ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಷಾಸುರನೂ ಮಾನ್ಯ

Last Updated 6 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆಯಲ್ಲಿ, ಅಸ್ತಿತ್ವದಲ್ಲಿರುವ ಯಾವುದಕ್ಕೇ ಆಗಲಿ ಒಂದು ಇತಿಹಾಸ ಇದ್ದೇ ಇರುತ್ತದೆ. ಇಂತಹ ಇತಿಹಾಸ– ಪುರಾಣದ ಅಂಶ ಒಬ್ಬರಿಗೆ ಕೆಟ್ಟದ್ದಾಗಿದ್ದರೆ ಮತ್ತೊಬ್ಬರಿಗೆ ಒಳ್ಳೆಯದ್ದು ಕೂಡ ಆಗಿರಬಹುದು ಮತ್ತು ಹಾಗೆ ಆಗಬಾರದು ಎಂಬ ಕಡ್ಡಾಯವೇನೂ ಇಲ್ಲ.

ಯಾಕೆಂದರೆ ಬಾಬಾಸಾಹೇಬ್ ಅಂಬೇಡ್ಕರ್‌ ಒಂದೆಡೆ ಹೇಳುತ್ತಾರೆ ‘ಭಾರತದ ಇತಿಹಾಸವನ್ನು ಮಹಿಳೆಯರು ಮತ್ತು ಮಕ್ಕಳನ್ನು ರಂಜಿಸುವ ಕಥೆಗಳನ್ನಾಗಿ ಮಾಡಲಾಗಿದೆ’ ಎಂದು. ಅಂದರೆ ‘ರಂಜನೆಯ ಆ ಕಥೆಯಲ್ಲಿ’ ಅರ್ಥಾತ್ ಇತಿಹಾಸದಲ್ಲಿ ಒಬ್ಬ ಹೀರೊ ಅಥವಾ ಹೀರೊಯಿನ್ ಇರುತ್ತಾನೆ/ಇರುತ್ತಾಳೆ ಹಾಗೆಯೇ ವಿಲನ್ ಕೂಡ! ಇಲ್ಲಿ ಯಾರು ಹೀರೊ? ಯಾರು ವಿಲನ್? ಅದು ಆ ಇತಿಹಾಸ ಅಥವಾ ಪುರಾಣ ಬರೆದವನ ನೆಲೆ, ಹಿನ್ನೆಲೆಯನ್ನು ಅವಲಂಬಿಸಿರುತ್ತದೆ.

ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಮೈಸೂರಿನ ಸಾಂಸ್ಕೃತಿಕ ಚಿಹ್ನೆಯಾಗಿರುವ, ಆಧುನಿಕ ಮಾರ್ಕೆಟಿಂಗ್ ಪರಿಭಾಷೆಯಲ್ಲಿ ಹೇಳುವುದಾದರೆ ‘ಲೋಗೊ’ ಆಗಿರುವ, ‘ಮಹಿಷ ಮರ್ದಿನಿ’ ಚಾಮುಂಡಿಯು ಕೊಂದು ಹಾಕಿದ  ಮಹಿಷಾಸುರ ಕೂಡ ಅಂತಹ ರಂಜಿತ ಕಥೆಯ ಅಥವಾ ಅಂಬೇಡ್ಕರ್ ಹೇಳಿದ ಮಾದರಿಯ ಇತಿಹಾಸದ ಭಾಗವಾಗುತ್ತಾನೆ ಮತ್ತು ಆ ಕಾರಣಕ್ಕಾಗಿಯೇ ಚಾಮುಂಡಿ-ಮಹಿಷನ ಕಥೆ, ಆತನ ಪ್ರತಿಮೆ ಚಾಮುಂಡಿ ಬೆಟ್ಟದಲ್ಲಿ ಪ್ರತಿಷ್ಠಾಪಿತಗೊಂಡಿರುವುದು ಎಂದು ನಿಚ್ಚಳವಾಗಿ ಹೇಳಬಹುದು. 

ಬರೀ ಇದಿಷ್ಟೇ ಅಲ್ಲ, ಸಾಂಪ್ರದಾಯಿಕ ಇತಿಹಾಸವಾದ ಕ್ರಿ.ಪೂ. ನಾಲ್ಕನೇ ಶತಮಾನದ ಸಾಮ್ರಾಟ್ ಅಶೋಕನ ಕಾಲದ ಶಾಸನದಲ್ಲೂ ಮಹಿಷ ಮಂಡಲದ ಉಲ್ಲೇಖವಿದೆ. ಮಹಿಷ ಮಂಡಲವು ಅಶೋಕನ ಸಾಮಂತ ರಾಜ್ಯವಾಗಿತ್ತು, ಮಹಿಷಾಸುರ ಆ ರಾಜ್ಯದ ದೊರೆಯಾಗಿದ್ದ ಮತ್ತು ಮಹಿಷನೂರು ಅಥವಾ ಕಾಲಾಂತರದ ಮೈಸೂರು ಆತನ ರಾಜಧಾನಿಯಾಗಿತ್ತು. ಅಂದಹಾಗೆ ಇಂತಹ ಇತಿಹಾಸದ ಕಾರಣಕ್ಕಾಗಿಯೇ ಮಹಿಷಾಸುರ ನಮ್ಮ ಸಾಂಸ್ಕೃತಿಕ ಸ್ಮೃತಿಪಟಲದಲ್ಲಿ ನೆಲೆಗೊಂಡಿರುವುದು ಮತ್ತು ಜನ ಆತನೆಡೆ ಒಂದು ರೀತಿಯ ಒಲವು ತೋರುತ್ತಿರುವುದು.

ನಿಜ, ಅವನನ್ನು ರಾಕ್ಷಸ, ಅಸುರ... ಎಂದೆಲ್ಲ ಹೇಳಬಹುದು. ಆದರೆ ಅಂಬೇಡ್ಕರರ ಪ್ರಕಾರ ‘ಭಾರತದ ಇತಿಹಾಸ ಬೌದ್ಧ ಧರ್ಮಕ್ಕೂ ಬ್ರಾಹ್ಮಣ ಧರ್ಮಕ್ಕೂ ನಡೆದಿರುವ ನಿರಂತರ ಕಾಳಗ’. ಹೀಗಿರುವಾಗ ಅಂತಹ ಕಾಳಗದ ಇತಿಹಾಸದಲ್ಲಿ ಬೌದ್ಧ ದೊರೆಗಳು ಅಸುರರಾಗಿ, ರಾಕ್ಷಸರಾಗಿ ಬಿಂಬಿತವಾಗಿರುವ ಸಾಧ್ಯತೆಗಳನ್ನು ನಿರಾಕರಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಮೈಸೂರು ಎಂದಾಕ್ಷಣ ಥಟ್ಟನೆ ಹೊರಜಗತ್ತಿಗೆ ನೆನಪಿಗೆ ಬರುವ ಮಹಿಷಾಸುರನಿಗೆ ಅಗ್ರಮಾನ್ಯತೆ ಸಿಗಲಿ, ದಸರಾ ಸಮಯದಲ್ಲಿ ಆತನಿಗೂ ಜಿಲ್ಲಾಡಳಿತ ಅಗ್ರಪೂಜೆ ಸಲ್ಲಿಸಲಿ, ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಗೌರವಿಸುವಂತಾಗಲಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT