ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ರಾಜ್ಯಕ್ಕೆ ನಿರಾಳಭಾವ

ವಸ್ತುಸ್ಥಿತಿ ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆ l ನೀರು ನಿರ್ವಹಣಾ ಮಂಡಳಿ ರಚನೆಗೆ ತಡೆ
Last Updated 5 ಅಕ್ಟೋಬರ್ 2016, 7:46 IST
ಅಕ್ಷರ ಗಾತ್ರ

ನವದೆಹಲಿ: ಕಾವೇರಿ ನಿರ್ವಹಣಾ ಮಂಡಳಿಯ ತೂಗುಕತ್ತಿಯನ್ನು ತಾತ್ಕಾಲಿಕವಾಗಿ ದೂರವಾಗಿಸುವ ಮೂಲಕ ಮಂಗಳವಾರ ಕರ್ನಾಟಕ ನಿರಾಳವಾಗುವಂತೆ ಮಾಡಿದ ಸುಪ್ರೀಂ ಕೋರ್ಟ್‌, ಮತ್ತೆ ಎರಡು ಟಿಎಂಸಿ ಅಡಿ ನೀರು ಹರಿಸುವ ಹೊರೆಯನ್ನು ರಾಜ್ಯದ ಮೇಲೆ ಹೊರಿಸಿದೆ.

ಮಂಡಳಿ ರಚಿಸುವಂತೆ ಸೂಚಿಸಿ ಸೆ. 20 ಮತ್ತು 30ರಂದು ನೀಡಿದ್ದ ಆದೇಶವನ್ನು ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಾಹ್ನ ವಿಚಾರಣೆಗೆ ಎತ್ತಿಕೊಂಡ ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ ಮತ್ತು ಉದಯ್‌ ಲಲಿತ್‌ ಅವರನ್ನು ಒಳಗೊಂಡ ಪೀಠ, ಕಾವೇರಿ ಮೇಲುಸ್ತುವಾರಿ ಸಮಿತಿಗೆ ವಸ್ತುಸ್ಥಿತಿ ಅಧ್ಯಯನದ ಹೊಣೆಗಾರಿಕೆ ಒಪ್ಪಿಸಿತು.

10 ದಿನಗಳ ಕಾಲ ಕಾವೇರಿ ಕಣಿವೆಯಲ್ಲಿ ಸಂಚರಿಸುವ ಮೂಲಕ ಅಧ್ಯಯನ ನಡೆಸಿ, ವಸ್ತುಸ್ಥಿತಿ ಅರಿಯಬೇಕು. ಆ ಕುರಿತ ವರದಿಯನ್ನು ಅ. 17ರೊಳಗೆ ಸಲ್ಲಿಸಬೇಕು ಎಂದು ಸಮಿತಿಗೆ ಸೂಚಿಸಿದ ನ್ಯಾಯಪೀಠ, ಅಲ್ಲಿಯತನಕ (ಅ.7 ರಿಂದ 18ರವರೆಗೆ 12 ದಿನಗಳ ಕಾಲ) ಕರ್ನಾಟಕವು ತಮಿಳುನಾಡಿಗೆ ನಿತ್ಯ 2,000 ಕ್ಯುಸೆಕ್ (2 ಟಿಎಂಸಿ ಅಡಿಗಿಂತ ತುಸು ಹೆಚ್ಚು) ನೀರು ಬಿಡಲೇಬೇಕು ಎಂದು ಆದೇಶಿಸಿತು.

ಕೇಂದ್ರದ ಸಮರ್ಥನೆ:ಮಂಡಳಿ ರಚಿಸುವಂತೆ ಸೂಚಿಸುವ ಅಧಿಕಾರ ವ್ಯಾಪ್ತಿ ನ್ಯಾಯಾಲಯಕ್ಕೆ ಇಲ್ಲ. ಹೀಗೆ ನಿರ್ದೇಶನ ನೀಡಿದಲ್ಲಿ, ಅಂತರರಾಜ್ಯ ಜಲವಿವಾದ ಕಾಯ್ದೆ– 1956ರ ಸೆಕ್ಷನ್‌ 15ರ ಅಡಿ ಕೇಂದ್ರ ಸರ್ಕಾರಕ್ಕೆ ಇರುವ ಅಧಿಕಾರವನ್ನು ಕಿತ್ತುಕೊಂಡಂತಾಗುತ್ತದೆ. ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚಿಸುವ ಮೂಲಕ ಮಂಡಳಿ ರಚಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ ಎಂದು ಅಟಾರ್ನಿ ಜನರಲ್‌ ಮುಕುಲ್‌ ರೋಹಟ್ಗಿ ಕೋರ್ಟ್‌ಗೆ ಮನವರಿಕೆ ಮಾಡಿದರು.

ಕಾವೇರಿ ನ್ಯಾಯ ಮಂಡಳಿಯು ನಿರ್ವಹಣಾ ಮಂಡಳಿ ರಚಿಸಬಹುದು ಎಂಬ ಶಿಫಾರಸು ಮಾಡಿದೆ. ನ್ಯಾಯಮಂಡಳಿಯ ಅಂತಿಮ ಐತೀರ್ಪಿನ ಅಧಿಸೂಚನೆಯನ್ನು 2013ರಲ್ಲಿ ಕೆಲವು ಷರತ್ತುಗಳನ್ನು ವಿಧಿಸಿ ಹೊರಡಿಸಲಾಗಿದೆ. ಐತೀರ್ಪನ್ನು ವಿರೋಧಿಸಿ ಕಣಿವೆ ವ್ಯಾಪ್ತಿಯ ನಾಲ್ಕೂ ರಾಜ್ಯಗಳು ಅನೇಕ ಸಿವಿಲ್‌ ಅರ್ಜಿಗಳನ್ನು ಸಲ್ಲಿಸಿವೆ. ಇದುವರೆಗೆ ಆ ಅರ್ಜಿಗಳ ವಿಚಾರಣೆ ಮುಗಿದಿಲ್ಲ. ಆ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ನೀಡಲಾಗುವ ತೀರ್ಪುಗಳಿಗೆ ಅಧಿಸೂಚನೆಯು ಬದ್ಧವಾಗಿರುತ್ತದೆ ಎಂದು ಅವರು ವಿವರ ನೀಡಿದರು.

‘ಮಂಡಳಿ ರಚನೆಯ ಕುರಿತು ನ್ಯಾಯಮಂಡಳಿಯು ಕೇವಲ ಶಿಫಾರಸು ಮಾಡಿದೆಯೇ ವಿನಾ ಅದು ತೀರ್ಪಿನ ಭಾಗವಲ್ಲ. ಆದರೂ ಮಂಡಳಿ ರಚಿಸುವಂತೆ ತಮಿಳುನಾಡು 2013ರಿಂದಲೇ ಮನವಿ ಮಾಡುತ್ತಿದೆ. ಒಂದೊಮ್ಮೆ ಬಾಕಿ ಇರುವ ಸಿವಿಲ್‌ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ ನಂತರ ಮಂಡಳಿ ರಚನೆಯ ಶಿಫಾರಸನ್ನೇ ಎತ್ತಿ ಹಿಡಿದರೂ, ನಾವು ಮಂಡಳಿ ರಚಿಸಬೇಕೆಂದೇನೂ ಇಲ್ಲ’ ಎಂದು ಅವರು ಸಮರ್ಥಿಸಿಕೊಂಡರು.

ಅಂತರರಾಜ್ಯ ಜಲವಿವಾದ ಕಾಯ್ದೆ–1956ರ ಸೆಕ್ಷನ್‌ 6 ಮತ್ತು 6 ‘ಎ’ ಪ್ರಕಾರ ಮಂಡಳಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರವು ಯೋಜನೆಯನ್ನು ರೂಪಿಸಬೇಕೆಂಬ ನಿಯಮವಿದೆ ಎಂದು ಅವರು ತಿಳಿಸಿದಾಗ, ಮಧ್ಯ ಪ್ರವೇಶಿಸಿದ ನ್ಯಾಯಮುರ್ತಿ ಮಿಶ್ರಾ, ‘ಈ ಅಂಶವನ್ನು ಹೇಗಾದರೂ ವ್ಯಾಖ್ಯಾನಿಸಬಹುದು ಅಲ್ಲವೇ’ ಎಂದು ಪ್ರಶ್ನಿಸಿದರು.

‘ಮಂಡಳಿ ರಚನೆಯ ವಿಷಯವನ್ನು ಸಿವಿಲ್ ಅರ್ಜಿಗಳ ವಿಚಾರಣೆ ನಡೆಸುವ ತ್ರಿಸದಸ್ಯ ಪೀಠದೆದುರು ಚರ್ಚೆಗೆ ಒಳಪಡಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಕಾವೇರಿ ವಿವಾದದ ಮುಖ್ಯ ಪ್ರಕರಣದ ವಿಚಾರಣೆ ನಡೆಸಿರುವ ದ್ವಿಸದಸ್ಯ ಪೀಠ ವ್ಯಕ್ತಪಡಿಸಿದೆ. ಅಕ್ಟೋಬರ್‌ 18ರಂದು ವಿಚಾರಣೆ ನಿಗದಿಯಾಗಿದ್ದು, ಅಲ್ಲಿಯೇ ಮಂಡಳಿ ರಚನೆ ವಿಷಯ ಚರ್ಚಿಸಬಹುದು. ಅದುವರೆಗೆ ಮಂಡಳಿ ರಚನೆ ಪ್ರಸ್ತಾವವನ್ನು ಮುಂದೂಡಬಹುದು ಎಂದು ಕೋರಿದ ರೋಹಟ್ಗಿ, ಸೆ. 20ರಂದೇ ಈ ವಿಷಯವನ್ನು ನಿಮ್ಮ ಗಮನಕ್ಕೆ ತಾರದಿರುವುದು ನಮ್ಮ ಲೋಪ’ ಎಂದು ಒಪ್ಪಿಕೊಂಡರು.

ಸೆ. 20ರಂದು ಈ ಕುರಿತು ಆಕ್ಷೇಪವನ್ನೇ ತೋರ್ಪಡಿಸದ ಕರ್ನಾಟಕವು, ಮಂಡಳಿ ರಚನೆಯ ಪ್ರಸ್ತಾವವನ್ನು ಒಪ್ಪಿದಂತಾಗಿತ್ತು ಎಂದು ತಮಿಳುನಾಡು ಪರ ವಕೀಲ ಶೇಖರ್‌ ನಾಫಡೆ ಹೇಳಿದರು. ‘ನಾವು ಒಪ್ಪಿಗೆ ಸೂಚಿಸಿಲ್ಲ. ಒಪ್ಪಿಗೆ ಇದ್ದಿದ್ದರೆ ಕಲಾಪ ಮುಗಿಯುವವರೆಗೂ ವಾದ ಮಂಡಿಸುವ ಅಗತ್ಯವಿರಲಿಲ್ಲ’ ಎಂದು ಕರ್ನಾಟಕ ಪರ ವಕೀಲ ಫಾಲಿ ನಾರಿಮನ್‌ ಏರುದನಿಯಲ್ಲೇ ಮರು ಉತ್ತರ ನೀಡಿದರು.

ಮಂಡಳಿ ರಚನೆ ಹೊಣೆಯು ಶಾಸಕಾಂಗದ ಕಾರ್ಯವಾ ಅಥವಾ ಕಾರ್ಯಾಂಗದ ಕೆಲಸವಾ ಎಂಬುದನ್ನು ತಿಳಿಯಬೇಕು ಎಂದು ನ್ಯಾಯಮೂರ್ತಿ ಮಿಶ್ರಾ ಹೇಳಿದಾಗ, ಮಧ್ಯ ಪ್ರವೇಶಿಸಿದ ರೋಹಟ್ಗಿ, ಅದು ಶಾಸಕಾಂಗದ ಕಾರ್ಯ ಎಂಬುದನ್ನು ಈ ಹಿಂದೆಯೇ ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ ಎಂದು ವಿವರಿಸಿದರು.

‘ಕಾವೇರಿ ಮೇಲುಸ್ತುವಾರಿ ಸಮಿತಿಯನ್ನು ನಾವು ಸಂಪೂರ್ಣ ರದ್ದು ಮಾಡಿಲ್ಲ. ಅದು ಈಗಲೂ ಜೀವಂತವಾಗಿಯೇ ಇದೆ. ಕಾವೇರಿ ಕಣಿವೆಯಲ್ಲಿನ ವಸ್ತುಸ್ಥಿತಿ ಅರಿಯಲು ಸಮಿತಿಗೇ ಸೂಚಿಸಿದರೆ ಹೇಗೆ’ ಎಂದು ನ್ಯಾಯಮೂರ್ತಿಯವರು ಸಲಹೆ ಕೋರಿದರು. ‘ಸಮಿತಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕೇಂದ್ರದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ, ಕೇಂದ್ರ ಜಲ ಆಯೋಗದ ಅಧ್ಯಕ್ಷರು ಇರುತ್ತಾರೆ.

ವಸ್ತುಸ್ಥಿತಿ ಅರಿಯಲು ತಜ್ಞರ ಅಗತ್ಯವೂ ಇದೆ. ಹಾಗಾಗಿ ಆಯಾ ರಾಜ್ಯಗಳ ಸದಸ್ಯರನ್ನೂ ನೇಮಕ ಮಾಡಬಹುದಾಗಿದೆ. ತಜ್ಞರನ್ನು ನೇಮಿಸಬಹುದಾಗಿದೆ. ಕೇಂದ್ರ ಸರ್ಕಾರವು ಶೀಘ್ರವೇ ನೇಮಕ ಪೂರ್ಣಗೊಳಿಸಬೇಕು. ಕಣಿವೆ ಪ್ರದೇಶದಲ್ಲಿ 10 ದಿನಗಳ ಕಾಲ ಅಧ್ಯಯನ ನಡೆಸುವ ಮೂಲಕ ಸಮಿತಿಯು ಅ. 17ರೊಳಗೆ ವರದಿ ಸಲ್ಲಿಸಬೇಕು’ ಎಂದು ನ್ಯಾಯಪೀಠ ನಿರ್ದೇಶನ ನೀಡಿತು.

ತಜ್ಞರ  ತಂಡದ ಪ್ರವಾಸ 7ರಿಂದ
ನವದೆಹಲಿ: ಕಾವೇರಿ ಕಣಿವೆ ಪ್ರದೇಶದಲ್ಲಿ ಇದೇ 7ರಿಂದ 15ರ ವರೆಗೆ ಪ್ರವಾಸ ನಡೆಸಲಿರುವ ತಜ್ಞರ  ತಂಡವು ವಸ್ತುಸ್ಥಿತಿಯ ಅಧ್ಯಯನ ನಡೆಸಲಿದೆ. ಪ್ರವಾಸದ ವಿವರಗಳನ್ನು ಕೇಂದ್ರದ ಜಲಸಂಪನ್ಮೂಲ ಸಚಿವಾಲಯದ ಅಧಿಕಾರಿಗಳು ಸದ್ಯದಲ್ಲೇ ಅಂತಿಮಗೊಳಿಸಲಿದ್ದಾರೆ.
ಒಟ್ಟು 81,000 ಚದರ ಕಿ.ಮೀ. ವ್ಯಾಪ್ತಿಯ ಕಾವೇರಿ ಕಣಿವೆ ಪ್ರದೇಶದಲ್ಲಿ ಸಂಚರಿಸಿ ಅಧ್ಯಯನ ನಡೆಸಲಿರುವ ತಂಡವು ಜಲಾನಯನ, ಅಣೆಕಟ್ಟೆಗಳಲ್ಲಿನ ಸಂಗ್ರಹ, ಅಚ್ಚುಕಟ್ಟು ಪ್ರದೇಶ, ಬೆಳೆಯ ಸ್ಥಿತಿಗತಿ, ಕುಡಿಯುವ ನೀರಿನ ಅಗತ್ಯ ಕುರಿತು ಮಾಹಿತಿ ಸಂಗ್ರಹಿಸಿ  ವರದಿ ಸಲ್ಲಿಸಲಿದೆ.

ನೀರು ಬಿಟ್ಟಿದ್ದೇವೆ
ಕಾವೇರಿ ನೀರನ್ನು ಕೋಟ್ಯಂತರ ಜನ ಅವಲಂಬಿಸಿದ್ದಾರೆ. ಕೊರತೆಯ ನಡುವೆಯೂ ನಾವು ಈಗಾಗಲೇ ನೀರು ಬಿಟ್ಟಿದ್ದೇವೆ. ನೀವು ಇನ್ನೂ ನೀರು ಬಿಡಬೇಕು ಎಂದು ಆದೇಶಿಸುವುದಾದರೆ ಕರ್ನಾಟಕ ಇದಕ್ಕಿಂತ ಹೆಚ್ಚೇನನ್ನೂ ಮಾಡಲಾರದು
ಫಾಲಿ ನಾರಿಮನ್‌
ಕರ್ನಾಟಕ ಪರ ವಕೀಲ

ಆತಂಕ  ದೂರ
ತಮಿಳುನಾಡಿಗೆ 12 ದಿನಗಳ ಕಾಲ ನಿತ್ಯ 2,000 ಕ್ಯುಸೆಕ್‌ ನೀರು ಹರಿಸುವುದು ಕಷ್ಟವೇನಲ್ಲ. ಜಲಾಶಯದಿಂದ ನಿತ್ಯ 1,500 ಕ್ಯುಸೆಕ್‌ನಷ್ಟು ಬಸಿನೀರು ತಾನೇ ಹರಿದುಹೋಗುತ್ತದೆ. ನ್ಯಾಯಾಂಗ ನಿಂದನೆ, ಮಂಡಳಿಯ ಆತಂಕ ದೂರವಾಗಿದೆ.
ಎಂ.ಬಿ. ಪಾಟೀಲ 
ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT