6

ಚಿಣ್ಣರಲ್ಲಿ ಜಾಗೃತಿಗೆ ರಂಗದ ಬಣ್ಣ

Published:
Updated:
ಚಿಣ್ಣರಲ್ಲಿ ಜಾಗೃತಿಗೆ ರಂಗದ ಬಣ್ಣ

ಬಾಲ್ಯ ಸ್ನೇಹಿತರು ಉನ್ನತ ಶಿಕ್ಷಣದವರೆಗೂ ನಂಟು ಬಿಡದೆ ಮುಂದೆ ಉದ್ಯೋಗ ಅಥವಾ ಉದ್ಯಮ ಕ್ಷೇತ್ರದಲ್ಲಿಯೂ ಜೊತೆಯಾಗಿಯೇ  ಹೆಜ್ಜೆ ಹಾಕುವುದುಂಟು. ಆದರೆ ಜೆ,ಪಿ.ನಗರದ ಸ್ನೇಹಾ ಕಪ್ಪಣ್ಣ ಮತ್ತು ರಮ್ಯಾ ಶ್ರೀನಿಧಿ ಎಂಬ ಇಬ್ಬರು ಬಾಲ್ಯ ಸ್ನೇಹಿತೆಯರು ಆಯ್ದುಕೊಂಡಿದ್ದು ರಂಗ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕೈಂಕರ್ಯ.ಇದಕ್ಕಾಗಿಯೇ ಆರಂಭಿಸಿರುವ ‘ಕಥಾ ಕಾರ್ನರ್‌’ ಮೂಲಕ ಕತೆ ಹೇಳುತ್ತಾ, ನಾಟಕ ಆಡುತ್ತಾ, ಮಕ್ಕಳಿಂದ ನಾಟಕ ಆಡಿಸುತ್ತಾ ಸಾಮಾಜಿಕ ಹೊಣೆಗಾರಿಕೆಯ ಅರಿವು ಮೂಡಿಸುತ್ತಿದ್ದಾರೆ. ಜೆ.ಪಿ.ನಗರ ಒಂದನೇ ಹಂತದಲ್ಲಿರುವ ಕಪ್ಪಣ್ಣ ಅಂಗಳ ಇವರ ಚಟುವಟಿಕೆಯ ಕೇಂದ್ರ.‘ಕಥಾ ಕಾರ್ನರ್‌’ಗೆ ಈಗ ಎರಡು ವರ್ಷ. ದಸರಾ ರಜೆ ಮತ್ತು ಬೇಸಿಗೆ ರಜೆಗಳಲ್ಲಿ ಮಕ್ಕಳಿಗಾಗಿ ಹಮ್ಮಿಕೊಂಡ ರಂಗ ತರಬೇತಿ, ಕಥಾ ಕಮ್ಮಟ, ನಾಟಕ ಪ್ರದರ್ಶನಗಳು ಮಕ್ಕಳಲ್ಲಿ ಸದಭಿರುಚಿ ಮೂಡಿಸಿವೆ ಎನ್ನುತ್ತಾರೆ ಸ್ನೇಹಾ ಮತ್ತು ರಮ್ಯಾ.ವೃದ್ಧಾಶ್ರಮದಲ್ಲಿ ಮಕ್ಕಳ ನಾಟಕ

ಈ ಬಾರಿ ನವರಾತ್ರಿ ರಜೆಯಲ್ಲಿ (ಅ.8) ‘ಕಥಾ ಕಾರ್ನರ್‌’ ತಂಡವು ಉತ್ತರಹಳ್ಳಿ ಸಮೀಪದ ಪೂರ್ಣಪ್ರಜ್ಞ ಬಡಾವಣೆಯಲ್ಲಿರುವ  ‘ಸಂಧ್ಯಾ ದೀಪ’ ಎಂಬ ವೃದ್ಧಾಶ್ರಮದಲ್ಲಿ  ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಡಲಿದೆ.‘ಮಕ್ಕಳು ಸಾಮಾನ್ಯವಾಗಿ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ತಮ್ಮನ್ನು ಇಷ್ಟಪಡುವ ಹಿರಿಯರಿಗೆ ವಿಶೇಷ ಆದ್ಯತೆ ನೀಡುತ್ತಾರೆ. ಯಾವುದೋ ಮನೆಯ ಹಿರಿಯ ಸದಸ್ಯರು ವೃದ್ಧಾಶ್ರಮ ಅಥವಾ ಅನಾಥಾಶ್ರಮದಲ್ಲಿ ಇರುವುದನ್ನು ಮಕ್ಕಳು ಕಣ್ಣಾರೆ ಕಂಡರೆ ಸಮಾಜದ ವಾಸ್ತವದ ಅರಿವಾಗುತ್ತದೆ. ಮತ್ತೊಂದೆಡೆ, ಕುಟುಂಬದಿಂದ ದೂರವಾಗಿ ಬದುಕುವ ಹಿರಿಯರ ಕಷ್ಟ ತಮ್ಮವರಿಗೆ ಬರಬಾರದು ಎಂಬ ಅರಿವು ಮಕ್ಕಳಲ್ಲಿ ಮೂಡಲಿ ಎಂಬುದು ನಮ್ಮ ಉದ್ದೇಶ’ ಎಂದು ವಿವರಿಸುತ್ತಾರೆ, ರಮ್ಯಾ.‘ಈ ಬಾರಿ ಸುಧಾಮೂರ್ತಿಯವರ ಕಥೆಗಳನ್ನು ರಂಗಕ್ಕೆ ಅಳವಡಿಸಲಾಗಿದೆ. ಮಕ್ಕಳೇ ಬಣ್ಣ ಹಚ್ಚುತ್ತಾರೆ, ನಿರ್ದೇಶನವೂ ಅವರದೇ. ‘ಸಂಧ್ಯಾದೀಪ’ದಲ್ಲಿ 40 ಸದಸ್ಯರಿದ್ದಾರೆ. ಅವರೊಂದಿಗೆ ಹರಟೆ ಹೊಡೆಯಲೂ ಮಕ್ಕಳಿಗೆ ಅವಕಾಶ ಕೊಡುತ್ತೇವೆ’ ಎಂದು ಸ್ನೇಹಾ ಹೇಳುತ್ತಾರೆ.ಈ ಇಬ್ಬರೂ ಸ್ನೇಹಿತೆಯರು ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಸ್ನೇಹಾ ಓದಿರುವುದು ಮಕ್ಕಳ ಮನಃಶಾಸ್ತ್ರವನ್ನು. ಈ ಅನುಭವದಿಂದಾಗಿ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ, ವಿಕಸನಕ್ಕೆ ಏನು ಬೇಕು ಎಂಬ ಬಗ್ಗೆ ಅವರಿಗೆ ನಿಖರವಾಗಿ ತಿಳಿದಿದೆ.ಗಿಡ ಮರಗಳ ನಡುವೆ ‘ಕಥಾ ವೃಕ್ಷ’

ಸ್ನೇಹಾ ಮತ್ತು ರಮ್ಯಾ ಅವರು ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸುವ ಪ್ರಯತ್ನವನ್ನೂ ಕಥೆ, ನಾಟಕದ ಮೂಲಕವೇ ಮಾಡುತ್ತಿರುವುದು ವಿಶೇಷ. ಕಳೆದ ವರ್ಷ ಲಾಲ್‌ಬಾಗ್‌ನಲ್ಲಿ ನಡೆಸಿದ ‘ಕಥಾ ವೃಕ್ಷ’ ಇದಕ್ಕೆ ನಿದರ್ಶನ.ದೊಡ್ಡ ಮರದ ಬುಡದಲ್ಲಿ ಮಕ್ಕಳನ್ನು ಸುತ್ತಲೂ ಕೂಡಿಸಿ ಮರ, ಗಿಡ, ಹೂವು, ನೀರುನೊಂದಿಗಿನ ನಮ್ಮ ಒಡನಾಟದ ಪ್ರಾಮುಖ್ಯತೆಯನ್ನು ಬಿಂಬಿಸುವ ಕಥೆಗಳನ್ನು ಸ್ನೇಹಾ ಮತ್ತು ರಮ್ಯಾ ಅಭಿನಯದ ಮೂಲಕ ಪ್ರಸ್ತುತಪಡಿಸುತ್ತಾರೆ.‘ನಾವು ಶುರು ಮಾಡಿದೆವು. ಕ್ರಮೇಣ ಮಕ್ಕಳೇ ಪಾತ್ರಗಳಾದರು, ಕತೆಯಾದರು. ಮಕ್ಕಳು ದೊಡ್ಡವರಿಗಿಂತಲೂ ವೇಗವಾಗಿ ಕತೆಯ ಒಳಹೊಕ್ಕು ಪಾತ್ರಗಳಾಗಿ, ಭಾವಗಳಾಗಿ ಬಿಡುತ್ತಾರೆ. ಇಂತಹ ಭಾವುಕ ಸನ್ನಿವೇಶಗಳು ಅವರ ಸ್ಮೃತಿಪಟಲದಲ್ಲಿ  ಅಚ್ಚಾಗುತ್ತವೆ. ಪರಿಸರದ ಬಗೆಗಿನ ಕಾಳಜಿಯೂ ದಾಖಲಾಗಿಬಿಡುತ್ತದೆ’ ಎನ್ನುತ್ತಾರೆ ಸ್ನೇಹಾ.ಕಥಾ ಕಾರ್ನರ್‌ನ ಸಂಪರ್ಕಕ್ಕೆ: 94482 74290.***


ಹೆತ್ತವರಿಗೇ ಆಶ್ಚರ್ಯವಾಗಿತ್ತು

ಮಕ್ಕಳ ಮನೋವಿಕಾಸಕ್ಕೆ ರಂಗ ಚಟುವಟಿಕೆಗಳು ಅತ್ಯುತ್ತಮ ಮಾರ್ಗ. ತೀರಾ ನಾಚಿಕೆ ಸ್ವಭಾವದ, ಯಾರೊಂದಿಗೂ ಬೆರೆಯದ ಮಕ್ಕಳೂ ನಾಲ್ಕಾರು ದಿನಗಳ ಕಮ್ಮಟ, ಕಾರ್ಯಾಗಾರದಲ್ಲಿ ಅಚ್ಚರಿ ದಾಯಕವಾಗಿ ಬದಲಾಗಿದ್ದಾರೆ.ಎಲ್ಲರೊಂದಿಗೆ ಬೆರೆತು,  ಮುಕ್ತವಾಗಿ ಮಾತನಾಡಿ, ಮೈ ಚಳಿ ಬಿಟ್ಟು ಅಭಿನಯಿಸಿ, ಕತೆ ಹೇಳಿದ್ದನ್ನು ಕಂಡು ಹೆತ್ತವರೇ ಆಶ್ಚರ್ಯಪಟ್ಟಿದ್ದುಂಟು. ಬೇಸಿಗೆ ಶಿಬಿರ, ರಜಾ ಕಾಲದ ಶಿಬಿರಗಳು ವ್ಯಾಪಾರ ಕೇಂದ್ರಗಳಾಗುತ್ತಿವೆ. ನಾನು ಮತ್ತು ರಮ್ಯಾ ನಮ್ಮ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸಿದಾಗ ಇದು ಅರಿವಾಯಿತು.

ಮಕ್ಕಳ ವಿಕಸನಕ್ಕಾಗಿ ಗಂಭೀರವಾಗಿ ಏನಾದರೂ ಮಾಡಬೇಕು  ಎಂದು ನಿರ್ಧರಿಸಿದೆವು. ‘ಕಥಾವೃಕ್ಷ’, ರಂಗ ತರಬೇತಿ, ಕಥಾ ಕಮ್ಮಟಗಳನ್ನು ರೂಪಿಸಿದ್ದು ಇದೇ ಕಾರಣಕ್ಕೆ’

-ಸ್ನೇಹಾ ಕಪ್ಪಣ್ಣ, ರಂಗಭೂಮಿ ಕಲಾವಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry