ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನು ಕಣ್ಣಲ್ಲಿ ಗಾಂಧಿ ಬಿಂಬಗಳು

Last Updated 30 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಗಾಜನ್ನು ಹಾದು ಇನ್ನಷ್ಟು ಮೃದುಗೊಂಡ ಬೆಳಕು ರೈಲಿನ ಒಳಾಂಗಣದಲ್ಲಿ ನೆರಳು ಬೆಳಕಿನ ಚಿತ್ರ ಬಿಡಿಸಿದೆ. ಬೆಳಕಿನ ಶುದ್ಧತೆಯನ್ನೇ ಹೀರಿಕೊಂಡಂಥ ಬೆಳ್ಳನೆಯ ವಸ್ತ್ರಹಾಸಿ–ಹೊದ್ದುಕೊಂಡ ಆ ಹಿರಿಯ ಜೀವ ಹಾಸಿಗೆಯ ಮೇಲೆ ಈಗಷ್ಟೇ ನಿದ್ರೆಗೆ ಜಾರಿದೆ. ಓದುತ್ತೋದುತ್ತ ಪುಸ್ತಕವನ್ನು ಹಿಡಿದುಕೊಂಡೇ ನಿದ್ರೆ ಹೋದ ಮಗುವಿನ ಹಾಗೆ, ಅಂಥ ನಿದ್ರೆಯಲ್ಲಿಯೂ ಏನನ್ನೋ ಧ್ಯಾನಿಸುತ್ತಿರುವ ಹಾಗೆ ಕಣ್ಣುಗಳು ಮುಚ್ಚಿವೆ. ಮಚ್ಚಿದ ಎವೆಗಳ ಆವರಿಸಿದ ಕನ್ನಡಕ ಇದ್ದ ಹಾಗೇ ಇದೆ, ಹಣೆಯ ಮೇಲಿನ ಎರಡು ಮತ್ತರ್ಧ ನೆರಿಗೆಯೂ...

ಮಹಾತ್ಮ ಗಾಂಧಿ ಅವರ ಈ ಅಪರೂಪದ ಚಿತ್ರವೇ ಸಾಕು, ಕನು ಗಾಂಧಿ ಅವರ ಕ್ಯಾಮೆರಾ ಚಳಕವನ್ನು  ಬಿಂಬಿಸಲು.
ಅದಷ್ಟೇ ಅಲ್ಲ, ಧ್ಯಾನಸ್ಥ ಮನಸ್ಥಿತಿಯಲ್ಲಿ ಚರಕದಲ್ಲಿ  ನೇಯುತ್ತಿರುವುದು, ಯಾರೊಂದಿಗೋ ದೂರವಾಣಿ ಸಂಭಾಷಣೆಯಲ್ಲಿ ನಿರತರಾಗಿರುವುದು, ರವೀಂದ್ರನಾಥ್‌ ಟ್ಯಾಗೋರ್‌ ಅವರೊಂದಿಗಿನ ಅಪೂರ್ವ ಕ್ಷಣ, ಜವಾಹರಲಾಲ್‌ ನೆಹರೂ ಜತೆಗಿನ ಸಂವಾದ ಹೀಗೆ ರಾಷ್ಟ್ರಪಿತ ಮೋಹನದಾಸ ಕರಮಚಂದ ಗಾಂಧಿ ಅವರ ಬದುಕಿನ ಹಲವು ಅಪರೂಪದ ಖಾಸಗಿ ಮತ್ತು ಸಾರ್ವಜನಿಕ ಬದುಕಿನ ಚಿತ್ರಗಳನ್ನು ಕನು ಗಾಂಧಿ ಸೆರೆಹಿಡಿದಿದ್ದಾರೆ.

ಕನು ಗಾಂಧಿ ಮಹಾತ್ಮ ಗಾಂಧೀಜಿಯವರ ಸೋದರಳಿಯ ನರನ್‌ ಗಾಂಧಿ ಮತ್ತು ಜಮುನಾ ಗಾಂಧಿ ಅವರ ಮಗ. ಗಾಂಧೀಜಿಯವರ ಸಬರಮತಿ ಆಶ್ರಮದಲ್ಲಿಯೇ ಬಾಲ್ಯವನ್ನು ಕಳೆದ ಅವರು ತಮ್ಮ ಹದಿನೈದನೇ ವರ್ಷದಲ್ಲಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಬಂಧನಕ್ಕೂ ಒಳಗಾಗಿದ್ದರು.

ನಂತರ ಗಾಂಧೀಜಿ ವಾರ್ಧಾದ ಹೊರವಲಯದ ಸಣ್ಣಹಳ್ಳಿಯಲ್ಲಿ ಕಟ್ಟಿದ ‘ಸೇವಾಗ್ರಾಮ’ದಲ್ಲಿ ಅವರ ಸೇವಕನಾಗಿ, ಸೇವಾಶ್ರಮದ ಉಸ್ತುವಾರಿ ಗುಮಾಸ್ತನಾಗಿ ಕೆಲಸ ನಿರ್ವಹಿಸಿದವರು. ಕನು ಗಾಂಧಿ ಅವರಿಗೆ ಛಾಯಾಗ್ರಹಣದ ಬಗ್ಗೆ ಆಸಕ್ತಿ ಮೊಳೆತಿದ್ದೂ ಸೇವಾಗ್ರಾಮದಲ್ಲಿದ್ದಾಗಲೇ. ವಿನೋಬಾ ಭಾವೆ ಅವರ ಸಹೋದರ ಶಿವಾಜಿ ಸೇವಾಗ್ರಾಮಕ್ಕೆ ಭೇಟಿ ಕೊಟ್ಟಾಗ ಸೇವಾಶ್ರಮದಲ್ಲನ ಚಟುವಟಿಕೆಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಉತ್ತೇಜಿಸಿದ್ದೂ ಅವರಲ್ಲಿ ಇನ್ನಷ್ಟು ಆಸಕ್ತಿ ಹುಟ್ಟಲು ಕಾರಣವಾಯ್ತು.

ಆದರೆ ಅದಕ್ಕ ಬೇಕಾದ ಪರಿಕರಗಳು ಇರಲಿಲ್ಲ. ಆಗ ಅವರು ಕನು ಗಾಂಧಿಗೆ ಸಹಾಯಕ್ಕೆ ಬಂದವರು ಘನಶ್ಯಾಮದಾಸ್‌ ಬಿರ್ಲಾ. ಜಿ.ಡಿ. ಬಿರ್ಲಾ ಕನು ಗಾಂಧಿ ಅವರಿಗೆ ₹ 100 ಕೊಡುಗೆಯಾಗಿ ನೀಡಿದರು. ಅದರಿಂದ ಒದು ರೋಲಿಫೆಕ್ಸ್‌ ಕ್ಯಾಮೆರಾ ಮತ್ತು ಫಿಲ್ಮ್‌ ರೋಲ್‌ ತೆಗೆದುಕೊಂಡು ಕನು ಗಾಂಧಿ ಫೋಟೊಗ್ರಫಿ ಆರಂಭಿಸಿದರು.

ಮೂರು ನಿಬಂಧನೆಗಳು
ಗಾಂಧೀಜಿಯವರು ಮೂರು ನಿಬಂಧನೆಗಳನ್ನು ವಿಧಿಸಿ ಕನು ಗಾಂಧಿ ತಮ್ಮ ಫೋಟೊ ತೆಗೆಯಲು ಅನುಮತಿ ನೀಡಿದ್ದರು.
ಆ ನಿಯಮಗಳೆಂದರೆ,
1) ಕ್ಯಾಮೆರಾ ಫ್ಲಾಶ್‌ ಉಪಯೋಗಿಸಬಾರದು.
2) ಛಾಯಾಗ್ರಹಣಕ್ಕೆ ಫೋಸ್‌ ಕೊಡುವಂತೆ ಕೇಳಬಾರದು.
3) ಆಶ್ರಮದಿಂದ ಛಾಯಾಗ್ರಹಣಕ್ಕೆ ಯಾವುದೇ ಶುಲ್ಕ ಪಡೆಯುವಂತಿಲ್ಲ. ತನ್ನ ಫೋಟೊಗ್ರಫಿಯ ಖರ್ಚುಗಳನ್ನು ತಾನೇ ನೋಡಿಕೊಳ್ಳಬೇಕು.
ಈ ಒಪ್ಪಂದವನ್ನು ಒಪ್ಪಿಕೊಂಡೇ ಕನು ಗಾಂಧಿ ಚಿತ್ರಗಳನ್ನು ತೆಗೆಯಲಾರಂಭಿಸಿದರು.

ಗಾಂಧೀಜಿಯವರ ಖಾಸಗಿ ಸಿಬ್ಬಂದಿಗಳಲ್ಲಿ ಕನು ಗಾಂಧಿ ಕೂಡ ಒಬ್ಬರಾಗಿದ್ದರಿಂದ ಅವರ ಬದುಕಿನ ಅನೇಕ ಖಾಸಗಿ ಕ್ಷಣಗಳನ್ನು ಸೆರೆಹಿಡಿಯಲು ಅವರಿಗೆ ಸಾಧ್ಯವಾಯಿತು. ಈ ಚಿತ್ರಗಳು ಇಂದಿಗೂ ಒಂದು ಮಹತ್ವದ ದಾಖಲೆಯಾಗಿ ಉಳಿದಿವೆ. ಗಾಂಧೀಜಿಯವರ ಕುರಿತಾದ ಹಲವಾರು ಪುಸ್ತಕಗಳಲ್ಲಿ ಈ ಫೋಟೊಗಳು ಬಳಕೆಯಾಗಿವೆ.

ಗಾಂಧೀಜಿ ಅವರ ಬದುಕಿನ ಕೊನೆಯ 10 ವರ್ಷಗಳ ಅನೇಕ ಮಹತ್ವದ ಘಟನೆಗಳು, ಗಳಿಗೆಗಳು ಕನು ಗಾಂಧಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕೆಲವು ಸಲ ಗಾಂಧೀಜಿ ಫೋಟೊ ತೆಗೆಸಿಕೊಳ್ಳಲು ಒಪ್ಪಿಕೊಳ್ಳುತ್ತಿರಲಿಲ್ಲ. ಆದ್ದರಿಂದಲೇ ಮಹಾತ್ಮ  ತನ್ನ ಕೊನೆಯ ಕ್ಷಣಗಳಲ್ಲಿ ಪುಣೆಯ ಆಗಾ ಖಾನ್‌ ಅರಮನೆಯಲ್ಲಿ ಮಡದಿ ಕಸ್ತೂರ ಬಾ ಅವರ ತೊಡೆಯ ಮೇಲೆ ಮಲಗಿರುವ ಚಿತ್ರಗಳನ್ನು ಸೆರೆಹಿಡಿಯಲು ಕನು ಅವರಿಗೆ ಸಾಧ್ಯವಾಗಲಿಲ್ಲ.

ಕನೂ ಗಾಂಧಿ ಛಾಯಾಚಿತ್ರ ಪುಸ್ತಕ
2015ರಲ್ಲಿ ದೆಹಲಿಯ ನಝರ್‌ ಪ್ರತಿಷ್ಠಾನ ‘ಕನುಸ್‌ ಗಾಂಧಿ’ ಎಂಬ ಹೆಸರಿನಲ್ಲಿ ಕನು ಗಾಂಧಿ ಛಾಯಾಚಿತ್ರಗಳನ್ನು ಸಂಗ್ರಹಿಸಿ, ಸಂಸ್ಕರಿಸಿ ಆಯ್ದ ಛಾಯಾಚಿತ್ರಗಳ ಪುಸ್ತಕವನ್ನು ಪ್ರಕಟಿಸಿದೆ. ಇದು ನಝರ್‌ ಫೋಟೊಗ್ರಫಿ ಮೋನೋಗ್ರಾಫ್‌ ಸರಣಿಯ ಮೂರನೇ ಪ್ರಕಟಣೆಯಾಗಿದೆ.
ನಝರ್‌ ಫೌಂಡೇಷನ್‌ನ ಕಲಾ ನಿರ್ವಾಹಕರಾದ ಪ್ರಶಾಂತ್‌ ಪಂಜಾರ್‌ ಮತ್ತು ಸಂಜೀವ್‌ ಸೇಥಿ ಅವರು ಈ ಪುಸ್ತಕವನ್ನು ರೂಪಿಸಿದ್ದಾರೆ. www.amazon.in ಜಾಲತಾಣದ ಮೂಲಕ ಪುಸ್ತಕವನ್ನು ಕೊಳ್ಳಬಹುದು.

ಮಹತ್ವದ ಛಾಯಾಗ್ರಾಹಕನ ಸ್ಮರಣೆ
ಕನು ಗಾಂಧಿ ಬಹಳ ಮಹತ್ವ ಛಾಯಾಗ್ರಾಹಕ. ಆದರೆ ಅವರಿಗೆ ಸಲ್ಲಬೇಕಾದ ಮನ್ನಣೆ ಸಂದಿಲ್ಲ. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದಲೇ ನಾವು ‘ಕನುಸ್‌ ಗಾಂಧಿ’ ಎಂಬ ಛಾಯಾಚಿತ್ರ ಪುಸ್ತಕ ಪ್ರಕಟಿಸಿದ್ದೇವೆ. ಸಾಧ್ಯವಾದಷ್ಟೂ ಹೆಚ್ಚಿನ ಜನರು ಕನು ಗಾಂಧಿ ತೆಗೆದ ಮಹಾತ್ಮ ಗಾಂಧೀಜಿ ಅವರ ಚಿತ್ರಗಳನ್ನು ನೋಡಲು ಸಾಧ್ಯವಾಗಬೇಕು ಎಂಬ ಉದ್ದೇಶದಿಂದ  ಆ ಛಾಯಾಚಿತ್ರಗಳ ಪ್ರದರ್ಶನವನ್ನು ಎನ್‌ಜಿಎಂಎದಲ್ಲಿ ಪ್ರದರ್ಶನ ಏರ್ಪಡಿಸಿದ್ದೇವೆ.
ಪ್ರಶಾಂತ್‌ ಪಂಜಾರ್‌, ಕ್ಯುರೇಟರ್

ಪ್ರದರ್ಶನದ ವಿವರಗಳು
‘ಕನುಸ್‌ ಗಾಂಧಿ’ ಪುಸ್ತಕದಿಂದ ಆಯ್ದ ಛಾಯಾಚಿತ್ರಗಳನ್ನು ಅದೇ ಹೆಸರಿನಲ್ಲಿ ನಗರದ ರಾಷ್ಟ್ರೀಯ ಆಧುನಿಕ ಕಲಾಗ್ಯಾಲರಿಯಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಗಾಂಧಿ ಜಯಂತಿ (ಅಕ್ಟೋಬರ್‌ 2) ದಿನ ಸಂಜೆ 6 ಗಂಟೆಗೆ ಪ್ರದರ್ಶನ ಉದ್ಘಾಟನೆಗೊಳ್ಳಲಿದೆ. ಶೋಭಾ ನಂಬಿಸನ್‌ ಅವರು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಕೊನೆಯ ದಿನ: ಅಕ್ಟೋಬರ್‌ 30.

ಸಮಯ: ಬೆಳಿಗ್ಗೆ 10 ರಿಂದ ಸಂಜೆ 5 (ಸೋಮವಾರ ರಜೆ)
ವಿಳಾಸ: ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿ, ಮಾಣಿಕ್ಯವೇಲು ಮ್ಯಾನ್‌ಷನ್‌, ಅರಮನೆ ರಸ್ತೆ.  ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT