ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತರಸ ಕನ್ನಡ ಗಜಲ್‌ಗಳ ಜನಕ

ಸುರಪುರ: 74ನೇ ನಾಡಹಬ್ಬ ಮಹೋತ್ಸವ ಕಾರ್ಯಕ್ರಮ
Last Updated 5 ಅಕ್ಟೋಬರ್ 2016, 9:08 IST
ಅಕ್ಷರ ಗಾತ್ರ

ಸುರಪುರ: ‘ಗಜಲ್‌ಗಳ ಮೂಲ ಭಾಷೆ ಫಾರ್ಸಿ ಮತ್ತು ಅರಬ್ಬಿ. ಹಿಂದಿಯಲ್ಲೂ ಗಜಲ್ ಖ್ಯಾತಿ ಪಡೆದಿವೆ. ಕನ್ನಡದಲ್ಲಿ ಗಜಲ್‌ಗಳನ್ನು ಮೊಟ್ಟಮೊದಲಿಗೆ ರಚಿಸಿದವರು ರಾಯಚೂರಿನ ಖ್ಯಾತ ಸಾಹಿತಿ ಶಾಂತರಸ. ಅವರು ಕನ್ನಡ ಗಜಲ್‌ಗಳ ಜನಕ’ ಎಂದು ಸಾಹಿತಿ ಅಲ್ಲಾಗಿರಿರಾಜ ಕನಕಗಿರಿ ಹೇಳಿದರು.

ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ದಿವಂಗತ ಮಾಣಿಕರಾವ ಬೋಡಾ ವೇದಿಕೆಯಲ್ಲಿ 74ನೇ ನಾಡಹಬ್ಬ ಮಹೋತ್ಸವದಲ್ಲಿ ಸೋಮವಾರ ‘ಗಜಲ್‌ ಸಾಹಿತ್ಯ ಮತ್ತು ಭಾವೈಕ್ಯತೆ’ ಕುರಿತು ಉಪನ್ಯಾಸ ನೀಡಿದರು.

‘ಖ್ಯಾತ ಕವಿ ರಂಗಂಪೇಟೆಯ ತಿಮ್ಮಾಪುರದವರೇ ಆದ ಮಂಜೂರು ಅಹ್ಮದ ತನ್ಹಾ ತಿಮ್ಮಾಪುರಿ ಅವರು ಗಜಲ್‌ಗಳನ್ನು ಉರ್ದು ಭಾಷೆಗೆ ಅನುವಾದಿಸಿದರು. ಉರ್ದು ಭಾಷೆಯಲ್ಲಿ ಸ್ವತಃ ಅನೇಕ ಗಜಲ್‌ಗಳನ್ನು ರಚಿಸಿದರು. ಇವುಗಳನ್ನು ಶಾಂತರಸರು ಕನ್ನಡಕ್ಕೆ ಅನುವಾದಿಸಿದ ಮೊಟ್ಟಮೊದಲ ಕನ್ನಡದ ಕವಿ. ಹೀಗಾಗಿ ಹೈದರಾಬಾದ್‌ ಕರ್ನಾಟಕದ ಇಬ್ಬರು ದಿಗ್ಗಜ ಸಾಹಿತಿಗಳು ಘಜಲ್‌ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯ’ ಎಂದರು.

‘ಗಜಲ್ ಜಾತಿ, ಧರ್ಮ, ವರ್ಣ ಮೀರಿ ಬೆಳೆದ ಸಾಹಿತ್ಯವಾಗಿದೆ. ಮುಸ್ಲಿಂ ಮತ್ತು ಹಿಂದೂಗಳನ್ನು ಪರಸ್ಪರ ಬೆಸೆಯುವ ಸಾಮರ್ಥ್ಯ ಗಜಲ್‌ ಹೊಂದಿದೆ’ ಎಂದು ತಿಳಿಸಿದರು.
‘ಅಧುನಿಕತೆಯ ಭರಾಟೆಯಲ್ಲಿ ಗಜಲ್‌ಗಳು ಮರೆಯಾಗುತ್ತಿವೆ. ಭಾವೈಕ್ಯತೆ ಬೆಳೆಸಿ ಉಳಿಸುವ ಗಜಲ್‌ಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕಾದ ಅಗತ್ಯ ಇದೆ’ ಎಂದು ಹೇಳಿದರು.
ಇಂತಹ ನಾಡಹಬ್ಬದಲ್ಲೂ ಕನ್ನಡ ಭಾಷೆಯ ಗಜಲ್ ಪ್ರಸ್ತುತ ಪಡಿಸುವ ಅವಕಾಶ ನೀಡಬೇಕು’ ಎಂದು ಸಲಹೆ ನೀಡಿದರು.

ಸಾಹಿತಿ ಪೀರಪಾಶಾ ಕಾರಟಗಿ ‘ಸಾಂಸ್ಕೃತಿಕ ಸಹಬಾಳ್ವೆ’ ಕುರಿತು ಮಾತನಾಡಿ, ‘ಮಹಾಪುರಾಣ, ವೇದಗ್ರಂಥಗಳಿಂದ ಬರುವುದಿಲ್ಲ. ನಮ್ಮ ಅಕ್ಕಪಕ್ಕ, ನೆರಹೊರೆಯಿಂದ ಕಲಿಯುತ್ತೇವೆ. ಮನೆಯ ಅಂಗಳದಲ್ಲೆ ಸಂಸ್ಕೃತಿ ಹುಟ್ಟುತ್ತದೆ. ನಿಜವಾದ ಸಂಸ್ಕೃತಿಯನ್ನು ನಾವು ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕಾಣಲು ಸಾಧ್ಯ. ಜಾತಿ ಧರ್ಮಗಳನ್ನು ಮೀರಿ ಪರಸ್ಪರ ಸಹೋದರರಂತೆ ಸಹಬಾಳ್ವೆ ನಡೆಸುವ ಗ್ರಾಮೀಣರ ಬದುಕೇ ನಿಜವಾದ ಸಂಸ್ಕೃತಿಯ ಬದುಕು’ ಎಂದರು.

‘ಸಂಸ್ಕೃತಿಯ ಬಗ್ಗೆ ಮಾತನಾಡುವ ಪಾಮರರಿಂದಲೆ ಇವತ್ತು ದೇಶೀಯ ಸಂಸ್ಕೃತಿ ಹಾಳಾಗುತ್ತಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಎಂದು ಭೇದ ಹುಟ್ಟಿಸಿ ಪರಸ್ಪರ ಕಲಹ ಸೃಷ್ಠಿಸುವ ಪಟ್ಟಭದ್ರರು ಸಂಸ್ಕೃತಿಯ ವಿಕೃತಿಗೆ ಕಾರಣರು. ಜಾತಿ ಧರ್ಮಗಳನ್ನು ಮೀರಿ ಪರಸ್ಪರ ಕಷ್ಟ ಸುಖಗಳಲ್ಲಿ  ಭಾಗಿಯಾಗಿ ಮಾನವೀಯತೆಯಿಂದ ಸೌಹಾರ್ದತೆಯಿಂದ, ಭಾವೈಕ್ಯತೆಯಿಂದ ಬದುಕುವುದೇ ಸಂಸ್ಕೃತಿ ಸಹಬಾಳ್ವೆ’ ಎಂದರು.

ಇನ್‌ಸ್ಪೆಕ್ಟರ್ ಆರ್.ಎಫ್. ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಜೇವರ್ಗಿ ತಾಲ್ಲೂಕಿನ ನೆಲೋಗಿಯ ಚಂದ್ರಶೇಖರ ಕಂಬಾಳೆ ತಂಡದಿಂದ ತತ್ವಪದಗಳ ಭಜನೆ  ಕಾರ್ಯಕ್ರಮ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT