ನಿರ್ವಹಣಾ ಮಂಡಳಿ ರಚನೆ: ‘ಸುಪ್ರೀಂ’ ಅಧಿಕಾರ ವ್ಯಾಪ್ತಿ ಪ್ರಶ್ನಿಸಿದ ಕೇಂದ್ರ

7

ನಿರ್ವಹಣಾ ಮಂಡಳಿ ರಚನೆ: ‘ಸುಪ್ರೀಂ’ ಅಧಿಕಾರ ವ್ಯಾಪ್ತಿ ಪ್ರಶ್ನಿಸಿದ ಕೇಂದ್ರ

Published:
Updated:
ನಿರ್ವಹಣಾ ಮಂಡಳಿ ರಚನೆ: ‘ಸುಪ್ರೀಂ’ ಅಧಿಕಾರ ವ್ಯಾಪ್ತಿ ಪ್ರಶ್ನಿಸಿದ ಕೇಂದ್ರ

ನವದೆಹಲಿ: ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ನಿರ್ದೇಶನ ನೀಡುವ ಅಧಿಕಾರ ಸುಪ್ರೀಂಕೋರ್ಟ್‌ಗೆ ಇಲ್ಲ ಎಂದು ತಿಳಿಸಿರುವ ಕೇಂದ್ರ ಸರ್ಕಾರ, ಸೆ. 20 ಮತ್ತು 30ರಂದು ನೀಡಿರುವ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ಸೋಮವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.ನಿರ್ವಹಣಾ ಮಂಡಳಿ ರಚನೆಯನ್ನು ವಿರೋಧಿಸಿ 2013ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಬಾಕಿ ಇದೆ. ಉಭಯ ಸದನಗಳಲ್ಲಿ ಚರ್ಚಿಸಿದ ಬಳಿಕ ಮಂಡಳಿ ರಚಿಸುವ ಅಧಿಕಾರ ಸಂಸತ್ತಿನದ್ದಾಗಿದೆ. ಮಂಡಳಿ ರಚಿಸುವಂತೆ ನಿರ್ದೇಶನ ನೀಡುವ ಅಧಿಕಾರ ಕೋರ್ಟ್ ವ್ಯಾಪ್ತಿಗೆ ಸೇರದ್ದರಿಂದ ಆದೇಶ ಮಾರ್ಪಾಡು ಮಾಡಬೇಕು ಎಂದು ಆಗ್ರಹಿಸಲಾಗಿದೆ.ರಾಷ್ಟ್ರದಲ್ಲಿನ ವಿವಿಧ ನದಿಗಳ ನೀರು ಹಂಚಿಕೆಗೆ ಸಂಬಂಧಿಸಿದಂತೆ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಭಾಕ್ರಾ– ಬಿಯಾಸ್‌ ನಿರ್ವಹಣಾ ಮಂಡಳಿ ಹಾಗೂ ಇತರ ಅನೇಕ ಮಂಡಳಿಗಳನ್ನು ಕೇಂದ್ರ ಸರ್ಕಾರವೇ ರಚಿಸಿದೆ. ನ್ಯಾಯಾಲಯವು ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ನಿರ್ದೇಶನ ನೀಡುವ ಮೂಲಕ ಅಂತರರಾಜ್ಯ ಜಲವಿವಾದ ಕಾಯ್ದೆ– 1956ರ ಸೆಕ್ಷನ್‌ 15ರ ಅಡಿ ಕೇಂದ್ರ ಸರ್ಕಾರಕ್ಕಿರುವ ಅಧಿಕಾರವನ್ನು ಕಿತ್ತುಕೊಂಡಂತಾಗಲಿದೆ ಎಂದು ಒತ್ತಿ ಹೇಳಲಾಗಿದೆ.ಜಲವಿವಾದ ನ್ಯಾಯಮಂಡಳಿಗೂ ಮಂಡಳಿ ರಚಿಸುವಂತೆ ಶಿಫಾರಸು ಮಾಡಲು ಅಧಿಕಾರವಿಲ್ಲ. ಮಂಡಳಿ ರಚನೆಯು ಶಾಸಕಾಂಗದ ಅಧಿಕಾರ ವ್ಯಾಪ್ತಿಗೆ ಸೇರಿದೆ ಎಂದು ತಿಳಿಸಲಾಗಿದೆ.ತಾಂತ್ರಿಕ ತಂಡ ರವಾನೆ: ಕೇಂದ್ರ ಸರ್ಕಾರವು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಎದುರಿಸುತ್ತಿರುವ ಗಂಭೀರ ಸಮಸ್ಯೆಯ ಕುರಿತು ಮಾಹಿತಿ ಪಡೆದಿದೆ. ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಸಂಧಾನಕ್ಕೆ ಯತ್ನಿಸಿದರೂ ಪ್ರಯೋಜನವಾಗಿಲ್ಲ.  ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್‌. ಝಾ, ಸದಸ್ಯ ಮಸೂದ್‌ ಹುಸೇನ್‌, ಮುಖ್ಯ ಎಂಜಿನಿಯರ್‌ ಆರ್‌.ಕೆ. ಗುಪ್ತಾ ಅವರನ್ನು ಒಳಗೊಂಡ ತಾಂತ್ರಿಕ ಉನ್ನತಾಧಿಕಾರ ತಂಡವನ್ನು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಕಾವೇರಿ ಕಣಿವೆಗೆ ಅಧ್ಯಯನಕ್ಕೆ ಕಳುಹಿಸಲಿದ್ದು, ನ್ಯಾಯಾಲಯ ಅನುಮತಿ ನೀಡಬೇಕು ಎಂದು ಈ ಮೂಲಕ ಕೋರಲಾಗಿದೆ.

ಕಾವೇರಿ ಕಣಿವೆ ಪ್ರದೇಶವು 81,000 ಚದರ ಕಿಲೋಮೀಟರ್‌ ವ್ಯಾಪ್ತಿ ಹೊಂದಿದ್ದು, ಕೇವಲ ಒಂದು ಅಥವಾ ಎರಡು ದಿನಗಳಲ್ಲಿ ಅಧ್ಯಯನ ಅಸಾಧ್ಯ. ಆ ಪ್ರದೇಶದಲ್ಲಿ ಸಂಚರಿಸಿ ಕ್ಷಿಪ್ರಗತಿಯಲ್ಲಿ ಅಧ್ಯಯನ ನಡೆಸಲು ಕನಿಷ್ಠ 10 ದಿನಗಳ ಕಾಲಾವಕಾಶ ಬೇಕು. ತಜ್ಞರ ತಂಡವು ಜಲಾನಯನ, ಅಣೆಕಟ್ಟೆಗಳಲ್ಲಿನ ಸಂಗ್ರಹ, ಅಚ್ಚುಕಟ್ಟು ಪ್ರದೇಶ, ಬೆಳೆಯ ಸ್ಥಿತಿಗತಿ, ಕುಡಿಯುವ ನೀರಿನ ಅಗತ್ಯ ಕುರಿತು ಅಧ್ಯಯನ ನಡೆಸಿ, ಕೋರ್ಟ್‌ಗೆ ವಾಸ್ತವ ವರದಿ ಸಲ್ಲಿಸಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.ಕ್ಷಮೆ ಯಾಚನೆ: ಕೋರ್ಟ್‌ನ ರಿಜಿಸ್ಟ್ರಾರ್‌ಗೆ ಬೆಳಿಗ್ಗೆ ಆದೇಶ ಮಾರ್ಪಾಡು ಅರ್ಜಿ ಸಲ್ಲಿಸಿದ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ, ನಂತರ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನೇತೃತ್ವದ ದ್ವಿಸದಸ್ಯ ಪೀಠದೆದುರು ವಿಷಯ ಪ್ರಸ್ತಾಪಿಸಿದರು. ‘ಇಂದೇ ವಿಚಾರಣೆ ಕೈಗೆತ್ತಿಕೊಳ್ಳಬೇಕು’ ಎಂದೂ ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry