7

ಪಾನನಿಷೇಧ ಕಾನೂನು ಎಷ್ಟು ಪರಿಣಾಮಕಾರಿ?

Published:
Updated:
ಪಾನನಿಷೇಧ ಕಾನೂನು ಎಷ್ಟು ಪರಿಣಾಮಕಾರಿ?

ಅಕ್ಟೋಬರ್ 2ರಿಂದ ಬಿಹಾರದಲ್ಲಿ ಹೊಸ ಕಾನೂನು ಜಾರಿಗೆ ಬಂದಿದ್ದು ಸಂಪೂರ್ಣ ಪಾನನಿಷೇಧ ಜಾರಿಯಲ್ಲಿರುತ್ತದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಕಟಿಸಿದ್ದಾರೆ. ಮದ್ಯ ನಿಷೇಧಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬಿಹಾರ ಸರ್ಕಾರ ಹೊರಡಿಸಿದ್ದ ಏ.5ರ ಅಧಿಸೂಚನೆಯನ್ನು ‘ಸಂವಿಧಾನದ ವ್ಯಾಪ್ತಿ ಮೀರಿದ್ದು’ ಎಂದು ಪಟ್ನಾ ಹೈಕೋರ್ಟ್ ಶುಕ್ರವಾರ ರದ್ದುಪಡಿಸಿದ ಎರಡು ದಿನಗಳಲ್ಲೇ ಈ ಹೊಸ ಮದ್ಯ ನಿಷೇಧ ಕಾನೂನು ಜಾರಿಗೆ ಬಂದಿದೆ ಎಂಬುದು ವಿಪರ್ಯಾಸ.‘ಗಾಂಧಿ ಜಯಂತಿಯಂದು ಜಾರಿಗೆ ಬಂದಿರುವ ಈ ಹೊಸ ಕಾನೂನು ರಾಷ್ಟ್ರಪಿತನಿಗೆ ಸಲ್ಲಿಸುವ ಗೌರವ. ಅದೂ  ಮುಂದಿನ ವರ್ಷ, ಬ್ರಿಟಿಷ್ ಆಡಳಿತದ ವಿರುದ್ಧ ಚಂಪಾರಣ್ ಸತ್ಯಾಗ್ರಹದ ಶತಮಾನೋತ್ಸವ ಆಚರಣೆಗಾಗಿ  ಬಿಹಾರ ಸಿದ್ಧವಾಗುತ್ತಿರುವಂತಹ ಸಂದರ್ಭದಲ್ಲಿ  ಸಲ್ಲಿಸಲಾದಂತಹ ಗೌರವ’ ಎಂದು ನಿತೀಶ್ ಹೇಳಿಕೊಂಡಿದ್ದಾರೆ.‘ಪಟ್ನಾ ಹೈಕೋರ್ಟ್ ನೀಡಿರುವ ನಿರ್ದೇಶನ ಹಳೆಯ ಕಾಯಿದೆಗೆ ಸಂಬಂಧಿಸಿದೆ’ ಎಂದು ಮುಖ್ಯಮಂತ್ರಿ ವಿವರಿಸಿದ್ದಾರೆ. ಜೊತೆಗೆ, ಪಾನನಿಷೇಧ ರದ್ದು ಮಾಡಿದ ಹೈಕೋರ್ಟ್ ಆದೇಶವನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಬಿಹಾರ ಸರ್ಕಾರ ಪ್ರಶ್ನಿಸಲು ಮುಂದಾಗುತ್ತಿದೆ.ಪಾನನಿಷೇಧ, ಬದುಕುವ ಮೂಲಭೂತ ಹಕ್ಕಿನ (ಖಾಸಗಿಯಾಗಿ ತಿನ್ನುವ, ಕುಡಿಯುವ ಹಕ್ಕು ಸಹ ಸೇರುತ್ತದೆ) ಉಲ್ಲಂಘನೆ ಆಗುತ್ತದೆಯೆ  ಎಂಬ ವಿಚಾರದ ಬಗ್ಗೆ ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಐ ಎ ಅನ್ಸಾರಿ ಹಾಗೂ ನ್ಯಾಯಮೂರ್ತಿ ಎನ್ ಪಿ ಸಿಂಗ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ವಿಭಿನ್ನ ದೃಷ್ಟಿಕೋನಗಳನ್ನು ವ್ಯಕ್ತಪಡಿಸಿರುವುದು ಆಸಕ್ತಿದಾಯಕ. ಆದರೆ  ಕಾನೂನಿನಲ್ಲಿರುವ ಅವಕಾಶಗಳು ಸಂವಿಧಾನದ ಅಧಿಕಾರ ವ್ಯಾಪ್ತಿಯನ್ನು ಮೀರಿದೆ ಎಂದಿರುವ ಹೈಕೋರ್ಟ್ ಅಧಿಸೂಚನೆಯನ್ನು ರದ್ದುಪಡಿಸಿದೆ.ಈಗಿನ ಹೊಸ ಕಾನೂನೂ ಅತ್ಯಂತ ಕಠಿಣವಾಗಿದೆ. ಹೊಸ ಕಾಯಿದೆಯ ಎಲ್ಲಾ ಸೆಕ್ಷನ್‌ಗಳು ಜಾಮೀನುರಹಿತವಾದವು. ಯಾರದಾದರೂ ಮನೆಯಲ್ಲಿ  ಮದ್ಯದ ಒಂದು ಬಾಟಲಿ ಸಿಕ್ಕಿದರೂ ಸಾಕು; ಆ ಮನೆಯಲ್ಲಿನ ಮಹಿಳೆಯರೂ ಸೇರಿದಂತೆ ಎಲ್ಲಾ ವಯಸ್ಕರು ಅಪರಾಧಿಗಳಾಗುತ್ತಾರೆ. ಸಾಮುದಾಯಿಕ ಜವಾಬ್ದಾರಿಯನ್ನು ಹೇರುವ ಕ್ರಮವಾಗಿದೆ ಇದು.ಬಿಹಾರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಹಿಳೆಯರು ಮುಂದಿಟ್ಟ ಬೇಡಿಕೆ ಅನ್ವಯ ಮದ್ಯವ್ಯಸನದ ವಿರುದ್ಧ ನಿತೀಶ್ ಕುಮಾರ್  ಸಮರ ಸಾರಿದ್ದಾರೆ. ಪಾನನಿಷೇಧ, ರಾಜ್ಯದಲ್ಲಿ ಸಕಾರಾತ್ಮಕ ಸಾಮಾಜಿಕ ಬದಲಾವಣೆ ತರುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.  ಆದರೆ ಮದ್ಯಪಾನ ಚಟದಿಂದಾಗುವ ಹಾನಿಯ ಮೇಲೆ ಗಮನ ಕೇಂದ್ರೀಕರಿಸುವುದಕ್ಕಿಂತ ಮದ್ಯಪಾನದ ಮೇಲೇ ಗಮನ ಕೇಂದ್ರೀಕರಿಸಿ ಕ್ರಮ ಕೈಗೊಳ್ಳಲು ಮುಂದಾಗಿರುವುದು ಈ ನೀತಿಯ ಸದುದ್ದೇಶಗಳನ್ನೇ  ಹಿನ್ನೆಲೆಗೆ ಸರಿಸಿದಂತಾಗುವುದಿಲ್ಲವೆ ಎಂಬುದು ಪ್ರಶ್ನೆ.ಏಕೆಂದರೆ, ಪಾನನಿಷೇಧದ ಅನುಷ್ಠಾನಕ್ಕಾಗಿ ಪರ್ಯಾಯ ಪೊಲೀಸ್ ವ್ಯವಸ್ಥೆ  ಬಲವಾಗಿ ಬೆಳೆಯುವುದಕ್ಕೆ ಆಸ್ಪದ ನೀಡಿದಂತಾಗುತ್ತದೆ ಎಂಬ ಭೀತಿ ಸಹಜವಾದದ್ದು.ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿಯಬಹುದಾದ ಅತಿಯಾದ ಸಂರಕ್ಷಕ ಧೋರಣೆಯ ಸರ್ಕಾರವಾಗುವಂತಹ (ನ್ಯಾನಿ ಸ್ಟೇಟ್) ಬೆಳವಣಿಗೆ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅಪಚಾರ ಮಾಡುವಂತಹದ್ದು.ಮದ್ಯವ್ಯಸನ ಸಾಮಾಜಿಕ ಪಿಡುಗು ಎಂಬುದು ನಿಜ. ಆದರೆ ಸಂಪೂರ್ಣ ಪಾನನಿಷೇಧದಿಂದ  ಆಗಿರುವ ಪರಿಣಾಮ ಸೀಮಿತ ಅಥವಾ ಅದು ಹಾನಿಕರ ಪರಿಣಾಮಗಳನ್ನೇ ಉಂಟು ಮಾಡಿದೆ ಎಂಬುದೂ ಅಧ್ಯಯನಗಳಿಂದ ವ್ಯಕ್ತ. ಪಾನನಿಷೇಧದಿಂದ ಮದ್ಯ ಮಾರಾಟ ಭೂಗತವಾಗುತ್ತದೆ. ಕಳ್ಳಬಟ್ಟಿ ದಂಧೆ ಬೆಳೆಯುತ್ತದೆ. ಅದನ್ನು ನಿಯಂತ್ರಿಸುವುದು ಕಷ್ಟ ಎಂಬುದು ಜಾಗತಿಕವಾಗಿ ಕಂಡುಕೊಂಡಿರುವ ಸತ್ಯ.ಅಮೆರಿಕದಲ್ಲಿ ಜಾರಿಗೊಳಿಸಲಾದ ಪಾನನಿಷೇಧ, ಜಗತ್ತಿನಲ್ಲಿಯೇ ಮೊದಲ ಬಾರಿಗೆ ವ್ಯವಸ್ಥಿತ ಮಾಫಿಯಾ ಜಾಲ ತಲೆ ಎತ್ತುವುದಕ್ಕೆ  ಕಾರಣವಾಯಿತು.ಸ್ವಾತಂತ್ರ್ಯಾನಂತರದಲ್ಲಿ ಒಂದಾದ ಮೇಲೆ ಒಂದರಂತೆ ರಾಜ್ಯ ಸರ್ಕಾರಗಳು ಪಾನ ನಿಷೇಧವನ್ನು ರಾಷ್ಟ್ರದಲ್ಲಿ ಜಾರಿಗೊಳಿಸಿಕೊಂಡು ಬಂದಿವೆ.1950ರಲ್ಲಿ ಬಾಂಬೆ ಮುಖ್ಯಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿ ಅವರು ಮೊದಲ ಬಾರಿಗೆ ಬಾಂಬೆ ಪಾನನಿಷೇಧ ಕಾಯಿದೆ ಜಾರಿಗೊಳಿಸುತ್ತಾರೆ. ಇದು ಮುಂದಿನ ದಿನಗಳಲ್ಲಿ   ಬಾಂಬೆ ಭೂಗತ ಜಗತ್ತು ದೊಡ್ಡದಾಗಿ ಬೆಳೆಯುವುದಕ್ಕೆ  ಕಾರಣವಾಗುತ್ತದೆ. ಹಾಜಿಮಸ್ತಾನ, ದಾವೂದ್ ಇಬ್ರಾಹಿಂನಂತಹ  ಪಾತಕಿಗಳ ಸಾಮ್ರಾಜ್ಯ ನಿರ್ಮಾಣಕ್ಕೆ ನಾಂದಿಯಾಗುತ್ತದೆ. ಪೊಲೀಸ್, ಅಬಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಅಪವಿತ್ರ ಮೈತ್ರಿ ದೊಡ್ಡಮಟ್ಟದಲ್ಲಿ ಬೆಳೆಯುತ್ತದೆ.ಗುಜರಾತ್‌ನಲ್ಲೂ ಪಾನನಿಷೇಧ ಜಾರಿಯಲ್ಲಿದೆ. ಆದರೆ ಅಲ್ಲಿ ಮದ್ಯಸೇವನೆ ಕಡಿಮೆಯಾಗಿಲ್ಲ. ನಾಗಾಲ್ಯಾಂಡ್ ಹಾಗೂ ಮಣಿಪುರದ ಕೆಲವು ಭಾಗಗಳಲ್ಲಿ ಪಾನನಿಷೇಧ ಈಗಲೂ ಜಾರಿಯಲ್ಲಿದೆ. 18 ವರ್ಷಗಳ ಕಾಲ ಜಾರಿಯಲ್ಲಿದ್ದ ಪಾನನಿಷೇಧವನ್ನು ಕಳೆದ ವರ್ಷವಷ್ಟೆ ಮಿಜೊರಾಂನಲ್ಲಿ ಹಿಂತೆಗೆದುಕೊಳ್ಳಲಾಗಿದೆ.ಹಂತಹಂತವಾಗಿ ಪಾನನಿಷೇಧ ಜಾರಿಗೊಳಿಸುವ ಆಶ್ವಾಸನೆಯೊಂದಿಗೆ ತಮಿಳುನಾಡಿನಲ್ಲಿ ಎಐಎಡಿಎಂಕೆ ಕಳೆದ ಮೇ ತಿಂಗಳ ಚುನಾವಣೆಯಲ್ಲಿ ಮರಳಿ ಅಧಿಕಾರ ಗದ್ದುಗೆಗೆ ಏರಿದೆ. ಆದರೆ, ಪಾನನಿಷೇಧಕ್ಕೆ ತಮಿಳುನಾಡು ಅಪರಿಚಿತವೇನೂ ಅಲ್ಲ .  ದಶಕಗಳ ಕಾಲ ಪಾನನಿಷೇಧದ ಕಾನೂನುಗಳ ಜೊತೆ ಡಿಎಂಕೆ ಆಟವಾಡಿದೆ. ಇನ್ನು, ಕೇರಳದಲ್ಲಿ ಹಂತಹಂತವಾಗಿ ಪಾನನಿಷೇಧ ಜಾರಿಗೆ ತರಲು 2014ರಲ್ಲಿದ್ದ ಯುಡಿಎಫ್ ಸರ್ಕಾರ ಮುಂದಾಯಿತು. ಈಗ ಕೇರಳದಲ್ಲಿ ಎಲ್‌ಡಿಎಫ್ ಸರ್ಕಾರ ಈ ನಿಷೇಧ ಹಿಂತೆಗೆದುಕೊಳ್ಳುವ ಮಾತನಾಡಿದೆ.1990ರ ದಶಕದಲ್ಲಿ ಅವಿಭಜಿತ ಆಂಧ್ರ ಪ್ರದೇಶದಲ್ಲಿ ಮಹಿಳಾ ಮತದಾರರನ್ನು ಒಲಿಸಿಕೊಳ್ಳಲು ಚುನಾವಣಾ ಪ್ರಣಾಳಿಕೆಯ ವಿಚಾರವಾಗಿ ಮದ್ಯ ನಿಷೇಧ ವಿಚಾರ ಮುಂಚೂಣಿಗೆ ಬಂತು. ನೆಲ್ಲೂರು ಜಿಲ್ಲೆಯ ದುಬಗುಂಟ ಗ್ರಾಮದ ನವಸಾಕ್ಷರ ಮಹಿಳೆಯರು ಆರಂಭಿಸಿದ ಸಾರಾಯಿ ವಿರೋಧಿ ಆಂದೋಲನ ರಾಜ್ಯದಾದ್ಯಂತ ವ್ಯಾಪಿಸಿದ್ದರಿಂದ  ಆಗಿನ ಮುಖ್ಯಮಂತ್ರಿ ಕೆ ವಿಜಯಭಾಸ್ಕರ ರೆಡ್ಡಿ ಅವರು 1993ರ ಅ. 1ರಿಂದ ಸಾರಾಯಿ ನಿಷೇಧಿಸಿದರು. ಆದರೆ ಭಾರತೀಯ ತಯಾರಿಕೆಯ ವಿದೇಶಿ ಮದ್ಯ (ಐಎಂಎಫ್‌ಎಲ್) ಮಾರಾಟಕ್ಕೆ ತಡೆ ಇರಲಿಲ್ಲ.ಹೀಗಾಗಿ ಸಂಪೂರ್ಣ ಪಾನನಿಷೇಧಕ್ಕೆ ಆಗ್ರಹ ಶುರುವಾಯಿತು. ಇದನ್ನೇ ಚುನಾವಣಾ ವಿಷಯವಾಗಿಸಿಕೊಂಡ ತೆಲುಗುದೇಶಂ ಪಕ್ಷದ ಎನ್ ಟಿ ರಾಮರಾವ್ 1994ರ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದರು.ನಿರ್ದಿಷ್ಟ ಪಕ್ಷಕ್ಕೆ ಗೆಲುವು ತಂದುಕೊಡಲು ಮಹಿಳಾ ಮತದಾರರಿಗೆ ಇರುವ ಸಾಮರ್ಥ್ಯವನ್ನು ಇದು ಪ್ರತಿಪಾದಿಸಿದೆ ಎಂಬೆಲ್ಲಾ ವಿಶ್ಲೇಷಣೆಗಳು ಆಗ ಹೊರಬಂದವು. ಆದರೆ ಇದಾದ ಎರಡು ವರ್ಷಗಳ ನಂತರ ಕೇರಳದಲ್ಲಿ ಆಗಿನ ಮುಖ್ಯಮಂತ್ರಿ ಎ.ಕೆ.ಆಂಟನಿಯವರೂ ತಮ್ಮ ರಾಜ್ಯದಲ್ಲಿ ಸಾರಾಯಿ ನಿಷೇಧಿಸಿದರು. ಈ ನಿರ್ಧಾರಕ್ಕೆ ಬರಲು ಅವರಿಗೂ ಕಾರಣವಾಗಿದ್ದು ಮಹಿಳಾ ಮತದಾರರು.ಸಾರಾಯಿ ಅಂಗಡಿಗಳ ವಿರುದ್ಧ ಮಹಿಳೆಯರು ನಡೆಸಿದ ಚಳವಳಿಗಳು ಇದಕ್ಕೆ ಕಾರಣವಾಗಿದ್ದವು. ಆದರೆ 1996ರ ಚುನಾವಣೆಯಲ್ಲಿ ಆಂಟನಿ ಸೋಲನುಭವಿಸಿದರು. ಎನ್‌ಟಿಆರ್‌ ಮುಖ್ಯಮಂತ್ರಿಯಾದ ನಂತರ 1995ರಲ್ಲಿ ಆಂಧ್ರದಲ್ಲಿ ಜಾರಿಗೆ ತಂದಿದ್ದ ಪಾನನಿಷೇಧವನ್ನು  ಎರಡೇ ವರ್ಷಗಳಲ್ಲಿ  ರಾಜ್ಯ ಸಂಪನ್ಮೂಲ ಸಂಗ್ರಹಕ್ಕೆ ಧಕ್ಕೆಯಾಗುತ್ತಿದೆ ಎಂಬ ನೆಪ  ಒಡ್ಡಿ ಹಿಂತೆಗೆದುಕೊಳ್ಳಲಾಯಿತು ಎಂಬುದು ಇತಿಹಾಸ.ಪಾನನಿಷೇಧ ಎಂಬುದು ರಾಜಕೀಯವಾಗಿ ಸಶಕ್ತವಾದ ವಿಚಾರವಾಗಿಯೇ ಬಿಂಬಿತಗೊಂಡು ಬಂದಿದೆ. ಬಹುಶಃ  ಇದಕ್ಕೆ ಸಂವಿಧಾನದ ಬಲ ಇರುವುದೂ ಕಾರಣ. ಆರೋಗ್ಯಕ್ಕೆ ಹಾನಿಕರವಾದ ಅಮಲೇರಿಸುವ ಪಾನೀಯಗಳು ಹಾಗೂ ಮಾದಕವಸ್ತುಗಳನ್ನು ಔಷಧೀಯ ಉದ್ದೇಶಗಳಿಗಲ್ಲದೆ ಪಾನನಿಷೇಧ ಜಾರಿಗೊಳಿಸಲು ಸರ್ಕಾರ ಪ್ರಯತ್ನ ಪಡೆಬೇಕು ಎಂದು ರಾಜ್ಯ ನೀತಿಯ ಮಾರ್ಗದರ್ಶಿ ತತ್ವಗಳ 47ನೇ ವಿಧಿ ಹೇಳುತ್ತದೆ. ಮದ್ಯ ವಿರೋಧಿಸಿ ಗಾಂಧೀಜಿ ನಡೆಸಿದ ಹೋರಾಟವೂ ಇದಕ್ಕೆ ಪ್ರೇರಕವಾಗಿರಬಹುದು. ಆದರೆ ಸಂವಿಧಾನಸಭೆಯಲ್ಲಿ ಈ ಕುರಿತು ನಡೆದ ಚರ್ಚೆಗಳು ಸಂಕೀರ್ಣ ಆಯಾಮಗಳನ್ನು ಪ್ರದರ್ಶಿಸುತ್ತವೆ.ಪಾನನಿಷೇಧಕ್ಕಾಗಿ ನಡೆಸುವ ವಾದವಿವಾದಗಳಲ್ಲಿ ದೇಶಭಕ್ತಿಯ ಉತ್ಸಾಹವಲ್ಲದೆ  ಧಾರ್ಮಿಕ ಭಾವನೆಯೂ ಮಿಳಿತವಾದುದು ಕಂಡು ಬರುತ್ತದೆ. ‘ಮದ್ಯ ಎಂಬುದು ಪಾಶ್ಚಿಮಾತ್ಯ ವಿಷವಾಗುತ್ತದೆ. ಸ್ವತಂತ್ರ ಭಾರತದಲ್ಲಿ ಅದಕ್ಕೆ ಅವಕಾಶವಿಲ್ಲ’ ಎಂದು ಸಂವಿಧಾನ ಸಭೆ ಸದಸ್ಯರಲ್ಲೊಬ್ಬರಾದ ವಿ. ಐ. ಮುನಿಸ್ವಾಮಿ ಪಿಳ್ಳೈ ಹೇಳಿದ್ದರು.  ‘ಬ್ರಿಟಿಷರು ಇಲ್ಲಿಗೆ ಬಂದಾಗ ವಿಸ್ಕಿಬಾಟಲ್ ಜೊತೆಗೇ ತಂದರು. ಈ ನೆಲದ ಆಡಳಿತ ಬಿಟ್ಟುಕೊಟ್ಟು ತೆರಳಿದಾಗ  ವೈನ್ ಸಹ ಮಾಯವಾಯಿತು ಎಂದು ಭಾವಿಸಬೇಕು..’ ಎಂದಿದ್ದರು ಅವರು.ಕುಡಿಯುವ ಚಟ ಇರುವುದು ದಲಿತರು, ಬಡ ಶ್ರಮಿಕರಲ್ಲಿ. ಇದರಿಂದ ಅವರನ್ನು ರಕ್ಷಿಸಬೇಕು  ಎಂಬಂತಹ ಅನುಗ್ರಹಪೂರ್ವಕ ಧೋರಣೆಯೂ ಎದುರಾಗುತ್ತದೆ. ಮದ್ಯವನ್ನು ಪಾಶ್ಚಿಮಾತ್ಯ ಪ್ರಭಾವವಾಗಷ್ಟೇ ನೋಡಲಾಗುತ್ತದೆ. ಆದರೆ ಬ್ರಿಟಿಷರ ಹೊರತಾಗಿಯೂ ದೇಶಿ ರೂಪಗಳಲ್ಲಿರುವ ಮದ್ಯದ ಅಸ್ತಿತ್ವವನ್ನು ಕಡೆಗಣಿಸಲಾಗುತ್ತದೆ.ಬಿಹಾರದ ಸದಸ್ಯ ಜೈಪಾಲ್ ಸಿಂಗ್ ಅವರು ‘ಧಾರ್ಮಿಕ ಆಚರಣೆಗಳಲ್ಲಿ ಅಕ್ಕಿಯಿಂದ ಮಾಡಿದ ಮದ್ಯವನ್ನು ಆದಿವಾಸಿಗಳು ಬಳಸುತ್ತಾರೆ. ಅದು ಅವರ ನಿತ್ಯ ಜೀವನದ ಭಾಗವಾಗಿದೆ’ ಎಂದು ಹೇಳಿದಾಗ  ಸಂವಿಧಾನ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗುತ್ತದೆ. ಪ್ರತಿ ಪ್ರದೇಶದಲ್ಲೂ ಮದ್ಯ ತಯಾರಿಕೆಯ ದೇಶಿ ಸಂಪ್ರದಾಯಗಳಿವೆ. ಅದರದೇ ವಿಶೇಷತೆಗಳೂ ಇವೆ ಎಂಬುದನ್ನು ಮರೆಯಲಾಗದು. ಮದ್ಯ ವ್ಯಸನಿಯಿಂದಾಗಿ ಕುಟುಂಬ ಹಾಗೂ ಸಮಾಜ ಹಾಳಾಗುತ್ತದೆ ಎಂಬಂತಹ ವಾದ ಮದ್ಯ ವಿರೋಧಿ ಆಂದೋಲನಗಳ ಕೇಂದ್ರಬಿಂದು. ಇದು ನಿಜವೂ ಹೌದು. ಕುಡುಕ ಗಂಡಂದಿರಿಂದಾಗಿ ಬಡ ಮಹಿಳೆಯರ ಬಾಳು ಕಣ್ಣೀರಕಥೆಗಳಾಗಿರುವುದೂ ನಿಜ. ಇದರಿಂದ ಸಿಡಿದೆದ್ದು ಸಾರಾಯಿ ವಿರೋಧಿ ಆಂದೋಲನಗಳಲ್ಲಿ ಪಾಲ್ಗೊಂಡು ಯಶಸ್ಸು ಪಡೆದ ಮಹಿಳೆಯರ ದಿಟ್ಟತನವೂ  ಅಭಿನಂದನೀಯವೇ. ಆದರೆ ಈ ಸಮಸ್ಯೆಗಳಿಗೆ ಪಾನನಿಷೇಧ ಉತ್ತರವಾಗಬಲ್ಲದೆ ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿಯುತ್ತದೆ.ಮದ್ಯ ನಿಷೇಧಿಸುವ ಕ್ರಮದಲ್ಲೇ ಸಾಮಾಜಿಕವಾಗಿ ಸಂಪ್ರದಾಯಶೀಲವಾದ ಮೌಲ್ಯ ಹೇರಿಕೆಯ ತತ್ವವಿರುತ್ತದೆ. ಆದರೆ ಮದ್ಯವ್ಯಸನವಾಗುವುದು ಅಥವಾ ಚಟವಾಗುವುದನ್ನು ನಿಯಂತ್ರಿಸುವುದು ಆದ್ಯತೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಬಹುಶಃ ಇದು ಹೆಚ್ಚು ಅನುಕೂಲಕರ ಮಾರ್ಗ. ಕರ್ನಾಟಕದಲ್ಲಿ ಈಗ ಸಾರಾಯಿ ನಿಷೇಧವಾಗಿದೆ.ಆದರೆ ಬೀದಿಬೀದಿಗಳಲ್ಲಿ ಮದ್ಯದಂಗಡಿಗಳು ತಲೆಎತ್ತಿವೆ. ಹಳ್ಳಿಗಳಲ್ಲಿ ದೂರ ಎಲ್ಲೋ ಇದ್ದ ಗಡಂಗುಗಳು ಈಗ ಮನೆಗಳ ಪಕ್ಕಕ್ಕೆ ಬಂದಂತಹ ವೈನ್ ಅಂಗಡಿಗಳಾಗಿರುವುದು ಕಟುವಾಸ್ತವ. ಈ ವರ್ತುಲ  ಕೊನೆಯಾಗುವುದು ಎಂದು? ಲೇಖಕ ದೇವನೂರ ಮಹಾದೇವ ಅವರು  ಕಾಂಗ್ರೆಸ್ ನಾಯಕ ಟಿ. ಎನ್. ನರಸಿಂಹಮೂರ್ತಿ ಅವರ ‘ಮದ್ಯಪಾನ ರದ್ದಾಗಲಿ’ ಹೇಳಿಕೆಗೆ ಹೀಗೆ ಪ್ರತಿಕ್ರಿಯಿಸಿದ್ದಾರೆ: ‘ಮದ್ಯಪಾನ ರದ್ದು ಕೂಡ ಆಗಿ ಸೋತಿದೆ.ಮದ್ಯಪಾನ, ಲಾಟರಿ, ಕುದುರೆಜೂಜು ಇತ್ಯಾದಿಗಳಿಂದ ಬರುವ ಕೋಟಿಗಟ್ಟಲೆ ಕಾಂಚಾಣ  ಯಾವ ಸರ್ಕಾರವನ್ನೇ ಆಗಲಿ ಮೋಹಿಸಿ ಬಲಿ ತೆಗೆದುಕೊಳ್ಳುವಂತಹ ಶಕ್ತಿ ಉಳ್ಳದ್ದು. ಆದ್ದರಿಂದ ಮದ್ಯಪಾನ ರದ್ದಾಗಬೇಕಾದರೆ ಅದರಲ್ಲಿ ವ್ಯಾವಹಾರಿಕತೆಗಿಂತ  ಭಾವನಾತ್ಮಕವಾದ ಪ್ರಬಲ ಮನಸ್ಸಿರಬೇಕಾಗುತ್ತದೆ. ಅಂದರೆ, ಮದ್ಯಪಾನ ರದ್ದು ಮಾಡುವ ಸರ್ಕಾರಕ್ಕೆ ತನ್ನ ಸಂಬಂಧಿಗಳು ಈ ಮದ್ಯಪಾನದಿಂದ ಹಾಳಾಗುತ್ತಿದ್ದಾರೆ ಎಂದು ಬಲವಾಗಿ ಅನ್ನಿಸಬೇಕಾಗುತ್ತದೆ.ಈ ರೀತಿ ಅನ್ನಿಸಬೇಕಾದರೆ ಕುಡಿತದ ಜಗತ್ತಿನಿಂದ  ಬಂದವರ ಕೈಲಿ ಸರ್ಕಾರ ಇದ್ದೂ ಅವರ ಕೈಲೇ ಅಧಿಕಾರವೂ ಇರಬೇಕಾಗುತ್ತದೆ. ಇದಾದರೂ ಆಗದೆ ಇರಬಹುದು. ಆದರೆ ನಿಜವಾದ ಗಾಂಧಿ ತಾತ್ವಿಕತೆ ಉಳ್ಳಂತ  ಇಚ್ಛಾಶಕ್ತಿ ಅಧಿಕಾರದಲ್ಲಿದ್ದರೆ ಮದ್ಯಪಾನ ರದ್ದಾಗುವ ಸಾಧ್ಯತೆಗಳಿವೆ. ಇಲ್ಲದಿದ್ದರೆ ಮದ್ಯಪಾನ ರದ್ದಿನಿಂದ ಆಗುವ ಕೋಟಿಗಟ್ಟಲೆ ಹಣದ ನಷ್ಟವನ್ನು ಕಳೆದುಕೊಳ್ಳಲು ಸಹಜವಾಗೇ ಯಾರೂ ಬಯಸುವುದಿಲ್ಲ.  ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಮದ್ಯಪಾನ ರದ್ದು ಒಂದು ಆದರ್ಶ ಅಷ್ಟೆ.’

( ಎದೆಗೆ ಬಿದ್ದ ಅಕ್ಷರ )  ಈ ಆದರ್ಶ ಬಿಹಾರದಲ್ಲಿ ಹೇಗೆ ವಾಸ್ತವವಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry