ನೀರು ಬಿಡಲು ಒಲವು?

7
ಇಂದು ವಿಧಾನಮಂಡಲದ ವಿಶೇಷ ಅಧಿವೇಶನ

ನೀರು ಬಿಡಲು ಒಲವು?

Published:
Updated:
ನೀರು ಬಿಡಲು ಒಲವು?

ನವದೆಹಲಿ: ಸೋಮವಾರ ಸಮಾವೇಶಗೊಳ್ಳಲಿರುವ ವಿಧಾನಮಂಡಲ ಅಧಿವೇಶನದಲ್ಲಿ ತಮಿಳುನಾಡಿಗೆ ‘ಒಂದಷ್ಟು ಪ್ರಮಾಣದ’ ಕಾವೇರಿ ನೀರನ್ನು ‘ಪರೋಕ್ಷ’ವಾಗಿ ಬಿಡಲು ನಿರ್ಧರಿಸುವ ದಟ್ಟ ಸಾಧ್ಯತೆಗಳಿವೆ.ನೀರು ಬಿಡಬೇಕೆಂಬ ಸುಪ್ರೀಂ ಕೋರ್ಟ್  ಆದೇಶಗಳು ಮತ್ತು ಈ ಆದೇಶಗಳನ್ನು ಉಲ್ಲಂಘಿಸಿ­ರುವ ಕಾರಣ ರಾಜ್ಯದ ಪರವಾಗಿ ವಾದ ಮಂಡಿಸಲು ಹಿಂಜರಿಯುತ್ತಿರುವ ಹಿರಿಯ ವಕೀಲರ ನಿಲುವಿನಿಂದಾಗಿ ಕರ್ನಾಟಕ ಅಡಕತ್ತರಿಯಲ್ಲಿ ಸಿಲುಕಿದೆ. ತಮಿಳುನಾಡಿಗೆ ಒಂದಷ್ಟು ಪ್ರಮಾಣದ ನೀರು ತಲುಪಿಸಿ ಈ ಬಿಕ್ಕಟ್ಟಿನಿಂದ ತುರ್ತಾಗಿ ಹೊರಬೀಳುವ ದಾರಿಯತ್ತ ರಾಜ್ಯ ಸರ್ಕಾರ ಈಗ ನೋಡುತ್ತಿದೆ.ಶನಿವಾರ ನಡೆದ ಸರ್ವಪಕ್ಷ ಸಭೆಯಲ್ಲಿಯೇ ಇಂತಹ ನಿರ್ಧಾರದ ಹೊಳಹುಗಳು ಮೂಡಿದ್ದವು. ಕರ್ನಾಟಕದ ಕಾವೇರಿ ಕೊಳ್ಳದ ರೈತರ ಜಮೀನಿಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಲಾಗುವುದು. ಪರಿಣಾಮವಾಗಿ ತಮಿಳುನಾಡಿಗೂ ನೀರು ಬಿಡುವ ಇರಾದೆಯನ್ನು ಸರ್ಕಾರ ಅಧಿವೇಶನದಲ್ಲಿ ಪ್ರಕಟಿಸಲಿದ್ದು ಪ್ರತಿಪಕ್ಷಗಳು ಪ್ರತಿಭಟಿಸಿ ಹೊರನಡೆಯುವ ಒಂದು ‘ಅಲಿಖಿತ ಒಪ್ಪಂದ’ ಏರ್ಪಟ್ಟಿದೆ ಎಂದು ವಿಶ್ವಾಸಾರ್ಹ ಮೂಲಗಳು ಭಾನುವಾರ ಇಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದವು.ಮೂರು ದಿನಗಳ ಕಾಲ ಒಟ್ಟು 18 ಸಾವಿರ ಕ್ಯುಸೆಕ್ (ಸುಮಾರು ಒಂದೂವರೆ ಟಿಎಂಸಿ ಅಡಿಗಳಷ್ಟು) ನೀರನ್ನು ಬಿಡುವಂತೆ ಸೆಪ್ಟಂಬರ್ 17ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿದಾಗ ರಾಜ್ಯದ ಕಾವೇರಿ ಜಲಾಶಯಗಳ ಸಂಗ್ರಹ 27.6 ಟಿಎಂಸಿ ಅಡಿಗಳಷ್ಟಿತ್ತು.ಈ ಸಂಗ್ರಹ ಕುಡಿಯುವ ನೀರು ಪೂರೈಕೆಗೆ ಅತ್ಯಗತ್ಯವಾಗಿರುವ ಕಾರಣ ತಮಿಳುನಾಡಿಗೆ ಬಿಡುವುದು ಸಾಧ್ಯವಿಲ್ಲ ಎಂಬ ನಿಲುವನ್ನು ರಾಜ್ಯ ತಳೆದಿತ್ತು. ಸೆಪ್ಟಂಬರ್ 30ರ ಆದೇಶದಲ್ಲಿ ಆರು ದಿನಗಳ ಕಾಲ ನಿತ್ಯ 6000 ಕ್ಯುಸೆಕ್ ಗಳಂತೆ ಒಟ್ಟು 36 ಸಾವಿರ ಕ್ಯುಸೆಕ್ (ಮೂರೂವರೆ ಟಿಎಂಸಿ ಅಡಿಗಳು) ನೀರನ್ನು ಬಿಡುವಂತೆ ನಿರ್ದೇಶನ ನೀಡಿತು. ಪಾಲಿಸದೆ ಹೋದರೆ ಕಾನೂನಿನ ಕ್ರೋಧ ಯಾವಾಗ ಮೈಮೇಲೆ ಎರಗಿತೆಂದು ಹೇಳಲು ಬರುವುದಿಲ್ಲ ಎಂದು ಹೇಳುವ ಜೊತೆಗೆ ತನ್ನ ಆದೇಶ ಪಾಲನೆಗೆ ಕರ್ನಾಟಕಕ್ಕೆ ತಾನು ನೀಡುತ್ತಿರುವ ಕೊನೆಯ ಆದೇಶವಿದು ಎಂಬ ಎಚ್ಚರಿಕೆ ನೀಡಿತ್ತು.

ಒಳಹರಿವಿನ ನಂತರ ರಾಜ್ಯದ ಕಾವೇರಿ ಜಲಾಶಯಗಳ ಒಟ್ಟು ನೀರಿನ ಸಂಗ್ರಹ ಇಂದು 32 ಟಿಎಂಸಿ ಅಡಿಗಳಿಗೆ ಏರಿದೆ. ಈ ಏರಿಕೆಯ ಹಿನ್ನೆಲೆಯಲ್ಲಿ ಇಕ್ಕಟ್ಟಿನಿಂದ ಹೊರಬೀಳಲು ನೀರು ಬಿಡುವ ಅನಿವಾರ್ಯ ದಾರಿಯನ್ನು ರಾಜ್ಯ ಸರ್ಕಾರ ಸೋಮವಾರ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಿದೆ ಎನ್ನಲಾಗಿದೆ.ರಾಜ್ಯದ ರೈತರ ಗದ್ದೆಗಳಿಗೆ ನೀರು ಹರಿಸಿದರೆ ಸೋರಿ ಹೋಗುವ ಮತ್ತು ಬಸಿದು ಕೆಳಭಾಗಕ್ಕೆ ಹರಿಯುವ ನೀರಿನ ಕನಿಷ್ಠ ಪ್ರಮಾಣ ದಿನವೊಂದಕ್ಕೆ 3000 ಕ್ಯುಸೆಕ್ (ಸುಮಾರು ನಾಲ್ಕನೆಯ ಒಂದು ಟಿಎಂಸಿ ಅಡಿ) ಎಂದು ಅಂದಾಜು ಮಾಡಲಾಗಿದೆ. ಈ ನೀರು ಹರಿದು ತಮಿಳುನಾಡಿನ ಮೆಟ್ಟೂರು ಜಲಾಶಯವನ್ನೇ ಸೇರುತ್ತದೆ. ಈ ನೀರನ್ನು ತಾನು ಬಿಟ್ಟದ್ದು ಎಂದೇ ಸುಪ್ರೀಂ ಕೋರ್ಟ್ ಮುಂದೆ ಕರ್ನಾಟಕ ಹೇಳಿಕೊಳ್ಳಲು ಬರುತ್ತದೆ. ಪರಿಣಾಮವಾಗಿ ನ್ಯಾಯಾಲಯದ ಆದೇಶವನ್ನು ಆಂಶಿಕವಾಗಿ ಪಾಲಿಸಿದಂತೆ ಆಗಿ ನ್ಯಾಯಾಂಗ ನಿಂದನೆಯ ಕ್ರೋಧ ತನ್ನ ಮೇಲೆ ಎರಗುವುದನ್ನು ಸದ್ಯದ ಮಟ್ಟಿಗಾದರೂ ನಿವಾರಿಸಿಕೊಂಡಂತೆ ಆಗುತ್ತದೆ.ಜೊತೆಗೆ ದೂರ ಸರಿದಿರುವ ಹಿರಿಯ ನ್ಯಾಯವಾದಿಗಳು ರಾಜ್ಯದ ಪರವಾಗಿ ಸುಪ್ರೀಂ ಕೋರ್ಟ್ ಮುಂದೆ ವಾದಿಸಲು ಪುನಃ ಲಭ್ಯವಾಗಲಿದ್ದಾರೆ. ನ್ಯಾಯಾಲಯದ ಅಧಿಕಾರಿಗಳೇ ಆಗಿರುವ ನ್ಯಾಯವಾದಿಗಳು ನ್ಯಾಯಾಲಯದ ಆದೇಶದ ಪಾಲನೆಯ ಪರವಾಗಿ ನಿಂತು ನ್ಯಾಯವ್ಯವಸ್ಥೆಯ ಘನತೆ ಗೌರವಗಳನ್ನು ಎತ್ತಿ ಹಿಡಿಯಬೇಕೆಂಬ ತತ್ವದ ಪ್ರಕಾರ ಫಾಲಿ ನಾರಿಮನ್ ರಾಜ್ಯದ ಪರ ವಾದ ಮಂಡನೆಯಿಂದ ದೂರ ಉಳಿದಿರುವುದಾಗಿ ಸೆ.30ರಂದು ಘೋಷಿಸಿದ್ದರು. ಅವರ ಬದಲಿಗೆ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರನ್ನು ರಾಜ್ಯ ಸರ್ಕಾರ ಸಂಪರ್ಕಿಸಿತ್ತು. ಇವರಿಬ್ಬರು ಕೂಡ ನಾರಿಮನ್ ನಿಲುವಿಗೆ ಅಂಟಿಕೊಂಡಿದ್ದಾರೆ. ನೀರು ಬಿಡುವ ಆದೇಶ ಪಾಲಿಸಿದರೆ ಮಾತ್ರವೇ ನ್ಯಾಯಾಲಯದ ಮುಂದೆ ತಾವು ಹಾಜರಾಗುವುದು ಸಾಧ್ಯ ಎಂದಿದ್ದಾರೆ.ನಾಳೆ ನೀರು ಬಿಡುವ ತೀರ್ಮಾನ ಹೊರಬಿದ್ದಿತೆಂದರೆ ನಾರಿಮನ್ ಕೂಡ ವಾಪಸಾಗಿ ರಾಜ್ಯದ ಪರವಾಗಿ ವಾದ ಮಂಡನೆ ಮುಂದುವರೆಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.    

                                               

ಯಡಿಯೂರಪ್ಪ ವಿರುದ್ಧ ನ್ಯಾಯಾಂಗ ನಿಂದನೆ ಕೇಸು?:
ಈ ನಡುವೆ ಶನಿವಾರ ಬೆಂಗಳೂರಿನಲ್ಲಿ ಜರುಗಿದ ಸರ್ವಪಕ್ಷಗಳ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾರಿಮನ್ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಸುಪ್ರೀಂ ಕೋರ್ಟ್‌ ವಕೀಲರ ಒಂದು ವರ್ಗ ಕುಪಿತಗೊಂಡಿದೆ. ಅವರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆಯ ಅರ್ಜಿ ಸಲ್ಲಿಸಲು ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಸುಪ್ರೀಂ ಕೋರ್ಟ್ ನಾರಿಮನ್ ನಡೆಯನ್ನು ಮೆಚ್ಚಿ ತನ್ನ ಆದೇಶದಲ್ಲಿ ದಾಖಲಿಸಿದೆ. ನ್ಯಾಯಾಲಯದ ಅಧಿಕಾರಿ ಎಂದೇ ಪರಿಗಣಿಸಲಾಗುವ ನ್ಯಾಯವಾದಿಗಳಿಗೆ ನ್ಯಾಯಾಲಯದ ಸಂಪೂರ್ಣ ರಕ್ಷಣೆ ಇರುತ್ತದೆ. ಈ ರಕ್ಷಣೆ ನಾರಿಮನ್ ಅವರಿಗೂ ಅನ್ವಯಿಸುತ್ತದೆ. ಅವರ ನಡೆಯನ್ನು ಅವಹೇಳನಕಾರಿಯಾಗಿ ಟೀಕಿಸುವುದು ಸುಪ್ರೀಂ ಕೋರ್ಟ್ ನ್ನೇ ಟೀಕಿಸಿದಂತೆ. ಪರಿಣಾಮವಾಗಿ ಯಡಿಯೂರಪ್ಪ ಅವರು ನ್ಯಾಯಾಂಗ ನಿಂದನೆ ಎಸಗಿದ್ದಾರೆ ಎಂಬುದು ಈ ವಕೀಲರ ಅಸಮಾಧಾನ.

*

ನೀರು ಬಿಡುವುದು ಒಳ್ಳೆಯದು

ಶುಕ್ರವಾರ ನಡೆದ ಮಂತ್ರಿ ಪರಿಷತ್‌ ಸಭೆಯಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು, ‘ಸುಪ್ರೀಂ ಕೋರ್ಟ್‌ ಆದೇಶದಂತೆ ತಮಿಳುನಾಡಿಗೆ ನೀರು ಬಿಟ್ಟು ಕಾನೂನು ಹೋರಾಟ ಮುಂದುವರಿಸುವುದು ಒಳ್ಳೆಯದು’ ಎನ್ನುವ ಸಲಹೆಯನ್ನು  ನೀಡಿದ್ದಾರೆ.

‘ವಿಧಾನಮಂಡಲ ನಿರ್ಣಯ ಅಂಗೀಕರಿಸಿದ ಸಂದರ್ಭದಲ್ಲಿ ನೀರಿನ ಪ್ರಮಾಣ ಕೇವಲ 27.6 ಟಿಎಂಸಿ ಅಡಿ ಇತ್ತು. ಈಗ ಪರಿಸ್ಥಿತಿ ಸುಧಾರಿಸಿದೆ. ನಮ್ಮ ರೈತರ ಬೆಳೆಗಳಿಗೂ ನೀರಿನ ಅಗತ್ಯವಿದೆ. ಕರ್ನಾಟಕ ಹಾಗೂ ತಮಿಳುನಾಡು ನಡುವಣ ಅಂತರ್‌ ಜಲಾಶಯದ ಪ್ರದೇಶದಿಂದ ಪ್ರತಿನಿತ್ಯ 1500 ಕ್ಯುಸೆಕ್‌ ನೀರು ಮೆಟ್ಟೂರಿಗೆ ಹರಿಯುತ್ತಿದೆ. ನಮ್ಮ ರೈತರಿಗೆ ನೀರು ಕೊಟ್ಟರೆ ಕನಿಷ್ಠ 1500 ಕ್ಯುಸೆಕ್‌ ಸೋರಿಕೆಯಾಗಿ ನೆರೆಯ ರಾಜ್ಯ ಸೇರುತ್ತದೆ. ಅದರ ಜೊತೆಗೆ ಇನ್ನು 3000 ಸಾವಿರ ಕ್ಯುಸೆಕ್‌ ಹರಿಸಿದರೆ ಕೋರ್ಟ್‌ ಆದೇಶ ಗೌರವಿಸಿದಂತಾಗುತ್ತದೆ ಎಂದೂ ಸಭೆಗೆ ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry