ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ಕಠಿಣ ನಿಲುವು

ತಜ್ಞರ ತಂಡ ಕಳುಹಿಸಲು ರಾಜ್ಯ ಪಟ್ಟು: ತಮಿಳುನಾಡು ಆಕ್ಷೇಪ
Last Updated 29 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ಕಾವೇರಿ ನೀರು ಹಂಚಿಕೆ ಬಿಕ್ಕಟ್ಟನ್ನು ನ್ಯಾಯಾಲಯದ ವ್ಯಾಪ್ತಿಯ ಹೊರಗೆ ಪರಿಹರಿಸುವ ಕೇಂದ್ರ ಸರ್ಕಾರದ ಸಂಧಾನ ಯತ್ನ ತಮಿಳುನಾಡಿನ ಅಸಹಕಾರದಿಂದ ಗುರುವಾರ ಮುರಿದು ಬಿತ್ತು.

ಕರ್ನಾಟಕ ಕಠಿಣ ನಿಲುವು ತಾಳಿದ್ದು ತಮಿಳುನಾಡಿಗೆ ನೀರು ಹರಿಸದೇ ಇರುವ ತನ್ನ ನಿರ್ಧಾರಕ್ಕೆ ಅಂಟಿಕೊಂಡಿದೆ.

‘ನಾವು ಸರ್ವ ಪಕ್ಷಗಳ ಸಭೆ ಮತ್ತು ವಿಧಾನ ಮಂಡಲದ ವಿಶೇಷ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಕ್ಕೆ ಬದ್ಧರಾಗಿದ್ದೇವೆ. ಯಾವುದೇ ಕಾರಣಕ್ಕೂ ಆ ನಿರ್ಧಾರ ಬಸಲಿಸುವುದಿಲ್ಲ. ನಮ್ಮಲ್ಲಿ ಕುಡಿಯುವುದಕ್ಕೆ ನೀರಿಲ್ಲ ಎಂಬುದನ್ನು ಸುಪ್ರೀಂಕೋರ್ಟ್‌ ಅರ್ಥೈಸಿಕೊಳ್ಳಲಿದೆ’ ಎಂದು ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ತಜ್ಞರ ತಂಡಕ್ಕೆ ವಿರೋಧ: ಕಾವೇರಿ ಜಲಾಶಯಗಳಲ್ಲಿರುವ ನೀರಿನ ಪ್ರಮಾಣ ಮತ್ತು ಅಗತ್ಯ ಕುರಿತು ವಾಸ್ತವ ಸ್ಥಿತಿ ಅರಿತು ವರದಿ ನೀಡಲು ತಜ್ಞರ ತಂಡವನ್ನು ಕಳಿಸಬೇಕು ಎಂಬ ಕರ್ನಾಟಕದ ಒತ್ತಾಯವನ್ನು ತಮಿಳುನಾಡು ತಳ್ಳಿ ಹಾಕಿತು. ಅಷ್ಟೇ ಅಲ್ಲ, ಕರ್ನಾಟಕವು ನೀರು ಬಿಡುವುದನ್ನು ಬಿಟ್ಟು ಬೇರೆ ಯಾವುದೇ ಪರಿಹಾರ ಸೂಚಿಸಿದರೂ ತನಗೆ ಸಮ್ಮತವಿಲ್ಲ ಎಂದು ಬಾರಿ ಬಾರಿ ಸಾರಿ ಹೇಳಿತು. ಸಂಧಾನ ಸಾಧ್ಯವಾಗಲಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ನಿವೇದಿಸಿಕೊಳ್ಳುವುದಾಗಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ತಿಳಿಸಿದರು.

ಇದೇ 27ರಂದು ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಯ ಮೇರೆಗೆ ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳನ್ನು ಕೇಂದ್ರ ಸರ್ಕಾರ ಸಂಧಾನದ ಮೇಜಿಗೆ ಕರೆದಿತ್ತು.

ಅನಾರೋಗ್ಯದಿಂದ ಬಳಲುತ್ತಿರುವ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ತಮ್ಮ ಪರವಾಗಿ ಲೋಕೋಪಯೋಗಿ ಸಚಿವ ಈಡಪ್ಪಾಡಿ ಪಳನಿಸ್ವಾಮಿ ಅವರನ್ನು ಕಳಿಸಿದ್ದರು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಹೋದ್ಯೋಗಿಗಳಾದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಿದ್ದರು.

ಬೆಳಿಗ್ಗೆ 11.30ರಿಂದ ಸತತ ಮೂರು ಗಂಟೆ ನಡೆದ ಸಂಧಾನ ಸಭೆಯಲ್ಲಿ, ‘ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಕರ್ನಾಟಕ  ನೀರು ಬಿಡಲೇಬೇಕು. ಆದಷ್ಟು ಶೀಘ್ರ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು’ ಎಂಬ ತನ್ನ ಪಟ್ಟು ಸಡಿಲಿಸದ ತಮಿಳುನಾಡು ಕಾವೇರಿ ಕಣಿವೆ ಪ್ರದೇಶದಲ್ಲಿನ ಜಲಾಶಯಗಳ ವಸ್ತುಸ್ಥಿತಿ ಅರಿಯಬೇಕೆಂಬ ಕರ್ನಾಟಕದ ಬೇಡಿಕೆಯನ್ನು ತಳ್ಳಿಹಾಕಿತು.

ಪ್ರತಿ ಬಾರಿ ಕಾವೇರಿ ನೀರು ಹಂಚಿಕೆ ಸಮಸ್ಯೆ ಉದ್ಭವಿಸಿದಾಗಲೆಲ್ಲ ಕರ್ನಾಟಕದಲ್ಲಿರುವ ತಮಿಳು ಭಾಷಿಕರು ತೀವ್ರ ಸಮಸ್ಯೆ ಎದುರಿಸುತ್ತಲೇ ಅಭದ್ರತೆ ಎದುರಿಸುವಂತಾಗಿದೆ. ಇದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಕಾವೇರಿ ನ್ಯಾಯಮಂಡಳಿಯು 2007ರಲ್ಲಿ ನೀಡಿರುವ ಐತೀರ್ಪಿನ ಪ್ರಕಾರ ಮಂಡಳಿ ರಚಿಸಬೇಕು ಎಂದು ತಮಿಳುನಾಡಿನ ಸಚಿವ ಈಡಪ್ಪಾಡಿ ಪಳನಿಸ್ವಾಮಿ ಪಟ್ಟುಹಿಡಿದರು.

‘ನಾವು ಕಾನೂನು ಹೋರಾಟವನ್ನು ಮುಂದುವರಿಸಿದ್ದೇವೆ. ಸುಪ್ರೀಂ ಕೊರ್ಟ್‌ ಆದೇಶವನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಕರ್ನಾಟಕವು ನೀರಿಲ್ಲದ ಸ್ಥಿತಿಯನ್ನು ವಿವರಿಸುತ್ತಿದೆ. ನಮ್ಮ ಬೆಳೆಗಳಿಗೂ ನೀರಿನ ಅಗತ್ಯವಿದೆ. ನಮ್ಮ ಪಾಲಿನ ನೀರನ್ನು ಬಿಡುವುದಾದರೆ ಮಾತ್ರವೇ ಸಂಧಾನಕ್ಕೆ ಒಪ್ಪಿಗೆ ಸೂಚಿಸಲಾಗುತ್ತದೆ’ ಎಂದು ಅವರು ಪ್ರತಿಪಾದಿಸಿದರು.

ಎರಡೂ ಬಣಗಳ ಅಭಿಪ್ರಾಯವನ್ನು ಆಲಿಸಿದ ಸಚಿವೆ ಉಮಾ ಭಾರತಿ, ನಂತರ ಉಭಯ ರಾಜ್ಯಗಳ ಪ್ರತಿನಿಧಿಗಳೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಒಪ್ಪಿಸಲು ಪ್ರಯತ್ನಿಸಿದರಾದರೂ, ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗದೆ ಮಧ್ಯಾಹ್ನ 2.30ಕ್ಕೆ ಸಭೆಯನ್ನು ಮುಕ್ತಾಯಗೊಳಿಸಿದರು.

ಉಮಾ ಭಾರತಿ ವಿಷಾದ: ಕಾವೇರಿ ಕಣಿವೆಗೆ ತಜ್ಞರ ಸಮಿತಿ ಕಳುಹಿಸಿ, ಅಧ್ಯಯನ ವರದಿ ತರಿಸಿಕೊಳ್ಳುವಂತೆ ಕರ್ನಾಟಕ ಸಲ್ಲಿಸಿದ ಮನವಿಯನ್ನು ತಮಿಳುನಾಡು ಪುರಸ್ಕರಿಸದ್ದರಿಂದ ಸಂಧಾನ ಸಭೆಯು ಯಾವುದೇ ನಿರ್ಣಯವಿಲ್ಲದೆ ಮುಕ್ತಾಯವಾಯಿತು ಎಂದು ಸಚಿವ ಉಮಾ ಭಾರತಿ ಸಭೆಯ ನಂತರ ಸುದ್ದಿಗಾರರಿಗೆ ವಿವರಿಸಿದರು.

‘ಸಮಸ್ಯೆಗಳು ಬಾರದಿರಲಿ ಎಂದೇ ದೇಶದಲ್ಲಿ ವಿವಿಧ ರಾಜ್ಯಗಳನ್ನು ಸ್ಥಾಪಿಸುವ ಮೂಲಕ ಒಕ್ಕೂಟ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೆ, ಸಮಸ್ಯೆಗಳು ಉದ್ಭವವಾಗುತ್ತಿವೆ.  ಸುಪ್ರೀಂ ಕೋರ್ಟ್‌ ಅವಕಾಶ ನೀಡಿದ್ದರಿಂದ ನಾವೂ  ಪ್ರಾಮಾಣಿಕ ಪ್ರಯತ್ನ ಮಾಡಿದರೂ ಪರಿಹಾರ ಸಾಧ್ಯವಾಗದಿರುವುದು ವಿಷಾದದ ವಿಷಯ’ ಎಂದು ಅವರು ಹೇಳಿದರು.

ಸಭೆಯಲ್ಲಿ ಎರಡೂ ರಾಜ್ಯಗಳು ವ್ಯಕ್ತಪಡಿಸಿದ ಅಭಿಪ್ರಾಯದ ವರದಿಯನ್ನು ಅಟಾರ್ನಿ ಜನರಲ್‌ ಮುಕುಲ್‌ ರೋಹಟ್ಗಿ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದ ಅವರು, ‘ಜನರ ಭಾವನೆಯನ್ನು ಕೆರಳಿಸುವ ಪ್ರಯತ್ನವನ್ನು ಯಾರೂ ಮಾಡಬಾರದು. ತಮಿಳುನಾಡು ಮತ್ತು ಕರ್ನಾಟಕದ ಜನತೆ ಸೌಹಾರ್ದದಿಂದ ಇರಬೇಕು. ಅಶಾಂತಿಯ ವಾತಾವರಣ ಕಂಡುಬಂದರೆ ನಾನು ಎರಡೂ ರಾಜ್ಯಗಳ ಗಡಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇನೆ’ ಎಂದು ತಿಳಿಸಿದರು.

ವಸ್ತುಸ್ಥಿತಿ ಅರಿಯಲು ಮನವಿ: ಕುಡಿಯುವುದಕ್ಕೂ ನೀರಿಲ್ಲದ ಸ್ಥಿತಿ ಇರುವುದರಿಂದಲೇ ಕರ್ನಾಟಕ ತಜ್ಞರ ತಂಡವನ್ನು ಕಳುಹಿಸಿ ಅಧ್ಯಯನ ನಡೆಸುವಂತೆ ಕೋರಿದೆ. ಆದರೆ, ನೀರು ಬಿಡುವಂತೆ ತಮಿಳುನಾಡು ಪಟ್ಟು ಹಿಡಿದಿದ್ದರಿಂದ ಕೇಂದ್ರದ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆ ವಿಫಲವಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೆಟ್ಟೂರು ಜಲಾಶಯದಲ್ಲಿ ಈಗ 43 ಟಿಎಂಸಿ ಅಡಿ ನೀರಿದೆ. ಅಮರಾವತಿ, ಭವಾನಿ ಜಲಾಶಯಗಳಲ್ಲೂ ನೀರಿನ ಸಂಗ್ರಹವಿದೆ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ತಮಿಳುನಾಡಿನಲ್ಲಿ ಈಶಾನ್ಯ ಮಳೆಯ ಮಾರುತಗಳು ಮಳೆ ಸುರಿಸಲಿವೆ. ಕಳೆದ ವರ್ಷವೂ ಅಲ್ಲಿ ಉತ್ತಮ ಮಳೆ ಸುರಿದಿದೆ. ಈ ಬಾರಿಯೂ ನಿರೀಕ್ಷಿತ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ ಎಂದು ತಿಳಿಸಿದರು.

ಅದನ್ನೆಲ್ಲ ಪರಿಗಣಿಸಬೇಕಿದೆ. ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ನೀರಿನ ಸಂಗ್ರಹ ಎಷ್ಟಿದೆ ಎಂಬುದನ್ನು ತಜ್ಞರೇ ಅರಿತರೆ ನಿಜಾಂಶ ಹೊರಬೀಳಲಿದೆ ಎಂಬ ಭಯದಿಂದಲೇ ಅದಕ್ಕೆ ತಮಿಳುನಾಡಿನಿಂದ ವಿರೋಧ ವ್ಯಕ್ತವಾಯಿತು ಎಂದು ಅವರು ದೂರಿದರು.

ಕಾವೇರಿ ಕಣಿವೆಯಲ್ಲಿ ಕರ್ನಾಟಕವು 18.65 ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಹೊಂದಿದೆ. ಆದರೆ, ಈ ಬಾರಿ 6.15 ಲಕ್ಷ ಎಕರೆ ಜಮೀನಿನಲ್ಲಿ ಮಾತ್ರ ಬೆಳೆ ಬೆಳೆಯಲಾಗಿದೆ. 15 ಲಕ್ಷಕ್ಕೂ ಅಧಿಕ ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿರುವ ತಮಿಳುನಾಡು ತನ್ನ ಎಲ್ಲ ರೈತರ ಬೆಳೆಗಳಿಗೆ ನಿತ್ಯ 12,000 ಕ್ಯುಸೆಕ್‌ ನೀರು ಹರಿಸುತ್ತಿದೆ. ಮಳೆ, ಬೆಳೆ, ಕುಡಿಯುವ ನೀರು, ಸಮಸ್ಯೆ, ಸಮೃದ್ಧಿಯನ್ನು ಅರಿಯುವ ಮೂಲಕವೇ ಸುಪ್ರೀಂ ಕೋರ್ಟ್‌ ಮುಂದಿನ ಆದೇಶ ನೀಡಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿರುವ ತಮಿಳು ಭಾಷಿಕರು ಅಭದ್ರತೆ ಎದುರಿಸುತ್ತಿದ್ದಾರೆ ಎಂದು ತಮಿಳುನಾಡು ದೂರಿದೆ. ತಮಿಳರು ಮಾತ್ರವಲ್ಲ. ಯಾವುದೇ ಭಾಷಾ ಅಲ್ಪಸಂಖ್ಯಾತರ ರಕ್ಷಣೆ ಸರ್ಕಾರದ ಹೊಣೆಯಾಗಿದೆ. ಕಿಡಿಗೇಡಿಗಳು ವಾಹನಗಳ ಮೇಲೆ ದಾಳಿ ಮಾಡಿದ್ದನ್ನು ಎಲ್ಲ ಕನ್ನಡಿಗರೂ ತಮಿಳರ ಮೇಲೆ ಹಲ್ಲೆ ಮಾಡುತ್ತಾರೆ ಎಂದು ಬಣ್ಣಿಸುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

‘ಸುಪ್ರೀಂ’ನಲ್ಲಿ  ಇಂದು ವಿಚಾರಣೆ
ಕೇಂದ್ರದ ಮಧ್ಯಸ್ಥಿಕೆಯೊಂದಿಗೆ ಬಿಕ್ಕಟ್ಟು ಪರಿಹಾರದ ಮಾರ್ಗ ಕಂಡುಕೊಳ್ಳುವಂತೆ ಸೂಚಿಸಿದ್ದ ಸುಪ್ರೀಂ ಕೋರ್ಟ್‌ ಶುಕ್ರವಾರ ಮಧ್ಯಾಹ್ನ 2ಕ್ಕೆ ಕಾವೇರಿ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಇದೇ 27ರಂದು ಮಧ್ಯಾಹ್ನ ನಡೆದ ವಿಚಾರಣೆ ವೇಳೆ ಭಾರತದ ಅಟಾರ್ನಿ ಜನರಲ್‌ ಮುಕುಲ್‌ ರೋಹಟ್ಗಿ ಅವರಿಗೆ ಮಧ್ಯಸ್ಥಿಕೆಯ ವ್ಯವಸ್ಥೆ ಮಾಡುವಂತೆ ತಿಳಿಸಿದ್ದ ನ್ಯಾಯಮೂರ್ತಿಗಳಾದ ದೀಪಕ್‌ ಶರ್ಮಾ ಮತ್ತು ಉದಯ್‌ ಲಲಿತ್‌, ಅಲ್ಲಿಯವರೆಗೂ ತಮಿಳುನಾಡಿಗೆ ನಿತ್ಯ 6,000 ಕ್ಯುಸೆಕ್‌ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿ ಆದೇಶ ಹೊರಡಿಸಿದ್ದರು.

ನೀರಿಲ್ಲದ ಸ್ಥಿತಿ ಎದುರಿಸುತ್ತಿರುವ ಕರ್ನಾಟಕ, ಸುಪ್ರೀಂ ಕೋರ್ಟ್‌ ಆದೇಶ ಪಾಲನೆ ಮಾಡಲಾಗಿಲ್ಲ. ಮಾತ್ರವಲ್ಲದೆ, ವಸ್ತುಸ್ಥಿತಿ ಅರಿಯಲು ತಜ್ಞರ ತಂಡ ಕಳುಹಿಸಬೇಕು ಎಂಬ ಮನವಿಗೂ ಕೇಂದ್ರದ ಮಧ್ಯಸ್ಥಿಕೆಯಲ್ಲಿ ತಮಿಳುನಾಡಿನಿಂದ ಪುರಸ್ಕಾರ ದೊರೆಯದ್ದರಿಂದ ಈಗ ಸುಪ್ರೀಂ ಕೋರ್ಟ್‌ನತ್ತ ಚಿತ್ತ ನೆಟ್ಟಿದೆ.

ವಸ್ತುಸ್ಥಿತಿಯನ್ನು ಅರಿಯುವ ಅಗತ್ಯವನ್ನು ಮನಗಾಣುವ ಮೂಲಕ ತಜ್ಞರ ತಂಡ ಕಳುಹಿಸುವುದಕ್ಕೆ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಣೆಯ ಆದೇಶ ನೀಡಬಹುದು. ಅಥವಾ ಕೋರ್ಟ್ ಆದೇಶ ಉಲ್ಲಂಘಿಸಿದ್ದಕ್ಕೆ ಸಿಡಿಮಿಡಿಗೊಳ್ಳುವ ಸಾಧ್ಯತೆಗಳು ಇರುವುದರಿಂದ ಕರ್ನಾಟಕದ ಪಾಳ ಯದಲ್ಲಿ ಆತಂಕ ಮುಂದುವರಿದಿದೆ.

ನಾರಿಮನ್‌ ಜತೆ ಸಿ.ಎಂ ಚರ್ಚೆ:  ಸಂಧಾನ ಮುರಿದು ಬಿದ್ದಿದ್ದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ನಡೆಯಲಿರುವ ಕಾವೇರಿ ವಿಚಾರಣೆ ವೇಳೆ ಎದುರಾಗಬಹುದಾದ ಸ್ಥಿತಿಗತಿ ಕುರಿತು ಅರಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ಸಂಜೆ ಹಿರಿಯ ವಕೀಲ ಫಾಲಿ ನಾರಿಮನ್‌ರೊಂದಿಗೆ ಚರ್ಚಿಸಿದರು.

ಕಾನೂನು ತಂಡದ ಇನ್ನೊಬ್ಬ ಹಿರಿಯ ಸದಸ್ಯರಾದ ಮೋಹನ್‌ ಕಾತರಕಿ ಅವರೊಂದಿಗೆ ಇದಕ್ಕೂ ಮುನ್ನ ಅರ್ಧ ಗಂಟೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೆ. 27ರಂದು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ ಉಲ್ಲಂಘಿಸಿದ್ದರ ಪರಿಣಾಮಗಳ ಸಾಧ್ಯಾಸಾಧ್ಯತೆ ಕುರಿತು ಚರ್ಚಿಸಿದರು.

ಕರ್ನಾಟಕವು ತಜ್ಞರ ತಂಡ ಕಳುಹಿಸುವಂತೆ ಮನವಿ ಮಾಡಿದೆ. ನೀರಿನ ಸಂಗ್ರಹ ಇಲ್ಲದ್ದರಿಂದಲೇ ಸೆ. 20ರ ಆದೇಶ ಪಾಲಿಸಲಾಗದೆ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು ನಿರ್ಣಯ ಕೈಗೊಂಡಿದೆ. ಆದರೆ, ನೀರನ್ನು ಬಿಡುವಂತೆ ಪಟ್ಟು ಹಿಡಿದಿರುವ ತಮಿಳುನಾಡು ನ್ಯಾಯಾಲಯದ ಹೊರಗೆ ಬಿಕ್ಕಟ್ಟು ಪರಿಹಾರಕ್ಕೆ ಮನಸ್ಸು ಮಾಡದಿರುವುದನ್ನು ನ್ಯಾಯಮೂರ್ತಿಗಳು ಪರಿಗಣಿಸಬಹುದು ಎಂಬ ಅಭಿಪ್ರಾಯವನ್ನು ಕಾನೂನು ತಂಡ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.

ತಮಿಳುನಾಡಿನಪಳನಿಸ್ವಾಮಿ ನಗಿಸಿದ ಸಚಿವೆ!
ಕಾವೇರಿ ಸಂಧಾನ ಸಭೆಗೆ ಹಾಜರಾದ ತಮಿಳುನಾಡಿನ ಲೋಕೋಪಯೋಗಿ ಸಚಿವ ಈಡಪ್ಪಾಡಿ ಪಳನಿಸ್ವಾಮಿ, ಕೇಂದ್ರ ಸಚಿವ ಉಮಾ ಭಾರತಿ ಅವರಿಗೆ ರೇಷ್ಮೆ ಶಾಲು ಹೊದಿಸಿ, ಹೂಗುಚ್ಛ ನೀಡಿದರು.

ಆದರೆ, ಅವರ ಗಂಟಿಕ್ಕಿದ ಮುಖವನ್ನು ಕಂಡ ಸಚಿವೆ, ನಗುತ್ತ ಛಾಯಾಗ್ರಾಹಕರಿಗೆ ಫೋಸ್‌ ನೀಡುವಂತೆ ಹೇಳಿದ್ದರಿಂದ ಮುಖದಲ್ಲಿ ನಗು ತರಿಸಿಕೊಂಡರು.

ನಂತರ ಸಭೆಗೆ ಆಗಮಿಸಿದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ಹೂಗುಚ್ಛ ನೀಡಿದರು. ಅವರಿಂದ ನಗುತ್ತಲೇ ಹೂಗುಚ್ಛ ಸ್ವೀಕರಿಸಿದ ಉಮಾ ಭಾರತಿ ಅವರು, ಉಭಯ ರಾಜ್ಯಗಳ ಮುಖಂಡರನ್ನೂ ಹತ್ತಿರಕ್ಕೆ ಕರೆದು, ಕೈ ಜೋಡಿಸುವಂತೆ ತಿಳಿಸಿದರು. ‘ಛಾಯಾಗ್ರಾಹಕರಿಗೂ ಫೋಸ್‌ ನೀಡಿ’ ಎಂದು ಹೇಳಿ, ‘ಸಭೆಯಲ್ಲಿ ಉತ್ತಮ ಫಲಿತಾಂಶ ಹೊರಬರಲಿ’ ಎಂದು ಹಾರೈಸಿದರು.

ಮುಖ್ಯಾಂಶಗಳು
* ಸತತ ಮೂರು ಗಂಟೆ ನಡೆದ ಸಂಧಾನ ಸಭೆ

* ನೀರು ಬಿಡಲು ಸಾಧ್ಯ ಇಲ್ಲ: ಮುಖ್ಯಮಂತ್ರಿ ಪುನುರುಚ್ಚಾರ
* ತಜ್ಞರ ತಂಡ ಕಳಿಸಬೇಕೆ ಎಂಬ ರಾಜ್ಯದ ಬೇಡಿಕೆಗೆ ತಮಿಳುನಾಡು ವಿರೋಧ
* ಉಮಾಭಾರತಿ ವಿಷಾದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT