ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣುಯಂತ್ರ ರೂವಾರಿಗಳಿಗೆ ನೊಬೆಲ್‌

Last Updated 6 ಅಕ್ಟೋಬರ್ 2016, 3:34 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್‌ : ಅಣು ಚಾಲಿತ ಯಂತ್ರಗಳನ್ನು (ಮಾಲಿಕ್ಯುಲರ್‌ ಮೆಷಿನ್‌) ಅಭಿವೃದ್ಧಿ ಪಡಿಸಿದ ಫ್ರಾನ್ಸ್‌ನ ಜೀನ್‌ ಪಿರ್ರೆ ಸುವಾಜ್‌, ಬ್ರಿಟನ್ನಿನ ಜೆ.ಫ್ರೇಸರ್‌ ಸ್ಟೊಡಾರ್ಟ್‌ ಮತ್ತು ನೆದರ್‌ಲ್ಯಾಂಡ್ಸ್‌ನ ಬರ್ನಾರ್ಡ್‌ ಫೆರಿಂಗಾ ಅವರು ಈ ಸಾಲಿನ ರಸಾಯನ ವಿಜ್ಞಾನ  ನೊಬೆಲ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಣುಗಳಿಂದ ರೂಪಿಸಿರುವ ಈ ಸಾಧನಗಳು ಜಗತ್ತಿನ ಅತ್ಯಂತ ಪುಟ್ಟ ಯಂತ್ರಗಳಾಗಿವೆ.

‘ನಿಯಂತ್ರಿತ ಚಲನೆಗಳನ್ನು ಹೊಂದಿರುವ ಅಣುಗಳನ್ನು ಈ ಮೂವರು ವಿಜ್ಞಾನಿಗಳು  ಅಭಿವೃದ್ಧಿ ಪಡಿಸಿದ್ದಾರೆ. ಶಕ್ತಿ ತುಂಬಿದಾಗ ಈ ಯಂತ್ರಗಳು ನಿರ್ದಿಷ್ಟ ಕೆಲಸಗಳನ್ನು ಮಾಡಬಲ್ಲವು’ ಎಂದು ಪ್ರಶಸ್ತಿಯ  ಆಯ್ಕೆಗಾರರ ಮಂಡಳಿ ಹೇಳಿದೆ.

‘1830ರ ದಶಕದಲ್ಲಿ ವಿದ್ಯುತ್‌ ಚಾಲಿತ ಯಂತ್ರ (ಮೋಟಾರ್‌) ಯಾವ ಹಂತದಲ್ಲಿತ್ತೋ, ಈಗ ಅಭಿವೃದ್ಧಿ ಪಡಿಸಲಾಗಿರುವ ಅಣು ಯಂತ್ರ ಆ ಹಂತದಲ್ಲಿ ಇದೆ. 19ನೇ ಶತಮಾನದಲ್ಲಿ ವಿಜ್ಞಾನಿಗಳು ತಿರುಗು ತಟ್ಟೆಗಳು ಮತ್ತು ಚಕ್ರಗಳನ್ನು ಪ್ರದರ್ಶಿಸಿದಾಗ, ಮುಂದೆ ಇವು ವಿದ್ಯುತ್‌ಚಾಲಿತ ರೈಲು, ಬಟ್ಟೆ ಒಗೆಯುವ ಯಂತ್ರ, ಫ್ಯಾನ್‌ ಅಥವಾ ಆಹಾರ ಸಂಸ್ಕರಣೆ ಯಂತ್ರಗಳ ತಯಾರಿಕೆಗೆ ಕಾರಣವಾಗಬಹುದು ಎಂದು ಯಾರೂ ಯೋಚಿಸಿರಲಿಲ್ಲ’ ಎಂದು ಮೂವರು ರಸಾಯನ ವಿಜ್ಞಾನಿಗಳ ಸಂಶೋಧನೆಯನ್ನು ಮಂಡಳಿ ಬಣ್ಣಿಸಿದೆ.

‘ಮುಂದಿನ ದಿನಗಳಲ್ಲಿ ಅಣು ಯಂತ್ರಗಳನ್ನು ಹೊಸ ಹೊಸ ಸಲಕರಣೆಗಳು, ಸೆನ್ಸರ್‌ಗಳು ಮತ್ತು ಶಕ್ತಿ ಸಂಗ್ರಹಿಸುವ ವ್ಯವಸ್ಥೆಗಳ ಅಭಿವೃದ್ಧಿಯಲ್ಲಿ ಹೆಚ್ಚು ಹೆಚ್ಚಾಗಿ ಬಳಸುವ ನಿರೀಕ್ಷೆ ಇದೆ’ ಎಂದು ಅದು ವಿವರಿಸಿದೆ. ಪ್ರಶಸ್ತಿ ಮೊತ್ತವಾದ 80 ಲಕ್ಷ ಸ್ವೀಡಿಷ್‌ ಕ್ರೋನರ್‌ಗಳನ್ನು (ಸುಮಾರು ₹6.34 ಕೋಟಿ) ಈ ಮೂವರು ವಿಜ್ಞಾನಿಗಳು ಸಮನಾಗಿ ಹಂಚಿಕೊಳ್ಳಲಿದ್ದಾರೆ.

ಅಣು ಯಂತ್ರದ ಅಭಿವೃದ್ಧಿ ಪಥ...
ಮೊದಲ ಘಟ್ಟ: 
ಫ್ರಾನ್ಸ್‌ನ ಜೀನ್‌ ಪಿರ್ರೆ ಸುವಾಜ್‌ 1983ರಲ್ಲಿ ಅಣು ಯಂತ್ರದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದರು. ಬಳೆ  ಅಥವಾ ಉಂಗುರ ಆಕಾರದ ಎರಡು ಅಣುಗಳನ್ನು ಪರಸ್ಪರ ಕೂಡಿಸುವ ಮೂಲಕ ಅಣುಗಳ ಸರಪಣಿ ಸೃಷ್ಟಿಸುವಲ್ಲಿ ಯಶ ಕಂಡಿದ್ದರು. ಅಣು ಯಂತ್ರಗಳ ಅಭಿವೃದ್ಧಿಯಲ್ಲಿ ಇದು ಮೊದಲ ಹಂತ ಎಂದು ಬಣ್ಣಿಸಲಾಗಿದೆ.

‘ಯಂತ್ರವು ಕೆಲಸ ಮಾಡಬೇಕಾದರೆ,  ಪರಸ್ಪರ ಚಲಿಸುವಂತಹ ಭಾಗಗಳನ್ನು ಅವು ಹೊಂದಿರಬೇಕಾಗುತ್ತದೆ. ಸುವಾಜ್‌ ಅವರು ಸಂಪರ್ಕ ಬೆಸೆದ ಎರಡು ಅಣು ಬಳೆಗಳು ಈ ಅಗತ್ಯವನ್ನು ಪೂರೈಸಿವೆ’ ಎಂದು ನೊಬೆಲ್‌ ಪ್ರಶಸ್ತಿ ತೀರ್ಪುದಾರರ ಮಂಡಳಿ ಹೇಳಿದೆ.

ಎರಡನೇ ಘಟ್ಟ:  1991ರಲ್ಲಿ ಜೆ.ಫ್ರೇಸರ್‌ ಸ್ಟೊಡಾರ್ಟ್‌ ಅವರು ಅಣು ಯಂತ್ರ ಅಭಿವೃದ್ಧಿಯ ಎರಡನೇ ಹಂತವನ್ನು ಕೈಗೆತ್ತಿಕೊಂಡಿದ್ದರು. ಅಣು ಬಳೆಗಳನ್ನು ತೆಳ್ಳನೆಯ ಅಣು ದಂಡಕ್ಕೆ (ಆ್ಯಕ್ಸಲ್‌) ಅವರು ಪೋಣಿಸಿದ್ದರು. ಅಲ್ಲದೇ ಈ ದಂಡದ ಜೊತೆಗೆ ಅಣು ಬಳೆಗಳೂ ಚಲಿಸುತ್ತವೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ್ದರು. ಸ್ಟೊಡಾರ್ಡ್‌ ಅವರು ಅಣುಗಳ ಲಿಫ್ಟ್‌, ಅಣು ಆಧಾರಿತ ಕಂಪ್ಯೂಟರ್‌ ಚಿಪ್‌ಗಳನ್ನು ಈಗಾಗಲೇ ಅಭಿವೃದ್ಧಿ ಪಡಿಸಿದ್ದಾರೆ. 

ಮೂರನೇ ಘಟ್ಟ: ಅಂತಿಮವಾಗಿ ಅಣು ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದು ಬರ್ನಾರ್ಡ್‌ ಫೆರಿಂಗಾ. ಒಂದೇ ದಿಕ್ಕಿನಲ್ಲಿ ನಿರಂತರವಾಗಿ ತಿರುಗುವ ಅಣು   ಬ್ಲೇಡ್‌  ರೂಪಿಸಲು 1999ರಲ್ಲಿ ಅವರು ಯಶಸ್ವಿಯಾಗಿದ್ದರು. ಅಣು ಯಂತ್ರಗಳನ್ನು ಬಳಸಿ ನ್ಯಾನೊ ಕಾರುಗಳನ್ನು ರೂಪಿಸಿದ ಹೆಗ್ಗಳಿಕೆಯೂ ಫೆರಿಂಗಾ ಅವರಿಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT