸ್ವಯಂ ಹೊಗಳಿಕೆ ಮತ್ತು ಸ್ವಪ್ರಚಾರದ ಕಾಲದಲ್ಲಿಯೂ ಅವರ ನಮ್ರತೆ, ಕೆಲಸದ ಬಗೆಗಿನ ಬದ್ಧತೆ ಗಮನಾರ್ಹ. ಹೀಗಿದ್ದರೂ, ಗಾಂಧಿಯ ಪತ್ರಗಳ ಸಂಪುಟಗಳನ್ನು ಪ್ರಕಟಿಸುವ ಅವರ ಕೆಲಸಕ್ಕೆ ಹೆಚ್ಚಿನ ಪ್ರಚಾರದ ಅಗತ್ಯ ಇದೆ.  ಇದು ಇತಿಹಾಸದ ಮಹತ್ವದ ಶೋಧ ಮತ್ತು ಸಂಕಲನ. ಇದು ಬುದ್ಧನ ನಂತರ ಅತ್ಯಂತ ಶ್ರೇಷ್ಠ ಭಾರತೀಯ ಎಂದು ಹೇಳಬಹುದಾದ ವ್ಯಕ್ತಿಯ ಜೀವನ ಮತ್ತು ಕಾಲಕ್ಕೆ ಇನ್ನಷ್ಟು ಬೆಳಕು ಚೆಲ್ಲುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry