ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಹರಿಕಾರ

Last Updated 1 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಮೋದಿ ಅವರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಅವರು ದೊಡ್ಡವರು – ಸಾವಿರಾರು ಜನರಿಗೆ ಕಣ್ಣು ಕೊಟ್ಟವರು! ಇದು ಕಥೆಗಾರ ಬೊಳುವಾರು ಮಹಮ್ಮದ್‌ ಕುಂಞಿ ಅವರು ಸಂದರ್ಶನದಲ್ಲಿ ಎದುರಾದ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರ. ಕರ್ನಾಟಕ ಕಂಡ ಬಹು ಜನಪ್ರಿಯ ವೈದ್ಯರಲ್ಲೊಬ್ಬರಾದ ಮೋದಿ ಅವರ ಹೆಸರು, ರಾಜಕಾರಣದ ‘ಮೋದಿ ಬ್ರಾಂಡ್‌’ ಎಂದು ಮರೆತುಹೋಗುತ್ತಿದ್ದ ಕಾಲಘಟ್ಟದಲ್ಲಿ ಬೊಳುವಾರರು, ಡಾ. ಮೋದಿ ಅವರನ್ನು ಬಹು ವಿಶಿಷ್ಟವಾಗಿ ನೆನಪಿಸಿಕೊಂಡಿದ್ದರು.

ಈಗ ಮೋದಿ ಅವರನ್ನು ನೆನಪಿಸಿಕೊಳ್ಳಲು ಮತ್ತೊಂದು ಅವಕಾಶ. ಲಕ್ಷಾಂತರ ಜನರ ಬದುಕಿಗೆ ಬೆಳಕು ಕೊಟ್ಟು ‘ಕಣ್ಣು ನೀಡಿದ ಅಣ್ಣ’ ಎಂದು ಖ್ಯಾತರಾದ ಡಾ. ಎಂ.ಸಿ. ಮೋದಿ ಅವರ ಜನ್ಮ ಶತಮಾನೋತ್ಸವ ವರ್ಷ ಇದು (ಜನನ: ಅ. 4, 1916). ಮುರಿಗಪ್ಪ ಚನ್ನವೀರಪ್ಪ ಹಾಗೂ ದುಂಡಮ್ಮ ದಂಪತಿ ಮಗನಾಗಿ ಮೋದಿ ಅವರು ಬಿಜಾಪುರ ಜಿಲ್ಲೆಯ (ಈಗ ಬಾಗಲಕೋಟೆ) ಬೀಳಗಿಯಲ್ಲಿ 1916ರಲ್ಲಿ ಜನಿಸಿದರು. ಬೆಳಗಾವಿಯ ಆರ್ಯುವೇದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಅವರು, ಹೆಚ್ಚಿನ ವ್ಯಾಸಂಗ ಪೂರೈಸಿದ್ದು ಮುಂಬೈನ ಕೆ.ಬಿ.ಎಚ್‌.ಬಿ. ಕಣ್ಣಿನ ಆಸ್ಪತ್ರೆಯಲ್ಲಿ.

ದೇಶದ ತುಂಬೆಲ್ಲಾ ಸ್ವಾತಂತ್ರ್ಯ ಹೋರಾಟ ಉತ್ತುಂಗ ತಲುಪಿದ ಸಮಯವದು. ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಆಂದೋಲನದ ಸಂದರ್ಭದಲ್ಲಿ ಯುವ ವೈದ್ಯ ಮೋದಿ ಅವರೊಮ್ಮೆ ಗಾಂಧೀಜಿ ಭಾಷಣ ಕೇಳಿದರು. ಅವರ ನಡೆ–ನುಡಿ, ತತ್ವಾದರ್ಶಗಳು ಮೋದಿ ಅವರ ಮೇಲೆ ಅಚ್ಚೊತ್ತಿದವು. ನೇತ್ರ ಚಿಕಿತ್ಸಾ ತರಬೇತಿ ಸಮಯದಲ್ಲಿ, ಬಡವರು – ವಿಶೇಷವಾಗಿ ಗ್ರಾಮೀಣ ಜನರು ಕಣ್ಣಿನ ಚಿಕಿತ್ಸೆಗೆ ಪಡುತ್ತಿದ್ದ ಪಡಿಪಾಟಲುಗಳು ಅವರ ಮನಸ್ಸನ್ನು ಕಲಕಿದವು. ಬಾಪೂಜಿ ಮಾತಿನಂತೆ, ಜನರ ಸೇವೆ ಮಾಡುವ ಉದ್ದೇಶದಿಂದ ಯುವಕ ಮೋದಿ ಹೊಸ ಜಾಡು ಹಿಡಿದರು.

ರೋಗಿ ಇದ್ದಲ್ಲಿಗೆ ವೈದ್ಯರು ಹೋಗುವ ಹೊಸ ಆಲೋಚನೆ ಬಂದಾಗ ಡಾ. ಮೋದಿ ಹಳ್ಳಿಗಾಡಿನಲ್ಲೇ ನೇತ್ರ ಚಿಕಿತ್ಸಾ ಶಿಬಿರ ಏರ್ಪಡಿಸಲು ನಿರ್ಧರಿಸಿದರು. ಆಗ ಅವರು ಆಯ್ದುಕೊಂಡಿದ್ದು ಗಾಂಧೀಜಿ ಅವರ ತವರಾದ ಗುಜರಾತ್‌ ರಾಜ್ಯದ ಪಟಾನ್‌ ಎಂಬ ಪಟ್ಟಣವನ್ನು. ಕಣ್ಣಿನ ಶಸ್ತ್ರಚಿಕಿತ್ಸೆ ನಗರಗಳ ಆಸ್ಪತ್ರೆಗಳಲ್ಲಷ್ಟೇ ಸಾಧ್ಯ ಹಾಗೂ ಅದು ದುಬಾರಿ ಬಾಬತ್ತು ಎಂದು ನಂಬಿದ್ದ ಗ್ರಾಮೀಣರು, ತಮ್ಮ ಗ್ರಾಮದಲ್ಲಿಯೇ ನೇತ್ರಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ ಎಂದಾಗ ಆಶ್ಚರ್ಯಪಟ್ಟರು. ಇದು ಅವರ ಆತಂಕಕ್ಕೂ ಎಡೆಮಾಡಿಕೊಟ್ಟಿತ್ತು.

ಬಾಪು ಅವರ ಜನ್ಮದಿನದಂದು (1943ರ ಅ. 2) ಆರಂಭವಾದ ಮೋದಿ ಅವರ ನೇತ್ರಚಿಕಿತ್ಸಾ ಶಿಬಿರದ ಬಗ್ಗೆ ಅವರ ಜೊತೆಗಾರರೇ ಆರಂಭದಲ್ಲಿ ಗಲಿಬಿಲಿಗೊಂಡಿದ್ದರು. ಪರೀಕ್ಷೆ–ಚಿಕಿತ್ಸೆಗಳೆಲ್ಲ ಯಶಸ್ವಿಯಾಗಿ ನೆರವೇರಿದ ಮೇಲೆ ನೇತ್ರಶಿಬಿರಗಳ ಮೋದಿ ಪರಿಕಲ್ಪನೆ ಹೆಚ್ಚು ಜನಪ್ರಿಯಗೊಂಡಿತು. ಗ್ರಾಮೀಣ ಭಾಗಗಳಲ್ಲಿ ಶಿಬಿರಗಳು ಆಯೋಜನೆಗೊಂಡು, ನೂರಾರು ನೇತ್ರರೋಗಿಗಳು ಸೂಕ್ತ ಚಿಕಿತ್ಸೆ ಪಡೆದುಕೊಂಡ ಸುದ್ದಿ ಹರಡುತ್ತಲೇ – ಅನೇಕ ಕಡೆಗಳಿಂದ ಶಿಬಿರ ನಡೆಸಲು ಆಹ್ವಾನಗಳು ಬರತೊಡಗಿದವು. ಆಗ ಮೋದಿ ಅವರು ಇದಕ್ಕೊಂದು ಕಾಯಂ ಕಾರ್ಯಕ್ರಮವನ್ನೇ ರೂಪಿಸಿ, ಸ್ವಯಂ ಸೇವಕರ ನೆರವಿನೊಂದಿಗೆ ನೇತ್ರ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸತೊಡಗಿದರು.

ಗ್ರಾಮೀಣ ಪ್ರದೇಶಗಳಲ್ಲಿ ನೇತ್ರಚಿಕಿತ್ಸಾ ಶಿಬಿರಗಳಿಗೆ ಸುಸಜ್ಜಿತ ಹಾಲ್‌ಗಳನ್ನು ನಿರೀಕ್ಷೆ ಮಾಡುವಂತಿಲ್ಲವೆಂಬುದನ್ನು ಕಂಡುಕೊಂಡಿದ್ದ ಮೋದಿ ಅವರು – ಛತ್ರಗಳನ್ನು ಮತ್ತು ಶಾಲೆಗಳನ್ನು ಶಿಬಿರಗಳಿಗಾಗಿ ಉಪಯೋಗಿಸಲು ಮುಂದಾದರು. ದಾನಿಗಳು, ಸ್ಥಳೀಯ ಸಂಘಸಂಸ್ಥೆಗಳ ನೆರವಿನಿಂದ ಚಿಕಿತ್ಸೆಗೆ ಬರುವವರಿಗೆ ವಸತಿ–ಊಟಗಳನ್ನು ಏರ್ಪಡಿಸಲು ಶುರು ಮಾಡಿದರು. ಚಿಕಿತ್ಸೆಯೂ ಸೇರಿ ಎಲ್ಲಾ ಸೌಕರ್ಯಗಳೂ ಶಿಬಿರಗಳಲ್ಲಿ ಉಚಿತವಾಗಿ ಸಿಗುವುದು ಜನರಿಗೆ ಆಶ್ಚರ್ಯವೆನ್ನಿಸುವಂತೆ ಮಾಡಿದರೂ, ಇವೆಲ್ಲ ವಾಸ್ತವವೆಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ.

ಸಾಮೂಹಿಕ ಉಚಿತ ನೇತ್ರಚಿಕಿತ್ಸೆಯನ್ನು ಮೊದಲಿಗೆ ಹುಟ್ಟುಹಾಕಿದ ಅಗ್ಗಳಿಕೆಯ ಡಾ. ಎಂ.ಸಿ. ಮೋದಿ ಗುಜರಾತ್‌ನಲ್ಲಿ ಶುರು ಮಾಡಿದ ನೇತ್ರಶಿಬಿರಗಳು ಮಹಾರಾಷ್ಟ್ರ, ಕರ್ನಾಟಕ, ಆಂಧ್ರ, ಕೇರಳಗಳಿಗೂ ಹಬ್ಬಿದವು. ಮೋದಿ ಅವರ ‘ಸಂಚಾರಿ ಆಸ್ಪತ್ರೆ’ ವ್ಯವಸ್ಥೆ ಮಾಡುತ್ತಿದ್ದ ಈ ಶಿಬಿರಗಳು ಎರಡು ವಾರಗಳ ಅವಧಿಯವು. ಒಂದೊಂದು ಸ್ಥಳದಲ್ಲೂ ಎರಡು ವಾರ ನಡೆಯುತ್ತಿದ್ದ ಶಿಬಿರಗಳಲ್ಲಿ – ರೋಗಿಗಳಿಗೆ ಪರೀಕ್ಷೆ, ಚಿಕಿತ್ಸೆ ಹಾಗೂ ಆರೈಕೆ ದೊರೆಯುತ್ತಿತ್ತು. ಹತ್ತುದಿನಗಳ ಬಳಿಕ ಚಿಕಿತ್ಸೆಗೆ ಒಳಗಾದವರನ್ನು ಪರೀಕ್ಷೆ ಮಾಡಿ, ಅಗತ್ಯ ಕನ್ನಡಕಗಳನ್ನು ಉಚಿತವಾಗಿ ಕೊಡುವ ಪರಿಪಾಠವೂ ಬಂತು.

ಮೊದಮೊದಲಿಗೆ ಚಿಕಿತ್ಸೆಗೆ ಭಯ ಪಡುತ್ತಿದ್ದ ರೋಗಿಗಳು ನಂತರದಲ್ಲಿ ಶಿಬಿರಗಳಲ್ಲಿ ಸಾಲುಗಟ್ಟಿ ನಿಲ್ಲತೊಡಗಿದರು. ಸ್ವತಃ ಡಾ. ಮೋದಿ ಅವರನ್ನೆಲ್ಲಾ ಪರೀಕ್ಷಿಸಿ, ಅಗತ್ಯವಿದ್ದವರಿಗೆ ಚಿಕಿತ್ಸೆ ಮಾಡುತ್ತಿದ್ದರು. ಹಳ್ಳಿ–ಪಟ್ಟಣಗಳಿಗೆ ಹೆಚ್ಚಾಗಿ ಕೇಂದ್ರೀಕೃತಗೊಂಡ ಮೋದಿ ನೇತ್ರ ಶಿಬಿರಗಳು ಬಡವರ ಪಾಲಿಗೆ ವರವಾಗಿ ಬಂದವು.

ಶುರುವಿನಲ್ಲಿ ಸ್ಥಳೀಯ ನೇತ್ರವೈದ್ಯರಿಂದಲೇ ಮೋದಿ ಅವರು ಅಡ್ಡಿ ಆತಂಕ ಎದುರಿಸಿದರು. ಆದರೆ, ಅವರು ಮಾಡುತ್ತಿದ್ದ ಶಿಬಿರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಂಡಿದ್ದವು. ಅಮೆರಿಕ ಸೇರಿದಂತೆ ವಿವಿಧ ದೇಶಗಳಲ್ಲಿನ ವೈದ್ಯಕೀಯ ಸಂಸ್ಥೆಗಳು ಅವರನ್ನು ತಮ್ಮ ದೇಶಕ್ಕೆ ಆಹ್ವಾನಿಸಿದವು. ವಿದೇಶಿಯರು ಮೋದಿಯವರ ಚಿಕಿತ್ಸಾ ವೈಖರಿಯನ್ನು ಕಂಡು ಆಶ್ಚರ್ಯಚಕಿತರಾಗಿದ್ದು ಮಾತ್ರವಲ್ಲ – ಅವರ ಶಿಬಿರಗಳಿಗೆ ಸಹಾಯ ನೀಡಲು ಕೂಡ ಮುಂದಾದರು. ಹೆಲನ್‌ ಕೆಲರ್‌ ಅವರಂತಹ ಪ್ರಸಿದ್ಧ ಸಮಾಜ ಸೇವಾ ಕಾರ್ಯಕರ್ತೆ ಡಾ. ಮೋದಿ ಅವರು ಅಂಧತ್ವದ ವಿರುದ್ಧ ಸಾರಿದ ಸಮರವನ್ನು ಪ್ರಶಂಸಿಸಿದರು.

ನೇತ್ರಚಿಕಿತ್ಸಾ ವಿಧಾನಗಳಲ್ಲಿ ಆಗುತ್ತಿದ್ದ ಬೆಳವಣಿಗೆಯನ್ನು ಅರಿತುಕೊಳ್ಳಲು ನ್ಯೂಯಾರ್ಕ್ ಹಾಗೂ ಕೊಲಂಬಿಯಾ ವಿಶ್ವವಿದ್ಯಾನಿಲಯಗಳಲ್ಲಿ ಮೋದಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದರು. ಅವರ ಸೇವೆಯ ಬಗ್ಗೆ ಕೇಳಿತಿಳಿದ ಆಗಿನ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯನವರು, ಮೋದಿ ಅವರನ್ನು ರಾಜ್ಯ ಸರ್ಕಾರದ ಅತಿಥಿಯೆಂದು ನಿಯುಕ್ತಿಗೊಳಿಸಿದರು ಹಾಗೂ ಮೋದಿ ಅವರ ಶಿಬಿರಗಳಿಗೆ ಆರ್ಥಿಕ ನೆರವು ನೀಡುವುದಕ್ಕೆ ಆದೇಶ ಹೊರಡಿಸಿದರು. ತ್ವರಿತ ಹಾಗೂ ನೈಪುಣ್ಯತೆಯಿಂದ ಕೂಡಿದ ಮೋದಿ ಅವರ ಚಿಕಿತ್ಸಾ ಚಮತ್ಕಾರವನ್ನು ಪ್ರಶಂಸೆ ಮಾಡದವರೇ ಕಡಿಮೆ. ಎಂಟು ಮೇಜುಗಳಲ್ಲಿ ನೇತ್ರ ಚಿಕಿತ್ಸೆಯನ್ನು ಚಕಚಕನೆ ಅವರು ನಡೆಸುವ ವಿಧಾನ ವೈದ್ಯಲೋಕವನ್ನು ವಿಸ್ಮಯಗೊಳಿಸಿತ್ತು.

ವಿಶ್ವದ ಮೊದಲ ಸಂಚಾರಿ ನೇತ್ರಚಿಕಿತ್ಸಾ ಆಸ್ಪತ್ರೆ ಆರಂಭಿಸಿದ ಹೆಗ್ಗಳಿಕೆ ಮೋದಿ ಅವರದು. ಅವರು ಏರ್ಪಡಿಸುತ್ತಿದ್ದ ಶಿಬಿರಗಳಲ್ಲಿ ರೋಗಿಗಳು ಸಾಲುಗಟ್ಟಿ ನಿಲ್ಲುತ್ತಿದ್ದರೆ, ಮೋದಿ ಅವರ ಚಿಕಿತ್ಸಾ ಚಮತ್ಕಾರವನ್ನು ಕಣ್ಣಾರೆ ನೋಡಲು ದೇಶ ವಿದೇಶಗಳ ಗಣ್ಯಾತಿಗಣ್ಯರು ಬಂದುಹೋಗುತ್ತಿದ್ದರು. ಅವರಲ್ಲಿ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳು, ಪ್ರಸಿದ್ಧ ವೈದ್ಯರು ಇರುತ್ತಿದ್ದರು. ‘ಪೊರೆ ತೆಗೆಯುವ ದೊರೆ’ ಎಂದು ಬಣ್ಣನೆಗೆ ಒಳಗಾದ ಮೋದಿ ಅವರು ದಾವಣಗೆರೆ, ಬೆಳಗಾವಿ, ಬೆಂಗಳೂರುಗಳಲ್ಲಿ ಕಾಯಂ ಕಣ್ಣಿನ ಆಸ್ಪತ್ರೆಗಳನ್ನು ಸ್ಥಾಪಿಸಿದರು.  ಈಗಲೂ ಬೆಂಗಳೂರಿನ ರಾಜಾಜಿನಗರದಲ್ಲಿ ಇರುವ ‘ಡಾ. ಮೋದಿ ಕಣ್ಣಾಸ್ಪತ್ರೆ’ ಸುಸಜ್ಜಿತವಾಗಿ ಕಾರ್ಯ ನಿರ್ವಹಿಸುತ್ತಿದೆ.

ತಮ್ಮ ಜೀವಿತಾವಧಿಯಲ್ಲಿ ಹತ್ತಾರು ದಾಖಲೆಗಳನ್ನು ಸ್ಥಾಪಿಸಿ ಬಡವರು–ಅಶಕ್ತರು ನೇತ್ರಚಿಕಿತ್ಸೆಯನ್ನು ಸುಲಭವಾಗಿ ಪಡೆಯಲು ಕಾರಣರಾದ ಡಾ. ಮೋದಿ ಅವರು ಮಾಡಿರುವ ದಾಖಲೆಯೊಂದು ಗಿನ್ನಿಸ್‌ ದಾಖಲೆಯಾಗಿ ಈಗಲೂ ಉಳಿದಿದೆ. ಅದು ತಿರುಪತಿಯಲ್ಲಿ ಒಂದೇ ದಿನ 833 ಮಂದಿಗೆ ಮಾಡಿದ ಕ್ಯಾಟರಾಕ್ಟ್ ಚಿಕಿತ್ಸೆ! ಚಿಕಿತ್ಸಾ ದಿನದಂದು ತಿರುಪತಿಯ ಧರ್ಮಛತ್ರಗಳೆಲ್ಲವೂ ಮೋದಿ ಅವರ ಕಣ್ಣುಚಿಕಿತ್ಸೆಗಳಿಗಾಗಿ ಮೀಸಲಾಗಿದ್ದವು ಎನ್ನುವುದು ಮತ್ತೊಂದು ದಾಖಲೆ!

ವೇಗ, ನಿಖರತೆ ಹಾಗೂ ಸುರಕ್ಷತೆಯ ಗುರಿ ಹೊಂದಿದ್ದ ಎಂ.ಸಿ. ಮೋದಿ ಅವರು 1942ರಿಂದ ಪರೀಕ್ಷಿಸಿದ ರೋಗಿಗಳ ಸಂಖ್ಯೆ ಒಂದು ಕೋಟಿಗೂ ಹೆಚ್ಚು (1,00,94,632). ಅವರು ಶಸ್ತ್ರಚಿಕಿತ್ಸೆ ಮಾಡಿದ್ದು ಸುಮಾರು 6 ಲಕ್ಷ ಮಂದಿಗೆ (5,95,019). ರೆಡ್‌ಕ್ರಾಸ್‌, ಸೇವಾದಳ, ಲಯನ್ಸ್, ರೋಟರಿ ಮೊದಲಾದ ಸೇವಾಸಂಸ್ಥೆಗಳೊಂದಿಗೆ ನಿಕಟ ಒಡನಾಟ ಇಟ್ಟುಕೊಂಡಿದ್ದ ಮೋದಿ ಅವರಿಗೆ ಪದ್ಮ ಭೂಷಣ ಸೇರಿದಂತೆ ಹಲವು ಗೌರವಗಳು ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT