ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿ ರೈಲು ನಿಲ್ದಾಣ ಕಾರ್ಯಾರಂಭ

ಐ.ಟಿ ಉದ್ಯೋಗಿಗಳು, ಸ್ಥಳೀಯರಿಗೆ ಅನುಕೂಲ l 14 ರೈಲುಗಳಿಗೆ ನಿಲುಗಡೆ
Last Updated 29 ಸೆಪ್ಟೆಂಬರ್ 2016, 20:01 IST
ಅಕ್ಷರ ಗಾತ್ರ

ಬೆಂಗಳೂರು: ಐಟಿ ಉದ್ಯೋಗಿಗಳು ಹಾಗೂ ಸ್ಥಳೀಯರಿಗೆ ಅನುಕೂಲ ಕಲ್ಪಿಸುವ ಮಹದೇವಪುರ ಕ್ಷೇತ್ರದ ಹೂಡಿ ಗೇಟ್ ಬಳಿಯ ನೂತನ ರೈಲು ನಿಲ್ದಾಣ ಗುರುವಾರ ಕಾರ್ಯಾರಂಭ ಮಾಡಿತು.

ಬೆಂಗಳೂರು –ಬಂಗಾರಪೇಟೆ ಮಾರ್ಗವಾಗಿ ಚಲಿಸುವ 14 ಪ್ಯಾಸೆಂಜರ್‌ ರೈಲುಗಳು ಈ ನಿಲ್ದಾಣದಲ್ಲಿ ನಿಲುಗಡೆ ಮಾಡಲಿವೆ. ಇದರಿಂದ ಟ್ರಾಫಿಕ್‌ ಸಮಸ್ಯೆ ಇಲ್ಲದೆ ನಗರ ದಂಡು (ಕಂಟೋನ್ಮೆಂಟ್‌) ಮತ್ತು ಬೈಯಪ್ಪನಹಳ್ಳಿ ರೈಲು ನಿಲ್ದಾಣಗಳಿಗೆ ಸುಲಭವಾಗಿ ಪ್ರಯಾಣಿಸಬಹುದು.

ಹೂಡಿ ಪ್ರದೇಶದಲ್ಲಿ ಐ.ಟಿ ಕಂಪೆನಿಗಳು ಹೆಚ್ಚಾಗಿವೆ. ಇಲ್ಲಿ ಕೆಲಸಕ್ಕೆ ಬರುವ ಅನೇಕರು ಸ್ಯಾಟಲೈಟ್‌ ಗೂಡ್ಸ್‌ ಟರ್ಮಿನಲ್‌ನಲ್ಲಿ ರೈಲಿನಿಂದ ಇಳಿದು ಕಚೇರಿಗಳಿಗೆ ಹೋಗುತ್ತಿದ್ದರು. ಈಗ ನೂತನ ಹೂಡಿ ರೈಲು ನಿಲ್ದಾಣದಲ್ಲಿ ಒಂದು ನಿಮಿಷ ರೈಲುಗಳ ನಿಲುಗಡೆ ಅವಕಾಶ ಮಾಡಿಕೊಡಲಾಗಿದೆ.

‘ಸಂಚಾರ ದಟ್ಟಣೆ ಅವಧಿಯಲ್ಲಿ ಹೂಡಿಯಿಂದ ಬೈಯಪ್ಪನಹಳ್ಳಿಗೆ ರಸ್ತೆ ಮಾರ್ಗದಲ್ಲಿ ಸಂಚರಿಸಲು ಒಂದು ಗಂಟೆಗೂ ಹೆಚ್ಚು ಸಮಯ ಬೇಕಿತ್ತು. ಈಗ ನೂತನ ರೈಲು ನಿಲ್ದಾಣದಿಂದ ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ಹೋಗಲು 15 ನಿಮಿಷ ಸಾಕು. ವೈಟ್‌ಫೀಲ್ಡ್‌ನಿಂದ ಹೂಡಿಗೆ ರೈಲಿನಲ್ಲಿ ಬರಲು 8 ನಿಮಿಷ ಸಾಕು’ ಎಂದು ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬರು ತಿಳಿಸಿದರು.

‘ಈ ರೈಲು ನಿಲ್ದಾಣದಿಂದ ವೈಟ್‌ಫೀಲ್ಡ್‌ ಮತ್ತು ಐಟಿಪಿಎಲ್‌ ಪ್ರದೇಶದಲ್ಲಿರುವ ಸಾವಿರಾರು ಸಾಫ್ಟ್‌ವೇರ್‌ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ. ಟ್ರಾಫಿಕ್‌ ಕಿರಿಕಿರಿಯಿಂದ ಮುಕ್ತಿ ಸಿಕ್ಕಂತಾಗಿದೆ’ ಎಂದರು.

ದರ: ಹೂಡಿ ರೈಲು ನಿಲ್ದಾಣದಿಂದ ಬೈಯಪ್ಪನಹಳ್ಳಿ, ಬೆಂಗಳೂರು ಪೂರ್ವ, ಬೆಂಗಳೂರು ದಂಡು ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಪ್ರಯಾಣ ದರ ₹10 ನಿಗದಿಪಡಿಸಲಾಗಿದೆ. ಅದೇ ರೀತಿ ಹೂಡಿಯಿಂದ ವೈಟ್‌ಫೀಲ್ಡ್‌, ದೇವನಗೊಂತಿ, ಮಾಲೂರು, ಬ್ಯಾಟರಾಯನಹಳ್ಳಿ, ಟೇಕಲ್‌ ರೈಲು ನಿಲ್ದಾಣಕ್ಕೆ ₹10 ಹಾಗೂ ಬಂಗಾರಪೇಟೆ ರೈಲು ನಿಲ್ದಾಣಕ್ಕೆ ಪ್ರಯಾಣ ದರ ₹15 ನಿಗದಿಪಡಿಸಲಾಗಿದೆ.

₹2.86 ಕೋಟಿ ವೆಚ್ಚದಲ್ಲಿ ನಿರ್ಮಾಣ: ಐಟಿಪಿಎಲ್‌, ಡಬ್ಲ್ಯುಎಸಿಐಎ, ಡಬ್ಲ್ಯುಇಪಿಪಿಐಎ, ವೈಟ್‌ಫೀಲ್ಡ್‌ ರೈಸಿಂಗ್‌, ನಮ್ಮ ರೈಲು ಸೇರಿದಂತೆ ಅನೇಕ ಸಂಘಟನೆಗಳ ಮುಖ್ಯಸ್ಥರು ಹಾಗೂ ಸ್ಥಳೀಯರು ರೈಲು ನಿಲ್ದಾಣ ನಿರ್ಮಿಸುವಂತೆ ಕಳೆದ ಎರಡು ವರ್ಷಗಳಿಂದ ಮನವಿ ಮಾಡುತ್ತ ಬಂದಿದ್ದರು. ಹೀಗಾಗಿ ನೈಋತ್ಯ ರೈಲ್ವೆಯ ಕೃಷ್ಣರಾಜಪುರ ಮತ್ತು ವೈಟ್​ಫೀಲ್ಡ್  ರೈಲು ನಿಲ್ದಾಣಗಳ ನಡುವಿನ ಹೂಡಿ ಗೇಟ್‌ ಬಳಿ ರೈಲು ನಿಲ್ದಾಣವನ್ನು ನಿರ್ಮಿಸಲಾಗಿದೆ.

ಇದಕ್ಕಾಗಿ ಸಂಸದ ಪಿ.ಸಿ.ಮೋಹನ್‌ ಅವರು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ₹2.86 ಕೋಟಿ ಅನುದಾನ ನೀಡಿದ್ದಾರೆ. ಈ ಪೈಕಿ ₹1.75 ಕೋಟಿ ವೆಚ್ಚದಲ್ಲಿ ಎರಡು ಪ್ಲ್ಯಾಟ್‌ಫಾರಂಗಳು, ಟಿಕೆಟ್‌ ಬುಕಿಂಗ್‌ ಕೇಂದ್ರ, ತಂಗುದಾಣಗಳು, ಬೆಂಚ್‌ಗಳು, ವಿದ್ಯುತ್‌ ದೀಪಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಉಳಿದ ₹1.12 ಕೋಟಿ ವೆಚ್ಚದಲ್ಲಿ ಎರಡು ಪ್ಲ್ಯಾಟ್‌ಫಾರಂಗಳಿಗೆ ಸಂಪರ್ಕ ಕಲ್ಪಿಸಲು ಸ್ಕೈವಾಕ್‌ಗಳನ್ನು ನಿರ್ಮಿಸಲಾಗುತ್ತಿದೆ.

ನೂತನ ರೈಲು ನಿಲ್ದಾಣವನ್ನು ಉದ್ಘಾಟಿಸಿದ ಸಂಸದ ಪಿ.ಸಿ. ಮೋಹನ್‌ ಮಾತನಾಡಿ, ‘ಹೂಡಿ ಪ್ರದೇಶದಲ್ಲಿ ಐ.ಟಿ ಕಂಪೆನಿಗಳು ಹೆಚ್ಚಾಗಿದ್ದು, ಇಲ್ಲಿಗೆ ನಗರದ ಬೇರೆ ಬೇರೆ ಕಡೆಗಳಿಂದ ಬರುತ್ತಾರೆ. ಆದರೆ, ಸಂಚಾರ ದಟ್ಟಣೆಯಿಂದ ಸಾವಿರಾರು ಉದ್ಯೋಗಿಗಳು ತೊಂದರೆ ಅನುಭವಿಸುತ್ತಿದ್ದರು. ಈಗ ರೈಲಿನಲ್ಲಿ ಬೇಗ ಕಚೇರಿ ಹಾಗೂ ಮನೆಗಳಿಗೆ ಹೋಗಬಹುದು’ ಎಂದರು.

‘ನಗರದಲ್ಲಿ ವಾಹನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬೇಕಾದರೆ ಉಪನಗರ ರೈಲು ಯೋಜನೆ (ಸಬ್ ಅರ್ಬನ್) ಜಾರಿಗೆ ಬರಬೇಕು. ಈ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ, ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

₹1 ಕೋಟಿ ನೀಡಲು ಸಿದ್ಧ: ‘ದೊಡ್ಡನೆಕ್ಕುಂದಿ ಬಳಿ ರೈಲು ನಿಲ್ದಾಣ ನಿರ್ಮಾಣಕ್ಕೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ರೈಲ್ವೆ ಇಲಾಖೆ ಗಮನ ಹರಿಸಬೇಕು. ಈ ನಿಲ್ದಾಣದ ನಿರ್ಮಾಣಕ್ಕೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ₹1 ಕೋಟಿ ಅನುದಾನ ನೀಡಲು ಸಿದ್ಧನಿದ್ದೇನೆ’ ಎಂದು ಹೇಳಿದರು.

ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ‘ಕಾರ್ಮೆಲ್‌ರಾಮ್‌ ರೈಲು ನಿಲ್ದಾಣವನ್ನು ಅಭಿವೃದ್ಧಿ ಪಡಿಸುವ ಜತೆಗೆ ಸ್ಕೈವಾಕ್‌ ನಿರ್ಮಾಣ ಮಾಡಬೇಕು. ದೊಡ್ಡನೆಕ್ಕುಂದಿ ಹಾಗೂ ಕೊಡತಿ ಬಳಿ ರೈಲು ನಿಲ್ದಾಣ ನಿರ್ಮಿಸಬೇಕು. ಮಹದೇವಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಆರು ರೈಲ್ವೆ ಮೇಲ್ಸೇತುವೆಗಳನ್ನು (ಆರ್‌ಒಬಿ) ನಿರ್ಮಿಸಲು ರೈಲ್ವೆ ಇಲಾಖೆ ಸಿದ್ಧವಿದೆ. ಇದಕ್ಕೆ ತಗಲುವ ವೆಚ್ಚದ ಅರ್ಧ ಭಾಗವನ್ನು ಬಿಬಿಎಂಪಿ ಭರಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT