ಕಾವೇರಿ ನಿರ್ವಹಣಾ ಮಂಡಳಿ ಎಂದರೇನು?

7

ಕಾವೇರಿ ನಿರ್ವಹಣಾ ಮಂಡಳಿ ಎಂದರೇನು?

ಡಿ.ಉಮಾಪತಿ
Published:
Updated:
ಕಾವೇರಿ ನಿರ್ವಹಣಾ ಮಂಡಳಿ ಎಂದರೇನು?

ನವದೆಹಲಿ: ಕಾವೇರಿ ನೀರಿನ ಹಂಚಿಕೆಯ 2007ರ ತನ್ನ ಐತೀರ್ಪನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕಾವೇರಿ ಜಲವಿವಾದ ನ್ಯಾಯಮಂಡಳಿ ಶಿಫಾರಸು ಮಾಡಿರುವ ಮಂಡಳಿಯಿದು. ಕಾವೇರಿ ಕಣಿವೆಯ ಕೇರಳ, ಕರ್ನಾಟಕ ಹಾಗೂ ತಮಿಳುನಾಡು ತಮ್ಮ ಜಲಾಶಯಗಳನ್ನು ಇದೇ ಮಂಡಳಿಯ ಉಸ್ತುವಾರಿ ಮತ್ತು ಮಾರ್ಗದರ್ಶನದಲ್ಲೇ ನಿರ್ವಹಿಸಬೇಕು.ಕಾವೇರಿ ಜಲಾಶಯಗಳನ್ನು ಈ ಮಂಡಳಿ ನೇರವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳುವುದೇ?

ನೇರ ಸುಪರ್ದಿಗೆ ತೆಗೆದುಕೊಳ್ಳುವ ಪ್ರಸ್ತಾಪ ಇಲ್ಲ. ತಮಿಳುನಾಡು, ಕೇರಳ, ಕರ್ನಾಟಕ ಹಾಗೂ ಪುದುಚೆರಿಯ ಪೈಕಿ ಯಾವುದೇ ಸರ್ಕಾರ ನ್ಯಾಯಮಂಡಳಿಯ ಐತೀರ್ಪಿನ ಜಾರಿಗೆ ಸಹಕಾರ ನೀಡದೆ ಹೋದರೆ ಮಂಡಳಿಯು ಕೇಂದ್ರ ಸರ್ಕಾರದ ನೆರವನ್ನು ಕೋರಬಹುದು. ಕಾವೇರಿ ಜಲವಿವಾದ ನ್ಯಾಯಮಂಡಳಿಯ ಐತೀರ್ಪನ್ನು ಜಾರಿಗೊಳಿಸಲು ಅಗತ್ಯ ಬಿದ್ದರೆ ಮಂಡಳಿ ಅಥವಾ ಮಂಡಳಿಯ ಸದಸ್ಯ ಅಥವಾ ಪ್ರತಿನಿಧಿ ಕಾವೇರಿ ಕೊಳ್ಳದ ಯಾವುದೇ ಜಲಾಶಯದ ಯಾವುದೇ ಭಾಗವನ್ನು ಪ್ರವೇಶಿಸುವ ಅಧಿಕಾರ ಹೊಂದಿರುತ್ತಾನೆ.ನೀರು ಬಿಡದಿದ್ದರೆ ನಿರ್ವಹಣಾ ಮಂಡಳಿ ಏನು ಕ್ರಮ ಕೈಗೊಳ್ಳಲು ಬರುತ್ತದೆ.ನಿರ್ದಿಷ್ಟ ರಾಜ್ಯ ತಾನು ಬಿಡುಗಡೆ ಮಾಡಬೇಕಾದ ಪ್ರಮಾಣದ ನೀರನ್ನು ಬಿಡುಗಡೆ ಮಾಡದೆ ಹೋದರೆ ಮಂಡಳಿ ಸೂಕ್ತ ಕ್ರಮ ಜರುಗಿಸುತ್ತದೆ. ನೀರು ಬಿಡದಿರುವ ರಾಜ್ಯ ಮಂಡಳಿಯ ಮುಂದೆ ಮಂಡಿಸುವ ನೀರಿನ ಬೇಡಿಕೆಯ ಪ್ರಮಾಣವನ್ನು ಖೋತಾ ಮಾಡುವ ಅಧಿಕಾರ ಹೊಂದಿರುತ್ತದೆ. ಉದಾಹರಣೆಗೆ ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರನ್ನು ಕರ್ನಾಟಕ ಬಿಡುಗಡೆ ಮಾಡದಿದ್ದರೆ, ಬಿಡುಗಡೆ ಮಾಡಿಲ್ಲದ ಪ್ರಮಾಣದ ನೀರನ್ನು ಕರ್ನಾಟಕದ ಬೇಡಿಕೆಯಿಂದ ಖೋತಾ ಮಾಡಲಾಗುವುದು.ನಿರ್ವಹಣಾ ಮಂಡಳಿಯ ರಚನೆಗೆ ತಮಿಳುನಾಡು ಉತ್ಸುಕತೆ ತೋರಿರುವುದು ಯಾಕೆ?

ಕಾವೇರಿ ಕಣಿವೆಯ ಮೇಲ್ಭಾಗದಲ್ಲಿರುವ ಕರ್ನಾಟಕ ಎಂದಿನಂತೆ ಮಳೆ ಬಿದ್ದ ವರ್ಷಗಳಲ್ಲಿ ಪ್ರತಿವರ್ಷ 192 ಟಿಎಂಸಿ ಅಡಿಗಳಷ್ಟು ನೀರನ್ನು ತಮಿಳುನಾಡಿಗೆ ತನ್ನ ಜಲಾಶಯಗಳಿಂದ ಹರಿಸಬೇಕಿದೆ. ಹೀಗಾಗಿ ನಾಲ್ಕೂ ಜಲಾಶಯಗಳು ಮಂಡಳಿಯ ಉಸ್ತುವಾರಿ ಇಲ್ಲವೇ ನೇರ ನಿಯಂತ್ರಣಕ್ಕೆ ಒಳಪಡಲಿವೆ. ಕಣಿವೆಯ ಕೆಳಭಾಗದಲ್ಲಿರುವ ತಮಿಳುನಾಡು ತನ್ನ ಜಲಾಶಯಗಳಿಂದ ಪುದುಚೇರಿಗೆ ಹರಿಸಬೇಕಿರುವ ನೀರಿನ ಪ್ರಮಾಣ ಕೇವಲ ಏಳು ಟಿಎಂಸಿ ಅಡಿಗಳು. ಹೀಗಾಗಿ ನಿರ್ವಹಣಾ ಮಂಡಳಿಯ ಬಿಸಿ ತಟ್ಟುವುದು ಕರ್ನಾಟಕಕ್ಕೇ ವಿನಾ ತಮಿಳುನಾಡಿಗೆ ಅಲ್ಲ.ನಿರ್ವಹಣಾ ಮಂಡಳಿ ಪ್ರತಿ ವರ್ಷ ನೀರು ಹಂಚಿಕೆ ಮಾಡುವ ವಿಧಾನ ಯಾವುದು?

ಜಲವರ್ಷದ ಆರಂಭವಾಗುವ ಜೂನ್ ಒಂದರಂದು ಆ ತಿಂಗಳಿನಲ್ಲಿ ತಮಗೆ ಬೇಕಿರುವ ನೀರಿನ ಪ್ರಮಾಣವನ್ನು ತಮ್ಮ ಪ್ರತಿನಿಧಿಗಳ ಮೂಲಕ ಮಂಡಳಿಯ ಮುಂದೆ ಮಂಡಿಸಬೇಕು. ತಾವು ಬೇಡಿರುವಷ್ಟು ನೀರಿನ ಅಗತ್ಯ ನಿಜವಾಗಲೂ ರಾಜ್ಯಗಳಿಗೆ ಇದೆಯೇ ಇಲ್ಲವೇ ಎಂಬುದನ್ನು ಮಂಡಳಿ ಪರಿಶೀಲಿಸುವುದು. ಬೆಳೆಪದ್ಧತಿ, ನೀರಾವರಿ ಪ್ರದೇಶದ ವಿಸ್ತೀರ್ಣ, ಮಳೆಯ ಪ್ರಮಾಣ, ಜಲಾಶಯಗಳ ಒಳಹರಿವು ಹಾಗೂ ನ್ಯಾಯಮಂಡಳಿ ಮಾಡಿರುವ ಹಂಚಿಕೆಯನ್ನು ಗಮನದಲ್ಲಿ ಇರಿಸಿಕೊಂಡು ನೀರು ನೀಡಲಾಗುವುದು. ಮಳೆಯ ಅಭಾವದ ವರ್ಷಗಳಲ್ಲಿ ನಿರ್ವಹಣಾ ಮಂಡಳಿಯು ಯಾವ ಪಾತ್ರ ವಹಿಸಲಿದೆ?

ನಿಯಂತ್ರಣ ಸಮಿತಿ, ಕೇಂದ್ರೀಯ ಜಲ ಮಂಡಳಿ, ಇತರೆ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳ ನೆರವು ಪಡೆದು ಕಾವೇರಿ ಕೊಳ್ಳದಲ್ಲಿನ ಮಳೆಯ ಅಭಾವದ ಪರಿಸ್ಥಿತಿಯನ್ನು ನಿರ್ಧರಿಸುತ್ತದೆ. ಹೀಗೆ ನಿರ್ಧರಿಸಲಾಗುವ ಅಭಾವದ ಪ್ರಮಾಣವನ್ನು ರಾಜ್ಯಗಳು ಅವುಗಳ ನೀರಿನ ಪಾಲಿಗೆ ಅನುಗುಣವಾಗಿ ಹಂಚಿಕೊಳ್ಳಬೇಕಾಗುತ್ತದೆ.ಜಲಾಶಯಗಳ ಉಸ್ತುವಾರಿಯನ್ನು ಮಂಡಳಿ ಹೇಗೆ ನಿರ್ವಹಿಸುತ್ತದೆ?

ಕೇರಳದ ಬಾಣಾಸುರ ಸಾಗರ, ಕರ್ನಾಟಕದ ಹೇಮಾವತಿ, ಹಾರಂಗಿ, ಕಬಿನಿ ಹಾಗೂ ಕೃಷ್ಣರಾಜಸಾಗರ, ತಮಿಳುನಾಡಿನ ಭವಾನಿ, ಅಮರಾವತಿ ಹಾಗೂ ಮೆಟ್ಟೂರು ಜಲಾಶಯಗಳನ್ನು ಆಯಾ ರಾಜ್ಯಗಳು ಕಾವೇರಿ ನಿರ್ವಹಣಾ ಮಂಡಳಿಯ ಒಟ್ಟಾರೆ ಉಸ್ತುವಾರಿಯಲ್ಲಿ ವರ್ಷವಿಡೀ ಏಕೀಕೃತ ರೀತಿಯಲ್ಲಿ ಎಲ್ಲ ರಾಜ್ಯಗಳ ನೀರಿನ ಅಗತ್ಯಕ್ಕೆ ಅನುಗುಣವಾಗಿ ನಿರ್ವಹಿಸಬೇಕು.ಮಂಡಳಿಯ ಸ್ವರೂಪ ಕುರಿತು ನ್ಯಾಯಮಂಡಳಿ ಏನು ಹೇಳಿದೆ?

ನಿರ್ವಹಣಾ ಮಂಡಳಿಯು ಸ್ವತಂತ್ರ ಸ್ವರೂಪದ್ದಾಗಿರಬೇಕು. ಸಾಕಷ್ಟು ಅಧಿಕಾರಗಳನ್ನು ಹೊಂದಿರಬೇಕು. ನ್ಯಾಯಮಂಡಳಿ ಮಾಡಿರುವ ಹಂಚಿಕೆಯ ಪ್ರಕಾರವೇ ಕರ್ನಾಟಕ, ತಮಿಳುನಾಡು, ಪುದುಚೇರಿ ಹಾಗೂ ಕೇರಳಕ್ಕೆ ಕಾವೇರಿ ನೀರು ದೊರೆಯಬೇಕು.ಈ ಮಂಡಳಿಗೆ ಅಧ್ಯಕ್ಷರು ಸದಸ್ಯರು ಎಷ್ಟು ಮಂದಿ?

ಕೇಂದ್ರ ಸರ್ಕಾರವೇ ನೇಮಕ ಮಾಡುವ ಒಬ್ಬ ಪೂರ್ಣಾವಧಿ ಅಧ್ಯಕ್ಷ ಮತ್ತು ಇಬ್ಬರು (ಒಬ್ಬರು ನೀರಾವರಿ ಮತ್ತೊಬ್ಬರು ಕೃಷಿ ತಜ್ಞರು)  ಪೂರ್ಣಾವಧಿ ಸದಸ್ಯರಿರುತ್ತಾರೆ. ಅಧ್ಯಕ್ಷರಾಗುವವರಿಗೆ ಜಲಸಂಪನ್ಮೂಲ ನಿರ್ವಹಣೆಯಲ್ಲಿ ಕನಿಷ್ಠ 20 ವರ್ಷ ಅನುಭವ ಹೊಂದಿರಬೇಕು. ಚೀಫ್ ಎಂಜಿನಿಯರ್ ದರ್ಜೆಯ ಅಧಿಕಾರಿಯಾಗಿರಬೇಕು. ಇವರ ಅಧಿಕಾರಾವಧಿ ಮೂರು ವರ್ಷಗಳು. ಐದು ವರ್ಷಗಳಿಗೆ ವಿಸ್ತರಿಸಬಹುದು.

ಕೇಂದ್ರದ ಇಬ್ಬರು ಪ್ರತಿನಿಧಿಗಳು ಅರೆಕಾಲಿಕ ಸದಸ್ಯರಾಗಿರುತ್ತಾರೆ. ಚೀಫ್ ಎಂಜಿನಿಯರ್ ದರ್ಜೆಯ ಈ ಅರೆಕಾಲಿಕ ಸದಸ್ಯರ ಪೈಕಿ ಒಬ್ಬರು ನೀರಾವರಿ ಮತ್ತೊಬ್ಬರು ಕೃಷಿ ಕ್ಷೇತ್ರದಲ್ಲಿ ಪರಿಣಿತರಾಗಿರುತ್ತಾರೆ.ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಪುದುಚೇರಿಯ  ಪ್ರತಿನಿಧಿಗಳನ್ನು ಆಯಾ ಸರ್ಕಾರಗಳು ನಾಮನಿರ್ದೇಶನ ಮಾಡುತ್ತವೆ. ಇವರೆಲ್ಲರೂ ಮಂಡಳಿಯ ಅರೆಕಾಲಿಕ ಸದಸ್ಯರು.ಇವರೆಲ್ಲರೂ ಚೀಫ್ ಎಂಜಿನಿಯರ್ ದರ್ಜೆಯವರಾಗಿರಬೇಕು. ಈ ಯಾವುದೇ ರಾಜ್ಯಕ್ಕೆ ಸೇರಿಲ್ಲದ ಒಬ್ಬರನ್ನು ಮಂಡಳಿಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗುವುದು. ಮಂಡಳಿಯೇ ನೇಮಕ ಮಾಡುವ ಸೂಪರಿಟೆಂಡಿಂಗ್ ಎಂಜಿನಿಯರ್ ದರ್ಜೆಯ ಈ ಅಧಿಕಾರಿಯನ್ನು ಮಂಡಳಿಯೇ ನೇಮಿಸುತ್ತದೆ.ಮಂಡಳಿಯ ಸಭೆ ನಿರ್ಧಾರಗಳಿಗೆ ಮತದಾನವನ್ನು ಅವಲಂಬಿಸುತ್ತದೆಯೇ?

ಹೌದು. ಆರು ಮಂದಿ ಸದಸ್ಯರಿದ್ದರೆ ಕೋರಂ ಇದ್ದಂತೆ ಲೆಕ್ಕ. ಎಲ್ಲ ಸದಸ್ಯರು ಮತದಾನದ ಸಮಾನ ಅಧಿಕಾರ ಹೊಂದಿರುತ್ತಾರೆ. ಕೇಂದ್ರೀಯ ಜಲ ಆಯೋಗ, ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ವಿಶ್ವವಿದ್ಯಾಲಯಗಳು ಮತ್ತು ಇತರೆ ಯಾವುದೇ ಏಜೆನ್ಸಿಯ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸುವ ಅಧಿಕಾರ ಮಂಡಳಿಗೆ ಇರುತ್ತದೆ.ಈ ಮಂಡಳಿಯ ಕೇಂದ್ರಕಚೇರಿ ಎಲ್ಲಿರಬೇಕು ಎಂಬುದನ್ನು ಮಂಡಳಿಯು ರಾಜ್ಯಗಳೊಂದಿಗೆ ಸಮಾಲೋಚಿಸಿ ಕೇಂದ್ರ ಸರ್ಕಾರದ ಅನುಮೋದನೆ ಪಡೆದು ತೀರ್ಮಾನ ಮಾಡುತ್ತದೆ.ಕಾವೇರಿ ನೀರು ನಿಯಂತ್ರಣ ಸಮಿತಿ ಎಂದರೇನು?

ನಿರ್ವಹಣಾ ಮಂಡಳಿಯ ನಿರ್ದೇಶನಗಳಿಗೆ ಅನುಗುಣವಾಗಿ ಕಾವೇರಿ ನ್ಯಾಯಮಂಡಳಿಯ ಐತೀರ್ಪಿನ ಅಂಶಗಳನ್ನು ಜಾರಿಗೆ ತರುವುದು ಈ ಸಮಿತಿಯ ಕೆಲಸ. ಒಬ್ಬ ಪೂರ್ಣವಾಧಿ ಅಧ್ಯಕ್ಷ, ಕಾವೇರಿ ಕಣಿವೆಯ ರಾಜ್ಯಗಳ ತಲಾ ಒಬ್ಬ ಪ್ರತಿನಿಧಿ, ಭಾರತೀಯ ಹವಾಮಾನ ಇಲಾಖೆ, ಕೇಂದ್ರೀಯ ಜಲ ಆಯೋಗ, ಕೇಂದ್ರ ಕೃಷಿ ಇಲಾಖೆಯ ತಲಾ ಒಬ್ಬ ಪ್ರತಿನಿಧಿ ಈ ಸಮಿತಿಯ ಸದಸ್ಯರಾಗಿರುತ್ತಾರೆ. ಕಾವೇರಿ ನಿರ್ವಹಣಾ ಮಂಡಳಿಯ ಕಾರ್ಯದರ್ಶಿಯೇ ಈ ಸಮಿತಿಯ ಸದಸ್ಯ ಕಾರ್ಯದರ್ಶಿ.ನಿಯಂತ್ರಣ ಸಮಿತಿಯ ಕೆಲಸ ಕಾರ್ಯಗಳೇನು?

ಎಲ್ಲ ಕಾವೇರಿ ಜಲಾಶಯಗಳ ನೀರಿನ ಮಟ್ಟ ಕುರಿತ ಅಂಕಿ ಅಂಶಗಳ ನಿತ್ಯ ಸಂಗ್ರಹ ಮಾಡಬೇಕು. ಮಂಡಳಿಯ ನಿರ್ದೇಶನದಂತೆ ಪ್ರತಿ ತಿಂಗಳು ನೀರು ಬಿಡುಗಡೆ ಮಾಡಿಸಬೇಕು. ಕೇಂದ್ರ ಜಲ ಆಯೋಗಕ್ಕೆ ಸೇರಿದ ಬಿಳಿಗುಂಡ್ಲು ಮಾಪನ ಕೇಂದ್ರದ ಮೂಲಕ ಹರಿಯುವ ನೀರಿನ ಲೆಕ್ಕ ಇಡಬೇಕು. ಜೂನ್ ಮತ್ತು ಅಕ್ಟೋಬರ್ ನಡುವೆ ಹತ್ತು ದಿನಗಳಿಗೊಮ್ಮೆ ಸಭೆ ಸೇರಬೇಕು. ವಾರ್ಷಿಕ ಮತ್ತು ಮಾಸಿಕ ಹಾಗೂ ಸಾಪ್ತಾಹಿಕ ನೀರಿನ ಲೆಕ್ಕ ಇಡಬೇಕು.ನಿರ್ವಹಣಾ ಮಂಡಳಿ ರಚನೆಯ ಅಧಿಸೂಚನೆಯನ್ನು ಸಂಸತ್ತು ತಿರಸ್ಕರಿಸಬಹುದೇ?

ಹೌದು. ಸಂಸತ್ತಿನ ಉಭಯ ಸದನಗಳ ಮುಂದಿಟ್ಟು ಅನುಮೋದನೆ ಪಡೆಯುವುದು ಅಂತರರಾಜ್ಯ ಜಲವಿವಾದ ಕಾಯಿದೆಯ ಪ್ರಕಾರ ಕಡ್ಡಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry