ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೋಧಕ ಶಕ್ತಿ ಬೆಳೆಸಿಕೊಂಡ ರಕ್ಕಸ ರೋಗಾಣುಗಳು

ಆರೋಗ್ಯ
Last Updated 30 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

“Bacteria could became resistant to these remarkble drugs”

ಪೆನ್ಸಿಲಿನ್‌ ಸಂಶೋಧಿಸಿದ ಅಲೆಕ್ಸಾಂಡರ್‌ ಫ್ಲೇಮಿಂಗ್‌ ಎಚ್ಚರಿಕೆಯೊಂದನ್ನು ನೀಡಿದ್ದರು. ಅವರ ಆತಂಕ ಕೇವಲ 70 ವರ್ಷಗಳಲ್ಲಿ ನಿಜವಾಗಿದೆ. ಪುರಾಣದ ಕಥೆಗಳಲ್ಲಿ ‘ಅಮರತ್ವ’ದ ಕಥೆಗಳನ್ನು ಕೇಳಿರುತ್ತೇವೆ. ಯಾವುದೇ ದಾನವ ತಪಸ್ಸು ಮಾಡಿ ದೇವತೆಗಳನ್ನು ಒಲಿಸಿಕೊಂಡ ಬಳಿಕ ಕೇಳುವ ಮೊದಲ ವರ ಎಂದರೆ, ಸಾವಿಲ್ಲದಂತೆ ಮಾಡು ಎಂಬುದು.

ದಾನವ ಅಥವಾ ದೇವತೆ ಗಳು ಅಮರತ್ವ ಹೊಂದಿದ್ದಾರೊ ಬಿಟ್ಟಿದ್ದಾರೊ ಗೊತ್ತಿಲ್ಲ. ಆದರೆ, ಭೂಸಂಕುಲಕ್ಕೆ ಕಂಟಕವಾಗಿರುವ ವಿಭಿನ್ನ ರೀತಿಯ ವೈರಾಣುಗಳಂತೂ ಮೃತ್ಯುವನ್ನೇ ಜಯಿಸಿವೆ. ಅಷ್ಟೇ ಅಲ್ಲ, ಮಾನವ, ಪ್ರಾಣಿ ಮತ್ತು ಸಸ್ಯಸಂಕುಲಕ್ಕೇ  ಮಾರಕವಾಗಿ ಪರಿಣಮಿಸಿವೆ. ಅಗೋಚರ, ಅವ್ಯಕ್ತ ದಾಳಿ ನಡೆಸಲಾರಂಭಿಸಿವೆ.

ಇತ್ತೀಚೆಗಷ್ಟೆ ವಿಶ್ವ ಆರೋಗ್ಯ ಸಂಸ್ಥೆ (WHO)  ಮೊಳಗಿಸಿದ ಎಚ್ಚರಿಕೆ ಗಂಟೆ, ನಮ್ಮದೇ ಭ್ರಮಾತ್ಮಕ ಜಂಜಾಟದಲ್ಲಿ ಮುಳುಗಿರುವ ನಮ್ಮ ಕಿವಿಗಳಿಗೆ ತಟ್ಟದೇ ಇರಬಹುದು. ಆದರೆ, ಪರಿಸ್ಥಿತಿ ಗಂಭೀರವಾಗಿದೆ. ‘A global threat to prevention and treatment Anti–microbial resistant’ ಎಂಬ ಹೆಸರಿನಲ್ಲಿ ಕಳೆದ ವಾರವಷ್ಟೇ ವರದಿ ಬಿಡುಗಡೆ ಮಾಡಿದೆ.

ಅದರ ಪ್ರಕಾರ, ಮಾನವ, ಸಸ್ಯ ಮತ್ತು ಪ್ರಾಣಿಗಳಿಗೆ ಸೋಂಕಿನ ಕಾಯಿಲೆಯನ್ನು ಹರಡುವ ಬ್ಯಾಕ್ಟೀರಿಯಾ, ಪರಾವಲಂಬಿಗಳು, ವೈರಸ್‌ ಮತ್ತು ಫಂಗೈಗಳು ನಿರೋಧಕ ಶಕ್ತಿಗಳನ್ನು ಬೆಳೆಸಿಕೊಂಡಿವೆ. ಅವುಗಳನ್ನು ಶಕ್ತಿಹೀನಗೊಳಿಸುವ ಮತ್ತು ಕೊಲ್ಲುವ ಯಾವುದೇ ಅಸ್ತ್ರಗಳಿಲ್ಲ. ಅವುಗಳನ್ನು ‘ಸೂಪರ್‌ ಬಗ್‌’ ಎಂದೇ ಕರೆಯಲಾಗುತ್ತದೆ.

ಕೆಮ್ಮು, ನೆಗಡಿ, ಜ್ವರ ಬಂದಾಗ, ಕ್ಷಣ ಮಾತ್ರದಲ್ಲಿ ಅವುಗಳನ್ನು ಶಮನಗೊಳಿಸಿಕೊಳ್ಳಲು, ಗಂಟಲೊಳಗೆ ಗುಳಿಗೆ ಎಸೆದು ನುಂಗುವುದು, ಸಿರಪ್‌ ಸೇವಿಸುವುದು ಇಲ್ಲವೇ ಇಂಜೆಕ್ಷನ್ ಹಾಕಿಸಿಕೊಳ್ಳುವುದು  ಸಾಮಾನ್ಯ ಜನರ ಅತಿ ಸಹಜ ನಡವಳಿಕೆ.  ಇನ್ನು ಮುಂದೆ ಗುಳಿಗೆಗಳನ್ನು ನುಂಗುವುದಕ್ಕೆ ಮುನ್ನ ಎಚ್ಚರ ಇರಲಿ. 

ದೇಹದೊಳಗಿರುವ ರೋಗಾಣುಗಳ ವಿರುದ್ಧ ಸಮರ ಸಾರಿ ಅವುಗಳನ್ನು ಕೊಲ್ಲಲು ಕಳುಹಿಸುವ ವೈದ್ಯರು ರವಾನಿಸುವ ‘ಸಮರ ಸೇನಾನಿ’ಗಳು ಎಂದರೆ, ಪ್ರತಿಜೀವಿಗಳು ಅಥವಾ ಆ್ಯಂಟಿಬಯಾಟಿಕ್ಸ್‌ಗಳು.  ಇವು ಗುಳಿಗೆ ಅಥವಾ ದ್ರವರೂಪದಲ್ಲಿ ಇರುತ್ತವೆ. ಇವೇ ರೋಗಾಣುಗಳ ವಿರುದ್ಧ ಹೋರಾಡಿ ಕೊಲ್ಲುವ ರಕ್ಷಕ.

ಕಳೆದ ಹಲವು ದಶಕಗಳಲ್ಲಿ ಅಸಂಖ್ಯಮಾನವ ಜೀವಗಳನ್ನು ಉಳಿಸಿವೆ. 1945ರಲ್ಲಿ ಪೆನ್ಸಿಲಿನ್‌ ಎಂಬ ರೋಗನಿರೋಧಕವನ್ನು  ನೀಡುವ ಮೂಲಕ ದೇಹವೆಂಬ ರಣರಂಗದೊಳಗೆ ನೀಡುವ ಮೂಲಕ ರೋಗಾಣುಗಳ ವಿರುದ್ಧ ಹೋರಾಡಲು ಪ್ರತಿಜೀವಿಗಳನ್ನು ಒಳಸೇರಿಸುವ  ಪರಂಪರೆಗೆ ನಾದಿ ಹಾಡಲಾಯಿತು.

ಈಗ ರೋಗಕಾರಕಜೀವಿಗಳು ಮತ್ತು ಪ್ರತಿಜೀವಿಗಳು ಮಾನವನ ಅಂಕೆಗೆ ಸಿಗದಷ್ಟು ಶಕ್ತಿಶಾಲಿಯಾಗಿ ಬೆಳೆದಿವೆ. ಮಾನವ ದೇಹದಲ್ಲಿ ರೋಗಾಣುಗಳ ವಿರುದ್ಧ ಹೋರಾಡಿದ ಪ್ರತಿಜೀವಿಗಳು ಹಾಗೆಯೇ ಉಳಿದುಕೊಂಡು ಬಿಡುತ್ತವೆ. ಕೆಲಸವಿಲ್ಲದ ಇವುಗಳಿಂದ ಸಾಕಷ್ಟು ದುಷ್ಪರಿಣಾಮವೂ ಆಗುತ್ತಿದೆ.

ಇನ್ನೊಂದೆಡೆ ರೋಗಾಣುಗಳೂ ಪ್ರತಿ ಜೀವಿಗಳೊಂದಿಗೆ ಹೋರಾಡಿ ಕ್ರಮೇಣ ನಿರೋಧಕ ಶಕ್ತಿಯನ್ನು ಸಿದ್ಧಿಸಿಕೊಂಡಿವೆ. ಈ ವಿದ್ಯಮಾನದಿಂದ ಕಂಗೆಟ್ಟಿರುವ ವಿಜ್ಞಾನಿಗಳು, ವೈದ್ಯರು ಮುಂದೇನು ಎಂದು ಕಣ್ಣುಕಣ್ಣು ಬಿಡುವಂತಾಗಿದೆ. ಇದರ ಅರಿವಿಲ್ಲದ ಜನಸಾಮಾನ್ಯರು ರೋಗಗಳಿಗೆ ತುತ್ತಾಗಿ, ಚಿಕಿತ್ಸೆಗೆ ಸ್ಪಂದಿಸದೇ ಇಹಲೋಕ ತ್ಯಜಿಸುತ್ತಿದ್ದಾರೆ. ಹೀಗೆ ಸಾಯುತ್ತಿರುವವರ ನಿಖರ ಸಂಖ್ಯೆ ಸಿಗುತ್ತಿಲ್ಲ.

ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ರೋಗ ನಿರೋಧಕ ಬ್ಯಾಕ್ಟೀರಿಯಾದಿಂದಾಗಿ ಆಗ ತಾನೇ ಜನಿಸಿದ ಶಿಶುಗಳು ಮತ್ತು ಬಾಣಂತಿಯರು ಸಾವನ್ನಪ್ಪುವ ಸಂಖ್ಯೆ ಗಾಬರಿ ಹುಟ್ಟಿಸುವಂತಿದೆ. ಶಿಶುಗಳ ಮರಣಸಂಖ್ಯೆ ವಾರ್ಷಿಕ ನಾಲ್ಕು ಲಕ್ಷ ಮತ್ತು ಬಾಣಂತಿಯರ ಸಾವಿನ ಸಂಖ್ಯೆ 40 ಸಾವಿರ.

‘ಪ್ರಸವದ ಸಂದರ್ಭದಲ್ಲಿ ಉಂಟಾಗುವ ಸೋಂಕಿನಿಂದ ಈ ಸಾವುಗಳು ಸಂಭವಿಸುತ್ತಿವೆ.  ಈ ಸಾವು ತಡೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಲಭ್ಯವಿರುವ ಸೋಂಕು ನಿರೋಧಕ ಔಷಧಿಗಳೂ ನಾಟುತ್ತಿಲ್ಲ’ ಎನ್ನುತ್ತಾರೆ ವಿಶ್ವ ಆರೋಗ್ಯ ಸಂಸ್ಥೆಯ ನವಜಾತ ಶಿಶು, ಮಕ್ಕಳ ಆರೋಗ್ಯದ ನಿರ್ದೇಶಕ ಡಾ. ಅಂಥೋನಿ ಕುಸ್ಸೆಲ್ಲೊ. ಇದು ಜಾಗತಿಕ ಮಾನವ ಆರೋಗ್ಯ ಸ್ಥಿತಿಯ ನೀರ್ಗಲ್ಲ ತುದಿಯಷ್ಟೇ.

ಭಾರತ ಸೇರಿದಂತೆ ವಿಶ್ವದ ಎಲ್ಲೆಡೆ ಎಚ್‌ಐವಿ, ಕ್ಷಯ, ಡೆಂಗಿ, ಚಿಕುನ್‌ಗುನ್ಯ, ಮಲೇರಿಯಾಗಳಿಗೆ ಚಿಕಿತ್ಸೆ ಪರಿಣಾಮಕಾರಿ ಆಗದೇ ರೋಗಿಗಳು ಸಾವನ್ನಪ್ಪುವ ಪ್ರಮಾಣ ಹೆಚ್ಚಳವಾಗಿದೆ. ವೈದ್ಯರ ನಿರ್ಲಕ್ಷ್ಯ ಎಂದು ಮೇಲ್ನೋಟಕ್ಕೆ ಆರೋಪಿಸಲಾಗುತ್ತದೆ.

ಆದರೆ ಸತ್ಯವೇ ಬೇರೆ. ರೋಗಾಣುಗಳು ನಿರೋಧಕ ಶಕ್ತಿ ಯನ್ನು ಪಡೆದುಕೊಂಡ ಪರಿಣಾಮ ರೋಗಿ  ಚಿಕಿತ್ಸೆಗೆ  ಸ್ಪಂದಿಸದೇ ಅಂತ್ಯ ಕಾಣುತ್ತಿದ್ದಾನೆ. ಇದು ಸಾಮಾನ್ಯ ಜನರಿಗೆ ಅರ್ಥವಾಗದ ಮತ್ತು ಅರ್ಥ ಮಾಡಿಸಲಾಗದ ಕಗ್ಗಂಟಿನ ಸಂಗತಿಯಾಗಿಯೇ ಉಳಿದಿದೆ.

‘ರೋಗಾಣುಗಳು ಔಷಧಗಳಿಗೆ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಿರುವುದು ಜಾಗತಿಕ ಆರೋಗ್ಯ ವಿಜ್ಞಾನಕ್ಷೇತ್ರಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಗಂಭೀರ ಸಮಸ್ಯೆಯನ್ನು ಎದುರಿಸಲು ಜಗತ್ತಿನ ವಿಜ್ಞಾನಸಮುದಾಯ ಒಗ್ಗಟ್ಟಿನಿಂದ ಟೊಂಕಕಟ್ಟಿ ನಿಲ್ಲಬೇಕಾಗಿದೆ. ವಿಶ್ವದ ಎಲ್ಲ ದೇಶಗಳು ಪರಸ್ಪರ ಸಹಕಾರದ ಹಸ್ತ ಚಾಚಬೇಕು’ ಎಂದು ವಿಶ್ವ ಸಂಸ್ಥೆ ಮನವಿ ಮಾಡಿದೆ.

ವಿಜ್ಞಾನಲೋಕಕ್ಕೇ ದಂಗುಬಡಿಸುವ ಈ ವಿದ್ಯಮಾನದ ಪರಿಣಾಮಗಳು ವ್ಯಾಪಕ ಮತ್ತು ಆತಂಕಕಾರಿ. ಮುಖ್ಯವಾಗಿ ಆ್ಯಂಟಿಬಯೊಟಿಕ್‌ ಇಲ್ಲದೇ  ದೊಡ್ಡ ಮಟ್ಟದ ಸರ್ಜರಿಯನ್ನು ಮಾಡಲು ಸಾಧ್ಯವಿಲ್ಲ. ಕ್ಯಾನ್ಸರ್‌ಕೋಶಗಳನ್ನು ಕೊಲ್ಲಲು ನಡೆಸುವ ಕಿಮೋಥೆರಪಿಯ ಕ್ರಿಯೆ ವಿಫಲವಾಗಬಹುದು.

ರೋಗಿಯ ಸಾವು– ಬದುಕಿನ ಹೋರಾಟದಲ್ಲಿ ಗೆಲುವು ಆತನ  ಅದೃಷ್ಟವನ್ನಷ್ಟೇ ಅವಲಂಬಿಸಿರುತ್ತದೆ. ಇನ್ನೂ  ಗಂಭೀರ ವಿಚಾರವೆಂದರೆ, ರೋಗಿಗಳ ಆರೋಗ್ಯ–ಆರೈಕೆಗೆ ಆಗುವ ಖರ್ಚು– ವೆಚ್ಚ ಹಲವು ಪಟ್ಟು ಹೆಚ್ಚುತ್ತದೆ. ರೋಗಿಯಲ್ಲಿ ಸೋಂಕು ಬಹಳ ಕಾಲ ಉಳಿಯುವುದು ಮತ್ತು ಕಾಯಿಲೆ ವಾಸಿಯಾಗದೇ ಇರುವುದರಿಂದ ಹೆಚ್ಚುವರಿ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ.  ದುಬಾರಿ ಔಷಧಗಳಿಗೆ ಮೊರೆ ಹೋಗಬೇಕಾಗುತ್ತದೆ.

ಸೈಲೆಂಟ್‌ ಕಿಲ್ಲರ್‌ ಎನಿಸಿರುವ ಕ್ಷಯದ ರೋಗಾಣುಗಳು ಯಾವುದೇ ಸೂಚನೆ ನೀಡದೇ ದಾಳಿ ಇಟ್ಟು ಬಿಡುತ್ತವೆ. ಕ್ಷಯದ ರೋಗಾಣುಗಳಂತೂ ಈಗ ಬಹು ಔಷಧಗಳಿಗೆ  ನಿರೋಧಕಶಕ್ತಿಯನ್ನು ಪಡೆದುಕೊಂಡಿವೆ. ವಿಶ್ವದಲ್ಲಿ ಸುಮಾರು ಐದು ಲಕ್ಷ ಜನರು ಬಹು ಔಷಧಗಳ ನಿರೋಧಕಶಕ್ತಿಯ ಕ್ಷಯ ರೋಗಾಣುಗಳ ಸೋಂಕಿಗೆ ಒಳಗಾಗುತ್ತಿದ್ದಾರೆ. ಎಚ್‌ಐವಿ, ಮಲೇರಿಯಾ ರೋಗಾಣುಗಳೂ ಇದೇ ರೀತಿಯಲ್ಲಿ ಮೃತ್ಯುಂಜಯಿಗಳಾಗಿವೆ.

ರೋಗ ತರುವ ಬ್ಯಾಕ್ಟೀರಿಯಾ, ವೈರಸ್‌ ಮತ್ತು ಪರಾವಲಂಬಿಗಳು ನಿರೋಧಕ ಶಕ್ತಿಯನ್ನು ದಕ್ಕಿಸಿಕೊಳ್ಳುವುದು ವಿಶಿಷ್ಟ ರೀತಿಯಲ್ಲಿ. ಈ ಸೂಕ್ಷ್ಮಜೀವಿಗಳು ಪ್ರತಿರೋಧಕ ಶಕ್ತಿಯುಳ್ಳ ಔಷಧದ ಸಂಪರ್ಕಕ್ಕೆ ಬಂದಾಗ ಅವುಗಳ (ರೋಗಾಣುಗಳು) ಸ್ವರೂಪವೇ ಬದಲಾಗುತ್ತದೆ.

ನಿರೋಧಕಶಕ್ತಿ ಹೊಂದಿದ  ಪ್ರಮುಖ ಔಷಧಗಳೆಂದರೆ, ಆ್ಯಂಟಿಬಯೋಟಿಕ್‌, ಆ್ಯಂಟಿಫಂಗಲ್‌, ಆ್ಯಂಟಿವೈರಲ್‌, ಆ್ಯಂಟಿಮಲೇರಿಯಾ ಮತ್ತು ಅಂಥೆಲ್ಮೆನಿಟಿಕ್ಸ್‌. ಪ್ರತಿಜೀವಿಗಳನ್ನು ಹೊಂದಿದ ಈ ಔಷಧಗಳಿಗೆ ನಿರೋಧಕಶಕ್ತಿ ಬೆಳೆಸಿಕೊಳ್ಳುವ ರೋಗಾಣುಗಳೇ ಸೂಪರ್‌ಬಗ್‌ಗಳು.

ನಿರೋಧಕ ಶಕ್ತಿಯನ್ನು ಜಯಿಸಿದ ರೋಗಾಣುಗಳು ಮೇಲೆ ಯಾವುದೇ ಔಷಧವನ್ನು ಪ್ರಯೋಗಿಸಿದರೂ ಪ್ರಯೋಜನ ಆಗುವುದಿಲ್ಲ. ಆದರೆ, ರೋಗಿಯ ಸ್ಥಿತಿ  ಮಾತ್ರ ಹದಗೆಡುತ್ತಾ ಹೋಗುತ್ತದೆ. ಅಷ್ಟೇ, ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಅತಿ ಬೇಗನೇ ಹರಡುತ್ತಾ ಹೋಗುತ್ತದೆ.

ಇದಕ್ಕೆ ಪರಿಣಾಮಕಾರಿ ಚಿಕಿತ್ಸೆಯೂ ಲಭ್ಯವಿದ್ದ ಸ್ಥಿತಿ ನಿರ್ಮಾಣವಾಗಿದೆ. ಅಂತಿಮವಾಗಿ ರೋಗಿ ಸಾವಿಗೆ ಶರಣಾಗಲೇ ಬೇಕಾಗುತ್ತದೆ. ಹಲವು ಸಂದರ್ಭಗಳಲ್ಲಿ  ರೋಗಿಗಳಿಗೆ ಅಂಗಾಂಗ ಜೋಡಣೆ ಕಸಿ, ಕ್ಯಾನ್ಸರ್‌ಗೆ ಕಿಮೋಥೆರಪಿ, ಮಧುಮೇಹ ನಿರ್ವಹಣೆ ಮತ್ತು ಹಲವು ಬಗೆಯ ಶಸ್ತ್ರಚಿಕಿತ್ಸೆಗಳು ಪರಿಣಾಮಕಾರಿ ಆಗದೇ ರೋಗಿ ಸಾವಿನ ದವಡೆಗೆ ಸಿಲುಕಬೇಕಾದ ಸ್ಥಿತಿ ಬಂದಿದೆ.

ರೋಗಾಣುಗಳು ಕಾಲಾಂತರದಲ್ಲಿ ನಿರೋಧಕಶಕ್ತಿಯನ್ನು ಬೆಳೆಸಿಕೊಂಡು ಬಂದಿವೆ. ಸಾಮಾನ್ಯವಾಗಿ ವಂಶವಾಹಿಯಲ್ಲಾಗುವ ಬದಲಾವಣೆಗಳಿಂದ ಇದು ಸಂಭವಿಸುತ್ತದೆ. ಆದರೆ, ಈಗಿನ ತುರ್ತುಸ್ಥಿತಿಗೆ ಮುಖ್ಯ ಕಾರಣವೆಂದರೆ, ಪ್ರತಿರೋಧಕಗಳ ದುರ್ಬಳಕೆ ಮತ್ತು ಅತಿಯಾದ ಬಳಕೆ ಹೆಚ್ಚಾಗಿದೆ ಎನ್ನುತ್ತಾರೆ ವಿಜ್ಞಾನಿಗಳು.

ಈ ಪ್ರವೃತ್ತಿ ಕೇವಲ ಮಾನವರಲ್ಲಿ ಮಾತ್ರ ಅಲ್ಲ, ಪ್ರಾಣಿಗಳು, ಸಸ್ಯಗಳಲ್ಲಿಯೂ ಈ ಪ್ರವೃತ್ತಿ ತ್ವರಿತಗೊಂಡಿದೆ. ಸಣ್ಣ ಪುಟ್ಟ ಕೆಮ್ಮು, ನೆಗಡಿ, ಶೀತ, ತಲೆನೋವಿಗೂ  ಆ್ಯಂಟಿ ಬಯಾಟಿಕ್ಸ್‌ ತೆಗೆದುಕೊಳ್ಳುವುದು, ಪ್ರಾಣಿಗಳು ಅತಿ ಬೇಗನೆ ಬೆಳೆಯುವಂತೆ ಮಾಡಲು, ಸಸ್ಯಗಳು ಹೆಚ್ಚು ಇಳುವರಿ ನೀಡಲೆಂದು ಪೂರಕ ಪೋಷಕಾಂಶಗಳು, ಔಷಧಗಳನ್ನು ನೀಡುವುದರಿಂದ ಈ ಸಮಸ್ಯೆ  ಸೃಷ್ಟಿಯಾಗಿದೆ.

ಅರವತ್ತು–ಎಪ್ಪತ್ತು ವರ್ಷಗಳ ಹಿಂದೆ ವೈರಸ್‌ನಂತಹ ಸೂಕ್ಷ್ಮಜೀವಿಗಳು ರೋಗ ತರಲು ಕಾರಣವಾಗುತ್ತವೆ ಎನ್ನುವುದನ್ನು ಜನರು ನಂಬಿಕೊಂಡಿದ್ದರು. ಆ ಸಂದರ್ಭದಲ್ಲಿ ವೈರಸ್‌ಗಳು ಹೇಗಿರುತ್ತವೆ ಎಂಬುದೂ ಜನರಿಗೆ ಗೊತ್ತಿರಲಿಲ್ಲ.

ವೈರಸ್‌ಗಳ ಬಗ್ಗೆ ವಿಜ್ಞಾನ ಕ್ಷೇತ್ರದಲ್ಲಿ ಜನರ ಭಾವನೆಗಳೂ ಬದಲಾಗುತ್ತಲೇ ಬಂದಿವೆ. ಮೊದಲಿಗೆ ವಿಷದ ವಸ್ತು ಎಂದೂ, ಬಳಿಕ ಅವು ಜೀವರೂಪಗಳೆಂದು ಭಾವಿಸಿದ್ದರು. ಬಳಿಕ ಜೀವರಸಾಯನಿಕ ಎಂಬ ತೀರ್ಮಾನಕ್ಕೆ ಬಂದರು.

ಈಗ ಅವುಗಳನ್ನು ಜೀವ–ನಿರ್ಜೀವಿಗಳ ನಡುವಿನ ಮಧ್ಯಂತರ ರೂಪವೆಂದು ಪರಿಗಣಿಸಲಾಗಿದೆ. ಅವು ತಮ್ಮಷ್ಷಕ್ಕೆ ತಾವು ಪುನರುತ್ಪಾದನೆಗೊಳ್ಳುವ ಸಾಮರ್ಥ್ಯ ಪಡೆಯದಿದ್ದರೂ ಜೀವಕೋಶಗಳೊಳಗೆ ಸೇರಿದಾಗ  ಪುನರುತ್ಪಾದನೆಗೊಳ್ಳುವ ಸ್ಥಿತಿಯನ್ನು ತಲುಪುತ್ತವೆ. ಅತಿಥೇಯ ಜೀವಿಯ ಸ್ವಭಾವವನ್ನು ಗಣನೀಯವಾಗಿ ಬದಲಿಸುತ್ತದೆ.

***
ವಿಶ್ವವಿಖ್ಯಾತ  ರೋಗಾಣು ನಿರೋಧಕ ವಿಜ್ಞಾನಿ, ಕೇಂಬ್ರಿಜ್‌ ವಿ.ವಿ. ಉಪಕುಲಪತಿ, ಸರ್‌ ಲೆಜೇಕ್‌ ಬಾರ್ಸಿವಿಜ್‌ ಸಂದರ್ಶನ
* ರೋಗಾಣುಗಳು ಪ್ರತಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತಿರುವ ವಿದ್ಯಮಾನ ಎಷ್ಟು ಗಂಭೀರವಾಗಿದೆ?
ಭಾರತವೂ ಸೇರಿದಂತೆ ವಿಶ್ವವನ್ನು  ಕಾಡುತ್ತಿರುವ ಗಂಭಿರ ಆರೋಗ್ಯದ ಸಮಸ್ಯೆ ಎಂದರೆ, ರೋಗಾಣುಗಳೇ ಪ್ರತಿರೋಧಕ ಶಕ್ತಿಗಳನ್ನು ಬೆಳೆಸಿಕೊಂಡಿರುವುದು. ಅಂದರೆ, ರೋಗಕಾರಕ ಸೂಕ್ಷ್ಮಜೀವಿಗಳು ಎಲ್ಲ ಬಗೆಯ ಔಷಧಿಗಳಿಗೂ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿರುವುದೇ ಈಗ ಜಗತ್ತಿನ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಕ್ಷಯ, ಎಚ್‌ಐವಿ, ಮಲೇರಿಯಾ ಸೇರಿದಂತೆ ಹಲವು ಬಗೆಯ ಮಾರಕ ಸೋಂಕುರೋಗಗಳಿಗೆ ಸೂಕ್ಷ್ಮಜೀವಿಗಳು ಯಾವುದಕ್ಕೂ ಬಗ್ಗದ ಸ್ಥಿತಿ ತಲುಪಿರುವುದು ಆತಂಕಕಾರಿಯಾಗಿದೆ.


* ಇದಕ್ಕೆ ಕಾರಣಗಳೇನು?
ರೋಗಾಣುಗಳು ಔಷಧನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ಮುಖ್ಯ ಕಾರಣವೇ ಜನರು. ಆವಶ್ಯಕತೆ ಇರಲಿ, ಬಿಡಲಿ ರೋಗನಿರೋಧಕ ಔಷಧವನ್ನು ಸೇವಿಸುತ್ತಾರೆ. ಸಾಕಷ್ಟು ಸಂದರ್ಭಗಳಲ್ಲಿ ಅವುಗಳ ಆವಶ್ಯಕತೆಯೇ ಇರುವುದಿಲ್ಲ.

ಆದರೆ, ಯಾಂತ್ರಿಕವಾಗಿ ಗುಳಿಗೆಗಳನ್ನು ನುಂಗುವುದನ್ನು ಬಿಡುವುದಿಲ್ಲ. ವೈವಿಧ್ಯಮಯ ರೋಗಾಣುಗಳ ಸೃಷ್ಟಿಗೆ ನಾವೇ ಕಾರಣಾಗುತ್ತಿದ್ದೇವೆ.  ಇದರ ವ್ಯತಿರಿಕ್ತ ಪರಿಣಾಮವನ್ನು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿ ಜನರಿಲ್ಲ.

* ಮುಂದಿನ ಪರಿಣಾಮಗಳೇನು?
ಈಗಲೇ ಅದರ ಪರಿಣಾಮಗಳು ಕಾಣಿಸಿಕೊಳ್ಳಲಾರಂಭಿಸಿದೆ. ಮುಂದೇನು ಮಾಡಬೇಕು ಎಂಬುದು ತೋಚದ ಸ್ಥಿತಿ ಇದೆ. ಆರೋಗ್ಯದ ಕುರಿತು ಜನರ ಚಿಂತನಾಕ್ರಮದಲ್ಲೇ ಬದಲಾವಣೆ ಆಗಬೇಕಾಗಿದೆ.

ಕೃಷಿಗಾಗಿ  ಅಧಿಕ ಇಳುವರಿ ಪಡೆಯಲೆಂದು ಟನ್‌ಗಟ್ಟಲೆ ಆ್ಯಂಟಿ–ಬಯಾಟಿಕ್ಸ್‌ಗಳನ್ನು ಬಳಸಲಾಗುತ್ತಿದೆ. ಕಳೆದ 30 ವರ್ಷಗಳಿಂದೀಚೆಗೆ ಹೊಸ ಬಗೆಯ ಸೂಕ್ಷ್ಮ ಜೀವಿಗಳು ಮಾನವನ ಆರೋಗ್ಯಕ್ಕೆ ಬೆದರಿಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT