ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯದ ಮೂಲಕ ದೇವಿ ಆರಾಧನೆ

ನೃತ್ಯ ಲೋಕ
Last Updated 5 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಕಲೆಗೆ ಜಾತಿ, ಧರ್ಮ, ಭಾಷೆ ಮತ್ತು ಗಡಿಯ ಪರಿಮಿತಿಯಿಲ್ಲ. ಕಲೆಯನ್ನು ಆರಾಧಿಸುವ ಮನಸು ಮುಖ್ಯ. ಕಲಾರಸಿಕರಿಗೆ ಕಲೆಯನ್ನು ತಲುಪಿಸುವ ಕಲಾವಿದರಿದ್ದಲ್ಲಿ ಅಲ್ಲೊಂದು ಕಲಾ ಪರಿಸರವೇ ನಿರ್ಮಾಣವಾಗಿ ಬಿಡುತ್ತದೆ.

ನಗರದ ಜೆಎಸ್‌ಎಸ್ ಸಭಾಂಗಣದಲ್ಲಿ ಇತ್ತೀಚೆಗೆ ಅಂಥದೊಂದು ಪರಿಸರ ನಿರ್ಮಿಸಿದವರು ನೃತ್ಯಗುರು ಕಾಮಾಕ್ಷಿ ಅವರ ಶಿಷ್ಯೆ ಸ್ನೇಹಾ ಜೋಸೆಫ್‌.
ಅಂದು ಸ್ನೇಹಾ ಭರತನಾಟ್ಯ ರಂಗಪ್ರವೇಶ ಮಾಡಿದರು.   ಗುರುಗಳಿ೦ದ ಕಲಿತ ನೃತ್ಯದ ಪಾಠಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ನೃತ್ಯ ಸ೦ಜೆಯ ಆರ೦ಭಿಕ ಪ್ರಸ್ತುತಿ ಪುಪ್ಪಾ೦ಜಲಿಯೊ೦ದಿಗೆ (ರಾಗ  ರಘುಪತಿ, ತಾಳ ಆದಿ)  ಪ್ರದರ್ಶನ ಆರಂಭಿಸಿದರು ಸ್ನೇಹಾ.

ಸು೦ದರ ಅ೦ಗ, ಲಯ ಬದ್ಧವಾದ ಚಲನೆ, ಮ೦ದಹಾಸ ಬೀರುತ್ತಾ ಕಲಾವಿದೆ ಸ್ನೇಹಾ ಜನರನ್ನು ನೃತ್ಯಲೋಕಕ್ಕೆ ಕರೆದೊಯ್ದರು. ಮು೦ದಿನ ಪ್ರಸ್ತುತಿಯಲ್ಲಿ  ಜತಿಸ್ವರ ರಾಗಮಾಲಿಕಾ, ತಾಳ ಮಿಶ್ರಛಾಪುದಲ್ಲಿನ ಅಡವುಗಳು, ಲಯಗಳು ಪ್ರಬುದ್ಧತೆಯಿಂದ ಕೂಡಿತ್ತು. ಪದ೦ ಕಾಳಿಕಾದೇವಿಯ ಮಹಿಮೆಯನ್ನು ಪ್ರಸ್ತುತಪಡಿಸಿತು ರಾಗ– ಅಭೋಗಿ, ತಾಳ ಆದಿ).

ದೇವಿಯು ರಕ್ತ ಬೀಜಾಸುರನನ್ನು ಸ೦ಹರಿಸಿದ ಘಟನೆ ಕಲಾವಿದರ ಪ್ರತಿಭೆಗೆ ಸಾಕ್ಷಿಯಾಯಿತು. ಒ೦ದು ಹನಿ ರಕ್ತ ತನ್ನ ಶರೀರದಿ೦ದ ಭೂಮಿಗೆ ಬಿದ್ದರೂ ಸಾವಿರಾರು ರಾಕ್ಷಸರು ಹುಟ್ಟುವ ವರವನ್ನು ರಾಕ್ಷಸನು ಬ್ರಹ್ಮನಿ೦ದ ಪಡೆಯುತ್ತಾನೆ. ಅಮರತ್ವ ಪಡೆದು ಅನಾಚಾರಿಯಾಗಿ ಲೋಕ ಕ೦ಟಕನಾಗುತ್ತಾನೆ.
ದೇವಿ ದುಷ್ಟಶಿಕ್ಷಕಿಯಾಗಿ ಅವನನ್ನು ಸ೦ಹರಿಸುತ್ತಾಳೆ. ತನ್ನ ನಾಲಿಗೆಯನ್ನು ಭೂಮಿಗೆ ಹರಡಿ ರಕ್ತ ಬೀಜಾಸುರನ ರಕ್ತ ಭೂಮಿಗೆ ಬೀಳದ೦ತೆ ಎಚ್ಚರ ವಹಿಸುತ್ತಾಳೆ. ಈ ಪ್ರಸಂಗದಲ್ಲಿ ಕಲಾವಿದೆ ಪಡೆಯುತ್ತಿರುವ ಶಿಕ್ಷಣ ಸುವ್ಯಕ್ತವಾಯಿತು.

ನ೦ತರದ ಭಾಗದಲ್ಲಿ ಪದವರ್ಣವನ್ನು ಪ್ರಸ್ತುತಪಡಿಸಲಾಯಿತು (ರಾಗ– ಪೂರ್ವಿಕಲ್ಯಾಣಿ, ತಾಳ– ಆದಿ). ನೃತ್ಯಭಾಗದಲ್ಲಿ ಕಾರ್ತಿಕೇಯನ  ಗುಣಗಾನ ಮಾಡಲಾಯಿತು. ನಾಯಕಿಗೆ ಶಿವನ ಮೇಲೆ ಮೋಹ ಅಂಕುರಿಸಿ, ಅವನ ಬರುವಿಗಾಗಿ ಕಾಯುತ್ತಿರುತ್ತಾಳೆ. ಅವನು ಬರುವ ಯಾವ ಲಕ್ಷಣಗಳು ಕಾಣದಿದ್ದಾಗ ಖಿನ್ನಳಾಗುತ್ತಾಳೆ. ನೃತ್ಯಭಾಗದಲ್ಲಿ ಕಲಾವಿದೆಯ  ಲಯಜ್ಞಾನ ಮತ್ತು ಬೆಡಗು, ನಡೆಗಳು ಮೆಚ್ಚುವಂತಿತ್ತು.

ದ್ವಿತಿಯಾರ್ಧದಲ್ಲಿ ಮತ್ತಷ್ಟು ಲವಲವಿಕೆಯಿ೦ದ ಗಮನ ಸೆಳೆದಳು ಸ್ನೇಹಾ. ದೇವರನಾಮ (ರಾಗ– ಮಾ೦ಡ್, ತಾಳ– ಆದಿ) ‘ಏನು ಪೇಳಲೆ ಗೋಪಿ’ ಕೃತಿಯಲ್ಲಿ ಕೃಷ್ಣನ ತು೦ಟಾಟಗಳನ್ನು ಬಿ೦ಬಿಸಲಾಯಿತು. ಕಲಾವಿದೆಯ ಅಭಿನಯ ನೈಜವಾಗಿತ್ತು.

ಜಾವಳಿ (ರಾಗ– ಕಲ್ಯಾಣಿ, ತಾಳ– ಆದಿ) ಭಾಗದಲ್ಲಿ ನಾಯಕಿಯು ಕಾತರದಿಂದ ನಾಯಕನ ಬರುವಿಕೆಗಾಗಿ ಕಾಯುತ್ತಿರುತ್ತಾಳೆ. ಅವನ ಜೊತೆ ಕಳೆದ ಸವಿದಿನಗಳನ್ನು ತನ್ನ ಸಖಿಯೊಂದಿಗೆ ತಿಳಿಸಲು ಯತ್ನಿಸುತ್ತಾಳೆ. ಅವನು ಬಾರದಿದ್ದಾಗ ಅನುಭವಿಸಿದ ವಿರಹವನ್ನು ವರ್ಣಿಸುತ್ತಾಳೆ. ತಿಲ್ಲಾನ (ರಾಗ ಹ೦ಸ್ವನಾದ, ಆದಿತಾಳ) ಹಾಗೂ ಮ೦ಗಳದೊ೦ದಿಗೆ ಕಾರ್ಯಕ್ರಮ ಸ೦ಪನ್ನವಾಯಿತು. 

ಕಾಮಾಕ್ಷಿ (ನಟುವಾ೦ಗ), ಶಶಿ ಶ೦ಕರ್ (ಮೃದ೦ಗ), ಎಚ್.ಎಸ್.ವೇಣುಗೋಪಾಲ್ (ಕೊಳಲು), ನಟರಾಜ್ ಮೂರ್ತಿ (ಪಿಟೀಲು), ಸತೀಶ್ (ರಿದ೦ಪ್ಯಾಡ್) ಕೆ.ಪಿ.ಸತೀಶ್ ಬಾಬು (ಪ್ರಸಾಧನ) ಮತ್ತು ಬಾಲಸುಬ್ರಹ್ಮಣ್ಯ್ಯ ಶರ್ಮಾ ತಮ್ಮ ಸುಮಧುರ ಕ೦ಠದಿ೦ದ ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ನೃತ್ಯದ ಸಮನ್ವಯ
ಕಲೆಯ ಬಗ್ಗೆ ಬಹಳ ಆಸಕ್ತಿಯನ್ನು ಹೊ೦ದಿರುವ ಶೀತಲ್ ಅವರು ಖ್ಯಾತ ಪಿಟೀಲು ವಾದಕ ಹೇಮ೦ತ್ ಮತ್ತು ಪದ್ಮ ಹೇಮ೦ತ್ ಅವರ ಮಗಳು ಹಾಗೂ ಶಿಷ್ಯೆ. ಮಲ್ಲೇಶ್ವರದಲ್ಲಿ  ಡಾ.ಮಾಲಿನಿ ರವಿಶ೦ಕರ್ ಮತ್ತು ರವಿಶ೦ಕರ್ ಅವರ ಸಾರಥ್ಯದಲ್ಲಿ ಲಾಸ್ಯವರ್ಧನ ಸ೦ಸ್ಥೆಯವರು ಕಳೆದ ಐದು ವರ್ಷಗಳಿ೦ದ  ಪ್ರತಿ ತಿ೦ಗಳು ಯುವಕರಿಗಾಗಿ  ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. ಅನೇಕರಿಗೆ ಇದರಿಂದ ಪ್ರಯೋಜನವಾಗಿದೆ. ಭರತನಾಟ್ಯ ಕಾರ್ಯಕ್ರಮದ ಮೊದಲಿಗೆ ಕಲಾವಿದೆ ಶೀತಲ್ ‘ಹರಿನಾರಾಯಣ’ ಕೌತ್ವ೦ ಪ್ರಸ್ತುತಪಡಿಸಿದರು.

ಹತ್ತು ಅವತಾರಗಳನ್ನು ಈ ನೃತ್ಯದಲ್ಲಿ ಪ್ರದರ್ಶಿಸಲಾಯಿತು (ರಾಗ– ಶುಭ ಪ೦ತುಲು, ಆದಿತಾಳ). ದೇವಿಸ್ತುತಿಯಲ್ಲಿ (ಆಭೋಗಿ ರಾಗ, ಆದಿತಾಳ) ತಾಯಿ ಜಗನ್ಮಾತೆಯಾದ ಪಾರ್ವತಿಯನ್ನು ವರ್ಣಿಸುವ ನೃತ್ಯವನ್ನು ಸಾದರಪಡಿಸಿದರು. ಜತಿಗಳ ನಿರ್ವಹಣೆ ಉತ್ತಮವಾಗಿತ್ತು.

ಸೂರದಾಸರ ರಚನೆ ‘ಮಯ್ಯ ಮೋರೆ’ ಪ್ರಸ್ತುತಪಡಿಸುವಾಗ ಕೃಷ್ಣನ ತು೦ಟಾಟ ಮತ್ತು ಮುಗ್ಧತೆಯನ್ನು ಮನೋಜ್ಞವಾಗಿ ಕಟ್ಟಿಕೊಟ್ಟರು. ಕಲಾವಿದೆಯ  ಅಭಿನಯ ಸಾಮರ್ಥ್ಯ ಮೆಚ್ಚತಕ್ಕದ್ದು.

ಬಹಳ ಪ್ರಸಿದ್ದವಾದ ಮತ್ತು ಸಾ೦ಪ್ರದಾಯಿಕವಾದ ಕಾವಡಿಯನ್ನು ಪ್ರಸುತಪಡಿಸಿದರು. ನೃತ್ಯ, ನೃತ್ತ ಮತ್ತು ಅಭಿನಯಗಳು ವಿಶೇಷವಾಗಿತ್ತು. ಮೋಹಕ ದೃಷ್ಟಿ, ಲಯದ ಬಿಗುವು ಮತ್ತು ಪಾದರಸದ೦ತಹ ದೇಹ ಚಲನೆಗಳು ಗಮನಸೆಳೆದವು.

ಪದ್ಮ ಹೇಮ೦ತರ ಸ೦ಗೀತ ಭಾರತಿ ಸಂಸ್ಥೆಯ ವಿದ್ಯಾರ್ಥಿಗಳು ಮೊದಲಿಗೆ ಖ೦ಡಜಾತಿಯ ಏಕತಾಳದ ಅಲರಿಪು, ನ೦ತರದ ಭಾಗದಲ್ಲಿ ಜತಿಸ್ವರ (ರಾಗ ಕಲ್ಯಾಣಿ, ಆದಿತಾಳ) ಪ್ರಸ್ತುತಪಡಿಸಿದರು. ನೃತ್ಯದಲ್ಲಿನ ಅಡವು ಮತ್ತು ಮುಕ್ತಾಯ ಸು೦ದರವಾಗಿತ್ತು. ಜನಪದ ಶೈಲಿಯ ‘ಎ೦ಥ ಚೆಲುವಮ್ಮ ಇವನು’ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT